ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕತೆಯ ದನಿಯನ್ನು ಮೊಳಕೆಯಲ್ಲೇ ಚಿವುಟಬೇಕು

Last Updated 11 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಪ್ರತ್ಯೇಕತೆಯನ್ನು ಬಯಸುವ ಕೆಲವು ಭಂಡ ಮತ್ತು ಬೇಜವಾಬ್ದಾರಿಯುತ ಧ್ವನಿಗಳು ದಕ್ಷಿಣ ಭಾರತದಲ್ಲಿ ಐದು ದಶಕಗಳ ನಂತರ ಮತ್ತೆ ಕೇಳಿಸುತ್ತಿವೆ. ಭಾರತದ ಒಕ್ಕೂಟ ವ್ಯವಸ್ಥೆಯ ಒಳಗೇ, ದಕ್ಷಿಣದ ಐದು ರಾಜ್ಯಗಳನ್ನು ಒಳಗೊಂಡ ಪ್ರತ್ಯೇಕ ‘ದ್ರಾವಿಡ ನಾಡು’ ರಚನೆ ಆಗಬೇಕು ಎಂದು ದಕ್ಷಿಣದ ಕೆಲವು ರಾಜಕೀಯ ಮುಖಂಡರು ಆಗ್ರಹಿಸುತ್ತಿದ್ದರೆ, ಇನ್ನು ಕೆಲವು ಮುಖಂಡರು ಈ ಐದು ರಾಜ್ಯಗಳಿಗೆ ಉತ್ತರ ಭಾರತದವರಿಂದ ಅನ್ಯಾಯ ಆಗುತ್ತಿರುವ ಕಾರಣ ಇವರು ಒಕ್ಕೂಟ ವ್ಯವಸ್ಥೆಯಿಂದಲೇ ಹೊರಬರಬೇಕು ಎಂದು ಹೇಳಿದ್ದಾರೆ.

‘ದಕ್ಷಿಣದ ಎಲ್ಲ ರಾಜ್ಯಗಳು ದ್ರಾವಿಡ ಅಸ್ಮಿತೆಯನ್ನು ತಮ್ಮದಾಗಿಸಿಕೊಂಡಾಗ, ಆ ರಾಜ್ಯಗಳು ಹೇಳುತ್ತಿರುವಂತಹ ತಾರತಮ್ಯವು ಮಾಯವಾಗುತ್ತದೆ. ಆಗ ನಮ್ಮ ಧ್ವನಿಯು ಗಟ್ಟಿಯಾಗಿ ಕೇಳಿಸುವಂತೆ ಆಗುತ್ತದೆ’ ಎನ್ನುವ ಮೂಲಕ ನಟ, ರಾಜಕಾರಣಿ ಕಮಲ್‌ ಹಾಸನ್ ಈ ಚರ್ಚೆಗೆ ನಾಂದಿ ಹಾಡಿದರು. ಕಮಲ ಹಾಸನ್ ಮಾತಿಗೆ ದನಿಗೂಡಿಸಿದ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್, ದಕ್ಷಿಣದ ರಾಜ್ಯಗಳೆಲ್ಲ ಒಟ್ಟಾಗಿ, ಪ್ರತ್ಯೇಕ ದ್ರಾವಿಡ ನಾಡಿಗೆ ಒತ್ತಾಯಿಸಿದರೆ ತಾವು ಅದನ್ನು ಬೆಂಬಲಿಸುವುದಾಗಿ ಹೇಳಿದರು. ಉತ್ತರ ಮತ್ತು ದಕ್ಷಿಣದ ನಡುವಣ ಕಂದಕದ ವಿಚಾರವಾಗಿ ತೆಲುಗು ಚಿತ್ರನಟ ಮತ್ತು ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರೂ ಎಚ್ಚರಿಕೆ ನೀಡುವಂತೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವು ಪಡೆದುಕೊಳ್ಳಲು ‘ದಕ್ಷಿಣ ಭಾರತದ ಸಂಯುಕ್ತ ರಾಜ್ಯಗಳು’ ಎನ್ನುವ ಪರಿಕಲ್ಪನೆಯನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಪವನ್ ಕಲ್ಯಾಣ್ ಕಾಣಿಸಿಕೊಂಡಿದ್ದಾರೆ.

ಆದರೆ, ತೆಲುಗುದೇಶಂ ಪಕ್ಷದ ಸಂಸದ ಹಾಗೂ ಚಿತ್ರನಟ ಮುರಳಿ ಮೋಹನ್ ಅವರು ಪ್ರತ್ಯೇಕತೆಯ ಪರವಾಗಿ ಮಾತನಾಡುವ ಮೂಲಕ ಈ ಚರ್ಚೆಯನ್ನು ಒಪ್ಪಲು ಸಾಧ್ಯವೇ ಇಲ್ಲದ ಹಂತಕ್ಕೆ ಕೊಂಡೊಯ್ದಿದ್ದಾರೆ. ತಾರತಮ್ಯಕ್ಕೆ ಒಳಗಾದ ಭಾವನೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಇದೆ. ಇದು ಮುಂದುವರಿದಿದ್ದೇ ಆದಲ್ಲಿ ದಕ್ಷಿಣದ ಐದು ರಾಜ್ಯಗಳು ತಾವು ‘ಪ್ರತ್ಯೇಕ ರಾಷ್ಟ್ರ’ ಎಂದು ಘೋಷಿಸಿಕೊಳ್ಳಲಿವೆ ಎಂದು ಅವರು ಹೇಳಿದ್ದಾರೆ.

ಕೇಂದ್ರದಿಂದ ರಾಜ್ಯಗಳಿಗೆ ಸಿಗುವ ಅನುದಾನವನ್ನು ಹಂಚಿಕೆ ಮಾಡುವುದು ಹೇಗೆ ಎಂಬ ವಿಚಾರದಲ್ಲಿ 15ನೇ ಹಣಕಾಸು ಆಯೋಗ ಹೇಳಿರುವ ಮಾತುಗಳು ಈಗ ಕಂಡುಬಂದಿರುವ ಅತೃಪ್ತಿಗೆ ಕಾರಣವಾಗಿರುವಂತಿದೆ. ಕೇಂದ್ರ ಸರ್ಕಾರದಿಂದ ಸಿಗುವ ನೆರವು ಸಮಾನವಾಗಿ, ನ್ಯಾಯೋಚಿತವಾಗಿ ಇರಬೇಕು ಎಂಬ ಬೇಡಿಕೆ ಇಡುವ, ರಾಷ್ಟ್ರದ ಸಂಪತ್ತು ನ್ಯಾಯೋಚಿತವಾಗಿ ಹಂಚಿಕೆ ಆಗಬೇಕು ಎಂದು ಹೇಳುವ ಹಕ್ಕು ದಕ್ಷಿಣದ ರಾಜ್ಯಗಳಿಗೆ ಖಂಡಿತವಾಗಿಯೂ ಇದೆ. ಈ ಎಲ್ಲ ವಿಚಾರಗಳನ್ನು ಚರ್ಚಿಸಬಹುದು. ಆದರೆ ಇವು ದೇಶ ತುಂಡರಿಸಲು ನೆಪವಾಗುವಂತಿಲ್ಲ.

ಕಳೆದ ಎಪ್ಪತ್ತು ವರ್ಷಗಳ ಅವಧಿಯಲ್ಲಿ ದೇಶವು ಏಕಭಾವದೆಡೆಗೆ ದಾಪುಗಾಲು ಇಟ್ಟಿದೆ ಎಂದು ನಂಬಲಾಗಿತ್ತು, ದೇಶವನ್ನು ಚೂರು ಮಾಡುವ ದನಿಗಳನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲಾಗಿದೆ ಎಂಬ ನಂಬಿಕೆ ಕೂಡ ಇತ್ತು. ಹೀಗಿರುವಾಗ ದಕ್ಷಿಣಕ್ಕೊಂದು ಪ್ರತ್ಯೇಕ ಅಸ್ಮಿತೆ ಬೇಕು ಎಂಬ ಬೇಡಿಕೆಯು ನಿಜಕ್ಕೂ ಆಶ್ಚರ್ಯಕರ. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ, ಅಧಿಕೃತ ಸಭೆಯೊಂದರಲ್ಲಿ ಪ್ರತ್ಯೇಕತಾವಾದದ ದನಿ ಮೊದಲ ಬಾರಿಗೆ ಕೇಳಿಬಂದಿದ್ದು ಸಿ.ಎನ್. ಅಣ್ಣಾದೊರೈ ಅವರು 1962ರ ಮೇ 1ರಂದು ರಾಜ್ಯಸಭೆಯಲ್ಲಿ ಮಾಡಿದ ತಮ್ಮ ಮೊದಲ ಭಾಷಣದಲ್ಲಿ. ಆಗ ನೆಹರೂ ಪ್ರಧಾನಿಯಾಗಿದ್ದರು.

ಡಿಎಂಕೆ ಪಕ್ಷದ ಈ ನಾಯಕ ತಮಗೆ ದೊರೆತ ಮೊದಲ ಅವಕಾಶವನ್ನು ತಮ್ಮ ಪಕ್ಷದ ಅತ್ಯಂತ ವಿವಾದಾತ್ಮಕ ಬೇಡಿಕೆಯ ಬಗ್ಗೆ ಮಾತನಾಡಲು ಬಳಸಿಕೊಂಡರು. ತಮಿಳುನಾಡಿನ (ಅಂದಿನ ಮದ್ರಾಸ್) ಪ್ರತ್ಯೇಕತೆ ಆ ಬೇಡಿಕೆ. ತಮ್ಮ ಭಾಷಣವನ್ನು ಆಲಿಸುತ್ತಿದ್ದವರ ಪಾಲಿಗೆ ಆಘಾತ ತರುವಂತೆ ಅಣ್ಣಾದೊರೈ, ‘ನಾವು ಮತ್ತೊಮ್ಮೆ ಆಲೋಚಿಸೋಣ. ನಾವು ಒಂದು ಸಂವಿಧಾನವನ್ನು ಹೊಂದಿದ್ದೇವೆ ಎಂಬುದು ನಿಜ. ಆದರೆ ರಾಷ್ಟ್ರ ಎನ್ನುವ ಪದದ ಬಗ್ಗೆ ಪುನಃ ಆಲೋಚನೆ ಮಾಡುವ, ಪುನರ್‌ ನಿರ್ಧಾರ ಕೈಗೊಳ್ಳುವ, ಪುನಃ ಮೌಲ್ಯಮಾಪನ ನಡೆಸುವ ಮತ್ತು ಪುನಃ ವ್ಯಾಖ್ಯಾನ ನಡೆಸುವ ಸಮಯ ಬಂದಿದೆ’ ಎಂದು ಹೇಳಿದ್ದರು. ಅಂದರೆ, ಅವರು ಹೇಳಿದ್ದ ‘ಪುನರ್‌ ನಿರ್ಧಾರ’ ಅಂದರೆ ಏನು?

ಅಣ್ಣಾದೊರೈ ತಮ್ಮ ಮಾತು ಮುಂದುವರಿಸಿ, ‘ನನ್ನ ಪ್ರಕಾರ, ಬೇರೆಯದೇ ಆದ ಪರಂಪರೆ ಮತ್ತು ಹಿನ್ನೆಲೆ ಹೊಂದಿರುವ ದೇಶವೊಂದರಿಂದ ಬಂದಿರುವುದಾಗಿ ನಾನು ಹೇಳಿಕೊಳ್ಳುತ್ತೇನೆ. ನಾನು ದ್ರಾವಿಡ ಪರಂಪರೆಗೆ ಸೇರಿದ್ದೇನೆ. ನಾನು ದ್ರಾವಿಡ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ. ದೇಶಕ್ಕೆ ಕೊಡುಗೆ ನೀಡಲು ದ್ರಾವಿಡರ ಬಳಿ ವಿಭಿನ್ನವೂ, ವಿಶಿಷ್ಟವೂ ಆದುದೊಂದು ಇದೆ. ಹಾಗಾಗಿ ನಮಗೆ ಸ್ವಯಂ ನಿರ್ಧಾರದ ಹಕ್ಕು ಬೇಕು’ ಎಂದಿದ್ದರು.

ದಕ್ಷಿಣ ಭಾರತವು ಪ್ರತ್ಯೇಕವಾದರೆ ಅದರಿಂದ ತೊಂದರೆಯೇನೂ ಆಗುವುದಿಲ್ಲ. ಏಕೆಂದರೆ, ಪರ್ಯಾಯ ದ್ವೀಪವಾಗಿರುವ ದಕ್ಷಿಣ ಭಾರತವು ಒಂದು ಪ್ರತ್ಯೇಕ ಭೌಗೋಳಿಕ ಘಟಕದಂತೆ ಇದೆ. ಹಾಗಾಗಿ, ನಿರಾಶ್ರಿತರ ವಲಸೆಯ ಸಮಸ್ಯೆ ಇರುವುದಿಲ್ಲ ಎಂದು ಅಣ್ಣಾದೊರೈ ಹೇಳಿದ್ದರು. ‘ಸಿಟ್ಟಿನಿಂದ ಕುದಿಯುವ ಘಟಕಗಳ ಮಿಶ್ರಣ ಆಗುವ ಬದಲು ಭಾರತವು ವಿವಿಧ ರಾಷ್ಟ್ರಗಳ ಒಂದು ಒಕ್ಕೂಟ ಆಗಬೇಕು’ ಎಂಬುದು ಅವರ ಬಯಕೆಯಾಗಿತ್ತು. ದಕ್ಷಿಣ ಭಾರತವನ್ನು ಪೂರ್ತಿಯಾಗಿ ಒಳಗೊಳ್ಳುವ ದ್ರಾವಿಡ ನಾಡು ಒಂದು ಸಣ್ಣ ರಾಷ್ಟ್ರವಾಗಿಯೂ, ಏಕರೂಪದ ನಾಡಾಗಿಯೂ, ಐಕ್ಯ ಭಾವದಿಂದಲೂ ಇರುತ್ತದೆ ಎಂದು ಅವರು ಹೇಳಿದ್ದರು.

ಅಣ್ಣಾದೊರೈ ಆಡಿದ ಮಾತುಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದವರಲ್ಲಿ ಭಾರತೀಯ ಜನಸಂಘದ ಅಟಲ್ ಬಿಹಾರಿ ವಾಜಪೇಯಿ ಕೂಡ ಸೇರಿದ್ದರು. ‘ಹಿಂದಿನ ದಿನ ಈ ಸದನದಲ್ಲಿ ಎಚ್ಚರಿಕೆಯ ಘಂಟೆಯೊಂದು ಕೇಳಿಸಿದೆ. ಭಾರತವನ್ನು ವಿಭಜಿಸುವ ಬೇಡಿಕೆ ಮತ್ತೊಮ್ಮೆ ಕೇಳಿಬಂದಿದೆ. ಇದು ವಿನಾಶಕಾರಿ’ ಎಂದು ಅಣ್ಣಾದೊರೈ ಮಾತನಾಡಿದ ಮಾರನೆಯ ದಿನ ರಾಜ್ಯಸಭೆಯಲ್ಲಿ ಮಾತನಾಡಿದ್ದ ವಾಜಪೇಯಿ ಹೇಳಿದ್ದರು. ‘ಮದ್ರಾಸ್‌ಗೆ ನ್ಯಾಯ ಸಿಕ್ಕಿಲ್ಲ ಎಂಬುದು ಭಾರತದಿಂದ ಪ್ರತ್ಯೇಕಗೊಳ್ಳುವ ಮಾತಿಗೆ ನೀಡಿರುವ ಕಾರಣವಾಗಿದೆ. ಯಾವ ರಾಜ್ಯಕ್ಕೇ ಹೋದರೂ ಇದೇ ದೂರು ನಮಗೆ ಕೇಳಿಸುತ್ತದೆ’ ಎಂದು ವಾಜಪೇಯಿ ತಮ್ಮ ಭಾಷಣದಲ್ಲಿ ಹೇಳಿದ್ದರು. ತಾರತಮ್ಯವಾಗುತ್ತಿದೆ ಎನ್ನುವ ಇಂತಹ ದೂರುಗಳನ್ನು ಒಂದು ರಾಜ್ಯದ ಒಳಗೆ ಕೂಡ, ಬೇರೆ ಬೇರೆ ಪ್ರದೇಶಗಳ ನಡುವೆ ಕೇಳಿಸಿಕೊಳ್ಳಬಹುದು ಎಂದು ಅವರು ಹೇಳಿದ್ದರು. ‘ಇಂತಹ ದೂರುಗಳಲ್ಲಿ ಸ್ವಲ್ಪ ಸತ್ಯ ಇರಬಹುದು. ಆದರೆ ಇಂತಹ ದೂರುಗಳು ರಾಷ್ಟ್ರದ ಅಸ್ತಿತ್ವವನ್ನು ಪ್ರಶ್ನಿಸುವಂತೆ ಮಾಡಬಾರದು, ದೇಶವನ್ನು ಚೂರಾಗಿಸುವ ಬೇಡಿಕೆಗಳಿಗೆ ಕಾರಣ ಕೂಡ ಆಗಬಾರದು’ ಎಂದು ವಾಜಪೇಯಿ ಎಚ್ಚರಿಕೆ ನೀಡಿದ್ದರು.

‘ಸ್ವಯಂ ನಿರ್ಧಾರದ ಸೋಗಿನಲ್ಲಿ ಇಂತಹ ದನಿ ಕೇಳಿಬರುತ್ತಿರುವುದು ನನ್ನಲ್ಲಿ ಬೇಸರ ಉಂಟುಮಾಡಿದೆ. ಈ ಬೇಡಿಕೆಗೆ ಒಂದು ಸೈದ್ಧಾಂತಿಕ ಆಯಾಮ ನೀಡಲು ಯತ್ನ ನಡೆದಿದೆ, ಪ್ರತ್ಯೇಕತೆಯ ಬೇಡಿಕೆಗೆ ಹೆಚ್ಚಿನ ಪ್ರಧಾನ್ಯ ನೀಡಲಾಗಿದೆ. ಭಾರತವೆಂಬುದು ಒಂದು ರಾಷ್ಟ್ರವಲ್ಲ, ಅದು ರಾಷ್ಟ್ರಗಳ ಒಂದು ಗುಂಪು, ದಕ್ಷಿಣ ಭಾರತವು ಉತ್ತರ ಭಾರತದಿಂದ ಪ್ರತ್ಯೇಕಗೊಳ್ಳಬಹುದು ಎಂದು ಹೇಳಲಾಗಿದೆ. ಈ ರೀತಿಯ ಆಲೋಚನಾ ಕ್ರಮದ ಜೊತೆ ಯಾವುದೇ ರಾಷ್ಟ್ರ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದು ನನಗೆ ಅನಿಸುತ್ತಿಲ್ಲ. ದ್ವಿರಾಷ್ಟ್ರ ಸಿದ್ಧಾಂತವನ್ನು ಮುಸ್ಲಿಂ ಲೀಗ್‌ ಮುಂದಿಟ್ಟಾಗ ನಾವು ಅದನ್ನು ವಿರೋಧಿಸಿದೆವು. ದ್ವಿರಾಷ್ಟ್ರ ಸಿದ್ಧಾಂತವನ್ನು ನಾವು ಎಂದಿಗೂ ಒಪ್ಪಿರಲಿಲ್ಲ’ ಎಂದು ವಾಜಪೇಯಿ ತಮ್ಮ ಭಾಷಣದಲ್ಲಿ ಹೇಳಿದ್ದರು.

ವಾಜಪೇಯಿ ಅವರ ಮಾತುಗಳಿಗೆ ದಕ್ಷಿಣ ಭಾರತದ ಹಲವು ಸದಸ್ಯರೂ ಸೇರಿದಂತೆ ಸದನದಲ್ಲಿದ್ದ ಎಲ್ಲ ಪಕ್ಷಗಳಿಂದ ಬೆಂಬಲ ವ್ಯಕ್ತವಾಗಿತ್ತು. ಇದಾದ ಒಂದು ವರ್ಷದ ನಂತರ, ಚೀನಾ ನಮ್ಮ ಮೇಲೆ ಆಕ್ರಮಣ ನಡೆಸಿದ ನಂತರದ ದಿನಗಳಲ್ಲಿ ರಾಷ್ಟ್ರೀಯ ಭಾವೈಕ್ಯ ನಮ್ಮ ಮೊದಲ ಆದ್ಯತೆಯಾಯಿತು. ಪ್ರತ್ಯೇಕತೆಯ ಬೇಡಿಕೆಯನ್ನು ಕೈಬಿಟ್ಟ ಡಿಎಂಕೆ, ಮುಖ್ಯವಾಹಿನಿಯ ರಾಜಕೀಯ ಮತ್ತು ಚುನಾವಣಾ ವ್ಯವಸ್ಥೆಯ ಭಾಗವಾಯಿತು. ಮದ್ರಾಸ್ ರಾಜ್ಯದಲ್ಲಿ 1967ರಲ್ಲಿ ಅಧಿಕಾರವನ್ನೂ ಹಿಡಿಯಿತು. ಹೀಗಾಗುವುದರೊಂದಿಗೆ, ರಾಷ್ಟ್ರವನ್ನು ಒಗ್ಗೂಡಿಸುವ ಶಕ್ತಿಗಳ ಕೈಮೇಲಾಗಿದೆ ಎಂದು ಭಾವಿಸಲಾಯಿತು.

ರಾಜ್ಯಸಭೆಯಲ್ಲಿ ಈ ಚರ್ಚೆ ನಡೆದ ಐವತ್ತಾರು ವರ್ಷಗಳ ನಂತರ ನಾವು ಮತ್ತೆ ಭಿನ್ನಮತದ ದನಿಗಳನ್ನು ಕೇಳುತ್ತಿದ್ದೇವೆ, ದೇಶದಲ್ಲಿ ಪ್ರತ್ಯೇಕತೆಯ ಮಾತುಗಳು ಕೂಡ ಕೇಳಿಸಿವೆ. ಇಂಥದ್ದೊಂದು ಆಲೋಚನೆಯನ್ನು ಸಲಹಾ ರೂಪದಲ್ಲಿ ಹೇಳುವುದು ಕೂಡ ಅರ್ಥಹೀನ. ಭಾರತದ ಐಕ್ಯ ಮತ್ತು ಸಮಗ್ರತೆ ಎಂಬುದು ರಾಜಿ ಇಲ್ಲದ ಧ್ಯೇಯಗಳು. ಈ ರಾಷ್ಟ್ರವನ್ನು ಒಂದಾಗಿ ಇರಿಸಲು ಕಳೆದ ಎಪ್ಪತ್ತು ವರ್ಷಗಳ ಅವಧಿಯಲ್ಲಿ ಮೂರು ತಲೆಮಾರುಗಳ ಜನ ಬೆವರು ಹರಿಸಿದ್ದಾರೆ. ಜಗತ್ತಿನ ಬೇರೆ ಯಾವ ಸಮಾಜ ಕೂಡ ನಮ್ಮಷ್ಟು ವೈವಿಧ್ಯಮಯವಾಗಿ, ನಮ್ಮಷ್ಟು ಪ್ರಜಾತಾಂತ್ರಿಕವಾಗಿ ಇಲ್ಲ. ವೈವಿಧ್ಯದಲ್ಲೂ ಐಕ್ಯವನ್ನು ಸಾಧಿಸಿರುವ ಈ ಮಹಾನ್ ಯಾನವನ್ನು ಹಾಳುಮಾಡಲು ಕೆಲವು ಬೇಜವಾಬ್ದಾರಿಯುತ ಕಿಡಿಗೇಡಿಗಳಿಗೆ ನಾವು ಅವಕಾಶ ಮಾಡಿಕೊಡಲಾಗದು. ವಾಜಪೇಯಿ ಅವರು 1962ರಲ್ಲಿ ಆಡಿದ ಪ್ರತಿ ಮಾತು ಇಂದಿಗೂ ಅರ್ಥಪೂರ್ಣವಾಗಿದೆ. ದೇಶದ ಒಗ್ಗಟ್ಟಿನ ಪರವಾಗಿ ಅವರು ನೀಡಿದ ಭಾವುಕ ಕರೆಯನ್ನು ನೆನಪಿಸಿಕೊಳ್ಳಬೇಕು. ದೇಶದ ಒಗ್ಗಟ್ಟಿಗೆ ಸವಾಲಿನ ರೂಪದಲ್ಲಿ ಬಂದಿರುವ ಹೊಸ ದನಿಗಳನ್ನು ಮೊಳಕೆಯಲ್ಲೇ ಚಿವುಟಬೇಕು.

(ಲೇಖಕ ಪ್ರಸಾರ ಭಾರತಿ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT