ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಪಕ್ಷಗಳ ವೈಫಲ್ಯ; ಬಿಜೆಪಿಯ ಚತುರ ನಡೆ

Last Updated 14 ಜುಲೈ 2017, 19:30 IST
ಅಕ್ಷರ ಗಾತ್ರ

‘2019ರ  ಲೋಕಸಭಾ ಚುನಾವಣೆಯ ಸಿದ್ಧತೆ ಮರೆತು, 2024ರ ಚುನಾವಣೆ ಸಿದ್ಧತೆ ಬಗ್ಗೆ ಈಗಿನಿಂದಲೇ ಕಾರ್ಯೋನ್ಮುಖರಾಗಿ’ ಎಂದು  ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ಪ್ರತಿಪಕ್ಷಗಳಿಗೆ ಸಲಹೆ ನೀಡಿ ನಾಲ್ಕು ತಿಂಗಳೇ ಕಳೆದಿವೆ. ದೇಶಿ ರಾಜಕಾರಣಕ್ಕೆ ಸಂಬಂಧಿಸಿದಂತೆ ನಡೆಯುವ ಚರ್ಚೆಗಳಲ್ಲಿ ಈ ಮಾತೇ ಈಗಲೂ ಪ್ರಧಾನವಾಗಿ ಪ್ರಸ್ತಾಪಗೊಳ್ಳುತ್ತಿದೆ. ನಿರ್ದಿಷ್ಟ ಗೊತ್ತುಗುರಿ ಇಲ್ಲದ, ಒಡೆದ ಮನೆಯಂತಾಗಿರುವ, ಉತ್ಸಾಹವೇ ಇಲ್ಲದ ಪ್ರತಿಪಕ್ಷಗಳಿಂದಾಗಿ ಮುಂದಿನ ಲೋಕಸಭಾ ಚುನಾವಣೆ ಕುರಿತು ಪಕ್ಷದ ಕಾರ್ಯಸೂಚಿ ರೂಪಿಸಲು ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿಯ ಹಾದಿ ಇನ್ನಷ್ಟು ಸುಗಮವಾಗಿದೆ.
ಒಂದೆಡೆ, ತನ್ನ ಆಕ್ರಮಣಕಾರಿ ರಾಜಕೀಯ ನೀತಿ ರೂಪಿಸಲು ವಿರೋಧ ಪಕ್ಷಗಳೇ ಬಿಜೆಪಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತಿವೆ. ಇನ್ನೊಂದೆಡೆ ಬಿಜೆಪಿಯು ತನ್ನ ಎದುರಾಳಿಗಳನ್ನು ನಿಷ್ಕ್ರಿಯಗೊಳಿಸಲು ಸಿಗುವ ಪ್ರತಿಯೊಂದು ಅವಕಾಶವನ್ನೂ ಸಮರ್ಥವಾಗಿ ಬಳಸಿಕೊಳ್ಳು
ತ್ತಲೇ ತನ್ನ ರಾಜಕೀಯ ಕಾರ್ಯಸೂಚಿಯನ್ನು ಬಲಪಡಿಸುವ ಬಗ್ಗೆ ಗಮನ ಕೇಂದ್ರೀಕರಿಸಿದೆ.
2019ರ ಚುನಾವಣೆಯ ಸಮರದ ಚಿತ್ರಣ ಬಹುತೇಕ ಈಗಲೇ ಪೂರ್ಣಗೊಂಡಿರುವ ಭಾವನೆಯನ್ನೂ ಮೂಡಿಸುತ್ತದೆ. ಬಿಜೆಪಿ ನೇತೃತ್ವದಲ್ಲಿನ ಎನ್‌ಡಿಎ ತುಂಬ ಜಾಣತನದಿಂದ ಹೆಣೆದ ರಾಜಕೀಯ ಕಾರ್ಯತಂತ್ರ ಮತ್ತು ಪ್ರತಿಪಕ್ಷಗಳು ಮತ್ತು ಅವುಗಳ ಮುಖಂಡರು ಎಸಗುವ ಸರಣಿ ಪ್ರಮಾದಗಳನ್ನೇ ಬಂಡವಾಳ ಮಾಡಿಕೊಳ್ಳಲು ಹೊರಟಿರುವುದು ಈಗಲೇ ಸ್ಪಷ್ಟಗೊಂಡಿದೆ.

ದಿನದ 24 ಗಂಟೆಗಳ ಕಾಲ ಚಲನಶೀಲವಾಗಿರುವ ಮಾಧ್ಯಮಗಳ ಈ ಯುಗದಲ್ಲಿ, ಕಣ್ಣಿಗೆ ರಾಚುವ ತನ್ನ ಸಾಮರ್ಥ್ಯಗಳನ್ನು ಇನ್ನಷ್ಟು ಪ್ರಖರವಾಗಿ ಬಿಂಬಿಸಲು ಮತ್ತು ತನಗೆ ಎದುರಾಗಲಿರುವ ಸಂಭವನೀಯ ಸವಾಲುಗಳ ಮಹತ್ವ ಕುಗ್ಗಿಸುವ ನಿಟ್ಟಿನಲ್ಲಿ ಬಿಜೆಪಿ ಮತ್ತು ಅದರ ಮುಖಂಡರು ಸಕ್ರಿಯವಾಗಿ ಕಾರ್ಯತತ್ಪರರಾಗಿದ್ದಾರೆ.

‘ರಾಷ್ಟ್ರೀಯತೆ’ಯನ್ನು ವ್ಯವಸ್ಥಿತವಾಗಿ ಪ್ರತಿಪಾದಿಸುವ ‘ಭಾರತ ಚಿಂತನೆ’ಯ ಹೆಸರಿನಲ್ಲಿ ಬಿಜೆಪಿಯು ತನ್ನ ದೇಶಭಕ್ತಿ ಕಾರ್ಯಸೂಚಿಯನ್ನು ತುಂಬ ಸೂಕ್ಷ್ಮ ರೀತಿಯಲ್ಲಿ ಕಾರ್ಯಗತಗೊಳಿಸುತ್ತಿದೆ.
ಎಲ್ಲ ಜಾತಿ – ಧರ್ಮದವರನ್ನು ಒಳಗೊಳ್ಳುವ ರಾಷ್ಟ್ರೀಯ ಸಮಗ್ರತೆ ಬದಲಿಗೆ, ದೇಶದ ಬಗ್ಗೆ ಪ್ರಶ್ನಾತೀತ ಬದ್ಧತೆ ತೋರುವ ಮತ್ತು  ಎಣೆ ಇಲ್ಲದ ದೇಶ ಪ್ರೇಮದ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ಸಭೆಗಳಲ್ಲಿ ಜನರ ಭಾವನೆಗಳನ್ನು ಬಡಿದೆಬ್ಬಿಸುತ್ತಿದೆ.
ಪರಿಣಾಮಕಾರಿಯಾದ ಮತ್ತು ಸಮಯೋಚಿತ ಜಾಣ್ಮೆ ಪ್ರದರ್ಶಿಸುವ ಬಿಜೆಪಿ ನಾಯಕತ್ವ, ಆಕರ್ಷಕ ಘೋಷಣೆಗಳ ಮೂಲಕ ಜನರ ಗಮನ ಸೆಳೆಯುವುದರ ಜತೆಗೆ ಪಕ್ಷದ ಬಗ್ಗೆ ಜನಾಭಿಪ್ರಾಯ ಮೂಡಿಸಲೂ ಕಾರ್ಯತತ್ಪರವಾಗಿದೆ. ಮಂತ್ರಮುಗ್ಧಗೊಳಿಸುವ ಭಾಷಣ ಕಲೆಯ ಮೂಲಕ ಸಾರ್ವಜನಿಕ ಸಭೆಗಳಲ್ಲಿ   ಸಭಿಕರ ಮನಸ್ಸು ಗೆಲ್ಲಲು ಹೊರಟಿರುವುದು ಪಕ್ಷಕ್ಕೆ ಸಾಕಷ್ಟು ಪ್ರಯೋಜನಗಳನ್ನು ಒದಗಿಸುತ್ತಿದೆ.  ಪಕ್ಷಕ್ಕೆ ಮುಜುಗರ ಉಂಟು ಮಾಡುವ ಮತ್ತು ಪಕ್ಷದ ವರ್ಚಸ್ಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಪಪ್ರಚಾರಗಳು ಹಾದಿ ತಪ್ಪುವಂತೆ  ಜಾಣತನದಿಂದ ಕಾರ್ಯತಂತ್ರ ರೂಪಿಸುತ್ತಿದೆ.
ಕಪ್ಪು ಹಣ ಮತ್ತು ಭ್ರಷ್ಟಾಚಾರಕ್ಕೆ ತಡೆ ಒಡ್ಡುವ ಉದ್ದೇಶದಿಂದಲೇ ಗರಿಷ್ಠ ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಲಾಯಿತು ಎಂದು ಆರಂಭದಿಂದಲೂ ಬಿಂಬಿಸುತ್ತಲೇ ಬರಲಾಯಿತು.  ಆನಂತರ ನಗದುರಹಿತ ವಹಿವಾಟಿನ ಮೊದಲ ಹೆಜ್ಜೆ ಇದಾಗಿದೆ ಎಂದೂ
ಪ್ರಚಾರ ಮಾಡಲಾಯಿತು.

ಜನಸಾಮಾನ್ಯರು ಮತ್ತು ಬಡವರಿಗೆ ಆದ ಸಂಕಷ್ಟ, ತೊಂದರೆಗಳಿಂದ ಅವರ ಗಮನ ಬೇರೆಡೆ ಸೆಳೆಯಲು ಚುನಾವಣಾ ಸಂದರ್ಭದಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ  ನೋಟು ರದ್ದತಿಯ ದೀರ್ಘಾವಧಿಯ ಪ್ರಯೋಜನಗಳು ಸಾಕಷ್ಟಿವೆ ಎಂದು ವ್ಯಾಪಕ ಪ್ರಚಾರ ಮಾಡಲಾಯಿತು. ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಅಲ್ಪಾವಧಿಯಲ್ಲಿ ಇಂತಹ ಸಂಕಷ್ಟಗಳಿಗೆ ಜನರು ಕೆಲ ಮಟ್ಟಿಗೆ ತ್ಯಾಗ ಮಾಡಬೇಕಾದ ಅನಿವಾರ್ಯ ಇದೆ ಎಂದೂ ಹೇಳುತ್ತ ಜನರ ಹಾದಿ ತಪ್ಪಿಸಲಾಯಿತು.

ನೋಟು ರದ್ದತಿ ನಂತರ ನಡೆದ ಚುನಾವಣೆಗಳಲ್ಲಿ ಬಿಜೆಪಿ ಗೆಲುವು  ಸಾಧಿಸುತ್ತಲೇ ಬಂದಿದೆ. ಈ ನಿರ್ಧಾರದಿಂದ ಸಾಕಷ್ಟು ಒಳಿತಾಗಿದೆ ಎಂಬುದನ್ನು ಬಿಂಬಿಸುವಲ್ಲಿ  ಬಿಜೆಪಿ ಸಫಲವಾಗಿತ್ತು.  ಬಿಜೆಪಿಯ ಅಬ್ಬರದ ಪ್ರಚಾರದಿಂದಾಗಿ ಪ್ರತಿಪಕ್ಷಗಳಿಗೆ ಈ ವಿಷಯದಲ್ಲಿ ರಾಜಕೀಯ ಲಾಭ ಪಡೆಯಲು ಸಾಧ್ಯವಾಗಲೇ ಇಲ್ಲ.
ಎರಡನೆಯದಾಗಿ ದನದ ಮಾಂಸ ಸೇವನೆ ಕುರಿತ ಚರ್ಚೆ–ವಿವಾದವನ್ನೂ  ಬಿಜೆಪಿಯು ತನ್ನ ಅನುಕೂಲಕ್ಕೆ ಪರಿವರ್ತಿಸಿಕೊಳ್ಳುವಲ್ಲಿ ಸಫಲವಾಯಿತು.  ಗೋವುಗಳನ್ನು ರಕ್ಷಿಸುವ ಮತ್ತು ಗೌರವಿಸುವ    ಭರವಸೆ ಮತ್ತು ಕೋರ್ಟ್‌ ತೀರ್ಪು ಜಾರಿಗೊಳಿಸುವುದಕ್ಕೆ ಈ ನಿರ್ಧಾರ ಸಂಬಂಧಿಸಿದೆ ಎಂದು ಪ್ರತಿಪಾದಿಸಿತು.
ಈ ವಿಷಯದಲ್ಲಿ ಪಕ್ಷ  ಅತ್ಯುತ್ಸಾಹ ಪ್ರದರ್ಶಿಸಿತು   ಎನ್ನುವುದನ್ನು  ಸರ್ಕಾರ ನಂತರದ ದಿನಗಳಲ್ಲಿ ಒಪ್ಪಿಕೊಂಡಿತು. 
ಕೇಂದ್ರದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದ  ಮೂರು ವರ್ಷಗಳಲ್ಲಿ, ಪ್ರತಿಪಕ್ಷಗಳು ತಮ್ಮ ಪಾತ್ರ ಮತ್ತು ಹೊಣೆಗಾರಿಕೆಗಳನ್ನು ಸಮರ್ಥವಾಗಿ ನಿಭಾಯಿಸಿರುವ ಕುರಿತು ಅನುಮಾನಗಳು ಮೂಡುತ್ತವೆ. ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌  ಮತ್ತು ಅದರ ನಾಯಕತ್ವವು, ಪ್ರಾದೇಶಿಕ ಪಕ್ಷಗಳು ಮತ್ತು ಅವುಗಳ ನಾಯಕರಿಗೆ ತನ್ನ ಪಾತ್ರವನ್ನು ಬಿಟ್ಟುಕೊಟ್ಟಿರುವಂತೆ ಭಾಸವಾಗುತ್ತದೆ.

ಈ ಹಿಂದೆ ಲೋಕಸಭೆಯಲ್ಲಿ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವ ಸಂದರ್ಭ ಎದುರಾದಾಗಲ್ಲೆಲ್ಲ, ನಾಟಕೀಯವಾಗಿ ಅಧಿಕಾರಕ್ಕೆ ಮರಳಲು  ಪಕ್ಷದ ನಾಯಕತ್ವವು ಸರಿಯಾದ ರಾಜಕೀಯ ಕ್ಷಣಕ್ಕಾಗಿ ಎದುರು ನೋಡುತ್ತಿತ್ತು.  ಸರ್ಕಾರ ಕೂಡ ತನಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಹಲವಾರು ಅವಕಾಶಗಳನ್ನು  ಒದಗಿಸಿ ಕೊಡುತ್ತಿತ್ತು. ಆದರೆ, ಈ ಬಾರಿ ಕಾಂಗ್ರೆಸ್‌ ಪ್ರತಿಸಲವೂ ಅಂತಹ ಅವಕಾಶಗಳನ್ನೆಲ್ಲ ಸಮರ್ಥವಾಗಿ ಬಳಸಿಕೊಳ್ಳದೆ ಕೈಚೆಲ್ಲಿ ಕುಳಿತಿದೆ.

ಕಾಂಗ್ರೆಸ್‌ ಪಕ್ಷದ ಉತ್ತರಾಧಿಕಾರಿಯಾದವರು, ರಾಜಕಾರಣವನ್ನು ‘ಆರೆಕಾಲಿಕ ಅವಧಿ’ಯ ಕೆಲಸ ಎಂದೇ ಪರಿಗಣಿಸಿರುವಂತಿದೆ. ರಾಜಕೀಯವಾಗಿ ತುಂಬ ಸೂಕ್ಷ್ಮ  ಎನ್ನಬಹುದಾದ ಸನ್ನಿವೇಶದಲ್ಲಿಯೂ  ಅವರು  ವಿಹಾರಾರ್ಥ ವಿದೇಶಕ್ಕೆ ಹೋಗಿರುತ್ತಾರೆ.  ರಾಷ್ಟ್ರಪತಿ ಚುನಾ
ವಣೆಯಲ್ಲಿ ಪ್ರತಿಪಕ್ಷದ ಅಭ್ಯರ್ಥಿ ಆಯ್ಕೆ ಮಾಡುವ ಹಂತದಲ್ಲಿ ಅವರು ದೇಶದಲ್ಲಿಯೇ ಇದ್ದಿರಲಿಲ್ಲ ಎನ್ನುವುದು ಅವರ ಇಂತಹ ಪ್ರವೃತ್ತಿಗೆ ನಿದರ್ಶನವಾಗಿದೆ.
ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯವಾಗಿ ಭಾಗಿಯಾಗಿ
ರುವಾಗಲೂ ಅವರ ನಿರ್ಧಾರಗಳಲ್ಲಿ ದೃಢನಿಶ್ಚಯ ಕಾಣುವುದಿಲ್ಲ.  ಅವರ ಕಾರ್ಯವೈಖರಿಯೂ ‘ಒಂದು ಹೆಜ್ಜೆ ಮುಂದೆ, ಎರಡು ಹೆಜ್ಜೆ ಹಿಂದೆ’ ಎಂಬಂತೆ ಇರುತ್ತದೆ.
ಕಾಂಗ್ರೆಸ್‌ ಕಾರ್ಯಕರ್ತರಲ್ಲಿಯೂ ರಾಹುಲ್‌ ಗಾಂಧಿ ಬಗ್ಗೆ ಭ್ರಮನಿರಸನ ಭಾವನೆ ಮೂಡಿರುವಂತೆ ಭಾಸವಾಗುತ್ತಿದೆ. ಅವರ ಕಾರ್ಯವೈಖರಿಯಿಂದಾಗಿ ಕಾರ್ಯಕರ್ತರು  ತಬ್ಬಿಬ್ಬುಗೊಂಡಿರುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಪಕ್ಷದ ಕೇಂದ್ರೀಯ ನಾಯಕತ್ವವು ಮೂಲೆಗುಂಪಾಗದಂತೆ ನೋಡಿಕೊಳ್ಳಲು, ತಳಮಟ್ಟದಲ್ಲಿ ಅಪಾರ ಜನ ಬೆಂಬಲ ಹೊಂದಿರುವ ಪಕ್ಷದ ಮುಖಂಡರು ಮುಂಚೂ
ಣಿಗೆ ಬರದಂತೆ ಸ್ವಯಂ ನಿಯಂತ್ರಣ ಹೇರಿಕೊಳ್ಳುವಂತೆ ಬಲವಂತ ಮಾಡಲಾಗಿದೆ.

ಬಿಜೆಪಿ ಸರ್ಕಾರವು ಕೇಂದ್ರದಲ್ಲಿ ಒಂದು ವರ್ಷ ಪೂರ್ಣಗೊಳಿಸುತ್ತಿದ್ದಂತೆ,  ಮೂರು ರಾಜ್ಯಗಳ ಪ್ರಾದೇಶಿಕ ಮಟ್ಟದ ನಾಯಕರು ಬಿಜೆಪಿ ನಾಯಕತ್ವಕ್ಕೆ ಸವಾಲು ಒಡ್ಡುವ ರೀತಿಯಲ್ಲಿ ಪ್ರಚಾರಕ್ಕೆ ಬಂದಿದ್ದರು.  ಬಿಹಾರದ ನಿತೀಶ್‌ ಕುಮಾರ್‌, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಮತ್ತು ದೆಹಲಿಯ ಅರವಿಂದ  ಕೇಜ್ರಿವಾಲ್‌ ಅವರು ಬಿಜೆಪಿ ನಾಯಕತ್ವದ ಕಟು ಟೀಕಾಕಾರರಾಗಿ ಗಮನ ಸೆಳೆದಿದ್ದರು.
ಆದರೆ, ಎರಡು ವರ್ಷಗಳು ಗತಿಸುತ್ತಿದ್ದಂತೆ ಈ ರಾಜಕೀಯ ಚಿತ್ರಣ ಸಂಪೂರ್ಣವಾಗಿ ಬದಲಾಗಿಬಿಟ್ಟಿದೆ.

ಭಾರಿ ಜನಬೆಂಬಲದಿಂದಾಗಿ ಅಧಿಕಾರಕ್ಕೆ ಬಂದ ಆಮ್‌ ಆದ್ಮಿ ಪಾರ್ಟಿಯ (ಎಎಪಿ) ಜನಪ್ರಿಯತೆಯು ದಿನಗಳು ಕಳೆದಂತೆ ಮಸುಕಾಗುತ್ತಲೇ ಹೊರಟಿದೆ.
ರಾಷ್ಟ್ರೀಯ ರಾಜಕಾರಣಕ್ಕೆ ಹೆಚ್ಚು ಗಮನ ಕೇಂದ್ರೀಕರಿಸಿದ್ದ ಕೇಜ್ರಿವಾಲ್‌ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ನಾಯಕತ್ವ ಟೀಕಿಸಲಿಕ್ಕೇನೆ ತಮ್ಮೆಲ್ಲ ಸಮಯವನ್ನು ಮೀಸಲು ಇಟ್ಟಿದ್ದರು. ಎಎಪಿಯನ್ನು ರಾಷ್ಟ್ರೀಯ ಪಕ್ಷವಾಗಿ ಬೆಳೆಸಲು ನಡೆಸಿದ ಅವರ ಪ್ರಯ
ತ್ನಗಳಿಗೆ ತೀವ್ರ ಹಿನ್ನಡೆ ಕಂಡು ಬಂದಿದೆ.  ದೆಹಲಿಯಲ್ಲಿಯೇ ಅದಕ್ಕೆ ಭಾರಿ ಸವಾಲುಗಳು ಮುಖಾಮುಖಿಯಾಗಿವೆ.  ಪಕ್ಷದ ಹಲವಾರು ಶಾಸಕರು  ಗಂಭೀರ ಸ್ವರೂಪದ ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ.  ಇತ್ತೀಚಿನ ದಿನಗಳಲ್ಲಿ ಕೇಜ್ರಿವಾಲ್‌ ಅವರು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸು
ವುದನ್ನು ಕೈಬಿಟ್ಟಿರುವಂತೆ ಕಂಡು ಬರುತ್ತಿದೆ.  ಅವರೀಗ ದೆಹಲಿಯ ಆಡಳಿತಕ್ಕೆ ಹೆಚ್ಚು ಗಮನ ಕೇಂದ್ರೀಕರಿಸಿದ್ದಾರೆ.
ನಿತೀಶ್‌ ಕುಮಾರ್ ಅವರು ಬಿಹಾರದಲ್ಲಿ ಬಿಜೆಪಿ ವಿರೋಧಿ ಮೈತ್ರಿಕೂಟ ಮುನ್ನಡೆಸಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದರು.  ಮೈತ್ರಿಕೂಟದ ಪಾಲುದಾರ ಪಕ್ಷವಾಗಿರುವ ಆರ್‌ಜೆಡಿಯು   ಈಗ ಅವರಿಗೆ ಹಲವಾರು ಬಗೆಗಳಲ್ಲಿ ಹೊರೆಯಾಗಿ ಪರಿಣಮಿಸಿದೆ. ಪಕ್ಷದ ನಾಯಕ
ತ್ವದ ವಿರುದ್ಧ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಗಂಭೀರ ಸ್ವರೂಪದ ಆರೋಪ ಕೇಳಿಬಂದಿರುವುದು ನಿತೀಶ್‌ ಕುಮಾರ್‌ ಅವರಿಗೆ ರಾಜಕೀಯವಾಗಿ ತೀವ್ರ ಮುಜುಗರ ಉಂಟು ಮಾಡಿದೆ.

ನಿತೀಶ್‌ ಕುಮಾರ್‌ ಅವರು ತಮ್ಮ ಮೈತ್ರಿಕೂಟದಲ್ಲಿನ ಪಕ್ಷಗಳ ಜತೆ ಸಂಬಂಧ ಕಡಿದುಕೊಂಡು  ಬಿಜೆಪಿ ಜತೆ ಕೈಜೋಡಿಸುವುದು ಹೆಚ್ಚೂ ಕಡಿಮೆ ಖಚಿತವಾದಂತೆ ಆಗಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಡುವಣ ರಾಜಕೀಯ ವೈಷಮ್ಯವು ಈಗ ಹೆಚ್ಚು ಗಮನ ಸೆಳೆಯುತ್ತಿದೆ.
ಗೋರ್ಖಾಲ್ಯಾಂಡ್‌ ವಿವಾದ ತುಂಬ ಹಳೆಯದಾದರೂ, ಈಗ ಮತ್ತೆ ಮುಂಚೂಣಿಗೆ ಬಂದು ನಿಂತಿದೆ.  ರಾಜ್ಯದ ಕೆಲ ಭಾಗಗಳಲ್ಲಿ ಇತ್ತೀಚೆಗೆ ನಡೆದ ಕೋಮು ಸಂಘರ್ಷ, ತೃಣಮೂಲ ಮತ್ತು ಬಿಜೆಪಿ ನಡುವಣ ವೈರತ್ವವನ್ನು ಇನ್ನಷ್ಟು ಹೆಚ್ಚಿಸಿದೆ.

ಬಿಜೆಪಿಯ ಸದ್ಯದ ನಾಯಕತ್ವಕ್ಕೆ ಸಡ್ಡು ಹೊಡೆಯುವ ರೀತಿಯಲ್ಲಿದ್ದ  ಈ ಮೂವರು ಪ್ರಾದೇಶಿಕ ಮಟ್ಟದ ರಾಜಕೀಯ ಮುಖಂಡರು,  ರಾಷ್ಟ್ರ ರಾಜಕಾರಣದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಮಹತ್ವ ಕಳೆದುಕೊಳ್ಳುತ್ತಿದ್ದಾರೆ. ಅವರ ಮುನ್ನಡೆಯನ್ನು ನಿಯಂತ್ರಿಸಲಾಗಿದೆ ಅಥವಾ ಅವರೇ ರಾಜಕೀಯವಾಗಿ  ಪ್ರತಿಕೂಲ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ಮತ್ತು ಗುಜರಾತ್‌ ರಾಜ್ಯ ವಿಧಾನಸಭಾ ಚುನಾವಣೆಗಳು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಕಠಿಣ ಪರೀಕ್ಷೆ ಒಡ್ಡಲಿವೆ.  ಈ ಎರಡೂ ರಾಜ್ಯಗಳಲ್ಲಿನ ಚುನಾವಣಾ ಕದನ ಈ ಎರಡೂ ಪಕ್ಷಗಳ ಮಧ್ಯೆಯೇ ನಡೆಯಲಿದೆ.  ಗುಜರಾತ್‌ ಚುನಾವಣೆಯು ಬಿಜೆಪಿಗೆ ತುಂಬ ಪ್ರತಿಷ್ಠೆಯ ವಿಷಯವಾಗಿರಲಿದೆ.  ಕರ್ನಾಟಕದ ಚುನಾವಣೆಯೂ ಆನೇಕ ಕಾರಣಗಳಿಗೆ ಈ ಪಕ್ಷಗಳಿಗೆ ಮಹತ್ವದ್ದಾಗಿದೆ.
ಈ ಎರಡೂ ನಿರ್ಣಾಯಕ ಚುನಾವಣಾ ಸಮರದ ಫಲಿತಾಂಶವು, ಮಧ್ಯಪ್ರದೇಶ, ಛತ್ತೀಸಗಡ ಮತ್ತು ರಾಜಸ್ಥಾನಗಳಲ್ಲಿ ಅಧಿಕಾರ ಉಳಿಸಿಕೊಳ್ಳುವ ಬಿಜೆಪಿಯ ಪ್ರಯತ್ನಗಳ ಮೇಲೆ ಪ್ರಭಾವ ಬೀರಲಿದೆ.  ಈ ಮೂರೂ ರಾಜ್ಯಗಳಲ್ಲಿಯೂ  ಚುನಾವಣಾ ಕದನವು ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆಯೇ ನಡೆಯಲಿದೆ.
2019ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುಂಚಿನ ಈ ಚುನಾವಣಾ ಕದನ   ಖಂಡಿತವಾಗಿಯೂ ಸಾಕಷ್ಟು ಕುತೂಹಲಕಾರಿಯಾಗಿರಲಿದೆ. ಚುನಾವಣಾ ಫಲಿತಾಂಶದಲ್ಲಿ  ವಿಶಿಷ್ಟ ಸ್ವರೂಪದ ರಾಜಕೀಯ ಸಂದೇಶವೂ ಅಡಗಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT