ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಳ್ಳು ಸಂಸ್ಕೃತಿ ಪೋಷಾಕಿನ ಅಭಾರತೀಯತೆ

Last Updated 31 ಜುಲೈ 2017, 19:30 IST
ಅಕ್ಷರ ಗಾತ್ರ

ಅಭಾರತೀಯತೆಯ ಆತ್ಮಕ್ಕೆ ಪೊಳ್ಳು ಸಂಸ್ಕೃತಿಯ ಪೋಷಾಕು ತೊಡಿಸಿದವರು ಇಡೀ ದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನಗಳನ್ನು ಚುರುಕುಗೊಳಿಸಿದಂತೆ ಕಾಣುತ್ತಿದೆ. ಈ ಮಂದಿಗೆ ತರ್ಕಬದ್ಧವಾಗಿ ವಾದ ಮಾಡುವುದೂ ಬೇಕಿಲ್ಲ, ಇವರು ಕೊಡುವ ಉದಾಹರಣೆಗಳೋ ದ್ವೇಷ, ಸಂಕುಚಿತ ಮನೋಭಾವದ ಬೆಂಕಿಗೆ ತುಪ್ಪ ಸುರಿಯುವಂತೆ ಇರುತ್ತವೆಯೇ ಹೊರತು ಭಾರತೀಯತೆ ಬಯಸುವ ಸಾಮರಸ್ಯಕ್ಕೆ ಒತ್ತು ನೀಡುವುದಿಲ್ಲ. ಸಲ್ಲದ ಆತಂಕ ಸೃಷ್ಟಿಸಿ ವರ್ತಮಾನವನ್ನು ಕೊಲ್ಲುವ ಈ ಮಂದಿಗೆ ವಿತಂಡವಾದ, ದನಿ ಏರಿಸಿದ ಮಾತುಗಳೇ ಬಂಡವಾಳ. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ರಂಗಗಳಲ್ಲಿ ವಿವಿಧ ವೇಷಗಳಲ್ಲಿ ವಿವಿಧ ಹೆಸರುಗಳಲ್ಲಿ ಕಾಣಿಸಿಕೊಳ್ಳುವ ಈ ಮಂದಿ ಸಂಸ್ಕೃತಿ ರಕ್ಷಕರು!

ಭಾರತೀಯತೆ ಎನ್ನುವುದು ತಾಳೆಗರಿಯಲ್ಲಿ ಬರೆದು ಏಕಕಾಲದಲ್ಲಿ ರೂಪುಗೊಂಡ ಸಂಸ್ಕೃತಿಯಲ್ಲ. ಅದು ಕೇವಲ ವೈದಿಕ ಸಂಸ್ಕೃತಿಯಲ್ಲ, ಅದು ಕೇವಲ ಆರ್‌ಎಸ್‌ಎಸ್ ಸಂಸ್ಥಾಪಕ ಸರಸಂಘಚಾಲಕ ಕೇಶವ ಬಲೀರಾಮ ಹೆಡಗೇವಾರ್ ಅಥವಾ ಮಾಧವ ಸದಾಶಿವ ಗೊಳ್ವಲಕರ್ ಚಿಂತನೆಗಳಿಂದ ರೂಪುಗೊಂಡ ಸಂಸ್ಕೃತಿಯೂ ಅಲ್ಲ. ಬುದ್ಧನಿಂದ ಹಿಡಿದು ಬಸವಣ್ಣನವರೆಗೆ, ಮಲೆಮಹದೇಶ್ವರನಿಂದ ಮಹಾವೀರನವರೆಗೆ, ಪುರಂದರದಾಸರಿಂದ ಕನಕದಾಸರವರೆಗೆ, ಕಬೀರನಿಂದ ಶಿಶುನಾಳ ಷರೀಫನವರೆಗೆ, ಅಶೋಕ ಚಕ್ರವರ್ತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್‌ವರೆಗೆ, ಜ್ಯೋತಿಬಾ ಫುಲೆಯಿಂದ ಶಾಹು ಮಹಾರಾಜರವರೆಗೆ, ಸ್ವಾಮಿ ಧರ್ಮತೀರ್ಥರಿಂದ ಪೆರಿಯಾರ್ ರಾಮಸ್ವಾಮಿ ನಾಯ್ಕರ್‌ವರೆಗೆ ಸೂಫಿ ಸಂತರಾದ ಬಂದೇ ನವಾಜ್‌ರಿಂದ ಅಲಿಷಾವರೆಗೂ, ಅಷ್ಟೇ ಏಕೇ ಮಹಾತ್ಮಾ ಗಾಂಧಿ, ಅಂಬೇಡ್ಕರ್, ರಾಮಮನೋಹರ ಲೋಹಿಯಾವರೆಗೂ ವಿವಿಧ ಕಾಲಘಟ್ಟಗಳಲ್ಲಿ ಭಾರತೀಯ ಸಂಸ್ಕೃತಿ ರೂಪುಗೊಂಡಿದೆ. ಭಾರತೀಯ ಸಂಸ್ಕೃತಿಯನ್ನು ಇನ್ನಷ್ಟು ಮಾನವೀಯಗೊಳಿಸುವ ನಿಟ್ಟಿನಲ್ಲಿ ಇಂಗ್ಲಿಷರ ಕೊಡುಗೆಯೂ ಸಾಕಷ್ಟಿದೆ. ಒಂದು ನೆಲದ ಇತಿಹಾಸ, ವಿವಿಧ ಜಾತಿ, ಧರ್ಮ, ಜನಾಂಗ, ಬುಡಕಟ್ಟು, ಭಾಷೆ, ಸಂಗೀತ, ಸಾಹಿತ್ಯ, ವಾಸ್ತುಶಿಲ್ಪ ಎಲ್ಲವನ್ನೂ ಒಳಗೊಂಡು ಸಂಸ್ಕೃತಿ ರೂಪುಗೊಂಡಿರುತ್ತದೆ. ಭಾರತೀಯ ಸಂಸ್ಕೃತಿ ಎಂದರೆ ಸಮನ್ವಯ, ಸಾಮರಸ್ಯ, ಸಹನೆ ಒಳಗೊಂಡ ಸಂಸ್ಕೃತಿ. ಹಾಗೆ ನೋಡಿದರೆ ಪರಿಶುದ್ಧ ಸಂಸ್ಕೃತಿ ಎಂಬುದು ಯಾವುದಾದರೂ ಇದೆಯೇ?

ಭಾರತದ ಒಂದೊಂದು ರಾಜ್ಯವೂ ಪ್ರತ್ಯೇಕ ಸಂಸ್ಕೃತಿಯ ಪುಟ್ಟ ರಾಷ್ಟ್ರದಂತಿದೆ. ಭಾಷೆ, ಉಡುಪು, ಆಹಾರ ಪದ್ಧತಿ ಎಲ್ಲವೂ ವಿಭಿನ್ನ. ಎಲ್ಲೋ ಕೆಲವು ಅಕ್ಕಪಕ್ಕದ ರಾಜ್ಯಗಳನ್ನು ಹೊರತುಪಡಿಸಿದರೆ ಬಹುತೇಕ ರಾಜ್ಯಗಳಲ್ಲಿರುವವರ ರೂಪ, ಬಣ್ಣ ಕೂಡಾ ಅಜಗಜಾಂತರ. ಹಾಗಿದ್ದೂ ಸ್ವತಂತ್ರ ಭಾರತದಲ್ಲಿ ಏಕತೆಯನ್ನು ಘೋಷಿಸಿರುವುದು ಒಕ್ಕೂಟ ವ್ಯವಸ್ಥೆಯ ಆಧಾರದ ಮೇಲೆಯೇ ಹೊರತು ಎಲ್ಲ ರಾಜ್ಯಗಳು ಒಂದೇ ರೀತಿ ಇರಬೇಕೆಂದೇನೂ ಅಲ್ಲ. ಏಕತೆ ಎನ್ನುವುದು ಒಂದು ಮನೋಸ್ಥಿತಿ. ಅದನ್ನು ಕಾರ್ಯತಃ ಜಾರಿಗೊಳಿಸುವುದಕ್ಕೆ ಮುಂದಾದರೆ ಒಕ್ಕೂಟ ವ್ಯವಸ್ಥೆ ದುರ್ಬಲಗೊಳ್ಳುತ್ತದೆ. ಏಕತೆ ಎಂದರೆ ಒಗ್ಗಟ್ಟು. ಆದರೆ ಏಕತೆಯ ಮಾತನಾಡುತ್ತಿರುವವರು ದೇಶದ ಒಗ್ಗಟ್ಟನ್ನೇ ಒಡೆಯುವ ನಿರ್ಲಜ್ಜ ಕಾರ್ಯದಲ್ಲಿ ನಿರತರಾಗಿದ್ದಾರೆ.

ಭಾರತೀಯ ಸಂಗೀತ, ಸಾಹಿತ್ಯ, ರಂಗಭೂಮಿ, ಲಲಿತಕಲೆ ವೈವಿಧ್ಯಮಯವಾಗಿ, ಶಕ್ತಿಶಾಲಿಯಾಗಿ ಅರಳಿರುವುದೇ ವಿವಿಧ ಸಂಸ್ಕೃತಿಗಳ ಪ್ರೇರಣೆಯಿಂದ. ಭಾರತೀಯ ಸಂಗೀತ ಕ್ಷೇತ್ರಕ್ಕೆ ಎಂ.ಎಸ್.ಸುಬ್ಬುಲಕ್ಷ್ಮಿಯೂ ಇರಬೇಕು, ಪಂಡಿತ್ ರವಿಶಂಕರ್, ಉಸ್ತಾದ್ ಬಿಸ್ಮಿಲ್ಲಾ ಖಾನ್, ಭೀಮಸೇನ ಜೋಷಿ, ಜಾಕಿರ್ ಹುಸೇನ್, ಯಾವುದೋ ಮೂಲೆಯಲ್ಲಿದ್ದು ಮರೆಯಾದ ಕರಟವಾದಕ ದೇವಿದಾಸ್ ಕೂಡ ಇರಬೇಕು. ಭಾರತೀಯ ಕ್ರಿಕೆಟ್ ತಂಡಕ್ಕೆ ಕಪಿಲ್‌ದೇವ್, ತೆಂಡೂಲ್ಕರ್‌ರಂತೆ ಅಜರುದ್ದೀನ್, ಇರ್ಫಾನ್ ಪಠಾಣ್ ಕೂಡ ಇರಬೇಕು. ಭಾರತೀಯ ಚಲನಚಿತ್ರರಂಗ ಎಂದರೆ ಅದು ಕೇವಲ ಹಿಂದಿ ಚಿತ್ರರಂಗವಲ್ಲ. ಇದರಲ್ಲಿ ಕನ್ನಡ, ತೆಲುಗು, ಮಲಯಾಳ, ತಮಿಳು, ಮರಾಠಿ, ಭೋಜ್‌ಪುರಿ ಭಾಷೆಗಳೂ ಸೇರಿವೆ. ಇದರಲ್ಲಿ ರಾಜ್‌ಕಪೂರ್, ರಾಜ್‌ಕುಮಾರ್, ಎನ್.ಟಿ.ರಾಮರಾವ್, ಎಂ.ಜಿ.ರಾಮಚಂದ್ರನ್, ಪ್ರೇಂ ನಜೀರ್, ಮಾತ್ರವಲ್ಲ, ದಲ್ಖರ್ ಸಲ್ಮಾನ್, ಮಮ್ಮುಟ್ಟಿ, ಪುನೀತ್, ಸುದೀಪ್, ವಿಜಯ್ ಕೂಡ ಇರಬೇಕು. ಎಲ್ಲ ಪ್ರತಿಭೆಗಳು ರೂಪುಗೊಂಡಿರುವುದು ವಿವಿಧ ಭಾಷೆ, ಜಾತಿ, ಧರ್ಮ, ಸಂಸ್ಕೃತಿಗಳ ಪ್ರಭಾವದಿಂದ ಎನ್ನುವುದನ್ನು ಏಕತಾವ್ಯಾಧಿಗಳು ಅರಿಯಬೇಕು. ವೈವಿಧ್ಯದ ನೆಲದಲ್ಲಿ ಏಕತೆಯನ್ನು ಭಾವನಾತ್ಮಕವಾಗಿ ಬಲಗೊಳಿಸುವ ಬದಲು ಒಂದೇ ಧರ್ಮ, ಒಂದೇ ಸಂಸ್ಕೃತಿ ಎನ್ನುವ ಹಟಕ್ಕೆ ಬಿದ್ದ ನಿರ್ಧಾರ ನಿಂತ ನೀರಿನ ಕೊಚ್ಚೆಯನ್ನು ಸೃಷ್ಟಿಸಬಹುದೇ ಹೊರತು ಅದರಲ್ಲಿ ಚಲನೆ ಇರುವುದಿಲ್ಲ. ಇದು ಅರಳುವ, ಬೆಳೆಯುವ ಪ್ರಕ್ರಿಯೆಗೆ ಯಾವುದೇ ರೀತಿಯಲ್ಲಿ ನೆರವಾಗುವುದಿಲ್ಲ. ಹಾಗೇ ಸುಮ್ಮನೆ ವೈವಿಧ್ಯಮಯ ಪ್ರಭಾವಗಳಿಲ್ಲದ ಸಂಗೀತ, ಸಾಹಿತ್ಯ, ವಾಸ್ತುಶಿಲ್ಪಗಳನ್ನು ಕಲ್ಪಿಸಿಕೊಳ್ಳಿ. ಏಕತಾನ, ಏಕತ್ವದಲ್ಲಿ ಹೊಸ ಚಿಗುರುಗಳಿಗೆ ಅವಕಾಶವೇ ಇಲ್ಲದೆ ಕರ್ಕಶ ದನಿ, ವಿರೂಪಗೊಂಡ ಚಿತ್ರಗಳ ಮೂಲಕ ಬರಡಾಗಿರುತ್ತದೆ ಎನ್ನುವುದನ್ನು ನೀವು ಊಹಿಸಬಹುದು.

ವಿಚಿತ್ರ ಎಂದರೆ ಸಂವಿಧಾನದ ವಿಧಿಗಳನ್ನೇ ಧಿಕ್ಕರಿಸಿ ಮುನ್ನಡೆಯುವ ಈ ಗುಂಪು ತಾತ್ವಿಕವಾಗಿ ಒಂದಿಷ್ಟೂ ಸಂಬಂಧವೇ ಇಲ್ಲದಿದ್ದರೂ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಜಯಂತಿ, ಪುಣ್ಯತಿಥಿ, ಚಿತ್ರಗಳನ್ನೂ ಎಗ್ಗಿಲ್ಲದೇ ಬಳಸಿಕೊಳ್ಳುತ್ತಿದೆ. ತೋರಿಕೆಯ ಆಚರಣೆಗಷ್ಟೇ ಮಹತ್ವ ನೀಡುವ ಈ ಮಂದಿ ತಮಗೆ ತದ್ವಿರುದ್ಧವಾದ ಅಂಬೇಡ್ಕರ್ ವಿಚಾರಗಳನ್ನು ಅಂತರ್ಗತಗೊಳಿಸಿಕೊಳ್ಳುವ ಅಥವಾ ಪ್ರಾಮಾಣಿಕವಾಗಿ ಅನುಸರಿಸುವ ನಿಟ್ಟಿನಲ್ಲಿ ಎಳ್ಳಷ್ಟೂ ಪ್ರಯತ್ನ ನಡೆಸಿಲ್ಲ. ದಲಿತರ ಮತಗಳಿಗಾಗಿ ಕಾಂಗ್ರೆಸ್ಸಿಗರನ್ನೇ ಹಿಮ್ಮೆಟ್ಟಿಸಿರುವ ಈ ಗುಂಪು ಕಮ್ಯುನಿಸ್ಟ್ ಸಿದ್ಧಾಂತದ ಅನುಯಾಯಿಯಾಗಿದ್ದ ಭಗತ್ ಸಿಂಗ್‌ನನ್ನೇ ತಮ್ಮ ವೇದಿಕೆಗಳತ್ತ ಹೈಜ್ಯಾಕ್ ಮಾಡಿ ವರ್ಷಗಳೇ ಕಳೆದಿವೆ. ಆದರೆ ಮಹಾತ್ಮ ಗಾಂಧಿ ಚಿತ್ರಕ್ಕೆ ತಮ್ಮ ವೇದಿಕೆಗಳಲ್ಲಿ ಅವಕಾಶ ನೀಡದೇ ಸರ್ದಾರ್ ವಲ್ಲಭಬಾಯ್ ಪಟೇಲ್‌ಗೆ ಮನ್ನಣೆ ನೀಡಿರುವುದು ಚುನಾವಣಾ ಲಾಭ–ನಷ್ಟದ ಲೆಕ್ಕಾಚಾರದಿಂದಲೇ ಹೊರತು ಇನ್ಯಾವುದೇ ಕಾರಣ ಇಲ್ಲ.

ರಾಜಕಾರಣವೂ ಅಷ್ಟೇ. ಸಂಘ ಪರಿವಾರದ ರಾಜಕೀಯ ಮುಖವಾದ ಬಿಜೆಪಿಯ ಕಾಂಗ್ರೆಸ್‌ಮುಕ್ತ ಭಾರತ ಎನ್ನುವ ಪಡಪೋಶಿ ಹೇಳಿಕೆಗಳು ಕೂಡಾ ಪರೋಕ್ಷವಾಗಿ ಶಾಶ್ವತ ಏಕಪಕ್ಷ ಸರ್ಕಾರ ನೆಲೆಗೊಳ್ಳಬೇಕೆಂಬ ಸರ್ವಾಧಿಕಾರಿ, ಅಪ್ರಜಾಸತ್ತಾತ್ಮಕ, ಅನಾರೋಗ್ಯಕರ ರಾಜಕಾರಣದ ನಿಲುವನ್ನು ಪ್ರತಿಧ್ವನಿಸುತ್ತದೆ. ಗುಜರಾತ್, ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ ತನ್ನ ನಿಲುವು ಒಪ್ಪುವವರು ಮಾತ್ರ ಸಕ್ರಿಯ ರಾಜಕಾರಣ ಮಾಡಲು ಸಾಧ್ಯ ಎಂಬ ಎಚ್ಚರಿಕೆಯನ್ನು ಬಿಜೆಪಿ ಕೊಟ್ಟಂತಿದೆ. ವಿಭಿನ್ನ ರೀತಿಯ ರಾಜಕಾರಣ ಮಾಡುತ್ತೇವೆ ಎನ್ನುವವರು ಪಕ್ಷಾಂತರ ತಡೆ ಕಾಯ್ದೆಯನ್ನೇ ಲೇವಡಿ ಮಾಡುವಂತೆ ‘ಆಪರೇಷನ್ ಕಮಲ’ ಎಂಬ ಹೊಸ ಮಾದರಿಯ ಪಕ್ಷಾಂತರ ರಂಗಮಂಚವನ್ನು ಎಲ್ಲ ರಾಜ್ಯಗಳಿಗೆ ವಿಸ್ತರಿಸುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಯ ರಾಜಕಾರಣ ಎಂದರೆ ಇಲ್ಲಿ ದೇವೇಗೌಡ, ಮಾಯಾವತಿ, ಲಾಲು ಪ್ರಸಾದ್, ಮಮತಾ ಬ್ಯಾನರ್ಜಿ, ಸಿದ್ದರಾಮಯ್ಯರೂ ಇರಬೇಕು. ಕಾಂಗ್ರೆಸ್, ಜೆಡಿಎಸ್, ಬಿಎಸ್‌ಪಿ, ನ್ಯಾಷನಲ್ ಕಾನ್ಫರೆನ್ಸ್, ಡಿಎಂಕೆ, ಟಿಎಂಸಿ, ಸಿಪಿಎಂನಂಥ ಪಕ್ಷಗಳೂ ರಾಜಕೀಯವಾಗಿ ಸಕ್ರಿಯವಾಗಿರಬೇಕು. ತನ್ನ ಸ್ಥಾನ ಭದ್ರಪಡಿಸಿಕೊಳ್ಳುವ ಸಲುವಾಗಿ ಸಂಚು ಹೂಡಿ ಹೊಂಚು ಹಾಕಿ ಒಂದೊಂದನ್ನೇ ದುರ್ಬಲಗೊಳಿಸುವ ಪ್ರಯತ್ನ ಖಂಡಿತ ಒಳ್ಳೆಯ ಬೆಳವಣಿಗೆಯಲ್ಲ. ಅದು ಆರೋಗ್ಯಕರ ರಾಜಕಾರಣದ ಲಕ್ಷಣವೂ ಅಲ್ಲ.

ಒಕ್ಕೂಟ ವ್ಯವಸ್ಥೆಯಿಂದ ರೂಪುಗೊಂಡಿರುವ ಭಾರತ ಸರ್ಕಾರ, ಒಕ್ಕೂಟ ಸರ್ಕಾರವೇ ಹೊರತು ಕೇಂದ್ರ ಸರ್ಕಾರವಲ್ಲ. ಇದನ್ನು Union Government ಎನ್ನಬೇಕೇ ಹೊರತು Central Government ಎಂದಲ್ಲ. ದೆಹಲಿಯಲ್ಲೇ ಎಲ್ಲ ಅಧಿಕಾರ ಕೇಂದ್ರೀಕೃತವಾಗಿರುವುದನ್ನು ನೋಡಿದರೆ ನಮ್ಮ ಅರಿವಿಗೂ ಬಾರದಂತೆ ಈ ತಪ್ಪು ಬಳಕೆಗೆ ಯಾವತ್ತೋ ಜೀವ ಬಂದು ಗಟ್ಟಿಮುಟ್ಟಾಗಿ ಬೆಳೆದಿದೆ ಎನ್ನುವುದು ಮನದಟ್ಟಾಗುತ್ತದೆ. ವಿವಿಧ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುತ್ತಿರುವ ಮನಸ್ಸುಗಳು ಕೇವಲ ಒಂದೇ ಪಕ್ಷ ಅಥವಾ ಸಂಘಟನೆಯಲ್ಲಿ ಇಲ್ಲ. ಆದರೆ ಇನ್ನಿತರ ಏಕತೆಯ ಮಂತ್ರ ಬೋಧಿಸುತ್ತಿರುವವರು ಮಾತ್ರ ಸಂಘ ಪರಿವಾರದವರೇ ಆಗಿದ್ದಾರೆ.

ಈ ಮನಸ್ಸುಗಳು ಒಮ್ಮೆ ಭಗವದ್ಗೀತೆಯನ್ನು ರಾಷ್ಟ್ರಗ್ರಂಥವಾಗಿಸಬೇಕು ಎಂದು ಬೊಬ್ಬೆ ಹೊಡೆಯುತ್ತವೆ. ಭಗವದ್ಗೀತೆ ಬಗ್ಗೆ ಟೀಕೆ ವ್ಯಕ್ತವಾದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎನ್ನುತ್ತವೆ, ಶಾಲೆಗಳಲ್ಲಿ ಪಠ್ಯವಾಗಿಸಲು ಮುಂದಾದಾಗ ಪ್ರತಿಭಟಿಸಿದರೆ ಇದೇನೂ ಧರ್ಮಗ್ರಂಥವಲ್ಲ ಎಂದು ವಾದಿಸುತ್ತವೆ. ಒಮ್ಮೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಇನ್ನೊಮ್ಮೆ ಹುಬ್ಬಳ್ಳಿಯ ಈದ್ಗಾ, ಮಗದೊಮ್ಮೆ ಬಾಬಾಬುಡನ್‌ಗಿರಿಯನ್ನು ಸುದ್ದಿಯಲ್ಲಿಡುತ್ತವೆ. ಸಂಘಪರಿವಾರದ ಸಂತ(?)ರೊಬ್ಬರು ಸಂಸ್ಕೃತವನ್ನು ರಾಷ್ಟ್ರಭಾಷೆಯಾಗಿಸಬೇಕು ಎಂದರೆ ಇನ್ನೊಬ್ಬರು ಹಿಂದಿ ನಮ್ಮ ರಾಷ್ಟ್ರಭಾಷೆ ಎನ್ನುತ್ತಾರೆ. ಸಂಘಪರಿವಾರದ ಮುಖ್ಯಸ್ಥ ಮೋಹನ್ ಭಾಗವತ್ ಮೀಸಲಾತಿ ನೀತಿಯ ಮರುಪರಿಶೀಲನೆ ಅಗತ್ಯ ಎಂದರೆಮ ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರದಿಂದ ಮೀಸಲಾತಿ ನೀತಿಗೆ ವಿರೋಧವಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ. ಓರ್ವ ಸನ್ಯಾಸಿ ಹಿಂದೂ ಧರ್ಮವನ್ನು ಉಳಿಸುವುದಕ್ಕೆ ಹಿಂದೂ ಮಹಿಳೆಯರು ಕನಿಷ್ಠ ನಾಲ್ಕು ಮಕ್ಕಳನ್ನು ಹೆರಬೇಕು ಎಂದು ಕರೆ ನೀಡಿದರೆ, ಇನ್ನೋರ್ವ ಸನ್ಯಾಸಿನಿ ಮುಸ್ಲಿಂಮುಕ್ತ ಭಾರತ ನಿರ್ಮಾಣಕ್ಕೆ ಕರೆ ನೀಡುತ್ತಾರೆ. ಗೋಹತ್ಯೆ ನಿಷೇಧ ಸಂಬಂಧ ಅಸಂಖ್ಯಾತ ಆಕ್ಷೇಪಾರ್ಹ ಬೆಂಕಿಯುಗುಳುವ ಹೇಳಿಕೆಗಳು ಹೊರಬಂದಿವೆ. ಗೋಹತ್ಯೆ ಮಾಡುವವರಿಗೆ ಅದೇ ರೀತಿಯ ಶಿಕ್ಷೆ ವಿಧಿಸಬೇಕು ಎಂದು ಒಬ್ಬರು ಹೇಳಿದರೆ, ಗೋಮಾಂಸ ಭಕ್ಷಕರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಇನ್ನೊಬ್ಬರು ಹೇಳುತ್ತಾರೆ. ಗೋರಕ್ಷಣೆ ಹೆಸರಿನಲ್ಲಿ ದಾಳಿ, ಪ್ರಾಣಹರಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಗಳಿಗೆ ಪ್ರಧಾನಿ ಮೋದಿ ಆಗಿಂದಾಗ್ಗೆ ಸೂಚಿಸುತ್ತಾರೆ. ಆನಂತರವೂ ಇಂಥ ಪ್ರಕರಣಗಳು ಮರುಕಳಿಸುತ್ತವೆ.

ಒಂದೇ ಆತ್ಮದ ವಿವಿಧ ದೇಹಗಳಂತೆ ಕಾರ್ಯ ನಿರ್ವಹಿಸುತ್ತಿರುವ ಆರ್.ಎಸ್.ಎಸ್., ವಿಶ್ವ ಹಿಂದೂ ಪರಿಷದ್, ಭಜರಂಗದಳ ಮತ್ತು ಬಿಜೆಪಿ ನಾಯಕರ ಯಾವುದೇ ಹೇಳಿಕೆಗಳು, ನಿರ್ಧಾರಗಳಲ್ಲಿ ಒಂದಾದರೂ ದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಇವೆಯೇ? ಈ ನೆಲದ ಸ್ವಕೀಯರನ್ನೇ ಪರಕೀಯರಂತೆ ಕಂಡು ಭಾವನೆಗಳನ್ನು ಕೆರಳಿಸುತ್ತಾ ಜನರನ್ನು ಸಮೂಹ ಸನ್ನಿಗೆ ಒಳಪಡಿಸಿ ತಮ್ಮ ಆಧಿಪತ್ಯ ಭದ್ರಪಡಿಸಿಕೊಳ್ಳುವುದೇ ಇದರ ಉದ್ದೇಶ ಎಂಬುದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.

ಕೆಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಹತ್ತಿರಾಗುತ್ತಿದ್ದಂತೆ ಈಗ ಇದೇ ಗುಂಪು ಮೆಲ್ಲನೆ ವಂದೇ ಮಾತರಂ ಗೀತೆಯನ್ನು ತಮ್ಮ ಅಸ್ತ್ರವಾಗಿಸಿ ಝಳಪಿಸುವ ಚಿತ್ರಗಳು ಕಾಣುತ್ತಿವೆ. ಮದ್ರಾಸ್ ಹೈಕೋರ್ಟ್ ಆದೇಶವನ್ನೇ ನೆಪವಾಗಿಸಿಕೊಂಡು ಮಹಾರಾಷ್ಟ್ರದ ಶಾಲಾಕಾಲೇಜುಗಳಲ್ಲೂ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಬೇಕೆಂಬ ಕೂಗು ಕೇಳಿ ಬಂದಿದೆ. ಈ ಗೀತೆಯಲ್ಲಿ ಭಾರತಮಾತೆಯನ್ನು ದುರ್ಗೆ, ಲಕ್ಷ್ಮಿ ಯರಂತೆ (1937ರಲ್ಲೇ ಈ ಭಾಗಗಳನ್ನು ತೆಗೆದು ಮೊದಲ ಕೆಲವು ಸಾಲುಗಳನ್ನು ಮಾತ್ರ ಉಳಿಸಿಕೊಳ್ಳಲು ಜವಾಹರಲಾಲ್ ನೆಹರೂ ಅಧ್ಯಕ್ಷರಾಗಿದ್ದ ಎ.ಐ.ಸಿ.ಸಿ. ಸಭೆಯಲ್ಲಿ ನಿರ್ಧರಿಸಲಾಗಿತ್ತು) ಚಿತ್ರಿಸಿರುವುದರಿಂದ ವಿಗ್ರಹಾರಾಧನೆಯನ್ನು ಒಪ್ಪದ ಏಕದೇವೋಪಾಸನೆಯ ಮುಸ್ಲಿಮರ ಧಾರ್ಮಿಕ ನಂಬಿಕೆಗೆ ಅಡ್ಡಿಯಾಗುತ್ತದೆ, ಈ ಗೀತೆ ಇರುವ ಬಂಕಿಮಚಂದ್ರರ ‘ಆನಂದಮಠ’ ಕಾದಂಬರಿ ಹಿಂದೂ ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತದೆ ಎಂಬ ಕಾರಣದಿಂದ ಮತ್ತೆ ವಿರೋಧ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಭಾರತದ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಬಂಕಿಮಚಂದ್ರರ ಈ ಗೀತೆಯನ್ನು ಹಾಡಲು ನಿರಾಕರಿಸುವವರು ದೇಶದ್ರೋಹಿಗಳಲ್ಲ, ವಂದೇ ಮಾತರಂ ಹಾಡುವುದು ಅವರವರ ಆಯ್ಕೆಗೆ ಬಿಟ್ಟ ವಿಷಯ ಎಂದು ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶ ಎಂದರೆ ಯಾವುದೇ ವಿವಾದಾತ್ಮಕ ನಿರ್ಧಾರ ಕೈಗೊಳ್ಳುವ ಮುನ್ನ ಈ ಪರಿವಾರದ ಯಾವುದೋ ಒಂದು ಮೂಲೆಯಿಂದ ಅದರ ಆಶಯ ಪ್ರದಿಪಾದಿಸುವ ದನಿಯೊಂದು ಕೇಳಿಬರುತ್ತದೆ. ಇದಕ್ಕಾಗಿ ಇಡೀ ದೇಶವನ್ನೇ ಪ್ರಯೋಗಶಾಲೆಯಂತೆ ಪರಿಗಣಿಸಲಾಗುತ್ತದೆ. ಹೀಗೆ ವ್ಯಕ್ತವಾಗುವ ಒಲವು, ನಿಲುವುಗಳಿಗೆ ಸಂಬಂಧಿಸಿದ ಪ್ರತಿಕ್ರಿಯೆಗಳನ್ನು ಗಮನಿಸಲಾಗುತ್ತದೆ. ಒಬ್ಬರ ಮೂಲಕ ಹೇಳಿಕೆ ನೀಡಿಸಿದರೆ ಇನ್ನೊಬ್ಬರ ಮೂಲಕ ಸ್ಪಷ್ಟೀಕರಣ ನೀಡುವುದು ಈ ಪರಿವಾರದ ಕಾರ್ಯತಂತ್ರದ ಭಾಗವಾಗಿದೆ. ಆನಂತರವೂ ಕಾರ್ಯಸೂಚಿಯ ಅನುಷ್ಠಾನ ಗುಟ್ಟಾಗಿಯೇ ಮುಂದುವರಿಯುತ್ತದೆ. ದ್ವಂದ್ವ ನಿಲುವು, ವಿವಾದಾತ್ಮಕ ಹೇಳಿಕೆಗಳ ಮೂಲಕ ಅಭಾರತೀಯತೆಯನ್ನು ಪೋಷಿಸುವ ಈ ಮಂದಿ ಭಾರತೀಯತೆಯ ಮಾತನಾಡುತ್ತಿರುವುದು ಮಾತ್ರ ಐತಿಹಾಸಿಕ ವಿಪರ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT