ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಷ್ಠೆ ಮತ್ತು ನಾಗರಿಕ ಆಡಳಿತ ವ್ಯವಸ್ಥೆಯ ಸಂಘರ್ಷ

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಭೂ ಸೇನಾ ಮುಖ್ಯಸ್ಥರಿಗೆ ಸಂಬಂಧಿಸಿದ ಸುದ್ದಿಗಳೇ ಈಚೆಗೆ ಭಾರತ ಮತ್ತು ಪಾಕಿಸ್ತಾನಗಳಲ್ಲಿ ಚರ್ಚೆಗೆ ಹೆಚ್ಚು ಗ್ರಾಸ ಒದಗಿಸಿವೆ. ಜನರಲ್ ವಿ.ಕೆ.ಸಿಂಗ್ ತಮ್ಮ ಜನ್ಮದಿನದ ಖಚಿತತೆಯ ಸಾಬೀತಿಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವುದಂತೂ ಭಾರತದ ಇತಿಹಾಸದಲ್ಲೇ ಒಂದು ಅಪರೂಪದ ಪ್ರಕರಣ ಎನಿಸಿದೆ.
 
ವಿ.ಕೆ.ಸಿಂಗ್ ಪ್ರಕಾರ ಅವರ ಜನ್ಮದಿನ 1950ರಲ್ಲಿ ಬರುತ್ತದೆ. ಆದರೆ ಸರ್ಕಾರದ ಪ್ರಕಾರ ಅದು 1951ರಲ್ಲಿ ಬರುತ್ತದೆ. ಇದರಲ್ಲಿ ಸರಿ, ತಪ್ಪು ಯಾವುದೆಂಬ ಬಗ್ಗೆ ನ್ಯಾಯಾಲಯ ನಿರ್ಧರಿಸುತ್ತದೆಯಾದರೂ, ಮಾಧ್ಯಮಗಳಲ್ಲಿ ಈ ಸುದ್ದಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿತು. ಸರ್ಕಾರವೇ ಹೇಳುವ ಜನ್ಮದಿನದ ಪ್ರಕಾರ ಸಿಂಗ್ ಮುಂದಿನ ಮೇ ತಿಂಗಳಲ್ಲಿ ನಿವೃತ್ತರಾಗಬೇಕಾಗುತ್ತದೆ.

ಇದೊಂದು ಸೂಕ್ಷ್ಮ ಪ್ರಕರಣವಾದ ಕಾರಣ ಸಂಬಂಧಪಟ್ಟವರು ಅತ್ಯಂತ ಜಾಗರೂಕತೆಯಿಂದ ಇದನ್ನು ಇನ್ನಾದರೂ ನಿಭಾಯಿಸುತ್ತಾರೆಂದು ಆಶಿಸುತ್ತೇನೆ. ಇಂತಹದ್ದೊಂದು ಪ್ರಕರಣಕ್ಕೆ ಆರಂಭದಲ್ಲೇ ಸರ್ವಸಮ್ಮತ ಪರಿಹಾರ ಒಂದನ್ನು ಕಂಡುಕೊಳ್ಳಬೇಕಿತ್ತು. ವಿವಾದವನ್ನು ಈ ಮಟ್ಟಿಗೆ ಬೆಳೆಯಲು ಬಿಡಬಾರದಿತ್ತು.
 
ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಅನುಭವಿ ಮತ್ತು ಎಲ್ಲವನ್ನೂ ಸಮರ್ಥವಾಗಿ ಸರಿತೂಗಿಸಿಕೊಂಡು ಹೋಗಬಲ್ಲಂಥವರು. ಇವರ ಮೂಗಿನ ಅಡಿಯಲ್ಲೇ ಇಂತಹದ್ದೊಂದು ಪ್ರಕರಣ ಈ ಸ್ವರೂಪ ಪಡೆದುಕೊಂಡಿದ್ದಾದರೂ ಹೇಗೆ?

ಜನರಲ್ ಸಿಂಗ್ ಅವರು ಸುಪ್ರೀಂ ಕೋರ್ಟ್ ಮೆಟ್ಟಲೇರಿರುವುದನ್ನು ನಾನಿಲ್ಲಿ ಒಂದಿನಿತೂ ಸಮರ್ಥಿಸಿಕೊಳ್ಳುತ್ತಿಲ್ಲ. ಸಿಂಗ್ ಅವರು ತಮ್ಮ ಸಮಸ್ಯೆಯ ಪರಿಹಾರಕ್ಕೆ ಇಂತಹದ್ದೊಂದು ಹಾದಿ ಹಿಡಿಯುತ್ತಾರೆಂದು ಯಾರೂ ಕಲ್ಪಿಸಿಕೊಂಡಿರಲಿಕ್ಕಿಲ್ಲ.
 
ಸಾರ್ವಜನಿಕರು ಸೇನಾ ಪಡೆಯ ಇಂತಹ ವಹಿವಾಟುಗಳ ಬಗ್ಗೆ ಲೇವಡಿ ಮಾಡುವಂತಾಗಿಬಿಟ್ಟಿದೆ. ಮಾಜಿ ಕೇಂದ್ರ ಸಚಿವರೂ ಆಗಿರುವ ಬಿಜೆಪಿ ಮುಖಂಡ ಜಸ್ವಂತ್ ಸಿಂಗ್ ಪ್ರಕಾರ ಸೇನಾಪಡೆಯ ಕತ್ತಿಗಳು ಇದೀಗ ಮೊಂಡಾಗಿ ಬಿಟ್ಟಿವೆ! ಸದ್ಯ, ಜಸ್ವಂತ್ ಪ್ರಸಕ್ತ ಸರ್ಕಾರದೊಳಗಿಲ್ಲವಲ್ಲ.

ಹಾಗೇನಾದರೂ ಇದ್ದಿದ್ದರೆ ಈ ನಿವೃತ್ತ ಸೇನಾಧಿಕಾರಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅದೆಷ್ಟು ಧಕ್ಕೆ ಉಂಟು ಮಾಡಬೇಕೋ ಅದನ್ನು ಮಾಡಿಬಿಡುತ್ತಿದ್ದರು. ಸಂಸತ್ತಿನಲ್ಲಿ ಒಂದೂವರೆ ದಶಕದ ಅನುಭವ ಹೊಂದಿದ್ದರೂ ಕೂಡ ಇವರ ಮನದಾಳದಲ್ಲಿರುವ ಸರ್ವಾಧಿಕಾರದ ಸ್ವಭಾವವನ್ನು ಇನ್ನೂ ತೊಡೆದು ಹಾಕಲು ಸಾಧ್ಯವಾಗಿಲ್ಲ ಎನ್ನುವುದೊಂದು ವಿಪರ್ಯಾಸ.

ಒಂದು ವಿಷಯವನ್ನು ನಾವು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಏನೆಂದರೆ, ಪ್ರಜಾಪ್ರಭುತ್ವದಲ್ಲಿ ಜನರೇ ಸಾರ್ವಭೌಮರು, ಜನಪ್ರತಿನಿಧಿಗಳಿಗೆ ಪರಮಾಧಿಕಾರವಿರುವುದೇ ಹೊರತು ಯಾವುದೇ ಸೇನೆ, ಸೇನಾಧಿಕಾರಿ ಅಥವಾ ಸಂಸ್ಥೆಗಲ್ಲ.

ಹಿಂದೆ ನೌಕಾಪಡೆಯ ಮುಖ್ಯಸ್ಥರಾಗಿದ್ದ ವಿಷ್ಣು ಭಾಗವತ್ ಅಭಿಪ್ರಾಯ ಕೂಡಾ ತೀರಾ ಭಿನ್ನವಾಗೇನೂ ಇಲ್ಲ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದಾಗ ಇವರನ್ನು ಆ ಸ್ಥಾನದಿಂದ ಕಿತ್ತೊಗೆಯಲಾಗಿತ್ತು.

ಆದರೆ ಭಾಗವತ್ ಅಂದು ಸುಪ್ರೀಂ ಕೋರ್ಟ್ ಮೆಟ್ಟಲೇರದೆ ಸಮತೋಲನ ಕಾಪಾಡಿಕೊಂಡಿದ್ದರು. ಅಂದು ಅವರು ಆ ವಿವಾದವನ್ನು ಸೇನೆ ಮತ್ತು ಸಾರ್ವಜನಿಕ ಅಭಿಪ್ರಾಯಗಳಿಗೆ ಮುಖಾಮುಖಿಯಾಗಿಸಿರಲಿಲ್ಲ. ಆದರೆ ಇವತ್ತು ಜನರಲ್ ವಿ.ಕೆ.ಸಿಂಗ್ ಆ ಕೆಲಸ ಮಾಡುತ್ತಿದ್ದಾರೆ.
 
ಈ ಧೋರಣೆಗೆ ಬೆಂಬಲಿಸುವ ಉದ್ಧಟತನವನ್ನು ಜಸ್ವಂತ್ ಸಿಂಗ್ ತೋರುತ್ತಿದ್ದಾರೆ. ಜನರಲ್ ಕಟೋಚ್ ಎಂಬುವವರು ಕೂಡಾ ಜನಪ್ರತಿನಿಧಿಗಳ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಇಂತಹ ಅಭಿಪ್ರಾಯಗಳನ್ನು ಒಡಲಾಳದಲ್ಲಿರಿಸಿಕೊಂಡಿರುವಂತಹವರು ಅದು ಹೇಗೆ ಅಂತಹ ಉನ್ನತ ಸ್ಥಾನಗಳಿಗೆ ತಲುಪಿದರು ಎಂಬುದೇ ಅಚ್ಚರಿ.

ಹೈದರಾಬಾದ್‌ನಲ್ಲಿ ನೆಲೆಸಿರುವ ವಾಯುಪಡೆಯ ನಿವೃತ್ತ ಮುಖ್ಯಸ್ಥ ಇದ್ರಿಸ್ ಲತೀಫ್ ಅವರೊಂದಿಗೆ ಮೊನ್ನೆ ದೂರವಾಣಿಯಲ್ಲಿ ಮಾತನಾಡುತ್ತಿದ್ದಾಗ, ಅವರು ಜನರಲ್ ಸಿಂಗ್ ನ್ಯಾಯಾಲಯದ ಮೊರೆ ಹೋಗಿದ್ದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಲತೀಫ್ ಅವರನ್ನು ಹಳೆಯ ತಲೆಮಾರಿನವರೆಂದು ಲಘುವಾಗಿ ಕಾಣುವ ಅಗತ್ಯವೇನಿಲ್ಲ. ಸ್ವಂತದ್ದಕ್ಕಿಂತ ಸೇವಾನಿಷ್ಠೆಯೇ ಮುಖ್ಯ ಎನ್ನುವ ಅವರು ಸೇನೆಯು ಯಾವುದೇ ಕಾರಣಕ್ಕೂ ಸರ್ಕಾರದ ಎಂತಹದೇ ಆದೇಶಕ್ಕೂ ಎದುರುತ್ತರ ಕೊಡುವ ಪ್ರಶ್ನೆಯೇ ಇಲ್ಲ. ಸರ್ಕಾರದ ತೀರ್ಮಾನಗಳಿಗೆ ಬದ್ಧವಾಗಿರುವುದಷ್ಟೇ ಸೇನಾನಿಯ ಕರ್ತವ್ಯ ಎಂಬುದರಲ್ಲಷ್ಟೇ ಅವರ ದೃಢ ನಂಬಿಕೆ.

ಜನರಲ್ ಸಿಂಗ್ ಅವರು ಸೇನಾ ಸೇವಾವಧಿಯಲ್ಲಿ, ಬಡ್ತಿಗಳ ಸಂದರ್ಭದಲ್ಲಿ ಒಪ್ಪಿಕೊಂಡು ಬಂದ ಜನ್ಮ ದಿನಾಂಕ ವರ್ಷ 1950ನ್ನು ನಿವೃತ್ತಿಗೆ ಸಂಬಂಧಿಸಿದಂತೆಯೂ ಒಪ್ಪಿಕೊಳ್ಳಬೇಕಲ್ಲ.
 
ಆದರೆ ಹಾಗೆ ಕಾಣುತ್ತಿಲ್ಲ. ಅವರಲ್ಲಿ ಮತ್ತು ಅವರನ್ನು ಬೆಂಬಲಿಸುವವರಲ್ಲಿ ಅಪಾಯಕಾರಿ ರೀತಿಯ ಆಕಾಂಕ್ಷೆಗಳು ಕಾಣಿಸುತ್ತಿವೆ. ಭಾರತದ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯನ್ನು ಗೌಣವಾಗಿ ಕಾಣುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ.

ಈ ನಾಡಿನ ಜನರಿಗೆ ಸೇನೆಯ ಬಗ್ಗೆ ಅಪಾರವಾದ ಗೌರವವಿದೆ, ಅಭಿಮಾನವಿದೆ. ಆದರೆ ಆ ಸೇನೆಯನ್ನು `ರಾಜಕಾರಣ~ದ ಸ್ವರೂಪದಲ್ಲಿ ಕಾಣಲು ಈ ನೆಲದ ಜನರ ಅಂತರಂಗ ಯಾವತ್ತೂ ಒಪ್ಪುವುದಿಲ್ಲ. ಜನಪ್ರತಿನಿಧಿಗಳ ಈ ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದೇ ಅಂತಿಮ. ಅದನ್ನು ಧಿಕ್ಕರಿಸುವ ಪ್ರಶ್ನೆಯೇ ಇಲ್ಲ.
 
ಪ್ರಸಕ್ತ ಜನರಲ್ ಸಿಂಗ್ ಅವರು ತಮಗೆ ಅನ್ಯಾಯವಾಗಿದೆ ಎಂದೆನಿಸಿದರೆ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ನಂತರ ನ್ಯಾಯಾಲಯದ ಮೆಟ್ಟಲೇರಬೇಕಿತ್ತು.
ಜಸ್ವಂತ್ ಸಿಂಗ್ ಅವರ ಅಭಿಪ್ರಾಯಕ್ಕೆ ಬಿಜೆಪಿ ಏನನ್ನುತ್ತದೆಯೋ.. ಅದೇನೇ ಇರಲಿ. ಸರ್ಕಾರ ಮಾತ್ರ ಈ ವಿವಾದವನ್ನು ಸೂಕ್ಷ್ಮವಾಗಿ ನಿಭಾಯಿಸುವಲ್ಲಿ ವಿಫಲವಾಗಿದೆ.
 
ಇದೀಗ ಸೇನಾ ಮುಖ್ಯಸ್ಥರೊಬ್ಬರು ಭಾರತ ಸರ್ಕಾರಕ್ಕೇ ಸವಾಲು ಒಡ್ಡಿರುವಂತಹ ಪ್ರಶ್ನೆಯೊಂದು ಎದುರಾಗಿದೆ. ಇದು ಗಂಭೀರವಾಗಿರುವಂತಹದ್ದು. ಜನರಲ್ ಸಿಂಗ್ ಅವರಂತೂ ತಪ್ಪು ಸಲಹೆಗಳಿಂದ ದಿಕ್ಕು ತಪ್ಪಿದ್ದಾರೆನಿಸುತ್ತಿದೆ.

ಇದೀಗ ಸರ್ಕಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಹಾಕಿದೆ. ಹೀಗಾಗಿ ನ್ಯಾಯಾಲಯ ಇನ್ನೊಂದು ಕಡೆಯ ಅಭಿಪ್ರಾಯವನ್ನು ಕೇಳದೆಯೇ ಯಾವ ತೀರ್ಮಾನವನ್ನೂ ತೆಗೆದುಕೊಳ್ಳಲು ಸಾಧ್ಯವಿಲ್ಲ.
 
ನನ್ನ ಮಟ್ಟಿಗೆ ಇದು ಅಶಿಸ್ತಿನ ಪ್ರಕರಣವೇ ಹೊರತು, ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಾದ ಸಂಗತಿಯಂತೂ ಅಲ್ಲವೇ ಅಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಿ ಮಾತುಕತೆಗೆ ಪ್ರಯತ್ನಗಳು ನಡೆಯುತ್ತಿವೆ ಎಂಬ ಮಾತೂ ಕಿವಿಗೆ ಬಿದ್ದಾಗ ನನಗೆ ಇನ್ನಿಲ್ಲದ ಅಚ್ಚರಿ ಉಂಟಾಗಿದೆ.
 
ಇದು ವಿ.ಕೆ.ಸಿಂಗ್ ನ್ಯಾಯಾಲಯದ ಮೆಟ್ಟಿಲೇರುವ ಮೊದಲು ನಡೆಯಬೇಕಿತ್ತು. ಈಗಂತೂ ಅಲ್ಲವೇ ಅಲ್ಲ. ಹಾಗೇನಾದರೂ ನಡೆದರೆ ಇದು ಜನಪ್ರಭುತ್ವದ ಹೆಸರಲ್ಲಿ ಸರ್ಕಾರ ನಡೆಸುವ ರಾಜಿ ಪ್ರಯತ್ನದಂತಾಗುತ್ತದೆ.

ಇನ್ನು ಪಾಕಿಸ್ತಾನದಲ್ಲಂತೂ ಜನರಲ್ ಆಶ್ಫಾಕ್ ಪರ್ವೇಜ್ ಕಯಾನಿ ಪ್ರಕರಣವಂತೂ ಆ ದೇಶದಲ್ಲಿ ಬೇರೆಯೇ ಬೆಳವಣಿಗೆಗಳಿಗೆ ಕಾರಣವಾಗಿದೆ. ಮೆಮೊಗೇಟ್ ಹಗರಣಕ್ಕೆ ಸಂಬಂಧಿಸಿದಂತೆ ಪರ್ವೇಜ್ ಕಯಾನಿ ಅವರು ಸರ್ಕಾರದ ಜತೆಗೆ ಸಮಾಲೋಚಿಸದೆಯೇ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಯೂಸುಫ್ ರಜಾ ಗಿಲಾನಿಯವರು ಜನರಲ್ ಕಯಾನಿ ವಿರುದ್ಧ ಕೆಂಡ ಕಾರಿದ್ದಾರೆ. ಈ ಪ್ರಕರಣದ ಸುದ್ದಿ ತಾರಕದಲ್ಲಿದ್ದಾಗಲೇ `ದೇಶವು ಸೇನೆಯ ನಿಯಂತ್ರಣದಲ್ಲಿದೆ~ ಎಂಬಂತಹ ಹೇಳಿಕೆ ನೀಡಿದ ರಕ್ಷಣಾ ಇಲಾಖೆಯ ಕಾರ್ಯದರ್ಶಿಯನ್ನು ಆ ಕ್ಷಣವೇ ಗಿಲಾನಿಯವರು ಸೇವೆಯಿಂದ ವಜಾಗೊಳಿಸಿದ್ದಾರೆ.

ಇಂತಹ ಸಂದಿಗ್ಧತೆಯಲ್ಲಿ ಗಿಲಾನಿಯವರು ಸಂಸತ್ತನ್ನು ಉದ್ದೇಶಿಸಿ ಮಾತನಾಡಿ ಪ್ರಜಾಪ್ರತ್ವದ ಮೌಲ್ಯಗಳ ರಕ್ಷಣೆಯ ಬದ್ಧತೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಪ್ರಜಾಸತ್ತೆ ಮತ್ತು ಸರ್ವಾಧಿಕಾರಗಳ ಸಂಘರ್ಷದ ಬಗ್ಗೆ ಮಾತನಾಡಿದ್ದಾರೆ. ಪ್ರಜಾಪ್ರಭುತ್ವ ಮೌಲ್ಯಗಳ ರಕ್ಷಣೆಯ ನಿಟ್ಟಿನಲ್ಲಿ ವಿಶ್ವಾಸ ಮತವನ್ನೂ ಯಾಚಿಸಿದ್ದಾರೆ.

ಕೆಲವು ಸಮಯದ ಹಿಂದೆ ಇಸ್ಲಾಮಾಬಾದ್ ಎಂಬ ಶಕ್ತಿಕೇಂದ್ರಕ್ಕೆ ಯಾವುದೇ ಸುಳಿವು ನೀಡದೆಯೇ ಅಬೋಟಾಬಾದ್‌ನಲ್ಲಿ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕಾದ ಯೋಧರು ಕೊಂದು ಹಾಕಿದ್ದರು.
 
ಆಗ ಸ್ವತಃ ಗಿಲಾನಿಯವರೇ ಸಂಸತ್ತಿನಲ್ಲಿ ಜನರಲ್ ಕಯಾನಿ ಮತ್ತು ಗುಪ್ತಚರ ಸಂಸ್ಥೆ ಐಎಸ್‌ಐ ಮುಖ್ಯಸ್ಥ ಶೂಜಾ ಪಾಷಾ ಅವರನ್ನು ಇನ್ನಿಲ್ಲದಂತೆ ಸಮರ್ಥಿಸಿಕೊಂಡಿದ್ದು ನನಗಿನ್ನೂ ನೆನಪಿದೆ. ಆದರೆ ಪ್ರತಿಯೊಬ್ಬರೂ ತಮ್ಮ ತಪ್ಪುಗಳಿಂದಲೇ ಪಾಠ ಕಲಿಯುತ್ತಾ ಹೋಗುತ್ತಾರೆನ್ನುವುದರಲ್ಲಿ ಎರಡು ಮಾತಿಲ್ಲ. ಗಿಲಾನಿ ಕೂಡಾ ಇದರಿಂದ ಹೊರತೇನಲ್ಲ.
 
ಅಲ್ಲಿ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಸೇನೆಯ ನಿಯಂತ್ರಣದ ವಿಚಾರದಲ್ಲಿ ಸಮಸ್ಯೆಗಳು ತಲೆದೋರಿರುವುದು ಸತ್ಯ. ಆದರೆ ಇದೀಗ ಪ್ರಜಾಪ್ರಭುತ್ವ ಮೌಲ್ಯಗಳ ಹೆಸರಿನಲ್ಲಿ ಗಿಲಾನಿಯವರು ದೇಶದಲ್ಲಿ ಒಮ್ಮತದ ಜನಾಭಿಪ್ರಾಯ ಮೂಡಿಸಲು ಹಾಗೂ ಜನರನ್ನು ಒಗ್ಗೂಡಿಸಲು ಯತ್ನಿಸಿರುವುದು ಅಷ್ಟೇ ನಿಜ.

ಈ ನಡುವೆ ಪಾಕ್‌ನಲ್ಲಿನ ಇನ್ನೊಂದು ಬೆಳವಣಿಗೆಯೂ ಗಿಲಾನಿಯವರ ನಿದ್ದೆಗೆಡಿಸಿದೆ. ಸುಪ್ರೀಂ ಕೋರ್ಟ್ ಇದೀಗ ಅವರಿಗೆ ನ್ಯಾಯಾಂಗ ಉಲ್ಲಂಘನೆಯ ನೋಟಿಸ್ ನೀಡಿದೆ.

ಪಾಕಿಸ್ತಾನದ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಮತ್ತು ದಿವಂಗತ ಪ್ರಧಾನಿ ಬೆನಜೀರ್ ಭುಟ್ಟೊ ಅವರ ವಿರುದ್ಧ ಇರುವ ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆಯನ್ನು ಪುನರಾರಂಭಿಸಬೇಕೆಂಬ ಬಗ್ಗೆ ತಾನು ನೀಡಿದ್ದ ಆದೇಶವನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್ ಈ ನೋಟಿಸ್ ನೀಡಿದೆ.

ಸದ್ಯ ಗಿಲಾನಿ ಅವಸ್ಥೆ ಏನಾಗಬಹುದೋ ಗೊತ್ತಿಲ್ಲ. ಅದೇನೇ ಇರಬಹುದು, ಪಾಕ್‌ನಲ್ಲಿ ಸೇನೆಯ ಒತ್ತಡವನ್ನೂ ಎದುರಿಸಿ, ತಿರುಗೇಟು ನೀಡುತ್ತಲೇ ಗಟ್ಟಿಯಾಗಿ ನಿಂತ ಮೊದಲ ಪ್ರಧಾನಿ ಗಿಲಾನಿ ಎನ್ನುವುದಂತೂ ನಿಜ.
 
ಕಳೆದ ನಾಲ್ಕು ವರ್ಷಗಳಿಂದ ತಮ್ಮ ಅಧಿಕಾರಾವಧಿಯಲ್ಲಿ ಒಮ್ಮೆಯೂ ಈ ರೀತಿ ಎದುರುತ್ತರ ನೀಡದೆ ಈಗ ಒಮ್ಮಿಂದೊಮ್ಮೆಗೇ ಮಾತನಾಡುತ್ತಿರುವ ಬಗ್ಗೆ ಜನರು ಏನೇನೋ ಕಲ್ಪಿಸಿಕೊಂಡು ಟೀಕಿಸಬಹುದು.

ಆದರೆ ಹಿಂದೆ ಜನರಲ್ ಅಯೂಬ್ ಖಾನ್ ಮತ್ತು ಜಿಯಾ ಉಲ್ ಹಖ್ ಸಂದರ್ಭಗಳಂತೆ ಸೇನೆ ತನ್ನ ಪರಿಣಾಮಕಾರಿ ದಾಳವನ್ನೇನೂ ಉರುಳಿಸಿಲ್ಲ.  ಹೀಗಾಗಿ ಗಿಲಾನಿ ಕೂಡಾ ಕಾಲು ಕೆರೆದು ಜಗಳಕ್ಕೆ ಹೋಗದೆ, ಅವಕಾಶಕ್ಕಾಗಿ ಕಾಯುತ್ತಿದ್ದರು ಎನಿಸುತ್ತದೆ. ಇಂತಹದ್ದೊಂದು ಅವಕಾಶ ಎದುರಾದಾಗ ಗಿಲಾನಿ ತಿರುಗೇಟು ನೀಡಿದ್ದಾರೆ.

ಹೌದು, ಇದೀಗ ಎಲ್ಲರ ಕಣ್ಣೂ ಸುಪ್ರೀಂ ಕೋರ್ಟ್ ಮೇಲಿದೆ. ದಶಕಗಳ ಹಿಂದೆ ಜನರಲ್ ಅಯೂಬ್‌ಖಾನ್ ಅವರು ಪಾಕಿಸ್ತಾನದಲ್ಲಿ ಮೊದಲ ಸೇನಾ ದಂಗೆ ನಡೆಸಿ ಅಧಿಕಾರದ ಚುಕ್ಕಾಣಿ ಕೈಗೆತ್ತಿಕೊಂಡಾಗ ಅಲ್ಲಿನ ಸುಪ್ರೀಂ ಕೋರ್ಟ್ ಆ ಘಟನೆಯನ್ನು ಆ ಸಂದರ್ಭದ ಅಗತ್ಯ ಎಂಬಂತೆ ವರ್ತಿಸಿತ್ತು.

ಆದರೆ ಈಗ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇಫ್ತಿಖಾರ್ ಚೌಧರಿಯವರು ನ್ಯಾಯಾಂಗದ ಪಾರಮ್ಯವನ್ನು ಎತ್ತಿ ಹಿಡಿದಿರುವುದೇ ಅಲ್ಲದೆ, ನ್ಯಾಯಾಂಗದ ಸ್ವತಂತ್ರ ಮತ್ತು ದಿಟ್ಟ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ಇದು ಪಾಕಿಸ್ತಾನದ ಈ ಸಂದರ್ಭದ ಅಗತ್ಯ ಕೂಡಾ.

ಪಾಕಿಸ್ತಾನ ಈಗ ಬಹಳಷ್ಟು ಬದಲಾಗಿದೆ. ಅದೇನೆಂಬುದನ್ನು ಭಾರತ ಇನ್ನು ಅರ್ಥ ಮಾಡಿಕೊಳ್ಳಬೇಕಿದೆ. ಆಡಳಿತ ವ್ಯವಸ್ಥೆಯಲ್ಲಿ ಸೇನೆಯು ಮೇಲುಗೈ ಸಾಧಿಸುವುದನ್ನು ಅಲ್ಲಿನ ಜನ ಮತ್ತು ರಾಜಕೀಯ ಪಕ್ಷಗಳು ಒಮ್ಮತದಿಂದಲೇ ವಿರೋಧಿಸಲು ಆರಂಭಿಸಿವೆ. ಮತ್ತೆ ಸೇನೆ ಪ್ರಬಲವಾಗುವುದನ್ನು ಅಲ್ಲಿ ಯಾರೂ ಇಷ್ಟ ಪಡುತ್ತಿಲ್ಲ.
 
ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲೇ ಬೇಕೆಂಬ ಅರಿವು ತಡವಾಗಿಯಾದರೂ ಮೂಡಿದೆ, ಇದು ಭಾರತ ಮತ್ತು ಪಾಕಿಸ್ತಾನಗಳು ಮುಂದಿನ ದಿನಗಳಲ್ಲಿ ಅತ್ಯುತ್ತಮ ಸ್ನೇಹ ಸಂಬಂಧವಿರಿಸಿಕೊಂಡು ಮುನ್ನಡೆಯಲು ಗಟ್ಟಿ ಅಡಿಪಾಯದಂತೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಶಾಶ್ವತವಾದ ಶಾಂತಿಯ ಹಾದಿಯಲ್ಲಿ ಇದೊಂದು ಮಹತ್ತರ ಹೆಜ್ಜೆಯಾಗಲಿದೆ. 

 (ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT