ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರೇಕೆ ಹಾದಿ ತಪ್ಪುತ್ತಾರೆ?

Last Updated 11 ಜೂನ್ 2011, 19:30 IST
ಅಕ್ಷರ ಗಾತ್ರ

ಒಮ್ಮೆ ಪೊಲೀಸ್ ಇಲಾಖೆಗೆ ಸೇರಿದ ಮೇಲೆ ಕೆಲಸಕ್ಕೆ ಸಮಯದ ಮಿತಿಯೇ ಇರುವುದಿಲ್ಲ. ವರ್ಷದ ಅಷ್ಟೂ ದಿನ, ದಿನದ ಪ್ರತಿ ಕ್ಷಣ ಸವಾಲಿಗೆ ಸಿದ್ಧರಿರಲೇಬೇಕು. ಪೊಲೀಸರಿಗೆ ರಜೆ ಹಕ್ಕಲ್ಲ. ಕೆಲಸದ ಸಮಯವನ್ನು ನಿಗದಿ ಪಡಿಸಿಕೊಳ್ಳುವುದೂ ಸಾಧ್ಯವಾಗದು.
 
ಒಂದು ವಿಧದಲ್ಲಿ ಇದು ಜೀವತೇಯುವ ಕೆಲಸವೇ ಹೌದು. ಹೀಗೆ ತೇಯುವ ಅನೇಕ ಜೀವಗಳು ತಾಳ್ಮೆ ಕಳೆದುಕೊಳ್ಳುವುದನ್ನು ನಾನು ಕಂಡಿದ್ದೇನೆ. ಪೊಲೀಸರು ಉರಿದುಬೀಳುತ್ತಾರೆ ಎಂದು ಅನೇಕರು ಅಭಿಪ್ರಾಯಪಡಲು ಇದೇ ಕಾರಣವಿದ್ದರೂ ಇರಬಹುದು.

ಈ ಇಲಾಖೆಯಲ್ಲಿ ಕೆಲಸದ ಒತ್ತಡವೇ ಬೇರೆ ರೀತಿಯದ್ದು. ನಾನು ಅಸಂಖ್ಯ ಪ್ರಾಮಾಣಿಕ ಸಿಬ್ಬಂದಿಯನ್ನು ಕಂಡಿದ್ದೇನೆ. ಆದರೆ, ತುಂಬಾ ಪ್ರಾಮಾಣಿಕರಾಗಿದ್ದರೆ ಹೆಚ್ಚು ಕೇಸುಪತ್ತೆ ಮಾಡುವುದಾಗಲೀ, ವೃತ್ತಿಯಲ್ಲಿ ಸಾಧನೆ ಮಾಡುವುದಾಗಲೀ ಸಾಧ್ಯವೇ ಇಲ್ಲ.
 
ಕೆಲವು ಕೇಸುಗಳನ್ನು ಪತ್ತೆಮಾಡಬೇಕಾದರೆ ನಾವು ಕಾನೂನು ಚೌಕಟ್ಟಿನ ತುಸು ಆಚೀಚೆ ಹೋಗಲೇಬೇಕಾಗುತ್ತದೆ. ಆದರೆ, ಅದರಿಂದ ಯಾವ ಮುಗ್ಧರಿಗೂ ಕೆಡುಕಾಗಕೂಡದೆಂಬ ಎಚ್ಚರ ಇರಬೇಕಾದದ್ದು ಅಗತ್ಯ.

ಇಂಥ ಪರಿಸ್ಥಿತಿಯಲ್ಲೂ ಪ್ರಾಮಾಣಿಕರಾಗಿದ್ದೂ ಸಾಧನೆ ಮಾಡಿದ ಕೆಲವೇ ಕೆಲವರನ್ನೂ ನೋಡಿದ್ದೇನೆ. ನಾನು ಕೆಲಸ ಮಾಡುತ್ತಿದ್ದ ಕಾಲದಲ್ಲಿ ಬಹುತೇಕ ಐಪಿಎಸ್ ಅಧಿಕಾರಿಗಳು ಪ್ರಾಮಾಣಿಕ ಮೂರ್ತಿಗಳಾಗಿದ್ದರು.
 
ಈಗ ಪರಿಸ್ಥಿತಿ ಬದಲಾಗಿದೆ ಎಂಬುದು ಸತ್ಯ. ಸುಭಾಷ್‌ಚಂದ್ರ, ಹರ್ಲಂಕರ್, ಕಸ್ತೂರಿರಂಗನ್, ಮರಿಸ್ವಾಮಿ, ಜಯಪ್ರಕಾಶ್, ರಾಮಕೃಷ್ಣ, ಕೋದಂಡರಾಮಯ್ಯ, ಶ್ರೀನಿವಾಸುಲು, ರಾಮಲಿಂಗಂ, ಶ್ರೀಧರನ್, ಪ್ರವೀಣ್ ಸೂದ್, ಗೋಪಾಲ್ ಹೊಸೂರ್, ರವಿಕಾಂತೇಗೌಡ ಮೊದಲಾದವರ ಜೊತೆ ನಾನು ಕೆಲಸ ಮಾಡಿದ್ದೇನೆ.

ಇವರೆಲ್ಲಾ ಬೆಂಗಳೂರು ಕಂಡಂಥ ಅದ್ಭುತ ಅಧಿಕಾರಿಗಳು. ರಾಮಕೃಷ್ಣ ಎಂಬ ಹೆಡ್ ಕಾನ್‌ಸ್ಟೇಬಲ್ ಒಬ್ಬರಿದ್ದರು. ಅವರು ಬೇರೆ ಯಾರದ್ದೋ ಹಣದ ಕಾಫಿ ಕೂಡ ಕುಡಿಯುತ್ತಿರಲಿಲ್ಲ.

ಅಷ್ಟು ಪ್ರಾಮಾಣಿಕತೆಯನ್ನು ಬದುಕಿನುದ್ದಕ್ಕೂ ಉಳಿಸಿಕೊಂಡೇ ಬಂದರು. ಮಿತಿಗಳು ಏನೇ ಇದ್ದರೂ ಆ ರೀತಿ ಪ್ರಾಮಾಣಿಕತೆಯನ್ನು ವ್ರತದಂತೆ ಪಾಲಿಸುವುದು ಈ ಕಾಲಮಾನದಲ್ಲಿ ತಮಾಷೆಯಲ್ಲ.

ಇಷ್ಟೆಲ್ಲ ಒತ್ತಡ, ಸಂಕಟ, ಕುಟುಂಬವರ್ಗದವರ ಜೊತೆಗೆ ಹೆಚ್ಚು ಕಾಲ ಕಳೆಯಲಾಗದ ಸ್ಥಿತಿಯಲ್ಲಿ ಕೆಲಸ ಮಾಡುವ ಪೊಲೀಸರ ಬಗ್ಗೆ ಭ್ರಷ್ಟಾಚಾರದ ದೊಡ್ಡ ಆರೋಪವಿದೆ. ಎಲ್ಲೆಂದರಲ್ಲಿ, ಕಂಡಕಂಡವರಿಂದ ಹಣ ಪೀಕುತ್ತಾರೆ ಎಂದು ಅನೇಕರು ಕಿಚಾಯಿಸಿ ಮಾತನಾಡುವುದನ್ನು ನಾನು ನೋಡಿದ್ದೇನೆ.

ಎಲ್ಲಾ ಪೊಲೀಸರೂ ಭ್ರಷ್ಟರಲ್ಲ. ಎಷ್ಟೋ ಜನ ಹೀಗೆ ಬೇರೆಯವರ ಕಾಸಿಗೆ ಕೈಚಾಚಲು ಅವರ ಆಸೆಬುರುಕತನವೊಂದೇ ಕಾರಣವಲ್ಲ. ಇದರಲ್ಲಿ ವೃತ್ತಿ ವಾತಾವರಣದ ಪಾಲು ದೊಡ್ಡದಿದೆ.

ಯಾವುದಾದರೂ ದೊಡ್ಡ ಕೇಸಿನ ವಿಚಾರಣೆಗೆಂದು ಹತ್ತು ಪೊಲೀಸರ ತಂಡ ಬೇರೆಡೆಗೆ ಹೋಗುತ್ತದೆ ಎಂದಿಟ್ಟುಕೊಳ್ಳೋಣ. ಆ ಇಡೀ ತಂಡಕ್ಕೆ ಊಟ-ಕಾಫಿಗೆ ಕಾಸು ಕೊಡಲೂ ಪರದಾಡಬೇಕು.
 
ಇಂತಹ ಕೆಲಸಕ್ಕೆಂದೇ `ಸೀಕ್ರೇಟ್ ಸರ್ವೀಸ್ ಅಮೌಂಟ್~ ಎಂಬುದಿರುತ್ತದೆ. ಆದರೆ, ಎಷ್ಟೋ ಅಧಿಕಾರಿಗಳು ಅದನ್ನು ತಕ್ಷಣಕ್ಕೆ ಕೊಡುವುದಿಲ್ಲ. ಮೊದಲು ಹಣ ಖರ್ಚು ಮಾಡಿ, ಆಮೇಲೆ ಪಡೆಯುವ ಅನಿವಾರ್ಯತೆ ಇರುತ್ತದೆ.

ಹಾಗಾಗಿ ಪೊಲೀಸರು ಎಲ್ಲಿ ಹೋಗುತ್ತಾರೋ, ಅಲ್ಲಿನ ಹೋಟೆಲ್‌ನಲ್ಲಿ ತಿಂಡಿ-ಕಾಫಿ ಮುಗಿಸುತ್ತಾರೆ. ಬಿಲ್ ಪಾವತಿಸಲು ಅವರಲ್ಲಿ ಹಣವಿದೆಯೋ ಇಲ್ಲವೋ ಎಂಬುದನ್ನು ಸಾಮಾನ್ಯ ಜನ ಯೋಚಿಸುವುದೇ ಇಲ್ಲ. ಪುಕ್ಕಟ್ಟೆಯಾಗಿ ಹೊಡೆಯಲು ಬಂದಿದ್ದಾರೆ ಎಂದೇ ಭಾವಿಸುತ್ತಾರೆ.

ಇಲಾಖೆ ಸೃಷ್ಟಿಸಿದ ಒತ್ತಡದಿಂದಾಗಿ ಆ ಪೊಲೀಸರು ಇಂಥ ಮಾತು ಕೇಳುವಂತಾಗುತ್ತದೆ. ಸಹಜವಾಗಿಯೇ ಈ ಪರಿಸ್ಥಿತಿ ಇರುವುದರಿಂದ ಕೆಲವು ಆಸೆಬುರುಕ ಪೊಲೀಸರು ಸದಾ ವಸೂಲಿವೀರರಾಗುವ ದಾರಿ ತಂತಾನೇ ನಿರ್ಮಾಣವಾಗುತ್ತದೆ.

ಪೊಲೀಸರಿಗೆ ಸ್ಪೋರ್ಟ್ಸ್ ಕಡ್ಡಾಯ. ವಿವಿಧ ಕ್ರೀಡೆಗಳಲ್ಲಿ ಅನೇಕರು ಭಾಗವಹಿಸುತ್ತಾರೆ. ಒಂದೊಂದು ವಿಭಾಗವೂ ಕನಿಷ್ಠ 30 ಜನರ ತಂಡವನ್ನು ಸಿದ್ಧಮಾಡಬೇಕು. ಕ್ರೀಡಾ ದಿನವು ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತದೆ.

ಧ್ವಜವಂದನೆ, ಆಟಗಾರರ ಕವಾಯತು ಇರಲೇಬೇಕು. ಉಡುಪಿನಲ್ಲಿ ಶಿಸ್ತು ಮೀರಕೂಡದು. ಪೊಲೀಸ್ ಇಲಾಖೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿ ಗೆದ್ದ ಕ್ರೀಡಾಪಟುಗಳು ಕೂಡ ಇರುತ್ತಾರೆ. ಇಲಾಖೆ ನಡೆಸುವ ಸ್ಪರ್ಧೆಗಳಲ್ಲೂ ಸಹಜವಾಗಿಯೇ ಅವರಲ್ಲಿ ಅನೇಕರಿಗೆ ಬಹುಮಾನ ಬಂದೇ ಬರುತ್ತದೆ.

ಇಲಾಖೆಯು ಮೀಸಲಿಡುವ ಬಹುಮಾನದ ಮೊತ್ತ ತುಂಬಾ ಕಡಿಮೆ. ಅದರಲ್ಲಿ ಒಂದು ಪ್ಲಾಸ್ಟಿಕ್ ಡಬ್ಬ ತರುವುದಷ್ಟೇ ಸಾಧ್ಯ. ಹಾಗಾಗಿ ದೊಡ್ಡ ಟ್ರೋಫಿ, ದೊಡ್ಡ ಶೀಲ್ಡ್‌ನ ವ್ಯವಸ್ಥೆಯನ್ನು ಪೊಲೀಸರೇ ಮಾಡ ಬೇಕಾಗುತ್ತದೆ.

ಇದಕ್ಕೆ ಹಣ ಕೊಡುವವರು ಯಾರು? ಪೊಲೀಸರು ಕೆಟ್ಟ ದಾರಿ ಹಿಡಿದು ಹಣ ಹೊಂದಿಸುತ್ತಾರೆ. ಚಿಕ್ಕಪೇಟೆ, ಸಿಟಿ ಮಾರ್ಕೆಟ್, ಕಲಾಸಿಪಾಳ್ಯ ಮೊದಲಾದ ಕಡೆ ಗೊತ್ತಿರುವ ಅಂಗಡಿಗಳಿಗೆ ಹೋಗಿ ಟ್ರೋಫಿಗಳನ್ನು ಪಡೆದು ತರುತ್ತಾರೆ.
 
ಆ ಅಂಗಡಿಯವರು ಬೆನ್ನಹಿಂದೆ ಅದೇನೆಲ್ಲಾ ಮಾತಾಡಿಕೊಳ್ಳುತ್ತಾರೋ ಏನೋ?
ಕೆಲವು ಪ್ರಕರಣಗಳಲ್ಲಿ ದೂರು ಕೊಟ್ಟವರು ಶ್ರೀಮಂತರಿರುತ್ತಾರೆ.

ಬೇರೆ ರಾಜ್ಯಕ್ಕೋ, ನಗರಕ್ಕೋ ತನಿಖೆಗೆ ಹೋಗಬೇಕಾದಾಗ ಆ ಶ್ರೀಮಂತರು ತಾವೇ ಹಣ ಕೊಟ್ಟು ವಿಮಾನದಲ್ಲಿ ಹೋಗಲು ಏರ್ಪಾಟು ಮಾಡುತ್ತಾರೆ. ಆರೋಪಿಗಳನ್ನು ಹಿಡಿದು ತರಲು ಕೂಡ ಇಂಥದ್ದೇ ಸೌಕರ‌್ಯ ಮಾಡಿಕೊಡುವವರೂ ಉಂಟು.

ಅಪ್ಪಟ ಪ್ರಾಮಾಣಿಕರಾಗಿರುವ ಪೊಲೀಸರಾದರೆ ಹೀಗೆ ಹೋಗಲು ಒಪ್ಪುವುದಿಲ್ಲ. ಕೇಸು ಪತ್ತೆಯಾಗುವುದು ಕೂಡ ಕಷ್ಟವಾಗುತ್ತದೆ. ಪುಕ್ಕಟೆಯಾಗಿ ವಿಮಾನದಲ್ಲಿ ಓಡಾಡುವ ಯೋಗ ಬಂತು ಎಂದು ಅನೇಕರು ಆಡಿಕೊಳ್ಳುವ ಪರಿಸ್ಥಿತಿಯೂ ನಮ್ಮಲ್ಲಿ ಇದೆ.

ಅಧಿಕಾರಿಗಳಿಗೆ ವೋಲ್ವೋ, ಐರಾವತದಲ್ಲಿ ಓಡಾಡುವ ಅವಕಾಶವಿದೆ. ಆದರೆ, ಅವರ ಜೊತೆ ಕಾನ್‌ಸ್ಟೇಬಲ್ ಹೋದರೆ ಹತ್ತಿಸುವುದಿಲ್ಲ. ಯಾಕೆಂದರೆ, ಅವನಿಗೆ ಆ ಬಸ್ ಪ್ರಯಾಣದ ಅವಕಾಶ ಇಲಾಖೆ ನೀಡಿರುವುದಿಲ್ಲ.
 
ಹೋಗಲಿ ಅಧಿಕಾರಿಗಳಾದರೂ ಮನಸ್ಸು ಮಾಡಿ ಮಾಮೂಲಿ ಬಸ್‌ನಲ್ಲಿ ಹೋಗುತ್ತಾರೆಯೇ ಅಂದರೆ ಅದೂ ಅನೇಕ ಸಂದರ್ಭಗಳಲ್ಲಿ ಆಗುವುದಿಲ್ಲ. ಕೇಸುಪತ್ತೆಗೆಂದು ಹೊರಟಾಗ ಕಾನ್‌ಸ್ಟೇಬಲ್‌ಗಳೇ ಪ್ರತ್ಯೇಕವಾಗಿ ಪ್ರಯಾಣ ಮಾಡುವುದರಿಂದ ಪೆಟ್ಟು ಬೀಳುವುದು ತನಿಖೆಗೇ. ಇದೇ ಕಾರಣಕ್ಕೆ ದೂರುಕೊಟ್ಟವರ ವಾಹನಗಳನ್ನು ಬಳಸಿಕೊಳ್ಳುವ ಸ್ಥಿತಿಯೂ ಉದ್ಭವವಾಗುತ್ತದೆ.
* * *
ಒಮ್ಮೆ ಬೆಂಗಳೂರಿನಲ್ಲಿ ಸಾಹಿತಿಯೊಬ್ಬರು ಮೃತಪಟ್ಟರು. ಅವರ ಪತ್ನಿ, ಮಗಳು ಕೂಡ ಸಾಹಿತ್ಯಲೋಕಕ್ಕೇ ಸೇರಿದವರು. ಅವರ ಅಂತಿಮ ದರ್ಶನಕ್ಕೆ ಮುಖ್ಯಮಂತ್ರಿ ಬರುತ್ತಾರೆ ಎಂಬ ಮಾಹಿತಿ ಬಂತು. ಅಗತ್ಯ ಬಂದೋಬಸ್ತ್ ಮಾಡಲಾಯಿತು.

ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿ ಅಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಶವದ ಮೇಲಿಡಲು `ರೀತ್~ ಸಿದ್ಧ ಮಾಡಿಟ್ಟುಕೊಳ್ಳುವಂತೆ ಸೂಚಿಸಿದರು. ಮೃತ ಸಾಹಿತಿಯ ಮನೆ ಇದ್ದದ್ದು ಜೆ.ಪಿ.ನಗರದಲ್ಲಿ. ರೀತ್ ಸಿಗುತ್ತಿದ್ದುದು ಜಾನ್ಸನ್ ಮಾರ್ಕೆಟ್ ಅಥವಾ ರಸೆಲ್ ಮಾರ್ಕೆಟ್‌ನಲ್ಲಿ. ಅದಾಗಲೇ ಮುಖ್ಯಮಂತ್ರಿ ಲಾಲ್‌ಬಾಗ್ ಹತ್ತಿರಕ್ಕೆ ಬಂದಾಗಿತ್ತು.

ಅವರು ಬರುವಷ್ಟರಲ್ಲಿ ಹೊಸ `ರೀತ್~ ತರಿಸುವುದಾದರೂ ಹೇಗೆ? ಎಸಿಪಿ ತಡಬಡಾಯಿಸಿದರು. ಅಲ್ಲಿದ್ದ ಅಧಿಕಾರಿಯೊಬ್ಬರು ಇಂಥ ಕೆಲಸಗಳಿಗೆಂದೇ ಹೆಸರುವಾಸಿಯಾಗಿದ್ದರು.

ಅವರು ಒಂದು `ರೀತ್~ ಕೊಟ್ಟರು. ಮುಖ್ಯಮಂತ್ರಿ ಅದನ್ನೇ ಸಾಹಿತಿಯ ಶವದ ಮೇಲಿಟ್ಟು ನಮಿಸಿ ನಡೆದರು. ಮೊದಲೇ ಶವದ ಮೇಲೆ ಇಟ್ಟಿದ್ದ `ರೀತ್~ ಅದು. ಅದನ್ನೇ ಲಪಟಾಯಿಸಿ ಮುಖ್ಯಮಂತ್ರಿಯವರಿಗೆ ಕೊಡಲಾಯಿತು. ಇದು ಅವಮಾನದ ವಿಷಯ ಎಂದು ಆ ಮನೆಯ ಬಂಧುವೊಬ್ಬರು ದೂರು ಕೊಟ್ಟರು.

ಆ ಪ್ರಕರಣ ಕುರಿತು ಇಲಾಖೆ ಮಟ್ಟದ ತನಿಖೆಯೂ ನಡೆಯಿತು. ಆ `ರೀತ್~ ಕೊಂಡು ತಂದದ್ದೇ ಹೌದು; ಎತ್ತಿಕೊಂಡಿದ್ದಲ್ಲ ಎಂದು ಆ ಅಧಿಕಾರಿ ಸಾಧಿಸಿದರು. ಇಲಾಖೆಯವರೂ ಅವರ ಮಾತನ್ನೇ ನಂಬಿದರು. ತಕ್ಷಣಕ್ಕೆ `ರೀತ್~ ಹೊಂದಿಸುವ ಅನಿವಾರ್ಯತೆಯಿಂದ ಎಂಥ ಮುಜುಗರದ ಪ್ರಸಂಗ ಪೊಲೀಸರಿಗೆ ಎದುರಾಯಿತು, ನೋಡಿ.
* * *
ನಾನು ಚಿಕ್ಕಪೇಟೆ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುವಾಗ, ಹಣಕ್ಕೆ ಬದಲು ಚೆಕ್ ಕೊಡುವ ವ್ಯವಹಾರ ಮಾಡುತ್ತಿದ್ದ. ಮೊದಲು ಕಮಿಷನ್ ತೆಗೆದುಕೊಳ್ಳುತ್ತಿದ್ದ ಅವನು ಆಮೇಲೆ ಜನರಿಗೆ ಮೋಸ ಮಾಡತೊಡಗಿದ. ಹರಿಯಂತ್ ಫೈನಾನ್ಸ್ ಅಂತ ಅವನ ಕಂಪೆನಿ ಹೆಸರು. ಅವನಿಗೆ ರಾಜಕಾರಣಿಗಳು, ಹಿರಿಯ ಅಧಿಕಾರಿಗಳ ಬೆಂಬಲ ಇತ್ತು.

ಸಾಕಷ್ಟು ಹಣ ಶೇಖರಣೆಯಾದ ನಂತರ ಅವನು ಕೊಟ್ಟಿದ್ದ ಚೆಕ್‌ಗಳೆಲಾ ಬೌನ್ಸ್ ಆದವು. ಚೆಕ್ ಬೌನ್ಸ್ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಳ್ಳುವಂತಿಲ್ಲ. `ನೆಗೊಷಿಯಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್~ನಲ್ಲೆ ಕೇಸು ಹಾಕಬೇಕಿತ್ತು.

ಹೈದರಾಬಾದ್‌ನ ಡಿ.ಜಿ ಒಬ್ಬರ ಆಪ್ತರಿಗೆ ಅವನು ಐದು ಲಕ್ಷ ವಂಚಿಸಿದ್ದ. ಅಲ್ಲಿನ ಡಿ.ಜಿ ನಮ್ಮ ಡಿ.ಜಿಯವರಿಗೆ ಪರಿಚಯವಿದ್ದರು. ಇಲ್ಲಿನ ಡಿ.ಜಿ ಹೇಗಾದರೂ ಮಾಡಿ ಅವರಿಗೆ ಕಳೆದುಕೊಂಡ ಹಣ ಕೊಡಿಸುವಂತೆ ನನ್ನನ್ನು ಕೇಳಿಕೊಂಡರು.

ಕಷ್ಟಪಟ್ಟು ನಾನು ಒಂದೆರಡು ವಂಚನೆ ಕೇಸುಗಳನ್ನು ಪತ್ತೆಮಾಡಿ, ಅವನನ್ನು ದಸ್ತಗಿರಿ ಮಾಡಿದೆ. ಜೈಲು ಸೇರಿದ. ಹಣ ಖರ್ಚು ಮಾಡಿ ಅಲ್ಲೂ ಸೌಕರ‌್ಯ ಮಾಡಿಕೊಂಡ. ಆಮೇಲೆ ಜಾಮೀನು ಪಡೆದು ಆಚೆಗೂ ಬಂದ.

ಜಂಟಿ ಕಮಿಷನರ್ ಅಂತೂ `ನೀನು ಬೆಸ್ಟ್ ಇನ್ಸ್‌ಪೆಕ್ಟರ್ ಇದೀಯ. ಹೇಗಾದರೂ ಮಾಡಿ ಅವನಿಂದ ಹಣ ವಸೂಲು ಮಾಡಿಕೊಡು~ ಎನ್ನುತ್ತಿದ್ದರು. ಅವನು ಮಾತ್ರ ತಪ್ಪಿಸಿಕೊಂಡು ತಿರುಗುತ್ತಿದ್ದ.

ನನ್ನ ಒತ್ತಡದಿಂದಾಗಿ ಒಮ್ಮೆ ಇದ್ದಕ್ಕಿದ್ದಂತೆ ಕಚೇರಿಗೆ ಬಂದ. ನನ್ನ ಕೈಗೊಂದು ಪತ್ರ ಕೊಟ್ಟ. ಮೇಜಿನ ಮೇಲೆ ಕಾರಿನ ಕೀ ಹಾಕಿದ. ಹಣಕ್ಕೆ ಬದಲು ಕಾರು ಕೊಡುತ್ತಿದ್ದಾನೆಂದು ನಾನು ಭಾವಿಸಿದೆ.

`ಏನು ಮಾಡೋದು, ನಿಮ್ಮ ಕಾಟ ತಡೆಯೋಕೆ ಆಗೋಲ್ಲ~ ಎಂದ. ಆ ಪತ್ರ ಓದತೊಡಗಿದೆ. `ನಾನು ಈ ಪೊಲೀಸ್ ಅಧಿಕಾರಿ ಕಾಟದಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಬಿ.ಕೆ.ಶಿವರಾಂ ಒತ್ತಡವೇ ಕಾರಣ~ ಎಂದು ಬರೆದಿದ್ದ. ನನಗೆ ಸಿಟ್ಟು ನೆತ್ತಿಗೇರಿತು.

ಮೊದಲು ಆ ಪತ್ರವನ್ನು ಭದ್ರವಾಗಿಟ್ಟುಕೊಂಡೆ. ಅವನು ನಿಜಕ್ಕೂ ವಿಷ ಸೇವಿಸಿದ್ದ. ನಮ್ಮ ಸಬ್ ಇನ್ಸ್‌ಪೆಕ್ಟರ್‌ಗೆ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದೆ. ಜಂಟಿ ಕಮಿಷನರ್‌ಗೆ ಫೋನ್ ಮಾಡಿದೆ.

ಸರ್, ಕಾರಿನ ಕೀ ಕೊಟ್ಟಿದ್ದಾನೆ ಎಂದದ್ದೇ, `ವೆರಿ ಗುಡ್, ವೆರಿ ಗುಡ್. ಪರವಾಗಿಲ್ಲ; ಅದನ್ನೇ ಇಸ್ಕೊಳ್ಳಿ~ ಎಂದರು. ನನ್ನ ಮಾತನ್ನು ಪೂರ್ತಿ ಕೇಳಿ ಎಂದು ಮುಂದುವರಿಸಿ, ಅವನು ವಿಷ ಸೇವಿಸಿರುವ ವಿಷಯ ತಿಳಿಸಿದೆ. ಅದನ್ನು ಕೇಳಿದ್ದೇ ತಡ, ಫೋನ್ ಕಟ್ ಮಾಡಿದರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವನನ್ನು ಬಿಡಲು ಒಪ್ಪದೆ ಅವನ ಸಂಬಂಧಿಕರು ಮಣಿಪಾಲ್ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಅವನು ತೀವ್ರ ನಿಗಾ ಘಟಕದಲ್ಲಿ ಎರಡು ದಿನ ಇದ್ದವನು ಇದ್ದಕ್ಕಿದ್ದಂತೆ ಓಡಿಹೋದ.

ಇಷ್ಟೆಲ್ಲಾ ಒತ್ತಡದ ನಡುವೆ ನಾನು 309 ಐಪಿಸಿ ಪ್ರಕಾರ ಆತ್ಮಹತ್ಯೆ ಯತ್ನದ ಕೇಸು ದಾಖಲಿಸಿದೆ. ಮುಂದೊಂದು ದಿನ ಅವನು ಮತ್ತೆ ಸಿಕ್ಕಿ, ದಸ್ತಗಿರಿಯಾದ. ಅಧಿಕಾರಿಗಳು ಸೂಕ್ಷ್ಮ ಪರಿಸ್ಥಿತಿಯಲ್ಲಿ ಹೇಗೆ ನಮಗೆ ಕೈಕೊಡುತ್ತಾರೆ ಎಂಬುದಕ್ಕೆ ನನ್ನ ಈ ಅನುಭವವೇ ಸಾಕ್ಷಿ.

ಶಿವರಾಂ ಅವರ ಮೊಬೈಲ್ ನಂಬರ್: 94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT