ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವಕ್ಕೆ ಸಮ್ಮಿಶ್ರ ಸರ್ಕಾರಗಳಷ್ಟೇ ಕಂಟಕ ಅಲ್ಲ

Last Updated 24 ಜೂನ್ 2012, 19:30 IST
ಅಕ್ಷರ ಗಾತ್ರ

`ಸಂಸದೀಯ ಪ್ರಜಾಪ್ರಭುತ್ವದ ಮೂಲಭೂತ ತತ್ವಗಳು ಮೂಲೆಗುಂಪಾಗಲು ಮತ್ತು ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳ ಅಧಿಕಾರ ಕೇಂದ್ರಗಳು ದುರ್ಬಲಗೊಳ್ಳುತ್ತಾ ಬರಲು ಸಮ್ಮಿಶ್ರ ಸರ್ಕಾರಗಳು ಕಾರಣ~ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ವಿಷಾದದ ದನಿಯಲ್ಲಿ ಹೇಳಿದ್ದಾರೆ. 

ಕರ್ನಾಟಕ ವಿಧಾನಸಭೆಯ ವಜ್ರಮಹೋತ್ಸವ ಸಮಾರಂಭದಲ್ಲಿ  ನೀಡಿದ ಪ್ರಧಾನ ಭಾಷಣದಲ್ಲಿ ಅವರ ಈ ಅಭಿಪ್ರಾಯ ವ್ಯಕ್ತವಾಗಿದೆ. ಸೂಕ್ಷ್ಮಮನಸ್ಸಿನ ನ್ಯಾಯಮೂರ್ತಿಗಳಿಗೆ ತಾನು ಹೇಳಿದ್ದು ಅತಿಯಾಯಿತು ಎಂದು ಅನಿಸಿತೋ ಏನೋ, `ಪ್ರಧಾನಿ ಮತ್ತು ಮುಖ್ಯಮಂತ್ರಿ ಸ್ಥಾನ ದುರ್ಬಲಗೊಳ್ಳಲು ಅದೊಂದೇ ಕಾರಣ ಅಲ್ಲ~ ಎನ್ನುವ ಸಮಜಾಯಿಷಿ ನೀಡಿ  ಈ ವಿವಾದಾತ್ಮಕ ವಿಷಯವನ್ನು ಬೆಳೆಸಲುಹೋಗದೆ ಅಲ್ಲಿಗೆ ಮುಗಿಸಿಬಿಟ್ಟಿದ್ದರು.

ಬಹಳಷ್ಟು ದೆಹಲಿ ಕೇಂದ್ರಿತ ರಾಜಕೀಯ ಪಂಡಿತರು ಮಾತ್ರವಲ್ಲ ಆಗಾಗ ನಮ್ಮ `ಜನಸಾಮಾನ್ಯರು~ ಕೂಡಾ ರಾಜಕೀಯ ಬಿಕ್ಕಟ್ಟುಗಳ ಸಂದರ್ಭಗಳಲ್ಲಿ ನಿಟ್ಟುಸಿರಿನ ರೂಪದಲ್ಲಿ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೆಲವರು ಇನ್ನೂ ಮುಂದುವರಿದು ` ಸಣ್ಣಪುಟ್ಟ ಪಕ್ಷಗಳದ್ದು ಅತಿಯಾಯಿತು, ಸಮ್ಮಿಶ್ರ ಸರ್ಕಾರಕ್ಕಿಂತ ರಾಷ್ಟ್ರೀಯ ಪಕ್ಷದ ಆಡಳಿತವೇ ಪರಿಹಾರ~ ಎಂದೋ ಇಲ್ಲವೇ `ಬಲಿಷ್ಠ ಹೈಕಮಾಂಡ್ ಬೇಕು~ ಎಂಬ ರಾಜಕೀಯ ಪ್ರತಿಕ್ರಿಯೆಗಳನ್ನು ನೀಡುತ್ತಾರೆ.

ಕೆಲವರು ಇನ್ನಷ್ಟು ಮುಂದೆ ಹೋಗಿ `ತುರ್ತುಪರಿಸ್ಥಿತಿಯ ದಿನಗಳೇ ಚೆನ್ನಾಗಿತ್ತು~ ಎಂಬ ಅತಿರೇಕದ ಪ್ರತಿಕ್ರಿಯೆಯನ್ನೂ ನೀಡುತ್ತಾರೆ. ಇದನ್ನೆಲ್ಲ ಕೇಳಿದಾಕ್ಷಣ `ಹೌದಲ್ಲಾ, ನಮ್ಮ ರಾಜಕೀಯ ವ್ಯವಸ್ಥೆಗೆ ಹಿಡಿದ ರೋಗದ ಮೂಲವೇ ಸಿಕ್ಕಿಬಿಟ್ಟಿತಲ್ಲಾ~ ಎಂದು ಅನಿಸುವುದು ಕೂಡಾ ಸಹಜ. 

 ಇತಿಹಾಸದ ದಾರಿಯಲ್ಲಿ ಸ್ವಲ್ಪ ಹಿಂದಕ್ಕೆ ಹೋಗಿ ಎಪ್ಪತ್ತರ ದಶಕದಲ್ಲಿ ನಡೆದ ರಾಜಕೀಯ ಹೋರಾಟದ ದಿನಗಳನ್ನು ನೆನಪಿಸಿಕೊಳ್ಳೋಣ. ಏಕಪಕ್ಷದ ಆಡಳಿತದ ಅಂತ್ಯವೇ ಅಂದಿನ ರಾಜಕೀಯ ಮತ್ತು ಸಾರ್ವಜನಿಕ ಹೋರಾಟದ ಮುಖ್ಯ ಘೋಷಣೆಯಾಗಿತ್ತಲ್ಲವೇ? ಇಂದಿರಾಗಾಂಧಿ ನಾಯಕತ್ವದಲ್ಲಿ ಸರ್ವಾಧಿಕಾರಿಯ ರೂಪ ಪಡೆದ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿಗಳನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದ್ದುದು ಮಾತ್ರವಲ್ಲ ಸಂವಿಧಾನವನ್ನೇ ತಿರುಚಿ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೊರಟಿತ್ತಲ್ಲವೇ?

ಏಕಪಕ್ಷದ ಈ `ದಾದಾಗಿರಿ~ಯಿಂದಾಗಿ ಸಂವಿಧಾನದ ಆಶಯವಾದ ಒಕ್ಕೂಟ ವ್ಯವಸ್ಥೆಯೇ ಮುರಿದುಬೀಳುತ್ತಿದೆ ಎಂದಲ್ಲವೇ ರಾಜ್ಯ ಸರ್ಕಾರಗಳು ಆರೋಪಿಸುತ್ತಿದ್ದುದು? ಈ ಹೈಕಮಾಂಡ್ (ಇದರ ನಿಜವಾದ ಅರ್ಥ ಏನೆಂದು ಈಗಲೂ ಯಾರಿಗೂ ತಿಳಿದಿಲ್ಲ) ಸಂಸ್ಕೃತಿಯಿಂದಾಗಿ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವವೇ ನಾಶವಾಗಿ ಉಸಿರುಗಟ್ಟಿದ್ದಕ್ಕಲ್ಲವೇ, ಬಾಬು ಜಗಜೀವನ್‌ರಾಂ, ಚಂದ್ರಶೇಖರ್ ಮೊದಲಾದ ಹಿರಿಯ ನಾಯಕರು `ವಿಭೀಷಣ~ರಾಗಿ ಕಾಂಗ್ರೆಸ್ ತೊರೆದು ವಿರೋಧಿಪಾಳಯ ಸೇರಿಕೊಂಡಿದ್ದು? ಈಗ ಒಮ್ಮಿಂದೊಮ್ಮೆಲೇ ಈ ರಾಷ್ಟ್ರೀಯ ಪಕ್ಷಗಳು ಪ್ರಜಾಪ್ರಭುತ್ವದ ರಕ್ಷಕನಂತೆ ಅನಿಸಿಕೊಳ್ಳಲು ಏನು ಕಾರಣ?
ಸಮ್ಮಿಶ್ರ ಸರ್ಕಾರಗಳು ಅಸ್ತಿತ್ವಕ್ಕೆ ಬಂದದ್ದೇ  ಏಕಪಕ್ಷದ ಸ್ವೇಚ್ಛಾಚಾರಕ್ಕೆ ಪ್ರತಿಕ್ರಿಯೆ ರೂಪದಲ್ಲಿ.

ಚುನಾವಣೆಯ ಕಣದಲ್ಲಿ ಪ್ರತ್ಯೇಕವಾಗಿ ನಡೆಸುವ ಹೋರಾಟದ ಮೂಲಕ ಕಾಂಗ್ರೆಸ್ ಪಕ್ಷದ ಆಧಿಪತ್ಯವನ್ನು ಮುರಿಯಲು ಸಾಧ್ಯ ಇಲ್ಲ ಎನ್ನುವ ಜ್ಞಾನೋದಯವೇ 1977ರಲ್ಲಿ ಪ್ರಾರಂಭಗೊಂಡ ಮೈತ್ರಿಕೂಟದ ರಾಜಕೀಯಕ್ಕೆ ಪ್ರೇರಣೆ. ಕಾಂಗ್ರೆಸ್ (ಒ), ಬಿಎಲ್‌ಡಿ,ಜನಸಂಘ ಮತ್ತು ಸೋಷಿಯಲಿಷ್ಟ್ ಪಕ್ಷಗಳು ವಿಲೀನಗೊಂಡು ಜನತಾಪಕ್ಷ ರಚನೆಗೊಂಡ ಕಾರಣ ಶುದ್ಧ ಅರ್ಥದಲ್ಲಿ ಅದನ್ನು ಮೈತ್ರಿಕೂಟ ಎಂದು ಹೇಳಲಾಗುವುದಿಲ್ಲ.

ಆದರೆ ಕಾಂಗ್ರೆಸ್ ಪಕ್ಷದಿಂದ ಹೊರಬಂದ ಜಗಜೀವನ್‌ರಾಂ ಅವರು ಪ್ರಜಾತಾಂತ್ರಿಕ ಕಾಂಗ್ರೆಸ್ ಎಂಬ ಹೊಸ ಪಕ್ಷವನ್ನು ಕಟ್ಟಿಕೊಂಡು ಜನತಾಪಕ್ಷದ ಜತೆ ಸೇರಿಕೊಂಡ ಕಾರಣಕ್ಕೆ ಅದನ್ನು ಮೈತ್ರಿಕೂಟ ಎನ್ನಬಹುದಷ್ಟೆ.

ಆ ಕಾಲದ ಕಾಂಗ್ರೆಸ್ ಪಕ್ಷದ ಸರ್ವಾಧಿಕಾರದ ವಿರುದ್ಧದ ಜನತೆಯ ಸಿಟ್ಟು ಮತ್ತು ಮೈತ್ರಿಕೂಟದ ಪರವಾದ ಜನಾಭಿಪ್ರಾಯ ಹೇಗಿತ್ತೆಂದರೆ ಬಿಹಾರ, ಉತ್ತರಪ್ರದೇಶ,ಪಂಜಾಬ್, ಹಿಮಾಚಲಪ್ರದೇಶ, ಹರ್ಯಾಣ ಮತ್ತು ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಒಬ್ಬ ಅಭ್ಯರ್ಥಿಯೂ ಗೆದ್ದಿರಲಿಲ್ಲ. ಮಧ್ಯಪ್ರದೇಶ ಮತ್ತು ರಾಜಸ್ತಾನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಲಾ ಒಂದು ಸ್ಥಾನ ದಕ್ಕಿತ್ತು. 400 ಸದಸ್ಯರು ಅದೇ ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ್ದರು. ಆ ದಿನದಿಂದಲೇ ರಾಷ್ಟ್ರೀಯ ಪಕ್ಷದ ಆಟ ಮುಗಿದು ಸಮ್ಮಿಶ್ರ ಸರ್ಕಾರದ ಹೊಸ ಶಕೆ ಪ್ರಾರಂಭವಾಗಿತ್ತು.

ಅದರ ನಂತರದ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಪಕ್ಷ 1980 (353ಸ್ಥಾನ) ಮತ್ತು 1984 (415)ರಲ್ಲಿ ಮಾತ್ರ ಸ್ವಂತಬಲದಿಂದ ಸರ್ಕಾರ ರಚನೆಮಾಡುವಷ್ಟು ಬಹುಮತ ಗಳಿಸಿತ್ತು ನಿಜ. ಆದರೆ ಆ ಅವಕಾಶ ಸ್ವಾಭಾವಿಕವಾದ ಜನಾಭಿಪ್ರಾಯದಿಂದ ಒದಗಿಬಂದುದಲ್ಲ. 

ತಮ್ಮ ಆಯ್ಕೆಯೇ ಇಷ್ಟುಬೇಗ ಕೆಟ್ಟುಹೋಯಿತಲ್ಲಾ ಎಂಬ ಜನಾಕ್ರೋಶ 1980ರ ಫಲಿತಾಂಶಕ್ಕೆ ಕಾರಣವಾದರೆ, 1984ರ ದೈತ್ಯಬಹುಮತಕ್ಕೆ ಇಂದಿರಾಗಾಂಧಿ ಹತ್ಯೆಯ ವಿರುದ್ಧ ಭುಗಿಲೆದ್ದ ಅನುಕಂಪದ ಅಲೆ ಕಾರಣ. 1991ರಲ್ಲಿ ರಾಜೀವ್‌ಗಾಂಧಿ ಹತ್ಯೆಯ ನಂತರದ ಅನುಕಂಪದ ಅಲೆಯ ಹೊರತಾಗಿಯೂ ಕಾಂಗ್ರೆಸ್ ಗಳಿಸಿದ್ದು 232 ಸ್ಥಾನಗಳನ್ನು ಮಾತ್ರ. 1984ರ ನಂತರ ಕಾಂಗ್ರೆಸ್ ಪಕ್ಷಕ್ಕೆ ಸ್ವಂತಬಲದಿಂದ ಸರ್ಕಾರ ರಚಿಸುವ ಅವಕಾಶವೇ ಸಿಗಲೇ ಇಲ್ಲ.

ಅದಕ್ಕೆ ಪರ್ಯಾಯ ರೂಪದಲ್ಲಿ ಇನ್ನೊಂದು ರಾಷ್ಟ್ರೀಯ ಪಕ್ಷವಾಗಿ ಭಾರತೀಯ ಜನತಾ ಪಕ್ಷ ಉದಿಸಿಬಂದರೂ ಅದಕ್ಕೆಂದೂ 200ರ ಸಂಖ್ಯೆಯನ್ನೂ ದಾಟಲಾಗಿಲ್ಲ. 1998 ಮತ್ತು 1999ರಲ್ಲಿ ಪಡೆದ ತಲಾ182 ಸ್ಥಾನಗಳೇ ಗರಿಷ್ಠ. ಇವೆಲ್ಲ ಹೇಳುತ್ತಿರುವುದು ದೇಶದ ಮತದಾರರು ರಾಷ್ಟ್ರೀಯ ಪಕ್ಷಗಳಿಂದ ದೂರ ಸರಿಯುತ್ತಿದ್ದಾರೆ ಎಂದಲ್ಲವೇ?

ಪ್ರಜಾಪ್ರಭುತ್ವ ವ್ಯವಸ್ಥೆ ಜನಾಭಿಪ್ರಾಯದ ಬುನಾದಿಯ ಮೇಲೆ ನಿಂತಿರುವಂತಹದ್ದು. ಅಂತಿಮವಾಗಿ ಆಳುವವರು ಯಾರು ಎಂದು ನಿರ್ಧರಿಸುವವರು ಮತದಾರರು. ಇದರಿಂದಾಗಿಯೇ `ಜನ ತಮ್ಮ ಅರ್ಹತೆಗೆ ತಕ್ಕ ಸರ್ಕಾರವನ್ನು ಪಡೆಯುತ್ತಾರೆ~ ಎನ್ನುವ ವ್ಯಂಗ್ಯ ಹುಟ್ಟಿಕೊಂಡಿರುವುದು. ಹೌದು ನಮ್ಮ ಮತದಾರರಲ್ಲಿ ಅಶಿಕ್ಷಿತರು, ಅರೆಶಿಕ್ಷಿತರು, ದುರ್ಬಲರು,ಬಡವರು ಬಹುಸಂಖ್ಯೆಯಲ್ಲಿದ್ದಾರೆ, ಚುನಾವಣೆಯ ಮೇಲೆ ಜಾತಿ, ದುಡ್ಡು ಮತ್ತು ತೋಳ್ಭಲದ ಪ್ರಭಾವ ಕೂಡಾ ಇದೆ.

ಆದರೆ ಈ ವರ್ಗದ ಮತದಾರರೆಲ್ಲರೂ ಕೇವಲ ಪ್ರಾದೇಶಿಕ ಇಲ್ಲವೇ ಸಣ್ಣ ಪಕ್ಷಗಳಿಗೆ ಮತಹಾಕುವವರೆಂದು ಹೇಳಲಾಗುವುದಿಲ್ಲ. ಅವರ ಆಯ್ಕೆ ತಪ್ಪು ಎಂದು ತೀರ್ಪು ನೀಡುವುದೂ ಸರಿಯಾಗಲಾರದು. ಮೈತ್ರಿಕೂಟ ಎನ್ನುವುದು ಪ್ರಜಾಪ್ರಭುತ್ವ ವಿರೋಧಿ ಎಂದು ಷರಾ ಬರೆದು ಮೂಲೆಗೆ ತಳ್ಳಿಬಿಡಲು ಆಗುವುದಿಲ್ಲ. ಇಂತಹ ಒಂದು ಜನಾಭಿಪ್ರಾಯ ರೂಪುಗೊಳ್ಳಲು ಏನು ಕಾರಣ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡಬೇಕು.

ಭಾರತದಲ್ಲಿ ಏಕಶಿಲಾ ರೂಪದ ಸಾಮಾಜಿಕ ವ್ಯವಸ್ಥೆ ಇಲ್ಲ, ನಮ್ಮದು ಬಹುಭಾಷೆ, ಬಹುಜಾತಿ ಮತ್ತು ಬಹುಸಂಸ್ಕೃತಿಯ ದೇಶ. ಇದು `ರಾಷ್ಟ್ರೀಯ~ ಎನ್ನುವ ಪರಿಕಲ್ಪನೆಗೆ ವಿರುದ್ದವಾಗಿರುವಂತಹ ವ್ಯವಸ್ಥೆ . ಇಲ್ಲಿ ಎಲ್ಲವನ್ನೂ ರಾಷ್ಟ್ರೀಯ ದೃಷ್ಟಿಕೋನದಿಂದಲೇ ವ್ಯಾಖ್ಯಾನಿಸಲಿಕ್ಕಾಗುವುದಿಲ್ಲ. ನೆಲ-ಜಲ-ಭಾಷೆಯ ಜತೆ ಭಾವನಾತ್ಮಕ ಸಂಬಂಧ ಹೊಂದಿರುವ ರಾಜ್ಯದ ಒಬ್ಬ ಮತದಾರನಿಗೆ ದೇಶಪ್ರೇಮದ ಜತೆಯಲ್ಲಿ ಪ್ರಾದೇಶಿಕ ಆಶೋತ್ತರಗಳು ಕೂಡಾ ಮುಖ್ಯ. ಇಲ್ಲಿ ಒಬ್ಬ ಮತದಾರ ಏಕಕಾಲಕ್ಕೆ ಭಾರತೀಯನಾಗಿಯೂ ಜತೆಗೆ ಒಬ್ಬ ಕನ್ನಡಿಗ, ತೆಲುಗ, ಬಂಗಾಳಿ, ಮರಾಠಿ, ಮಲೆಯಾಳಿಯಾಗಿಯೂ ಯೋಚಿಸುತ್ತಿರುತ್ತಾನೆ.

ಪ್ರಾದೇಶಿಕ ಅಸ್ಮಿತೆ ಅವನ ಜೀವನಕ್ರಮವಾಗಿರುತ್ತದೆ. ಸತ್ತೆ ಮತ್ತು ಸಂಪತ್ತಿನ ಸಮಾನ ಹಂಚಿಕೆಯ ಆತನ ಬೇಡಿಕೆ ದೆಹಲಿಯಲ್ಲಿ ಕೂತವರಿಗೆ ಪ್ರಾಂತೀಯ ಭಾವನೆ  ಎಂದು ಅನಿಸಿದರೂ ಅದನ್ನು ತನ್ನ ಹಕ್ಕು ಎಂದು ಆತ ತಿಳಿದುಕೊಂಡಿರುತ್ತಾನೆ. ಎಲ್ಲವೂ ದೂರದ ದೆಹಲಿಯಲ್ಲಿ ತೀರ್ಮಾನವಾಗುವುದು ಸ್ವಾಭಿಮಾನಿಯಾದ ಆತನನ್ನು ಕೆರಳಿಸುತ್ತದೆ. ಈ ರೀತಿಯ ಪ್ರಾದೇಶಿಕತೆಯ ಭಾವನೆಯನ್ನು ಕೆಲವು ಪಕ್ಷಗಳು  ರಾಜಕೀಯ ಬಂಡವಾಳವಾಗಿ ಮಾಡಿಕೊಳ್ಳುತ್ತಿರುವುದು ನಿಜ, ಆದರೆ ಇಂತಹ ಪರಿಸ್ಥಿತಿಯ ನಿರ್ಮಾಣಕ್ಕೆ ಯಾರು ಹೊಣೆ?

ಸ್ವಂತ ಬಹುಮತ ಪಡೆದ ಏಕಪಕ್ಷದ ಆಡಳಿತ ಇಲ್ಲವೇ ದ್ವಿಪಕ್ಷೀಯ ರಾಜಕೀಯ ವ್ಯವಸ್ಥೆಯಿಂದ ಪ್ರಜಾಪ್ರಭುತ್ವ ಸುಭದ್ರವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ತುರ್ತುಪರಿಸ್ಥಿತಿಯನ್ನು ಹೇರುವ ಮೂಲಕ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಮೊದಲು ಪ್ರಯತ್ನಿಸಿದ್ದೇ ದೈತ್ಯಬಹುಮತದ  ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷ ಅಲ್ಲವೇ? ಸಾಂವಿಧಾನಿಕ ಹುದ್ದೆಗಳಾದ ರಾಷ್ಟ್ರಪತಿ ಮತ್ತು ರಾಜ್ಯಪಾಲರ ಹುದ್ದೆಗಳ ಗರಿಷ್ಠ ದುರ್ಬಳಕೆ ನಡೆಸಿದ್ದು ಕೂಡಾ ಇದೇ ಪಕ್ಷ.

ಆಪರೇಷನ್ ಕಮಲದಿಂದ ಹಿಡಿದು ಸಭಾಧ್ಯಕ್ಷರ ಸ್ಥಾನದ ದುರುಪಯೋಗದ ವರೆಗೆ ನಡೆದ ಎಲ್ಲ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಗಳಿಗೆ  ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರು ಭಾಷಣ ಮಾಡಿದ ಕರ್ನಾಟಕದ ವಿಧಾನಸಭೆ ಸಾಕ್ಷಿಯಾಗಿದೆ. ಇವೆಲ್ಲವನ್ನೂ ನಡೆಸಿದ್ದು ಇನ್ನೊಂದು ರಾಷ್ಟ್ರೀಯ ಪಕ್ಷವಾದ ಬಿಜೆಪಿ. ಇದಕ್ಕೆಲ್ಲ ಯಾವ ಸಮ್ಮಿಶ್ರ ಸರ್ಕಾರದ ಒತ್ತಡ ಇತ್ತು?

ರಾಷ್ಟ್ರೀಯ ಪಕ್ಷದ ಜನಪ್ರಿಯ ಘೋಷಣೆಯಾದ ಸುಭದ್ರ ಸರ್ಕಾರವೊಂದರಿಂದಲೇ ಪ್ರಜಾಪ್ರಭುತ್ವ ಆರೋಗ್ಯಕರವಾಗಿ ಉಳಿಯುವುದು ಸಾಧ್ಯ ಇಲ್ಲ. ರಾಜಕೀಯ ಸುಭದ್ರತೆಯೊಂದೇ ಉತ್ತಮ ಆಡಳಿತದ ಮಾನದಂಡ ಕೂಡಾ ಅಲ್ಲ. ಸುಭದ್ರ ಸರ್ಕಾರವೆಲ್ಲ ಜನಪರವಾಗಿ ಕೆಲಸ ಮಾಡಿದೆ ಎಂದು ಹೇಳಲಾಗುವುದಿಲ್ಲ.

ಹಾಗೆ ಹೇಳುವುದಾದರೆ ಸ್ವತಂತ್ರಭಾರತದ ಮೊದಲ 25ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಭಾರತ ಅಭಿವೃದ್ಧಿಯ ಪಥದಲ್ಲಿ ದಾಪುಗಾಲು ಹಾಕಬೇಕಾಗಿತ್ತಲ್ಲವೇ? ಇದಕ್ಕೆ ವಿರುದ್ದವಾಗಿ ಅಧಿಕಾರ ಉಳಿಸಿಕೊಳ್ಳಲು ಸಣ್ಣ ಪಕ್ಷಗಳ ಬೆಂಬಲವನ್ನು ನಂಬಲೇಬೇಕಾದ ಅಭದ್ರ ರಾಜಕೀಯ ವಾತಾವರಣದಲ್ಲಿಯೂ ಜನಪರವಾಗಿ ಆಡಳಿತ ನಡೆಸಿದ ಸರ್ಕಾರಗಳಿವೆ.

1983ರಿಂದ 1985ರ ವರೆಗಿನ ರಾಮಕೃಷ್ಣ ಹೆಗಡೆ  ನೇತೃತ್ವದ ಕರ್ನಾಟಕ ಸರ್ಕಾರ 18 ಸದಸ್ಯ ಬಲದ ಬಿಜೆಪಿ ಬೆಂಬಲವನ್ನು ನೆಚ್ಚಿಕೊಂಡಿತ್ತು. ಅನಿಶ್ಚಿತ ರಾಜಕೀಯದ ನಡುವೆಯೂ ಆ ಎರಡು ವರ್ಷಗಳ ಅವಧಿಯಲ್ಲಿ ನೀಡಿದ ಉತ್ತಮ ಆಡಳಿತವನ್ನು ಮಧ್ಯಂತರ ಚುನಾವಣೆಯಲ್ಲಿ ಬಹುಮತ ಪಡೆದ ನಂತರ ನೀಡಲು ಹೆಗಡೆಯವರಿಗೆ ಸಾಧ್ಯವಾಗಲಿಲ್ಲ ಎನ್ನುವುದು ಗಮನಾರ್ಹ. ಯುಪಿಎ ಮೊದಲ ಅವಧಿಯಲ್ಲಿ ಎಡಪಕ್ಷಗಳ ಬೆಂಬಲವನ್ನು ನಂಬಿಕೊಂಡಿತ್ತು.

ಆ ದಿನಗಳಲ್ಲಿ ದಿನನಿತ್ಯದ ಆಡಳಿತದಲ್ಲಿ ಎಡಪಕ್ಷಗಳು ನಿರಂತರವಾಗಿ ಮಾಡುತ್ತಿದ್ದ ಮಧ್ಯಪ್ರವೇಶ `ಬ್ಲಾಕ್‌ಮೇಲ್~ ಎಂದು ಅನಿಸಿದ್ದು ನಿಜ. ಆದರೆ ಆ ಒತ್ತಡದ ರಾಜಕೀಯದಿಂದಾಗಿಯೇ ನಮ್ಮ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ವಿಮಾ ಕಂಪೆನಿಗಳು ಇನ್ನೂ ಅಸ್ತಿತ್ವ ಉಳಿಸಿಕೊಂಡಿವೆ ಎಂಬುದನ್ನು ಮರೆಯುವುದು ಹೇಗೆ? ಕಾಂಗ್ರೆಸ್ ಅಂದುಕೊಂಡಂತೆ ಖಾಸಗೀಕರಣ ನಡೆದುಹೋಗಿದ್ದರೆ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಸಿಕ್ಕಿ ದಿವಾಳಿಯಾದ ಅಮೆರಿಕಾ ಬ್ಯಾಂಕುಗಳ ಸ್ಥಿತಿ ನಮ್ಮ ಬ್ಯಾಂಕು ಮತ್ತು ವಿಮಾಕಂಪೆನಿಗಳಿಗೂ ಬರುತ್ತಿತ್ತು.

ವಿರೋಧಪಕ್ಷಗಳು ಆಂತರಿಕ ಬಿಕ್ಕಟ್ಟಿಗೆ ಸಿಕ್ಕಿ ನಿಷ್ಕ್ರೀಯವಾಗಿರುವ ಈಗಿನ ದಿನಗಳಲ್ಲಿ ಆಂತರಿಕವಾದ ಇಂತಹ ಒತ್ತಡ-ಒತ್ತಾಯಗಳ ರಾಜಕೀಯವೇ  ಎಷ್ಟೋ ಬಾರಿ ರಾಷ್ಟ್ರೀಯ ಪಕ್ಷಗಳು ಜನಪರವಾದ ಆಡಳಿತ ನೀಡಲು ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಂಡು ಹೋಗಲು ಕಾರಣವಾಗುತ್ತಿದೆ.  ಸಣ್ಣ ಪಕ್ಷಗಳ ಚೌಕಾಶಿ ರಾಜಕಾರಣವೇ ರಾಜಕೀಯ ಬಿಕ್ಕಟ್ಟುಗಳಿಗೆ ಕಾರಣ ಎಂದು ಮೇಲ್ನೋಟಕ್ಕೆ ಅನಿಸಿದರೂ ಅದರ ಆಳದಲ್ಲಿ ರಾಷ್ಟ್ರೀಯ ಪಕ್ಷಗಳು ನಡೆಸುವ ಒಳ ಆಟಗಳಿರುತ್ತವೆ ಎನ್ನುವುದನ್ನು ಮರೆಯಬಾರದು.

ಮಮತಾ ಬ್ಯಾನರ್ಜಿ ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಎಡಪಕ್ಷಗಳ ಕಡೆ ಕಣ್ಣುಮಿಟುಕಿಸುವುದು, ಮಾಯಾವತಿಯವರನ್ನು ಹಣಿಯಲು ಮುಲಾಯಂಸಿಂಗ್ ಜತೆ ಒಳಒಪ್ಪಂದ ಮಾಡಿಕೊಳ್ಳುವುದು, ಪಿಡಿಪಿ ಬೇಡ ಎಂದಾದರೆ ನ್ಯಾಷನಲ್ ಕಾನ್‌ಫರೆನ್ಸ್ ಪಕ್ಷವನ್ನು ಸೇರಿಸಿಕೊಳ್ಳುವುದು...ಹೀಗೆ ಸಣ್ಣ ಪಕ್ಷಗಳ ನಡುವಿನ ಭಿನ್ನಮತದ ಬೆಂಕಿಗೆ ಗಾಳಿಹಾಕುತ್ತಾ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಆಟವನ್ನು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮಾಡುತ್ತಲೇ ಬಂದಿವೆ.

ಸಣ್ಣಪಕ್ಷಗಳಿಗೆ ಬುದ್ಧಿಹೇಳುವ ಮೊದಲು ಈ ರಾಷ್ಟ್ರೀಯ ಪಕ್ಷಗಳು ತಮ್ಮ ನಡತೆಯನ್ನು ತಿದ್ದಿಕೊಳ್ಳಬೇಕು. ಪ್ರಜಾಪ್ರಭುತ್ವದ ರಕ್ಷಣೆಯ ದೊಡ್ಡಭಾರ ದೊಡ್ಡಪಕ್ಷಗಳ ಹೆಗಲ ಮೇಲೂ ಇದೆ.

(ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT