ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಣವ್‌ದಾ ಹೇಳಿದ್ದಕ್ಕಿಂತ ಬಚ್ಚಿಟ್ಟಿದ್ದೇ ಹೆಚ್ಚು

Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಐದು ದಶಕಗಳ ರಾಜಕೀಯ ಜೀವನವು, ಅವರ ಜತೆ ವಾಗ್ವಾದದಲ್ಲಿ ಜಯ ಗಳಿಸಲು ಯಾರೊಬ್ಬರಿಗೂ ಸಾಧ್ಯವಿಲ್ಲದಿರುವುದನ್ನು ಸ್ಪಷ್ಟಪಡಿಸುತ್ತದೆ. ಇದಕ್ಕೆ ಅವರು ತಮ್ಮ ಸೋಲನ್ನು ಒಪ್ಪಿಕೊಳ್ಳುವ ಜಾಯಮಾನದವರಲ್ಲ ಎನ್ನುವುದು ಮುಖ್ಯವಲ್ಲ. ರಾಜಕೀಯ ಇತಿಹಾಸ ಮತ್ತು ಬೆಳವಣಿಗೆಗಳ ಬಗ್ಗೆ ಅವರಿಗೆ ಇರುವ ಅಗಾಧ ಪರಿಜ್ಞಾನ, ಸಂವಿಧಾನ ಮತ್ತು ಆಡಳಿತದಲ್ಲಿನ ಪ್ರತಿಯೊಂದು ಸೂಕ್ಷ್ಮ ಸಂಗತಿಗಳ ಬಗ್ಗೆ ಅವರಿಗೆ ಅಪಾರ ಅನುಭವ ಇದೆ. ಜತೆಗೆ ತಮ್ಮ ಹಲವು ದಶಕಗಳ ರಾಜಕೀಯ ಬದುಕಿನ ಉದ್ದಕ್ಕೂ ಅವರು ಇತರರ ಜತೆ ಬೆಳೆಸಿಕೊಂಡು ಬಂದಿರುವ ಸದ್ಭಾವನೆಯೇ ಇದಕ್ಕೆ ಕಾರಣ. ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡೇ ನಾನು ಅವರ ಇತ್ತೀಚಿನ ಕೃತಿ ‘ದಿ ಕೊಅಲಿಷನ್‌ ಇಯರ್ಸ್‌’ನಲ್ಲಿ ಇರುವ ವಿವರಗಳ ಬಗ್ಗೆ ಅವರ ಜೊತೆ ವಾದ ಮಾಡಬೇಕು ಎಂದು ಭಾವಿಸುತ್ತೇನೆ.

ಜವಾಹರಲಾಲ್‌ ನೆಹರು ಅವರು ‌ಅಧಿಕಾರಕ್ಕೆ ಬರುವ ಮೊದಲೇ ತಮ್ಮ ಜೀವನಾನುಭವ ಕುರಿತು ಸಾಕಷ್ಟು ಬರೆದಿದ್ದರು. ಪ್ರಧಾನಿ ಹುದ್ದೆಯಲ್ಲಿ ಇರುವಾಗಲೇ ಅವರು ಮೃತಪಟ್ಟಿದ್ದರು. ಅಲ್ಲಿಂದಾಚೆಗೆ ಪಿ. ವಿ. ನರಸಿಂಹರಾವ್‌ ಮತ್ತು ಐ.ಕೆ. ಗುಜ್ರಾಲ್‌ ಹೊರತುಪಡಿಸಿ ರಾಜಕೀಯದಲ್ಲಿನ ಉನ್ನತ ಮುಖಂಡರು ತಮ್ಮ ಜೀವನಚರಿತ್ರೆಯನ್ನು ಅಕ್ಷರ ರೂಪದಲ್ಲಿ ದಾಖಲಿಸಿರುವುದು ತುಂಬ ಅಪರೂಪ. ಅವರಲ್ಲಿ ಕೆಲವರಿಗೆ ಸಮಯಾವಕಾಶ ಮತ್ತು ಬರೆಯುವ ಉತ್ಸಾಹ ಇದ್ದಿರಲಿಲ್ಲ, ಇನ್ನೂ ಕೆಲವರಿಗೆ ಕಥೆ ಹೇಳಲು ಟಿಪ್ಪಣಿ ಬರೆದಿಟ್ಟುಕೊಳ್ಳುವ ವ್ಯವಧಾನವಾಗಲಿ, ಪಾಂಡಿತ್ಯವಾಗಲಿ ಇದ್ದಿರಲಿಲ್ಲ. ಸದ್ಯಕ್ಕೆ ಡಾ. ಮನಮೋಹನ್ ಸಿಂಗ್‌ ಅವರಿಗೂ ಈ ಮಾತು ಕೆಲಮಟ್ಟಿಗೆ ಅನ್ವಯಿಸುತ್ತದೆ.

ಸಾರ್ವಜನಿಕ ಬದುಕಿನಲ್ಲಿ ಇರುವ ಅನೇಕರು ತಾವು ಕಂಡ ವಾಸ್ತವ ಸಂಗತಿಗಳನ್ನು ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರೆ. ರಾಜಕೀಯದಲ್ಲಿ ತಾವು ಇನ್ನೂ ಚಲಾವಣೆಯಲ್ಲಿ ಇದ್ದೇವೆ ಎಂದೇ ಅವರೆಲ್ಲ ಭಾವಿಸಿರುತ್ತಾರೆ.

ಮುಖರ್ಜಿ, ಪ್ರಣವ್‌ದಾ ಅಥವಾ ದಾದಾ ಹೀಗೆ ಬೇರೆ, ಬೇರೆ ಹೆಸರಿನಿಂದ ಗುರುತಿಸಿಕೊಳ್ಳುವ ಪ್ರಣವ್‌ ಮುಖರ್ಜಿ ಇದುವರೆಗೆ ಮೂರು ಕೃತಿಗಳನ್ನು ಹೊರ ತಂದಿರುವುದು ಪ್ರಶಂಸನೀಯ. ರಾಷ್ಟ್ರಪತಿ ಅಧಿಕಾರಾವಧಿಯಲ್ಲಿನ ನಾಲ್ಕನೇ ಕೃತಿಯೂ ಮುಂದೆ ಪ್ರಕಟಗೊಳ್ಳಲಿದೆ. ಇವುಗಳು ನಮ್ಮ ರಾಜಕೀಯ ಇತಿಹಾಸವನ್ನು ಅದರಲ್ಲೂ ಮುಖ್ಯವಾಗಿ 1984ರಲ್ಲಿ ಇಂದಿರಾ ಗಾಂಧಿ ಅವರ ಹತ್ಯೆ ನಡೆದ ನಂತರ ಸಾರ್ವಜನಿಕವಾಗಿ ಹೆಚ್ಚು ತೆರೆದುಕೊಂಡ ರಾಜಕೀಯ ವಿದ್ಯಮಾನಗಳನ್ನು ವ್ಯವಸ್ಥಿತವಾಗಿ ದಾಖಲಿಸುವ ಪ್ರಮುಖ ಕೃತಿಗಳಾಗಿವೆ.

ಘಟನಾವಳಿಗಳನ್ನು ಕರಾರುವಾಕ್ಕಾಗಿ ದಾಖಲಿಸುವಲ್ಲಿ ಪ್ರಣವ್‌ದಾ ಅವರಿಗೆ ಬೇರೆ ಯಾರೂ ಸರಿಸಾಟಿ ಇಲ್ಲ. ದೇಶಿ ರಾಜಕಾರಣ ಮತ್ತು ಆಡಳಿತಕ್ಕೆ ಸಂಬಂಧಿಸಿದಂತೆ ಈ ಕೃತಿಗಳು ಅಮೂಲ್ಯವಾದವು. ಆದರೆ, ಘಟನಾವಳಿಗಳ ಮೇಲೆ ಹೆಚ್ಚು ಬೆಳಕು ಚೆಲ್ಲುವುದರ ಬದಲಿಗೆ ಮರೆಮಾಚುವ, ಅನೇಕ ತಿರುವು ಪಡೆದುಕೊಂಡ ವಿದ್ಯಮಾನಗಳನ್ನು ಸಾದ್ಯಂತವಾಗಿ ವಿವರಿಸುವ ಬದಲಿಗೆ ಬರೀ ಮೇಲ್ಮಟ್ಟದಲ್ಲಿಯೇ ವಿವರ ನೀಡಿರುವುದು ಇವುಗಳ ಮಿತಿಯಾಗಿದೆ.

ಮೊದಲ ಎರಡು ಕೃತಿಗಳು ಪ್ರಕಟಗೊಂಡಾಗ ಪ್ರಣವ್‌ ಅವರು ಇನ್ನೂ ರಾಷ್ಟ್ರಪತಿ ಹುದ್ದೆಯಲ್ಲಿ ಇದ್ದರು. ಹೀಗಾಗಿ ಹೆಚ್ಚು ವಿವರಗಳನ್ನು ನೀಡದಿರುವುದನ್ನು ಅರ್ಥೈಸಿಕೊಳ್ಳಬಹುದು. ಕೆಲ ಸೂಕ್ಷ್ಮ ವಿಚಾರಗಳ ಬಗ್ಗೆ ಬರೆಯದಿರುವುದು ಅಥವಾ ಬರವಣಿಗೆಯಲ್ಲಿ ಪರೋಕ್ಷವಾಗಿ ಮಾತ್ರ ಸುಳಿವು ನೀಡುವುದು ರಾಷ್ಟ್ರಪತಿ ಹುದ್ದೆಯ ಘನತೆ ದೃಷ್ಟಿಯಿಂದಲೂ ಸಮರ್ಥನೀಯವಾಗಿದೆ. ಇಂದಿರಾ ನಂತರ ತಮ್ಮನ್ನು ಪ್ರಧಾನಿ ಹುದ್ದೆಗೆ ಪರಿಗಣಿಸುವ ಬದಲಿಗೆ ರಾಜೀವ್‌ ಗಾಂಧಿ ಅವರನ್ನು ಆಯ್ಕೆ ಮಾಡಿದ ಘಟನೆ ಕುರಿತು ಅವರು ತುಂಬ ಸೂಕ್ಷ್ಮವಾಗಿ ತಮ್ಮ ಅಸಮಾಧಾನ ದಾಖಲಿಸಿದ್ದಾರೆ.

ಈ ಮೂರನೇ ಕೃತಿಯಲ್ಲಿ ಅಂತಹ ಸಬೂಬು ಅಥವಾ ಸಮರ್ಥನೆಯ ಅಗತ್ಯ ಉದ್ಭವಿಸುವುದಿಲ್ಲ. ಆದರೆ, ಕೃತಿಯಲ್ಲಿ ಪ್ರಣವ್‌ ಅವರು ಸಂದಿಗ್ಧತೆಯಿಂದಲೇ ಅನೇಕ ವಿವರಗಳನ್ನು ದಾಖಲಿಸಿರುವುದು ಕಂಡು ಬರುತ್ತದೆ. ‘ಯುಪಿಎ’ದ ದಶಕದ ಅಧಿಕಾರಾವಧಿಯಲ್ಲಿ ಹಲವಾರು ವಿವಾದಾತ್ಮಕ ವಿಷಯ ಮತ್ತು ನಿರ್ಧಾರ ಕೈಗೊಂಡ ಸಂದರ್ಭಗಳಲ್ಲಿ ಅವರು ಸ್ವಯಂ ಪ್ರಶಂಸೆ ಮಾಡಿಕೊಂಡಿರುವುದು ಮತ್ತು ಸಂಪುಟದ ಸಹೋದ್ಯೋಗಿಗಳ ಬಗ್ಗೆ ಕೊಂಕು ನುಡಿದಿರುವುದು ಈ ಕೃತಿಯಲ್ಲಿ ಸ್ಪಷ್ಟಗೊಂಡಿದೆ.

ಪ್ರಣವ್‌ದಾ ಅವರಿಂದ ಹೆಚ್ಚಿನ ಸ್ಪಷ್ಟತೆ ಮತ್ತು ಬಿಚ್ಚು ಮನಸ್ಸನ್ನು ನಿರೀಕ್ಷಿಸಲಾಗಿತ್ತು ಎಂದೇ ನಾನಿಲ್ಲಿ ಹೇಳಲು ಬಯಸುತ್ತೇನೆ. ಅವರ ತಿಳಿವಳಿಕೆ ಮತ್ತು ಸಾಮರ್ಥ್ಯದ ಬಗ್ಗೆ ಅಪಾರ ಗೌರವ ಭಾವನೆ ಇಟ್ಟುಕೊಂಡೇ ನಾನು ಈ ಮಾತು ಹೇಳುತ್ತಿರುವೆ.

‘ಯುಪಿಎ’ದ 10 ವರ್ಷಗಳ ಅಧಿಕಾರಾವಧಿಯಲ್ಲಿ ಪ್ರಣವ್‌ದಾ ಅವರು ಹೆಚ್ಚು ಸ್ಪಷ್ಟ ಧೋರಣೆ ತಳೆಯಬೇಕಾಗಿದ್ದ ಸಂದರ್ಭಗಳನ್ನು ನಾನು ಇಲ್ಲಿ ಪಟ್ಟಿ ಮಾಡಿರುವೆ. ಸೋನಿಯಾ ಗಾಂಧಿ ಅವರು ಪ್ರಧಾನಿ ಹುದ್ದೆಗೆ ಇವರ ಬದಲಿಗೆ ಮನಮೋಹನ್‌ ಸಿಂಗ್‌ ಅವರನ್ನು ಆಯ್ಕೆ ಮಾಡಿಕೊಂಡಿದ್ದು ಏಕೆ. ಅದಕ್ಕೆ ಇವರು ಸಹಕರಿಸಿದ್ದು ಹೇಗೆ. ಆರಂಭದಲ್ಲಿ ಇವರಿಗೆ ಹಣಕಾಸು ಖಾತೆ ನೀಡದಿರಲು ಕಾರಣವೇನು. ಐದು ವರ್ಷಗಳ ನಂತರ ಇವರು ಆ ಹುದ್ದೆ ಒಪ್ಪಿಕೊಂಡಿದ್ದೇಕೆ. ಈ ಬಗ್ಗೆ ಅವರೇಕೆ ಗೊಂದಲ ಮೂಡಿಸಿದ್ದರು. ರಾಷ್ಟ್ರಪತಿ ಹುದ್ದೆಗೆ ಹಮಿದ್‌ ಅನ್ಸಾರಿ ಬದಲಿಗೆ ತಮ್ಮನ್ನೇ ಆಯ್ಕೆ ಮಾಡುವಂತೆ ಸೋನಿಯಾ ಗಾಂಧಿ ಅವರಿಗೆ ಅನಿವಾರ್ಯತೆ ಸೃಷ್ಟಿಸಿದ್ದು ಹೇಗೆ, ಹಣಕಾಸು ಸಚಿವರಾಗಿದ್ದಾಗ ವೊಡಾಫೋನ್‌ಗೆ ಸಂಬಂಧಿಸಿದಂತೆ ಪೂರ್ವಾನ್ವಯಗೊಳಿಸಿ ಜಾರಿಗೆ ತಂದಿದ್ದ ತೆರಿಗೆ ಕಾಯ್ದೆ ತಿದ್ದುಪಡಿ ಸಮರ್ಥಿಸಿಕೊಂಡಿದ್ದು ಹೇಗೆ ಎನ್ನುವ ಪ್ರಶ್ನೆಗಳಿಗೆಲ್ಲ ಅವರು ಸಂದೇಹಕ್ಕೆ ಎಡೆ ಇಲ್ಲದಂತೆ ಉತ್ತರ ನೀಡಬೇಕಾಗಿತ್ತು.

ಕೃತಿಯಲ್ಲಿ ಪ್ರಣವ್‌ ಅವರು ಈ ಎಲ್ಲ ಸಂಗತಿಗಳನ್ನು ಉಲ್ಲೇಖಿಸಿದ್ದಾರೆ. ಆದರೆ, ಅನೇಕ ಮಾಹಿತಿಗಳನ್ನು ಮುಚ್ಚಿಟ್ಟಿದ್ದಾರೆ. ತಮಗೆ ಹಣಕಾಸು ಸಚಿವರಾಗುವ ಇಷ್ಟ ಇಲ್ಲದಿರುವುದನ್ನು 2004ರಲ್ಲಿ ತಾವು ಸೋನಿಯಾ ಗಾಂಧಿ ಗಮನಕ್ಕೆ ತಂದಿರುವುದನ್ನು ಹೇಳಿಕೊಂಡಿದ್ದಾರೆ. ಹಾಗಿದ್ದರೆ, 2009ರಲ್ಲಿ ಅದೇ ಹುದ್ದೆಯನ್ನು ಒಪ್ಪಿಕೊಂಡಿದ್ದೇಕೆ. ಆರ್ಥಿಕ ವಿಷಯಗಳ ಬಗ್ಗೆ ಮನಮೋಹನ್‌ ಸಿಂಗ್‌ ಮತ್ತು ತಾವು ಭಿನ್ನ ಆಲೋಚನೆ ಹೊಂದಿರುವುದರಿಂದ 2004ರಲ್ಲಿ ತಮಗೆ ಹಣಕಾಸು ಖಾತೆ ಬೇಡ ಎಂದು ನಿರಾಕರಿಸಿದ್ದೆ ಎಂದು ಹೇಳಿದ್ದಾರೆ. ಕೃತಿಯಲ್ಲಿನ ಪ್ರಣವ್‌ ಅವರ ಅನೇಕ ಹೇಳಿಕೆಗಳು ಕೂಡ ಅವರ ಆರ್ಥಿಕ ದೃಷ್ಟಿಕೋನವು ಮನಮೋಹನ್‌ ಸಿಂಗ್‌ ಅವರಿಗಿಂತ ಭಿನ್ನವಾಗಿರುವುದನ್ನು ಸೂಚಿಸುತ್ತದೆ. ಆರ್ಥಿಕತೆಗೆ ಸಂಬಂಧಿಸಿದಂತೆ ಪಿ. ಚಿದಂಬರಂ ಅವರ ಜತೆ ಹೊಂದಿರುವ ಭಿನ್ನಾಭಿಪ್ರಾಯದ ಬಗ್ಗೆಯೂ ಸಂಕ್ಷಿಪ್ತ ವಿವರಣೆಯನ್ನಷ್ಟೇ ನೀಡಿದ್ದಾರೆ.

‘ನಾನೊಬ್ಬ ಸಂಪ್ರದಾಯವಾದಿ. ಸುಧಾರಣೆಗಳು ನಿರಂತರ ಪ್ರಕ್ರಿಯೆಯಾಗಿವೆ. ಅರ್ಥ ವ್ಯವಸ್ಥೆಯು ಎಲ್ಲರನ್ನೂ ಒಳಗೊಂಡಂತೆ ಕ್ರಮೇಣ ಬದಲಾಗಬೇಕು. ಅದರ ಮೇಲೆ ನಿಯಂತ್ರಣ ಇರಬೇಕು ಎನ್ನುವ ಧೋರಣೆ ನನ್ನದಾಗಿತ್ತು. ಪಿ. ಚಿದಂಬರಂ ಅವರು ಹೆಚ್ಚು ಉದಾರವಾದಿ ಮತ್ತು ಮಾರುಕಟ್ಟೆ ಪರ ಒಲವು ಹೊಂದಿದ್ದ ಆರ್ಥಿಕ ತಜ್ಞರಾಗಿದ್ದರು’ ಎಂದು ಬರೆದುಕೊಂಡಿರುವುದು ಪ್ರಣವ್‌ ಅವರ ವಿರೋಧಾಭಾಸದ ಸ್ವಭಾವಕ್ಕೆ ಉತ್ತಮ ನಿದರ್ಶನವಾಗಿದೆ. ವೊಡಾಫೋನ್‌ ಪ್ರಕರಣದಲ್ಲಿ ತಾವು ಪೂರ್ವಾನ್ವಯಗೊಳಿಸುವ ತೆರಿಗೆ ಜಾರಿಗೆ ಒಲವು ಹೊಂದಿದ್ದೆ ಎಂದು ಹೇಳಿಕೊಂಡಿದ್ದಾರೆ.

ಆರ್ಥಿಕ ವಿಷಯಗಳಲ್ಲಿ ಮನಮೋಹನ್‌ ಸಿಂಗ್ ಮತ್ತು ಪಿ. ಚಿದಂಬರಂ ಅವರ ಜತೆ ತಮಗೆ ಮೂಲಭೂತವಾಗಿ ಭಿನ್ನಾಭಿಪ್ರಾಯಗಳು ಇದ್ದವು ಎಂದು ಹೇಳಿಕೊಂಡಿದ್ದಾರೆ. ಆದಾಗ್ಯೂ, ಐದು ವರ್ಷಗಳ ನಂತರ ಹಣಕಾಸು ಸಚಿವ ಹುದ್ದೆಯನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತಾರೆ. ಹಣಕಾಸು ಖಾತೆಯಲ್ಲಿನ ಇವರ ಅಧಿಕಾರಾವಧಿಯಲ್ಲಿ ದೇಶಿ ಆರ್ಥಿಕತೆಯ ಬೆಳವಣಿಗೆ ಕುಂಠಿತಗೊಂಡಿತು, ಆನಂತರ ಕುಸಿತದ ಹಾದಿಯಲ್ಲಿ ಸಾಗಿತು, ಅಲ್ಲಿಂದಾಚೆಗೆ ಚೇತರಿಕೆಯ ಹಾದಿಗೆ ಮರಳಲೇ ಇಲ್ಲ.

ಆರ್ಥಿಕ ಸುಧಾರಣೆಗೆ ಇವರು ಕೈಗೊಂಡ ಕ್ರಮಗಳೆಲ್ಲ ಅಪೂರ್ಣವಾಗಿಯೇ ಉಳಿದವು. ಅಂದಿನ ಆರ್‌ಬಿಐ ಗವರ್ನರ್‌ ಡಿ. ಸುಬ್ಬರಾವ್ ಜತೆಗಿನ ಭಿನ್ನಾಭಿಪ್ರಾಯಗಳನ್ನು ಮುಚ್ಚಿಡಲು ಅವರು ಪ್ರಯತ್ನಿಸಿಲ್ಲ. ಹಣಕಾಸು ಸಚಿವಾಲಯದಲ್ಲಿಯೇ ಎಲ್ಲ ನಿಯಂತ್ರಣ, ಅಧಿಕಾರ ಇರಬೇಕು ಎನ್ನುವುದು ಅವರ ಇಚ್ಛೆಯಾಗಿತ್ತು. ಹೀಗಾಗಿ ಹಣಕಾಸು ಮತ್ತು ಆರ್ಥಿಕ ನಿಯಂತ್ರಣ ಸಂಸ್ಥೆಗಳ ನಡುವೆ ಅಧಿಕಾರದ ಸಮತೋಲನ ತಪ್ಪಿತು. ಪ್ರಣವ್‌ ಅವರ ಈ ಧೋರಣೆಗೆ ಮನಮೋಹನ್‌ ಸಿಂಗ್‌ ಅವರ ಸಮ್ಮತಿ ಇದ್ದಿರಲಿಲ್ಲ. ಆದರೂ ಪ್ರಣವ್‌ ತಮ್ಮ ಪಟ್ಟು ಬಿಟ್ಟಿರಲಿಲ್ಲ.

ಈ ಅವಧಿಯಲ್ಲಿನ ಪ್ರಮುಖ ಘಟನೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲೂ ಅವರು ಹಿಂದೇಟು ಹಾಕಿದ್ದಾರೆ. ‘2ಜಿ’ ಹಗರಣ ಕುರಿತು ಹಣಕಾಸು ಸಚಿವಾಲಯ ಮತ್ತು ಪ್ರಧಾನಿ ಕಚೇರಿ ಮಧ್ಯೆ ನಡೆದ ಪ್ರಹಸನಗಳ ಬಗ್ಗೆ ಅವರು ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ. 278 ಪುಟಗಳನ್ನು ಸ್ವತಃ ಪ್ರಣವ್‌ ಅವರೇ ಬರೆದಿದ್ದಾರೆ ಎಂದು ನಾನು ನಂಬುವುದಿಲ್ಲ. ಹಣಕಾಸು ಸಚಿವರಾಗಿದ್ದಾಗ ಕಪ್ಪು ಹಣ ವಿವಾದಕ್ಕೆ ಸಂಬಂಧಿಸಿದಂತೆ ಚಳವಳಿ ಆರಂಭಿಸಲಿದ್ದ ಬಾಬಾ ರಾಮದೇವ್‌ ಅವರನ್ನು ಭೇಟಿಯಾಗಿ ಮನವೊಲಿಸಲು ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಅತಿ ದೊಡ್ಡ ತಪ್ಪು ಎಸಗಿರುವುದರ ಕುರಿತು ಈ ಕೃತಿಯಲ್ಲಿ ಯಾವುದೇ ಉಲ್ಲೇಖ ಇಲ್ಲ. ಅಂದಿನ ದಿನಗಳಲ್ಲಿ ಯುಪಿಎ ಸರ್ಕಾರದ ಅತಿದೊಡ್ಡ ಅವಮಾನಕರ ಘಟನೆ ಅದಾಗಿತ್ತು.

ಘಟನಾವಳಿಗಳ ಬಗ್ಗೆ ಪ್ರಣವ್‌ ಬರೆದಿರುವುದನ್ನು ಓದಿದಾಗ, ಮೇಲ್ನೋಟಕ್ಕೆ ಭರ್ಜರಿ ಯಶಸ್ಸಿನಂತೆ ಕಾಣುವ ಅವರ ರಾಜಕೀಯ ವೃತ್ತಿ ಜೀವನವು ಇನ್ನೊಂದೆಡೆ ವಿರೋಧಾಭಾಸದ ಚಿತ್ರಣ ನೀಡುತ್ತದೆ. ಹಲವಾರು ಸಂದರ್ಭಗಳಲ್ಲಿ ಅವರಿಗೆ ಸಿಗಬೇಕಾದ ಮನ್ನಣೆಯನ್ನು ನಿರಾಕರಿಸಲಾಗಿತ್ತು. ಇಂದಿರಾ ಗಾಂಧಿ ಹತ್ಯೆಯಾದಾಗ ಪ್ರಧಾನಿ ಹುದ್ದೆಯು ಇವರನ್ನು ಹುಡುಕಿಕೊಂಡು ಬರಲಿಲ್ಲ. 2004ರಲ್ಲಿ ಸೋನಿಯಾ ಗಾಂಧಿ ಅವರು ಇವರಲ್ಲಿ ವಿಶ್ವಾಸ ಇರಿಸಲಿಲ್ಲ. ಇವರು ಇಷ್ಟಪಟ್ಟಿದ್ದ ಗೃಹ ಖಾತೆಯೂ ಸಿಕ್ಕಿರಲಿಲ್ಲ. 2007ರಲ್ಲಿ ರಾಷ್ಟ್ರಪತಿ ಹುದ್ದೆಯೂ ಇವರಿಗೆ ಒಲಿಯಲಿಲ್ಲ. 2012ರಲ್ಲಿ ಮಾತ್ರ ರಾಷ್ಟ್ರಪತಿ ಚುನಾವಣೆಯಲ್ಲಿ ಸೋನಿಯಾ ಅವರಿಗೆ ಬೇರೆ ಆಯ್ಕೆಯೇ ಇಲ್ಲದಂತೆ ಇವರೇ ಅನಿವಾರ್ಯತೆ ಸೃಷ್ಟಿ ಮಾಡುತ್ತಾರೆ. ಆದರೆ, ಈ ಎಲ್ಲ ಘಟನಾವಳಿಗಳ ಬಗ್ಗೆ ಅವರು ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ಸಾಕಷ್ಟು ವಿವರಗಳನ್ನು ಮುಚ್ಚಿಟ್ಟಿರುವುದನ್ನು ನೋಡಿದಾಗ ಇತರ ಜನಸಾಮಾನ್ಯರಂತೆ ‘ದಾದಾ’ ಅವರಿಗೂ ಇರುವ ಮಿತಿಗಳು ಅರ್ಥವಾಗುತ್ತವೆ.

‘2012ರ ಜೂನ್ 2ರಂದು ನಡೆದ ಸಭೆಯ ನಂತರ ಸೋನಿಯಾ ಅವರ ಜತೆ ಮಾತನಾಡುತ್ತ ಹೊರಟಾಗ, ಮನಮೋಹನ್‌ ಸಿಂಗ್‌ ಅವರನ್ನು ರಾಷ್ಟ್ರಪತಿ ಹುದ್ದೆಗೆ ಬಡ್ತಿ ನೀಡಿ ನನ್ನನ್ನು ಪ್ರಧಾನಿಯನ್ನಾಗಿ ಮಾಡಬಹುದು ಎನ್ನುವ ಅಸ್ಪಷ್ಟ ಆಲೋಚನೆ ನನ್ನಲ್ಲಿ ಮೂಡಿತ್ತು. ಸೋನಿಯಾ ಅವರಲ್ಲಿ ಇಂತಹ ಒಂದು ಆಲೋಚನೆ ಇತ್ತು ಎನ್ನುವುದರ ಬಗ್ಗೆ ಗಾಳಿಸುದ್ದಿಗಳು ನನ್ನ ಕಿವಿಗಳಿಗೂ ಬಿದ್ದಿದ್ದವು’ ಎಂದು ಬರೆದುಕೊಂಡಿದ್ದಾರೆ.

ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಇತರ ಉಪಯುಕ್ತ ಮಾಹಿತಿಯನ್ನೂ ಮುಚ್ಚಿ ಹಾಕಲಾಗಿದೆ. ‘ನನ್ನ ರಾಷ್ಟ್ರಪತಿ ಅಭ್ಯರ್ಥಿತನದ ಬಗ್ಗೆ ಎಂ. ಜೆ. ಅಕ್ಬರ್‌ ಅವರು ತುಂಬ ಪರಿಶ್ರಮಪಟ್ಟಿದ್ದರು. 2012ರ ಮೇ 27 ರಂದು ಪ್ರಣವ್‌ ಅವರನ್ನು ಭೇಟಿಯಾಗಿದ್ದ ಅಕ್ಬರ್‌, ಎಲ್‌. ಕೆ. ಅಡ್ವಾಣಿ ಮತ್ತು ಜಸ್ವಂತ್ ಸಿಂಗ್‌ ಅವರ ಜತೆಗಿನ ತಮ್ಮ ಅನೌಪಚಾರಿಕ ಮಾತುಕತೆಯಲ್ಲಿ ಅವರಿಬ್ಬರೂ ಪ್ರಣವ್‌ ಅವರಿಗೆ ಬೆಂಬಲ ನೀಡುವ ಬಗ್ಗೆ ಒಲವು ವ್ಯಕ್ತಪಡಿಸಿದ್ದನ್ನು ತಿಳಿಸಿದ್ದರಂತೆ.

ಈ ಬೆಳವಣಿಗೆಯನ್ನು ಮತ್ತು ಬಿಜೆಪಿಯು ತಮ್ಮ ಬೆಂಬಲಕ್ಕೆ ನಿಲ್ಲುವಂತಾಗಲು ಪ್ರಭಾವ ಬೀರಲು ತಾವು ನಡೆಸಿದ ಪ್ರಯತ್ನಗಳನ್ನು ಪ್ರಣವ್‌ ತಮ್ಮ ಪಕ್ಷದ ಜತೆ ಹಂಚಿಕೊಂಡಿದ್ದರೇ ಎನ್ನುವುದು ಯಾರಿಗೂ ಗೊತ್ತಿಲ್ಲ.

ತಮ್ಮ ಅಸಮ್ಮತಿಯ ಹೊರತಾಗಿಯೂ ರಾಷ್ಟ್ರಪತಿ ಚುನಾವಣೆಯಲ್ಲಿ ಬಾಳಾ ಸಾಹೇಬ್‌ ಠಾಕ್ರೆ ಅವರು ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಲು ಸೋನಿಯಾ ಬಯಸಿದ್ದರು. ಅವರ ಜತೆ ಭೇಟಿ ನಿಗದಿಪಡಿಸಲು ತಮಗೆ ದುಂಬಾಲು ಬಿದ್ದಿದ್ದರು ಎಂದೂ ಪ್ರಣವ್‌ದಾ ಹೇಳಿಕೊಂಡಿದ್ದಾರೆ.

ಪೂರ್ವಾನ್ವಯಗೊಳಿಸಿ ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಪ್ರಣವ್‌ ತಳೆದಿದ್ದ ನಿಲುವು ಅವರಿಗೆ ಸಾಕಷ್ಟು ಕುಖ್ಯಾತಿ ತಂದುಕೊಟ್ಟಿತ್ತು. ಮನಮೋಹನ್‌ ಸಿಂಗ್‌, ಸೋನಿಯಾ, ಚಿದಂಬರಂ ಮತ್ತು ಕಪಿಲ್‌ ಸಿಬಲ್‌ ಅವರ ಮನವೊಲಿಕೆ ಹೊರತಾಗಿಯೂ ತಾವು ತಮ್ಮ ನಿಲುವನ್ನು ಸಡಿಲಿಸಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ವೊಡಾಫೋನ್‌ನ ಹಿರಿಯ ಅಧಿಕಾರಿಯೊಬ್ಬರು ತಮ್ಮ ಸಂಪುಟದ ಹಿರಿಯ ಸಹೋದ್ಯೋಗಿ ಜತೆ ತಮ್ಮ ಮನೆಗೆ ಬಂದಿದ್ದರು ಎಂದೂ ಅವರು ಬರೆದುಕೊಂಡಿದ್ದಾರೆ. ಆದರೆ, ಆ ಸಚಿವರ ಹೆಸರನ್ನು ಮಾತ್ರ ನಮಗೆ ಹೇಳುವುದಿಲ್ಲ. ಅವರ ವ್ಯಂಗ್ಯೋಕ್ತಿಗಳ ಮೂಲಕವೇ ನಾವು ಅವರನ್ನು ಗುರುತಿಸಬೇಕಷ್ಟೆ.

ತೆರಿಗೆ ಪೂರ್ವಾನ್ವಯಗೊಳಿಸುವ ನಿಯಮವನ್ನು ಕಳೆದ ಐದು ವರ್ಷಗಳಲ್ಲಿ ಯಾವೊಬ್ಬ ಹಣಕಾಸು ಸಚಿವರು ರದ್ದುಗೊಳಿಸಲು ಮುಂದಾಗದಿರುವುದನ್ನು ಅವರು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ. ಆದರೆ, ಯಾರೊಬ್ಬರೂ ಆ ಹಣ ಪಡೆಯಲು ಪ್ರಯತ್ನಿಸದಿರುವುದು ಕೂಡ ಕಟು ಸತ್ಯ ಸಂಗತಿಯಾಗಿದೆ. ಈ ಬೆಳವಣಿಗೆಗಳಿಂದ ಬೇಸತ್ತ ವೊಡಾಫೋನ್‌ ಭಾರತದಿಂದಲೇ ಹೊರ ನಡೆಯುವ ಹಾದಿಯಲ್ಲಿ ಇದೆ. ಕೊನೆಯದಾಗಿ ಪಕ್ಷದ ಬಗ್ಗೆ ಕಡಿಮೆ ಅಭಿಮಾನ ಹೊಂದಿರುವ ಆತ್ಮಚರಿತ್ರೆಕಾರರು ನಮಗೆ ಬೇಕಾಗಿದ್ದಾರೆ ಎಂದಷ್ಟೇ ನಾವಿಲ್ಲಿ ಹೇಳಬಹುದು.

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT