ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರು ಶವ ಸುಟ್ಟರೂ ತಪ್ಪಿತಸ್ಥರಿಗೆ ಶಿಕ್ಷೆ!

Last Updated 26 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಕಳೆದ ವಾರ ಬರೆದ ಅಂಕಣದಲ್ಲಿ ಚಿತ್ರಲೇಖ ಶವಪತ್ತೆಯಾದದ್ದು ಚಾರ್ಮಾಡಿ ಘಾಟ್‌ನಲ್ಲಿ ಎಂದು ಪ್ರಮಾದವಶಾತ್ ಬರೆದಿದ್ದೆ. ಆದರೆ, ಅದು ಶಿರಾಡಿ ಘಾಟ್. ಕೆಲವು ವರ್ಷಗಳ ಹಿಂದಿನ ನೆನಪನ್ನು ಮೆಲುಕು ಹಾಕುವಾಗ ಈ ರೀತಿ ದಿನಾಂಕ, ಸ್ಥಳಗಳ ವಿಷಯದಲ್ಲಿ ವ್ಯತ್ಯಾಸವಾಗುವುದು ಸಹಜ. ಸುಪ್ರೀಂ ಕೋರ್ಟ್ ಕೂಡ ಇದನ್ನು ಗಣನೆಗೆ ತೆಗೆದುಕೊಂಡೇ ಸಾಂದರ್ಭಿಕ ಸಾಕ್ಷಿಗಳಿಗೆ ಆದ್ಯತೆ ನೀಡಿ ಅನೇಕ ಪ್ರಕರಣಗಳಲ್ಲಿ ತೀರ್ಪು ನೀಡಿದೆ.

ಯಾವುದೇ ಕೊಲೆ ಮೊಕದ್ದಮೆಯಲ್ಲಿ ಆರೋಪಿಗಳು ಖುದ್ದು ಕರೆದುಕೊಂಡು ಹೋಗಿ ಶವವನ್ನು ತೋರಿಸುತ್ತಾರೆ ಎಂದಿಟ್ಟುಕೊಳ್ಳಿ. ಆಗ ಕೆಲವು ಗೌರವಾನ್ವಿತ ನಾಗರಿಕರ (ಅವರನ್ನು ಕಾನೂನಿನ ಪರಿಭಾಷೆಯಲ್ಲಿ `ಪಂಚರು~ ಎಂದು ಕರೆಯುತ್ತಾರೆ) ಸಮಕ್ಷಮದಲ್ಲಿ ಆ ಶವವನ್ನು ವಶಪಡಿಸಿಕೊಳ್ಳಬೇಕು.

ಆ ನಾಗರಿಕರು ನ್ಯಾಯಾಲಯಕ್ಕೆ ಬಂದು ಆ ಬಗ್ಗೆ ಸಾಕ್ಷಿ ಹೇಳಬೇಕು. ಅದು ನಿಜಕ್ಕೂ ಒಳ್ಳೆಯ ಸಾಕ್ಷಿ. ಚಿತ್ರಲೇಖ ಪ್ರಕರಣದಲ್ಲಿ ಅಂಥ ಸಾಕ್ಷಿದಾರರಿಗೆ ಸಾಕಷ್ಟು ಒತ್ತಡ ಬಂತು. ಕೆಲವರು ನ್ಯಾಯಾಲಯಕ್ಕೆ `ಟೆಲಿಗ್ರಾಂ~ ಕಳಿಸಿ ತಮಗೆ ರಕ್ಷಣೆ ಬೇಕು ಎಂದು ಕೋರಿದರು.

ಆದರೆ, ನ್ಯಾಯಾಲಯ ಅವರ ಕೋರಿಕೆಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. 2004ರ ಜನವರಿಯಲ್ಲಿ ಚಿತ್ರಲೇಖ ಕೊಲೆಯಾದರೂ ಶವ ಪತ್ತೆಯಾದದ್ದು ಮಾರ್ಚ್‌ನಲ್ಲಿ. ಅದು ಚಿತ್ರಲೇಖ ಅವರದ್ದೇ ಶವ ಎಂಬುದನ್ನು ವಿಧಿ ವಿಜ್ಞಾನ, ವೈದ್ಯಕೀಯ ಹಾಗೂ ಡಿಎನ್‌ಎ ಪರೀಕ್ಷೆ ಯಿಂದ ನಾವು ದೃಢಪಡಿಸಿದೆವು. ಹಾಗಿದ್ದೂ ನ್ಯಾಯಾಲಯದಲ್ಲಿ ಪ್ರಕರಣ ಖುಲಾಸೆಯಾಯಿತು.

ನಾನೇ ತನಿಖೆ ನಡೆಸಿದ ಇನ್ನೊಂದು ಪ್ರಕರಣ ಬೇರೆಯದ್ದೇ ಸ್ವರೂಪದ್ದು. ಅಲ್ಲಿ ಶವವೇ ಸಿಗಲಿಲ್ಲ ವಾದರೂ ಅಪರಾಧಿಗಳಿಗೆ ಶಿಕ್ಷೆಯಾಯಿತು. ಈ ಘಟನೆ ತುಂಬಾ ಆಸಕ್ತಿಕರವಾದದ್ದು.

ನಾನು ಉಪ್ಪಾರಪೇಟೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ. 2003ರಲ್ಲಿ ಒಂದು ಪ್ರಕರಣ ದಾಖಲಾಯಿತು. ಮಸೂದ್ ಅಹಮದ್ ಎಂಬ ವ್ಯಕ್ತಿ ಕಾಣೆಯಾಗಿದ್ದ. ಆನಂದರಾವ್ ಸರ್ಕಲ್‌ನ ಟೂರಿಸ್ಟ್ ಕಚೇರಿಯಲ್ಲಿ ಅವನು ಖಾಸಗಿ ವಾಹನವನ್ನು ಬಾಡಿಗೆಗೆ ಬಿಟ್ಟಿದ್ದ.

ಕೆಲವರು ನಾಗ್ಪುರಕ್ಕೆ ಅವನ ವಾಹನವನ್ನು ಬಾಡಿಗೆಗೆಂದು ಪಡೆದಿದ್ದರು. ಅವನೇ ಅದನ್ನು ಓಡಿಸಿ ಕೊಂಡು ಹೋಗಿದ್ದ. ಆಮೇಲೆ ಮರಳಲೇ ಇಲ್ಲ. ದೂರಿನಲ್ಲಿ ದಾಖಲಾದದ್ದು ಇಷ್ಟು.
 
`ಆತ ನಾಗ್ಪುರಕ್ಕೆ ಹೋದ ನಂತರ ಬಾಡಿಗೆಗೆ ಪಡೆದವರು ಅವನನ್ನು ಗೋರಕ್‌ಪುರಕ್ಕೆ ಹೋಗ ಬೇಕೆಂದು ಒತ್ತಾಯಿಸಿದ್ದರು~ ಎಂಬ ಸಂಗತಿಯನ್ನು ಕಾಣೆಯಾದವನ ಪರಿಚಯಸ್ಥರೊಬ್ಬರು ನಮಗೆ ತಿಳಿಸಿದರು.

ಮಸೂದ್ ಅವರಿಗೆ ಫೋನ್ ಮೂಲಕ ಆ ವಿಷಯ ತಿಳಿಸಿದ್ದ. ಥಣಿಸಂದ್ರದ ಹತ್ತಿರವಿದ್ದ ಉತ್ತರಪ್ರದೇಶದ ಯುವಕರು ಆ ವಾಹನವನ್ನು ಬಾಡಿಗೆಗೆ ಪಡೆದಿದ್ದರೆಂಬುದು ನಮಗೆ ಗೊತ್ತಾಯಿತು. ನೇಪಾಳಕ್ಕೆ ಹತ್ತಿರದ ಗಡಿ ಪ್ರದೇಶದಲ್ಲಿದ್ದವರು ಅವರು ಎಂಬುದು ಸ್ಪಷ್ಟವಾಯಿತು.

ಮಂಗಳೂರಿನಲ್ಲೂ ಅವರ ಸಹಚರನೊಬ್ಬ ಕೆಲಸ ಮಾಡುತ್ತಿದ್ದ. ಅವರೆಲ್ಲಾ ಗೋರಕ್‌ಪುರದ ಬಳಿಯ ಗೋಪಾಲಪುರದವ ರೆಂಬುದು ನಮಗೆ ಖಚಿತವಾಯಿತು. ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದಾಗ, ಮಸೂದ್‌ನನ್ನು ದರಿಯಾಪುರದ ಬಳಿ ಕೊಂದಿದ್ದಾರೆಂದು ವಾಹನ ಬಾಡಿಗೆ ಪಡೆದಿದ್ದ ಸಹಚರರಿಂದ ಬಯಲಾಯಿತು.

ಗೋಲಾ ಪೊಲೀಸ್ ಠಾಣೆಯ ಸರಹದ್ದಿನ ದರಿಯಾಪುರ್‌ನಲ್ಲಿ ಮಸೂದ್‌ನನ್ನು ಕೊಲೆ ಮಾಡಿ, ಶವವನ್ನು ಅಲ್ಲೇ ಇದ್ದ ಕಬ್ಬಿನ ಗದ್ದೆಯಲ್ಲಿ ಬಿಸಾಡಿದ್ದರು. ಸಕ್ಕರೆ ಕಾರ್ಖಾನೆಗಳಿರುವ ಪ್ರದೇಶ ಅದಾಗಿರುವುದ ರಿಂದ ಅಲ್ಲಿ ಎಕರೆಗಟ್ಟಲೆ ಕಬ್ಬಿನ ಗದ್ದೆ ಇದೆ. ಆರೋಪಿಗಳೇ ಅಲ್ಲಿ ಶವ ಸಿಕ್ಕಿದೆ ಎಂದು ಪೊಲೀಸರಿಗೆ ತೋರಿಸಿದ್ದರು.

ತಾವೇ ತೋರಿಸಿದರೆ ಪೊಲೀಸರಿಗೆ ಅನುಮಾನ ಬರುವುದಿಲ್ಲ ಎಂಬುದು ಅವರ ನಂಬಿಕೆ ಯಾಗಿತ್ತು. ಅಲ್ಲಿನ ಪೊಲೀಸರು `ಅಸ್ವಾಭಾವಿಕ ಮರಣ~ ಎಂದು ಕೇಸು ದಾಖಲಿಸಿಕೊಂಡು, ಶವಪರೀಕ್ಷೆ ಮಾಡಿಸಿ ದರು. ಶವಪರೀಕ್ಷೆ ನಡೆಸಿದ ವೈದ್ಯರು `ಕತ್ತನ್ನು ಕತ್ತರಿಸಿ ಕೊಲ್ಲಲಾಗಿದೆ~ ಎಂದು ವರದಿ ಕೊಟ್ಟರು.

ಶವ ಸಿಕ್ಕಿ, ಒಂದು ವೇಳೆ ಅದರ ವಾರಸುದಾರರು ಪತ್ತೆಯಾದಲ್ಲಿ ಮಾತ್ರ ಅದನ್ನು ಪೊಲೀಸರು ಶವ ಪರೀಕ್ಷೆಯ ನಂತರ ಅವರಿಗೆ ಒಪ್ಪಿಸಬೇಕು. ವಾರಸು ದಾರರೇ ಸಿಗದಿದ್ದರೆ ಅಂಥ ಶವವನ್ನು ಯಾವುದೇ ಕಾರಣಕ್ಕೂ `ಸುಡಕೂಡದು; ಹೂಳಬೇಕು~.

ಶವ ಪರೀಕ್ಷೆ ಮಾಡುವ ವೈದ್ಯರನ್ನು ಕೋರಿ, ತಲೆಬುರುಡೆ ಯನ್ನು ಮುಂದಿನ ಪರೀಕ್ಷೆಗಾಗಿ `ಸೂಪರ್‌ಇಂಪೋಸ್~ ಮಾಡಿಸಲು ಸಂರಕ್ಷಿಸಬೇಕು. ಕೆಲವು ಮೂಳೆಗಳನ್ನು ಡಿಎನ್‌ಎ ಪರೀಕ್ಷೆಗೆಂದು ಸೂಕ್ತ ರೀತಿಯಲ್ಲಿ ಸಂಗ್ರಹಿಸಿ ಇಡಬೇಕು. ಇದು ಕಾನೂನಿನ ನಿಯಮ.

ಕೊಲೆ ಪ್ರಕರಣ ಎಂದು ವೈದ್ಯರು ಸರ್ಟಿಫಿಕೇಟ್ ಕೊಟ್ಟಿದ್ದರೂ ಅಲ್ಲಿನ ಪೊಲೀಸರು ಶವವನ್ನು ಹೂತಿರಲಿಲ್ಲ. ಅದನ್ನು ಗಂಗಾನದಿಯ ತಟದಲ್ಲಿ ಸುಟ್ಟುಹಾಕಿದ್ದರು.

ಬೂದಿಯನ್ನು ಕೂಡ ಸಂರಕ್ಷಿಸಿಟ್ಟಿರಲಿಲ್ಲ. ಅದನ್ನು ನದಿನೀರಿನಲ್ಲಿ ವಿಸರ್ಜಿಸಿದ್ದರು. ದುರಂತವೆಂದರೆ, ಹೀಗೆ ತೀರ್ಮಾನ ತೆಗೆದುಕೊಂಡ ಪೊಲೀಸರು ವೈದ್ಯರು ಕೊಟ್ಟಿದ್ದ ಸರ್ಟಿಫಿಕೇಟನ್ನೇ ಓದಿರಲಿಲ್ಲ. ವಾರಸುದಾರರಿಲ್ಲದ ಅನೇಕ ಶವಗಳು ಸಿಗುತ್ತವೆಂದೂ ಅವನ್ನೆಲ್ಲಾ ಹೂಳುವುದು ಸಾಧ್ಯವಿಲ್ಲವೆಂದೂ ಅಲ್ಲಿನ ಪೊಲೀಸರು ನಿರ್ಲಿಪ್ತತೆಯಿಂದ ಮಾತನಾಡಿದರು.
 
ತನಿಖೆ ಕಾಲದಲ್ಲಿ ನಾನಲ್ಲಿಗೆ ಹೋದಾಗ ಈ ವಿಷಯಗಳೆಲ್ಲಾ ಗೊತ್ತಾಗಿ, ಪೊಲೀಸರು ಇಷ್ಟು ಬೇಜವಾಬ್ದಾರಿಯಿಂದ ಇರುತ್ತಾರಾ? ಅನ್ನಿಸಿತು.
ಅಲ್ಲಿನ ಸಬ್ ಇನ್ಸ್‌ಪೆಕ್ಟರನ್ನು ನಾನು ವಿಚಾರಣೆ ಮಾಡಿದೆ. ಶವದ ಮೇಲಿದ್ದ ಬಟ್ಟೆಯನ್ನಾದರೂ ಇಟ್ಟಿದ್ದೀರಾ ಎಂದು ಕೇಳಿದೆ.

ಅದೃಷ್ಟವಶಾತ್ ಬಟ್ಟೆಯನ್ನು ಅವರು ಇಟ್ಟಿದ್ದರು. ಅದನ್ನು ತಂದುಕೊಟ್ಟರು. ಶರ್ಟ್‌ನ ಕಾಲರ್ ಮೇಲೆ ಅದನ್ನು ಹೊಲಿದ ಟೈಲರ್ ಅಂಗಡಿಯ ಲೇಬಲ್ ಇತ್ತು. ಅದರ ಮೇಲೆ `ಎಸ್.ಎನ್. ಟೈಲರ್ಸ್‌~ ಎಂದಿತ್ತು. ಬೆಂಗಳೂರಿನ ಪಾದರಾಯನಪುರದಲ್ಲಿದ್ದ ಟೈಲರ್ ಅಂಗಡಿಯ ಹೆಸರು ಅದು.

`ಹಮ್ ಲಾಶ್ ಕೋ ದಹನ್ ಕರನೇ ಕೆ ಬಾದ್ ಚಿತಾಭಸ್ಮ್ ಕೋ ಗಂಗಾನದೀ ಮೇ ವಿಸರ್ಜನ್ ಕರ್ ದಿಯಾ~ (ನಾವು ಶವವನ್ನು ಸುಟ್ಟುಹಾಕಿ, ಚಿತಾಭಸ್ಮವನ್ನು ಗಂಗಾ ನದಿಯಲ್ಲಿ ವಿಸರ್ಜಿಸಿದೆವು) ಎಂದು ಆ ಸಬ್ ಇನ್ಸ್‌ಪೆಕ್ಟರ್, ಅದು ತುಂಬಾ ಸಹಜ ಪ್ರಕ್ರಿಯೆ ಎಂಬಂತೆ ಹೇಳಿದರು.
 
ನಾನು ಅಲ್ಲಿನ ಮೇಲಧಿಕಾರಿಗಳನ್ನು ಸಂಪರ್ಕಿಸಿ, ಪ್ರಮುಖ ಪ್ರಕರಣದ ಒಳ್ಳೆಯ ಸಾಕ್ಷ್ಯವನ್ನು ಹೀಗೆ ನಾಶಮಾಡುವುದು ಸರಿಯೇ ಎಂದು ಕೇಳಿದೆ. ವಾರಸುದಾರರಿಲ್ಲದ ಅನೇಕ ಶವಗಳು ಸಿಗುವುದರಿಂದ ಅದು ಅಲ್ಲಿ ಮಾಮೂಲಿಯಾಗಿ ನಡೆಯುವ ಪ್ರಕ್ರಿಯೆ ಎಂಬಂತೆ ಮಾತನಾಡಿದರು.

ಮಸೂದ್ ಓಡಿಸುತ್ತಿದ್ದ ವಾಹನವನ್ನು ಪತ್ತೆಮಾಡಲು ನಾವು ಉತ್ತರ ಪ್ರದೇಶದ ಎಲ್ಲಾ ಪೊಲೀಸ್ ಠಾಣೆಗಳಿಗೆ ಅದರ ನಂಬರ್ ಕಳುಹಿಸಿಕೊಟ್ಟು, ಸಿಕ್ಕಿದರೆ ತಿಳಿಸುವಂತೆ ಕೋರಿದ್ದೆವು. ಆದರೆ, ಯಾವ ಠಾಣೆಯಿಂದಲೂ ನಮಗೆ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.

ಗೋಲಾ ಠಾಣೆಗೆ ಕೆಲವೇ ಕಿ.ಮೀ. ದೂರದಲ್ಲಿ ಕಫ್ತಾನ್‌ಗಂಜ್ ಪೊಲೀಸ್ ಠಾಣೆ ಇತ್ತು. ನಾನು ಅಲ್ಲಿಗೆ ಹೋಗಿ, ಅಕಸ್ಮಾತ್ತಾಗಿ ಯಾವುದಾದರೂ ವಾಹನ ಸಿಕ್ಕಿರಬಹುದೇ ಎಂದು ಪರಿಶೀಲಿಸಿದೆ.

ಮಸೂದ್ ಓಡಿಸುತ್ತಿದ್ದ ವಾಹನ ಅವರಿಗೆ ಸಿಕ್ಕಿತ್ತು. ಆದರೂ ಅವರು ಮಾಹಿತಿ ನೀಡದೇ ಇದ್ದುದನ್ನು ಕಂಡು ಅಚ್ಚರಿಯಾಯಿತು. ಪೊಲೀಸರು ಅಷ್ಟು ಉದಾಸೀನದಿಂದ ಇರುವುದನ್ನು ನಾನು ನೋಡಿದ್ದೇ ಅಪರೂಪ.
 
ಮಸೂದ್‌ನನ್ನು ಕೊಂದು ಆ ವಾಹನವನ್ನು ನೇಪಾಳಕ್ಕೆ ಮುಟ್ಟಿಸಲೆಂದು ಹೊರಟವರು ಅಲ್ಲಿ ಇದ್ದ ಚೆಕ್‌ಪೋಸ್ಟ್ ನೋಡಿ ಭಯಗೊಂಡಿದ್ದರು.

ಹೆಚ್ಚು ಡೀಸಲ್ ಸಹ ಇಲ್ಲದ ಆ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದರು. ಕರ್ನಾಟಕದಲ್ಲಿ ನೋಂದಾಯಿಸ ಲಾಗಿದ್ದ ನಂಬರಿನ ವಾಹನ ಅದು. ಆಗ ನನಗೆ ಹಾಗೂ ನನ್ನ ತಂಡದ ಸಿಬ್ಬಂದಿಗೆ ಸಮಾಧಾನವಾಯಿತು.

ಆರೋಪಿಗಳ ಕೆಲವು ಸಹಚರರು ನಮಗೆ ಬೆಂಗಳೂರಿನಲ್ಲಿ ಕೊಟ್ಟ ಮಾಹಿತಿಯ ಮೇರೆಗೆ ಕೇಸು ಪತ್ತೆ ಒಂದು ಹಂತಕ್ಕೆ ಬಂದುನಿಂತಿತ್ತು. ಕ್ರಮೇಣ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿಯೂ ಯಶಸ್ವಿಯಾದೆವು.
 
`ಎಸ್.ಎನ್.ಟೈಲರ್ಸ್‌~ ಅಂಗಡಿಯಲ್ಲಿನ ವ್ಯಕ್ತಿ ಕೂಡ ಮಸೂದ್ ತನ್ನಲ್ಲಿಯೇ ಬಟ್ಟೆ ಹೊಲಿಸುತ್ತಿದ್ದ ಎಂಬುದನ್ನು ಒಪ್ಪಿಕೊಂಡಿದ್ದೇ ಅಲ್ಲದೆ ಕೋರ್ಟ್‌ನಲ್ಲಿ ಸಾಕ್ಷಿಯನ್ನೂ ಹೇಳಿದರು. ಪೊಲೀಸರ ನಿರ್ಲಕ್ಷ್ಯದಿಂದ ಶವ ಸುಟ್ಟುಹೋಗಿ, ಬೂದಿ ಕೂಡ ಇಲ್ಲವಾಗಿದ್ದರೂ ಎಲ್ಲಾ ಸಾಂದರ್ಭಿಕ ಸಾಕ್ಷಿಗಳಿಂದಾಗಿ ನ್ಯಾಯಾಲಯದಲ್ಲಿ ಕೇಸು ಗಟ್ಟಿಯಾಯಿತು. 

`ಫಾಸ್ಟ್ ಟ್ರಾಕ್ ಸೆಷನ್ ನ್ಯಾಯಾಲಯ- 17~ರಲ್ಲಿ ಪ್ರಕರಣದ ಸುದೀರ್ಘ ವಿಚಾರಣೆ ನಡೆಯಿತು. ನ್ಯಾಯಮೂರ್ತಿ ಎಸ್. ಕೆ.ವಂಟಿಗೋಡಿಯವರು ಜನವರಿ 2010ರಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಿದರು. ನಾಲ್ಕು ಮಂದಿಗೆ ಜೀವಾವಧಿ ಶಿಕ್ಷೆಯಾಯಿತು. ಜೊತೆಗೆ ದಂಡವನ್ನೂ ವಿಧಿಸಲಾಯಿತು. ಒಬ್ಬ ಆರೋಪಿ ನ್ಯಾಯಾಂಗ ಬಂಧನದಲ್ಲಿರುವಾಗಲೇ ಸಹಜವಾಗಿ ಸಾವನ್ನಪ್ಪಿದ.

 
ಈ ಪ್ರಕರಣದಲ್ಲಿ ಬೇರೆ ಬೇರೆ ಪ್ರಾಸಿಕ್ಯೂಟರ್‌ಗಳು ಸಾಕ್ಷಿಗಳನ್ನು ಸರಿಯಾಗಿ ವಿಚಾರಣೆ ಮಾಡಿದ್ದರಿಂದ ಅಮಾಯಕನೊಬ್ಬನನ್ನು ಕೊಂದಿದ್ದವರಿಗೆ ಶಿಕ್ಷೆಯಾಯಿತು. ಗಣಪತಿ ಪ್ರಸನ್ನ ಎಂಬ ಪಬ್ಲಿಕ್ ಪ್ರಾಸಿಕ್ಯೂಟರ್ ಅಂತೂ ಕೊನೆಕೊನೆಯಲ್ಲಿ ಹೆಚ್ಚಿನ ಕಾಳಜಿ ತೆಗೆದುಕೊಂಡು ವಿಚಾರಣೆ ನಡೆಸಿದರು.

`ರಾಜೀಂದರ್ ಸಿಂಗ್ ವರ್ಸಸ್ ಡೆಲ್ಲಿ ಸ್ಟೇಟ್ ಅಡ್ಮಿನಿಸ್ಟ್ರೇಷನ್~ ಪ್ರಕರಣದ ತೀರ್ಪನ್ನು ಸುಪ್ರೀಂಕೋರ್ಟ್ ಜನವರಿ 21, 2010ರಲ್ಲಿ ನೀಡಿತು. ಆ ತೀರ್ಪಿನಲ್ಲಿ- `ಡಿಫೆಕ್ಟಿವ್ ಇನ್ವೆಸ್ಟಿಗೇಷನ್- ನೆಗ್ಲಿ ಜೆನ್ಸ್ ಆಫ್ ಇನ್ವೆಸ್ಟಿಗೇಟಿಂಗ್ ಆಫೀಸರ್- ದಟ್ ಶುಡ್ ನಾಟ್ ರಿಸಲ್ಟ್ ಇನ್ ಅಕ್ವಿಟಲ್ ಆಫ್ ಅಕ್ಯೂಸ್ಡ್ ವೆನ್ ಪ್ರಾಸಿಕ್ಯೂಷನ್ ಕೇಸ್ ಈಸ್ ಅದರ್‌ವೈಸ್ ಎಸ್ಟಾಬ್ಲಿಷ್ಡ್~ (ತನಿಖಾಧಿಕಾರಿಯ ನಿರ್ಲಕ್ಷ್ಯದಿಂದಾಗಿ ತನಿಖೆಯಲ್ಲಿ ಲೋಪವ್ದ್ದಿದ್ದೂ ಆರೋಪವು ಬೇರೆ ರೀತಿಯಲ್ಲಿ ಸಾಬೀತಾದರೆ ತಪ್ಪಿತಸ್ಥನ ಖುಲಾಸೆ ಕೂಡದು) ಎಂದು ಹೇಳಲಾಗಿದೆ. ಇದು ಮಸೂದ್ ಕೊಲೆ ಪ್ರಕರಣಕ್ಕೂ ಅನ್ವಯವಾಗುತ್ತದೆ.

ಮಸೂದ್ ಕೊಲೆ ಪ್ರಕರಣದಲ್ಲಿ ಸಿಕ್ಕ ನ್ಯಾಯ ಚಿತ್ರಲೇಖ ಪ್ರಕರಣದಲ್ಲಿ ಸಿಗಲಿಲ್ಲವೆಂಬ ಬೇಸರ ಮಾತ್ರ ಈಗಲೂ ನನ್ನನ್ನು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT