ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಸಿಂಗ್ ಮೌನಕ್ಕೆ ಅರ್ಥಗಳು ಹತ್ತಾರು...

Last Updated 11 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ದುರ್ಯೋಧನ, ದುಶ್ಯಾಸನ, ಶಕುನಿ ಮತ್ತು ಕರ್ಣ - ಈ ನಾಲ್ವರು ಮಹಾನುಭಾವರನ್ನು ನಮ್ಮ ಪ್ರಾಚೀನ ಮಹಾಕಾವ್ಯ `ಮಹಾಭಾರತ~ದಲ್ಲಿ `ದುಷ್ಟ ಚತುಷ್ಟಯರು~ ಎಂದೇ ಬಣ್ಣಿಸಲಾಗಿದೆ.

ಮೊದಲ ಮೂವರು ಪಾತ್ರಧಾರಿಗಳು ಯುದ್ಧದ ಪರಾಕಾಷ್ಠೆಯ ದುಷ್ಟ ಸಂಚಿನಲ್ಲಿ ಮುಂಚೂಣಿಯಲ್ಲಿದ್ದು, ಇಡೀ ಕೌರವ ವಂಶವೇ ನಾಮಾವಶೇಷವಾಗಲು ಕಾರಣವಾಗುತ್ತಾರೆ.

ಯುದ್ಧಕ್ಕೆ ಕಾರಣವಾಗುವ ಒಳಸಂಚು ರೂಪಿಸುವಾಗ, ಕಾರ್ಯಗತಗೊಳಿಸುವಾಗ  ಈ ಮೂವರು ಸಹಚರರು ಕೈಗೊಳ್ಳುವ  ನಿರ್ಧಾರಗಳನ್ನು ತಪ್ಪೆಂದು ಹೇಳದೇ ಮೌನ ಪ್ರೇಕ್ಷಕನಾಗಿ ಉಳಿಯುವ ಕಾರಣಕ್ಕೇನೆ ಕರ್ಣನ ಹೆಸರನ್ನೂ `ದುಷ್ಟ ಚತುಷ್ಟಯರ~ ಸಾಲಿನಲ್ಲಿ ಸೇರ್ಪಡೆ ಮಾಡಲಾಗಿರುತ್ತದೆ.

ತನ್ನವರ ತಪ್ಪು ನಿರ್ಣಯಗಳನ್ನೆಲ್ಲ ವಿರೋಧಿಸುವ ಗೋಜಿಗೆ ಹೋಗದ ಕರ್ಣ, ಪರೋಕ್ಷವಾಗಿಯೇ ಇತರ ಮೂವರ ಸಂಚಿನ ಭಾಗವಾಗಿ ಹೋಗುತ್ತಾನೆ. ಉದಾರ ಧೋರಣೆಯ ಜನಾನುರಾಗಿ ದೊರೆಯಾಗಿದ್ದರೂ ಮೋಸ - ಸಂಚು ನಡೆಸುವವರ ಕೃತ್ಯಗಳಿಗೆ ಪ್ರತಿಭಟನೆ ನಡೆಸದೆ ಸುಮ್ಮನಿರುವ ಕರ್ಣನಿಗೂ, ಮಹಾಜ್ಞಾನಿ ವ್ಯಾಸರು  ಸಂಚಿನಲ್ಲಿ ಸಮಪಾಲಿನ ಹೊಣೆಯ ಆರೋಪ ಹೊರಿಸುತ್ತಾರೆ.

ಸದ್ಯಕ್ಕೆ ಭಾರಿ ಸುದ್ದಿ ಮಾಡಿರುವ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣವನ್ನೂ ಮಹಾಭಾರತದಲ್ಲಿನ ಈ ನಿದರ್ಶನಕ್ಕೆ ಹೋಲಿಕೆ ಮಾಡಬಹುದು. ಈ ಹಗರಣ ಒಳಗೊಂಡಿರುವ ಭಾರಿ ಮೊತ್ತದ ಅವ್ಯವಹಾರ ಮತ್ತು ಕೇಳಿ ಬಂದಿರುವ ಆರೋಪಗಳ ತೀವ್ರತೆಯು ಜನರಲ್ಲಿ ಅಚ್ಚರಿ ಮೂಡಿಸಿದೆ.

ಎಲ್ಲ ಕಡೆಗಳಿಂದ ಆರೋಪಗಳ ಸುರಿಮಳೆಯೇ ಆಗುತ್ತಿದೆ. ಹಗರಣದ ಸುತ್ತ ಗಿರಕಿ ಹೊಡೆಯುತ್ತಿರುವ ಪ್ರಹಸನ ನೋಡುತ್ತಿರುವ ಇಡೀ ವಿಶ್ವವೇ ಅಪಹಾಸ್ಯ ಮಾಡಿ ನಗುತ್ತಿದೆ. ಆದರೆ, ನಮ್ಮೆಲ್ಲರ ಅಚ್ಚುಮೆಚ್ಚಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಾತ್ರ `ಜಾಣ ಮೌನ~ಕ್ಕೆ ಶರಣು ಹೋಗಿದ್ದಾರೆ.

ರಾಷ್ಟ್ರೀಯ ನೈಸರ್ಗಿಕ ಸಂಪತ್ತನ್ನು (ಕಲ್ಲಿದ್ದಲು ನಿಕ್ಷೇಪ) ಬಿಸಾಕು ಬೆಲೆಗೆ ಹಂಚಿಕೆ ಮಾಡಿರುವುದು ಮತ್ತು ಅದರಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವಾಗಿರುವುದು ಈಗ ಸೂರ್ಯನ ಬೆಳಕಿನಷ್ಟೇ ಸುಸ್ಪಷ್ಟವಾಗುತ್ತಿದೆ. ಕೇಂದ್ರದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ತನ್ನ ಕುಕೃತ್ಯಗಳನ್ನೆಲ್ಲ ವೀರಾವೇಶದಿಂದ ಸಮರ್ಥಿಸಿಕೊಳ್ಳುತ್ತಿದೆ.

ವಿತಂಡವಾದದ ಮೂಲಕ ತನ್ನ ನಿಲುವು ಸರಿಯಾಗಿದೆ ಎಂದು ಬಲವಾಗಿ ಪ್ರತಿಪಾದಿಸುತ್ತಲೇ  ಜನರಲ್ಲಿ  ಗೊಂದಲ ಮೂಡಿಸುತ್ತಿದೆ.
ಕಲ್ಲಿದ್ದಲು ನಿಕ್ಷೇಪಗಳನ್ನು ಅನುಮಾನಾಸ್ಪದವಾಗಿ ಹಂಚಿಕೆ ಮಾಡಿದ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಕಲ್ಲಿದ್ದಲು ಖಾತೆ ನಿರ್ವಹಿಸುತ್ತಿದ್ದರು ಎನ್ನುವ ಕಟುಸತ್ಯವು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
 
ಇದೇ ಕಾರಣಕ್ಕಾಗಿಯೇ ವಿವಾದಕ್ಕೆ  ಇನ್ನಷ್ಟು ಗಂಭೀರತೆ ಬಂದಿದೆ. ಪ್ರಧಾನಿ ಸಿಂಗ್ ಅವರ ಪ್ರಾಮಾಣಿಕತೆಯ ಮರೆಯಲ್ಲಿ ರಕ್ಷಣೆ ಪಡೆಯಲು ಕಾಂಗ್ರೆಸ್ ನಾಯಕರು ಹವಣಿಸುತ್ತಿದ್ದಾರೆ. ಪಕ್ಷದ ವಕ್ತಾರರೆಲ್ಲ ಅರ್ಥವಿಲ್ಲದ ಮಾತುಗಳನ್ನು ಬಡಬಡಿಸುತ್ತ ಪ್ರಧಾನಿ ಸಿಂಗ್ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಮಹಾಜ್ಞಾನಿ ವ್ಯಾಸ ಮುನಿಗಳು ಕರ್ಣನ ಬಗ್ಗೆ ತಳೆದಿದ್ದ ನಿಲುವನ್ನು ಕಾಂಗ್ರೆಸಿಗರು  ನಿರ್ಲಕ್ಷಿಸುತ್ತಿರುವುದು ನಿಜಕ್ಕೂ ದುರದೃಷ್ಟಕರ.ಅವಕಾಶ ಸಿಕ್ಕರೆ ಕಾಂಗ್ರೆಸಿಗರು, ವ್ಯಾಸ ಮುನಿಗಳ ಜತೆಗೂ ವಾಗ್ವಾದಕ್ಕೆ ಇಳಿಯುವ ಭಂಡತನ ಪ್ರದರ್ಶಿಸಿಯಾರು. ವ್ಯಾಸರು ತಳೆದಿದ್ದ ಮೌಲ್ಯಾಧಾರಿತ ತೀರ್ಮಾನವನ್ನೇ ತಿರುಚಲೂ ಕಾಂಗ್ರೆಸ್ ವಕ್ತಾರರು ಹಿಂಜರಿಯಲಿಕ್ಕಿಲ್ಲವೆಂದೂ ಭಾಸವಾಗುತ್ತದೆ.

ಮಹಾಭಾರತ ಮಹಾಕಾವ್ಯದಲ್ಲಿ ಕರ್ಣನಿಗೆ ಅಧಿಕಾರಯುತವಾಗಿ ಮಾತನಾಡುವ ಅವಕಾಶ ಇದ್ದಿರಲಿಲ್ಲ. ಆತ ಅಸಹಾಯಕನಾಗಿದ್ದ ಎನ್ನುವುದೂ ನಿಜ.     ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸರ್ಕಾರಕ್ಕೆ ನಷ್ಟವಾಗದ ರೀತಿಯಲ್ಲಿ ಸಮರ್ಪಕ ನಿರ್ಧಾರ ಕೈಗೊಳ್ಳುವ ಪರಮಾಧಿಕಾರವು ಖಂಡಿತವಾಗಿಯೂ  ಇತ್ತು.

ಆದರೆ, ಅವರು ತಮ್ಮ ಅಧಿಕಾರ ಚಲಾಯಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇದೇ ಕಾರಣಕ್ಕೆ ಅಮೆರಿಕದ `ವಾಷಿಂಗ್ಟನ್ ಪೋಸ್ಟ್~ ಪತ್ರಿಕೆಯು ಸಿಂಗ್ ಅವರ ಬಗ್ಗೆ ಮಾಡಿದ ಟೀಕೆ - ಟಿಪ್ಪಣಿಯಲ್ಲಿ ಆಕ್ಷೇಪಾರ್ಹವಾದದ್ದು ಏನೂ ಇಲ್ಲ. ಇಂತಹ ಟೀಕೆಯನ್ನು ಕಾಂಗ್ರೆಸಿಗರು ವಿನಯದಿಂದಲೇ ಸ್ವೀಕರಿಸಬೇಕಾಗಿತ್ತು.

ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿಕೆ ಮಾಡುವಾಗ ಕೇಂದ್ರ ಸರ್ಕಾರವು ನಿಯಮಗಳನ್ನೆಲ್ಲ ಗಾಳಿಗೆ ತೂರಿ ಗಂಭೀರ ಸ್ವರೂಪದ ಲೋಪಗಳನ್ನು ಎಸಗಿದೆ ಎಂದುಮಹಾಲೇಖಪಾಲರು (ಸಿಎಜಿ) ತಮ್ಮ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ. ಸರ್ಕಾರದ ತಪ್ಪು ನಿರ್ಧಾರದಿಂದ ಬೊಕ್ಕಸಕ್ಕೆ ರೂ 1.86 ಲಕ್ಷ ಕೋಟಿಗಳಷ್ಟು ನಷ್ಟ ಉಂಟಾಗಿದೆ ಎಂದೂ `ಸಿಎಜಿ~ ಅಂದಾಜಿಸಿದೆ. 

ಸರ್ಕಾರ ಈ ವರದಿ ಒಪ್ಪಿಕೊಳ್ಳದೇ, ಮಹಾಲೇಖಪಾಲರು ನ್ಯಾಯಯುತ ಮತ್ತು ಸಮರ್ಥನೀಯ ಬಗೆಯಲ್ಲಿ  ವರದಿ ಸಿದ್ಧಪಡಿಸಿಲ್ಲ ಎಂದು  ಅವರ ವಿರುದ್ಧವೇ ಟೀಕಾಪ್ರಹಾರ ನಡೆಸುತ್ತಿದೆ.

ಕೇಂದ್ರ ಸಚಿವರುಗಳ ದುರಹಂಕಾರದ ಹೇಳಿಕೆ ಮತ್ತು ವರ್ತನೆ ನೋಡಿದರೆ, ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರ ಮತ್ತು ನಡೆಗಳನ್ನು ಯಾರೊಬ್ಬರೂ ಪ್ರಶ್ನಿಸುವಂತಿಲ್ಲ ಎನ್ನುವ  ಧೋರಣೆ ತಳೆದಿರುವಂತೆ ಭಾಸವಾಗುತ್ತದೆ.
ನೈಸರ್ಗಿಕ ಸಂಪತ್ತು ದೇಶದ ಜನರಿಗೆ ಸೇರಿದೆ.

  ಅದನ್ನು ರಕ್ಷಿಸಲು ಜನರು ಜನಪ್ರತಿನಿಧಿಗಳನ್ನು ಟ್ರಸ್ಟಿಗಳಂತೆ ಆಯ್ಕೆ ಮಾಡಿರುತ್ತಾರೆ. ಸರ್ಕಾರವು ಟ್ರಸ್ಟ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದರಿಂದ ಅಂತಿಮವಾಗಿ ದೇಶಕ್ಕೆ ಮತ್ತು ದೇಶಬಾಂಧವರಿಗೆ ಲಾಭವಾಗುತ್ತದೆ.

ರಾಜಕಾರಣಿಗಳು ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡದಂತೆ ನಿಗಾ ವಹಿಸಲು, ನಮ್ಮ ಸಂವಿಧಾನ ರಚನೆ ಮಾಡಿದ ಮೇಧಾವಿಗಳು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮಹಾಲೇಖಪಾಲರ ಹುದ್ದೆ ಮತ್ತು ಅದರ ಪಾತ್ರವನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಕಾರ್ಯವೈಖರಿ ಪ್ರಶ್ನಿಸುವ ಅಧಿಕಾರವನ್ನೂ `ಸಿಎಜಿ~ಗೆ ನೀಡಲಾಗಿದೆ.

ಹೀಗಾಗಿ ಮಹಾಲೇಖಪಾಲರ ಕರ್ತವ್ಯ ಮತ್ತು ಹೊಣೆಗಾರಿಕೆಯನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳಲೇಬೇಕು.ಮೊಬೈಲ್ ಎರಡನೇ ತಲೆಮಾರಿನ ತರಂಗಾಂತರ (2ಜಿ) ಹಂಚಿಕೆ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ನಡೆದ ಭ್ರಷ್ಟಾಚಾರ ಹಗರಣಗಳನ್ನು ಬಯಲಿಗೆ ಎಳೆದ `ಸಿಎಜಿ~ ವರದಿಗಳಿಂದಾಗಿಯೇ, ಕ್ಯಾಬಿನೆಟ್ ದರ್ಜೆಯ ಕೇಂದ್ರ ಸಚಿವರೇ ಜೈಲಿಗೆ ಹೋಗಬೇಕಾಯಿತು ಎನ್ನುವುದನ್ನೂ ನಾವು ಇಲ್ಲಿ ಸ್ಮರಿಸಿಕೊಳ್ಳಬೇಕು.

ಇಂತಹ ಇನ್ನಷ್ಟು ಹಗರಣಗಳು ಇನ್ನೂ ಬಯಲಿಗೆ ಬರುವ ಸಾಧ್ಯತೆಗಳೂ ಇವೆ. ಕೇಂದ್ರ ಮತ್ತು ರಾಜ್ಯ ಮಟ್ಟದ ಅನೇಕ ಸಚಿವರೂ ಹಗರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬರಲಿವೆ. ಹೀಗಾಗಿ ಕೇಂದ್ರ ಸರ್ಕಾರವು ತನ್ನ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಂದ ಪಾರಾಗಲು ಅವಕಾಶವೇ ಇಲ್ಲದಂತಾಗಿದೆ. ಆರೋಪಗಳ ಸುಳಿಗೆ ಸಿಲುಕಿರುವ ಸರ್ಕಾರದ ಎದುರು ಆರೋಪಗಳನ್ನು ಎದುರಿಸದೇ ಬೇರೆ ದಾರಿಯೇ ಇಲ್ಲ.

  ಹಗರಣಗಳ ಬಗ್ಗೆ ಅನೇಕ ಸಾಕ್ಷ್ಯಾಧಾರಗಳು ಬಯಲಿಗೆ ಬರುತ್ತಿದ್ದರೂ, ಸರ್ಕಾರ ತನ್ನೆಲ್ಲ ಕೃತ್ಯಗಳನ್ನು ಭಂಡತನದಿಂದಲೇ ಸಮರ್ಥಿಸಿಕೊಳ್ಳುತ್ತಲೇ ಇದೆ. ಹಗರಣಗಳ ಸುಳಿಗೆ ಸಿಲುಕಿರುವ ಮತ್ತು ಇನ್ನಷ್ಟು ಸಿಲುಕಲಿರುವ ಸರ್ಕಾರವು ತನ್ನನ್ನು ತಾನು ಹೇಗೆ ಸಮರ್ಥಿಸಿಕೊಳ್ಳಲಿದೆ ಮತ್ತು ಆರೋಪಗಳಿಂದ ಹೇಗೆ ಪಾರಾಗಿ ಹೊರ ಬರಲಿದೆ ಎನ್ನುವುದು ನಿಜಕ್ಕೂ ಕುತೂಹಲಕರ ಸಂಗತಿಯಾಗಿದೆ.

ನೈಸರ್ಗಿಕ ಸಂಪತ್ತನ್ನು ಹಂಚಿಕೆ ಮಾಡಲು ಸರ್ಕಾರದ ಎದುರು ಹಲವಾರು ಮಾರ್ಗೋಪಾಯಗಳೂ ಇವೆ. ಅವುಗಳ ಪೈಕಿ ಹರಾಜು ಪ್ರಕ್ರಿಯೆ ಬಗ್ಗೆ ಹೆಚ್ಚು ಒಲವು ಕಂಡು ಬರುತ್ತಿದೆ. ಮೊಬೈಲ್ ತರಂಗಾಂತರ (2ಜಿ) ಮತ್ತು ಕಲ್ಲಿದ್ದಲು ಹರಾಜಿಗೂ ಸಾಕಷ್ಟು ವ್ಯತ್ಯಾಸ ಇದೆ. ತರಂಗಾಂತರಗಳಂತೆ ಕಲ್ಲಿದ್ದಲು ಗಣಿಗಳು ಒಂದೇ ಬಗೆಯಲ್ಲಿ ಇಲ್ಲದಿರುವುದು ಇಲ್ಲಿ ಪ್ರಮುಖ ಅಡಚಣೆಯಾದೆ.
 
ಇದರ ಜತೆಗೆ ಇನ್ನೂ ಸಾಕಷ್ಟು ವ್ಯತ್ಯಾಸಗಳೂ ಇವೆ. ಆದರೂ, ನ್ಯಾಯೋಚಿತ ರೀತಿಯಲ್ಲಿ ಕಲ್ಲಿದ್ದಲು ಗಣಿಗಳ ಮೌಲ್ಯ ನಿಷ್ಕರ್ಷೆ ಮಾಡುವುದು ಅಸಾಧ್ಯವೇನೂ ಅಲ್ಲ. ಆರ್ಥಿಕ ತಜ್ಞರು ಮತ್ತು ಅನುಭವಿ ಅಧಿಕಾರಿಗಳ ನೆರವಿನಿಂದ ಸರ್ಕಾರವು ಸಮರ್ಪಕವಾದ ಲೆಕ್ಕಾಚಾರ ಆಧರಿಸಿ ಮೌಲ್ಯ ನಿಗದಿ ಮಾಡಲು ಸಾಧ್ಯವಿದೆ. ಮಾಹಿತಿ ತಂತ್ರಜ್ಞಾನದ ನೆರವಿನಿಂದ ಈ ಸವಾಲನ್ನು ಸುಲಭವಾಗಿ ನಿರ್ವಹಿಸಬಹುದು. ಪಾರದರ್ಶಕವಾಗಿ ಕಾರ್ಯನಿರ್ವಹಿಸಿದರೆ ಯಾವುದೇ ಸಮಸ್ಯೆಯೂ ಉದ್ಭವವಾಗಲಾರದು.

ವ್ಯವಸ್ಥೆಯು ನ್ಯಾಯದ  ಪರವಾಗಿ ಇರುವವರೆಗೆ ಮತ್ತು ಎಲ್ಲರಿಗೂ ಸಮಾನ ಅವಕಾಶ ದೊರೆಯುವಂತಿದ್ದರೆ ಮಾತ್ರ, ವಂಚನೆಗಳು ಮತ್ತು ಸ್ವಜನ ಪಕ್ಷಪಾತಕ್ಕೆ ಕಡಿವಾಣ ಹಾಕಲು ಅವಕಾಶ ಇದ್ದೇ ಇರುತ್ತದೆ.

ಅಧಿಕಾರದಲ್ಲಿ ಇರುವ ರಾಜಕೀಯ ಪಕ್ಷಗಳಿಗೆ ತಮ್ಮಿಂದಾದ ತಪ್ಪುಗಳು ಮನವರಿಕೆಯಾದರೆ ಮಾತ್ರ ಭವಿಷ್ಯದಲ್ಲಿ ಇಂತಹ ಬದಲಾವಣೆಗಳನ್ನು ನಿರೀಕ್ಷಿಸಲು ಸಾಧ್ಯ. ಎಲ್ಲಕ್ಕಿಂತ ದೇಶದ ಹಿತಾಸಕ್ತಿಯೇ ಮುಖ್ಯ ಎಂದು ಚಿಂತಿಸಿ ಕಾರ್ಯಪ್ರವೃತ್ತರಾಗುವ  ಪ್ರಬುದ್ಧ ಮತ್ತು ಪ್ರಾಮಾಣಿಕ ರಾಜಕೀಯ ಮುಖಂಡರ ಸಂಖ್ಯೆ ನಮ್ಮಲ್ಲಿ ಎಷ್ಟು ಇದೆ ಎನ್ನುವ ಅನುಮಾನಗಳೂ ನನ್ನನ್ನು  ಈ ಸಂದರ್ಭದಲ್ಲಿ ಕಾಡುತ್ತಿವೆ.
 
ಒಬ್ಬನೇ ಒಬ್ಬ ಮುತ್ಸದ್ದಿಯಾದರೂ ಬದಲಾವಣೆ ಹರಿಕಾರನಾಗಿ ರಾಜಕೀಯ ಮತ್ತು ಸಾಮಾಜಿಕ ಬದುಕಿನಲ್ಲಿ ಸಭ್ಯತೆ ಮರಳಿಸುವಂತಾಗಲಿ ಎಂದೇ ನಾವೆಲ್ಲ ನಿರೀಕ್ಷಿಸೋಣ.
(ನಿಮ್ಮ ಪ್ರತಿಕ್ರಿಯೆ ತಿಳಿಸಿ:editpagefeedback@prajavani.co.in)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT