ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಗೇ ಸಹಿಸಲಾಗದ ಪೊಲೀಸರ ಬಗ್ಗೆ...

Last Updated 5 ಫೆಬ್ರುವರಿ 2017, 16:19 IST
ಅಕ್ಷರ ಗಾತ್ರ

ಈಗಾಗಲೇ ಪರಿಪರಿಯಾಗಿ ವಿಶ್ಲೇಷಣೆಗೆ ಒಳಗಾಗಿ ಹಳಸಲಾದ ಪೊಲೀಸ್ ಆತ್ಮಹತ್ಯೆಯ ಕುರಿತಾಗಿಯೇ ಈ ಲೇಖನವೂ ಇದೆ. ಸಾರ್ವಜನಿಕ ಜೀವನದಲ್ಲಿರುವವರು ವೈಯಕ್ತಿಕವಲ್ಲದ ಕಾರಣಗಳಿಗಾಗಿ ಹತ್ಯೆಯಾದರೆ ಅಥವಾ ಆತ್ಮಹತ್ಯೆ ಮಾಡಿಕೊಂಡರೆ ಅದು ಗಂಭೀರ ವಿಚಾರ.

ಅಂತಹ ಪ್ರಕರಣಗಳ ಹಿಂದಿರಬಹುದಾದ ಕಾರಣ ಮತ್ತು ಅವುಗಳ ಮುಂದಿನ ಪರಿಣಾಮಗಳೆಲ್ಲಾ ಸಾರ್ವಜನಿಕ ಚರ್ಚೆಯ ವಸ್ತುಗಳು. ಆದರೆ ಹೀಗೆ ನಡೆಯುವ ಸಾರ್ವಜನಿಕ ಚರ್ಚೆಗಳು ವಿಧಾನ ಮಂಡಲದಲ್ಲಿ ನಡೆಯುವ ಚರ್ಚೆಗಳ ಮಟ್ಟದಲ್ಲೇ ಏಕಮುಖವಾಗಿಯೂ, ರಾಜಕೀಯ ಲಾಭ ನಷ್ಟಗಳ ಸುತ್ತಲೇ ಠಳಾಯಿಸುತ್ತಲೂ ಉಳಿದರೆ ಜನ ಮತ್ತು ಸರ್ಕಾರ ಗಮನಿಸಬೇಕಾದ ಎಷ್ಟೋ ವಿಚಾರಗಳು ಎಲ್ಲೋ ಕಳೆದುಹೋಗಿಬಿಡುತ್ತವೆ.

ಆತ್ಮಹತ್ಯೆ ಮಾಡಿಕೊಂಡವರೆಲ್ಲಾ ವ್ಯವಸ್ಥೆಯ ಬಲಿಪಶುಗಳು, ರಾಜೀನಾಮೆ ನೀಡಿದವರೆಲ್ಲ ಹೀರೊಗಳು ಎಂಬ ಅವಸರದ ತೀರ್ಮಾನ ಸತ್ಯವನ್ನು ಬಿಚ್ಚಿಡುವುದುಕ್ಕಿಂತ ಹೆಚ್ಚು ಮುಚ್ಚಿಡುವುದಕ್ಕೆ ಸಹಕಾರಿಯಾಗುತ್ತದೆ. ಈಚೆಗೆ ಮಧ್ಯಮ ಶ್ರೇಣಿಯ ಪೊಲೀಸ್ ಹುದ್ದೆಯಲ್ಲಿದ್ದ ಈರ್ವರು ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡ ನಂತರದ ಚರ್ಚೆಗಳೆಲ್ಲಾ ಇದೇ ಜಾಡಿನಲ್ಲಿ ಸಾಗುತ್ತಾ ಕೆಲ ಗಂಭೀರ ವಿಚಾರಗಳನ್ನು ಮರೆಮಾಚುತ್ತಿವೆ ಎನ್ನುವ ಆತಂಕದಿಂದ ಈ ಲೇಖನ.

ಆತ್ಮಹತ್ಯೆ ಮಾಡಿಕೊಂಡ ಇಬ್ಬರಲ್ಲಿ  ಒಬ್ಬರು ಸಾವಿಗೆ ಮುನ್ನ ನೀಡಿದ ಸಂದರ್ಶನವೊಂದರಲ್ಲಿ ಮಾಜಿ ಗೃಹ ಸಚಿವರ ಹೆಸರು ಹೇಳದೆ ಇರುತ್ತಿದ್ದರೆ ಈ ಪ್ರಕರಣ ಕುರಿತು ಯಾವ ರೀತಿ ಚರ್ಚೆಯಾಗುತ್ತಿತ್ತೋ ಹೇಳಲಾಗದು. ಈಗ ಉಳಿದ ಎಲ್ಲಾ ಆಯಾಮಗಳೂ ಗೌಣವಾಗಿ ಮಾಜಿ ಗೃಹ ಸಚಿವರು ಅವರ ಈಗಿನ ಹುದ್ದೆಗೆ ರಾಜೀನಾಮೆ ಯಾಕೆ ನೀಡಿಲ್ಲ ಎನ್ನುವುದೇ ಪ್ರಮುಖವಾಗಿಬಿಟ್ಟಿದೆ.

ಯಾರ ಹೆಸರನ್ನೂ ಹೇಳಿಲ್ಲ ಎನ್ನುವ ಕಾರಣಕ್ಕೋಸ್ಕರವೋ ಏನೋ ಹಲವಾರು ಸುಳಿಗಳಿರುವಂತೆ ಕಾಣುವ ಎರಡನೇ ಆತ್ಮಹತ್ಯೆ ಹೆಚ್ಚುಕಡಿಮೆ ಮರೆತೇ ಹೋದಂತಿದೆ. ಒಂದು ಗಂಭೀರ ಬೆಳವಣಿಗೆ ರಾಜಕೀಯದಲ್ಲಿ ಕಳೆದುಹೋಗುವುದು ಎಂದರೆ ಹೀಗೆ.

ಒಂದು ವೇಳೆ ಆ ರಾಜಕಾರಣಿ ರಾಜೀನಾಮೆ ನೀಡಿದ್ದರೆ ರಕ್ತ ತರ್ಪಣ ಪಡೆದ ಕ್ಷುದ್ರ ದೇವತೆಗಳು ಶಾಂತರಾಗುವಂತೆ ರಾಜಕೀಯ ಪ್ರತಿಭಟನೆಗಳ ಧ್ವನಿ ನಿಂತು ಹೋಗುತ್ತಿತ್ತು. ಮಾಧ್ಯಮಗಳು ನೈತಿಕ ನಿಲುವು ಎತ್ತಿಹಿಡಿಯಲ್ಪಟ್ಟಿತು ಎಂದು ಕೊಂಡಾಡುತ್ತಿದ್ದವು. ಅಷ್ಟಾದ ಮಾತ್ರಕ್ಕೆ ಈ ಪ್ರಕರಣ ಎತ್ತಿ ತೋರಿಸಿರುವ ಲೋಪಗಳಿಗೆಲ್ಲ ಏನಾದರೂ ಪರಿಹಾರ ದೊರೆಯಿತೇ ಎನ್ನುವ ಪ್ರಶ್ನೆಯನ್ನು ಮಾತ್ರ  ಯಾರೂ ಕೇಳುವುದಿಲ್ಲ.

ಈಗ ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಲಿಲ್ಲ ಎನ್ನುವ ಕಾರಣ ಸರ್ಕಾರ ನೈತಿಕವಾಗಿ ಸೋತಿತು, ಜನರ ವಿಶ್ವಾಸ ಕಳೆದುಕೊಂಡಿತು ಎಂಬಿತ್ಯಾದಿ ವಾದಗಳನ್ನು ಕೇಳುತ್ತಿದ್ದೇವೆ. ಸರ್ಕಾರ ಜನರ ವಿಶ್ವಾಸ ಕಳೆದುಕೊಂಡರೆ ಅದು ಸರ್ಕಾರ ನಡೆಸುವವರ ತಲೆನೋವು.

ಅದು ಜನರ ಸಮಸ್ಯೆಯಲ್ಲ. ನೈತಿಕತೆಯನ್ನು ಎಂದೋ ಕಳೆದುಕೊಂಡಿರುವ ವ್ಯವಸ್ಥೆಯಲ್ಲಿ ನೈತಿಕ ಕಾರಣಕ್ಕೆ ಅಧಿಕಾರ ತ್ಯಜಿಸಬೇಕೆಂದು ಕೇಳುವುದು, ರಾಜೀನಾಮೆ ಕೊಟ್ಟಿದ್ದರೆ ನೈತಿಕತೆ ಉಳಿಯುತ್ತಿತ್ತು ಎನ್ನುವುದು ಇತ್ಯಾದಿಗಳೆಲ್ಲಾ ತಮಾಷೆಯಾಗಿ ಕಾಣುತ್ತವೆ.  ಇಲ್ಲದ್ದನ್ನು ಎತ್ತಿ ಹಿಡಿಯುವುದು ಹೇಗೆ? ಇಲ್ಲದ್ದನ್ನು ಉಳಿಸಿಕೊಳ್ಳುವುದು ಎಂದರೆ ಏನು?


ಸಂಬಂಧಪಟ್ಟವರು ರಾಜೀನಾಮೆ ಕೊಡಲಿ ಬಿಡಲಿ, ತನಿಖೆ ನಡೆಯಲಿ ನಡೆಯದೆ ಹೋಗಲಿ- ಸಾಮಾನ್ಯ ಜನರ ದೃಷ್ಟಿಯಿಂದ ಇವೆಲ್ಲಕ್ಕಿಂತ ಮುಖ್ಯವಾಗಿ ಯೋಚಿಸಬೇಕಾದ ಬೇರೆಯೇ ಹಲವು ವಿಷಯಗಳಿವೆ.  ಮೊದಲನೆಯದಾಗಿ ಈ ಪ್ರಕರಣದ ಹಿನ್ನೆಲೆಯಲ್ಲಿ ಕೇಳಬೇಕಾದದ್ದು  ಇಡೀ ರಾಜ್ಯದ  ಜನಜೀವನ ಮತ್ತು ಆಡಳಿತದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿರುವ ಪೊಲೀಸ್ ಇಲಾಖೆಯಲ್ಲಿ ಏನಾಗುತ್ತಿದೆ ಎನ್ನುವ ಪ್ರಶ್ನೆಯನ್ನು. ಇದಕ್ಕೆ ಉತ್ತರ ಹುಡುಕುತ್ತಾ ಹೋದರೆ ಮೇಲ್ನೋಟಕ್ಕೇ ಪರಿಸ್ಥಿತಿ ಭಯಾನಕವಾಗಿ ಕಾಣಿಸುತ್ತದೆ. ಇನ್ನು ಆಳಕ್ಕಿಳಿದು ನೋಡಿದರೆ ಏನೇನಿದೆಯೋ?

ಭಾರತದ ಪೊಲೀಸ್ ವ್ಯವಸ್ಥೆಯನ್ನು ಅದರೊಳಗೆ ಎಲ್ಲವೂ ಸರಿಯಿರುವಾಗಲೇ ಗುಮಾನಿಯಿಂದ ನೋಡಬೇಕಾದ ಸ್ಥಿತಿ ಇದೆ. ಆ ವ್ಯವಸ್ಥೆಯಲ್ಲಿ ಇರುವವರೆಲ್ಲ ಒಳ್ಳೆಯವರಾಗಿದ್ದಾಗಲೂ ಅದು ಜನಪರವಾಗಿರುತ್ತದೆ ಎನ್ನುವುದಕ್ಕೆ ಖಾತ್ರಿ ಇಲ್ಲ. ಇದು ಪ್ರಪಂಚದಾದ್ಯಂತ ಚರಿತ್ರೆ ಕಂಡ ಸತ್ಯ. ಸಂಶಯ ಇದ್ದವರು ಸರ್ಕಾರದಿಂದಲೇ ನೇಮಿಸಲ್ಪಟ್ಟ ಬೇರೆ ಬೇರೆ ಸಮಿತಿಗಳು ನೀಡಿದ ವರದಿಗಳ ಮೇಲೆ ಕಣ್ಣಾಡಿಸಿದರೆ ಅಧಿಕೃತ ದೃಢೀಕರಣ ಲಭಿಸುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಪೊಲೀಸ್ ವ್ಯವಸ್ಥೆಯಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನೋಡಬೇಕು.

ತೀರಾ ಇತ್ತೀಚೆಗೆ ಇಲಾಖೆಯ ಕೆಳಹಂತದ ಸಿಬ್ಬಂದಿ ಅಂದರೆ ಕಾನ್‌ಸ್ಟೆಬಲ್‌ಗಳು ದಂಗೆ ಏಳಲು ಸಿದ್ಧರಾಗಿ ನಿಂತಿದ್ದರು, ದಂಗೆ ಏನೋ ನಡೆಯಲಿಲ್ಲ. ಆದರೆ ಪ್ರಕರಣ ಇಲಾಖೆಯೊಳಗಿನ ಕ್ರೂರ ಸತ್ಯಗಳನ್ನು ತೆರೆದಿಟ್ಟಿತು. ಅದಕ್ಕಿಂತ ಸ್ವಲ್ಪ ಮೊದಲು ಈಗ ಆತ್ಮಹತ್ಯೆ ಮಾಡಿಕೊಂಡವರ ಶ್ರೇಣಿಯ ಹುದ್ದೆಯಲ್ಲೇ ಇದ್ದ ಮಹಿಳೆಯೊಬ್ಬರು ರಾಜೀನಾಮೆ ನೀಡಿ ಇಲಾಖೆಯಿಂದ ಹೊರನಡೆದರು. ಅದರ ಸುತ್ತ ವಿಲಕ್ಷಣ ಬೆಳವಣಿಗೆಗಳೆಲ್ಲಾ ನಡೆದು ಹೋದವು.

ಇಲಾಖೆಯೊಳಗೆ ಅಲ್ಲಿ ಇಲ್ಲಿ ಇರಬಹುದಾದ ಪ್ರಾಮಾಣಿಕತೆಯ ಜತೆಗೆ ಎ೦ತಹ ಅಪ್ರಬುದ್ಧತೆ ಇದೆ ಎನ್ನುವ ಸತ್ಯ ಆ ಪ್ರಕರಣದ ಮೂಲಕ ಬೆಳಕಿಗೆ ಬಂತು. ಅದಕ್ಕಿ೦ತ ಮೊದಲು ಬೆಂಗಳೂರಿನ ಸಿದ್ಧಉಡುಪು ಉದ್ಯಮದ ಮಹಿಳಾ ಕಾರ್ಮಿಕರು ಪ್ರತಿಭಟನೆಗೆಂದು ಬೀದಿಗಿಳಿದಾಗ ಪೊಲೀಸರು ನಡೆದುಕೊಂಡ ರೀತಿ ಮತ್ತು ಅದರ ಕುರಿತಾಗಿ ‘ಇದೇನಾ ನಿಮ್ಮ ವೃತ್ತಿಪರತೆ’ ಎಂದು ಪೊಲೀಸ್ ಇಲಾಖೆಯಿಂದ ನಿವೃತ್ತರಾದ ಕೆಲ ಹಿರಿಯರು ಮಾಡಿದ ಕಟು ಟೀಕೆ ರಾಜ್ಯ ಪೊಲೀಸ್ಇಲಾಖೆಯ ಇನ್ನೊಂದು ಮುಖ ಪರಿಚಯಿಸಿತು.

ಎರಡು ವರ್ಷಗಳ ಹಿಂದೆ ಇಲಾಖೆಯಲ್ಲಿ ಹಿರಿಯ ಮಟ್ಟದ ಹುದ್ದೆಯಲ್ಲಿದ್ದ ವ್ಯಕ್ತಿ, ಮಹಿಳೆಯೊಬ್ಬರ ಫೋಟೊ ಕ್ಲಿಕ್ಕಿಸಿದ ಆಪಾದನೆಯಲ್ಲಿ ಸಿಕ್ಕು ಚಡಪಡಿಸಿದಾಗ ಪೊಲೀಸರ ಮಧ್ಯೆ ಆದ ರಂಪಾಟ ‘ಎಲಾ ಎಲಾ  ಈ ಇಲಾಖೆಯಲ್ಲಿ  ಎಂತೆಂಥವರೆಲ್ಲ ಇದ್ದಾರೆ’ ಎನ್ನುವ ಪ್ರಶ್ನೆ ಮೊದಲ ಬಾರಿಗೆ ಕೇಳುವಂತೆ ಮಾಡಿದರೆ, ಆ ನಂತರ ಈ ಪ್ರಶ್ನೆಯನ್ನು ಪುನರಾವರ್ತಿಸುವಂತೆ ಮಾಡಿದ ಸಾಲು ಸಾಲು ಘಟನಾವಳಿಗಳು ನಡೆದು ಹೋದವು.

ರಾಜ್ಯದಾದ್ಯಂತ ಹಿರಿಯ ಶ್ರೇಣಿಯ ಹುದ್ದೆಯಲ್ಲಿದ್ದ ಹಲವರು ಕದಿಯುವಾಗ, ಕಸಿಯುವಾಗ ಮತ್ತು ಕಾಣಿಸಿಕೊಳ್ಳಬಾರದವರ ಜತೆ ಕುಡಿದು ಕುಣಿಯುವಾಗ ಸಿಕ್ಕಿಬಿದ್ದರು. ನೀವೇನಾದರೂ ಕೆಲ  ಇಂಗ್ಲಿಷ್ ಪತ್ರಿಕೆಗಳನ್ನು ಓದುವ ಹವ್ಯಾಸ ಇಟ್ಟುಕೊಂಡಿದ್ದರೆ ಇವೆಲ್ಲವನ್ನು ಮೀರಿಸುವಂತೆ ಪೊಲೀಸ್ ಇಲಾಖೆಯಲ್ಲಿ ನಡೆಯುವ ಲೆಕ್ಕವಿಲ್ಲದಷ್ಟು ಬಿಡಿ ಬಿಡಿ ಘಟನಾವಳಿಗಳು ನಿಮ್ಮ ಗಮನಕ್ಕೆ ಬಂದಿರಬಹುದು. 

‘ಬೆಂಗಳೂರ್ ಮಿರರ್’ ಎಂಬ ಇಂಗ್ಲಿಷ್ ಪತ್ರಿಕೆಯಲ್ಲಿ ನಾಲ್ಕೈದು ವರ್ಷಗಳಿಂದ ಪೊಲೀಸರ ಕುರಿತು ಪ್ರಕಟವಾಗುತ್ತಿರುವ  ವರದಿಗಳ ಬಗ್ಗೆ ಸುಮ್ಮನೆ ಕಣ್ಣಾಡಿಸಿ, ಇಲಾಖೆಯಲ್ಲಿ ಎಂತೆಂಥವರೆಲ್ಲಾ ಇದ್ದಾರೆ ಎಂದು  ತಿಳಿದು ನೀವು  ಕುಸಿದು ಬೀಳುತ್ತೀರಿ.  ಈ ವರದಿಗಳ   ಸತ್ಯಾಸತ್ಯತೆಯನ್ನು ಯಾರಾದರೂ ಪ್ರಶ್ನಿಸಬಹುದು. ಒಂದು ವೇಳೆ ಈ ಎಲ್ಲಾ ವರದಿಗಳೂ ತಪ್ಪು ಎಂದಿಟ್ಟುಕೊಂಡರೂ ಅಂತಹ ವರದಿಗಳನ್ನು  ಇಲಾಖೆಯೊಳಗಿಂದ ಯಾರಾದರೂ ನೀಡುತ್ತಾರೆ ಎನ್ನುವುದು  ಕೂಡಾ ಅಲ್ಲಿ ಏನೇನು ನಡೆಯುತ್ತಿದೆ ಎನ್ನುವುದಕ್ಕೆ ಕನ್ನಡಿ ಹಿಡಿಯಲು ಸಾಕು.

ಇಲಾಖೆಯೊಳಗೆ ಸದಾ ಒಂದು ಕಾಲು ಹೊರಗಿರಿಸಿಕೊಂಡೆ ಉನ್ನತ ಹುದ್ದೆಯಲ್ಲಿರುವ ಒಬ್ಬರು ಇದನ್ನೆಲ್ಲ ಕಂಡು ಎಷ್ಟು ರೋಸಿ ಹೋಗಿದ್ದಾರೆ ಎಂದರೆ ಖಾಸಗಿಯಾಗಿ ಮಾತನಾಡುವಾಗ ಅವರು ಇಲಾಖೆಯಲ್ಲಿರುವ ಎಲ್ಲರನ್ನೂ ಎರಡಕ್ಷರದ ಒಂದು ಪದ ಬಳಸಿ ಕರೆಯುತ್ತಾರಂತೆ. ಇದು ಸತ್ಯವೇ ಆಗಿದ್ದರೆ ಅವರು ಬಳಸುವ ಪದ ಇಲಾಖೆಯನ್ನು ಸರಿಯಾಗಿ ಚಿತ್ರಿಸುತ್ತದೆ. ಆದರೆ ಆ ಪದವನ್ನು ಇಲ್ಲಿ ನೀಡುವಂತಿಲ್ಲ.

ಕರ್ನಾಟಕದ ಇಬ್ಬರು ಮಾಜಿ ಪೊಲೀಸ್ ಮುಖ್ಯಸ್ಥರು- ಎ.ಪಿ. ದೊರೈ ಮತ್ತು ಸಿ. ದಿನಕರ್- ಮತ್ತು ಸಿಐಡಿಯಲ್ಲಿ ಸುದೀರ್ಘ ಸೇವೆಯಲ್ಲಿದ್ದ ಇನ್ನೊಬ್ಬರು- ಪ್ರವೀಣ್ ಕುಮಾರ್- ಬರೆದ ಪುಸ್ತಕಗಳಲ್ಲಿ ಕರ್ನಾಟಕ ಪೊಲೀಸ್ ವ್ಯವಸ್ಥೆಯೊಳಗೆ ಹಿಂದಿನಿಂದಲೂ ಏನೇನಾಗುತ್ತಿದೆ ಎನ್ನುವುದರ ಭೀಕರ ಚಿತ್ರಣ ಸಿಗುತ್ತದೆ. ಅದೆಲ್ಲ ಈಗ ಇನ್ನೂ ಬಿಗಡಾಯಿಸಿದೆ. ಆದರೆ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಹುಲ್ಲು ಕಡ್ಡಿ ಅಲುಗಾಡಿಸುವುದಕ್ಕೂ ಯಾರಿಗೂ ಸಾಧ್ಯವಾಗಿಲ್ಲ.

ಸಾಮಾನ್ಯವಾಗಿ ಪೊಲೀಸ್ ಇಲಾಖೆಯನ್ನು (ಅರ್ಥಾತ್ ಗೃಹ ಇಲಾಖೆಯನ್ನು) ಮುಖ್ಯಮಂತ್ರಿಗಳೇ ವಹಿಸಿಕೊಳ್ಳುತ್ತಾರೆ. ಇಲ್ಲವಾದಲ್ಲಿ ಇದ್ದದರಲ್ಲಿ ಪರವಾಗಿಲ್ಲ ಎನ್ನುವ ಹಿರಿಯ ರಾಜಕಾರಣಿಗಳೇ ಗೃಹ ಇಲಾಖೆಯ ಮಂತ್ರಿಗಳಾಗುವುದು. ಹಾಗೆ ಮಂತ್ರಿಗಳಾದವರಲ್ಲಿ ಬುದ್ಧನ ಪ್ರತಿಮೆಯನ್ನು ಕಚೇರಿಯಲ್ಲೇ ಪ್ರತಿಷ್ಠಾಪಿಸಿದವರು ಇದ್ದರು, ಆದರೆ ಅವರ ಕಾಲದಲ್ಲಿ ಪೊಲೀಸ್ ವ್ಯವಸ್ಥೆಯ ಹಿಂಸಾತ್ಮಕ ಸ್ವರೂಪ ಎಳ್ಳಷ್ಟೂ ಬದಲಾಗಲಿಲ್ಲ.

ಸಂಘ ಮೂಲದಿಂದ ಬಂದ ಸಜ್ಜನ ಹಿರಿಯರೊಬ್ಬರು ಗೃಹ ಮಂತ್ರಿಯಾದರು, ಅವರ ಕಾಲದಲ್ಲಿ ಪೊಲೀಸ್ ವ್ಯವಸ್ಥೆ ಒಂದಿನಿತೂ ಸುಸಂಸ್ಕೃತವಾಗಲಿಲ್ಲ. ‘ಜಾತಿಯ ಬಲವೊಂದಿದ್ದರೆ ಯಾವತ್ತೋ ಮುಖ್ಯಮಂತ್ರಿಯಾಗುವ ಸರಕು ನಾನು’ ಎಂದು ತನ್ನ ಬಗ್ಗೆ ಅಪಾರ ವಿಶ್ವಾಸ ಇರಿಸಿಕೊಂಡಿದ್ದ ರಾಜಕಾರಣಿಯೊಬ್ಬರು ಗೃಹ ಮಂತ್ರಿಯಾಗಿದ್ದರು.

ಆದರೆ ಅವರ ಸಾಮರ್ಥ್ಯದ ಪ್ರಭಾವ ಇಲಾಖೆಯ ಮೇಲೆ ಏನಾಗಿತ್ತು ಎನ್ನುವುದನ್ನು ಅವರೇ ಹೇಳಬೇಕು,  ಪ್ರಾಯದಲ್ಲಿ ಕಿರಿಯರೊಬ್ಬರು ಗೃಹ ಮಂತ್ರಿಯಾದರು. ಆದರೆ ಪೊಲೀಸ್ ವ್ಯವಸ್ಥೆಯ ಹಳೆ ಪಾಳೇಗಾರಿಕೆ ಮನಸ್ಥಿತಿ ಆಧುನಿಕ ರೂಪು ಪಡೆಯಲಿಲ್ಲ- ಮೊನ್ನೆ ಮೊನ್ನೆ ಇಲಾಖೆಯ ತಳಮಟ್ಟದ ಸಿಬ್ಬಂದಿ ಇಲಾಖೆಯೊಳಗಣ ಶೋಷಣೆ ತಡೆಯಲಾಗದೆ ಬೀದಿಗೆ ಬರಲು ಸಿದ್ಧವಾಗುವಷ್ಟು ವ್ಯವಸ್ಥೆ ಕೆಡುವಲ್ಲಿ ಈ ತನಕ ಆ ಇಲಾಖೆಯ ಮಂತ್ರಿಗಳಾಗಿ ಕೆಲಸ ಮಾಡಿದ ಎಲ್ಲರ ಪಾಲೂ ಇದೆ.

ಆಡಳಿತದ ದೃಷ್ಟಿಯಿಂದ ನೋಡಿದರೆ ಗೃಹ ಇಲಾಖೆ ಮಿಕ್ಕೆಲ್ಲಾ ಇಲಾಖೆಗಳಿಗಿಂತಲೂ ಹೆಚ್ಚು ಪ್ರಾಧಾನ್ಯ ಇರುವ ಇಲಾಖೆ. ಯಾಕೆಂದರೆ ಸರ್ಕಾರ ಮಾಡುವ ಇನ್ನಿತರ ಯಾವುದೇ ಕೆಲಸವನ್ನು ಸರ್ಕಾರೇತರರೂ ಮಾಡಬಹುದು- ಆದರೆ ಕಾನೂನು ಸುವ್ಯವಸ್ಥೆ ಮತ್ತು ಅಪರಾಧ-ನ್ಯಾಯ ನಿರ್ವಹಣಾ ವ್ಯವಸ್ಥೆಯನ್ನು ಸರ್ಕಾರ ಮಾತ್ರ ಮಾಡಬೇಕು.

ರಾಜಕೀಯವಾಗಿ ಗೃಹ ಇಲಾಖೆ ಅತ್ಯಂತ ಪ್ರಧಾನ ಇಲಾಖೆ. ಯಾಕೆಂದರೆ ಅದು ರಾಜಕಾರಣಿಗಳು ‘ಕಲೆಕ್ಷನ್ ಗೇಟ್’ನಂತೆ ಬಳಸಿಕೊಳ್ಳಬಹುದಾದ ಇಲಾಖೆ. ಈ ತನಕ ಬಂದ ಎಲ್ಲಾ ಸರ್ಕಾರಗಳೂ ಇಲಾಖೆಯನ್ನು ರಾಜಕೀಯ ದೃಷ್ಟಿಯಿಂದ ಕಂಡ ಹಾಗೆ ಆಡಳಿತ ದೃಷ್ಟಿಯಿಂದ ನೋಡದೆ ಹೋದ ಪಾಪ ಈಗ ಫಲ ನೀಡುತ್ತಿದೆ. ಇಷ್ಟೊಂದು ಹುಳುಕುಗಳನ್ನು ಒಡಲೊಳಗೆ ತುಂಬಿಕೊಂಡಿರುವ ಯಾವ ಇಲಾಖೆಯೂ ಜನಪರವಾಗಿ ಕೆಲಸ ಮಾಡಲು  ಸಾಧ್ಯವಿಲ್ಲ ಎನ್ನುವ ಅಂಶ ನಮ್ಮನ್ನು ಕಾಡಬೇಕಿತ್ತು.

ವ್ಯವಸ್ಥೆ ಇಷ್ಟು ಕೆಟ್ಟು ಹೋಗಿರುವುದರಿಂದ ಅದರೊಳಗಿನ ಕೆಲವರು ಸಹಜವಾಗಿಯೇ ತೊಂದರೆ- ಕಿರುಕುಳ ಎಲ್ಲ ಅನುಭವಿಸಿರಬಹುದು. ಆದರೆ ಅವರಿಗೆಲ್ಲ ಬೇರೆ ಬೇರೆ ರೀತಿಯ ರಕ್ಷಣೆಗಳೂ ಇವೆ ಎನ್ನುವುದನ್ನು ಮರೆಯಬಾರದು. ನಾವೀಗ ಕೇಳಬೇಕಾಗಿರುವುದು ಯಾವ ರಕ್ಷಣೆಯೂ ಇಲ್ಲದೆ ಈ ವ್ಯವಸ್ಥೆಯನ್ನು ದಿನನಿತ್ಯ ಸಹಿಸಿಕೊಳ್ಳಬೇಕಾಗಿರುವ ಜನಸಾಮಾನ್ಯರ ಬಗ್ಗೆ ಯಾರೂ ಯಾಕೆ ಮಾತನಾಡುತ್ತಿಲ್ಲ ಎನ್ನುವ ಪ್ರಶ್ನೆಯನ್ನು.

ಪೊಲೀಸರ ಆತ್ಮಹತ್ಯೆ (ಅವರು ಸ್ವಲ್ಪ ಉನ್ನತ ಹುದ್ದೆಯಲ್ಲಿದ್ದರೆ) ದೊಡ್ಡ ಸುದ್ದಿಯಾಗುತ್ತದೆ. ಆದರೆ ಪೊಲೀಸರ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆ ಪತ್ರಿಕೆಗಳಲ್ಲಿ ಬರುವ  ವರದಿಗಳು ಯಾರನ್ನೂ ತಟ್ಟದೇ ಹೋಗುವುದು ಹೇಗೆ ಎನ್ನುವ ಪ್ರಶ್ನೆಯನ್ನು. ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದವರು ತಮಗೆ ತೊಂದರೆಯಾದರೆ ಎಂಎಲ್ಎ ಬಳಿ ಹೋಗಬಹುದು, ಸ್ವಾಮಿಗಳ ಬಳಿ ಹೋಗಬಹುದು. ಒಂದಲ್ಲ ಒಂದು ಟಿವಿ  ಚಾನೆಲ್‌ನಲ್ಲಿ ತನ್ನ ಪರವಾಗಿ ಕಾರ್ಯಕ್ರಮ ಬರುವಂತೆ ನೋಡಿಕೊಳ್ಳಬಹುದು. ಜನ ಮಾತ್ರ ಮತ್ತೂ ಮತ್ತೂ ಪೊಲೀಸ್ ಠಾಣೆಗೆ ಹೋಗಬೇಕಲ್ಲಾ...

ಈಗ ಎಲ್ಲರೂ ಪೊಲೀಸ್ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪದ ಬಗ್ಗೆ ಮಾತನಾಡುತ್ತಿದ್ದಾರೆ. ಹಸ್ತಕ್ಷೇಪಕ್ಕಿಂತ ಹೆಚ್ಚಿನ ಸಮಸ್ಯೆ ರಾಜಕಾರಣಿಗಳು ಮತ್ತು ಪೊಲೀಸರ ಮಧ್ಯೆ ಏರ್ಪಡುವ ಅಪವಿತ್ರ ಮೈತ್ರಿ. ಇದಕ್ಕಾಗಿ ಯಾರ ರಾಜೀನಾಮೆ ಕೇಳುವುದು? ಇದಕ್ಕಾಗಿ ರಾಜೀನಾಮೆ ಪಡೆದರೆ ಇಡೀ ವಿಧಾನ ಮಂಡಲದಲ್ಲಿ ಉಳಿಯಬಹುದಾದವರು ಎಷ್ಟು ಮಂದಿ ಇರಬಹುದು?  ಪೊಲೀಸರ ಮಧ್ಯೆ ಕೂಡಾ ಒಳ್ಳೆಯವರಿದ್ದಾರೆ, ಅವರೂ ಮನುಷ್ಯರೇ ಇತ್ಯಾದಿ ಸಮಜಾಯಿಷಿಗಳೆಲ್ಲಾ ಯಾವತ್ತೋ ಅರ್ಥ ಕಳೆದುಕೊಂಡಿವೆ.

ಶೇಕಡ ಐದೋ ಹತ್ತೋ ಮಂದಿ ಒಳ್ಳೆಯರಿದ್ದ ಮಾತ್ರಕ್ಕೆ ಏನೂ ಆಗುವುದಿಲ್ಲ. ಎಲ್ಲ ವ್ಯವಸ್ಥೆಯೊಳಗೂ ಅಪವಾದ ಎನಿಸುವವರು ಇರುತ್ತಾರೆ. ಯೋಚಿಸಬೇಕಾದದ್ದು ಒಟ್ಟಾರೆ ವ್ಯವಸ್ಥೆ ಹೇಗಿದೆ ಎನ್ನುವ ವಿಚಾರ. ಈಗ ಈ ರಾಜೀನಾಮೆ ಗುಲ್ಲಿನ ಮದ್ಯೆ ‘ಪೋಲಿಸರಿಗೆ ಪೊಲೀಸರನ್ನು ಸಹಿಸಲು ಕಷ್ಟವಾದರೆ ಜನ ಅವರನ್ನು ಹೇಗೆ ಸಹಿಸಿಕೊಳ್ಳಬೇಕು’ ಎಂದು ಕೇಳುವ ಒಬ್ಬ ನಾಯಕನಿಗಾಗಿ ಕಾಯೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT