ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರದರ್ಶನದ ಅಪಾಯ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಶುನ್‌ಕಯಿ ಸುಜು ಅಪ್ರತಿಮ ಸುಂದರಿ. ತನ್ನ ರೂಪ ಲಾವಣ್ಯಗಳಿಂದ ಎಂಥ ಸ್ಥಿತಪ್ರಜ್ಞನ ಮನಸ್ಸನ್ನು ಕೂಡ ಸೂಜಿಗಲ್ಲಿನಂತೆ ಸೆಳೆದುಬಿಡುವ ಅಯಸ್ಕಾಂತೀಯ ಶಕ್ತಿ ಆಕೆಗಿತ್ತು. ಅದರ ಅರಿವೂ ಶುನ್‌ಕಯಿಗಿತ್ತು. ಅವಳೊಂದು ಕುಡಿನೋಟಕ್ಕೆ, ಒಂದು ಹೂ ಮುಗುಳ್ನಗೆಗೆ, ಒಂದು ಪುಟ್ಟ ಸ್ಪರ್ಶಕ್ಕೆ ಮನ, ಪ್ರಾಣಗಳನ್ನು ತೆತ್ತವರು ಅದೆಷ್ಟು ಜನವಿದ್ದರೋ ಲೆಕ್ಕವಿಲ್ಲ.

ಆಕೆ ತನ್ನ ಶಾಲಾ ವ್ಯಾಸಂಗವನ್ನು ಮುಗಿಸಿ ವಿಶ್ವವಿದ್ಯಾಲಯ ಸೇರಿ ತತ್ವಶಾಸ್ತ್ರವನ್ನು ಆರಿಸಿಕೊಂಡಳು. ಅಲ್ಲಿಯೂ ಅವಳಿಗೆ ಕಲಿಕೆಗಿಂತ ತನ್ನ ಹಿಂದೆ ಹಿಂದೆ ಓಡಾಡಿ ತನ್ನನ್ನು ಓಲೈಸಲು ಪ್ರಯತ್ನಿಸುತ್ತಿದ್ದ ಸಹಪಾಠಿಗಳು, ಶಿಕ್ಷಕರುಗಳನ್ನು ನಿಭಾಯಿಸುವುದೇ ಸಮಸ್ಯೆಯಾಗಿತ್ತು. ತತ್ವಶಾಸ್ತ್ರದಲ್ಲಿ ಮನ ಸ್ಥಿರವಾಗಿ ನಿಲ್ಲಲೇ ಇಲ್ಲ. ನಿಧಾನವಾಗಿ ಆಕೆಗೆ ಝೆನ್ ಅಧ್ಯಯನದಲ್ಲಿ ಆಸಕ್ತಿ ಮೂಡತೊಡಗಿತು.

ತತ್ವಶಾಸ್ತ್ರವನ್ನು ಬಿಟ್ಟು ಕೆನ್‌ಇನ್ ಎಂಬ ಝೆನ್ ಮಠವನ್ನು ಸೇರಿದಳು. ಅದರ ಪ್ರಮುಖ ಗುರು ಮೊಕುರಾಯಿ. ಅವನ ಖ್ಯಾತಿ ದೂರದೂರದವರೆಗೆ ಹರಡಿತ್ತು. ಅವನು ಮಾತನಾಡುವುದು ತುಂಬ ಕಡಿಮೆ. ಮಾತನಾಡಿದರೆ ಕಡ್ಡಿ ಮುರಿದಂತೆ ಒಂದೆರಡು ಮಾತು, ಅವೂ ಸಿಡಿಲಿನಂತೆ. ಯಾರ ಮುಲಾಜೂ ಇಲ್ಲದೇ ತನ್ನ ನಿರ್ಧಾರ ಹೇಳಿಬಿಡುತ್ತಿದ್ದ. ಆತ ತನ್ನ ಪ್ರತಿಯೊಬ್ಬ ಶಿಷ್ಯರ ಚಲವಲನಗಳನ್ನು ಗಮನಿಸುತ್ತಿದ್ದ.

ಹೊಸದಾಗಿ ಸೇರಿದ ತರುಣ ಶಿಷ್ಯರು ಆಧುನಿಕ ಆಕರ್ಷಣೆಗಳಿಗೆ ಅದರಲ್ಲೂ ಹೆಣ್ಣಿನ ಆಕರ್ಷಣೆಗೆ ಒಳಗಾಗಿ ಧ್ಯಾನದ ತೀವ್ರತೆಯನ್ನು ಕಳೆದುಕೊಳ್ಳುತ್ತಿರುವುದು ಅವನ ಗಮನಕ್ಕೆ ಬಂದಿತ್ತು. ತನ್ನ ಶಿಷ್ಯರು ತಮ್ಮ ಧ್ಯಾನದಿಂದ, ಅನುಭವದಿಂದ ಮಹಾಜ್ಞಾನಿಗಳಾಗಬೇಕೆಂಬುದು ಅವನ ನಿರಂತರ ಅಪೇಕ್ಷೆ. ಅದಕ್ಕೆಂದೇ ಮಠದಲ್ಲಿ ನಡವಳಿಕೆಗೆ ಅತ್ಯಂತ ಕಠೋರವಾದ ನಿಯಮಗಳನ್ನು ಮಾಡಿದ್ದ.

ಈಗ ಶುನ್‌ಕಯಿ ಮಠ ಸೇರಿದ ಮೇಲೆ ಅದರ ಚರ್ಯೆಯೇ ಬದಲಾಯಿಸಿತು. ಝೆನ್‌ನಲ್ಲಿ ಅಷ್ಟೊಂದು ಆಸಕ್ತಿ ಇಲ್ಲದ ತರುಣರೂ ಅಪಾರ ಆಸಕ್ತಿ ತೋರತೊಡಗಿದರು. ಅವರ ವೇಷಭೂಷಣಗಳು ಕಣ್ಣುಸೆಳೆಯತೊಡಗಿದವು. ತರಗತಿಗೆ ಯಾರೂ ಗೈರು ಹಾಜರಾಗುತ್ತಿರಲಿಲ್ಲ. ಧ್ಯಾನದ ಸಮಯದಲ್ಲೂ ಅಷ್ಟೇ. ಆದರೆ ಅವರ ಧ್ಯಾನವೆಲ್ಲ ಶುನ್‌ಕಯಿಯಲ್ಲೇ ನೆಲೆಸಿತ್ತು. ಅವಳ ರೂಪ, ಒಯ್ಯೊರ, ಮಾದಕತೆ, ಶ್ರದ್ಧೆ, ಸ್ನೇಹಪರತೆ ಇವೆಲ್ಲ ಮೊಕುರಾಯಿಯ ಹೆಂಡತಿಯ ಹೊಟ್ಟೆಯನ್ನು ಉರಿಸಿದವು. ಆಕೆಗೆ ಅಸೂಯೆಯನ್ನು ತಡೆದುಕೊಳ್ಳುವುದು ಅಸಾಧ್ಯವಾಯಿತು. ಇವಳ ಹಿಂದೆಯೇ ಓಡಾಡುತ್ತಿದ್ದ ತರುಣರ ಜೊತೆಗೆ ಶುನ್‌ಕಯಿಯ ಸಂಬಂಧವನ್ನು ಕಲ್ಪಸಿ, ಹಿಗ್ಗಿಸಿ, ವರ್ಣಿಸಿ ಗಂಡನಿಗೆ ಹೇಳಿ ಅವರನ್ನೆಲ್ಲ ಮಠದಿಂದ ಹೊರಗೆ ಹಾಕಿಸಿದಳು. ಶುನ್‌ಕಯಿಗೆ ಸಿಟ್ಟು ಏರಿತು. ತಪ್ಪಿಲ್ಲದೇ ಸ್ನೇಹಿತರಿಗೆ ಶಿಕ್ಷೆ ಕೊಟ್ಟ ಮಠದ ಬಗ್ಗೆ ತಾತ್ಸಾರ ಉಕ್ಕಿ ಒಂದು ರಾತ್ರಿ ಮಠಕ್ಕೆ ಬೆಂಕಿ ಇಟ್ಟು ಸುಟ್ಟುಬಿಟ್ಟಳು. ಪೋಲಿಸರು ಆಕೆಯನ್ನು ಬಂಧಿಸಿ ಜೈಲಿಗೆ ಕಳುಹಿಸಿದರು. ಏಳು ವರ್ಷಗಳ ಕಾರಾಗೃಹ ಶಿಕ್ಷೆಯಾಯಿತು.

ಜೈಲಿನಲ್ಲೂ ಆಕೆಯ ಸೌಂದರ್ಯ ತೊಂದರೆ ಕೊಡುವುದನ್ನು ಬಿಡಲಿಲ್ಲ. ಅರವತ್ತೈದು ವರ್ಷದ ಜೈಲಿನ ಅಧಿಕಾರಿ ಕೂಡ ಆಕೆಯಲ್ಲಿ ಅನುರಕ್ತನಾಗಿದ್ದ. ಜೈಲಿನಿಂದ ಹೊರಬಂದ ಮೇಲೆ ಆಕೆಗೆ ಜಗತ್ತಿನ ಅರಿವಾಯಿತು. ಮನಸ್ಸನ್ನೂ ಅಂತರ್ಮುಖ ಮಾಡಿಕೊಂಡು ಝೆನ್ ಅಧ್ಯಯನ ಮಾಡಿದಳು. ದೇಹ ಕುಂದಿತು, ರೋಗ ಕಾಡಿತು. ಆ ನೋವಿನಲ್ಲೇ ತನ್ನ ಜೀವನ ಚರಿತ್ರೆ ಬರೆದಳು. ತನ್ನ ಮೂವತ್ತನೇ ವರ್ಷದಲ್ಲೇ ದೇಹಬಿಟ್ಟಳು. ಆಗಲೂ ಅವಳ ದೇಹಕಾಂತಿ ಮುಕ್ಕಾಗಿರಲಿಲ್ಲ. ತನ್ನ ಚರಿತ್ರೆಯಲ್ಲಿ ಯಾವ ಸೌಂದರ್ಯ ತನ್ನ ಹೆಗ್ಗಳಿಕೆ ಎಂದು ಭಾವಿಸಿ, ಪ್ರದರ್ಶಿಸಿದೆನೋ ಅದೇ ತನಗೆ ಮುಳುವಾದದ್ದು ಎಂದು ಚಿತ್ರಿಸಿದ್ದಾಳೆ.

ಇದರಲ್ಲಿ ನಮಗೆ ಪಾಠವಿದೆ. ಕೆಲವರು ತಮ್ಮಲ್ಲಿದ್ದ ಹಣವನ್ನು ಪ್ರದರ್ಶಿಸಿ, ಪ್ರದರ್ಶಿಸಿ ಜೈಲಿಗೆ ಹೋಗುತ್ತಾರೆ. ಕೆಲವರು ಅಧಿಕಾರದ ದುರಹಂಕಾರವನ್ನು ಪ್ರದರ್ಶಿಸಿ ಮಣ್ಣು ಮುಕ್ಕುತ್ತಾರೆ. ಹಲವರು ಜ್ಞಾನವನ್ನು ಪ್ರದರ್ಶಿಸುವ ಭರದಲ್ಲಿ ಅಜ್ಞಾನವನ್ನು ತೋರ್ಪಡಿಸುತ್ತಾರೆ. ನಮ್ಮಲ್ಲಿರುವ ಶಕ್ತಿಯನ್ನು ಕಾಪಾಡಿಕೊಂಡು, ಅದನ್ನು ಪ್ರದರ್ಶನದ ವಸ್ತುವನ್ನಾಗಿಸದೇ ಪರರಿಗೆ ಪ್ರಯೋಜನವಾಗುವಂತೆ ಬಾಳಿ ವಿನಯ ತೋರುವುದೇ ವಿವೇಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT