ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಾರದ ಗೀಳಿಗೆ ಬಲಿಯಾದ ಅಭಿವೃದ್ಧಿ

Last Updated 14 ಅಕ್ಟೋಬರ್ 2017, 20:27 IST
ಅಕ್ಷರ ಗಾತ್ರ

ದಶದಿಕ್ಕುಗಳಿಗೆ ತಮ್ಮ ಸಾಮ್ರಾಜ್ಯ ವಿಸ್ತರಿಸಿದ ಸಾಮ್ರಾಟರಲ್ಲಿ ಎರಡು ಬಗೆಯ ಸ್ವಭಾವದವರು ಇದ್ದರು ಎನ್ನುವುದನ್ನು ಇತಿಹಾಸ ನಮಗೆ ಪಾಠ ಹೇಳುತ್ತದೆ. ಸಣ್ಣ– ಪುಟ್ಟ ರಾಜ ಮಹಾರಾಜರು ಮತ್ತು ಸಾಮಂತರನ್ನು ಸೋಲಿಸಿ ಗೆಲುವಿನ ನಗೆ ಬೀರಿ ತಮ್ಮ ಸಾಮ್ರಾಜ್ಯ ವಿಸ್ತರಣೆಯನ್ನು ಭದ್ರಮಾಡಿದ ನಂತರ ಕೆಲ ಅರಸರು ಆಡಳಿತಕ್ಕೆ ಗಮನ ನೀಡುತ್ತಿದ್ದರು.

ಗೆದ್ದು ಬೀಗಿದ ರಾಜನು ಉಳಿದ ಅವಧಿಯನ್ನು ತನ್ನ ಪ್ರಜೆಗಳ ಒಳಿತಿಗಾಗಿ ಶ್ರಮಿಸಿ ಅವರ ಬದುಕನ್ನು ಸುಧಾರಿಸಲು ಗಮನ ನೀಡುತ್ತಿದ್ದ. ತನ್ನ ಸಾಮ್ರಾಜ್ಯದಲ್ಲಿಯೇ ಸಂತೃಪ್ತನಾಗಿ ನೆಲೆಸಿರುತ್ತಿದ್ದ. ಎರಡನೆ ವರ್ಗಕ್ಕೆ ಸೇರಿದ ದೊರೆ ತನ್ನ ರಾಜ್ಯದ ನೆಲೆಯನ್ನು ನಿರಂತರವಾಗಿ ವಿಸ್ತರಿಸುವುದರತ್ತಲೇ ಗಮನ ಕೇಂದ್ರೀಕರಿಸುತ್ತಿದ್ದ. ಗೆಲುವು ಸಾಧಿಸುವುದೇ ಆತನ ಪಾಲಿಗೆ ಒಂದು ಬಗೆಯ ಗೀಳು ಆಗಿಬಿಟ್ಟಿರುತ್ತಿತ್ತು.
ಮೊಘಲರ ಇತಿಹಾಸದಿಂದ ಉದಾಹರಣೆಗಳನ್ನು ನೀಡುವುದು ಈಗಿನ ಸಂದರ್ಭದಲ್ಲಿ ಕೆಲಮಟ್ಟಿಗೆ ಅಪಾಯಕಾರಿಯಾಗಿದೆ ಎನ್ನುವುದು ನಿಜ.

ಆದರೆ, ಎರಡೂ ಬಗೆಯ ಅರಸರ ಬಗ್ಗೆ ಹೋಲಿಕೆ ಮಾಡಲು ಮತ್ತು ಇತಿಹಾಸವು ಅವರ ಬಗ್ಗೆ ತೀರ್ಮಾನಕ್ಕೆ ಬಂದಿರುವುದರ ಬಗ್ಗೆ ಅಕ್ಬರ್‌ ಮತ್ತು ಔರಂಗಜೇಬ್‌ ಉತ್ತಮ ನಿದರ್ಶನವಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಬದಲಿಗೆ ಇಲ್ಲಿ ಸಾಮ್ರಾಟ್‌ ಅಶೋಕನ ಉದಾಹರಣೆ ನೀಡುವುದೇ ಹೆಚ್ಚು ಸುರಕ್ಷಿತ ಎಂದು ಅನಿಸುತ್ತದೆ.

ಅಶೋಕನ ಬದುಕಿನಲ್ಲಿ ಎರಡೂ ಬಗೆಯ ಸ್ವಭಾವಗಳನ್ನು ನಾವು ಕಾಣಬಹುದು. ಮೊದಲ ಹಂತದಲ್ಲಿ ಆಕ್ರಮಣಕಾರಿ ಯುದ್ಧ ದಾಹಿ ಸ್ವಭಾವದವನಾಗಿದ್ದ ಅಶೋಕ, ಕಳಿಂಗ ಯುದ್ಧದ ನಂತರ ಶಾಂತಚಿತ್ತದ ಸುಧಾರಣಾವಾದಿಯಾಗಿ ಪರಿವರ್ತನೆಗೊಂಡಿದ್ದ. ಬದಲಾದ ಅಶೋಕನ ನಿರ್ಧಾರಗಳು ದೂರಗಾಮಿ ಪರಿಣಾಮವನ್ನೂ ಬೀರಿದ್ದವು.

ಆಧುನಿಕ ಆಡಳಿತದ ತತ್ವಗಳನ್ನು ಆತ ಜಾರಿಗೆ ತಂದಿದ್ದ. ಶತಮಾನಗಳ ಕಾಲ ಬಲಿಷ್ಠ ಭಾರತಕ್ಕೆ ಇವು ತಳಹದಿಯೂ ಆಗಿದ್ದವು. ಅಶೋಕನು ತನ್ನ ಬದುಕಿನ ಎರಡನೇ ಹಂತದಲ್ಲಿ ಬಳಸಿದ ಸಂಕೇತಗಳು ಸ್ವತಂತ್ರ ಭಾರತದ ರಾಷ್ಟ್ರಧ್ವಜ ಮತ್ತು ಲಾಂಛನದಲ್ಲಿಯೂ ಹೆಮ್ಮೆಯ ಸ್ಥಾನ ಪಡೆದುಕೊಂಡಿವೆ.

ಸೇನಾ ದಾಳಿ ನಡೆಸಿ ಗೆಲುವು ಸಾಧಿಸುವ ದಿನಗಳು ಬಹಳ ಹಿಂದೆಯೇ ಕೊನೆಗೊಂಡಿವೆ. ಇಂದಿನ ನಾಯಕರು ರಾಜಕೀಯ ಅಧಿಕಾರ ಪಡೆಯಲು ಚುನಾವಣೆಗಳಲ್ಲಿ ಭರ್ಜರಿ ಪ್ರಚಾರ ಮಾಡಿ ಮತದಾರರ ಮನಸ್ಸು ಗೆಲ್ಲುವ, ಮೈತ್ರಿಕೂಟ ಮಾಡಿಕೊಳ್ಳುವ ರಾಜಕೀಯ ತಂತ್ರ ಹೆಣೆಯುತ್ತಾರೆ.

ನರೇಂದ್ರ ಮೋದಿ ಅವರು 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಸಾಧಿಸಿದ ರಾಜಕೀಯ ಗೆಲುವು ಭಾರತದ ಇತಿಹಾಸದಲ್ಲಿ ಅದ್ವಿತೀಯ ವಿಜಯ ಎಂದೇ ದಾಖಲಾಗಿದೆ. ಅದಕ್ಕೂ ಹಿಂದೆ ನೆಹರೂ– ಗಾಂಧಿ ಕುಟುಂಬವು ಮೋದಿ ಅವರಿಗಿಂತ ಹೆಚ್ಚಿನ ಸೀಟುಗಳನ್ನು ಗೆದ್ದ ನಿದರ್ಶನಗಳಿವೆ. ಆದರೆ, ಆಡಳಿತಾರೂಢ ಪಕ್ಷವನ್ನು ರಾಷ್ಟ್ರ ರಾಜಕಾರಣದ ಹೊರಗಿನ ವ್ಯಕ್ತಿಯೊಬ್ಬ ಅವಮಾನಕಾರಿಯಾಗಿ ಸೋಲಿಸಿದ ನಿದರ್ಶನಗಳೇ ಇದ್ದಿರಲಿಲ್ಲ. ಇಂತಹ ವಿಶಿಷ್ಟ ಗೆಲುವಿನ ರೂವಾರಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಇದುವರೆಗಿನ ಅಧಿಕಾರಾವಧಿಯನ್ನು ಪರಾಮರ್ಶಿಸಲು ಇದು ಸೂಕ್ತ ಸಮಯವಾಗಿದೆ.

ಅಭೂತಪೂರ್ವ ಗೆಲುವಿನ ನಂತರವೂ ಮೋದಿ ಮತ್ತವರ ಪಕ್ಷದ ಸೇನಾನಿಗಳು ತಮ್ಮ ಚುನಾವಣಾ ಸಮರದ ಕಾರ್ಯತಂತ್ರ ಹೆಣೆಯುವುದನ್ನು ಬಿಟ್ಟೇ ಇಲ್ಲ ಎನ್ನುವುದನ್ನು ಅವರು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲೇಬೇಕು. ಅವರೆಲ್ಲರೂ ಚುನಾವಣಾ ಪ್ರಚಾರ ಧಾಟಿಯಲ್ಲಿಯೇ ನಿರಂತರವಾಗಿ ಮಾತನಾಡುತ್ತಲೇ ಇದ್ದಾರೆ. ಸರ್ಕಾರ ಮತ್ತು ಪಕ್ಷವು ಚುನಾವಣೆಗಳನ್ನು ಗೆಲ್ಲುವ ಏಕೈಕ ಗುರಿ ಸಾಧನೆಯ ಯಂತ್ರಗಳಾಗಿ ಬಿಟ್ಟಿವೆ.

ಸರ್ಕಾರದ ನಿಯಂತ್ರಣದಲ್ಲಿ ಇರುವ ಸಂಸ್ಥೆಗಳ ನೆರವಿನಿಂದ ಎದುರಾಳಿಗಳನ್ನು ಕಟ್ಟಿ ಹಾಕುವುದರ ಜತೆಗೆ, ಪಕ್ಷದ ಪ್ರಭಾವ ಕಡಿಮೆ ಇರುವ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯದ ದೂರದ ರಾಜ್ಯಗಳಲ್ಲಿಯೂ ಅಧಿಕಾರ ಹೊಂದಲು ಬಿಜೆಪಿ ಹಂಬಲಿಸಿದೆ. ಚುನಾವಣೆ ಗೆಲ್ಲಲು ಮಾತಿನಲ್ಲಿಯೇ ಮಂಟಪ ಕಟ್ಟುವ ಕಲೆಯನ್ನೂ ಕೇಂದ್ರ ಸರ್ಕಾರ ಬಿಟ್ಟುಕೊಟ್ಟಿಲ್ಲ. ಇವೆಲ್ಲವುಗಳ ಒಟ್ಟಾರೆ ಫಲಿತಾಂಶವಾಗಿ ಸದ್ಯಕ್ಕೆ ಕೇಂದ್ರ ಸರ್ಕಾರದ ಕಾರ್ಯ ವೈಖರಿಯು ಜನಮಾನಸದಲ್ಲಿ ನಿರುತ್ಸಾಹ ಮೂಡಿಸಿವೆ. ಗಲಿಬಿಲಿ, ಗೊಂದಲಕ್ಕೂ ಆಸ್ಪದ ಮಾಡಿಕೊಟ್ಟಿವೆ.

ಕಳೆದು ಹೋಗಿರುವ ಅವಕಾಶಗಳನ್ನು ಮರಳಿ ಪಡೆಯುವ ಮತ್ತು ಆಗಿರುವ ಲೋಪಗಳನ್ನು ಸರಿಪಡಿಸಲು ಇರುವ ಅವಕಾಶಗಳೂ ಕೈತಪ್ಪಿ ಹೋಗಿವೆ. ಇದುವರೆಗೆ ಆಗಿರುವ ನಷ್ಟ ಸರಿಪಡಿಸಲು ಈಗ ತುಂಬ ಕಡಿಮೆ ಸಮಯಾವಕಾಶ ಇದೆ.

ಮುಂಬರುವ ದಿನಗಳಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ರಾಜ್ಯಗಳ ಚುನಾವಣೆಗಳು ಬರಲಿವೆ. 18 ತಿಂಗಳ ಅವಧಿಯಲ್ಲಿ ನಡೆಯಲಿರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶಗಳು 2019ರ ಲೋಕಸಭಾ ಚುನಾವಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಈಗಲಾದರೂ ಕೆಲ ಸಮಯದವರೆಗೆ ತಮ್ಮ ಪಕ್ಷದ ಅಧಿಕಾರ ವಿಸ್ತರಣೆ ದಾಹವನ್ನು ಕೆಲಮಟ್ಟಿಗೆ ನಿಯಂತ್ರಣದಲ್ಲಿ ಇರಿಸಬೇಕಾಗಿದೆ. ಮಹಾನ್ ನಾಯಕರು ತಮ್ಮ ಸಮಯ ಮತ್ತು ಚಿಂತನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ವಿಶೇಷ ಕೌಶಲ ಮತ್ತು ಸಹನೆ ಹೊಂದಿರುತ್ತಾರೆ.

ಅಧಿಕಾರಾರೂಢರಿಗೆ ಜನರ ಬೆಂಬಲವು ಗರಿಷ್ಠ ಮಟ್ಟದಲ್ಲಿ ಇರುವಾಗಲೇ ಕಠಿಣ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಇದರಿಂದ ಅಂತಹ ನಿರ್ಧಾರಗಳ ಫಲಶ್ರುತಿಯನ್ನು ಅವರು ತಮ್ಮ ಅಧಿಕಾರಾವಧಿಯಲ್ಲಿಯೇ ನೋಡಬಹುದಾಗಿದೆ.

ಪ್ರಚಾರದ ಗೀಳಿಗೆ ಒಳಗಾದ ಮೋದಿ ಸರ್ಕಾರವು ಇಂತಹ ಸದವಕಾಶವನ್ನು ಕಳೆದುಕೊಂಡಿದೆ. ಕಠಿಣ ನಿರ್ಧಾರಗಳನ್ನು ಅದರಲ್ಲೂ ವಿಶೇಷವಾಗಿ ಅರ್ಥ ವ್ಯವಸ್ಥೆಗೆ ಸಂಬಂಧಿಸಿದಂತೆ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲು ವಿಳಂಬ ಮಾಡಿತು. ಅದೇ ಕಾರಣಕ್ಕೆ ಈಗ ಆರ್ಥಿಕ ಬಿಕ್ಕಟ್ಟು ಉದ್ಭವಿಸಿದೆ.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಮತ್ತು ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ಮೂರು ಮುಖ್ಯ ಸಂಗತಿಗಳನ್ನು ಪ್ರಧಾನವಾಗಿ ಪ್ರಸ್ತಾಪಿಸಲಾಗಿತ್ತು. ಈ ವಿಷಯಗಳನ್ನೇ ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ ವೈಖರಿಯನ್ನು ಹರಿತಗೊಳಿಸಲಾಗಿತ್ತು. ಒಳ್ಳೆಯ ದಿನಗಳು (ಅಚ್ಛೆ ದಿನ್), ಸಮರ್ಥ ರಾಷ್ಟ್ರೀಯ ಸುರಕ್ಷತಾ ನೀತಿ ಮತ್ತು ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುವ ಭರವಸೆ ನೀಡಲಾಗಿತ್ತು. ಇವುಗಳ ಪೈಕಿ ಮೂರನೇಯದು ಮತದಾರರ ಹೆಚ್ಚು ಗಮನ ಸೆಳೆದಿತ್ತು.

ತೆರಿಗೆ ವಂಚಕರು ವಿದೇಶಗಳಲ್ಲಿ ಇರಿಸಿರುವ ಕೋಟ್ಯಂತರ ರೂಪಾಯಿಗಳ ಕಪ್ಪು ಹಣ ಮರಳಿ ತಂದು ಪ್ರತಿಯೊಬ್ಬ ಭಾರತೀಯನಿಗೆ ₹ 15 ಲಕ್ಷ ಕೊಡುಗೆ ನೀಡುವ, ರಾಬರ್ಟ್ ವಾದ್ರಾ ಸೇರಿದಂತೆ ಪ್ರಭಾವಿ ಭ್ರಷ್ಟಾಚಾರಿಗಳನ್ನೆಲ್ಲ ಬಂಧಿಸಿ ಜೈಲಿಗೆ ಅಟ್ಟುವುದಾಗಿ ಮತದಾರರಿಗೆ ವಾಗ್ದಾನ ನೀಡಲಾಗಿತ್ತು.

ಇಂತಹ ಭರವಸೆಗಳನ್ನೆಲ್ಲ ನೀಡಿ ಮತದಾರರ ಮನ ಗೆದ್ದು ಅಧಿಕಾರಕ್ಕೆ ಬಂದ ಮೋದಿ ಸರ್ಕಾರದ ಸಾಧನೆಗಳನ್ನು 42 ತಿಂಗಳ ನಂತರ ಒರೆಗಲ್ಲಿಗೆ ಹಚ್ಚಿದರೆ, ಈ ನಿಟ್ಟಿನಲ್ಲಿ ಸರ್ಕಾರದ ಸಾಧನೆ ಹೇಳಿಕೊಳ್ಳುವಂತಹದ್ದು ಏನೂ ಇಲ್ಲ ಎಂದು ಭಾಸವಾಗುತ್ತದೆ.

ಕೆಲ ಆದಾಯ ತೆರಿಗೆ ದಾಳಿಗಳು, ಸೋತ ಎದುರಾಳಿಗಳ ವಿರುದ್ಧ ಜಡಿದ ಕೆಲ ಪ್ರಕರಣಗಳು , ‘ತೆರಿಗೆ ಭಯೋತ್ಪಾದನೆ’ಯ ಹೊಸ ವ್ಯವಸ್ಥೆ ಮತ್ತು ಕೆಲ ಮಟ್ಟಿಗೆ ವಶಪಡಿಸಿಕೊಂಡ ಸಂಪತ್ತು ಹೊರತುಪಡಿಸಿದರೆ ಗಮನಾರ್ಹ ಪರಿವರ್ತನೆ ಏನೂ ಕಾಣಲಾರದು. ಸರ್ಕಾರ ಬಂಡವಾಳಶಾಹಿಗಳ ಪರವಾಗಿಯೇ ಇರುವುದಕ್ಕೆ ವಿಜಯ್‌ ಮಲ್ಯ ಪ್ರಕರಣವೇ ಸಾಕ್ಷಿ. ಅವರು ಸುರಕ್ಷಿತವಾಗಿ ಬ್ರಿಟನ್ನಿಗೆ ಪಲಾಯನ ಮಾಡಲು ಅವಕಾಶ ಮಾಡಿಕೊಡಲಾಗಿತ್ತು.

ಗರಿಷ್ಠ ಮುಖ ಬೆಲೆಯ ನೋಟುಗಳ ರದ್ದತಿಯು ದಿಟ್ಟ ನಿರ್ಧಾರವಾಗಿದ್ದರೂ ಕಪ್ಪು ಹಣವನ್ನು ಹೊರಗೆ ತೆಗೆಯುವಲ್ಲಿ ವಿಫಲಗೊಂಡಿತು. ನಗದುರಹಿತ ವಹಿವಾಟನ್ನು ಹೆಚ್ಚಿಸಿದ್ದೇ ಅದರ ಸಾಧನೆಯಾಗಿದೆಯಷ್ಟೆ. ಅಸಂಘಟಿತ ವಲಯ ಮತ್ತು ಸರಕುಗಳ ಪೂರೈಕೆ ಸರಣಿ ವ್ಯವಸ್ಥೆಗೆ ಇದು ಭಾರಿ ಹಾನಿಯನ್ನುಂಟು ಮಾಡಿದೆ. ಮಂದಗತಿಯಲ್ಲಿದ್ದ ಆರ್ಥಿಕತೆಗೆ ಇದು ಇನ್ನಷ್ಟು ಅಡಚಣೆ ಉಂಟು ಮಾಡಿತು. ಜತೆಗೆ ಉದ್ಯೋಗ ಅವಕಾಶಗಳನ್ನೂ ನುಂಗಿ ಹಾಕಿತು. ಜಿಎಸ್‌ಟಿ ಜಾರಿ ಮುಂಚಿನ ದಿನಗಳಲ್ಲಿ ಅತಿ ಸಣ್ಣ ಮತ್ತು ಸಣ್ಣ ಕೈಗಾರಿಕಾ ವಲಯಗಳ ಪ್ರಗತಿಗೂ ಅಡ್ಡಿ ಉಂಟಾಗಿತ್ತು.

ರಾಜಕೀಯ ವಿಸ್ತರಣೆಗೆ ಶಾಶ್ವತವಾಗಿ ತನ್ನೆಲ್ಲ ಗಮನ ಕೇಂದ್ರೀಕರಿಸಿದ್ದ ಸರ್ಕಾರವೊಂದು ತಾನು ಜಾರಿಗೆ ತರಬೇಕಾಗಿದ್ದ ನೀತಿ ನಿರ್ಧಾರಗಳನ್ನು ನಿರ್ಲಕ್ಷಿಸಿರುತ್ತದೆ. ಇದಕ್ಕೆ ಬುಲೆಟ್‌ ರೈಲು ಯೋಜನೆ ಒಂದು ಉತ್ತಮ ಉದಾಹರಣೆಯಾಗಿದೆ. ಈ ರೈಲು ಮಾರ್ಗ ನಿರ್ಮಾಣಕ್ಕೆ ಐದು ವರ್ಷಗಳು ಬೇಕಾಗಿದ್ದರೆ ಅದನ್ನು ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲಿಯೇ ಕೈಗೆತ್ತಿಕೊಳ್ಳಬೇಕಾಗಿತ್ತು.

ಸರ್ಕಾರದ ಅಧಿಕಾರಾವಧಿ ಕೊನೆಗೊಳ್ಳಲು ಬಂದಾಗ ಯೋಜನೆಯ ಪ್ರಗತಿ ಎಲ್ಲರ ಅನುಭವಕ್ಕೆ ಬರುತ್ತಿತ್ತು. ಅಂತಹ ಪ್ರಗತಿ ಕಂಡು ಬರುವುದಕ್ಕೆ ಮುಂದಿನ 18 ತಿಂಗಳ ಸಮಯ ಸಾಲುವುದಿಲ್ಲ. ಸರ್ಕಾರವನ್ನು ಮೂದಲಿಸಲು ವಿರೋಧಿಗಳ ಕೈಗೆ ಪ್ರಬಲ ಅಸ್ತ್ರ ಕೊಟ್ಟಂತೆ ಆಗಿದೆ. ಉತ್ತಮ ಆಲೋಚನೆಯೊಂದು ಆರ್ಥಿಕ ಸಂಕಷ್ಟದ ದಿನಗಳಲ್ಲಿ ವ್ಯರ್ಥವಾದಂತಾಗಿದೆ.

ಅದೇ ಬಗೆಯಲ್ಲಿ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಇನ್ನಷ್ಟು ವಿಲೀನ ಕಾರ್ಯಗತಗೊಳಿಸುವುದು, ಅವುಗಳ ವಸೂಲಾಗದ ಸಾಲದ ಸಮಸ್ಯೆ ಬಗೆಹರಿಸುವುದು, ಮುಂಬೈ ಕರಾವಳಿ ರಸ್ತೆ , ಹೊಸ ವಿಮಾನ ನಿಲ್ದಾಣದಂತಹ ಬೃಹತ್‌ ಮೂಲ ಸೌಕರ್ಯ ಯೋಜನೆಗಳನ್ನು ಇನ್ನೂ ಕೈಗೆತ್ತಿಕೊಳ್ಳಬೇಕಾಗಿದೆಯಷ್ಟೆ. ಯೋಜನೆಗಳನ್ನು ಕಾರ್ಯಗತಗೊಳಿಸುವ ತನ್ನ ಸಾಮರ್ಥ್ಯದ ಬಗ್ಗೆ ಹೆಮ್ಮೆಪಡುವ ಸರ್ಕಾರಕ್ಕೆ ಮುಂಬೈನಲ್ಲಿ ಶಿವಾಜಿ ಸ್ಮಾರಕ ಯೋಜನೆಗೆ ಇನ್ನೂ ಚಾಲನೆ ಸಿಗದಿರುವುದು ಸಾಕಷ್ಟು ಮುಜುಗರ ಉಂಟು ಮಾಡಲಿದೆ.

ರಫೇಲ್‌ ಯುದ್ಧ ವಿಮಾನ ಖರೀದಿ ನಿರ್ಧಾರ ಹೊರತುಪಡಿಸಿದರೆ ರಕ್ಷಣಾ ತಯಾರಿಕೆ ಮತ್ತು ಸ್ವಾಧೀನ ಪ್ರಕ್ರಿಯೆಗಳಲ್ಲಿ ಮತ್ತು ‘ಭಾರತದಲ್ಲಿಯೇ ತಯಾರಿಸಿ’ ಪರಿಕಲ್ಪನೆಯ ಬೃಹತ್‌ ಯೋಜನೆಗಳಲ್ಲಿ ಹೆಚ್ಚಿನ ಪ್ರಗತಿ ಏನೂ ಕಂಡು ಬಂದಿಲ್ಲ. ರಕ್ಷಣಾ ಪಡೆಗಳನ್ನು ಆಧುನೀಕರಣಗೊಳಿಸುವುದಾಗಿ ಸರ್ಕಾರ ಬದ್ಧತೆ ಪ್ರಕಟಿಸಿದ್ದರೂ, ಮೂರು ವರ್ಷಗಳಲ್ಲಿ ಪಡೆದಿರುವ ಶಸ್ತ್ರಾಸ್ತ್ರಗಳನ್ನು ಯುಪಿಎ ಅಧಿಕಾರಾವಧಿಯಲ್ಲಿಯೇ ಖರೀದಿಸಲು ನಿರ್ಧರಿಸಲಾಗಿತ್ತು ಎನ್ನುವುದನ್ನು ಮರೆಯುವಂತಿಲ್ಲ.

ಸೇನಾ ಶಸ್ತ್ರಾಸ್ತ್ರ ಖರೀದಿ ಪ್ರಕ್ರಿಯೆಗೆ ದೀರ್ಘ ಸಮಯ ಹಿಡಿಯುತ್ತದೆ ಎನ್ನುವುದು ನಿಜ. ಆದರೆ, ಸೇನೆಗೆ ಹೊಸ ಬಂದೂಕುಗಳನ್ನು ಖರೀದಿಸುವ ವಿಷಯದಲ್ಲಿ ಆಯ್ಕೆ ಮಾಡಲು ಮೂರುವರೆ ವರ್ಷಗಳನ್ನು ತೆಗೆದುಕೊಂಡಿರುವುದು ತುಂಬ ದೀರ್ಘ ಸಮಯವಾಯಿತು ಎಂದೇ ಹೇಳಬೇಕಾಗುತ್ತದೆ.

ಬ್ಯಾಂಕ್‌ಗಳ ಸುಧಾರಣೆಯಿಂದ ಹಿಡಿದು ಹಣಕಾಸು ಪುನರ್‌ರಚನೆ, ಬುಲೆಟ್‌ ರೈಲಿನಿಂದ ಹಿಡಿದು ನವಿ ಮುಂಬೈ ವಿಮಾನ ನಿಲ್ದಾಣ ನಿರ್ಮಾಣ, ಮಧ್ಯಮ ಗಾತ್ರದ ಸಮರ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸುವ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಎನ್‌ಡಿಎ ಸರ್ಕಾರದ ಮುಂದೆ ಈಗ ತುಂಬ ಕಡಿಮೆ ಸಮಯಾವಕಾಶ ಇದೆ. ಸಾಧಿಸಬೇಕಾದ್ದನ್ನು ಪಟ್ಟು ಹಿಡಿದು ಕಾರ್ಯಗತಗೊಳಿಸಲು ಸೆಣಸುವ ಮತ್ತು ಚುರುಕು ವ್ಯಕ್ತಿತ್ವದ ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಅವಕಾಶಗಳನ್ನು ಅದ್ಹೇಗೆ ಮತ್ತು ಏಕೆ ಕೈಯಿಂದ ಜಾರಿ ಹೋಗಲು ಬಿಟ್ಟರು?

ಇಲ್ಲೊಂದಿಷ್ಟು ಊಹಾಪೋಹಗಳ ಬಗ್ಗೆಯೂ ಬರೆಯಬಹುದು. 2014ರಲ್ಲಿನ ಭರ್ಜರಿ ಗೆಲುವು ಮತ್ತು ಅದರ ಬೆನ್ನಲ್ಲೇ ನಡೆದ ರಾಜ್ಯ ವಿಧಾನಸಭೆ ಚುನಾವಣೆಗಳ ಸತತ ಗೆಲುವುಗಳನ್ನು ಕಂಡಾಗ ಬಿಜೆಪಿಯು ಎರಡನೇ ಬಾರಿಗೂ ಕೇಂದ್ರದಲ್ಲಿ ನಿರಾಯಾಸವಾಗಿ ಗೆಲುವು ಸಾಧಿಸಲಿದೆ ಎಂದೇ ಎಣಿಸಲಾಗಿತ್ತು. ಮೊದಲ ಅಧಿಕಾರಾವಧಿಯಲ್ಲಿ ಬಿಜೆಪಿಯು ಸಣ್ಣ ಪುಟ್ಟ ಪಕ್ಷಗಳೂ ಸೇರಿದಂತೆ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪ್ರತಿಪಕ್ಷಗಳನ್ನು ಬಗ್ಗು ಬಡಿದು, ದೇಶದಾದ್ಯಂತ ಗೆಲುವಿನ ಪತಾಕೆ ಹಾರಿಸಲಿದೆ ಎಂದೇ ಭಾವಿಸಲಾಗಿತ್ತು.

ಪ್ರತಿಪಕ್ಷಗಳು ಸವಾಲು ಒಡ್ಡಲು ಸಾಧ್ಯವೇ ಇಲ್ಲದಂತಹ ಅಧಿಕಾರ ಕೈವಶವಾಗುತ್ತಿದ್ದಂತೆ, ಉಳಿದ ಅಧಿಕಾರಾವಧಿಯಲ್ಲಿ ಜನಪರ ಕೆಲಸ ಮಾಡಲು ಸಾಕಷ್ಟು ಸಮಯಾವಕಾಶ ಇರಲಿದೆ ಎನ್ನುವುದು ಬಿಜೆಪಿಯ ಚಿಂತನೆಯಾಗಿತ್ತು ಎಂದೂ ಭಾವಿಸಬಹುದು. ಪ್ರಭಾವಿ ತಂಡವೊಂದು ಕ್ರಿಕೆಟ್‌ನ ಮೊದಲ ಇನಿಂಗ್ಸ್‌ ಅನ್ನು ಹಗುರವಾಗಿ ಪರಿಗಣಿಸಿ ಎರಡನೆ ಇನಿಂಗ್ಸ್‌ನಲ್ಲಿ ಕಠಿಣ ಪರಿಶ್ರಮಪಡಲು ಇಚ್ಛಿಸಿದಂತೆ ಎರಡನೆ ಬಾರಿಯ ಅಧಿಕಾರದಲ್ಲಿ ಹೆಚ್ಚಿನ ಬೆವರು ಸುರಿಸೋಣ ಎನ್ನುವುದು ಪಕ್ಷದ ನಿಲುವು ಆಗಿರಬಹುದು ಎನ್ನುವ ಭಾವನೆಯನ್ನೂ ಮೂಡಿಸುತ್ತದೆ.

ಅನಿಶ್ಚಿತತೆಯು ಕ್ರಿಕೆಟ್‌ಗಷ್ಟೇ ಸೀಮಿತವಾಗಿರಲಾರದು. ರಾಜಕಾರಣದಲ್ಲಿ ಎಸಗುವ ತಪ್ಪಿಗೆ ಕ್ಷಮೆಯ ಅವಕಾಶ ಇರುವುದಿ‌ಲ್ಲ. ರಾಜಕೀಯವು ಸಂತುಷ್ಟ ಭಾವವನ್ನು ಮೆಚ್ಚಿಕೊಳ್ಳುವುದೂ ಇಲ್ಲ. ಸದ್ಯದ ಆರ್ಥಿಕ ವಿದ್ಯಮಾನಗಳನ್ನೆಲ್ಲ ಎಚ್ಚರಿಕೆಯಿಂದ ಗಮನಿಸಿದರೆ, ನರೇಂದ್ರ ಮೋದಿ ಸರ್ಕಾರದ ಸಾಧನೆಗಳ ಸಂಭ್ರಮವು ಮಸುಕಾಗಿರುವುದನ್ನು ಈ ಪರಿಸ್ಥಿತಿಯು ಇದು ಸಮರ್ಥವಾಗಿ ಬಿಂಬಿಸುತ್ತದೆ ಎಂದೂ ಹೇಳಬಹುದಾಗಿದೆ.

ಲೇಖದ ‘ದಿ ಪ್ರಿಂಟ್‌ ’ ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT