ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ತೆಲಂಗಾಣವೆಂಬ ಗೊಂದಲ ಗೂಡು

Last Updated 15 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು  ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಆಂಧ್ರ ಪ್ರದೇಶದ ಇತರ ಪ್ರದೇಶಗಳಿಂದ ಈ ನಿರ್ಧಾರಕ್ಕೆ ಈ ಮಟ್ಟಿಗಿನ ವಿರೋಧ ವ್ಯಕ್ತವಾಗಬಹುದು ಎಂದು ಅವರು ನಿರೀಕ್ಷಿಸಿರ ಲಿಲ್ಲ. ಸೀಮಾಂಧ್ರದಲ್ಲಿ ಇದೀಗ ಪ್ರತಿಭಟನೆ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ, ನೀರು ಸರಬರಾಜು ನಿಂತಿದೆ, ತೈಲ ಸಾಗಣೆಗೆ ಅಡ್ಡಿ ಉಂಟಾಗಿದೆ.

ಕೇಂದ್ರ ಸರ್ಕಾರ ಇಂತಹದ್ದೊಂದು ನಿರ್ಧಾರ ತೆಗೆದುಕೊಳ್ಳುವ ಮೊದಲು ಎಲ್ಲಾ ಪ್ರದೇಶಗಳ ಜನಾಭಿಪ್ರಾಯವನ್ನು ಸೂಕ್ಷ್ಮವಾಗಿ ಗಮನಿಸ ಬಹುದಿತ್ತು. ವಿಧಾನಸಭೆಯಲ್ಲಿ ಈ ಕುರಿತು ಚರ್ಚೆಗೆ ಅವಕಾಶವಾಗುವಂತೆ ನೋಡಿಕೊಳ್ಳಬ ಹುದಿತ್ತು. ಹೌದು, ಆಂಧ್ರ ವಿಧಾನಸಭೆಯ ಲ್ಲಿರುವ 294 ಸದಸ್ಯರಲ್ಲಿ 179 ಮಂದಿ ಸೀಮಾಂಧ್ರಕ್ಕೆ ಸೇರಿದವರು ಎಂಬುದನ್ನು ಮರೆ ಯುವಂತಿಲ್ಲ. ಇವರು ಪ್ರತ್ಯೇಕ ತೆಲಂಗಾಣಕ್ಕೆ ಅಡ್ಡಿ ಪಡಿಸುವ ಸಾಧ್ಯತೆ ಇತ್ತೆನ್ನಿ. ಇಂತಹ ಸಂದಿಗ್ಧದಲ್ಲಿ ಪರಸ್ಪರ ಸಂವಾದ ಮತ್ತು ವಿಚಾರ ವಿನಿಮಯಕ್ಕೆ ಸಂವಿಧಾನದಲ್ಲಿ ಅವಕಾಶವಿದೆಯೇ ಹೊರತು, ಏಕಾಭಿಪ್ರಾಯಕ್ಕಲ್ಲ.

ಜನರ ಭಾವನೆಗಳಿಗೆ ಸಂಬಂಧಿಸಿದ ಇಂತಹ ಅಂಶಗಳನ್ನೆಲ್ಲಾ ಮುಂದಾಲೋಚನೆಯಿಂದ ಗ್ರಹಿ ಸಬೇಕಾದ ಅಗತ್ಯವಿದೆ. ಕೆಲವು ಸಲ ಇಂತಹ ಸೂಕ್ಷ್ಮಗಳನ್ನು ಸರ್ಕಾರದ ಗುಪ್ತಚರ ಜಾಲವೂ ಗ್ರಹಿಸಲು ವಿಫಲವಾಗಬಹುದು. ತೆಲಂಗಾಣದ ಲ್ಲಿಯೂ ಸಿಟ್ಟು, ಸಿಡುಕು ತಾರಕದಲ್ಲಿತ್ತು. ಆಂಧ್ರವನ್ನು ವಿಭಜಿಸುವ ಬಗ್ಗೆ ಆಲೋಚನೆಗಳು, ಪ್ರತಿಭಟನೆಗಳು ಇಂದು ನಿನ್ನೆಯದೇನಲ್ಲ.

ಚೆನ್ನಾರೆಡ್ಡಿಯವರು ಹಿಂದೆ ಆಂಧ್ರದ ಮುಖ್ಯ ಮಂತ್ರಿಯಾಗಿದ್ದಾಗಲೂ ಇದಕ್ಕೆ ಸಂಬಂಧಿಸಿದ ಧ್ವನಿ ಕೇಳಿ ಬಂದಿತ್ತು. ನಾಲ್ಕು ದಶಕಗಳ ಹಿಂದೆಯೇ ಕೆ.ಕಾಮರಾಜ್ ಎಐಸಿಸಿ ಅಧ್ಯಕ್ಷರಾ ಗಿದ್ದಾಗಲೂ ಅವರೂ ಈ ಧ್ವನಿಯನ್ನು ಆಲಿಸಿ ದ್ದರು. ಅವರಿಗೆಲ್ಲಾ ಈ ಸಮಸ್ಯೆಯ ಆಳದ ಅರಿವು ಇದ್ದೇ ಇತ್ತು. ಆದರೆ ದೆಹಲಿಯಲ್ಲಿ ಕುಳಿತಿರುವ ಸೋನಿಯಾ ಗಾಂಧಿ ಅವರಿಗೆ ಆಂಧ್ರ ರಾಜಕಾರಣದ ಒಳಸುಳಿಗಳು ಗೊತ್ತಿಲ್ಲ, ಪ್ರತ್ಯೇಕ ತಾವಾದದ ನೆಲಮಟ್ಟದ ಗ್ರಹಿಕೆಗಳೂ ಇಲ್ಲ. ಒಟ್ಟಾರೆ, ಆಂಧ್ರದ ವಾಸ್ತವದ ಬಗ್ಗೆ ಸೋನಿಯಾ ತಿಳಿವಳಿಕೆ ಅಷ್ಟರಲ್ಲೇ ಇದೆ.

ಆಂಧ್ರ ಪ್ರದೇಶವನ್ನು ವಿಭಜಿಸುವುದು ಅನಿ ವಾರ್ಯವಾಗಿತ್ತೆ ಎಂಬ ಪ್ರಶ್ನೆ ಇದೀಗ ಧುತ್ತೆಂ ದಿದೆ. ಭಾಷಾವಾರು ರಾಜ್ಯ ಪುನರ್‌ ವಿಂಗಡಣೆಯ ಸಂದರ್ಭದಲ್ಲಿ ಆಂಧ್ರಪ್ರದೇಶವೇ ಮೊದಲಿಗೆ ಅಸ್ತಿತ್ವಕ್ಕೆ ಬಂದಿತ್ತು. ಆಗಲೂ ತೆಲಂಗಾಣದ ಪ್ರಸ್ತಾಪ ಇದ್ದೇ ಇತ್ತಲ್ಲ. ಆದರೆ ಕೇಂದ್ರ ಮಾತ್ರ ಸಂಯುಕ್ತ ಆಂಧ್ರದ ಬಗ್ಗೆಯೇ ಅವತ್ತು ಒಲವು ತೋರಿತ್ತು. ಸಮಸ್ತ ತೆಲುಗು ಭಾಷಿಕರ ಮತ್ತು ಆಂಧ್ರ ಭೂಪ್ರದೇಶದ ಒಳಿತಿನ ಮತ್ತು ಅಭಿವೃದ್ಧಿಯ ನೆಲೆಯಲ್ಲಿ ಅಂದು ಕೇಂದ್ರ ಸರ್ಕಾರ ಆ ನಿರ್ಧಾರ ತೆಗೆದುಕೊಂಡಿತ್ತು.

ಅಂದು ತೆಲುಗು ಮಾತನಾಡುವ ಜನರೆ ಲ್ಲರೂ ಆಂಧ್ರಪ್ರದೇಶ ಉದಯವಾದಾಗ ಒಕ್ಕೊರಲಿನಿಂದ ಸ್ವಾಗತಿಸಿದ್ದರು. ಏಕೆಂದರೆ ಆ ಸಂದರ್ಭದಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ ಜತೆಗೆ ಸೇರಿಹೋಗಿದ್ದ ತೆಲುಗು ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಬಹಳಷ್ಟು ಪ್ರದೇಶಗಳು ವಿಶಾಲ ಆಂಧ್ರದ ಮಡಿಲಿಗೆ ಬಂದಿದ್ದವು.

ಯಾವುದು ಏನೇ ಇದ್ದರೂ, ಎಲ್ಲವೂ ಭಾರತ ಸಂವಿಧಾನದ ಚೌಕಟ್ಟಿನೊಳಗೇ ಇರುವುದು ತಾನೆ. ಈ ಭೂಪ್ರದೇಶಗಳೆಲ್ಲಾ ಭಾರತದ ಭಾಗ ವಾಗಿರುತ್ತವೆಯಲ್ಲವೇ. ಆದರೆ ಈಚೆಗೆ ಇಂತಹ ದ್ದೊಂದು ವಿಶಾಲ ಮನೋಭಾವ ಕಡಿಮೆಯಾ ಗುತ್ತಿದೆಯೇ? ಮಹತ್ವಾಕಾಂಕ್ಷೆ ಇರಿಸಿಕೊಂಡಿ ರುವ ಕೆಲವು ರಾಜಕಾರಣಿಗಳು ಈ ತೆರನಾದ ಅಸಹನೆಯ ಜ್ವಾಲೆಗೆ ತುಪ್ಪ ಸುರಿಯುತ್ತಿದ್ದಾ ರೆಂದರೆ ತಪ್ಪಾಗಲಾರದು.

ಉದ್ದೇಶಿತ ತೆಲಂ ಗಾಣ ಪ್ರಾಂತವು ಹೆಚ್ಚೂ ಕಡಿಮೆ ಹಿಂದಿನ ನಿಜಾಮರ ಆಡಳಿತದ ಪ್ರಾಂತ್ಯಗಳನ್ನೆಲ್ಲಾ ಒಳಗೊಂಡಿದೆ. ನಿಜಾಮರ ಆಡಳಿತದ ಆ ದಿನಗಳಲ್ಲಿ ಸಶಸ್ತ್ರಧಾರಿ ರಜಾಕಾರರ ಹಾವಳಿ ಮೇರೆ ಮೀರಿತ್ತು. ಅಂದು ನಿಜಾಮರೂ ರಜಾ ಕಾರರಿಗೆ ಬೆಂಬಲ ನೀಡಿದ್ದರಲ್ಲದೆ, ಪಾಕಿಸ್ತಾನದ ಜತೆಗೆ ಸೇರುವ ಕನಸು ಕಂಡಿದ್ದರು. ನಿಜಾಮರ ಕನಸು ನನಸಾಗಲಿಲ್ಲ ಬಿಡಿ. ಆದರೆ ರಾಜಕಾ ರಣಿಗಳು ಈಗಲೇ ಹೊಸ ರಾಜ್ಯಗಳಲ್ಲಿ ತಾವು ಪಡೆಯಬೇಕಾದ ಸ್ಥಾನಮಾನಗಳ ಬಗ್ಗೆ ಕನಸು ಕಾಣುತ್ತಿದ್ದಾರೆ. 

ಆಂಧ್ರದ ಈಗಿನ ಮುಖ್ಯಮಂತ್ರಿ ಕಿರಣ್‌ಕುಮಾರ್ ರೆಡ್ಡಿ ಅವರೂ ಸಂಯುಕ್ತ ಆಂಧ್ರದ ಪರವಾಗಿಯೇ ಮಾತನಾಡುತ್ತಿದ್ದಾರೆ. ಅವರು ಇನ್ನೂ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿಲ್ಲ. ಅವರು ರಾಜೀನಾಮೆ ನೀಡಿದ್ದರೆ ಆಂಧ್ರ ರಾಜಕಾರಣ ಹೊಸತೊಂದು ತಿರುವು ಪಡೆಯಲು ಸಾಧ್ಯವಿತ್ತು.

ಒಂದಂತೂ ನಿಜ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ತೆಲಂಗಾಣ ಪ್ರಾಂತ್ಯದಲ್ಲಿ ಭಾರೀ ಬಹುಮತ ಗಳಿಸುವ ಹೆಗ್ಗುರಿಯನ್ನು ಕಾಂಗ್ರೆಸ್ ಇರಿಸಿಕೊಂಡಿದೆ. ಆಂಧ್ರ ಪ್ರದೇಶದ ಜನರ ಹಿತಾಸಕ್ತಿಗಿಂತಲೂ ಪಕ್ಷ ಹಿತಾಸಕ್ತಿಯೇ ಇವತ್ತಿನ ರಾಜಕಾರಣದಲ್ಲಿ ಮೇಲುಗೈ ಸಾಧಿಸು ತ್ತಿರುವುದೊಂದು ವಿಪರ್ಯಾಸವಾಗಿದೆ.

ರಾಜ್ಯ ವಿಭಜನೆಯ ನಂತರ ಎಲ್ಲವೂ ಸಲೀಸಾಗಿ ಇರು ತ್ತದೆ ಎನ್ನುವಂತಿಲ್ಲ. ಇದರ ಜತೆಗೇ ಸಮಸ್ಯೆಗಳ ಬೀಜ ಮೊಳಕೆ ಒಡೆಯುತ್ತಿರುವುದನ್ನೂ ನಾವು ನೋಡಬಹುದು. ಕೃಷ್ಣಾ ನದಿ ಈ ಎರಡೂ ಉದ್ದೇಶಿತ ಪ್ರಾಂತ್ಯಗಳಲ್ಲಿ ಹರಿಯುವುದರಿಂದ ನದಿ ನೀರು ಹಂಚಿಕೆ ವಿವಾದ ತಾರಕಕ್ಕೆ ಏರುವ ಸಾಧ್ಯತೆ ಇದ್ದೇ ಇದೆ. ಸಮಸ್ಯೆಗಳು ಹೇಗಿ ರುತ್ತವೆ ಎನ್ನುವುದಕ್ಕೆ ಇದೊಂದು ನಿದರ್ಶನ ಅಷ್ಟೆ.

ಈ ನಡುವೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಸೇವೆ ಮತ್ತು ಅವರ ವ್ಯಾಪಕ ಚಟುವಟಿಕೆಗಳು ಕಾಂಗ್ರೆಸ್‌ಗೆ ರಕ್ಷಾ ಕವಚ ವಾಗಲಿದೆ ಎಂಬ ಮಾತೂ ಇದೆ. ಆದರೆ ಸುಪ್ರೀಂ ಕೋರ್ಟ್‌ನ ತೀರ್ಪೊಂದರ ವಿರುದ್ಧ ಸಂಸತ್ತಿನಲ್ಲಿ ಮಸೂದೆ ಮಂಡಿಸಿದ ಕಾಂಗ್ರೆಸ್‌ನ ನಡೆ ಹಾಸ್ಯಾ ಸ್ಪದ.

ಯಾವುದೇ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದರು ಮತ್ತು ಶಾಸಕರು ಅಪರಾಧಿ ಎಂದು ನ್ಯಾಯಾಲಯ ಒಂದು ತೀರ್ಪು ನೀಡಿ, ಶಿಕ್ಷೆ ಪ್ರಕಟಿಸಿದ ತಕ್ಷಣ ಅಂತಹ ಜನಪ್ರತಿನಿಧಿಗಳು ತಮ್ಮ ಸಂಸತ್ ಸದಸ್ಯತ್ವ ಅಥವಾ ವಿಧಾನ ಸಭಾ ಸದಸ್ಯತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ. ಸುಪ್ರೀಂ ಕೋರ್ಟ್‌ನ ಈ ತೀರ್ಪಿನ ವಿರುದ್ಧವೇ ಸುಗ್ರಿ ವಾಜ್ಞೆ ಸಿದ್ಧಪಡಿಸಿ ವಾಪಸ್‌ ಪಡೆದ ಯುಪಿಎ ಇದೀಗ ಜನರ ಎದುರು ಬೆತ್ತಲಾಗಿದೆ. ಯುಪಿಎ ಇಂತಹುದೆ ದಿಟ್ಟ ನಿಲುವನ್ನು ಸಂಯುಕ್ತ ಆಂಧ್ರದ ರಕ್ಷಣೆಗಾಗಿಯೂ ತೆಗೆದುಕೊಳ್ಳಬಹುದಿತ್ತಲ್ಲಾ ಎಂಬ ಮಾತೂ ಕೇಳಿ ಬರುತ್ತಿದೆ.

ಈಗ ತೆಲಂಗಾಣ ಮತ್ತು ಸೀಮಾಂಧ್ರಗಳ ಹೋರಾಟವಂತೂ ಹೊಸ ಸ್ವರೂಪ ಪಡೆದು ಕೊಂಡಿದ್ದು, ಎರಡೂ ಉದ್ದೇಶಿತ ಪ್ರಾಂತ್ಯಗಳ ಬೆಂಬಲಿಗರು ಹೈದರಾಬಾದ್ ನಗರ ತಮಗೇ ಬರಬೇಕೆಂಬ ವಾದವನ್ನು ಮುಂದಿಟ್ಟಿದ್ದಾರೆ. ಆದರೆ ಮುಂದಿನ ಹತ್ತು ವರ್ಷಗಳವರೆಗಾದರೂ ಎರಡೂ ಉದ್ದೇಶಿತ ಪ್ರಾಂತ್ಯಗಳ ರಾಜಧಾನಿ ಯಾಗಿ ಹೈದರಾಬಾದ್ ನಗರ ಮುಂದುವರಿ ಯಲಿ ಎಂಬ ವಾದ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಆ ಸ್ಥಾನದಲ್ಲಿ ಹೈದರಾಬಾದ್ ಶಾಶ್ವತವಾಗಿಯೇ ಇದ್ದರೆ ತಪ್ಪೇನು? ಹಿಂದೆ ವಿಶಾಲ ಪಂಜಾಬ್ ರಾಜ್ಯವು ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಾಗಿ ವಿಭಜನೆ ಗೊಂಡಾಗ, ಚಂಡಿಗಡವು ಕೇಂದ್ರಾಡಳಿತ ಪ್ರದೇಶ ವಾಗಿರಲಿದೆ ಎಂಬ ಮಾತು ಕೇಳಿ ಬಂದಿತ್ತು. ಪಂಜಾಬ್ ಮತ್ತು ಹರಿಯಾಣಗಳು ಪ್ರತ್ಯೇಕ ರಾಜಧಾನಿಯನ್ನು ಹೊಂದಲಿವೆ ಎನ್ನಲಾಗಿತ್ತು. ಆದರೆ ಆ ಎರಡೂ ರಾಜ್ಯಗಳ ಮುಖಂಡರು ಒಗ್ಗೂಡಿ ಮಾತುಕತೆ ನಡೆಸಿ ಉಭಯ ರಾಜ್ಯ ಗಳಿಗೂ ಚಂಡಿಗಡವೇ ರಾಜಧಾನಿಯಾಗಿ ಮುಂದುವರಿಯುವುದೇ ಸರಿ ಮತ್ತು ಅನುಕೂಲಕರ ಎಂದು ತೀರ್ಮಾನಿಸಿದರು.

ಹೈದರಾಬಾದ್ ಪ್ರದೇಶವು ತೆಲಂಗಾಣ ವ್ಯಾಪ್ತಿಯಲ್ಲಿ ಬರಲಿದೆ. ಇದೀಗ ಉದ್ದೇಶಿತ ತೆಲಂಗಾಣ ಚೌಕಟ್ಟಿನೊಳಗೆ ಬರುವ ಸರ್ಕಾರಿ ನೌಕರರು ದೊಡ್ಡದಾಗಿ ಧ್ವನಿ ಎತ್ತಿದ್ದು, ‘ಸೀಮಾಂಧ್ರ ಪ್ರದೇಶದ ನೌಕರರಿಗೆ ಹೈದ ರಾಬಾದ್‌ನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು’ ಎಂದೂ ಆಗ್ರಹಿಸಿದ್ದಾರೆ. ಇಂತಹ ಆಲೋಚ ನೆಗಳು ಒಳ್ಳೆಯದಲ್ಲ. ಈ ತೆರನಾದ ಆಲೋಚ ನೆಗಳೇ ಮುಂದಿನ ದಿನಗಳಲ್ಲಿ ದೇಶದ ಸಮಗ್ರತೆಗೇ ಭಂಗ ತರುವಂತಹದ್ದಾಗಬಹುದು.

ವಿದರ್ಭ, ಗೂರ್ಖಾಲ್ಯಾಂಡ್ ಸೇರಿದಂತೆ ಈಗಾಗಲೇ ಹಲವು ಕಡೆ ಕೇಳಿ ಬರುತ್ತಿರುವ ಪ್ರತ್ಯೇಕ ರಾಜ್ಯದ ಧ್ವನಿಗೆ ಕೇಂದ್ರ ಇದೀಗ ಜಾಣ ಕಿವುಡು ಪ್ರದರ್ಶಿಸುತ್ತಿದೆ. ಪ್ರತ್ಯೇಕ ತೆಲಂಗಾಣದ ಪ್ರಕಟಣೆ ಹೊರ ಬೀಳುತ್ತಿದ್ದಂತೆಯೇ ಇದೀಗ ಅಂತಹ ಕಡೆಗಳಲ್ಲೆಲ್ಲಾ ಪ್ರತಿಭಟನೆಯೂ ಜೋರಾಗಿದೆ.

ದೇಶದಲ್ಲಿ ಪ್ರಸಕ್ತ ಆರ್ಥಿಕ ಪರಿಸ್ಥಿತಿ ಅತ್ಯಂತ ಆತಂಕಕಾರಿಯಾಗಿದೆ. ಇನ್ನೊಂದು ಕಡೆ ಚೀನಾ ಮತ್ತು ಪಾಕಿಸ್ತಾನಗಳು ಅನಗತ್ಯ ಗೊಂದಲ ಮತ್ತು ಆತಂಕದ ಸ್ಥಿತಿಯನ್ನು ಉಂಟು ಮಾಡು ತ್ತಿವೆ. ಇಂತಹ ಕೆಲವು ಸಮಸ್ಯೆಗಳನ್ನೇ ಸರಿಯಾಗಿ ನಿಭಾಯಿಸಲಾಗದೆ ಪರದಾಡುತ್ತಿರುವ ಕೇಂದ್ರ ಸರ್ಕಾರ ಇದೀಗ ‘ತೆಲಂಗಾಣ’ದ ಮೂಲಕ ಹೊಸತೊಂದು ಸಮಸ್ಯೆಯನ್ನು ತಾನೇ ಹುಟ್ಟು ಹಾಕಿಕೊಂಡಿದೆ.

ದೇಶ ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಸರ್ಕಾರವೇ ‘ತೆಲಂಗಾಣ’ ವನ್ನು ಬಳಸುತ್ತಿರಬಹುದೇ ಎಂಬ ಶಂಕೆ ಇದ್ದೇ ಇದೆ. ಹಿಂದಿನಿಂದಲೂ ಸಮಸ್ಯೆಗಳನ್ನು ಇದೇ ರೀತಿ ನಿಭಾಯಿಸಿದ ಹಿನ್ನೆಲೆ ಕಾಂಗ್ರೆಸ್ ಪಕ್ಷದ್ದು ತಾನೆ?

ರಾಜ್ಯಗಳ ಪುನರ್‌ವಿಂಗಡಣೆಗೆ ಸಂಬಂಧಿಸಿ ದಂತೆ ಇನ್ನೊಂದು ಆಯೋಗ ನೇಮಕಗೊಳ್ಳಬೇ ಕೆಂಬ ಆಗ್ರಹ ಹಲವು ವಲಯಗಳಿಂದ ಈಚೆಗೆ ಕೇಳಿ ಬಂದಿತ್ತಾದರೂ, ಅದನ್ನು ತಿರಸ್ಕರಿಸಿದ ಕೇಂದ್ರದ ನಿಲುವು ಜಾಣತನದ್ದೇ ಆಗಿದೆ. ಅಂತಹ ದ್ದೊಂದು ತಾಪತ್ರಯಗಳ ಕರಂಡವೊಂದನ್ನು ತೆರೆದರೆ, ಅದು ಸಮಸ್ಯೆಗಳ ಅಸಂಖ್ಯ ಭೂತಗಳ ನರ್ತನ ಗದ್ದಲವೇ ಆಗಿ ಬಿಡುತ್ತದಷ್ಟೆ.

ಇಂತಹದ್ದೊಂದು ಆಯೋಗ 1985ರಷ್ಟು ಹಿಂದೆಯೇ ವರದಿಯೊಂದನ್ನು ನೀಡಿತ್ತು. ರಾಜ್ಯ ವೊಂದು ಪುನರ್ ವಿಂಗಡಣೆಯಾಗಲಿ ಅಥವಾ ಆಗದಿರಲಿ ಅದು ಸಮಗ್ರ ಭಾರತದ ಒಂದು ಭಾಗವಾಗಿರುತ್ತದಲ್ಲಾ, ಹಾಗಿದ್ದರೂ ಅನಗತ್ಯ ಅಸಹನೆ ಏಕೆ ಎಂದೂ ಆ ವರದಿಯಲ್ಲಿ ಆಯೋಗ ತನ್ನದೊಂದು ಅನಿಸಿಕೆಯನ್ನು ಸೇರಿಸಿತ್ತು.

ಭಾರ ತದ ಸಂವಿಧಾನದಲ್ಲಿ ಈ ದೇಶದ ಪ್ರತಿ ಯೊಬ್ಬನಿಗೂ ಪೌರತ್ವ ನೀಡಲಾಗಿದೆ. ಭಾರತದ ಯಾವುದೇ ರಾಜ್ಯ, ಜನಾಂಗ, ಭಾಷೆಗಳಿದ್ದರೂ ಎಲ್ಲರ ನಡುವೆ ಸಮಾನತೆ ಇರುವಂತೆ ಒಬ್ಬನಿಗೆ ಒಂದು ಪೌರತ್ವ ಇರುತ್ತದೆ. ಪರಿಸ್ಥಿತಿ ಹೀಗಿದ್ದರೂ, ಇದೇಕೆ ಈ ಗೊಂದಲ ಎಂದೂ ಆ ಆಯೋಗ ಪ್ರಶ್ನಿಸಿತ್ತು. ಅದೇನೇ ಇರಲಿ, ಉದ್ದೇಶಿತ ತೆಲಂಗಾಣ ರಾಜ್ಯಕ್ಕೆ ಸಂಬಂಧಿಸಿದಂತೆ ಕೇಂದ್ರದ ನಿರ್ಧಾರ ಸರಿಯಲ್ಲ.

29ನೇ ರಾಜ್ಯವಾಗಿ ಹುಟ್ಟು ಪಡೆಯಲಿರುವ ಉದ್ದೇಶಿತ ತೆಲಂಗಾಣ ರಾಜ್ಯದ ಮಂದಿ  ‘ಇಡೀ ದೇಶದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಮತ್ತು ಹಕ್ಕು ಇರುವ ಪೌರತ್ವಕ್ಕೆ ಈ ನಾಡಿನ ಸಂವಿಧಾನ ಅವಕಾಶ ಕಲ್ಪಿಸಿದೆ’ ಎಂಬುದನ್ನು ಮನದಟ್ಟು ಮಾಡಿಕೊಂಡರೆ ಸಾಕು.
    ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT