ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಬಲ ಸರ್ಕಾರ ಮತ್ತು ದುರ್ಬಲ ಮಾಧ್ಯಮಗಳು

Last Updated 18 ಜೂನ್ 2017, 19:30 IST
ಅಕ್ಷರ ಗಾತ್ರ

ಮಾಧ್ಯಮಗಳ ಸ್ವಾತಂತ್ರ್ಯದ ಅರ್ಥಾತ್ ಸಂವಿಧಾನದತ್ತ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಆಗುತ್ತಿದೆ ಎನ್ನಲಾದ ದಾಳಿಯ ಕುರಿತು ಇನ್ನೊಂದು ಸುತ್ತಿನ ಹಗ್ಗಜಗ್ಗಾಟ ನಡೆಯುತ್ತಿದೆ. ಈ ಸುತ್ತು ಪ್ರಾರಂಭವಾಗಿದ್ದು ಎರಡು ವಾರಗಳ ಹಿಂದೆ ಎನ್.ಡಿ. ಟಿವಿಯ ಪ್ರವರ್ತಕರ ಮನೆಯ ಮೇಲೆ ನಡೆದ ಸಿಬಿಐ ದಾಳಿಯ ಹಿನ್ನೆಲೆಯಲ್ಲಿ.

ಎನ್‌ಡಿಟಿವಿ ಮತ್ತು ಅದರ ಬೆಂಬಲಿಗರ ಪ್ರಕಾರ ಈ ದಾಳಿ ಮಾಧ್ಯಮಗಳ ಸ್ವಾತಂತ್ರ್ಯದ ಮೇಲೆ ಆಗಿರುವ ಅಕ್ಷರಶಃ ಆಕ್ರಮಣ ಮತ್ತು ಪರೋಕ್ಷ ತುರ್ತುಪರಿಸ್ಥಿಯ ನಿರ್ಮಾಣ. ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಅದರ ಕೈಯ್ಯಾಳಾಗಿರುವ ಸಿಬಿಐ ಪ್ರಕಾರ ಈ ಕಾರ್ಯಾಚರಣೆ ಏನಿದ್ದರೂ ಎನ್‌ಡಿಟಿವಿಯವರು ತಮ್ಮ ಸಂಸ್ಥೆಯಲ್ಲಿ ನಡೆಸಿದರು ಎನ್ನಲಾದ ಅಕ್ರಮ ಆರ್ಥಿಕ ವ್ಯವಹಾರಗಳ ವಿರುದ್ಧವೇ ಹೊರತು ‘ಮಾಧ್ಯಮ ಸ್ವಾತಂತ್ರ್ಯ’ದ ಮೇಲಲ್ಲ.
ಹೇಳಿ ಕೇಳಿ ಇದು ಪ್ರಬಲರ ಜಗಳ. ಇಂಗ್ಲಿಷ್‌ನಲ್ಲಿ ಒಂದು ಮಾತಿದೆ. ಆನೆಗಳು ಸರಸವಾಡಿದರೂ ಸರಿ, ಕಾದಾಡಿದರೂ ಸರಿ, ಸಾಯುವುದು ಅವುಗಳ ಕಾಲಡಿಯ ಹುಲ್ಲು ಅಂತ. ಮಾಧ್ಯಮಗಳು ಮತ್ತು ಸರ್ಕಾರಗಳ ವಿಚಾರವೂ ಅದೇ ರೀತಿ. ಅವುಗಳು ಪರಸ್ಪರ ತೀರಾ ಹತ್ತಿರವಾಗಲಿ ಅಥವಾ ಜಗಳವಾಡಲಿ; ಸೊರಗುವುದು ದೇಶದ ಪ್ರಜಾತಂತ್ರ ಅಥವಾ ಜನಹಿತ.

ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಎನ್‌ಡಿಟಿವಿಯ ಜಗಳದಲ್ಲಿ ಯಾರದ್ದು ಸರಿ, ಯಾರದ್ದು ತಪ್ಪು ಎನ್ನುವುದಾಗಲಿ, ಯಾರನ್ನು ನಂಬಬೇಕು ಅಥವಾ ಯಾರನ್ನು ನಂಬಬಾರದು ಎನ್ನುವುದಾಗಲಿ ಅಷ್ಟೊಂದು ಸುಲಭದಲ್ಲಿ ಸ್ಪಷ್ಟವಾಗುವ ವಿಷಯವಲ್ಲ. ಒಂದು ವೇಳೆ ಎಲ್ಲವೂ ಸ್ಪಷ್ಟವಾಗಿದ್ದರೂ ದಿಢೀರ್ ತೀರ್ಮಾನ ನೀಡಬಹುದಾದ ವಿಷಯವೂ ಇದಲ್ಲ.  ಸತ್ಯವನ್ನೂ ಕೆಲವೊಮ್ಮೆ ಸತ್ಯದ ಹಿತದೃಷ್ಟಿಯಿಂದಲೇ ಬಚ್ಚಿಟ್ಟು ಕಾಯಬೇಕು. ಮಾಧ್ಯಮ ಸಂಸ್ಥೆಗಳ ಮಾಲೀಕರು ಆರ್ಥಿಕ ಅವ್ಯವಹಾರ ನಡೆಸಿದರೆ, ಸರ್ಕಾರ ಅವರ ವಿರುದ್ಧ ಕ್ರಮಕ್ಕೆ ಮುಂದಾಗಬಾರದೇ? ಖಂಡಿತಾ ಮುಂದಾಗಬೇಕು? ಹಾಗೆಂದು ತನ್ನ ವಿರುದ್ಧವಾಗಿದೆ ಎಂದು ಯಾವ ಸಂಸ್ಥೆಯ ವಿರುದ್ಧ ಆಳುವ ಪಕ್ಷ ಸದಾ ಅವಡುಗಚ್ಚಿ ಕತ್ತಿ ಮಸೆಯುತ್ತಿತ್ತೊ ಆ ಸಂಸ್ಥೆಯ ವಿರುದ್ಧ, ಅದರಲ್ಲೂ ಒಂದು ಮಾಧ್ಯಮ ಸಂಸ್ಥೆಯ ವಿರುದ್ಧ ಸಿಬಿಐನಂತಹ ಸ೦ಸ್ಥೆ ನಡೆಸುವ ದಾಳಿ, ಜಡಿಯುವ ಕೇಸು ಇತ್ಯಾದಿಗಳ ಕುರಿತಾಗಿ ಸರ್ಕಾರ ನೀಡುವ ಸಮರ್ಥನೆಗಳನ್ನು ಒಪ್ಪಿಕೊಳ್ಳಬಹುದೇ?  ಇಲ್ಲ. ಈ ದೇಶದಲ್ಲಿ  ಸರ್ಕಾರ ನಡೆಸಿದವರ ಅಟಾಟೋಪಗಳ ಚರಿತ್ರೆಯನ್ನು  ಬಲ್ಲ ಯಾವ ವ್ಯಕ್ತಿಯೂ ಇಂತಹ ವಿಚಾರಗಳಲ್ಲಿ  ಸರ್ಕಾರ ಹೇಳಿದ್ದೆಲ್ಲವನ್ನೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆಳುವ ಸರ್ಕಾರಕ್ಕೆ ಅಹಿತವಾದ ವಾದವನ್ನು ಮಾಡುವವರೆಲ್ಲಾ ದಿಢೀರ್ ಅಪಾದಿತರು ಅಥವಾ ಅಪರಾಧಿಗಳಾಗುವ ಪರಂಪರೆಯೊಂದು ಈ ದೇಶದ ಪ್ರಜಾತಂತ್ರದ ಚರಿತ್ರೆಯ ಭಾಗವೇ ಆಗಿ ಹೋಗಿದೆ.  ಅದು ಈಗಿನ ಸರ್ಕಾರ ಪ್ರಾರಂಭಿಸಿದ ಪರಂಪರೆ ಅಲ್ಲ. ಅದು ಈ ಸರ್ಕಾರ ಹೋದಾಗ ಕೊನೆಗೊಳ್ಳುವ ಪರಂಪರೆಯೂ ಅಲ್ಲ.

ಆದರೆ ಈ ವಿಚಾರದಲ್ಲಿ ಬಿಜೆಪಿಗೆ ಮತ್ತು ದೇಶದಲ್ಲಿ ಆಳ್ವಿಕೆ ನಡೆಸಿದ ಮತ್ತು ನಡೆಸುತ್ತಿರುವ ಇತರ ಪಕ್ಷಗಳಿಗೆ ಒಂದೇ ಒಂದು ವ್ಯತ್ಯಾಸವಿದೆ. ಅದು ಏನೆಂದರೆ ಬಿಜೆಪಿ ತಾನು ನಡೆಸುತ್ತಿರುವ ಸರ್ಕಾರ, ಅದರ ನಿರ್ಧಾರಗಳು ಮತ್ತು ಅದರ ನಾಯಕತ್ವವನ್ನು ಯಾರಾದರೂ ಪ್ರಶ್ನಿಸಿದರೆ, ಅದನ್ನು ದೇಶದ ಹಿತಾಸಕ್ತಿಯ ಮೇಲೆ ನಡೆಯುವ ಆಕ್ರಮಣ ಎನ್ನುವಂತೆ ಬಿಂಬಿಸುತ್ತದೆ ಮತ್ತು ಬಹುತೇಕ ಜನರನ್ನು ಹಾಗೆಂದು ನಂಬಿಸುತ್ತದೆ. ಸರ್ಕಾರವನ್ನು ಮತ್ತು ಅದರ ನಾಯಕರನ್ನು ಪ್ರಶ್ನಿಸುವುದು ಬೇರೆ, ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ಬೇರೆ. ಇವೆರಡನ್ನೂ ಒಂದೇ ಎಂದು ಎಲ್ಲರೂ ನಂಬಿಬಿಟ್ಟರೆ ಅದು ಪ್ರಜಾಸತ್ತೆಯ ಅವಸಾನದ ಆರಂಭ.

ಸರ್ಕಾರಗಳು ದೇಶದ ಹಿತಾಸಕ್ತಿಯಿಂದ ಎಂದು ಭಾವಿಸಿ ಕೈಗೊಳ್ಳುವ ನಿರ್ಧಾರಗಳನ್ನೂ ಮಾಧ್ಯಮಗಳು ಪ್ರಶ್ನಿಸಬೇಕಾಗುತ್ತದೆ. ಹಾಗೆ ಮಾಡುವಾಗ ಕೆಲವೊಮ್ಮೆ ಮಾಧ್ಯಮಗಳು ತಪ್ಪಾಗಿ ನಡೆದುಕೊಳ್ಳಬಹುದು. ಕೆಲ ವೊಮ್ಮೆ ಪೆದ್ದು ಪೆದ್ದಾಗಿ ನಡೆದುಕೊಳ್ಳಬಹುದು. ಕೆಲವೊಮ್ಮೆ ಯಾವುದೋ ಹಿತಾಸಕ್ತಿಯ ಕಾರಣಕ್ಕಾ ಗಿಯೂ ಹೀಗೆ ಮಾಡಬಹುದು. ಇನ್ನು ಕೆಲವೊಮ್ಮೆ ಪಕ್ಷಪಾತಿಯಾಗಿ ವರ್ತಿಸಬಹುದು. ಸರ್ಕಾರದ ಅಧಿಕಾರ ದುರುಪಯೋಗ ಆಗುವಂತೆ ಮಾಧ್ಯಮಗಳ ಅಧಿಕಾರ ಮತ್ತು ಅವುಗಳಿಗಿರುವ ಸ್ವಾತಂತ್ರ್ಯದ ದುರುಪಯೋಗ ಆಗಬಹುದು. ಮಾಧ್ಯಮಗಳ ಇಂತಹ ತಪ್ಪುಗಳು,  ಇಂತಹ ಪೆದ್ದು ಪ್ರವೃತ್ತಿಗಳು, ಪಕ್ಷಪಾತಪ್ರೇರಿತ ನಡವಳಿಕೆಗಳು ಕಿರಿ ಕಿರಿ ಉಂಟು ಮಾಡುವ ವಿಚಾರಗಳೇ ಆದರೂ ಅವು ಅಪಾಯಕಾರಿಯಲ್ಲ. ಆದರೆ,  ಆಳುವ ಸರ್ಕಾರವೊಂದು ಕೈಗೊಳ್ಳುವ ಎಲ್ಲಾ ನಿರ್ಧಾರಗಳಲ್ಲೂ  ದೇಶದ ಹಿತವನ್ನೇ ಕಾಣುವ ಮತ್ತು ಕಾಣಲೇಬೇಕೆಂದು ಒತ್ತಾಯ ಹೇರುವ ಪ್ರವೃತ್ತಿ ಅಪಾಯಕಾರಿ ಮಾತ್ರವಲ್ಲ, ವಿನಾಶಕಾರಿ ಕೂಡಾ.

ಮಾಧ್ಯಮ ಸ್ವಾತಂತ್ರ್ಯದ ವಿಚಾರದಲ್ಲಿ ಇಂದು ಆತಂಕ ಕಾರಿ ಎನಿಸುವುದು ಎನ್‌ಡಿಟಿವಿ ಅಥವಾ ಇನ್ಯಾವುದೋ ಮಾಧ್ಯಮ ಸಂಸ್ಥೆಯ ಮೇಲೆ ಸಕಾರಣಕ್ಕಾಗಿ ಅಥವಾ ವೈಷಮ್ಯ ಸಾಧಿಸುವುದಕ್ಕಾಗಿ ಯಾವುದೋ ಕೇಸು ಜಡಿಯ ಲಾಯಿತು ಎನ್ನುವುದಕ್ಕಿಂತ ಹೆಚ್ಚಾಗಿ ಸರ್ಕಾರವನ್ನು ಮತ್ತು ಅದರ ನಾಯಕತ್ವವನ್ನು ಪ್ರಶ್ನಿಸಿದರೆ ಅದು ದೇಶದ ಹಿತಾ ಸಕ್ತಿಯನ್ನು ಪ್ರಶ್ನಿಸಿದಂತೆ ಎನ್ನುವ ಅಘೋಷಿತ ನೀತಿಯನ್ನು ದೇಶದ ಬಹುತೇಕ ಮಾಧ್ಯಮಗಳು ಒಪ್ಪಿಕೊಂಡಿವೆ ಎನ್ನುವುದು. ರಾಷ್ಟ್ರೀಯ ವಾಹಿನಿಯಲ್ಲಿ ನಡೆಯುವ ಚರ್ಚೆಗಳು ಇಂದು ಸರ್ಕಾರದ ನೀತಿ ನಿಲುವುಗಳನ್ನು ಗುರಿಯಾಗಿಸಿಕೊಂಡು ನಡೆಯುವುದಕ್ಕಿಂತ ಹೆಚ್ಚಾಗಿ ವಿರೋಧ ಪಕ್ಷಗಳನ್ನು ಕೇಂದ್ರೀಕರಿಸಿಕೊಂಡು ನಡೆಯು ತ್ತಿವೆ. ಸ್ವತಂತ್ರ ಭಾರತದಲ್ಲಿ ಹೀಗಾಗಿರುವುದು ಇದೇ ಮೊದಲಿರಬೇಕು. ಸರ್ಕಾರ, ಮಾಧ್ಯಮ ಸ್ವಾತಂತ್ರ್ಯದ ದಮ ನಕ್ಕೆ ತೊಡಗಿದೆಯೋ ಇಲ್ಲವೋ ಎನ್ನುವುದು ಚರ್ಚೆಯ ವಿಷಯ, ಆದರೆ ಬರಬರುತ್ತಾ ದೇಶದ ಮಾಧ್ಯಮಗಳೇ ತಮಗೆ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸರ್ಕಾರದ ಕಾಲ ಬುಡದಲ್ಲಿಟ್ಟು ಶರಣಾಗಿರುವಂತೆ ಕಾಣುತ್ತದೆ. ಆರಂಭದಲ್ಲಿ ಹೇಳಿದ ಉಪಮೆಯನ್ನು ಬಳಸಿ ಹೇಳುವುದಾದರೆ ಭಾರತದ ನೆಲದಲ್ಲಿ ಸರಸವಾಡುವ ಆನೆಗಳ ಕಾಲ ಕೆಳಗೆ  ಸಿಲುಕಿ ಹುಲ್ಲು ಸೊರಗಿದೆಯೇ ಹೊರತು ಆನೆಗಳ ಕಾಲಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಬರೆದು ತಮ್ಮ ಆಕ್ರೋಶ ಹೊರಗೆಡಹುವ ಸಾಮಾನ್ಯ ಜನರಿಗೆ ಅಗತ್ಯವಿದ್ದಷ್ಟು ಅಭಿವ್ಯಕ್ತಿಯ ಸ್ವಾತಂತ್ರ್ಯವೂ ಇಂದು ಬಹುತೇಕ ಸಂಘಟಿತ ಮಾಧ್ಯಮಗಳಿಗೆ ಬೇಕಿದೆ ಅಂತ ಅನ್ನಿಸುವುದಿಲ್ಲ. ಬರಬರುತ್ತಾ ವೃತ್ತಪತ್ರಿಕೆಗಳೆಲ್ಲಾ ವೃತ್ತಾಂತ  ಪತ್ರಗಳಾಗುತ್ತಿವೆ (newsletter). ಟಿವಿ ಚಾನೆಲ್‌ಗಳು, ಮುಖ್ಯವಾಗಿ ಪ್ರಾದೇಶಿಕ ಭಾಷೆಗಳ ಟಿವಿ ವಾಹಿನಿಗಳು, ಟ್ಯಾಬ್ಲೋಯ್ಡ್‌ಗಳ ದೃಶ್ಯ-ಶ್ರವ್ಯ ಅವತರಣಿಕೆಗಳಾಗುತ್ತಿವೆ.

ಮಾಧ್ಯಮಗಳ ಶರಣಾಗತಿಗೆ ಕಾರಣ ಅವುಗಳು ಸೈದ್ಧಾಂತಿಕವಾಗಿ ಕೇಂದ್ರದಲ್ಲಿ ಆಳುವ ಮಂದಿಯ ಒಲವು-ನಿಲುವುಗಳನ್ನು ಒಪ್ಪಿಕೊಂಡು ಬಿಟ್ಟಿರುವುದು ಎಂದರೆ ಬಹುಶಃ ಅದು ಅವಸರದ ತೀರ್ಮಾನವಾದೀತು. ಜಗತ್ತಿನಾದ್ಯಂತ ಇಂದು ಮುಖ್ಯವಾಹಿನಿ ಮಾಧ್ಯಮಗಳು ಎರಡು ರೀತಿಯ ಮೂಲಭೂತ ಸವಾಲುಗಳನ್ನು ಎದುರಿಸುತ್ತಿವೆ. ಇವೆರಡೂ ಸವಾಲುಗಳ ಹಿಂದೆ ಇರುವುದು ಬದಲಾದ ತಂತ್ರಜ್ಞಾನ. ಡಿಜಿಟಲ್ ತಂತ್ರಜ್ಞಾನ ಮಾಹಿತಿ ಪ್ರಸರಣಕ್ಕೆ ಬೇರೆ ಬೇರೆ ರೀತಿಯ ನೆಲೆಗಳನ್ನು ಕಲ್ಪಿಸಿದ ನಂತರ ಮುದ್ರಣ ಮತ್ತು ಟಿವಿ ಮಾಧ್ಯಮಗಳೆರಡಕ್ಕೂ ಒಂದೆಡೆ ತಮ್ಮ ಪ್ರಸ್ತುತತೆಯ ಸವಾಲು ಎದುರಾದರೆ, ಇನ್ನೊಂದೆಡೆ ತಮ್ಮ ಆದಾಯ ಮೂಲಗಳನ್ನು ಉಳಿಸಿಕೊಳ್ಳಬೇಕಾದ ಸವಾಲು ಎದುರಾಗಿದೆ. ಪ್ರಸ್ತುತತೆಯ ವಿಚಾರದಲ್ಲಿ ಭಾರತದ ಮುಖ್ಯವಾಹಿನಿ ಮಾಧ್ಯಮಗಳು ಉಳಿದ ದೇಶಗಳಲ್ಲಿ ಅಲ್ಲಿನ ಮಾಧ್ಯಮಗಳು ಎದುರಿಸಿದಷ್ಟು ಸವಾಲುಗಳನ್ನು ಎದುರಿಸಬೇಕಿಲ್ಲದೆ ಹೋದರೂ ಮಾಧ್ಯಮಗಳ ಅರ್ಥವ್ಯವಸ್ಥೆ ಭಾರತದಲ್ಲಿ ಕೂಡಾ ದೊಡ್ಡ ಮಟ್ಟಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದ್ದ ಆದಾಯ ಮೂಲಗಳು ವಿವಿಧ ಮಾಧ್ಯಮ ಪ್ರಕಾರಗಳಿಗೆ ಹಂಚಿ ಹೋಗುತ್ತಿರುವುದರಿಂದ ಅದು ಯಾರಿಗೂ ಸಾಕಾಗುತ್ತಿಲ್ಲ. ಹೇಗಾದರೂ ಮಾಡಿ ತಮ್ಮ ಆದಾಯ ಮೂಲಗಳನ್ನು ಉಳಿಸಿ ಬೆಳೆಸಿ ಕೊಳ್ಳುವ ಧಾವಂತದಲ್ಲಿರುವ ಮಾಧ್ಯಮಗಳು ತಮ್ಮ ಆರ್ಥಿಕ ಭದ್ರತೆ ಉಳಿಸಿಕೊಳ್ಳಲು ಏನೇನು ಮಾಡಬೇಕೋ ಅವುಗಳನ್ನು ಮಾಡುತ್ತಿವೆ.

ವಿಷಾದದ ವಿಷಯ ಏನು ಎಂದರೆ ಮಾಧ್ಯಮಗಳ ಆರ್ಥಿಕ ಸುಭದ್ರತೆಗೂ  ಅವುಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು ಪ್ರಜಾತಂತ್ರದ ಕಾವಲು ಕಾಯುವ ಕೆಲಸ ಮಾಡುವುದಕ್ಕೂ ಏನೇನೂ ಸಂಬಂಧವಿಲ್ಲ. ಈ ಕೆಲಸ ಮಾಡದೆ ಆಳುವ ಪಕ್ಷಗಳ, ಶ್ರೀಮಂತ ಉದ್ಯಮಗಳ ತುತ್ತೂರಿಯಾಗಿದ್ದರೆ ಆರ್ಥಿಕವಾಗಿ ಅವುಗಳಿಗೆ ಹೆಚ್ಚಿನ ಲಾಭವಿದೆ. ಅಷ್ಟು ಮಾತ್ರವಲ್ಲ. ಆಳುವ ಪಕ್ಷಗಳನ್ನು ಎದುರು ಹಾಕಿಕೊಳ್ಳುವುದು ಎಂದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾದೀತು ಎನ್ನುವುದು ಇಲ್ಲಿ ಮುಖ್ಯ ವಿಚಾರವೇ ಅಲ್ಲ. ಆಳುವ ಪಕ್ಷಗಳನ್ನು ಎದುರು ಹಾಕಿಕೊಂಡರೆ  ಅದರ ಪರಿಣಾಮ ಕಾಣಿಸಿಕೊಳ್ಳುವುದು ಮಾಧ್ಯಮಗಳ ಆದಾಯ ಮೂಲಗಳ  ಮೇಲೆ.

ಮಾಧ್ಯಮಗಳ ಆದಾಯ ಓದುಗರಿಂದ ಅಥವಾ ವೀಕ್ಷಕರಿಂದ ಬರುವುದಿಲ್ಲ. ಅದು ಬರುವುದು ಜಾಹೀರಾತುಗಳಿಂದ. ಸರ್ಕಾರ, ಮಾಧ್ಯಮಗಳ  ಬಹುದೊಡ್ಡ ಜಾಹೀರಾತುದಾರ. ತನಗೆ ವಿರುದ್ಧವಾಗಿರುವ ಮಾಧ್ಯಮಗಳಿಗೆ ಸರ್ಕಾರ ಜಾಹೀರಾತು ನೀಡುವುದನ್ನು ನಿಲ್ಲಿಸಬಹುದು. ಹಲವು ಸರ್ಕಾರಗಳು ಹೀಗೆ ಮಾಡಿದ ನಿದರ್ಶನ ಗಳಿವೆ.  ಜತೆಗೆ ಉದ್ಯಮಗಳ ಜಾಹೀರಾತುಗಳನ್ನು ತಡೆಹಿಡಿ ಯುವ ತಂತ್ರವನ್ನೂ ಸರ್ಕಾರ ಮನಸ್ಸು ಮಾಡಿದರೆ ತಮಗಾಗದ ಮಾಧ್ಯಮಗಳ ವಿರುದ್ಧ ಬಳಸಿಕೊಳ್ಳಬಹುದು. ಸಾಮಾನ್ಯವಾಗಿ ಮಾಧ್ಯಮ ನಡೆಸುವವರಿಗೆ ಇತರ ಉದ್ಯಮಗಳಲ್ಲಿ ಹಿತಾಸಕ್ತಿ ಇರುತ್ತದೆ. ಅವುಗಳನ್ನು ನಿಯಂತ್ರಿಸುವ ಬೆದರಿಕೆ ಒಡ್ಡುವ ಮೂಲಕವೂ  ಸರ್ಕಾರ ಗಳು ಮಾಧ್ಯಮಗಳನ್ನು ಮಣಿಸಬಹುದು. ಈ ಸಾಧ್ಯತೆ ಗಳೆಲ್ಲಾ ಹಿಂದಿನಿಂದಲೂ ಇದ್ದರೂ ಇಂದಿನ ಪರಿಸ್ಥಿತಿಯಲ್ಲಿ ಇವುಗಳನ್ನು ಎದುರಿಸುವ ಮಾಧ್ಯಮ ಉದ್ಯಮದ ಶಕ್ತಿ ತೀರಾ ಕುಸಿದಿದೆ. 

ಟೀಕೆಯ ವಿಚಾರದಲ್ಲಿ ವಿಪರೀತ ಸೂಕ್ಷ್ಮತೆಯನ್ನು ಹೊಂದಿರುವ ಪಕ್ಷವೊಂದು ಪ್ರಬಲ ಬಹುಮತದೊಂದಿಗೆ ಅಧಿಕಾರದಲ್ಲಿರುತ್ತಾ ಮಾಧ್ಯಮಗಳು ಸಹಜವಾಗಿಯೇ ಧೈರ್ಯ ಕಳೆದುಕೊಂಡಿವೆ. ‘ತುರ್ತುಪರಿಸ್ಥಿತಿಯ ಸಮಯ ದಲ್ಲಿ ಸರ್ಕಾರ ಬಾಗಿ ಎಂದರೆ ಅಂದಿನ ಮಾಧ್ಯಮಗಳು ನೆಲದ ಮೇಲೆ ತೆವಳಿದವು’ ಎಂದು ಬಿಜೆಪಿಯ ದೊಡ್ಡ ನಾಯಕ ಎಲ್.ಕೆ.ಅಡ್ವಾಣಿ ಹೇಳಿದ್ದುಂಟು. ಇದನ್ನು ನೆನಪಿಸಿಕೊಳ್ಳುತ್ತಾ ಈಚೆಗೆ ಪ್ರತಿಷ್ಠಿತ ‘ಎಕನಾಮಿಕ್ ಅಂಡ್  ಪೊಲಿಟಿಕಲ್ ವೀಕ್ಲಿ’ಯ ಸಂಪಾದಕ ಪರಂಜೋಯ್ ಗುಹಾ ಥಾಕೂರ್ತಾ ಆಡಿದ ಮಾತು ಈ ಕಾಲದ ಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಅವರ ಪ್ರಕಾರ ಈಗ ಸರ್ಕಾರ ಮಾಧ್ಯಮಗಳಿಗೆ ಬಾಗಿ ಅಂತಲೂ ಹೇಳಿಲ್ಲ. ಆದರೂ ಅವುಗಳು ತುರ್ತು ಪರಿಸ್ಥಿತಿಯ ಕಾಲಕ್ಕಿಂತಲೂ ದೀನವಾಗಿ ತೆವಳುತ್ತಿವೆ. ಎನ್‌ಡಿಟಿವಿಯ ಪ್ರವರ್ತಕರ ಮೇಲೆ ನಡೆದ ದಾಳಿಯ ಸರಿ ತಪ್ಪುಗಳು ಏನೇ ಇರಲಿ ಈಗಾಗಲೇ ತೆವಳುತ್ತಿರುವ ಮಾಧ್ಯಮಗಳಿಗೆ ‘ಹುಷಾರ್’ ಎನ್ನುವ ಸಂದೇಶವೊಂದು ಅಲ್ಲಿ  ಇದೆ. ಮಾಧ್ಯಮೋದ್ಯಮ ತನ್ನ ಚಾರಿತ್ರಿಕ ದುರ್ಬಲ ಕ್ಷಣಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಪ್ರಬಲವಾದ ಆಳುವ ಸರ್ಕಾರವೊಂದನ್ನು ಎದುರು ಹಾಕಿಕೊಂಡು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿ ಸಲು ಅದು ಬದ್ಧವಾಗಿರಬೇಕು ಎಂದು ನಿರೀಕ್ಷಿಸುವುದೇ ತಪ್ಪು. ಅಭಿವ್ಯಕ್ತಿ ಸ್ವಾತಂತ್ರ್ಯವು ಸರ್ಕಾರ ಕೊಟ್ಟರೆ ಉಂಟು. ಕೊಟ್ಟಷ್ಟು ಉಂಟು.  ಒಬ್ಬರು ಸಾಮಾಜಿಕ ಮಾಧ್ಯಮದ ಲ್ಲೆಲ್ಲೋ ಬರೆದ ಹಾಗೆ ಇದು ಸತ್ಯಮೇವ ಜಯತೆಯ ಕಾಲವಲ್ಲ. ಜಯವು ಸತ್ಯವನ್ನು ಮೇಯುವ ಕಾಲ.

ಮಾಧ್ಯಮೋದ್ಯಮ ಈಗ ಇರುವ ತನ್ನ ಆರ್ಥಿಕ ಮಾದರಿಯನ್ನೇ ಅವಲಂಬಿಸಿಕೊಂಡು ಮುಂದುವರಿದದ್ದೇ ಆದರೆ ಪ್ರಜಾತಂತ್ರದ ನಾಲ್ಕನೆಯ ಸ್ತ೦ಭವಾಗಿ ಕಾರ್ಯನಿರ್ವಹಿಸುವ ಶಕ್ತಿಯನ್ನು ಅದು  ಸದ್ಯದಲ್ಲೇ ಇನ್ನಷ್ಟು ಕಳೆದುಕೊಳ್ಳಲಿದೆ. ಸರ್ಕಾರದ ಜಾಹೀರಾತುಗಳನ್ನು ಅವಲಂಬಿಸದೆ, ಈಗಾಗಲೇ ಕುಸಿಯುತ್ತಿರುವ ಖಾಸಗಿ ಜಾಹೀರಾತುಗಳ ಮಾರುಕಟ್ಟೆಯನ್ನು ಅವಲಂಬಿಸದೆ ಪರ್ಯಾಯ ಆದಾಯ ಮೂಲವೊಂದನ್ನು  ಆವಿಷ್ಕರಿಸಲು ಸಾಧ್ಯವಾದರೆ ಮಾಧ್ಯಮಗಳು ಮಾಧ್ಯಮಗಳಾಗಿ ಉಳಿಯುತ್ತವೆ. ಹಿಂದೊಮ್ಮೆ ತೆಹೆಲ್ಕಾ ಸಂಸ್ಥೆ ಜನರಿಂದ ಹಣ ಸಂಗ್ರಹಿಸಿ ನಿಯತಕಾಲಿಕವೊಂದನ್ನು ಹುಟ್ಟುಹಾಕುವ ಪ್ರಯತ್ನ ಮಾಡಿತು. ಆಮ್ ಆದ್ಮಿ ಪಕ್ಷ ರಾಜಕೀಯಕ್ಕೆ ಅಕ್ರಮ ಸಂಪತ್ತು ಬಳಸದೆ ಬೇರೆ ಮಾರ್ಗವೇ ಇಲ್ಲ ಎನ್ನುವ ಹಂತದಲ್ಲಿ ಚುನಾವಣೆಗೆ ಬೇಕಾದ ಹಣವನ್ನು ಹೊಸ ಮೂಲಗಳಿಂದ ಸಂಗ್ರಹಿಸುವ ಸಾಧ್ಯತೆಯನ್ನು ತೋರಿಸಿತ್ತು. ತೆಹೆಲ್ಕಾ ಮತ್ತು ಆಮ್ ಆದ್ಮಿ ಪಕ್ಷಗಳ ಇಂದಿನ ಪರಿಸ್ಥಿತಿ ಏನೇ ಇರಲಿ, ಅವುಗಳು ನಡೆಸಿದ ಆರ್ಥಿಕ ಪ್ರಯೋಗಗಳಲ್ಲಿ ಮಾಧ್ಯಮ ಉದ್ಯಮಕ್ಕೆ  ಕೆಲ ಪಾಠಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT