ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾವಿ ಇತಿಹಾಸ ಪುಸ್ತಕವೊಂದರ ಸುತ್ತ...

Last Updated 13 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ನಾನು ಇತ್ತೀಚಿನ ವರ್ಷಗಳಲ್ಲಿ ಓದಿರುವ ಅತ್ಯಂತ ಪ್ರಭಾವಶಾಲಿ ಇತಿಹಾಸ ಪುಸ್ತಕವೆಂದರೆ ‘ಸೇಪಿಯನ್ಸ್ ಎ ಬ್ರೀಫ್ ಹಿಸ್ಟರಿ ಆಫ್‌ ಹ್ಯೂಮನ್‌ಕೈಂಡ್’ (ಸೇಪಿಯನ್ನರು ಮಾನವತೆಯ ಸಂಕ್ಷಿಪ್ತ ಇತಿಹಾಸ). ಇದನ್ನು ಬರೆದವರು ಯುವಾಲ್ ನೋವ ಹರಾರಿ ಎಂಬ ಯುವ ಇಸ್ರೇಲಿ ಇತಿಹಾಸಕಾರ.

ಸೇನಾ  ಇತಿಹಾಸದಲ್ಲಿ ಪರಿಣತಿ ಪಡೆದಿರುವ ಹರಾರಿ ಅಧ್ಯಯನ ಮಾಡಿದ್ದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಮತ್ತು ಬೋಧಿಸುವುದು ಜೆರೂಸಲೆಮ್‌ನ ಹೀಬ್ರೂ ವಿಶ್ವವಿದ್ಯಾಲಯದಲ್ಲಿ. ಈ ಪುಸ್ತಕ ರಚನೆಯ ಹಿನ್ನೆಲೆಯೂ ಕುತೂಹಲಕರವಾಗಿದೆ.
 
ಹರಾರಿಯವರ ಹಿರಿಯ ಸಹೋದ್ಯೋಗಿಗಳು ಪ್ರಪಂಚದ ಇತಿಹಾಸವನ್ನು ಬೋಧಿಸುವ ಜವಾಬ್ದಾರಿಯನ್ನು ಅವರಿಗೆ ಒಪ್ಪಿಸಿದರು. ಸಾಮಾನ್ಯವಾಗಿ ಇತಿಹಾಸ ವಿಭಾಗಗಳಲ್ಲಿ ನೀರಸವಾದ ಮತ್ತು ಸಾಮಾನ್ಯವಾದ ವಿಷಯಗಳನ್ನು ಕಿರಿಯ ಸಹೋದ್ಯೋಗಿಗಳಿಗೆ ನೀಡುತ್ತಾರೆ.
 
ಇಂತಹ ಸಂದರ್ಭಗಳಲ್ಲಿ ಯಾವುದಾದರೊಂದು ಸುಲಭದ ಪಠ್ಯಪುಸ್ತಕವನ್ನು ಬಳಸಿ ಪ್ರಪಂಚದ ಇತಿಹಾಸದ ಕೆಲವು ಭಾಗಗಳನ್ನು (ಉದಾಹರಣೆಗೆ ಪ್ರಾಚೀನ ಸಾಮ್ರಾಜ್ಯಗಳು ಇಲ್ಲವೇ ವಸಾಹತುಶಾಹಿ ಮತ್ತು ಆಧುನಿಕ ಪ್ರಪಂಚ ಇತ್ಯಾದಿ) ಒಂದು ಸೆಮಿಸ್ಟರ್ ಅವಧಿಯಲ್ಲಿ ಬೋಧಿಸುವುದು ಎಲ್ಲರೂ ಅನುಸರಿಸುವ ಮಾದರಿ.
 
ಆದರೆ ಹರಾರಿ ತಮಗೆ ದೊರಕಿದ ಹೊಸ ಜವಾಬ್ದಾರಿಗೆ ಪ್ರತಿಕ್ರಿಯಿಸಿದ ರೀತಿ ತುಂಬ ವಿಭಿನ್ನವಾಗಿತ್ತು. ಕಳೆದ 25 ಲಕ್ಷ ವರ್ಷಗಳ ಮಾನವತೆಯ ಇತಿಹಾಸ, ಕಳೆದ 70,000 ವರ್ಷಗಳಲ್ಲಿ ವಿವಿಧ ಮಾನವ ವರ್ಗಗಳು (ಸ್ಪೀಷೀಸ್) ಭೂಮಿಯ ಪರಿಸರದ ಮೇಲೆ ತಮ್ಮ ನಿಯಂತ್ರಣ ಸ್ಥಾಪಿಸಿದ ಬಗೆ, ಕಳೆದ 10,000 ವರ್ಷಗಳಲ್ಲಿ ಉಳಿದುಬಂದಿರುವ ಏಕೈಕ ಮಾನವ ವರ್ಗವಾದ ಸೇಪಿಯನ್ನರ ಯಶಸ್ಸಿನ ಕಾರಣ  ಮತ್ತು ಕಡೆಗೆ ಮಾನವತೆಯ ಭವಿಷ್ಯವನ್ನು ಹರಾರಿ ತಮ್ಮ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡರು.
 
ಇದರೆ ಬಗ್ಗೆ ಕೆಲವು ವರ್ಷಗಳ ಕಾಲ ಪಾಠ ಮಾಡುತ್ತ, ಹೀಬ್ರೂ ಭಾಷೆಯಲ್ಲಿ ಕೃತಿಯೊಂದನ್ನು ಸಹ 2011ರಲ್ಲಿ ರಚಿಸಿದರು. (ಇಂತಹ ಕೃತಿಯೊಂದು ರಚನೆಯಾಗುವ ಸಾಧ್ಯತೆ ಕನ್ನಡದಲ್ಲಿ ಅಥವಾ ಇತರೆ ಯಾವುದೇ ಭಾರತೀಯ ಭಾಷೆಗಳಲ್ಲಿ ಸಂಭವಿಸಬಹುದಾದ ಬೌದ್ಧಿಕ ವಾತಾವರಣ ನಮ್ಮಲ್ಲಿಲ್ಲ ಎನ್ನುವುದು ನನ್ನಲ್ಲಿ  ಒಂದು ಕ್ಷಣ ವಿಷಾದ ಮೂಡಿಸಿತು.

ಇದಕ್ಕೆ ಕಾರಣ ಸರಳ: ಯುವ ಅಧ್ಯಾಪಕನೊಬ್ಬನಿಗೆ ತನಗೆ ಸೂಕ್ತವೆನಿಸಿದ ರೀತಿಯಲ್ಲಿ ಪಠ್ಯಕ್ರಮವನ್ನು ಬದಲಿಸಿ ಪಾಠ ಮಾಡುವ ಸ್ವಾತಂತ್ರ್ಯವಾಗಲೀ ಅಂತಹ ಕಲ್ಪನೆಯನ್ನು ಕೊಡಬಲ್ಲ ಬೌದ್ಧಿಕ ಸಂಸ್ಕೃತಿಯಾಗಲೀ ನಮ್ಮಲ್ಲಿಲ್ಲ). ‘ಸೇಪಿಯನ್’  ಕೃತಿಯು 2014ರಲ್ಲಿ ಇಂಗ್ಲಿಷಿಗೆ ಅನುವಾದವಾಯಿತು ಹಾಗೂ ತಕ್ಷಣವೇ ಅದ್ಭುತ ಯಶಸ್ಸನ್ನು ಕಂಡಿತು.
 
ತದನಂತರದಲ್ಲಿ ಹರಾರಿ ‘ಹೋಮೊ ಡ್ಯುಯಸ್: ಎ ಬ್ರೀಫ್‌ ಹಿಸ್ಟರಿ ಆಫ್‌ ಟುಮಾರೊ’ (ನಾಳಿನ ಸಂಕ್ಷಿಪ್ತ ಇತಿಹಾಸ) ಎಂಬ ಮತ್ತೊಂದು ಕೃತಿಯನ್ನು ಬರೆದಿದ್ದಾರೆ. ಆ ಕೃತಿಯಲ್ಲಿ ಮುಂದಿನ ಹಲವು ಶತಮಾನಗಳಲ್ಲಿ ಮನುಷ್ಯನ ಬೌದ್ಧಿಕ ಕ್ಷಮತೆ ಮತ್ತು ಸೃಜನಾತ್ಮಕ ಕ್ರಿಯೆಗಳು ಸೇಪಿಯನ್ನರಾದ ನಮ್ಮ ಭವಿಷ್ಯವನ್ನು ಹೇಗೆ ರೂಪಿಸ ಬಹುದು ಎನ್ನುವ ಚರ್ಚೆಯಲ್ಲಿ ತೊಡಗುತ್ತಾರೆ. ಮೂರು-ನಾಲ್ಕು ಶತಮಾನಗಳಲ್ಲಿ ಮನುಷ್ಯರು ಭೂಮಿಯ ಮೇಲಿನ ನಿಯಂತ್ರಕ ಶಕ್ತಿಯಾಗಿ ಉಳಿಯುವುದರ ಬಗ್ಗೆ ಸಹ ಅವರು ಅನುಮಾನ ವ್ಯಕ್ತಪಡಿಸುತ್ತಾರೆ. 
 
ಹರಾರಿಯವರ ಕೃತಿಯ ವೈಶಿಷ್ಟ್ಯವೇನು? ಇದರಲ್ಲೊಂದು ಸ್ಪಷ್ಟ, ಸರಳ ಮತ್ತು ಸೊಗಸಾದ ಕಥನವಿದೆ. ವಾಸ್ತವದಲ್ಲಿ, ಅವರ ಕೃತಿಯ ಮೊದಲ ಒಂದೂವರೆ ಪುಟ ಬಹುಶಃ ಯಾವುದೇ ಪುಸ್ತಕದ ಆರಂಭಿಕ ಪುಟಗಳಿಗಿಂತ ಹೆಚ್ಚು ಸ್ಪಷ್ಟವಾದ, ಚೊಕ್ಕಟವಾದ, ಪರಿಣಾಮಕಾರಿಯಾದ ಬರವಣಿಗೆಯನ್ನು ಹೊಂದಿದೆ.
 
ಈ ಪುಟಗಳಲ್ಲಿ ಹರಾರಿ 1350 ಕೋಟಿ   ವರ್ಷಗಳ ಜಗತ್ತಿನ ಇತಿಹಾಸವನ್ನು ಹಾಗೂ ನಾವು ಈ ಇತಿಹಾಸವನ್ನು ಅಧ್ಯಯನ ಮಾಡುವ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಇತಿಹಾಸ (ಹಿಸ್ಟರಿ) ಎನ್ನುವ ಜ್ಞಾನಶಿಸ್ತುಗಳಿಗಿರುವ ಸಂಬಂಧವನ್ನು ನಾಲ್ಕು ಪ್ಯಾರಾಗಳಲ್ಲಿ ಹಿಡಿದುಕೊಡುತ್ತಾರೆ. ಐದನೆಯ ಪ್ಯಾರಾದಲ್ಲಿ ಇತಿಹಾಸದ ಮೂರು ಪ್ರಮುಖ ಬೆಳವಣಿಗೆಗಳನ್ನು ಗುರುತಿಸುತ್ತಾರೆ.

ಅವುಗಳೆಂದರೆ 70,000  ವರ್ಷಗಳ ಹಿಂದೆ ಪ್ರಾರಂಭವಾದ ಅರಿವಿನ (ಕಾಗ್ನಿಷನ್) ಕ್ರಾಂತಿ, 12,000 ವರ್ಷಗಳ ಹಿಂದಿನ ಕೃಷಿ ಕ್ರಾಂತಿ ಮತ್ತು 500 ವರ್ಷಗಳ ಹಿಂದೆ ಆರಂಭವಾದ ವೈಜ್ಞಾನಿಕ ಕ್ರಾಂತಿ. ಹರಾರಿಯವರ ಉದ್ದೇಶ ಈ ಮೂರು ಕ್ರಾಂತಿಗಳು ಮನುಷ್ಯರನ್ನು ಮತ್ತು ಅವರ ಜೊತೆಗಾರ ಜೀವಿಗಳನ್ನು ಹೇಗೆ ಪ್ರಭಾವಿಸಿವೆ ಎಂದು ತೋರಿಸುವುದು.
 
ಈ ಇತಿಹಾಸವನ್ನು ಪುನಾರಚಿಸಲು ಹರಾರಿ ಜೀವಶಾಸ್ತ್ರ, ಭೂವಿಜ್ಞಾನ, ಪರಿಸರ ಅಧ್ಯಯನ, ಪ್ರಾಕ್ತನಶಾಸ್ತ್ರ ಮತ್ತಿತರ ಜ್ಞಾನಶಿಸ್ತುಗಳಲ್ಲಿ ನಡೆದಿರುವ ಸಂಶೋಧನೆಯನ್ನು ಸೊಗಸಾಗಿ ಬಳಸಿಕೊಂಡು, ಅಂತರಶಿಸ್ತೀಯ ಕಥನವೊಂದನ್ನು ರಚಿಸಿದ್ದಾರೆ.

ನಾನು ಮೇಲೆ ಗುರುತಿಸಿರುವ ಈ ಎಲ್ಲ ಅಂಶಗಳು ಒಬ್ಬ ಒಳ್ಳೆಯ ಇತಿಹಾಸಕಾರ ಮಾಡಬಹುದಾಗಿರುವ ಕೆಲಸವಿರಬಹುದು. ಆದರೆ ಹರಾರಿಯವರನ್ನು ವಿಶಿಷ್ಟವಾಗಿಸುವುದು ಅವರ ನೈತಿಕ ಪ್ರಜ್ಞೆ. ಪ್ರತಿಯೊಂದು ಪುಟದಲ್ಲಿಯೂ  ಅವರೊಳಗಿರುವ ನೈತಿಕ ಎಚ್ಚರ ಎದ್ದು ಕಾಣುತ್ತದೆ. ಇದಕ್ಕೆ ಉದಾಹರಣೆಗಳನ್ನು ಮುಂದೆ ನೀಡುತ್ತೇನೆ. 
 
ಹರಾರಿಯವರ ಮುಖ್ಯ ಪ್ರತಿಪಾದನೆಗಳಲ್ಲಿ ಮೊದಲಿನದು ಸೇಪಿಯನ್ನರು ಒಂದು ದೊಡ್ಡ ಮಾನವಕುಲಕ್ಕೆ ಸೇರಿದ ಒಂದು ವರ್ಗದವರು ಮಾತ್ರ. ಕಳೆದ ಹತ್ತು ಸಾವಿರ ವರ್ಷಗಳಲ್ಲಿ ಮಾತ್ರ ಈ ಭೂಮಿಯ ಮೇಲೆ ಸೇಪಿಯನ್ನರು ಮನುಕುಲದ ಏಕೈಕ ಪ್ರತಿನಿಧಿಯಾಗಿ ಇದ್ದಾರೆ.
 
ಆದರೆ ನಾವಿಂದು ನಡೆಸುತ್ತಿರುವ ಜೈವಿಕ ಪ್ರಯೋಗಗಳು ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಶಕ್ತಿ) ಇತ್ಯಾದಿ ಪ್ರಯೋಗಗಳ ಫಲವಾಗಿ ಭವಿಷ್ಯದಲ್ಲಿ ಸೇಪಿಯನ್ನರ ಹೊರತಾಗಿ ಹೊಸ ಮನುಕುಲದ ವರ್ಗಗಳು ಸೃಷ್ಟಿಯಾಗಬಹುದು. ಇದಕ್ಕೆ ಉದಾಹರಣೆಯಾಗಿ ನಿಯಾಂಡರ್ಥಾಲ್ ಮನುಷ್ಯನ ಡಿ.ಎನ್.ಎ. ಬಳಸಿಕೊಂಡು, ಅದನ್ನು ಮಾನವ ಗರ್ಭದೊಳಿರಿಸಿ ನಿಯಾಂಡರ್ಥಾಲ್ ಕುಲವನ್ನು ಮತ್ತೆ ಕಟ್ಟಲು ನಡೆಯುತ್ತಿರುವ ಪ್ರಯೋಗಗಳನ್ನು ಹರಾರಿ ನೀಡುತ್ತಾರೆ.
 
ಅಂದರೆ ಸುಮಾರು 25 ಲಕ್ಷ ವರ್ಷಗಳ ಹಿಂದಿನಿಂದ ಭೂಮಿಯ ಮೇಲೆ ಮನುಕುಲಕ್ಕೆ ಸೇರಿದ ವಿವಿಧ ವರ್ಗಗಳ ಪ್ರತಿನಿಧಿಗಳು ಕಂಡುಬರುತ್ತಾರೆ. 20 ಲಕ್ಷ ವರ್ಷಗಳ ಹಿಂದೆ ಆಫ್ರಿಕಾದಿಂದ ಯುರೋಪ್ ಮತ್ತು ಏಷ್ಯಾದ ವಿವಿಧ ಭಾಗಗಳಿಗೆ ಮಾನವರು ವಲಸೆ ಹೋದರು ಮತ್ತು ವಿಕಸನಗೊಳ್ಳುತ್ತ ಬಂದರು. ಈ ಗುಂಪುಗಳಲ್ಲಿಯೂ ದೈಹಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಗಣನೀಯವಾದ ಭಿನ್ನತೆಗಳು ಕಂಡುಬರುತ್ತವೆ.

ಕೆಲವು ಗುಂಪುಗಳು ಬೃಹತ್ ಶರೀರವನ್ನು ಹೊಂದಿದ್ದರೆ, ಮತ್ತೆ ಕೆಲವರು ಕುಬ್ಜರು. ಕೆಲವರು ಭಯಾನಕ ಬೇಟೆಗಾರರಾದರೆ ಇತರರು ಸೌಮ್ಯ ಸ್ವಭಾವದವರು ಮತ್ತು ಹಣ್ಣು-ಹಂಪಲು, ಗೆಡ್ಡೆ-ಗೆಣಸುಗಳನ್ನು ತಿಂದು ಬದುಕುವವರು. ಕೆಲವರು ಒಂದೇ ದ್ವೀಪದಲ್ಲಿ ಬದುಕುವವರಾದರೆ, ಇನ್ನಿತರರು ಹಲವಾರು ಖಂಡಗಳಲ್ಲಿ ಅಲೆಯುತ್ತ ಬದುಕುವವರು.
 
ಅಂದಿನಿಂದ ಇಂದಿನವರೆಗಿನ ವಿಕಸನ ಪ್ರಕ್ರಿಯೆ ಒಂದು ಸರಳರೇಖೆಯಲ್ಲಿ ಆಗಲಿಲ್ಲ. ಬದಲಿಗೆ ಒಂದೇ ಸಮಯದಲ್ಲಿ ಹತ್ತಾರು ಮನುಕುಲದ ವರ್ಗಗಳಿಗೆ ನೆಲೆಯಾಗಿತ್ತು ನಮ್ಮ ಈ ಭೂಮಿ. ಈ ಐತಿಹಾಸಿಕ ಹಿನ್ನೆಲೆಯಲ್ಲಿ ನೋಡಿದಾಗ ಇಂದಿನ ಸೇಪಿಯನ್ನರು ಮಾತ್ರ ಇರುವ ಏಕಾಂಗಿತನವೇ ಅಪರೂಪದ್ದು ಮತ್ತು ವಿಚಿತ್ರವಾದುದು. ಮಿಗಿಲಾಗಿ ಉಳಿದವರನ್ನು ಇಲ್ಲವಾಗಿಸಿದ ಸೇಪಿಯನ್ನರ ಆಕ್ರಮಕ ಜೀವನಶೈಲಿಗೂ ಸಾಕ್ಷಿಯಾದುದು. 
 
ಮನುಕುಲದ ವೈವಿಧ್ಯದ ಜೊತೆಗೆ ಕಳೆದ 20 ಲಕ್ಷ ವರ್ಷಗಳ ಇತಿಹಾಸದ ಮತ್ತೊಂದು ಪ್ರಮುಖ ಪಾಠವೆಂದರೆ ಭೂಮಿಯನ್ನು ಮನುಕುಲದ ಯಾವ ವರ್ಗದವರೂ ನಿಯಂತ್ರಿಸುತ್ತಿರಲಿಲ್ಲ ಎನ್ನುವುದು. ದೈಹಿಕವಾಗಿ ಮತ್ತು ಬೌದ್ಧಿಕವಾಗಿ, ಇಂದಿನ ಮನುಷ್ಯನಿಗಿರುವ ಎಲ್ಲ ಶಕ್ತಿ, ಸಾಮರ್ಥ್ಯಗಳನ್ನು ಪಡೆದಿದ್ದರೂ ಮನುಷ್ಯರು ದುರ್ಬಲ ಮತ್ತು ಅಂಚಿನಲ್ಲಿ ಬದುಕಿದ್ದ ಪ್ರಾಣಿಗಳಾಗಿಯೇ ಉಳಿದಿದ್ದರು.

ಈ ಸಮಯದಲ್ಲಿ ಅವರಿಗೆ ಇಂದಿರುವ ದೊಡ್ಡ ಮೆದುಳು, ಎರಡು ಕಾಲಿನಲ್ಲಿ ನಡೆಯುವ ಸಾಮರ್ಥ್ಯ ಹಾಗೂ ಸಲಕರಣೆಗಳನ್ನು ಮಾಡಿಕೊಳ್ಳುವ, ಬಳಸುವ ಶಕ್ತಿಗಳೆಲ್ಲವೂ ಇದ್ದವು. ಇಷ್ಟಾದರೂ ಮನುಷ್ಯ ದೊಡ್ಡ ಪ್ರಾಣಿಗಳನ್ನು (ಉದಾಹರಣೆಗೆ ಆನೆಗಳಂತಿದ್ದ ಮಾಮತ್ ಇತ್ಯಾದಿಗಳನ್ನು) ಬೇಟೆಯಾಡಲು ಪ್ರಾರಂಭಿಸಿದುದು ಕೇವಲ ನಾಲ್ಕು ಲಕ್ಷ ವರ್ಷಗಳ ಹಿಂದೆ.
 
ಆಹಾರ ಸರಪಳಿಯ (ಫುಡ್ ಚೇನ್) ಕೇಂದ್ರ ಮತ್ತು ನಿಯಂತ್ರಕ ಪ್ರಾಣಿಯಾಗಿದ್ದು ಕೇವಲ ಒಂದು ಲಕ್ಷ ವರ್ಷಗಳ ಹಿಂದೆ. ಆದರೆ ಇಲ್ಲಿ ಗಮನಾರ್ಹ ಅಂಶವೆಂದರೆ ತನ್ನ ಆಹಾರ ಪರಿಸರದ ಮೇಲೆ ಮನುಷ್ಯ ಕ್ಷಿಪ್ರವಾಗಿ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿದನು. ಇದಕ್ಕೆ ಪ್ರತಿಯಾಗಿ ಸಿಂಹ ಅಥವಾ ಶಾರ್ಕ್‌ಗಳಂತಹ ಪ್ರಾಣಿಗಳು ಹೀಗೆ ತಮ್ಮ ಆಹಾರ ಪರಿಸರದ ಮೇಲೆ ಪ್ರಾಬಲ್ಯ ಸ್ಥಾಪಿಸಲು ಹತ್ತಾರು ಲಕ್ಷ ವರ್ಷಗಳೇ ಹಿಡಿಯುತ್ತಿತ್ತು.

ಹಾಗಾಗಿ ಅವುಗಳ ಪ್ರತಿಸ್ಪರ್ಧಿಗಳಿಗೂ ತಮ್ಮ ಸಾಮರ್ಥ್ಯಗಳನ್ನು ವಿಕಸನಗೊಳಿಸಿಕೊಳ್ಳಲು ಸಮಯ ದೊರಕುತ್ತಿತ್ತು. ಉದಾಹರಣೆಗೆ ಸಿಂಹದಿಂದ ತಪ್ಪಿಸಿಕೊಳ್ಳಲು ಜಿಂಕೆಗಳು ವೇಗವಾಗಿ ಓಡುವ ಸಾಮರ್ಥ್ಯವನ್ನು ಪಡೆದುಕೊಂಡವು.
 
ವಿಕಸನ ಪ್ರಕ್ರಿಯೆಯಲ್ಲಿ ಇದಕ್ಕೆ ಅವಕಾಶ ದೊರಕುತ್ತಿತ್ತು. ಮನುಷ್ಯನ ಪ್ರಾಬಲ್ಯದ ಸಂದರ್ಭದಲ್ಲಿ ಈ ಪ್ರಕ್ರಿಯೆ ನಡೆಯಲು ಅವಕಾಶವಾಗಲಿಲ್ಲ. ಇತರ ಪ್ರಾಣಿಗಳಿಗೆ ಸಮಯ ದೊರಕಲಿಲ್ಲ, ಜೊತೆಗೆ ಮನುಷ್ಯನೂ ತಾನು ಮಾಡುತ್ತಿರುವ ಹಾನಿಯ ಬಗ್ಗೆ ಎಚ್ಚರಗೊಳ್ಳಲಿಲ್ಲ.
 
ಮನುಷ್ಯ ಪ್ರಬಲನಾಗಲು ಸಹಕಾರಿಯಾಗಿದ್ದ ಬೆಂಕಿಯನ್ನು ಪಳಗಿಸಿಕೊಂಡದ್ದು ಸುಮಾರು ಮೂರು ಲಕ್ಷ ವರ್ಷಗಳಿಗೂ ಹಿಂದೆ. ಇದರಿಂದ ಮನುಷ್ಯನಿಗೆ ತನ್ನ ದೇಹದಾಚೆಗಿನ ಶಕ್ತಿಯ ಮೂಲವೊಂದು ದೊರಕಿತು. ಬೆಂಕಿಯಿಂದ ಬೆಳಕು ಮತ್ತು ಉಷ್ಣತೆ ಮನುಷ್ಯನಿಗೆ ದೊರಕಿತಲ್ಲದೆ ಆಹಾರವನ್ನು ಬೇಯಿಸಿಕೊಳ್ಳಲಾರಂಭಿಸಿದ.
 
ಇದರಿಂದ ಪಚನಕ್ರಿಯೆಗೆ ಅನುಕೂಲವಾಯಿತು ಮತ್ತು ಸೂಕ್ಷ್ಮಜೀವಿಗಳು- ಪರಾವಲಂಬಿಗಳಿಂದ ಮನುಷ್ಯ ತಪ್ಪಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟಾದರೂ ಸುಮಾರು 70,000  ವರ್ಷಗಳ ಹಿಂದಿನ ತನಕ ಮನುಷ್ಯನಿಗೆ ಭೂಮಿಯ ಮೇಲೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ಆಗಿರಲಿಲ್ಲ.
 
ಆಗ ನಡೆದ ಅರಿವಿನ ಕ್ರಾಂತಿ ಮನುಷ್ಯರಿಗೆ ಭಾಷೆ, ಸಂವಹನ ಮತ್ತು ಸಹಕಾರ ತತ್ವವನ್ನು ನೀಡಿತು. ಇದರ ನಂತರ ಮನುಷ್ಯರನ್ನು ಹಿಡಿದು ನಿಲ್ಲಿಸುವವರಿಲ್ಲ. ಅರಿವಿನ ಕ್ರಾಂತಿ ಮತ್ತು ಕೃಷಿ ಕ್ರಾಂತಿಗಳು ನಮ್ಮ ಭೂಮಿಯ ಪರಿಸರವನ್ನು ಸಂಪೂರ್ಣವಾಗಿ ಬದಲಿಸಿದವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT