ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರನ್ನು ಮನುಷ್ಯರನ್ನಾಗಿಸುವ ಕಷ್ಟಗಳು

Last Updated 31 ಜುಲೈ 2016, 19:30 IST
ಅಕ್ಷರ ಗಾತ್ರ

‘ಪೊಲೀಸರಿಂದ ಅಮಾನವೀಯ ಹಲ್ಲೆ’ ಎಂಬುದಾಗಿ ನಾವು ಮತ್ತೆ ಮತ್ತೆ ಮಾಧ್ಯಮಗಳಲ್ಲಿ ಓದುವ ಶೀರ್ಷಿಕೆಯೇ ವಿಚಿತ್ರವಾಗಿದೆ. ಯಾಕೆಂದರೆ ಹಲ್ಲೆಯಲ್ಲಿ ಮಾನವೀಯ ಹಲ್ಲೆ, ಅಮಾನವೀಯ ಹಲ್ಲೆ ಎಂದು ಎರಡು ವಿಭಾಗಗಳಿಲ್ಲ. ಹಲ್ಲೆ ಹಲ್ಲೆಯೇ.

ಸಮಸ್ಯೆ ಇರುವುದು ಇಲ್ಲೆ. ಎಲ್ಲಿ ಎಂದರೆ ಪೊಲೀಸರು ಹಲ್ಲೆ ನಡೆಸಬಹುದು, ಆದರೆ ಅದು ಮಾನವೀಯವಾಗಿರಬೇಕು ಎಂದು ಬಯಸುವಲ್ಲಿ. ಒಮ್ಮೆ ಹಿಂಸಿಸುವ ಅಧಿಕಾರ ಪಡೆದ ಯಾವ ವ್ಯಕ್ತಿಯೂ ಮಾನವೀಯವಾಗಿ ಉಳಿಯಲು ಸಾಧ್ಯವೇ ಇಲ್ಲ.

ಇಷ್ಟು ಹೇಳಿದಾಕ್ಷಣ ಪೊಲೀಸರು ‘ಪ್ರಾಕ್ಟಿಕಲ್ ಆಗಿರಬೇಕಲ್ಲ?’ ‘ಬಲಪ್ರಯೋಗಿಸದೆ ಅಹಿಂಸೆಯ ಮಂತ್ರ ಪಠಿಸುತ್ತಿದ್ದರೆ ಸಮಾಜಘಾತಕ ಶಕ್ತಿಗಳನ್ನು ನಿಯಂತ್ರಿಸುವುದು ಹೇಗೆ?’ ಎಂಬ ಮರುಪ್ರಶ್ನೆಗಳು ಬರುತ್ತವೆ.

ಬಲ ಪ್ರಯೋಗ ಮಾಡದೆ ಪೊಲೀಸ್ ಕೆಲಸ ಸಾಧ್ಯವಿಲ್ಲ ಎನ್ನುವ ಬಾಲರಾಮಾಯಣ ಮಟ್ಟದ ಜ್ಞಾನ ಪೊಲೀಸರ ಹಿಂಸೆಯನ್ನು ಪ್ರಶ್ನಿಸುವ ಎಲ್ಲರಿಗೂ ತಿಳಿದಿರುತ್ತದೆ. ಅದನ್ನು ಯಾರೂ ಯಾರಿಗೂ ಉಪದೇಶಿಸುವ ಅಗತ್ಯ ಇಲ್ಲ. ಬಲ ಪ್ರಯೋಗ ಬೇರೆ, ಹಿಂಸೆ ಬೇರೆ.

ಭಾರತದಲ್ಲಿ ಪೊಲೀಸರು ತಮ್ಮ ಮೂಲಭೂತ ಜವಾಬ್ದಾರಿಗಳನ್ನು ಅಂದರೆ ಕಾನೂನು-ವ್ಯವಸ್ಥೆಯ ರಕ್ಷಣೆ ಮತ್ತು ಅಪರಾಧ ತನಿಖೆಯನ್ನು ನಡೆಸುವುದು ಹಿಂಸೆಯ ಮೂಲಕ ಮತ್ತು ಭಯವನ್ನು ಸೃಷ್ಟಿಸುವ ಮೂಲಕ. ಉದ್ರಿಕ್ತ ಗುಂಪನ್ನು ಚದುರಿಸಿ, ಹಿಂಸೆಗಿಳಿದವರನ್ನು ಗುರುತಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾದರೆ ಅದಕ್ಕೆ ಬುದ್ಧಿ, ವೈಜ್ಞಾನಿಕ ತರಬೇತಿ, ಶಿಸ್ತು ಎಲ್ಲಾ ಬೇಕಾಗುತ್ತದೆ.

ಅದ್ಯಾವುದೂ ಇಲ್ಲದೆ ನೇಮಕಗೊಂಡ ಕೆಳಹಂತದ ಸಿಬ್ಬಂದಿಯನ್ನು ಬಳಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಇರುವ ಸುಲಭ ಮಾರ್ಗ ಎಂದರೆ ಜನರಲ್ಲಿ ಭೀತಿ ಹುಟ್ಟಿಸುವುದು. ಭೀತಿ ಹುಟ್ಟಿಸಬೇಕಾದರೆ ಹಿಂಸೆ ನಡೆಸಬೇಕು.

ಮನೆ ಬಾಗಿಲು ಮುರಿದು ಒಳನುಗ್ಗಬೇಕು, ಕಂಡಕಂಡವರಿಗೆ ಬಡಿಯಬೇಕು, ರಕ್ತ ಹರಿಸಬೇಕು... ಲಾಠಿಚಾರ್ಜು ಮಾಡುವುದು ಜನರನ್ನು ಓಡಿಸುವುದಕ್ಕೆ. ಆದರೆ ಪ್ರತೀ ಲಾಠಿಚಾರ್ಜಿನ ಸಂದರ್ಭದಲ್ಲೂ ನಾವು ನೋಡುವುದು ಓಡುತ್ತಿರುವವರನ್ನು ನಿಲ್ಲಿಸಿ ಬಡಿಯುವುದನ್ನು. ಬಿದ್ದವರನ್ನು ಸುತ್ತುವರಿದು ಮರ್ದಿಸುವುದನ್ನು.

ಮೇಲಣ ಹುದ್ದೆಗಳಲ್ಲಿರುವವರು ಸಾರ್ವಜನಿಕವಾಗಿ ಇವನ್ನೆಲ್ಲ ಖಂಡಿಸುತ್ತಾ ಒಳಗೊಳಗೇ ತಮ್ಮ ಕೆಳಗಿನ ಸಿಬ್ಬಂದಿಗೆ ಹೀಗೆ ಮಾಡಲು ಕುಮ್ಮಕ್ಕು ನೀಡುತ್ತಾ ಬಂದಿರುವುದು ಎಷ್ಟೋ ವರ್ಷಗಳಿಂದ ನಡೆದು ಬಂದ ಪದ್ಧತಿ. ಭಯೋತ್ಪಾದಕರು ಇತ್ತೀಚೆಗೆ ಬಂದದ್ದು.

ಪೊಲೀಸರು ಈ ಭಯೋತ್ಪಾದನೆಯ ಮಾರ್ಗವನ್ನು ಎಷ್ಟೋ ಕಾಲದಿಂದ ಅನುಸರಿಸುತ್ತಾ ಬಂದಿದ್ದಾರೆ. ಮೊನ್ನೆ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಏನು ನಡೆಯಿತು ಅದು ಮೊದಲೂ ಅಲ್ಲ, ಕೊನೆಯೂ ಅಲ್ಲ. ಅಪರಾಧ ಪತ್ತೆಯ ವಿಷಯದಲ್ಲೂ ಅಷ್ಟೇ.

ನೂರು ಜನರನ್ನು ಸಂಶಯದಿಂದ ಬಂಧಿಸಿ ಬಡಿದು ಒಬ್ಬ ಕಳ್ಳನನ್ನೋ, ಕೊಲೆಗಾರನನ್ನೋ ಹಿಡಿಯುವುದು ಭಾರತೀಯ ಪೊಲೀಸರು ಮೊದಲಿಂದಲೂ ಅನುಸರಿಸಿಕೊಂಡು ಬಂದ ತನಿಖಾ ವಿಧಾನ.  ಇದೆಲ್ಲ ಹೀಗೆ ಮಾತ್ರ ನಡೆಯಲು ಸಾಧ್ಯ, ಇದಕ್ಕೆ ಪರ್ಯಾಯವೇ  ಇಲ್ಲ ಎನ್ನುವಂತೆ ಇಡೀ ಸಮಾಜ ನಡೆದುಕೊಂಡದ್ದರ ಪರಿಣಾಮ ಇರಬೇಕು ಭಾರತದ ಪೊಲೀಸ್ ವ್ಯವಸ್ಥೆ ಬರಬರುತ್ತಾ ಪ್ರಪಂಚದ ಅತ್ಯಂತ ಅನಾಗರಿಕ, ಕ್ರೂರ, ಬರ್ಬರ, ಹಿಂಸಾ ವಿನೋದಿ ವ್ಯವಸ್ಥೆಯಾಗಿ ಮಾರ್ಪಟ್ಟಿರುವುದು.

ಸಂವಿಧಾನವು ಪೊಲೀಸ್ ವ್ಯವಸ್ಥೆಯನ್ನು ಜನರಿಂದ ಚುನಾಯಿತವಾದ ಒಂದು ವ್ಯವಸ್ಥೆಯ ನಿಯಂತ್ರಣದಲ್ಲಿ ಇರಿಸಿರುವುದು ಹೀಗೆಲ್ಲಾ ಆಗಬಾರದು ಎಂದು. ದುರಂತ ಏನು ಎಂದರೆ ಪೊಲೀಸ್ ವ್ಯವಸ್ಥೆಯನ್ನು ನಿಯಂತ್ರಿಸಬೇಕಾದ ಚುನಾಯಿತ ಪ್ರತಿನಿಧಿಗಳು ತಮ್ಮನ್ನು ತಾವು ಈ ವ್ಯವಸ್ಥೆಗೆ ಸಂಪೂರ್ಣವಾಗಿ ಮಾರಿಕೊಂಡಿರುವುದು ಅಥವಾ ಅದಕ್ಕೆ ಸಂಪೂರ್ಣ ಶರಣಾಗಿರುವುದು.

ಪೊಲೀಸ್ ವ್ಯವಸ್ಥೆಯ ಎದುರು ಎದೆಯುಬ್ಬಿಸಿ ಹಾಗೆ ಯಾಕೆ? ಹೀಗೆ ಯಾಕೆ ಆಗಕೂಡದು? ಅಂತ ಕೇಳಿ ವ್ಯವಸ್ಥೆಯನ್ನು ಎಳ್ಳಿನ ಏಳು ಭಾಗವಾದರೂ ಸುಧಾರಿಸಿದ ಒಬ್ಬ ಗೃಹಮಂತ್ರಿಯನ್ನು ಈ ದೇಶದ ಯಾವ ರಾಜ್ಯವೂ ನೋಡಿಲ್ಲ. ಕೇರಳದ ಈಗಿನ ಮುಖ್ಯಮಂತ್ರಿ ಪೊಲೀಸರಿಂದ ಸ್ವತಃ ಚರ್ಮ ಸುಲಿಸಿಕೊಂಡ ಅನುಭವ ಹೊತ್ತವರು. ರಾಜನ್ ಪ್ರಕರಣದ ಕಳಂಕ ಹೊತ್ತ ಕೇರಳ ಪೊಲೀಸರ ಒಂದೇ ಒಂದು ರೋಮಕ್ಕಾದರೂ ಅವರ ಕಾಲದಲ್ಲಿ ಸ್ವಲ್ಪ ಮಾನವೀಯತೆಯ ಸಿಂಚನವಾದರೆ ಅದು ಅವರು ದೇಶಕ್ಕೆ ನೀಡಬಹುದಾದ ಚಾರಿತ್ರಿಕ ಕೊಡುಗೆಯಾಗಬಹುದು. 

ಈ ಹೇಳಿಕೆಗಳೆಲ್ಲ ಅತಿಯಾಯಿತು ಅಂತ ಅನ್ನಿಸುವವರು  ಪೊಲೀಸ್ ಸುಧಾರಣಾ ಆಯೋಗದ  ವರದಿಗಳ ಮೇಲೊಮ್ಮೆ ಕಣ್ಣಾಡಿಸಬೇಕು. ಅದು ಕಷ್ಟವಾದರೆ ಇಂಟರ್ನೆಟ್‌ನಲ್ಲಿ ಯೂಟ್ಯೂಬ್‌ಗೆ ಹೋಗಿ ‘ಇಂಡಿಯನ್ ಪೊಲೀಸ್’ ಎಂದು ಹುಡುಕಿದರೆ 52.6 ಲಕ್ಷ ವಿಡಿಯೊ ತುಣುಕುಗಳು ಸಿಗುತ್ತವೆ. ಅವುಗಳಲ್ಲಿ ಕೆಲವನ್ನು ನೋಡಿ.

ಇವ್ಯಾವುವೂ ನಿಮಗೆ ನಂಬಿಕೆ ಹುಟ್ಟಿಸದಿದ್ದರೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಒಳ್ಳೆಯ ಹೆಸರು ಗಳಿಸಿ ಮಧ್ಯಮ ಹಂತದ ಹುದ್ದೆಗೆ ಬಂದು ನಿವೃತ್ತರಾದ ಒಬ್ಬ ವ್ಯಕ್ತಿ ಬರೆದ ಆತ್ಮ ಚರಿತ್ರೆ ಇದೆ. ಅದನ್ನು ಓದಿ.

ಮುಂದೆ ಕನ್ನಡ ನಟನಾಗಿ ಪ್ರಸಿದ್ಧರಾದ ಒಬ್ಬ ವ್ಯಕ್ತಿಯನ್ನು ಪ್ರೇಮ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಠಾಣೆಗೆ ಎಳೆದು ತಂದು ‘ಇನ್ಯಾರದ್ದೋ ಮೇಲಿನ ಕೋಪಕ್ಕೆ’ ಆ ಹುಡುಗನ ಮೇಲೆ ‘ಅವನಿಗೆ ಎಲ್ಲಿಂದ ಉಸಿರಾಡಬೇಕು, ಎಲ್ಲಿಂದ ಊಟ ಮಾಡಬೇಕು ಎಂದು ಗೊತ್ತಾಗದೆ ಮಿಲಮಿಲನೆ ಒದ್ದಾಡುವಂತೆ’ ಮುಖಮೂತಿ ಜಜ್ಜಿದೆವು ಎಂದು ಅದೇನೋ  ಮನರಂಜನೆ ಎಂಬಂತೆ ಅವರು  ಬರೆಯುತ್ತಾರೆ.

ಇನ್ನೊಮ್ಮೆ ಒಬ್ಬನಿಗೆ ಬಡಿದೂ ಬಡಿದೂ ಸುಸ್ತಾಗಿ ಆತನಿಂದ ಏನೂ ವಿವರ ದೊರಕದೆ ಹತಾಶರಾದ ಒಬ್ಬ ಹಿರಿಯ ಪೊಲೀಸ್ ವ್ಯಕ್ತಿ ಆತನ ಜನನಾಂಗವನ್ನು ಚುಚ್ಚಿ ‘ಇದೇನು’ ಅಂತ ಕೇಳುತ್ತಾರೆ- ‘ಅದಕ್ಕೂ ಆತ ನನಗೆ ಗೊತ್ತಿಲ್ಲ’ ಅಂತ ಉತ್ತರಿಸುತ್ತಾನೆ ಎಂದು   ಇದ್ಯಾವುದೋ ಜೋಕ್ ಎಂಬಂತೆ ಘಟನೆಯೊಂದನ್ನು ವಿವರಿಸುತ್ತಾರೆ.

ಇನ್ನೊಂದು ಪ್ರಕರಣದಲ್ಲಿ ಮೂವರು ಶಂಕಿತರನ್ನು ಬಂಧಿಸಿ ಅನ್ನ ನೀರು ಕೊಡದೆ ಮೂಳೆ ಮುರಿಯಲಾ ಯಿತು. ಯಾವ ವಿವರಗಳೂ ಸಿಕ್ಕದಾಗ ಇನ್ನೇನು ಮಾಡುವುದು ಎಂದು ‘ಡಿಸಿಪಿ’ಯನ್ನು ಕೇಳಿದರೆ ಇನ್ನೂ ಸ್ವಲ್ಪ ಬಡಿಯಿರಿ ಎನ್ನುವ ಆದೇಶ ಬಂತು... ಮತ್ತೆ  ನೋಡಿದರೆ ಆ ಹುಡುಗರೆಲ್ಲ ಏನೊಂದೂ ತಿಳಿಯದ ಅಮಾಯಕರು.

ಈ ಮೂರೂ ಪ್ರಕರಣಗಳೂ ಪೊಲೀಸ್ ಠಾಣೆಗಳಲ್ಲಿ ನಿತ್ಯ ನಡೆಯುವ ಅನಗತ್ಯ ಹಿಂಸೆಯ ಪ್ರಾತಿನಿಧಿಕ ಉದಾಹರಣೆಗಳು. ಪೊಲೀಸರು ಹೇಗೆ ಕೆಲಸ ಮಾಡುತ್ತಾರೆ ಎನ್ನುವ ಭಯಾನಕ ಒಳನೋಟ ನೀಡುವ ಸಂಶಯಾತೀತ ವಿವರಗಳು.

ಓದಲೂ ನಾಚಿಕೆಯಾಗುವ ಇಂತಹ ಚಿತ್ರಣಗಳಿರುವ ಈ ಪುಸ್ತಕಗಳಲ್ಲಿ ಒಂದಕ್ಕೆ ಮುನ್ನುಡಿ ಬರೆದದ್ದು ಮಾಜಿ ಕಾನೂನು ಮತ್ತು ಮಾನವ ಹಕ್ಕುಗಳ ಸಚಿವರು! ಅವರು ಬರೆಯುತ್ತಾರೆ: ಇಲ್ಲಿನ ಲೇಖನಗಳಲ್ಲಿ ಶೃಂಗಾರ, ಹಾಸ್ಯ, ವೀರ... ಎಲ್ಲ ರಸಗಳೂ ಇವೆ!   ಪುಸ್ತಕಕ್ಕೆ ಆಶಯ ನುಡಿಗಳನ್ನು ಬರೆದದ್ದು ಸಿನಿಮಾ ಮಾಡುವ ಒಬ್ಬ ಸಾಹಿತಿ. ಅವರು ಬರೆಯುತ್ತಾರೆ: ವೈನೋದಿಕ ನಿರೂಪಣೆಯಿಂದ ಇಲ್ಲಿನ ಲೇಖನಗಳು ಆಪ್ತವಾಗುತ್ತವೆ!

ಇವರೆಲ್ಲ ಒಳ್ಳೆಯವರು. ಇಂತಹ ಒಳ್ಳೆಯವರು ಕೂಡಾ ಪೊಲೀಸ್ ವ್ಯವಸ್ಥೆಯ ಅತ್ಯಂತ ಅನಾಗರಿಕ ಮತ್ತು ಅಪಾಯಕಾರಿ ಮುಖವನ್ನು ಎಷ್ಟೊಂದು ನಿರಾಳವಾಗಿ ಸ್ವೀಕರಿಸುತ್ತಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ.

ಹೋದ ವಾರ ಮಹಾದಾಯಿ  ಗಲಭೆ ನಿಯಂತ್ರಿಸುವ ನೆಪದಲ್ಲಿ ಕರ್ನಾಟಕ ಪೊಲೀಸರು ಮಹಿಳೆಯರು, ಮುದು ಕರು, ಮಕ್ಕಳು, ಗರ್ಭಿಣಿಯರಿಗೆಲ್ಲ ಮನಸೋ ಇಚ್ಛೆ ಬಡಿದು ಹಿಂಸಾರತಿಯಲ್ಲಿ ಮಿಂದೆದ್ದನ್ನು ಖಂಡಿಸುತ್ತಿರುವ ಕನ್ನಡ ಮಾಧ್ಯಮಗಳು ಕೆಲ ಸಮಯದ ಹಿಂದೆ ಮಹಾರಾಷ್ಟ್ರ-ಕರ್ನಾಟಕ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಭೆಯ ಸಂದರ್ಭ ಪೊಲೀಸರು ಇದೇ ರೀತಿ ವರ್ತಿಸಿದಾಗ ‘ಪುಂಡರಿಗೆ ಸರಿಯಾದ ಪಾಠ ಕಲಿಸಿದರು’ ಎಂಬಂತೆ ಹಾಡಿಹೊಗಳಿದ್ದುಂಟು.

ಒಟ್ಟಿನಲ್ಲಿ ಹೇಳುವುದಿಷ್ಟೇ. ಈ ರೀತಿ ವ್ಯವಸ್ಥೆಯೊಳಗಿನ  ಹಿಂಸೆಯನ್ನು ಎಲ್ಲರೂ ಸಹಜ ಎ೦ಬ೦ತೆ ಸ್ವೀಕರಿಸಿರುವಾಗ ಮತ್ತು ಈ ವ್ಯವಸ್ಥೆ ಹೀಗೆ ಮಾತ್ರ ಇರಲು ಸಾಧ್ಯ ಎಂದು ಒಪ್ಪಿಕೊಂಡಿರುವಾಗ ಪೊಲೀಸರಿಂದ ಅಮಾನವೀಯ ಹಲ್ಲೆ ಎಂದು ಆಗೊಮ್ಮೆ ಈಗೊಮ್ಮೆ ಗೊಣಗುವುದು ವ್ಯರ್ಥ ಮತ್ತು ಅರ್ಥಹೀನ. ಹೀಗಾಗುವಲ್ಲಿ ಎಲ್ಲರ ಪಾಲೂ ಇದೆ.

ಭಾರತದ ಪೊಲೀಸರ ಕ್ರೌರ್ಯಕ್ಕೆ ಸಾವಿರ ಸಮರ್ಥನೆಗಳಿರಬಹುದು. ಪ್ರಶ್ನಿಸಬೇಕಾದವರೆಲ್ಲಾ ಅದನ್ನು ಒಪ್ಪಿಕೊಂಡಿರಬಹುದು. ಆದರೆ ಎಲ್ಲರೂ ಗಮನಿಸಬೇಕಾದ ಒಂದು ವಿಚಾರ ಇದೆ. ಹಿಂಸೆಯನ್ನೇ ಆಶ್ರಯಿಸಿ ಕಟ್ಟಿರುವ ಪೊಲೀಸ್‌ ವ್ಯವಸ್ಥೆಯ ವಿರುದ್ಧ ಜನರ  ಆಕ್ರೋಶ ದಿನದಿನಕ್ಕೂ ಮಡುಗಟ್ಟುತ್ತಿದೆ.

ಇದು ಗುಪ್ತ ಕ್ಯಾಮೆರಾಗಳ ಮತ್ತು ಇಂಟರ್ನೆಟ್‌ನ ಕಾಲ. ಈಗ ಪೊಲೀಸರು ಮಾಡುವುದನ್ನೆಲ್ಲಾ ಜನ ನೋಡುತ್ತಾರೆ, ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳುತ್ತಾರೆ. ಬೆಂಗಳೂರು ನಗರದ ಪೊಲೀಸ್ ಮುಖ್ಯಸ್ಥರೊಬ್ಬರು ಕೆಲಕಾಲದ ಹಿಂದೆ ‘ಪೊಲೀಸರ ಹೆಸರು ಹೇಳಿ ಮಕ್ಕಳಿಗೆ ಹೆದರಿಸಬೇಡಿ, ಮಕ್ಕಳು ಪೊಲೀಸರ ಬಗ್ಗೆ ತಪ್ಪು ಅಭಿಪ್ರಾಯ ಹೊಂದುತ್ತಾರೆ’ ಅಂತ ನಗರದಾದ್ಯಂತ ಬೋರ್ಡು ಹಾಕಿಸಿದ್ದರು. ಮಕ್ಕಳಿಗೆ ಹೆತ್ತವರು ಪೊಲೀಸರ ಕತೆ ಹೇಳಬೇಕಾಗಿಲ್ಲ.

ಪೊಲೀಸರ ಸ್ವಭಾವ, ಸಂಸ್ಕಾರ ಮತ್ತು ಭಾಷೆ ಹೇಗಿರುತ್ತವೆ ಎನ್ನುವುದನ್ನು ಅವರೆಲ್ಲಾ ಇಂಟರ್ನೆಟ್ ಮತ್ತು ಟಿವಿಗಳಲ್ಲಿ ನೋಡುತ್ತಿದ್ದಾರೆ. ಹಾಗೆ ನೋಡುತ್ತಾ ನಡೆದಾಡುವ ಜೀವಿಗಳ ಪೈಕಿ ಮನುಷ್ಯರು, ಮೃಗಗಳು ಮತ್ತು ಪೊಲೀಸರು ಎಂಬ ಮೂರು ಪ್ರಬೇಧಗಳಿವೆ ಎಂಬ ನಿರ್ಧಾರಕ್ಕೆ ಮಕ್ಕಳು ಎಂದೋ ಬಂದಿರುತ್ತಾರೆ. ಆ ಮಕ್ಕಳೆಲ್ಲಾ ಬೆಳೆಯುತ್ತಿದ್ದಾರೆ.

ಪೊಲೀಸರ ವಿರುದ್ಧ ಜನರ ಸಹನೆ ಎಂದೋ ಕಟ್ಟೆಯೊಡೆದು ಹೋಗುತ್ತಿತ್ತು. ಆದರೆ ಈ ಮಧ್ಯೆ ಕಾಣಿಸಿಕೊಂಡ ನಕ್ಸಲರ ಮತ್ತು ಭಯೋತ್ಪಾದಕರ ಸಮಸ್ಯೆಯಿಂದಾಗಿ ಪೊಲೀಸರು ಮಾಡುತ್ತಿರುವುದನ್ನೆಲ್ಲಾ ಸಹಿಸಿಕೊಳ್ಳಬೇಕಾದ ಅನಿವಾರ್ಯ ಸೃಷ್ಟಿಯಾಯಿತು. ಕೂತರೆ ನಿಂತರೆ ಬಂದ್‌ಗಳನ್ನ ಜನರ ಮೇಲೆ ಹೇರಿ ಸಾರ್ವಜನಿಕ ಆಸ್ತಿಗಳನ್ನು ಸುಡುವ ಸಂಘಟನೆಗಳ ಹಾವಳಿಯಿಂದಾಗಿ ಪೊಲೀಸರನ್ನು ಜನ ಸಹಿಸಿಕೊಳ್ಳಬೇಕಾಯಿತು.

ನಮ್ಮ ನ್ಯಾಯಾಂಗ ವ್ಯವಸ್ಥೆಯ ದೋಷಗಳಿಂದಾಗಿ ಜನ ಪೊಲೀಸರ ಮಧ್ಯಯುಗದ ಪ್ರವೃತ್ತಿಗಳನ್ನು ಒಪ್ಪಿಕೊಳ್ಳಬೇಕಾಯಿತು. ಈಗ ಇವೆಲ್ಲದರ ಹೊರತಾಗಿಯೂ ಜನರ ಸಹನೆ ಮೀರುತ್ತಿದೆ ಎನ್ನುವ ಸೂಚನೆಗಳು ಕಾಣಿಸಿಕೊಳ್ಳುತ್ತಿವೆ.

ಗುಜರಾತಿನ ಮೀಸಲಾತಿ ಚಳವಳಿಯ ಹಾರ್ದಿಕ್  ಪಟೇಲ್ ಎಂಬ ಯುವಕ ‘ಪೊಲೀಸರನ್ನು ಕೊಲ್ಲಿರಿ’ ಎಂದು ಅಪಾಯಕಾರಿ ಕರೆ ನೀಡಿದ. ಬೆಂಗಳೂರಿನ  ಬೀದಿಗಳಲ್ಲಿ ಜನ ಪೊಲೀಸರ ಮೇಲೆ ಕೈಮಾಡುತ್ತಿರುವ ಘಟನೆಗಳು ಮತ್ತೆ ಮತ್ತೆ ನಡೆಯುತ್ತಿವೆ.

ಪೊಲೀಸರ ತಂಟೆಗೆ ಬಂದ ಸಾಮಾನ್ಯ ಮನುಷ್ಯರನ್ನು ಜೀವನ ಪೂರ್ತಿ ಹಾಸಿಗೆ ಹಿಡಿಯುವಂತೆ ಸಾಯಹೊಡೆಯಲಾಗುತ್ತದೆ ಎನ್ನುವ ಸತ್ಯ ಕಣ್ಣಮುಂದಿದ್ದರೂ ಜನ ಪೊಲೀಸರ ಮೇಲೆರಗುತ್ತಿದ್ದಾರೆ.  ಇತ್ತೀಚೆಗೆ ಬೀದಿಗಿಳಿದ ಗಾರ್ಮೆಂಟ್ ನೌಕರರು ಏಕಾಏಕಿ ಪೊಲೀಸ್ ಸ್ಟೇಷನ್‌ಗೆ ನುಗ್ಗಿದರು. ಅದರ ಘೋರ ಪರಿಣಾಮಗಳ ಬಗ್ಗೆ ಅವರಿಗೆ ತಿಳಿದಿದ್ದರೂ ಹಾಗೆ ಮಾಡಿದರು.

ಹೊಸದಾಗಿ ಆಯ್ಕೆಯಾದ ಪೊಲೀಸ್ ಮಂದಿಗೆ ಯಾವ ರೀತಿಯ ತರಬೇತಿ ನೀಡುತ್ತಾರೋ ಗೊತ್ತಿಲ್ಲ. ಬಹುಶಃ ಚಿತ್ರಹಿಂಸೆ ನೀಡುವುದು ಹೇಗೆ ಎನ್ನುವುದನ್ನು ಅವರಿಗೆ ಕಲಿಸುತ್ತಿರಬಹುದು. ಅದೇನಾದರೂ ಆಗಲಿ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭ ನಡೆದ  ಚೌರಿಚೌರ ಘಟನೆಯ ಬಗ್ಗೆ ತರಬೇತಿಯಲ್ಲಿ ಅವರಿಗೆ ಸ್ವಲ್ಪ ವಿಸ್ತೃತವಾಗಿ ಹೇಳುವುದು ಒಳ್ಳೆಯದು. ಅದು ಸ್ವಾತಂತ್ರ್ಯ ಹೋರಾಟಗಾರರು ಪೊಲೀಸರ ವಿರುದ್ಧ ತಿರುಗಿಬಿದ್ದ ಕತೆ.

ಅದು ನಡೆದದ್ದು 1922ರ ಫೆಬ್ರುವರಿ 4 ರಂದು. 1919ರ ಜಲಿಯನ್ ವಾಲಾ ಬಾಗ್ ಆದಿಯಾಗಿ ಬ್ರಿಟಿಷ್ ಪೊಲೀಸರ ಮತ್ತು ಸೈನ್ಯದ ದೌರ್ಜನ್ಯ ಮೇರೆ ಮೀರಿ ಜನರಲ್ಲಿ ಪೊಲೀಸರ ಕುರಿತಾಗಿ ತೀವ್ರವಾದ ಅಸಹನೆ ಮತ್ತು ಕ್ರೋಧ ಮನೆಮಾಡಿತ್ತು. ಈ ಮಧ್ಯೆ ಚೌರಿಚೌರ ಎಂಬಲ್ಲಿ ಪೊಲೀಸರು ಸ್ವಾತಂತ್ರ್ಯ ಹೋರಾಟಗಾರರ ಮೇಲೆರಗಿದಾಗ ಪರಿಸ್ಥಿತಿ ಕೈಮೀರಿ ಜನ ಅಲ್ಲಿನ ಪೊಲೀಸ್ ಠಾಣೆಯನ್ನು ಸುಡುತ್ತಾರೆ; ಪೊಲೀಸರನ್ನು ಕ್ರೂರವಾಗಿ ದಹಿಸುತ್ತಾರೆ.

ಸ್ವಾತಂತ್ರ್ಯಾನ೦ತರದ 69 ವರ್ಷಗಳಲ್ಲಿ ಜನ ಅವಡು ಕಚ್ಚಿಕೊಂಡು ತಮ್ಮದೇ ದೇಶದ ಪೊಲೀಸರ ಪಾಷಾಣ ಪ್ರವೃತ್ತಿಗಳನ್ನೆಲ್ಲಾ ಸಹಿಸಿಕೊಂಡಿದ್ದಾರೆ. ಈ ಸಹನೆ ಮುಗಿಯುವ ಮುನ್ಸೂಚನೆಗಳು ನಮ್ಮ ಮುಂದಿವೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ನೂರಾರು ಚೌರಿಚೌರಗಳನ್ನು ದೇಶ ಕಾಣಬೇಕಾದೀತು. ಪೊಲೀಸರು ಮನುಷ್ಯರಾಗಬೇಕಾಗಿರುವುದು ಜನರ ಹಿತದೃಷ್ಟಿಯಿಂದ ಮಾತ್ರವಲ್ಲ, ಸ್ವತಃ ಪೊಲೀಸರ ಹೆಂಡತಿ ಮಕ್ಕಳ ಹಿತದೃಷ್ಟಿಯಿಂದ ಕೂಡಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT