ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಂಟು ಧರಿಸಿದ ಪುಳಕ

Last Updated 14 ಏಪ್ರಿಲ್ 2013, 7:28 IST
ಅಕ್ಷರ ಗಾತ್ರ

ಕಸಪೊರಕೆಯ ಕಡ್ಡಿಗಳನ್ನು ಎರಡು ಸಣ್ಣ ತುಂಡುಗಳನ್ನಾಗಿ ಮಾಡಿ, ಅದನ್ನು ಎಡಗೈಯ ಅಂಗೈಯ ಮೇಲಿಟ್ಟು, ಬಲಗೈಯಲ್ಲಿ ಒಂದನ್ನು ಎತ್ತಿ ಕಿವಿಯವರೆಗೆ ತಂದು ಅದನ್ನು ಯಥಾಸ್ಥಾನದಲ್ಲಿರಿಸಿ, ಪುನಃ ಇನ್ನೊಂದು ಕಡ್ಡಿಯನ್ನು ಎತ್ತಿ ಹಾಗೆಯೇ ಮಾಡುತ್ತ ಹೋಗುವುದು. ಅಂಗಿಯ ಗುಬ್ಬಿ, ರವಕೆಯ ಹುಕ್ಸ್ ಹಾಕಲು, ಉಡುಪುಗಳ ಅಂಚು ಹೊಲಿಯುವುದನ್ನು ಕಲಿಯುವ ವಿಧಾನ ಇದು. ಅಲಂಕಾರ್ ಟೈಲರ್ಸ್‌ನ ವಿಠಲಣ್ಣನ ಅಂಗಡಿಗೆ ಸೇರಿದ ಒಂದೆರಡು ತಿಂಗಳು ಇದನ್ನೇ ಮಾಡಿದ್ದು. ನಿಧಾನವಾಗಿ ಹೊಲಿಗೆ ಮಿಷನ್ ತುಳಿಯುವುದಕ್ಕೂ ಕಲಿತೆ. ನನಗಿದ್ದ ಹೊಲಿಗೆಯ ಕೌಶಲ ಮುಂದೆ ಯಕ್ಷಗಾನದ ಉಡುಪು ಸಿದ್ಧಗೊಳಿಸುವಾಗ ಪ್ರಯೋಜನಕ್ಕೆ ಬಂತೆಂಬುದು ಬೇರೆ ಮಾತು.

ಆಗ, ಹತ್ತು- ಹನ್ನೆರಡರ ಹರೆಯ. ಟೈಲರಂಗಡಿಯಲ್ಲಿ ಕೆಲಸ ಮಾಡಿ ಸಂಜೆ ಮನೆಗೆ ಬಂದಾಗ ಸನಿಹದಲ್ಲೆಲ್ಲೋ ಚೆಂಡೆಯ ಧ್ವನಿ ಕೇಳಿಸುತ್ತಿತ್ತು. ಚೆಂಡೆ ಕೇಳಿಸಿದರೆ ಅಜ್ಜಿ ತೆಂಗಿನ ಮಡಲಿನ ಸೂಟೆ (ದೊಂದಿ) ಮಾಡಿಕೊಂಡು ಆಟಕ್ಕೆ ಹೋಗಲು ಸಿದ್ಧಳಾಗುತ್ತಿದ್ದಾಳೆಂದೇ ಅರ್ಥ. ದಾರಿಯ ಧೈರ್ಯಕ್ಕೆ ನಾನು ಅಜ್ಜಿಯ ಜೊತೆ ಸೇರುತ್ತಿದ್ದೆ. ರಂಗಸ್ಥಳದ ಮುಂದೆ ಇಷ್ಟಗಲ ಜಾಗವನ್ನು ಗೊತ್ತುಮಾಡಿಕೊಂಡು, ಮಡಲು ಹಾಸಿ ಅದರ ಮೇಲೆ ಕುಳಿತುಕೊಂಡಾಗ ಇನ್ನೇನು ಪೂರ್ವರಂಗ ಶುರುವಾಗಿಯೇ ಬಿಟ್ಟಿತೆನ್ನಿ.

ಪೂರ್ವರಂಗವೂ ನನ್ನ ತೂಕಡಿಕೆಯೂ ಜೊತೆಜೊತೆಗೆ ಆರಂಭವಾಯಿತೆಂದರೇ ಹೆಚ್ಚು ಸರಿ. ಹಾಗೇ ಮಲಗಿಬಿಟ್ಟರೆ, ಏಳುವುದು ಬೆಳಗ್ಗೆ ಆಟ ಮುಗಿದ ಮೇಲೆಯೇ. ಒಮ್ಮೆ ಮಾತ್ರ ನಾನು ತೂಕಡಿಸದೇ, ಮಲಗದೇ ಆಟ ನೋಡುತ್ತ ಕುಳಿತಿದ್ದೆ. ಚೆನ್ನಾಗಿ ನೆನಪಿದೆ, ಅದು `ದಕ್ಷಯಜ್ಞ' ಪ್ರಸಂಗ. ದಾಕ್ಷಾಯಿಣಿ ತನ್ನ ತಂದೆಯ ಯಾಗ ಮಂಟಪಕ್ಕೆ ಬರುವಾಗ ಯಾಗ ದೀಕ್ಷಿತನಾಗಿ ಕುಳಿತಿರುವ ದಕ್ಷನೂ ಸೇರಿದಂತೆ ಎಲ್ಲರೂ ಮುಖ ತಿರುಗಿಸುತ್ತಾರೆ.

ದಾಕ್ಷಾಯಿಣಿಯನ್ನು ಎಲ್ಲರೂ ನಿರ್ಲಕ್ಷಿಸುತ್ತಿರುವುದನ್ನು ನೋಡಿ ನನ್ನ ಅಜ್ಜಿಗೆ ಎಲ್ಲಿಲ್ಲದ ಸಿಟ್ಟು ಬಂತು. ಇನ್ನೇನು, ದಾಕ್ಷಾಯಿಣಿ ಯೋಗಾಗ್ನಿಯನ್ನು ವಿರಚಿಸಿ ದೇಹ ದಹನ ಮಾಡಿಕೊಳ್ಳುತ್ತಾಳೆ ಎಂದಾಗ ಅಜ್ಜಿಗೆ ಸುಮ್ಮನಿರಲಾಗಲಿಲ್ಲ. `ಏಯ್ ಪರ್ದೇಸಿ, ನಿನ್ನ ಮಗಳು ಬೆಂಕಿಗೆ ಬಿದ್ದು ಸಾಯುತ್ತಿರುವುದು ಕಾಣಿಸುತ್ತಿಲ್ಲವೆ? ಎಂಥ ಮನುಷ್ಯನೋ ನೀನು!' ಎಂದು ಗಟ್ಟಿಯಾಗಿ ಗದರಿ ಬಿಟ್ಟಳು. ನಾನು ಕಂಪಿಸಿಬಿಟ್ಟೆ. ಇಡೀ ಸಭೆಯಲ್ಲಿ ಒಂದು ಸಂಚಲನವುಂಟಾಯಿತು. ಒಂದೇ ಕ್ಷಣ. ಮುಂದೆ, ಏನೂ ಸಂಭವಿಸಿಲ್ಲವೆಂಬಂತೆ ಆಟ ಮುಂದುವರಿಯಿತು.

ಯಕ್ಷಗಾನವನ್ನು ತನ್ಮಯವಾಗಿ ವೀಕ್ಷಿಸುವುದನ್ನು ಕಲಿಸಿಕೊಟ್ಟದ್ದೇ ನನ್ನ ಅಜ್ಜಿ. ಆಗ ನೋಡಿದ ಆಟಗಳು ಒಂದೇ ಎರಡೇ. ಆಟ ನೋಡಿ ಬಂದ ಮೇಲೂ ಸುಮ್ಮನಿದ್ದುದಿಲ್ಲ. ಇಡೀ ದಿನ ತೈ ತೈ ತೈ! ಟೈಲರಂಗಡಿಯಲ್ಲಿ ಅಂಗೈಯಲ್ಲಿದ್ದ ಕಡ್ಡಿಗಳನ್ನು ಎತ್ತಿಡುವ ಲಯವೂ ತೈ ತೈ ತೈ ಎಂದು ಗುನುಗುನಿಸುತ್ತಿದ್ದ ಲಯವೂ ಬೆಸೆದುಕೊಂಡು ಬದುಕಿನಲ್ಲೂ ಲಯ ತಪ್ಪದಂತೆ ಕಾಪಾಡಿದವು.

***

`ಲಯ ತಪ್ಪಿತೆ?' ಎಂದು ನಾನು ಕೇಳುವಂತಿರಲಿಲ್ಲ. ಗುರು ವೀರಭದ್ರ ನಾಯಕರು ನನ್ನ ರಟ್ಟೆ ಹಿಡಿದು ನಿಲ್ಲಿಸಿದ್ದಂತೂ ಹೌದು. `ಪುನಃ ಕುಣಿ, ನೋಡೋಣ' ಎಂದರು. ನಾನು ತೈ ತೈ ತೈ ಎಂದು ಹೇಳುತ್ತ ಬಡಗುತಿಟ್ಟಿನ ಪ್ರವೇಶದ ಕ್ರಮದಲ್ಲಿ ನಾಲ್ಕು ಬಾರಿ ಜಿಗಿದು ಹಾರಿ ರಂಗಸ್ಥಳದ ಮುನ್ನೆಲೆಯಲ್ಲಿ ನಿಂತೆ. ``ಏನಿದು, ಲೆಕ್ಕ ಹಾಕಿಕೊಂಡು ಬರುತ್ತಿದ್ದಿ?'' ಎಂದು ಗುರುಗಳು ಕೇಳಿದರು. ಮಾರ್ಗೋಳಿ ಗುರುಗಳೋ ಅಥವಾ ಸಕ್ಕಟ್ಟು ಸೀತಾರಾಮ ಮಾಸ್ಟರೋ ಕಲಿಸಿದ್ದು ಎಂದು ಮೆಲುದನಿಯಲ್ಲಿ ಹೇಳಿ ಪ್ರವೇಶ ಕ್ರಮದ ಲೆಕ್ಕಾಚಾರವನ್ನು ಹೇಳಿದೆ.
ನನ್ನನ್ನು ಸೂಕ್ಷ್ಮವಾಗಿ ನೋಡಿದರು. `ಪಾಠಕ್ಕೆ ಇದು ಸರಿ, ನೋಟಕ್ಕಲ್ಲ' ಎಂದರು.

ಗುರು ವೀರಭದ್ರ ನಾಯಕರು ವೇಷದ ಪ್ರವೇಶ ಕುಣಿಯುತ್ತಿದ್ದ ರೀತಿ ಬಹಳ ಚೆಂದ. ಹಾಗೆಂದು, ಹಾವು ಹರಿಯುತ್ತ ಸಾಗಿದಂತೆ ವಿಷಮ ನಡೆಯಲ್ಲಿ ಜಿಗಿಯುತ್ತ ಬರುವ ವೈಖರಿಯನ್ನು ಪ್ರಾಥಮಿಕ ಹಂತದ ವಿದ್ಯಾರ್ಥಿಗಳು ಗ್ರಹಿಸಿ ಅನುಸರಿಸುವುದು ಸುಲಭವೆ? ಆದರೆ, ನಾನು ಮಾಡಿದ `ಲೆಕ್ಕಾಚಾರದ' ನಾಟ್ಯವನ್ನು ಗ್ರಹಿಸಿ ಕಲಿಯುವುದು ಸುಲಭವಿತ್ತು. ನಾನು ಮುಂದೆ ಗುರುಗಳ ನಾಟ್ಯಕ್ರಮವನ್ನೂ ಕಲಿತುಕೊಂಡೆ ಎಂಬುದು ಬೇರೆ ಮಾತು. ಆದರೆ, ಮೇಳದ ಶಿಕ್ಷಣ ಕ್ರಮ ಶಾಲೆಯ ಶಿಕ್ಷಣ ಕ್ರಮವಾದಾಗ ಯಕ್ಷಗಾನವು ಸೂಕ್ಷ್ಮವಾಗಿ ಬದಲಾವಣೆಗೆ ತೆರೆದುಕೊಂಡ ಹಂತ ಇದು!

ನಾನು ಕೂಡ ಇವತ್ತು ವಿದ್ಯಾರ್ಥಿಗಳಿಗೆ ಕಲಿಸುವುದಕ್ಕೆ ಸರಳ ಲೆಕ್ಕಾಚಾರದ ಕ್ರಮವನ್ನು ಅನುಸರಿಸುವುದಿದೆ. ಆದರೆ, ಅದರ ನಿಜವಾದ ಸೊಗಸು ಇರುವುದು ಎಲ್ಲ ನಾಟ್ಯ ಗಣಿತಗಳು ಒಂದಕ್ಕೊಂದು ಸಾವಯವವಾಗಿ ಬೆಸೆದಾಗ ಎಂಬುದನ್ನು ಮನದಲ್ಲಿಟ್ಟುಕೊಂಡು ಬೋಧಿಸುತ್ತೇನೆ. ಇವತ್ತಿಗೂ ಇದರ ಹಿಂದಿರುವ ಪ್ರೇರಣೆ ಅಂದು ಗುರು ವೀರಭದ್ರನಾಯಕರಾದಿಯಾಗಿ ಯಕ್ಷಗಾನ ಕೇಂದ್ರದಲ್ಲಿದ್ದ ಗುರುಗಳ ಪಾಠ ಕ್ರಮ ಎಂಬುದನ್ನು ನಾನು ಮರೆತಿಲ್ಲ.

ಮೂವರು ಗುರುಗಳ ಸಮಕ್ಷಮದಲ್ಲಿಯೇ ಆಗ ತರಗತಿಗಳು ನಡೆಯುತ್ತಿದ್ದುದು. ಭಾಗವತ ನೀಲಾವರ ರಾಮಕೃಷ್ಣಯ್ಯನವರ ತಾಳದ ಮೂಲಪಾಠ ಆಗುವವರೆಗೆ ವೀರಭದ್ರ ನಾಯಕರೂ ಹಿರಿಯಡಕ ಗೋಪಾಲರಾಯರೂ ಕೈ ಕಟ್ಟಿ ಸುಮ್ಮನೆ ಕುಳಿತುಕೊಳ್ಳುತ್ತಿದ್ದರು. ಗೋಪಾಲರಾಯರು ಪಾಠ ಮಾಡಲು ಮದ್ದಲೆಯನ್ನು ಎತ್ತಿಕೊಂಡಾಗ ಉಳಿದ ಗುರುಗಳೂ ವಿದ್ಯಾರ್ಥಿಗಳೊಂದಿಗೆ ಸುಮ್ಮನೆ ಆಲಿಸುತ್ತಿದ್ದರು. ತಾಳ-ಮದ್ದಲೆಯ ಪಾಠ ಮುಗಿದಾಗ ವೀರಭದ್ರ ನಾಯಕರು ಹೆಜ್ಜೆ ಹಾಕಲು ಎದ್ದು ನಿಲ್ಲುತ್ತಿದ್ದರು. ಹಾಡು, ಮದ್ದಲೆ, ನಾಟ್ಯಗಳು ಜೊತೆಯಾಗಿ ಮಂಡನೆಯಾದಾಗ ಕೆಲವೊಮ್ಮೆ ಗುರುಗಳ ನಡುವೆಯೂ ಚರ್ಚೆಗಳಾಗುತ್ತಿದ್ದವು.

ಚಾಲೂ, ಮುಕ್ತಾಯಗಳ ಗಣಿತದಲ್ಲಿ ವೀರಭದ್ರ ನಾಯಕರಿಗೂ ಗೋಪಾಲರಾಯರಿಗೂ ತಾತ್ವಿಕ ನೆಲೆಯ ಸಂವಾದ ನಡೆಯುತ್ತಿದ್ದರೆ ನೀಲಾವರ ರಾಮಕೃಷ್ಣಯ್ಯನವರು ತಮ್ಮ ಅಭಿಪ್ರಾಯವನ್ನು ಹೇಳಿ ಸಹಮತದ ತೀರ್ಮಾನಕ್ಕೆ ಅನುವು ಮಾಡಿಕೊಡುತ್ತಿದ್ದರು. ನಾವು ಹತ್ತು ಮಂದಿ ವಿದ್ಯಾರ್ಥಿಗಳು ಇದನ್ನೆಲ್ಲ ನೋಡುತ್ತ ಸುಮ್ಮನೆ ಕುಳಿತುಕೊಳ್ಳುತ್ತಿದ್ದೆವು. ಅದು ಎಂಥ ಸಮೃದ್ಧ ಅನುಭವವೆಂದರೆ ಇಂದಿನ ವಿಚಾರಗೋಷ್ಠಿಗಳಲ್ಲಿ ಅದು ಸಿಗುವಂಥಾದ್ದಲ್ಲ.

ನೀಲಾವರ ರಾಮಕೃಷ್ಣಯ್ಯನವರ ಪಾಠ ಕ್ರಮ ವಿಶಿಷ್ಟವಾದುದು. ಒಂದೇ ಲಯದಲ್ಲಿ ನಿರಂತರವಾಗಿ ತಮ್ಮ ಅಂಗೈಗಳನ್ನು ಪರಸ್ಪರ ತಟ್ಟುತ್ತಿದ್ದರು. ಆ ಘಾತಕ್ಕೆ ಸಪ್ತತಾಳಗಳನ್ನು ಹೊಂದಿಸುವುದೊಂದು ಪರಿಣತಿ. ಅವರೊಂದಿಗೆ ನಾವೂ ಬಾಯಿತಾಳಗಳನ್ನು ಹೇಳುತ್ತ ಹೇಳುತ್ತ ತಾಳದ ಆತ್ಮ ನಮ್ಮ ಮುಂದೆ ಆಕಾರಗೊಳ್ಳುತ್ತಿತ್ತು. ತ್ತಿತ್ತಿತ್ತೈಯಿಂದ ತೊಡಗಿ ಎಲ್ಲ ತಾಳಗಳನ್ನು ಕಲಿಸುವ ಕ್ರಮ ಹೀಗೆಯೇ. `ಟಕ್ ಟಕ್ ಟಕ್' ಎಂದು ಸದ್ದು ಹೊಮ್ಮಿಸುವ ಗಡಿಯಾರವೊಂದು ನಮ್ಮ ತರಗತಿಯ ಗೋಡೆಯಲ್ಲಿ ತೂಗುತ್ತಿತ್ತು. ನೀಲಾವರದ ಗುರುಗಳು ಆ ಸದ್ದಿಗೆ ತಾಳವನ್ನು ಹೊಂದಿಸಲು ಹೇಳಿಕೊಟ್ಟರು. ನಾವಾದರೂ ಲಯ ತಪ್ಪಬಹುದು, ಗಡಿಯಾರದ ಮಿಡಿತ ಅಲ್ಲಾಡುವುದುಂಟೆ?

ಗುರು ನೀಲಾವರ ರಾಮಕೃಷ್ಣಯ್ಯನವರೆಂದರೆ ದೇವರಂಥ ಮನುಷ್ಯ. ವೀರಭದ್ರ ನಾಯಕರು ಕಲಿಸುವಿಕೆಯ ಸಂದರ್ಭದಲ್ಲಿ ತುಂಬ ನಿಷ್ಠುರಿಯಾಗಿದ್ದರೆ ನೀಲಾವರದವರು ತುಂಬ ಸಮಾಧಾನಿ. ಅವರ ತಾಳ, ರಾಗ, ಲಯ, ನಡೆಗಳೆಲ್ಲ ಎಷ್ಟೊಂದು ಖಚಿತವಾಗಿತ್ತು! ಅವರ `ಯಕ್ಷಗಾನ ಸ್ವಬೋಧಿನಿ' ಕೃತಿಯೊಂದಿಗೆ ಯಕ್ಷಗಾನದ ಶಿಕ್ಷಣ ಕ್ರಮವು ಅಕ್ಷರಗಳಲ್ಲಿ ದಾಖಲಾಗುವುದಕ್ಕೆ ಮೊದಲಾಯಿತು.

ಗುರು ಹಿರಿಯಡಕ ಗೋಪಾಲರಾಯರ ಬೆರಳಿನಿಂದ ಹೊಮ್ಮುತ್ತಿದ್ದ ಘನತೆಯ ಪೆಟ್ಟುಗಳು ಇವತ್ತಿಗೂ ನನ್ನ ಕಿವಿಯಲ್ಲಿವೆ. ಅಮೆರಿಕದಿಂದ ಯಕ್ಷಗಾನದ ಅಧ್ಯಯನಕ್ಕೆಂದು ಭಾರತಕ್ಕೆ ಬಂದಿದ್ದ ಮಾರ್ಥಾ ಆಶ್ಚನ್, ಹಿರಿಯಡಕ ಗೋಪಾಲ ರಾಯರ ಗುರುತ್ವದ ಆಸರೆ ಪಡೆದದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ.

ಇಡೀ ದಿನ ಪಾಠ ಮುಗಿದ ಮೇಲೆ ಸಂಜೆಯ ಹೊತ್ತು ಕೊಂಚ ಬಿಡುವು. ``ದಿನಾ ಸಂಜೆ ಹೋಗುತ್ತೀಯಲ್ಲ, ಎಲ್ಲಿಗೆ?'' ಎಂದು ನನ್ನಲ್ಲಿ ಸಹಪಾಠಿ ಮಹಾಬಲ ಕೇಳಿದ. ನಾನು ಎಲ್ಲಿಗೆ ಹೋಗುತ್ತಿದ್ದೆ ಎಂಬುದನ್ನು ತಿಳಿಯಬೇಕೆಂದು ರಾಮನಿಗೂ ಕುತೂಹಲ. ಒಮ್ಮೆ ಕೃಷ್ಣಮೂರ್ತಿ ನನ್ನನ್ನು ಅನುಸರಿಸಿ ಬಂದದ್ದೂ ಇದೆ. ಇವರೆಲ್ಲ ಯಾರೆಂದು ಬಲ್ಲಿರಿ? ಬಡಗುತಿಟ್ಟಿನಲ್ಲಿ ಹೆಸರು ಮಾಡಿದ ನೀಲಾವರ ಮಹಾಬಲ ಶೆಟ್ಟಿ, ರಾಮ ನಾರಿ, ಬೆಳಿಯೂರು ಕೃಷ್ಣಮೂರ್ತಿ ಎಂದು ಹೇಳಿದರೆ ಯಕ್ಷಗಾನ ವಲಯದ ಎಲ್ಲರಿಗೂ ಫಕ್ಕನೆ ಗೊತ್ತಾಗಿಬಿಡುತ್ತದೆ. ಇವತ್ತು ಈ ಮೂವರೂ ಹೂಹಾರ ಹಾಕಿಕೊಂಡ ಫೋಟೊ ಫ್ರೇಮಿನೊಳಗೆ ಸ್ತಬ್ಧರಾಗಿದ್ದಾರೆ. ಇವರ ನೆನಪು ತುಂಬ ಯಾತನೆ ಉಂಟುಮಾಡುತ್ತದೆ.

ನಾನು ಸಂಜೆ ಹೋಗುತ್ತಿದ್ದುದಾದರೂ ಎಲ್ಲಿಗೆ? `ಎಲ್ಲಿಗೆ?' ಎಂದು ಕೇಳಿದ ಸಹಪಾಠಿಗಳ ಬಳಿ `ಮನೆಗೆ' ಎಂಬ ಮೂರಕ್ಷರದ ಉತ್ತರ ಹೇಳಿ ಸುಮ್ಮನಾಗುತ್ತಿದ್ದೆ. ನಾನು ಹೋಗುತ್ತಿದ್ದುದು ಇಂದ್ರಾಳಿಯಲ್ಲಿದ್ದ ದೇವಣ್ಣಯ್ಯನವರ ಹೊಟೇಲಿಗೆ. ನನ್ನ ಸಹಪಾಠಿಗಳೆಲ್ಲರೂ ಸಂಜೆಯ ಹೊತ್ತು ಹೊಟೇಲಿನಲ್ಲಿ ಚಹಾ- ತಿಂಡಿ ಸೇವಿಸುತ್ತಿದ್ದರು. ನಾನು ಕೇಂದ್ರಕ್ಕೆ ಸೇರುವಾಗ ಅಲ್ಲಲ್ಲಿ ಸಂಪಾದಿಸಿದ ಆಣೆ-ರೂಪಾಯಿಗಳು ಖಾಲಿಯಾಗಿ ಸಂಜೆ ಹೊಟೇಲಿಗೆ ಕೊಡಲು ದುಡ್ಡಿಲ್ಲ.

ದಿನವಿಡೀ ಕುಣಿದು ಸಂಜೆ ಹಸಿದ ಹೊಟ್ಟೆಯಲ್ಲಿರುವುದು ಹೇಗೆ! ಗುರು ವೀರಭದ್ರ ನಾಯಕರಿಗೆ ನನ್ನ ಬಗ್ಗೆ ಅದೇನೋ ಪ್ರೀತಿ. ಆ ವೇಳೆಗಾಗಲೇ ಹೊರಗೆ ವಿವಿಧ ಗುರುಗಳ ಬಳಿ ಮತ್ತು ಕೇಂದ್ರದ ರಾತ್ರಿ ಕ್ಲಾಸಿನಲ್ಲಿ ನಾನು ಕಲಿತುದರಿಂದ ಅವರ ಹೆಜ್ಜೆಯ ಸೂಕ್ಷ್ಮಗಳನ್ನು ಬೇಗನೆ ಗ್ರಹಿಸುತ್ತಿದ್ದುದು ಅವರಿಗೆ ನನ್ನ ಮೇಲೆ ಅಕ್ಕರೆ ಮೂಡಲು ಕಾರಣವಾಗಿದ್ದಿರಬಹುದು. ಒಂದು ದಿನ ಅವರು `ನೀನು ಸಂಜೆ ದೇವಣ್ಣಯ್ಯನ ಹೊಟೇಲಿನಲ್ಲಿ ಇಡ್ಲಿ-ದೋಸೆಗೆ ಹಿಟ್ಟು ಕಡೆಯಲು ಹೋಗು. ಪುಕ್ಕಟೆ ಚಹಾ- ತಿಂಡಿ ಕೊಡುತ್ತಾರೆ. ಅವರಲ್ಲಿ ನಾನು ಮಾತನಾಡಿದ್ದೇನೆ' ಎಂದರು.

ಪ್ರತಿ ಸಂಜೆಯಾಗುತ್ತಿದ್ದಂತೆ ನಾನು ನಾಪತ್ತೆ. ಅಕ್ಕಿ ಹಿಟ್ಟು ಅರೆದು, ಪಾತ್ರೆ ತೊಳೆದು, ಹೊಟ್ಟೆ ತುಂಬಿಸಿಕೊಂಡು ಮರಳಿ ಬರುತ್ತಿದ್ದೆ. ಒಮ್ಮೆ ಅದು ಸುದ್ದಿಯಾಗಿ ಯಾರೋ ಈ ಸಂಗತಿಯನ್ನು ಗುರುಗಳಲ್ಲಿ ಹೇಳಿಯೂ ಹೇಳಿದರು. ಅವರ ಉತ್ತರ, `ಇರಲಿ ಪಾಪದ ಹುಡುಗ, ದುಡಿಯುತ್ತಾನೆ, ತಿನ್ನುತ್ತಾನೆ'.

ಹೊಟ್ಟೆಯ ಹಸಿವು ತೀರಿದರೆ ಮುಗಿಯಿತು. ಬಟ್ಟೆ ದೊಡ್ಡ ಸಂಗತಿಯಲ್ಲ!

***

ಒಂದು ಧೋತಿ. ಒಂದು ಅಂಗಿ. ವಾರಾಣಶಿಯ ರೈಲು ಹತ್ತಿದಾಗಲೂ ಅಷ್ಟೇ ಬಟ್ಟೆ. ಏನು ರಶ್ಶು! ಕುಂಭ ಮೇಳವೆಂದರೆ ಜನ ಸಾಗರವಲ್ಲವೆ? ನಾವು ನಾವಷ್ಟೇ ಅಲ್ಲ, ಯಕ್ಷಗಾನದ ಹಿಮ್ಮೇಳ ಸಾಮಗ್ರಿ, ವೇಷಭೂಷಣ, ಸಾಮಾನು ಸರಂಜಾಮು...

ಕಾಶಿಯಲ್ಲಿ ಉಡುಪಿ ಸಂಸ್ಕೃತ ಕಾಲೇಜಿನವರಿಂದ ಪ್ರದರ್ಶನಗೊಳ್ಳುವ ಸಂಸ್ಕೃತ ಯಕ್ಷಗಾನದ ತಂಡದಲ್ಲಿ ನಾನು ಹೊರಟದ್ದು. ಪ್ರಸಂಗ ಗದಾಯುದ್ಧ. ಸಂಸ್ಕೃತದಲ್ಲಿ ಯಕ್ಷಗಾನ ಪದ್ಯಸಾಹಿತ್ಯ ಬರೆದವರು ವಿದ್ವಾಂಸರಾದ ಪ್ರೊ. ರಾಜಗೋಪಾಲಾಚಾರ್ಯರು. ಸಂಸ್ಕೃತದಲ್ಲಿ ಅರ್ಥ ಬರೆದವರು ಸಂಸ್ಕೃತ ಕಾಲೇಜಿನ ಪ್ರಾಚಾರ್ಯರಾಗಿದ್ದ ಪ್ರೊ. ಹರಿದಾಸ ಭಟ್ಟರು. ಹುಡುಗರಿಗೆ ನಾಟ್ಯ ಕಲಿಸುವುದು ಯಾರು ಎಂಬ ಪ್ರಶ್ನೆ ಬಂದಾಗ `ನಮ್ಮ ಬನ್ನಂಜೆಯ ಸಂಜೀವ ಸುವರ್ಣ ತುಂಬ ಚುರುಕು ಹುಡುಗ, ಕೇಂದ್ರದಲ್ಲಿ ಕಲಿತು, ವಿವಿಧೆಡೆಗಳಲ್ಲಿ ಯಕ್ಷಗಾನ ಕ್ಲಾಸು ಮಾಡಿದ ಅನುಭವವೂ ಉಂಟು' ಎಂದು ನನ್ನ ಬಗ್ಗೆ ಶಿಫಾರಸು ಮಾಡಿದವರು ಆಗ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಜ್ಯೋತಿಷಿ ಕಬ್ಯಾಡಿ ಜಯರಾಮ ಆಚಾರ್ಯರು. ಅವರು ಎಂಜಿಎಂ ಕಾಲೇಜಿನ ಸಂಸ್ಕೃತ ಪ್ರೊಫೆಸರ್ ಆಗಿದ್ದ ಹೆರಂಜೆ ಕೃಷ್ಣ ಭಟ್ಟರ ಮೂಲಕ ನನ್ನನ್ನು ಕರೆಸಿಕೊಂಡು ಸಂಸ್ಕೃತ ಯಕ್ಷಗಾನದ ತಂಡಕ್ಕೆ ಹೆಜ್ಜೆಗಳನ್ನು ಹೇಳಿಕೊಡುವ ಅವಕಾಶ ಕೊಡಿಸಿದರು.

ಮಂಗಳೂರಿನಿಂದ ಬೆಂಗಳೂರು, ಅಲ್ಲಿಂದ ಮದ್ರಾಸು, ಮುಂದೆ ಗಂಗಾ ತೀರದ ಪುಣ್ಯನಗರಿಗೆ. ಅಲ್ಲಿ ಯಶಸ್ವಿ ಪ್ರದರ್ಶನ ಕೊಟ್ಟು ಮರಳುವಾಗ ಹೆರಂಜೆ ಕೃಷ್ಣ ಭಟ್ಟರಿಗೂ ಕಬ್ಯಾಡಿ ಜಯರಾಮ ಆಚಾರ್ಯರಿಗೂ ನನ್ನ ಸಮರ್ಪಣಾ ಭಾವದ ದುಡಿಮೆಯನ್ನು ನೋಡಿ ಅಭಿಮಾನ ಉಂಟಾಗಿತ್ತು. ಮುಂದೆ, ಯಕ್ಷಗಾನ ಕೇಂದ್ರದ ತಂಡವು ಜಪಾನಿಗೆ ಪ್ರವಾಸ ಹೊರಟಾಗ ನನ್ನ ಬಗ್ಗೆ ಇಬ್ಬರೂ ಶಿಫಾರಸು ಮಾಡಿ ತಂಡದಲ್ಲಿ ಸೇರಿಸಲು ಪ್ರಯತ್ನಿಸಿದ್ದಿದೆ. ಆದರೆ, ಆ ತಂಡಕ್ಕೆ ಪ್ರವೇಶ ಪಡೆಯಲಾಗಲಿಲ್ಲ.

ವಿದೇಶಕ್ಕೆ ಹೋಗಲೇಬೇಕೆಂಬ ಆಸೆ ಎದೆಯಲ್ಲಿ ಮೊಳೆತಿತ್ತು. ನನಗೆ ಆಗಾಗಲೇ ಟೈಲರಿಂಗ್ ಕೌಶಲವೂ ಸಿದ್ಧಿಸಿದುದರಿಂದ ವಿದೇಶದಲ್ಲೆಲ್ಲಾದರೂ ಹೊಲಿಗೆ ಕೆಲಸ ಸಿಗಬಹುದು ಎಂದು ಅವಕಾಶಕ್ಕೆ ಕಾಯುತ್ತ ಇದ್ದೆ. ಅದಕ್ಕಾಗಿ ಪಾಸ್‌ಪೋರ್ಟ್ ಕೂಡಾ ಮಾಡಿಸಿಕೊಂಡಿದ್ದೆ. ಫಾರಿನ್‌ನಲ್ಲಿ ಎಲ್ಲಾದರೂ ಟೈಲರ್ ಬೇಕಿದ್ದರೆ ಹೇಳಿ ಅಂತ ಅವರಿವರಲ್ಲಿ ವಿಚಾರಿಸುತ್ತಿದ್ದೆ...

***

`ನಿನ್ನಲ್ಲಿ ಪಾಸ್‌ಪೋರ್ಟ್ ಇದೆಯಾ?' ಎಂದು ಬಿರ್ತಿ ಬಾಲಕೃಷ್ಣನವರು ವಿಚಾರಿಸಿದಾಗ ನಾನು `ಹೌದು' ಎಂದೆ. ಜರ್ಮನಿಯೂ ಸೇರಿದಂತೆ ವಿವಿಧ ದೇಶಗಳಲ್ಲಿ ಪ್ರದರ್ಶನ ನೀಡಲು ಸಿದ್ಧವಾಗಿರುವ `ಇಂಡಿಯನ್ ಡ್ಯಾನ್ಸ್' ತಂಡಕ್ಕಾಗಿ ವೇಷಗಾರಿಕೆಯೂ ಚೆಂಡೆವಾದನದ ಪರಿಣತಿಯೂ ಇರುವ ಕಲಾವಿದನನ್ನು ಕಥಕ್ ವಿದುಷಿ ಮಾಯಾರಾವ್ ಅರಸುತ್ತಿದ್ದರು. `ಯಾರಾದರೂ ಇದ್ದರೆ ಹೇಳು' ಎಂದು ಶಿಷ್ಯನಾದ ಬಿರ್ತಿ ಬಾಲಕೃಷ್ಣರಲ್ಲಿ ಹೇಳಿಯೂ ಇದ್ದರು. ಮಾಯಾರಾವ್ ಮೂಲತಃ ಕುಂದಾಪುರದವರು. ಹಾಗಾಗಿ ಉಡುಪಿ ಜಿಲ್ಲೆಯ ಪರಿಸರದವರೆಂದರೆ ಅವರಿಗೆ ಅಭಿಮಾನ. ಯಕ್ಷಗಾನ ಕಲೆಯ ಬಗ್ಗೆಯೂ ಅತೀವ ಪ್ರೀತಿ.

ನನ್ನಲ್ಲಿ ಪಾಸ್‌ಪೋರ್ಟ್ ಇರುವ ಬಗ್ಗೆ ತಿಳಿದು ಬಿರ್ತಿ ಬಾಲಕೃಷ್ಣರಿಗೆ ಸಂತಸವಾಯಿತು. ನನ್ನ ಬಗ್ಗೆ ಮಾಯಾರಾವ್ ಅವರಲ್ಲಿ ಶಿಫಾರಸು ಮಾಡಿ ವಿದೇಶ ಪ್ರವಾಸದ ತಂಡಕ್ಕೆ ಆಯ್ಕೆಯಾಗುವಂತೆ ಮಾಡಿದರು. ಈಗಲೂ ನನ್ನ ಸಾಧನೆಯನ್ನು ಹೇಳಿಕೊಳ್ಳುವ ಸಂದರ್ಭ ಬಂದಾಗಲೆಲ್ಲ ಬಿರ್ತಿ ಬಾಲಕೃಷ್ಣರನ್ನು ತಪ್ಪದೆ ನೆನೆಯುತ್ತೇನೆ.

ಒಂದು ಮುಂಜಾನೆ ಬಿರ್ತಿ ಬಾಲಕೃಷ್ಣರ ಜೊತೆಗೆ ಬೆಂಗಳೂರಿನ ಗಾಂಧಿನಗರದಲ್ಲಿರುವ ಮಾಯಾರಾವ್ ಅವರ ಮನೆಯ ಮುಂದೆ ನಿಂತಾಗ ಬಾಗಿಲು ತೆರೆದವರು ಅವರ ಪತಿ ನಟರಾಜ್ (ಎಂ.ಎಸ್. ನಟರಾಜನ್, ಮೂಲತಃ ಚೆನ್ನೈಯವರು). ನನ್ನನ್ನು ನೋಡಿ ನಕ್ಕವರೇ `ಜರ್ಮನಿಗೆ ಹೀಗೆ ಹೋಗುವುದು ಬೇಡ' ಎಂದು ಅವರ ತಮ್ಮನ ಮಕ್ಕಳ ಪ್ಯಾಂಟುಶರ್ಟುಗಳನ್ನು ಕೊಟ್ಟು `ಹೊಂದಿಕೆಯಾಗುವುದೋ ನೋಡು' ಎಂದರು. ಮೊದಲ ಬಾರಿಗೆ ಪ್ಯಾಂಟು ಧರಿಸುವುದು! ಸಪೂರ ದೇಹದ ನಾನು ದೊಗಳೆ ಪ್ಯಾಂಟು ಧರಿಸಿ ಅತ್ತಿತ್ತ ನಡೆದಾಡಿದಾಗ ವಿಚಿತ್ರ ಪುಳಕವುಂಟಾಯಿತು.

ಮಧ್ಯಾಹ್ನ ಅಲ್ಲಿಯೇ ಸಮೀಪದ ಅಂಗಡಿಗೆ ಹೋಗಿ ಚಪ್ಪಲಿ ತೆಗೆಸಿಕೊಡುವಂತೆ ನಟರಾಜರು ಬಿರ್ತಿ ಬಾಲಕೃಷ್ಣರಿಗೆ ಸೂಚಿಸಿದರು. ಅಷ್ಟರಲ್ಲಿ ಕೆರೆಮನೆ ಮಹಾಬಲ ಹೆಗಡೆಯವರೂ ಅಲ್ಲಿಗೆ ಬಂದರು. ಅವರು ಆಗಲೇ ದೆಹಲಿಗೆ ಹೊರಟಿದ್ದರು. ನಾವು ಮರುದಿನ ರೈಲಿನಲ್ಲಿ ಹೊರಟೆವು. ದೆಹಲಿಯಲ್ಲಿಳಿದಾಗ ಮಾಯಾರಾವ್ ಅವರ ಮತ್ತೋರ್ವ ಶಿಷ್ಯ ಎಳ್ಳಂಪಳ್ಳಿ ವಿಠಲಾಚಾರ್ ನಮ್ಮನ್ನು ಕರೆದೊಯ್ಯಲು ರೈಲ್ವೇ ಸ್ಟೇಶನ್‌ಗೆ ಬಂದಿಳಿದಿದ್ದರು.
ದೇಶದ ರಾಜಧಾನಿಯ ರಸ್ತೆಯಲ್ಲಿ ಸಾಗುತ್ತಿದ್ದೆವು. ಅರೆ! ಈ ಹಿಂದೆ ಒಂದೆರಡು ಸಲ ಇಲ್ಲಿಗೆ ಬಂದಿರಬೇಕಲ್ಲ ಅಂತನ್ನಿಸಿತು.
ಹೌದಲ್ಲ, ಬಂದಿದ್ದೆ. ಬಿ.ವಿ. ಕಾರಂತರ ಜೊತೆಗೆ!
(ಸಶೇಷ)
ನಿರೂಪಣೆ: ಹರಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT