ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಸ್ಕೊ ಪೀಡಿತ ರೈತರೊಂದಿಗೆ ಒಂದು ದಿನ...

Last Updated 23 ಜುಲೈ 2011, 19:30 IST
ಅಕ್ಷರ ಗಾತ್ರ

`ಅರಸು ರಾಕ್ಷಸ, ಮಂತ್ರಿ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ, ಬಡವರ ಬಿನ್ನಪವನಿನ್ನಾರು ಕೇಳುವರು?~ 
- ಗದುಗಿನ ಭಾರತ

ಕೊರಿಯಾ ಮೂಲದ ಬಹುರಾಷ್ಟ್ರೀಯ ಉಕ್ಕು ತಯಾರಿಕಾ ಉದ್ಯಮವಾದ `ಪೋಸ್ಕೊ~ ಕಂಪನಿಗಾಗಿ ಸರ್ಕಾರ ರೈತರ ಭೂಮಿ ವಶಪಡಿಸಿಕೊಳ್ಳುವ ನೋಟಿಸು ಹೊರಡಿಸಿದ ಬಳಿಕ, ಗದಗ ಜಿಲ್ಲೆಯ ಹಳ್ಳಿಗುಡಿ, ಜಂತ್ಲಿ ಮೇವುಂಡಿ ಎಂಬ ಹಳ್ಳಿಗಳು ಅಕ್ಷರಶಃ ರಣರಂಗವಾಗಿಬಿಟ್ಟವು. ಗದುಗಿನ ಶ್ರೀ ತೋಂಟದಾರ್ಯಸ್ವಾಮಿ ಅವರ ನೇತೃತ್ವದಲ್ಲಿ, ಜನಪರ ಸಂಘಟನೆಗಳ ಸಹಯೋಗದಲ್ಲಿ, ಅಲ್ಲಿ ದೊಡ್ಡ ಹೋರಾಟವೊಂದು ಬಿರುಗಾಳಿಯಂತೆ ರೂಪುಗೊಳ್ಳತೊಡಗಿತ್ತು. ನಾನು ಆ ಹಳ್ಳಿಗಳಲ್ಲಿ  ತಿರುಗಾಡಿ ಜನರ ತಳಮಳ ತಿಳಿಯಬಯಸಿದೆ. ಭೂಮಿ ಕೊಡಲಾರದ ಮತ್ತು ಕೊಡಬಯಸಿದ ರೈತರ ನಡುವಿನ ಭಿನ್ನಮತದಿಂದ ಹಳ್ಳಿಗಳಲ್ಲಿ ಬಿಗುವಿನ ಸನ್ನಿವೇಶ ಏರ್ಪಟ್ಟಿತ್ತು. ಅಷ್ಟರಲ್ಲೇ ಹೋರಾಟ ಭುಗಿಲನ್ನು ಕಂಡ ಸರ್ಕಾರ, ಅಂಜಿಕೆಯಿಂದ ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸಿದ ಸುದ್ದಿ ಬಂತು. ಅದರ ಮಾರನೇ ದಿನ ಗದಗಿನಲ್ಲಿ ರೈತರು ಸಭೆ ಸೇರಲಿದ್ದಾರೆಂದು ತಿಳಿದು ಅಲ್ಲಿಗೆ ಧಾವಿಸಿದೆ.

ನಾನು ಹೋದಾಗ, ಟ್ರ್ಯಾಕ್ಟರುಗಳಲ್ಲಿ ಬಂದಿದ್ದ ರೈತರು, ಮಠದ ಆವರಣದಲ್ಲಿ ಅಲ್ಲಲ್ಲಿ ಗುಂಪಾಗಿ ಕುಳಿತು ಚರ್ಚಿಸುತ್ತಿದ್ದರು. ತಮ್ಮ ಬದುಕಿನ ಮೂಲಾಧಾರವಾದ ಭೂಮಿಯನ್ನು ಇದ್ದಕ್ಕಿದ್ದಂತೆ ಯಾರೋ ಕಿತ್ತುಕೊಳ್ಳುತ್ತಾರೆ ಎಂದು ಕಂಗೆಟ್ಟಿದ್ದ ಅವರು, ಈಗ ಕದನ ಗೆದ್ದ ಖುಷಿಯಲ್ಲಿದ್ದರು. ಆದರೂ ಸರ್ಕಾರದಿಂದ ಅಧಿಕೃತ ಪತ್ರ ಬಂದಿಲ್ಲವೆಂಬ ಚಿಂತೆಯ ಗೆರೆಯೊಂದು ಮುಖದಲ್ಲಿ ಉಳಿದುಕೊಂಡಿತ್ತು.

ಈ ಹೋರಾಟದಲ್ಲಿ ಮುಖ್ಯ ಪಾತ್ರ ವಹಿಸಿದವರು ಮಹಿಳೆಯರು; ಭೂಮಿ ಬಿಟ್ಟುಕೊಡುವಂತೆ ಕೇಳಲು ಬಂದಿದ್ದ ಮಂತ್ರಿಗಳನ್ನು ಕಡ್ಡಿ ಮುರಿದಂತೆ ಮಾತಾಡಿ ಹಿಂದಕ್ಕೆ ಕಳಿಸಿದವರು ಅವರು. ಭೂಮಿಯೊಂದಿಗೆ ಅವರಿಗಿರುವ ಸಂಬಂಧದ ಸ್ವರೂಪವನ್ನು ತಿಳಿಯಲೆಂದು ಜಂತ್ಲಿಯಿಂದ ಬಂದಿದ್ದ ರತ್ನವ್ವ, ಶಿವಗಂಗಮ್ಮ ಮುಂತಾದವರನ್ನು ಮಾತಾಡಿಸಿದೆ. ಅವರು `ಬೆಳಿಯೋ ಭೂಮಿ ಮಾರೋದು ಅಂದರ ಹೆತ್ತತಾಯಿ ಮಾರೋದಕ್ಕೆ ಸಮಾರಿ. ದುಡ್ಡು ನಾವು ಗಳಿಸಬೇಕು; ದುಡ್ಡು ನಮ್ಮನ್ನ ಗಳಿಸಬಾರದು~ ಎಂದರು. `ಅಲ್ರವ್ವಾ, ರೈತರಾಗಿ ನೀವೇನು ಸುಖವಾಗಿದೀರಾ~ ಎಂದೆ. `ನೋಡ್ರಿ, ಬರೇ ಉಳ್ಳಾಗಡ್ಡಿಯೊಳಗ 3 ಲಕ್ಷ ತಗೀತೀವಿ.
(ಪಕ್ಕದಲ್ಲಿದ್ದ ಒಬ್ಬಾಕೆಯನ್ನು ತೋರಿಸಿ) ಒಂದು ಎಕ್ರೀಗೆ 50 ಸಾವಿರ ತಗದಾಳ ಈಕಿ, ಕೇಳ್ರಿ ಬೇಕಾದರ~ ಎಂದರು. `ನಿಮಗ ದುಡ್ಡು ಸಿಕ್ಕುತ್ತಲ್ಲ. ಮತ್ತ ಕಂಪನಿಯೊಳಗ ನೌಕರಿ ಕೊಡ್ತಾರಂತೆ~ ಎಂದೆ. `ಏ ಎಲ್ಲೆ ನೌಕರಿ ತಗೀರಿ. ಅರವತ್ತ ವರ್ಷ ತನ ಇಟ್ಕೋತಾರ. ಆಮ್ಯಾಲ ತಗದು ಹೊರಗ ಹಾಕ್ತಾರ. ದುಡದ ಹಾಕೋ ಜಮೀನಿದ್ದರೆ ಸಾಯೋತಂಕ ದುಡೀತೀವಿ. ರೊಕ್ಕ ಉಳಿಯಂಗಿಲ್ಲ. ಭೂಮಿ ಉಳಿತೈತಿ. ಕೊಟ್ಟು ಕುದೀಬಾರದಂತ. ಅಲ್ರೀ, ಈಗ ಭೂಮಿ ಮಾರಿ ಬಂದ ರೊಕ್ಕ ನಾವಾ ತಿಂದರೆ, ಮುಂದ ಬರೋ ಮಕ್ಕಳಿಗೆ ಮೊಮ್ಮಕ್ಕಳಿಗೆ ಏನು ಉಳೀತೈತ್ರಿ? ಗಣಸ ಮಕ್ಕಳಿಗೆ ಗೊತ್ತಾಗದಿಲ್ರಿ. ರೊಕ್ಕಾ ಬಂದರ ಕುಡಿದು ತಿಂದು ಕಳದ ಬಿಡ್ತಾರ~ ಎಂದು ಝಳಪಿಸಿದರು. ಅವರ ಕೊನೆಯ ಮಾತಿಗೆ ಪಕ್ಕದಲ್ಲಿದ್ದ ರೈತರು `ನಮಗ ಚಟಗಳು ಜಾಸ್ತೀರಿ. ಎರಡ ರೂಪಾಯಿ ಇದ್ದರ ಒಂದ ಚಾ ಕುಡೀತೀವಿ. ಹತ್ತ ರೂಪಾಯಿ ಇದ್ದರ, ಕಾರಾ ತಂದಿಡಲೇ ಅಂತೀವಿ. ನೂರು ರೂಪಾಯಿ ಇದ್ರ ನಡೀಲೆ ಗದಗ್ಗಿಗೆ ಅಂತೀವಿ. ರೊಕ್ಕ ಬಕ್ಕಣದಾಗ ಇದ್ದರ ದುನಿಯಾನೇ ಮಾಡೋರು ನಾವು. ಆದರ ಮನೆ ನಡೆಸೋರು ಹೆಣಮಕ್ಕಳು. ಅದಕಾ ಅವರು ಜಮೀನು ಮಾರಗೊಡಂಗಿಲ್ಲ~ ಎಂದು ಸಮ್ಮತಿ ಸೂಚಿಸಿದರು. 

ನಿಜ, ಭೂಮಿ ಕಿತ್ತುಕೊಳ್ಳುವ ಸರ್ಕಾರ ದುಡ್ಡು ಕೊಡುತ್ತದೆ. ಆದರೆ ಬೆಳೆವ ಭೂಮಿ ನಗದಾಗಿ ಕೈಗೆ ಬಂದ ಮೇಲೆ, ಆ ಹಣದ ನಿರ್ವಹಣೆಯನ್ನು ರೈತರು ಹೇಗೆ ಮಾಡುತ್ತಾರೆ? ಇದನ್ನು ಯಾರೂ ಗಮನಿಸುವುದಿಲ್ಲ. ಹಣ ವ್ಯಾಪಾರಿಗೋ ಉದ್ಯಮಿಗೋ ಬಂಡವಾಳ. ಆದರೆ ಭೂಮಿಯಿಲ್ಲದ ರೈತರಿಗೆ ಅದು ಖರ್ಚು ಮಾಡುವ ವಸ್ತು. ಡ್ಯಾಮು, ರಸ್ತೆ, ವಿಮಾನ ನಿಲ್ದಾಣಗಳಿಗಾಗಿ ಜಮೀನು ಕಳೆದುಕೊಂಡು ಹಣ ಗಳಿಸಿದ ರೈತರು, ಪಟ್ಟಣದ ಕೂಲಿಗಳಾಗಿ ಮಾರ್ಪಟ್ಟಿರುವುದಕ್ಕೆ ನಿದರ್ಶನಗಳು, ಪಕ್ಕದ ಕೊಪ್ಪಳದಲ್ಲೇ ಇವೆ.

ನಾನು ಹೊಸಪೇಟೆಯಿಂದ ಗದಗ, ಹುಬ್ಬಳ್ಳಿ, ಧಾರವಾಡಗಳಿಗೆ ಹೋಗುವ ಹಾದಿಯಲ್ಲಿ, ಕಪ್ಪುಕಡಲಿನಂತೆ ಹರಡಿರುವ ಎರೆಹೊಲಗಳನ್ನೂ, ಅದರಲ್ಲಿ ಬೆಳೆದ ಬಿಳಿಜೋಳ, ಹತ್ತಿ, ಮೆಣಸಿನಕಾಯಿ, ಕಡಲೆ, ಗೋಧಿ, ಹೆಸರು, ಉಳ್ಳಾಗಡ್ಡಿ, ಸುರೇಪಾನ, ಮೆಕ್ಕೆಜೋಳ ಕುಸುಬೆ ಬೆಳೆಯನ್ನೂ, ಅದರೊಳಗೆ ಕೆಲಸ ಮಾಡುವ ಮಹಿಳೆಯರನ್ನೂ ನೋಡಿದ್ದೇನೆ. ಮಹಿಳೆಯರಿಲ್ಲದ ಹೊಲಗಳು ಇಲ್ಲವೇ ಇಲ್ಲ. ಗಂಡು-ಹೆಣ್ಣು ಒಟ್ಟಾಗಿ ತೊಡಗುವ ಕಾಯಕಗಳಲ್ಲಿ ಕೃಷಿಯೂ ಒಂದು. ಆದರೂ ಬಿತ್ತುವಾಗ, ಬೆಳೆಯುವಾಗ ಕುಯಿಲಾಗುವಾಗ ಒಕ್ಕುವಾಗ ಹಾಜರಿರುವ ಮಹಿಳೆಯರು, ಬೆಳೆಯನ್ನು ಮಾರುಕಟ್ಟೆಗೆ ಕಳಿಸುವ ಹೊತ್ತಿಗೆ ಹಿನ್ನೆಲೆಗೆ ಸರಿದುಬಿಡುತ್ತಾರೆ. ಅದರಲ್ಲೂ ವಾಣಿಜ್ಯೀಕರಣಗೊಂಡ ಕೃಷಿ ಮಹಿಳೆಯನ್ನು ಹೊರಗಿಡುತ್ತಾ ಹೋಗುತ್ತದೆ. ಈ ಅರ್ಥದಲ್ಲಿ ವ್ಯಾಪಾರ ಮತ್ತು ಕೈಗಾರಿಕೆಗಳು ಗಂಡೆಜಮಾನಿಕೆಯ ಚಟುವಟಿಕೆಗಳು.

ಅಲ್ಲಿ ಮಹಿಳೆಯರಿಗೆ ಸ್ಪೇಸು ಕಡಿಮೆ. ಆದರೆ ಈಗ ಬಿಕರಿ ಆಗುತ್ತಿರುವುದು ಬೆಳೆದ ಧಾನ್ಯವಲ್ಲ. ಸ್ವತಃ ಭೂಮಿ. ಅವಳ ಮಕ್ಕಳಿಗೋ ಗಂಡನಿಗೋ ಫ್ಯಾಕ್ಟರಿಯಲ್ಲಿ ಸೇವಕರ ಕೆಲಸ ಸಿಗಬಹುದು. ಅಂತಿಮವಾಗಿ ಭೂಮಾರಾಟ, ರೈತಾಪಿ ಮಹಿಳೆಯನ್ನು ನಿರುದ್ಯೋಗಿ ಮಾಡುತ್ತದೆ. ಆದ್ದರಿಂದಲೇ ಭೂಮಿಯನ್ನು ಆಕೆ ಅಸ್ತಿತ್ವದ ಪ್ರಶ್ನೆಯನ್ನಾಗಿ ಪರಿಭಾವಿಸಿರುವುದು; ಜಗತ್ತಿನ ಭೂಹೋರಾಟಗಳಲ್ಲಿ ಕೂಡ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಭೂಮಿ ಮಾರಬೇಕು ಎನ್ನುವ ಗುಂಪಿನಲ್ಲಿ ಮಹಿಳೆಯರು ಇರಲಿಲ್ಲ ಎಂಬುದು ಗಮನಾರ್ಹ.

ಆದರೂ ಭೂಮಿ ಮಾರಲು ಕೆಲವು ರೈತರು ಯಾಕೆ ಮುಂದೆ ಬಂದಿದ್ದಾರೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಕರ್ನಾಟಕದಲ್ಲಿ ಅನೇಕ  ರೈತರು ಕೃಷಿಯಿಂದ ಹೈರಾಣಾಗಿದ್ದಾರೆ, ನಿಜ. ಆದರೆ ಇಲ್ಲಿ ರೈತರು ಜೀವಮಾನದಲ್ಲಿ ಕೇಳರಿಯದ ಹಣದ ಆಸೆ ತೋರಿಸಿ, ಕಂಪನಿಯ ಲಾಬಿಕೋರರು ಅವರ ಮನಸ್ಸನ್ನು ಕೆಡಿಸಿದ್ದಾರೆ ಅನಿಸಿತು. `ಅಲ್ರವ್ವಾ, ಕೆಲವರು ಕಂಪನಿಗೆ ಜಮೀನು ಮಾರ‌್ತೀವಿ ಅಂತಿದಾರಲ್ಲ~ ಎಂದು ಮಹಿಳೆಯರಿಗೆ ಕೇಳಿದೆ. `ಭೂಮ್ಯಾಗ ದುಡೀಲಾರದೋರು ಮಾಡೊ ಕೆಲಸ ಇದಾರಿ. ಅವರಿಗೆ ಆಳ ಹಚ್ಚಿ ಮಾಡಿಸೊ ಕುವ್ವತ ಇಲ್ಲ. ನಾವು ದುಡಿಯೋರು. ನಮಗ ದುಡಿಯೊ ಕುವ್ವತೈತಿ. ನಾವ್ಯಾಕ ಕೊಡಬೇಕ್ರಿ? ಆದರ ಅವರು ಭೂಮಿ ಕೊಟ್ರೆ ಕೊಡದೋರ ನಮ್ಮ ಸತ್ಯಾನಾಸಾನೂ ಆಗ್ತಾತ್ರಿ. ಫ್ಯಾಕ್ಟರಿಗೆ ಒಂದು ಕಿಲೋಮೀಟರ್ ದೂರ ಬೆಳಿಯಂಗಿಲ್ಲಂತಲ್ಲ. ಒಟ್ಟ ಕೊಡಾ ಹಾಲಿಗೆ ಹಳ್ಳ ಉಪ್ಪು ಒಗ್ದಂಗ ಆಗೇತರಿ~ ಎಂದು ವಿಷಾದಿಸಿದರು.

`ರೈತಾಪಿ ಕೆಲಸ ಕಷ್ಟ ಅಂತೀರಿ. ಆದರೂ ಭೂಮಿ ಮಾರಲ್ಲ ಅಂತೀರಲ್ಲ~ ಎಂದು ಹಳ್ಳಿಗುಡಿಯ ರೈತರಿಗೆ ಕೆಣಕಿದೆ. ಅದಕ್ಕವರು `ತೊತೊತೊತೊ, ಕಷ್ಟ ಅನ್ನೋದು ರೈತರಿಗೆ ಇದ್ದೇ ಐತ್ರೀ. ನೋಡ್ರೀ, ನಮ್ಮದು ಒಣಬೇಸಾಯ. ಆದರ ಫಲವತ್ತಾದ ಎರಿಭೂಮಿ. ವರ್ಷಕ್ಕೆ ನಾಕೈದು ಮಳಿ ಆದರ, ಎರಡು ಪೀಕು ಹೌದನ್ನಂಗ ತಗೋತೀವಿ. ಎಷ್ಟು ರೊಕ್ಕ ಅದಾವ ಅಂತ ನಿಮ್ಮಂತಹ ನೌಕರಿದೋರಿಗೆ ಕೇಳ್ತಾರ‌್ರಿ.

ನಮಗ ಎಷ್ಟು ಭೂಮಿ ಐತಿ ಅಂತ ಕೇಳ್ತಾರ. ಭೂಮಿ ಇಲ್ಲದಿದ್ದರ ಕನ್ಯಾನ ಕೊಡಂಗ್ರಿಲ್ರೀ. ಮನ್ಯಾಗ ನೆಟ್ಟಗ ಕಮತ ಮಾಡಂಗಿಲ್ಲ, ಪಾಂಡುರಪಟ್ಟಿ ನನ್ನಮಗ, ಆಳಹಚ್ಚಿ ಮಾಡಿಸಿಕೋತಾನ ಅಂತ ಮರ್ಯಾದಿ ಕೊಡಂಗಿಲ್ರಿ? ಬದುಕ್ ಮಾಡಲಾರದೋರು ಭೂಮಿ ಕೊಡ್ತಾರ. ನಮ್ಮ ಭೂಮ್ಯಾಗ ನಾವು ಸ್ವತಂತ್ರ ಇರ‌್ತೀವಿ. ನಾಳೆ ನಾವು ಕಂಪನಿ ಗೇಟ್ ಕಾಯಬೇಕಾ? ಮನ್ಯಾಗ ನಾಕ ಮಂದಿ ಇದ್ದರ ಒಬ್ಬರಿಗೆ ನೌಕರಿ ಕೊಡ್ತಾನ. ಇನ್ನಾ ಮೂರು ಮಂದೀ ಏನು ಮಾಡಬೇಕು? ಜಮೀನಿದ್ರ ಬೇಕಾದಂಗ ಬದುಕ್ತೀವಿ. ಪ್ರಾಣ ಹೋಗವಲ್ಲದ್ಯಾಕ, ಹೋರಾಟಕ್ಕ ಸಿದ್ಧ ಅದೀವಿ~  ಎಂದು ನುಡಿದರು.

ಭೂಮಿ ಮಾರಬೇಕು - ಮಾರಬಾರದು ಎಂಬ ಪ್ರಶ್ನೆ, ಹಳ್ಳಿಯನ್ನು ಒಡೆದಿದೆ. ಒಂದೇ ಮನೆಯಲ್ಲಿ ಎರಡು ಬಣಗಳನ್ನು ಹುಟ್ಟುಹಾಕಿದೆ. ಎಲ್ಲ ಕಡೆ ಒಡೆದ ಮನಸ್ಸುಗಳು. ಈ ಸನ್ನಿವೇಶದಲ್ಲಿ ಭೂಮಿಯೇ ಇಲ್ಲದವರ ನಿಲುವು ಯಾವುದಿದ್ದೀತು ಎಂಬ ಪ್ರಶ್ನೆ ನನ್ನಲ್ಲಿ ಹಾಗೆಯೇ ಉಳಿಯಿತು. ರೈತಸಂಘದವರು ಕೃಷಿ ಭೂಮಿ ಕಬಳಿಕೆಗೆ ವಿರುದ್ಧ ಇದ್ದಾರೆ. ಆದರೆ ಸರಿಯಾದ ಬೆಲೆಸಿಕ್ಕರೆ ಕೊಡಬಹುದು ಎಂಬ ಧೋರಣೆಯೂ ಅವರಲ್ಲಿ ಇದ್ದಂತಿದೆ.

ಇಡೀ ಸಮಸ್ಯೆಯ ಬೇರು ಇರುವುದು ಕಳೆದ 20 ವರ್ಷಗಳಲ್ಲಿ ಕೃಷಿಗೆ ಒದಗಿ ಬಂದಿರುವ ಬಿಕ್ಕಟ್ಟಿನಲ್ಲಿ; ಈ ಬಿಕ್ಕಟ್ಟಿಗೆ ಕಾರಣ, ಮುಕ್ತ ಮಾರುಕಟ್ಟೆ ಆರ್ಥಿಕ ವ್ಯವಸ್ಥೆಗೆ ಹೊಂದಿಕೊಳ್ಳುತ್ತಿರುವ ಸರ್ಕಾರಗಳು ಕಂಪನಿಗಳಿಗೆ ಬೇಕಾದ ನೀತಿಯನ್ನು ಅನುಸರಿಸುತ್ತಿರುವುದು. ಕೃಷಿ ಸಂಕಷ್ಟದಲ್ಲಿದ್ದರೆ, ಹೊಣೆಗಾರ ಸರ್ಕಾರಗಳು ಅದರ ಬೆನ್ನಿಗೆ ನಿಂತು ಬಿಡಿಸಬೇಕು. ಆದರೆ ಅವು ಕೃಷಿಯ ಸಂಕಷ್ಟವನ್ನೇ ನೆಪ ಮಾಡಿಕೊಂಡು ಭೂಮಿಯನ್ನು ಉದ್ಯಮಗಳಿಗೆ ಕಿತ್ತುಕೊಡುತ್ತಿವೆ. ಅದರಲ್ಲೂ ಗಣಿಗಾರಿಕೆ, ಕಬ್ಬಿಣ ಮತ್ತು ಉಕ್ಕು ಉದ್ಯಮಗಳು ಬೇಸಾಯದ ಸಮಾಧಿಯ ಮೇಲೇ ಸ್ಥಾಪನೆ ಆಗುವಂತಹವು. ಆದ್ದರಿಂದಲೇ `ನಷ್ಟವಾಯಿತು~ ಎಂದು ಯಾವ ಉದ್ಯಮಿಗಳೂ ಜೀವ ಕಳೆದುಕೊಂಡಿಲ್ಲ. ರೈತರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇದ್ದಾರೆ.

ಎಲ್ಲೋ ದೂರ ದೇಶದಲ್ಲಿರುವ ಕಂಪನಿಯೊಂದು ನಮ್ಮ ಪಕ್ಕದ ಹಳ್ಳಿಗಳಲ್ಲಿ ತಲ್ಲಣ ಎಬ್ಬಿಸಿರುವ ಪರಿ ಸೋಜಿಗ ಹುಟ್ಟಿಸುತ್ತದೆ. ಬ್ರಿಟೀಷರು ಭಾರತವನ್ನು ಆಕ್ರಮಿಸಿಕೊಳ್ಳುವಾಗ, ಸೈನ್ಯಸಮೇತ ಸ್ವತಃ ಎದುರು ನಿಂತಿದ್ದರು. ಆದರೆ ಇಲ್ಲಿ ವಿದೇಶಿ ಕಂಪನಿಯ ಮಾಲಕರು ನಿರಾಕಾರ. ಅದೃಶ್ಯ. ಆದರೆ ಅವರ ಇಶಾರೆಯಂತೆ ಇಡೀ ಸರ್ಕಾರಿ ವ್ಯವಸ್ಥೆ ಟೊಂಕಕಟ್ಟಿ ಕೆಲಸ ಮಾಡುತ್ತಿದೆ. ಇದೆಂತಹ ಮಾಯಾವಿ ಯುದ್ಧ? ಭ್ರಷ್ಟ ಸರ್ಕಾರಗಳಿಗೆ ನೈತಿಕ ಬೆಂಬಲ ನೀಡುವ ಧಾರ್ಮಿಕ ನಾಯಕರೂ; ಕಾನೂನನ್ನು ಮುರಿದು ಗಣಿಗಾರಿಕೆ ಮಾಡಿ ದುಡ್ಡನ್ನು ಗುಡ್ಡೆ ಹಾಕಿಕೊಂಡಿರುವ ರಾಜಕಾರಣಿಗಳೂ; ಜನರಿಂದ ಆಯ್ಕೆಗೊಂಡ ಸರ್ಕಾರಗಳನ್ನು ತನ್ನ ಏಜೆಂಟರನ್ನಾಗಿ ಬದಲಾಯಿಸಿರುವ ಬಹುರಾಷ್ಟ್ರೀಯ ಕಂಪನಿಗಳೂ, ದುರ್ಬಲವಾಗಿರುವ ಚಳವಳಿಗಳು- ಎಲ್ಲ ಸೇರಿ ಇದ್ದ ಒಂದಿಷ್ಟು ಪ್ರಜಾಪ್ರಭುತ್ವದ ಅರ್ಥವನ್ನೇ ಕಳೆದಂತಿದೆ.  

`ಆ ಫ್ರಾಕ್ಟರಿ ಹಾಕಾಂವ್ಞ ಏನು ಕೆಬ್ಬಣಾ ತಿಂತಾನೊ ರೊಟ್ಟಿ ತಿಂತಾನೊ ಕೇಳಬೇಕರಿ. ಅವನಿಗೆ ಹೊಲಾಮನಿ ಇದ್ದಿದ್ದರ ಈ ಕೆಲಸ ಮಾಡ್ತಿದ್ದಿಲ್ಲರಿ~ ಎಂದು ಕೆಲವು ಮಹಿಳೆಯರು ರೋಷದಿಂದ ಹೇಳುತ್ತಿದ್ದರು. ಆದರೆ ರೈತರಿಗೆ ಸಂಕಟ ತಂದಿಟ್ಟಿರುವ ಭೂಸ್ವಾಧೀನ ಕಾಯಿದೆಯನ್ನು ತಂದವರೂ ಹಾಗೂ ಅದನ್ನು ಜಾರಿ ಮಾಡುತ್ತಿರುವವರೂ, ರೈತರ ಕುಟುಂಬದಿಂದ ಬಂದವರೇ ಎಂಬುದು ಬಹುಶಃ ಅವರಿಗೆ ಗೊತ್ತಿತ್ತೋ ಇಲ್ಲವೊ? ರೈತಮೂಲದಿಂದ ಬಂದರೂ ಯಾಕೆ ರಾಜಕಾರಣಿಗಳು ಉದ್ಯಮಿಗಳ ಸಖರಾಗುತ್ತಾರೆ? ಓಟು ಕೊಟ್ಟ ತಮ್ಮನ್ನು ಅಧಿಕಾರದಲ್ಲಿ ಕೂರಿಸಿದ ಜನರನ್ನು ಕೈಬಿಟ್ಟು, ಪರದೇಶದ ಕಂಪನಿಯೊಂದಕ್ಕೆ ಯಾಕಷ್ಟು ನಿಷ್ಠೆ ತೋರುತ್ತಾರೆ? ನೆರೆಯಲ್ಲಿ ಬಿದ್ದ ಮನೆಗಳನ್ನು ಕಟ್ಟಿಸಿಕೊಡಲಾಗದ, ಪಟ್ಟಣದ ಮಧ್ಯಮವರ್ಗದ ಜನರಿಗೆ ಮನೆ ಕಟ್ಟಲು ನಿವೇಶನ ದೊರಕಿಸಲಾಗದ ಪ್ರಭುತ್ವಗಳು, ಕಂಪನಿಗಳಿಗೆ ಸಾವಿರಾರು ಎಕರೆ ಭೂಮಿ ಒದಗಿಸಲು ಯಾಕಿಷ್ಟು ಅವಸರ ಮಾಡುತ್ತಿವೆ? ಇದೆಲ್ಲಕ್ಕೂ ಉತ್ತರ ಸರಳವಾಗಿದೆ: ಉದ್ಯಮಗಳಿಗೂ ರಾಜಕಾರಣಕ್ಕೂ ಏರ್ಪಟ್ಟಿರುವ ಅಪವಿತ್ರ ಮೈತ್ರಿ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ರಾಜಕಾರಣಿಗಳೆಲ್ಲ ಈಗ ಉದ್ಯಮಿಗಳಾಗಿ ರೂಪಾಂತರ ಪಡೆಯುತ್ತಿದ್ದಾರೆ.

ಬಳ್ಳಾರಿಯಿಂದ ಕೊಪ್ಪಳದ ತನಕ, 100 ಕಿ.ಮೀ ಫಾಸಲೆಯಲ್ಲಿ ಕಳೆದ 10 ವರ್ಷಗಳಲ್ಲಿ ಹತ್ತಾರು ಭಾರೀ ಉದ್ಯಮಗಳು ಬಂದು ನೆಲೆಸಿವೆ. ಇದೀಗ ಕರ್ನಾಟಕ ಬಹುದೊಡ್ಡ ಬೃಹತ್ ಉದ್ಯಮಗಳ ಕಾರಿಡಾರಾಗಿದೆ. ಇದಕ್ಕೆ ತಗುಲಿಕೊಂಡು ಹಳ್ಳಿಗುಡಿಯಿದೆ. ಇದಕ್ಕೆಲ್ಲ ಕಾರಣ, ಈ ಭಾಗದಲ್ಲಿರುವ ಭೂಮಿ, ಹೊಳೆನೀರು, ಅಗ್ಗವಾಗಿ ಸಿಗುವ ಮಾನವಶ್ರಮ, ಖನಿಜ ಸಂಪತ್ತು ಮತ್ತು ಬಂದರುಗಳನ್ನು ಲಗತ್ತಿಸುವ ರೈಲ್ವೆ.

ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರಮುಖ ಕದನವೆಂದರೆ, ಗಣಿಗಾರಿಕೆ, ಎಸ್‌ಇಜೆಡ್ ಹಾಗೂ ವಿಮಾನ ನಿಲ್ದಾಣಗಳಿಗಾಗಿ ರೈತಾಪಿ ಭೂಮಿಯನ್ನು ಕಬಜಾ ಮಾಡುವುದು ಮತ್ತು ಅದಕ್ಕೆ ರೈತರು ಪ್ರತಿರೋಧ ಮಾಡುವುದು. ಹಾಸನ, ಗೂಗಿ, ಚೆನ್ನಗಿರಿ ಪ್ರಕರಣಗಳನ್ನು ನೋಡುವಾಗ, ನಮ್ಮ ಭೂಮಿಯೊಳಗೆ ಎಂತೆಂತಹ ಲೋಹಗಳಿವೆ ಎಂದು ಈಗಷ್ಟೇ ಗೊತ್ತಾಗುತ್ತಿದೆ. ಪ್ರಶ್ನೆಯೆಂದರೆ- ತಮ್ಮ ನೀರು, ಗಾಳಿ, ಭೂಮಿ ಕಳೆದುಕೊಂಡಿರುವ ಜನರ ಜೀವನಮಟ್ಟ ಇದರಿಂದ ಏನಾದರೂ ಸುಧಾರಿಸಿದೆಯೇ? ಇಲ್ಲವಾದರೆ ಯಾಕೆ ಬೇಕು ಈ ಉದ್ಯಮ? ಕೊನೆಗೂ ಇದು ಯಾರ ಅಭಿವೃದ್ಧಿ? ಇದು ಹಳ್ಳಿಗುಡಿ ಮತ್ತು ಪೋಸ್ಕೊ ವಿಷಯದಲ್ಲಿ ಮಾತ್ರವಲ್ಲ, `ಅಭಿವೃದ್ಧಿ~ಯ ಹೆಸರಲ್ಲಿ ಸರ್ಕಾರಗಳು ಮಾಡುತ್ತಿರುವ ಸಮಸ್ತ ಕೆಲಸಗಳಿಗೂ ಕೇಳಬೇಕಾದ ಪ್ರಶ್ನೆ.

ಕರ್ನಾಟಕದ ಹೆಚ್ಚಿನ ಧಾರ್ಮಿಕ ಗುರುಗಳು, ಅಧಿಕಾರಸ್ಥರಿಂದ ಧಾರಾಳವಾಗಿ ಧನದಾನ ಸ್ವೀಕರಿಸಿ, ಅವರ ಭ್ರಷ್ಟತೆಗೆ ಮೌನವಹಿಸುತ್ತಲೋ, ಸಾಧ್ಯವಾದರೆ ಸಮರ್ಥಿಸುತ್ತಲೋ, ಶಾಲೆಗಳಲ್ಲಿ `ಕರ್ಮಣ್ಯೇ ವಾ ಅಧಿಕಾರಸ್ಥೆ ಮಾಫಲೇಶು ಕದಾಚನ~ ಬೋಧಿಸುತ್ತಲೋ ಇದ್ದಾರೆ. ಕನ್ನಡವೆಂದರೆ ಮೈಮೇಲೆ ಬಂದವರಂತೆ ಬಡಬಡಿಸುವ ಪಂಡಿತರಿಗೂ, ರೈತರ ಪ್ರಶ್ನೆ ಕರ್ನಾಟಕದ ಪ್ರಶ್ನೆಯಾಗಿ ಕಾಣುತ್ತಿಲ್ಲ.

ಇಂತಹ ವಿಷಮ ಗಳಿಗೆಯಲ್ಲಿ ತೋಂಟದಾರ್ಯರಂತಹ ಕೆಲವಾದರೂ ಸ್ವಾಮಿಗಳು, ಜನಪರ ಸಂಘಟನೆಗಳ ಜತೆಗೂಡಿ, ಬಡವರ ಬಿನ್ನಪವನ್ನು ಕೇಳಲು ಬೀದಿಗಿಳಿದ್ದಿದ್ದಾರೆ. ಈ ಪ್ರಸಂಗವು ಕೆಲವು ಧಾರ್ಮಿಕ ನಾಯಕರಲ್ಲಿ ಕಾಣಿಸಿರುವ ಚಳವಳಿತನವನ್ನು ಸೂಚಿಸುತ್ತಿದೆ, ಖರೆ. ಆದರೆ ಇದು ನಮ್ಮ ರೈತಾಪಿ ಚಳವಳಿಗಳು ತಲುಪಿರುವ ಅವಸ್ಥೆಯ ಮೇಲೆ ಕಟುವಾದ ಟಿಪ್ಪಣಿಯನ್ನೂ ಬರೆಯುತ್ತಿದೆ.   
ನಾನು ಗದಗದಿಂದ ಕೊಪ್ಪಳಕ್ಕೆ ಬರುವಾಗ ಕಳೆದ 20 ವರ್ಷಗಳಿಂದ ಎರೆಹೊಲಗಳಲ್ಲಿ ಮೇಯುವ ಚಿಗರೆ ಹಿಂಡನ್ನು ಗಮನಿಸಿದ್ದೇನೆ. ಅದರ ನೆನಪಿನಲ್ಲಿ ಒಬ್ಬ ರೈತನಲ್ಲಿ ಕೇಳಿದೆ. `ಅಣ್ಣಾ, ಚಿಗರೆ ಹಿಂಡು ಬೆಳೀ ತಿಂತಾವಲ್ಲ?~. ಅದಕ್ಕೆ ಆತ- `ತೋತೋತೋ. ಆಟೆ ಹೋಗೋದರೀ. ರೈತ ಅಷ್ಟು ಬೆಳಿದಿದ್ದು ಸಿಗಬೇಕು ಅಂದ್ರ ಆಗಲ್ಲಾರಿ. ಒಂದು ಕೂರಿಗಿಗಿ ಮೂರು ತಾಳಿರ‌್ತಾವ? ಅದ್ರಾಗ ಒಂದು ತಾಳಿಂದು ಆಳಿಗೆ ಪಾಳಿಗೆ ಬೀಜಕ್ಕೆ ಗೊಬ್ಬರಕ್ಕೆ ಹೋಗುತ್ತೆ. ಇನ್ನೊಂದು ತಾಳಿಂದು ಹಕ್ಕಿಪಕ್ಷಿಗ, ದನಕ್ಕ ಚಿಗರಿಗ ಇರುವಿಗ ದಾನಕ್ಕ ಧರ್ಮಕ್ಕ ಹೋಗುತ್ತೆ. ಇನ್ನೊಂದು ತಾಳಿಂದೇ ಒಕ್ಕಲಿಗರಿಗೆ ಉಳಿಯೋದರಿ~ ಎಂದು ತತ್ವವನ್ನು ಉಸುರಿದ. ಭೂಮಿ ಕಳೆದುಕೊಳ್ಳಲಿದ್ದ ಈ  ರೈತರು, ತಮ್ಮ ಕಷ್ಟಗಳ ಒಳಗೂ ಎಷ್ಟೊಂದು ಉದಾತ್ತವಾದ ಸಹಜೀವನದ ಪರಿಸರ ಮೌಲ್ಯವನ್ನು ಬದುಕುತ್ತಿದ್ದಾರೆ! ಆದರೆ ಇವರು ಎದುರು ಹಾಕಿಕೊಂಡಿರುವ ಕಂಪನಿ ಮತ್ತು ಅಧಿಕಾರಸ್ಥರು, ಸಮಸ್ತ ಪ್ರಜೆಗಳಿಗೂ ಸೇರಿದ ನೀರು ಗಾಳಿ ನೆಲಗಳನ್ನು ನಿರ್ದಯವಾಗಿ ಕಬಜಾ ಮಾಡುವವರು. ಪರಿಸರವನ್ನು ಹೆತ್ತತಾಯಿ, ದಾನ, ತ್ಯಾಗ, ಸಹನೆಗಳ ಪರಿಭಾಷೆಯಲ್ಲಿ ನೋಡುವ ರೈತರು; ಅವರಿಗಿದಿರಾಗಿ ಎಲ್ಲವನ್ನೂ ಲಾಭನಷ್ಟಗಳ ವ್ಯಾಪಾರಿ ಕಣ್ಣಲ್ಲಿ ನೋಡುವ ಬಹುರಾಷ್ಟ್ರೀಯ ಕಂಪನಿಗಳು. ಇದು ಅಸಮಾನರ ನಡುವಿನ ಕದನವೆಂದು ಅನಿಸಿತು.
ಆದರೆ ಚರಿತ್ರೆಯಲ್ಲಿ ತಮ್ಮ ನ್ಯಾಯಬದ್ಧ ಹಕ್ಕಿಗಾಗಿ ಹೋರಾಡುವ ದುರ್ಬಲರೂ ಒಮ್ಮಮ್ಮೆ ಕದನ ಗೆಲ್ಲುತ್ತಾರೆ. ಸದ್ಯಕ್ಕೆ ಗದಗಿನ ರೈತರು ಗೆದ್ದಿದ್ದಾರೆ. ಇದನ್ನು ಕೊನೆಯ ಕದನವೆಂದು ತಿಳಿಯುವಂತಿಲ್ಲ. ಜನರನ್ನು ರಕ್ಷಿಸಬೇಕಾದವರೇ ಹುಲಿ ಹದ್ದುಗಳಾದರೆ, ಜನರಾದರೂ ಏನು ಮಾಡಬೇಕು- ಕದನವನಲ್ಲದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT