ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಳಯ ಆಗದಿದ್ದರೆ ಎದುರಾಗುವ ಸಮಸ್ಯೆಗಳು

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ವಿಜ್ಞಾನದಲ್ಲಿ ಹಠಾತ್ ಪ್ರಳಯಕ್ಕೆ ಸ್ಥಾನವೇ ಇಲ್ಲ. ಚಾನೆಲ್‌ಗಳು ಅದೇನೇ ಊದುತ್ತಿರಲಿ, ವಿಜ್ಞಾನಿಗಳು ಹಾಗೂ ಪ್ರಬುದ್ಧ ಚಿಂತಕರು ನಿಶ್ಚಿಂತೆಯಿಂದಿದ್ದಾರೆ. ತಮಾಷೆಯ ಸಂಗತಿ ಏನೆಂದರೆ ಪುರಾತನ ಮೂಢನಂಬಿಕೆಗಳನ್ನೇ ಬಿತ್ತುತ್ತ ಹೋಗುವ ಜ್ಯೋತಿಷಿಗಳೂ ಇದೊಂದು ವಿಚಾರದಲ್ಲಿ ವಿಜ್ಞಾನಿಗಳ ಜತೆಗೆ ಕೈಜೋಡಿಸಿದ್ದಾರೆ. ಕಳೆದ ವಾರ ಬೆಂಗಳೂರಿನಲ್ಲಿ ಮುಕ್ತಾಯವಾದ `ಅಂತರರಾಷ್ಟ್ರೀಯ ಜ್ಯೋತಿಷ ಸಮ್ಮೇಳನ'ದ ವಕ್ತಾರರು ಡಿಸೆಂಬರ್ 21ಕ್ಕೆ ಪ್ರಳಯ ಆಗುವುದಿಲ್ಲ ಎಂದಿದ್ದಾರೆ. ಅದೆಂಥದೊ ಕಲಿಯುಗ ಮುಗಿಯಲು ಇನ್ನೂ 43 ಲಕ್ಷ ಚಿಲ್ಲರೆ ವರ್ಷಗಳು ಬಾಕಿ ಇವೆಯಂತೆ; ಹಾಗಾಗಿ ಪ್ರಳಯ ಈಗಲೇ ಆಗುವುದಿಲ್ಲವಂತೆ. ಇದು ಸಂತಸದ ವಿಷಯವೇ ಹೌದಾದರೂ ಒಂದು ದೃಷ್ಟಿಯಿಂದ ಆತಂಕದ ಸಂಗತಿಯೂ ಹೌದು. ಪ್ರಳಯ ಆಗುವುದಿಲ್ಲ ಎಂದ ಮೇಲೆ ಇಂದು ನಾವು ಸೃಷ್ಟಿ ಮಾಡಿಟ್ಟ ಸಮಸ್ಯೆಗಳು ಮುಂದಿನ ಪೀಳಿಗೆಯ ಜನರನ್ನು ಮುದ್ದಾಂ ಕಾಡಲಿವೆ ಎಂದಂತಾಯಿತು. ಅರಣ್ಯನಾಶ, ಖನಿಜ ಖಜಾನೆ ಖಾಲಿ, ತೈಲನಿಕ್ಷೇಪ ಖಾಲಿ, ಕೆರೆಗಳು ಖಾಲಿ, ಅಂತರ್ಜಲ ಖಾಲಿ, ನದಿಗಳ ಮಾಲಿನ್ಯ ಭರ್ತಿ, ವಾಹನ ದಟ್ಟಣೆ ಭರ್ತಿ, ತ್ಯಾಜ್ಯ ಹೊಂಡಗಳು ಭರ್ತಿ, ಹವಾಗುಣ ಏರುಪೇರು - ಇವುಗಳ ಜತೆಗಂತೂ ಮುಂದಿನವರು ಏಗಲೇಬೇಕು. ಇನ್ನು ಪ್ರಳಯ ಆಗುತ್ತದೆಂದು ಕಂಡಕಂಡಲ್ಲಿ ಸಾಲ ಎತ್ತಿ ಮಜಾ ಉಡಾಯಿಸಿದವರ ಪಾಡು ಯಾರಿಗೂ ಬೇಡ, ಅದಿರಲಿ. ಕೇಂದ್ರ ಹಣಕಾಸು ಇಲಾಖೆಯ ಈಚಿನ ಹೇಳಿಕೆಯ ಪ್ರಕಾರ ಭಾರತದ ತಲಾ ಪ್ರಜೆಯ ಮೇಲೆ 33 ಸಾವಿರ ರೂಪಾಯಿ ಸಾಲ ಇದೆ. ಅದಂತೂ ಮುಂದಿನ ಜನಾಂಗದವರಿಂದ ಕೈಗಡ ಪಡೆದಿದ್ದು, ಭವಿಷ್ಯದ ಜನರೇ ಚಿಂತಿಸಬೇಕು. ಸಾಲದ್ದಕ್ಕೆ ಮುಂದಿನವರ ಕಿಸೆಗೆ ನಾವು ಏನೇನು ತುರುಕಿದ್ದೀವೊ ಅವೆಲ್ಲವನ್ನೂ ಅವರೇ ನಿಭಾಯಿಸಬೇಕು.

ಮುಂದಿನ ಪೀಳಿಗೆಯ ಮೇಲೆ ನಾವು ಹೇರುತ್ತಿರುವ ಹೊರೆಗಳಲ್ಲಿ ತೀರ ಮುಖ್ಯವಾಗಿದ್ದೆಂದರೆ ಪರಮಾಣು ತ್ಯಾಜ್ಯಗಳು ಮತ್ತು ಬಾಂಬ್‌ಗಳು. ಇವು ಪ್ಲಾಸ್ಟಿಕ್‌ನ ಹಾಗೆ ನೂರಿನ್ನೂರು ವರ್ಷಗಳಲ್ಲಿ ಕರಗುವಂಥ ವಸ್ತುವಲ್ಲ. ಕನಿಷ್ಠ ಪಕ್ಷ 10 ಸಾವಿರ ವರ್ಷಗಳು ಬೇಕು. ಯುರೋಪ್ ಮತ್ತು ಅಮೆರಿಕದ ಸರ್ಕಾರಿ ವಿಕಿರಣ ನಿಯಂತ್ರಣ ತಜ್ಞರ ಪ್ರಕಾರ ಕೆಲವು ಪರಮಾಣು ದ್ರವ್ಯಗಳು 10 ಲಕ್ಷ ವರ್ಷಗಳವರೆಗೂ ಶಕ್ತಿಶಾಲಿ ವಿಕಿರಣಗಳನ್ನು ಸೂಸುತ್ತಿರಬಹುದು. ಅವು ಹೇಗೆ ನಶಿಸುತ್ತವೆ ಎಂಬುದರ ಲೆಕ್ಕಾಚಾರವೇ ಸ್ವಾರಸ್ಯಕರವಾಗಿದೆ. ಅವುಗಳ ಉರಿಯ ತೀವ್ರತೆಯನ್ನು `ಅರ್ಧಾಯು'  (ಹಾಫ್ ಲೈಫ್) ಎಂಬ ವಿಚಿತ್ರ ಅಳತೆಗೋಲಿನಲ್ಲಿ ಅಳೆಯುತ್ತಾರೆ. ಉದಾಹರಣೆಗೆ, 40 ಕಿಲೊ ಪ್ಲುಟೊನಿಯಂ ಗಟ್ಟಿ ಒಂದು ಕಡೆ ಇದ್ದರೆ 24,100 ವರ್ಷಗಳ ನಂತರ ಅದರ ಅರ್ಧದಷ್ಟು ತಂಪಾಗುತ್ತದೆ. ಇನ್ನುಳಿದದ್ದು ಮತ್ತೆ 24,100 ವರ್ಷಗಳ ನಂತರ ಅರ್ಧದಷ್ಟು ತಂಪಾಗಿ 10 ಕಿಲೊ ಪ್ಲುಟೋನಿಯಂ ಉಳಿಯುತ್ತದೆ. ಅದು ಐದು ಕಿಲೊ ಆಗಲು ಮತ್ತೆ ಅದೇ 24 ಸಾವಿರ ಚಿಲ್ಲರೆ ವರ್ಷಗಳೇ ಬೇಕು. ಈ 24,100 ವರ್ಷಗಳಿಗೆ ಪ್ಲುಟೋನಿಯಂನ  `ಅರ್ಧಾಯು' ಎನ್ನುತ್ತಾರೆ. ಅಂತೂ ಸುಮಾರು ಒಂದು ಲಕ್ಷ ವರ್ಷಗಳ ನಂತರ ಎರಡೂವರೆ ಕಿಲೊ ಮಾತ್ರ ವಿಕಿರಣ ಸೂಸುತ್ತಿರುತ್ತದೆ. ಆಗಲೂ ಅದು ಸುರಕ್ಷಿತ ಅಲ್ಲವೇ ಅಲ್ಲ. ಒಂದಿಡೀ ನಗರವನ್ನು ಬರ್ಬಾದ್ ಮಾಡಲು ಅರ್ಧ ಕಿಲೊ ಗ್ರಾಮ್ ಸಾಕು. ಭಯೋತ್ಪಾತಕ್ಕೆ ಕೇವಲ ನೂರು ಗ್ರಾಮ್ ಸಾಕು. ಈಗ, ನಾಲ್ವತ್ತು ಕಿಲೊ ಬದಲು ನಮ್ಮ ಪ್ಲುಟೊನಿಯಂ ದಾಸ್ತಾನು 40 ಟನ್ ಇದ್ದರೆ ಅದು ನೂರು ಗ್ರಾಮ್‌ಗೆ ಇಳಿಯಲು ಎಷ್ಟು ಲಕ್ಷ ವರ್ಷ ಬೇಕಾದೀತೆಂದು ಬಾಯಿಲೆಕ್ಕದ ಜಾಣರು ಹೇಳಬೇಕು.

ಪರಮಾಣು ಸ್ಥಾವರಗಳ ಗರ್ಭಗುಡಿಯಲ್ಲಿ ಯುರೇನಿಯಂ ಸೌದೆಗಳು ನಿಗಿನಿಗಿ ಉರಿಯುತ್ತ ತಾವಾಗಿ ಪ್ಲುಟೋನಿಯಂ ಸರಳುಗಳಾಗುತ್ತವೆ. ಅದನ್ನು ಯಾರೂ ಪರಮಾಣು `ತ್ಯಾಜ್ಯ'  ಎಂದು ಪರಿಗಣಿಸುವುದಿಲ್ಲ. ಅದು ಬಂಗಾರಕ್ಕಿಂತ ಹೆಚ್ಚು ಬೆಲೆಬಾಳುವ ಲೋಹದ ಸರಳು. ಆದ್ದರಿಂದಲೇ ಕೂಡಂಕುಳಂ ಸ್ಥಾವರದಲ್ಲಿ ಉತ್ಪತ್ತಿಯಾಗುವ ಈ ಲೋಹವನ್ನು ತಾನೇ ಮರಳಿ ಒಯ್ಯುತ್ತೇನೆಂದು ರಷ್ಯ ಹೇಳಿದೆ. ಆದರೆ ಪರಮಾಣು ಸ್ಥಾವರಗಳಲ್ಲಿ ಸರಳುಗಳು ಉರಿಯುವಾಗ ಗರ್ಭಗುಡಿಯೊಳಗಿನ ಇತರ ಎಲ್ಲ ಯಂತ್ರೋಪಕರಣಗಳು ವಿಕಿರಣಕ್ಕೆ ಸಿಕ್ಕು ವಿಷಮಯ ಆಗುತ್ತವೆ. ಅಲ್ಲಿನ ಕೊಳವೆ, ಕವಾಟ, ಕಂಬ, ತೊಲೆ, ಕೊನೆಗೆ ಗೋಡೆಯ ಪಿಂಗಾಣಿ ಇಟ್ಟಿಗೆ, ಕಾಂಕ್ರೀಟ್ ಲೇಪನವೂ ಉಗ್ರಮಟ್ಟದ ವಿಕಿರಣ ಸೂಸುತ್ತದೆ. ಅವಕ್ಕೆ `ಹೈಲೆವೆಲ್ ವೇಸ್ಟ್' ಎನ್ನುತ್ತಾರೆ. ಒಂದೊಂದು ಸ್ಥಾವರದಲ್ಲೂ ಅನೇಕ ಟನ್‌ಗಳಷ್ಟು ತ್ಯಾಜ್ಯ ಪ್ರತಿವರ್ಷ ತಯಾರಾಗುತ್ತವೆ. ಅವು ರಷ್ಯಕ್ಕೆ ಹೋಗುವ ಬದಲು ನಮ್ಮಲ್ಲೇ ಉಳಿಯುತ್ತವೆ. ಅದು ನಿಷ್ಪ್ರಯೋಜಕ ಅಷ್ಟೇ ಅಲ್ಲ, `ಋಣಬಂಗಾರ' ಎನಿಸುತ್ತದೆ. ಅಂದರೆ, ಬಂಗಾರಕ್ಕೆ ಹೇಗೆ ದಿನದಿನಕ್ಕೆ ಬೆಲೆ ಹೆಚ್ಚುತ್ತ ಹೋಗುತ್ತದೆಯೊ ಅದಕ್ಕೆ ತದ್ವಿರುದ್ಧವಾಗಿ ಈ ತ್ಯಾಜ್ಯಕ್ಕೆ ಸಮಾಜ ತೆರಬೇಕಾದ ದಂಡ ದಿನದಿನಕ್ಕೆ ಹೆಚ್ಚುತ್ತ ಹೋಗುತ್ತದೆ.

ಇನ್ನು ಪರಮಾಣು ಗರ್ಭಗುಡಿಯ ಆಚೀಚಿನ ಸರಕುಗಳು ಲೋಹದ ಕಂಬಿಗಳು, ಪಿಪಾಯಿ, ಪಂಪ್, ಟ್ರಾಲಿ ಇವೆಲ್ಲ ಮಧ್ಯಮ ಮಟ್ಟದ ತ್ಯಾಜ್ಯಗಳು. ಅದರಾಚೆ, ಕೆಲಸಗಾರರು ಬಳಸುವ ಕೈಗೌಸು, ಮುಖವಾಡ, ಪಾದರಕ್ಷೆ, ಸನಿಕೆ, ಕೊನೆಗೆ ಅವರ ಸಿಂಬಳ, ಶೌಚದ್ರವ್ಯಗಳೂ ಸೇರಿ ಕನಿಷ್ಠಮಟ್ಟದ ತ್ಯಾಜ್ಯಗಳೆನಿಸುತ್ತವೆ. ಯುರೇನಿಯಂ ಅಗೆಯುವಾಗ ಹೊರಬೀಳುವ ತ್ಯಾಜ್ಯಪುಡಿಯಿಂದ ಹಿಡಿದು, ಎಕ್ಸ್- ರೇ ಯಂತ್ರಗಳಲ್ಲಿರುವ ಹೆಬ್ಬೆಟ್ಟುಗಾತ್ರದ ಸೀಸಿಯಂ ಡಬ್ಬದವರೆಗಿನ ಎಲ್ಲವನ್ನೂ ಸೇರಿಸಿದರೆ ಎಷ್ಟಾದೀತು? `ನ್ಯಾಶನಲ್ ಜಿಯಾಗ್ರಫಿಕ್' ಪ್ರಕಟಿಸಿದ ಒಂದು ಲೇಖನದ ಪ್ರಕಾರ, ಅಮೆರಿಕ ದೇಶದಲ್ಲಿ 240 ದಶಲಕ್ಷ ಟನ್ ತ್ಯಾಜ್ಯ ಸಂಗ್ರಹವಾಗಿದೆ. ಅವನ್ನೆಲ್ಲ ಒಂದು ಗೂಡ್ಸ್ ರೈಲಿನ ಡಬ್ಬಿಗಳಲ್ಲಿ ಸುರಿದು ಜೋಡಿಸುತ್ತ ಹೋದರೆ ಆ ರೈಲುಡಬ್ಬಿಗಳು ಭೂಮಧ್ಯ ರೇಖೆಗುಂಟ ಭೂಮಿಯನ್ನು ಪೂರ್ತಿ ಸುತ್ತುಹಾಕಿ ತಲೆ - ಬಾಲ ಒಂದಾಗುತ್ತದೆ!

ಅಮೆರಿಕದ ಮಟ್ಟಿಗೆ 24 ಕೋಟಿ ಟನ್ ಎಂದರೆ ಭಾರೀ ಏನೂ ಅಲ್ಲ. ಲೋ ಲೆವೆಲ್ ತ್ಯಾಜ್ಯವನ್ನು ಮರಳಿನ ರಾಶಿಯಲ್ಲಿ ಡಬ್ಬಗಳಲ್ಲಿ ಹೂತಿಡಲು ಅವರಿಗೆ ವಿಶಾಲ ನೆವಾಡಾ ಮರುಭೂಮಿ ಇದೆ. ಸದ್ಯದ ಭವಿಷ್ಯದಲ್ಲಿ ಅಲ್ಲೇನೂ ಯಾರೂ ಹೋಗುವುದಿಲ್ಲ. ಆದರೆ ಮಧ್ಯಮ ಮತ್ತು ಉಗ್ರ ತ್ಯಾಜ್ಯಗಳದ್ದು ಅಲ್ಲಿ ಗಂಭೀರ ಪರಿಸ್ಥಿತಿ ಇದೆ. ಇವು ಜನಬಳಕೆಯ ಪರಿಸರಕ್ಕೆ ಸೇರಿದರೆ ಕ್ಯಾನ್ಸರ್, ಷಂಡತ್ವ, ವಿಕಲಾಂಗ ಶಿಶುಗಳ ಜನನವೇ ಮುಂತಾದ ನಾನಾ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬುದು ಗೊತ್ತಿರುವುದರಿಂದ ತ್ಯಾಜ್ಯದ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಕೂತಿದೆ. ಮಧ್ಯಮ ತ್ಯಾಜ್ಯಗಳನ್ನು ಡಬ್ಬಗಳಲ್ಲಿ ಸಂಗ್ರಹಿಸಿ ಅಣುಸ್ಥಾವರಗಳ ಬಳಿಯೇ ಶೇಖರಿಸಿ ಇಡಲಾಗಿದೆ. ಬೇರೆ ಎಲ್ಲೇ ಒಯ್ದು ಎಷ್ಟೇ ಭದ್ರವಾಗಿ ಹೂಳುತ್ತೇವೆ ಎಂದರೂ ಜನರು `ನಮ್ಮ ಹಿತ್ತಿಲಲ್ಲಿ ಬೇಡ' ಎಂದು ಪ್ರತಿಭಟನೆ ಮಾಡುತ್ತಾರೆ; ಖಟ್ಲೆ ಹಾಕುತ್ತಾರೆ.

ತೀರಾ ಉಗ್ರ ತ್ಯಾಜ್ಯಗಳನ್ನು ರಾಕೆಟ್ ಮೇಲಿಟ್ಟು, ವಿಶೇಷ ಉಪಗ್ರಹಗಳ ಮೇಲೆ ಕೂರಿಸಿ ಸೂರ್ಯನತ್ತ ಉಡಾಯಿಸಬಹುದೆ ಎಂದು ಅಲ್ಲಿನ ಕೆಲವರು ಚಿಂತಿಸಿದ್ದುಂಟು. ಅವನ್ನು ಭೂಕಕ್ಷೆಯ ಆಚೆಗೆ ಹಾರಿಸಲು ಸಾವಿರಾರು ರಾಕೆಟ್ ಬೇಕು. ಅವುಗಳ ವೆಚ್ಚವನ್ನು ಯಾರು ಭರಿಸಬೇಕೆಂಬ ಪ್ರಶ್ನೆ ಹೇಗೂ ಇರಲಿ, ಮೇಲಕ್ಕೇರುವ ಮೊದಲೇ ಚಾಲೆಂಜರ್ ಮಾದರಿಯಲ್ಲಿ ಉರಿದು ಭೂಮಿಗೇ ಬಿದ್ದರೆ ಏನು ಗತಿ?

`ಭೂಮಿಯನ್ನು ಅಪಾಯಕ್ಕೆ ಸಿಲುಕಿಸಿದ್ದು ಸಾಕು, ಅಂತರಿಕ್ಷವನ್ನಾದರೂ ಸುರಕ್ಷಿತ ಇಡೋಣ' ಎಂಬ ಕೂಗು ಬೇರೆ ಎದ್ದಿದೆ.
ರಾಕೆಟ್ ಮೂಲಕ ತ್ಯಾಜ್ಯ ರವಾನೆ ಆಗಹೋಗದ ಮಾತೆಂದು ಕೊನೆಗೆ ಅಮೆರಿಕದ ಯಕ್ಕಾ ಪರ್ವತದ ನಿರ್ಜನ ಕಣಿವೆಯಲ್ಲಿ ಆಳವಾದ ಸುರಂಗ ತೋಡಿ 77 ಸಾವಿರ ಟನ್ ಉಗ್ರತ್ಯಾಜ್ಯಗಳನ್ನು ಹೂಳಬೇಕೆಂಬ ಪ್ರಸ್ತಾವನೆ ಬಂತು. ಈ ಕುರಿತು ಎಂಟು ವರ್ಷಗಳ ಕಾಲ ಸಂಶೋಧನೆ, ಪ್ರತಿರೋಧ ಎಲ್ಲ ನಡೆದು ಕೊನೆಗೂ ಇಡೀ ಯೋಜನೆಯನ್ನು ಕೈಬಿಡಲಾಗಿದೆ. ಮುಂದೇನು ಎಂಬುದು ತೋಚದೆ ಸದ್ಯಕ್ಕೆ ಆಯಾ ಸ್ಥಾವರಗಳ ಪಕ್ಕದಲ್ಲೇ ಭದ್ರ ಕಾವಲಿನಲ್ಲಿ ಇಡಲಾಗಿದೆ.

ಹ್ಯಾನ್‌ಫೋರ್ಡ್ ಎಂಬಲ್ಲಿ 60 ವರ್ಷಗಳ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಾವರದ ಮೇಲೆ ತಾತ್ಕಾಲಿಕವಾಗಿ ಕಾಂಕ್ರೀಟ್ ಸಮಾಧಿ ಕಟ್ಟಿದ್ದಾರೆ. ಆದರೆ ಒಳಗೊಳಗೇ ವಿಕಿರಣ ವಸ್ತುಗಳು ಅಂತರ್ಜಲಕ್ಕೆ ಸೋರಿ ಹೋಗುತ್ತಿರುವುದು ಗೊತ್ತಾದ ಮೇಲೆ, ಅಮೆರಿಕ ಪ್ರತಿ ವರ್ಷ 200 ಕೋಟಿ ಡಾಲರ್ ಖರ್ಚು ಮಾಡುತ್ತ ತಾತ್ಕಾಲಿಕ ಸೋರುತಡೆ ಮಾಡುತ್ತಿದೆ. ಇಡೀ ಕ್ಷೇತ್ರದ ಎರಡು ಲಕ್ಷ ಘನ ಮೀಟರಿನಷ್ಟು ತ್ಯಾಜ್ಯವನ್ನು  ಮಣ್ಣುಕಲ್ಲು ಸಮೇತ ಕರಗಿಸಿ ಗಾಜಿನ ಗಟ್ಟಿಯನ್ನಾಗಿ ಪರಿವರ್ತಿಸಲು ಬೆಕ್ಟೆಲ್ ಕಂಪೆನಿಗೆ ಗುತ್ತಿಗೆ ಕೊಡಲಾಗಿದೆ. 1200 ಕೋಟಿ ಡಾಲರ್ ವೆಚ್ಚದ ಈ ಯೋಜನೆ 2020ರಲ್ಲಿ ಕಾರ್ಯಾರಂಭ ಮಾಡಿ 2045ರ ವೇಳೆಗೆ ಪೂರ್ತಿ ಆಗಲಿದೆ. ಅದೂ ಹೆಚ್ಚೆಂದರೆ ನೂರಿನ್ನೂರು ವರ್ಷ ತಡೆದೀತು. ಆದರೆ ನಾವು  ಮುಂದಿನ 40 ಸಾವಿರ ಪೀಳಿಗೆಗಳವರೆಗಿನ ಸುರಕ್ಷೆಯ ಬಗ್ಗೆ ಯೋಚಿಸಬೇಕಿದೆ  ಎನ್ನುತ್ತಾರೆ, ಕೇಂಬ್ರಿಜ್ ವಿಶ್ವವಿದ್ಯಾಲಯದ ವಿಕಿರಣ ವಿಜ್ಞಾನಿ ಅಯಾನ್ ಫರ್ನಾನ್. ಮುಂದಿನ ಒಂದು ಲಕ್ಷ ವರ್ಷಗಳವರೆಗೆ ಛಿದ್ರವಾಗದಂಥ ಡಬ್ಬಿಗಳನ್ನು ಹೇಗೆ ನಿರ್ಮಿಸಬಹುದು ಎಂಬುದರ ಬಗ್ಗೆ ಅವರ ತಂಡ ಇದೀಗ ಸಂಶೋಧನೆ ಆರಂಭಿಸಿದೆ. ಅಂಥ ದುಬಾರಿ ಡಬ್ಬಿ ಸಿದ್ಧವಾದರೂ ನಾಳಿನವರು ಅದನ್ನೇ ಕಿತ್ತು ಗುಜರಿಗೆ ಮಾರಲು ಹೋದರೆ ಏನು ಗತಿ? ದಿಲ್ಲಿಯ ಮಾಯಾಪುರಿಯ ಗುಜರಿಯಲ್ಲಿ ಹೆಬ್ಬೆಟ್ಟು ಗಾತ್ರದ ವಿಕಿರಣ ಡಬ್ಬಿಯೊಂದನ್ನು ಜಜ್ಜಿ ಒಡೆದಿದ್ದರಿಂದ ಇಡೀ ಕಾಲೊನಿಯನ್ನು ಖಾಲಿ ಮಾಡಿಸಿದ್ದರಲ್ಲ?

ಅಂಥ ತಪ್ಪು ಮಾಡಬೇಡಿರೆಂದು ದೂರ ಭವಿಷ್ಯದ ಜನರಿಗೆ ನಾವೊಂದು ಪತ್ರವನ್ನು ಬರೆಯೋಣವೆ? ಮಾನ್ಯರೆ, ನಾವಿಲ್ಲಿ ಸಾವಿರ ಮೀಟರ್ ಆಳದಲ್ಲಿ ಪರಮಾಣು ತ್ಯಾಜ್ಯವನ್ನು ಹೂತಿದ್ದೇವೆ. ಅಗೆಯಬೇಡಿ. ಇಲ್ಲಿ ಯಾವುದೇ ಉದ್ದೇಶಕ್ಕೂ ಕೊಳವೆ ಬಾವಿ ಕೊರೆಯಬೇಡಿ. ನಗರ ನಿರ್ಮಾಣ, ಕೈಗಾರಿಕೆ ಅಥವಾ ಕೃಷಿಯಂಥ ಯಾವುದೇ ಚಟುವಟಿಕೆ ಇಲ್ಲಿ ಬಾರದಂತೆ ನೋಡಿಕೊಳ್ಳಿ. ಮತ್ತೆ ಇಲ್ಲಿ ಭೂಕುಸಿತ, ಭೂಕಂಪ ಆಗದಂತೆ, ಉಲ್ಕೆ ಬೀಳದಂತೆ, ಯಾರೂ ಬಾಂಬ್ ಹಾಕದಂತೆ ಕಾವಲು ಹಾಕಿಟ್ಟಿರಿ. ನಿಮಗೆ ಒಳ್ಳೆಯದಾಗಲಿ.

ಹೀಗೊಂದು ನೋಟೀಸು ಮುಂದಿನ ಎರಡು ಲಕ್ಷ ವರ್ಷಗಳವರೆಗಾದರೂ ಅದು ಅಲ್ಲೇ ಇರುವಂತೆ ಯಾವ ಲಿಪಿಯಲ್ಲಿ, ಯಾವ ಭಾಷೆಯಲ್ಲಿ, ಯಾವ ಲೋಹಫಲಕದಲ್ಲಿ ಬರೆಯೋಣ? ಮುಂದಿನವರ ಭಾಷೆ ಏನಿರುತ್ತದೊ, ಲಿಪಿ ಏನಿರುತ್ತದೊ ಊಹಿಸುವಂತಿಲ್ಲ. ಕೇವಲ ಹತ್ತು ಸಾವಿರ ವರ್ಷಗಳ ಹಿಂದೆ ಯಾವ ಭಾಷೆ ಇತ್ತೆಂಬುದು ನಮಗೆ ಗೊತ್ತಿಲ್ಲ. ಐಫೆಲ್ ಟವರ್‌ನಂಥ ಗೋಪುರ ಕಟ್ಟಿ ಸಂಜ್ಞೆಗಳಲ್ಲೇ ಎಚ್ಚರಿಕೆ ನೀಡೋಣವೆಂದರೆ ಎಂದೂ ನಶ್ವರವಾಗದ, ಯಾರೂ ಕಿತ್ತು ಲಪಟಾಯಿಸಲಾಗದ ಲೋಹ ಎಲ್ಲಿದೆ? ಈ ಪ್ರಶ್ನೆಗಳನ್ನೆತ್ತಿಕೊಂಡು ಎರಡು ಬಾರಿ ವಿಜ್ಞಾನಿಗಳ, ಭಾಷಾತಜ್ಞರ, ಮಾನವ ಶಾಸ್ತ್ರಜ್ಞರ, ಖಗೋಳತಜ್ಞರ ಸಮ್ಮೇಳನ ನಡೆದರೂ ಒಮ್ಮತಕ್ಕೆ ಬರಲಾಗಲಿಲ್ಲ. ಇದೀಗ ಜ್ಯೋತಿಷಿಗಳು ಒಮ್ಮತಕ್ಕೆ ಬಂದು ಪ್ರಳಯ ಆಗದೆಂದು ಘೋಷಿಸಿದ್ದಾರೆ.

ಮನುಕುಲದ ಭವಿಷ್ಯದ ಪ್ರಶ್ನೆ ಎದ್ದಾಗಲೆಲ್ಲ ಯಾಕಾದರೂ ಡಿಸೆಂಬರ್ 21ರ ಪ್ರಳಯ ಕ್ಯಾನ್ಸಲ್ ಆಯಿತೊ ಅನಿಸುವುದಿಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT