ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸಿದ್ಧಿಯ ಜತೆಗೇ ಇದೆ ವಿಶ್ವಾಸಾರ್ಹತೆಯ ಹೊಣೆ

Last Updated 1 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಇತಿಹಾಸ ಮತ್ತು ರಾಜಕಾರಣದ ಬಗ್ಗೆ ಬರೆಯವುದು ನನ್ನ ಜೀವನೋಪಾಯ. ಅದರ ಜತೆಗೆ ನಾನು ಕ್ರಿಕೆಟ್‍ ಬಗ್ಗೆಯೂ ಬರೆಯುತ್ತೇನೆ. ಬಹುಪಾಲು ಸಂದರ್ಭಗಳಲ್ಲಿ ನನ್ನ ವೃತ್ತಿ ಮತ್ತು ಪ್ರವೃತ್ತಿ ದೂರ ದೂರವೇ ಉಳಿಯುತ್ತವೆ. ಇವೆರಡೂ ಒಂದಾಗುವುದು ಬಹಳ ವಿರಳ. ಕಳೆದ ಶನಿವಾರ ಅಂತಹ ಒಂದು ಸಂದರ್ಭ ಒದಗಿಬಂತು. ಟ್ವಿಟರ್ ಮೇಲೆ ಕಣ್ಣಾಡಿಸುತ್ತಿದ್ದಾಗ ಕೇರಳದಲ್ಲಿ ನಡೆದ ದ್ವೇಷಾಪರಾಧವೊಂದರ ಬಗ್ಗೆ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‍ ಅವರು ಪೋಸ್ಟ್ ಮಾಡಿದ ಅರ್ಧಸತ್ಯವೊಂದು ಕಂಡಿತು.

ಹಿಂದೂ ಮತ್ತು ಮುಸ್ಲಿಮರು ಇದ್ದ ಮಿಶ್ರ ಗುಂಪು ಮಧು ಎಂಬ ಆದಿವಾಸಿ ಯುವಕನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿ ಕೊಂದಿತ್ತು. ಈ ಅಪರಾಧ ಕೃತ್ಯ ಎಸಗಿದವರ ಹೆಸರುಗಳು ಹಲವು ಪತ್ರಿಕೆಗಳಲ್ಲಿ ಮತ್ತು ಟ್ವಿಟರ್‌ನಲ್ಲಿ ಪ್ರಕಟವಾಗಿವೆ. ಹಾಗಿದ್ದರೂ ಆರೋಪಿಗಳ ಪೈಕಿ ಇಬ್ಬರು ಮುಸ್ಲಿಮರ ಹೆಸರನ್ನು ಮಾತ್ರ ಆಯ್ದು, ಸಂತ್ರಸ್ತನ ಹಿಂದೂ ಹೆಸರಿನ ಜತೆಗೆ ಪ್ರಸ್ತಾಪಿಸಿ ‘ನಾಗರಿಕ ಸಮಾಜಕ್ಕೆ ಅವಮಾನ’ ಎಂದು ಸೆಹ್ವಾಗ್‍ ಬರೆದಿದ್ದರು.

ಸೆಹ್ವಾಗ್‍ ಬ್ಯಾಟಿಂಗ್‍ ಬಗ್ಗೆ ನನಗೆ ಬಹಳ ಅಭಿಮಾನ ಇದೆ. ಭಾರತ ತಂಡದಿಂದ ಅವರನ್ನು ಕೈಬಿಟ್ಟಿದ್ದಾಗ ನಾನು ಅದರ ಬಗ್ಗೆ ಅಂಕಣದಲ್ಲಿ ಬರೆದಿದ್ದೆ. ನನ್ನ ಬರಹಗಳ ಮಾನದಂಡದಲ್ಲಿ ನೋಡಿದರೂ ಅತಿಯಾಗಿ ಕಾವ್ಯಾತ್ಮಕವಾಗಿತ್ತು ಆ ಅಂಕಣ. ಗೂಗ್ಲಿ ಬೌಲರ್ ಬಿ.ಎಸ್.‍ ಚಂದ್ರಶೇಖರ್ ಜತೆಗೆ ಸೆಹ್ವಾಗ್‍ ಅವರನ್ನು ಹೋಲಿಸಿ ಈ ಇಬ್ಬರು ಭಾರತದ ಕ್ರಿಕೆಟ್ ‍ಇತಿಹಾಸದ ಸೃಜನಶೀಲ ಮತ್ತು ಅನುಕರಿಸಲಾಗದ ಪ್ರತಿಭೆಗಳು ಎಂದು ಬರೆದಿದ್ದೆ. ಆದರೆ ಸೆಹ್ವಾಗ್‍ ಅವರ ಟ್ವೀಟ್‍ ನನ್ನಲ್ಲಿ ನಿರಾಶೆ ಉಂಟುಮಾಡಿದೆ.

ಇಬ್ಬರು ಮುಸ್ಲಿಮರ ಹೆಸರನ್ನು ಆಯ್ಕೆ ಮಾಡಿ ಬರೆದರು ಎಂಬುದು ಈ ನಿರಾಶೆಗೆ ಕಾರಣವಲ್ಲ; ಬದಲಿಗೆ, ಅವರು ಶಾಲೆಯೊಂದನ್ನು ನಡೆಸುವ ಹರಿಯಾಣದಲ್ಲಿ ನಡೆಯುತ್ತಿರುವ ಸರಣಿ ದ್ವೇಷಾಪರಾಧಗಳ ಬಗ್ಗೆ ಮೌನವಾಗಿದ್ದಾರೆ ಎಂಬುದು ನನ್ನ ಬೇಸರಕ್ಕೆ ಕಾರಣ. ಅವರ ಬೂಟಾಟಿಕೆ ಮತ್ತು ಅಜ್ಞಾನವನ್ನು ಪ್ರಸ್ತಾಪಿಸಿ, ‘ಸೆಹ್ವಾಗ್‍ ಅವರಲ್ಲಿ ಸ್ವಲ್ಪವಾದರೂ ಮಾನವೀಯತೆ ಇದ್ದರೆ ತಕ್ಷಣವೇ ತಮ್ಮ ಟ್ವೀಟನ್ನು ಅಳಿಸಿಹಾಕಬೇಕು’ ಎಂದು ನಾನು ಟ್ವೀಟ್ ‍ಮಾಡಿದೆ.

ಸೆಹ್ವಾಗ್‍ ಅವರಿಗೆ ಟ್ವಿಟರ್‌ನಲ್ಲಿ 1.6 ಕೋಟಿ ಫಾಲೋವರ್‌ಗಳಿದ್ದಾರೆ. ಅವರಲ್ಲಿ ಹಲವರು ಸೆಹ್ವಾಗ್‍ ಅವರ ಮಾತನ್ನು ಪರಮ ಸತ್ಯ ಎಂದು ಭಾವಿಸುತ್ತಾರೆ. ಕ್ರಿಕೆಟ್‍ನಲ್ಲಿ ಗಳಿಸಿದ ಪ್ರಸಿದ್ಧಿಯನ್ನು ಕೋಮು ಸಂಘರ್ಷ ಸೃಷ್ಟಿಸಲು ಅವರು ಬಳಸುತ್ತಿದ್ದಾರೆ ಎಂಬುದು ನನ್ನಲ್ಲಿ ನೋವು ಉಂಟು ಮಾಡಿತು. ಹಾಗಾಗಿ, ನಾನು ಟ್ವೀಟ್‍ ಮಾಡುವುದರ ಜತೆಗೆ, ಸೆಹ್ವಾಗ್‍ ಅವರ ಘೋರ ತಪ್ಪಿನ ಬಗ್ಗೆ ಹಿರಿಯ ಪತ್ರಕರ್ತ ರಾಜ್‍ದೀಪ್‍ ಸರ್ದೇಸಾಯಿ ಅವರಿಗೂ ತಿಳಿಸಿದೆ.

ರಾಜ್‍ದೀಪ್‍ ಅವರೂ ಈ ಬಗ್ಗೆ ಟ್ವೀಟ್‍ ಮಾಡಿದ ಬಳಿಕ ಸೆಹ್ವಾಗ್‍ ಕ್ಷಮೆ ಯಾಚಿಸಿದರು ಮತ್ತು ತಮಗೆ ದೊರೆತ ಮಾಹಿತಿ ತಪ್ಪಾಗಿತ್ತು ಎಂದು ಹೇಳಿದರು. ಆದರೆ, ಗಾಢವಾಗಿ ನೋಯಿಸುವ ತಮ್ಮ ಮೂಲ ಟ್ವೀಟನ್ನು ಅವರು ಹಾಗೆಯೇ ಉಳಿಸಿಕೊಂಡರು. ಮೂಲ ಟ್ವೀಟನ್ನು ಅಳಿಸಿ ಹಾಕುವಂತೆ ರಾಜ್‍ದೀಪ್‍ ಮತ್ತೊಮ್ಮೆ ಹೇಳಿದ ಬಳಿಕವಷ್ಟೇ ಅದನ್ನು ಅವರು ಅಳಿಸಿದರು.

ನಂತರದ ದಿನಗಳಲ್ಲಿ, ಸೆಹ್ವಾಗ್‍ ಅವರ ‘ಕೋಮುವಾದಿ’ ಟ್ವೀಟ್‍ ಬಗ್ಗೆ ಹಲವು ವೆಬ್‍ಸೈಟ್‍ಗಳು ವರದಿಗಳನ್ನು ಪ್ರಕಟಿಸಿದವು. ಅವರು ಯಾಕೆ ಹಾಗೆ ಟ್ವೀಟ್‍ ಮಾಡಿದರು ಮತ್ತು ಅವರು ಅದನ್ನು ಯಾಕೆ ಅಳಿಸಿ ಹಾಕಿದರು ಎಂಬ ಬಗ್ಗೆ ಹಲವು ಊಹಾಪೋಹಗಳೂ ಹರಿದಾಡಿದವು. ಸೆಹ್ವಾಗ್‍ ತಮ್ಮ ನಿಲುವು ಬದಲಿಸಲು ನಾನು ಕಾರಣ ಎಂದು ಕೆಲವರು ಬರೆದರು. ವಾಸ್ತವದಲ್ಲಿ, ಈ ಕ್ರಿಕೆಟಿಗನಿಗೆ ಸಂಬಂಧಿಸಿ ಹೇಳುವುದಾದರೆ ನನ್ನ ಮಾತಿಗಿಂತ ರಾಜ್‍ದೀಪ್‍ ಸರ್ದೇಸಾಯಿ ಅವರ ಮಾತಿಗೇ ಹೆಚ್ಚು ತೂಕವಿತ್ತು. ಸೆಹ್ವಾಗ್‍ ಅವರಂತೆ ರಾಜ್‍ದೀಪ್‍ ಅವರ ತಂದೆಯೂ ಬ್ಯಾಟಿಂಗ್‍ ಮೂಲಕ ಭಾರತಕ್ಕೆ ಟೆಸ್ಟ್ ಪಂದ್ಯಗಳನ್ನು ಗೆದ್ದು ಕೊಟ್ಟವರು. ಅದಲ್ಲದೆ, ನಾನು ಪತ್ರಿಕೆಗಳಲ್ಲಿ ಬರೆಯುವವನಾದರೆ, ಹೆಚ್ಚು ಜನಪ್ರಿಯ ಮಾಧ್ಯಮವಾದ ಸುದ್ದಿ ವಾಹಿನಿಯಲ್ಲಿ ರಾಜ್‍ದೀಪ್‍ ಕೆಲಸ ಮಾಡುತ್ತಾರೆ. ಜತೆಗೆ, ನನಗಿಂತ ನಾಲ್ಕು ಪಟ್ಟು ಹೆಚ್ಚು ಫಾಲೋವರ್‌ಗಳನ್ನು ಟ್ವಿಟರ್‌ನಲ್ಲಿ ರಾಜ್‍ದೀಪ್‍ ಹೊಂದಿದ್ದಾರೆ. ಸೆಹ್ವಾಗ್‍ ಅವರ ಪಕ್ಷಪಾತದಿಂದ ಕೂಡಿದ ಅರ್ಧಸತ್ಯದ ಟ್ವೀಟ್‍ನ ಘೋರ ಪರಿಣಾಮಗಳನ್ನು ರಾಜ್‍ದೀಪ್‍ ಅವರ ಟ್ವೀಟ್‍ ಮತ್ತು ನಂತರದ ದೂರವಾಣಿ ಕರೆ ತಪ್ಪಿಸಿತು ಎಂಬುದೇ ಖಚಿತ. ಇತರ ಹಲವರು ತಮ್ಮ ಟ್ವೀಟ್‍ ಮೂಲಕ ಎಷ್ಟೇ ಹುಯಿಲೆಬ್ಬಿಸಿದರೂ ಸೆಹ್ವಾಗ್‍ ತಮ್ಮ ನಿಲುವಿನಿಂದ ಹಿಂದಕ್ಕೆ ಸರಿಯುತ್ತಿರಲಿಲ್ಲವೇನೊ.

‘ಪ್ರತಿಕ್ರಿಯೆಗಳು ಉಚಿತ, ಆದರೆ ಸತ್ಯ ಪವಿತ್ರ’ ಎಂದು ಮ್ಯಾಂಚೆಸ್ಟರ್ ಗಾರ್ಡಿಯನ್‍ ಪತ್ರಿಕೆಗೆ 20ನೇ ಶತಮಾನದ ಆರಂಭದಲ್ಲಿ ಸಂಪಾದಕರಾಗಿದ್ದ ಸಿ.ಪಿ. ಸ್ಕಾಟ್‍ ಹೇಳಿದ್ದರು. ಆದರೆ, 21ನೇ ಶತಮಾನದ ಆರಂಭದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಪ್ರತಿ ನ್ಯಾನೊ ಸೆಕೆಂಡ್‍ಗೊಮ್ಮೆ ಈ ನೀತಿವಚನದ ಉಲ್ಲಂಘನೆಯಾಗುತ್ತಿದೆ. ಟ್ರಾಲ್‍ಗಳು ಮತ್ತು ಪಕ್ಷಪಾತಿ ಸಿದ್ಧಾಂತವಾದಿಗಳು ಉದ್ದೇಶಪೂರ್ವಕವಾಗಿ ಸದಾ ಸುಳ್ಳುಗಳನ್ನೇ ಹೇಳುತ್ತಿರುತ್ತಾರೆ. ಆದರೆ ವಿಶ್ವಾಸಾರ್ಹತೆಯುಳ್ಳ ಜನರು ಮತ್ತು ಸಾಧಕರು ಉನ್ನತ ಮಾನದಂಡವನ್ನು ಹೊಂದಿರಬೇಕು. ತಮ್ಮ ಸಾಮರ್ಥ್ಯ ಮತ್ತು ಪ್ರಸಿದ್ಧಿಯ ಕ್ಷೇತ್ರದ ಆಚೆಗಿನ ವಿಷಯಗಳ ಬಗ್ಗೆ ಕ್ರಿಕೆಟಿಗರು ಅಥವಾ ಸಿನಿಮಾ ತಾರೆಯರು ಮಾತನಾಡುವುದಕ್ಕೆ ಯಾವುದೇ ನಿರ್ಬಂಧ ಇಲ್ಲ. ಯಾಕೆಂದರೆ ಅವರೂ ಈ ದೇಶದ ಪೌರರು. ಇಂಥವರು ಭ್ರಷ್ಟಾಚಾರ, ಕೋಮು ಹಿಂಸೆ ಮುಂತಾದವುಗಳ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೊದಲು ತಮಗೆ ದೊರೆತ ಮಾಹಿತಿ ಸತ್ಯವೇ ಎಂಬುದನ್ನು ಸಂಶಯಾತೀತವಾಗಿ ಖಚಿತಪಡಿಸಿಕೊಳ್ಳಬೇಕು. ಅವರು ಸಂಪೂರ್ಣ ಸತ್ಯವನ್ನು (ಸತ್ಯದ ವಿರೂಪಗೊಳಿಸಿದ ಆಯ್ದ ಭಾಗವನ್ನಲ್ಲ) ಜನರ ಮುಂದಿಡಬೇಕು.

ಸೆಹ್ವಾಗ್‍ ಅವರಿಗೆ ಸಂಬಂಧಿಸಿದ ಈ ಪ್ರಕರಣದ ಬಗ್ಗೆ ಯೋಚಿಸುತ್ತಿರುವಾಗಲೇ ಹಿಂದೆ ಒಬ್ಬ ಪ್ರಸಿದ್ಧ ವ್ಯಕ್ತಿ ತಮ್ಮ ರಾಜಕೀಯ ಕಾರ್ಯಸೂಚಿಗಾಗಿ ಸುಳ್ಳುಗಳನ್ನೇ (ಅರ್ಧಸತ್ಯಗಳೂ ಅಲ್ಲ) ಮುಂದಿಟ್ಟಿದ್ದ ಪ್ರಸಂಗ ನನಗೆ ನೆನಪಾಯಿತು. 2002ರ ಗುಜರಾತ್‍ ಕೋಮು ಗಲಭೆಗಳ ಬಳಿಕ ಇದು ನಡೆದಿತ್ತು. ಹಿಂಸೆಯಲ್ಲಿ ಪ್ರಾಣ ತೆತ್ತ ಸಾವಿರಕ್ಕೂ ಹೆಚ್ಚು ಮುಸ್ಲಿಮರಲ್ಲಿ ಮಾಜಿ ಸಂಸದ ಎಹ್ಸಾನ್‍ ಜಾಫ್ರಿ ಅವರೂ ಸೇರಿದ್ದರು.

ಅಹಮದಾಬಾದ್‍ನಲ್ಲಿ ಅವರು ನೆಲೆಸಿದ್ದ ಕಟ್ಟಡದ ಸುತ್ತಲೂ ಹಿಂಸಾನಿರತ ಹಿಂದೂ ಕಾರ್ಯಕರ್ತರು ಆವೇಶದಿಂದ ನುಗ್ಗುತ್ತಿದ್ದಾಗ ಜಾಫ್ರಿ ಅವರು ನೆರವಿಗಾಗಿ ಹಿರಿಯ ಪೊಲೀಸ್‍ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಕರೆ ಮಾಡಿದ್ದರು.

ಗಲಭೆಗಳು ನಿಂತ ಮೇಲೆ ಕಾದಂಬರಿಕಾರ್ತಿ ಆರುಂಧತಿ ರಾಯ್‍ ಅವರು ಈ ಬಗ್ಗೆ ಲೇಖನವೊಂದನ್ನು ಬರೆದಿದ್ದರು. ‘ಸಂಸದನನ್ನು (ಜಾಫ್ರಿ) ಕೊಲ್ಲುವ ಮೊದಲು ಅವರ ಮುಂದೆಯೇ ಅವರ ಹೆಣ್ಣು ಮಕ್ಕಳನ್ನು ಬೆತ್ತಲಾಗಿಸಿ ಸಜೀವ ದಹನ ಮಾಡಿದರು’ ಎಂದು ರಾಯ್‍ ಬರೆದಿದ್ದರು. ಆದರೆ ಬರೆಯುವುದಕ್ಕೆ ಮೊದಲು ಇದು ಸತ್ಯವೇ ಎಂಬುದನ್ನು ಅವರು ದೃಢಪಡಿಸಿಕೊಂಡಿರಲಿಲ್ಲ. ಇದು ನಿಜವಲ್ಲ ಎಂದು ಜಾಫ್ರಿಯವರ ಮಗನೇ ಹೇಳಿದರು. ‘ರಾಯ್‍ ಅವರ ಲೇಖನ ಓದಿ ನನಗೆ ಆಘಾತವಾಯಿತು’ ಎಂದು ಅವರು ಬರೆದಿದ್ದಾರೆ. ಯಾಕೆ ಎಂಬುದನ್ನೂ ಅವರು ವಿವರಿಸಿದ್ದಾರೆ: ‘ನನ್ನ ಸೋದರ ಸೋದರಿಯರಲ್ಲಿ ಭಾರತದಲ್ಲಿ ನೆಲೆಸಿದ್ದವನು ನಾನು ಮಾತ್ರ. ನನ್ನ ಸಹೋದರಿ ಮತ್ತು ಸಹೋದರ ಅಮೆರಿಕದಲ್ಲಿದ್ದಾರೆ’.

2002ರ ಫೆಬ್ರುವರಿ-ಮಾರ್ಚ್‌ನಲ್ಲಿ ಗುಜರಾತಿನಲ್ಲಿ ನಡೆದ ಘಟನೆಗಳು ಘೋರ. ಗಲಭೆಗಳ ಬಗ್ಗೆ ಇಂಗ್ಲಿಷ್‍ ಮಾಧ್ಯಮದಲ್ಲಿ ವಿಸ್ತೃತವಾದ (ಮತ್ತು ಸಂವೇದನಾಶೀಲವಾದ) ವರದಿಗಳು ಪ್ರಕಟವಾಗಿವೆ. ಹಿಂಸಾಚಾರಕ್ಕೆ ಸರ್ಕಾರದ ಕುಮ್ಮಕ್ಕು ಮತ್ತು ಬೆಂಬಲ ಇತ್ತು ಎಂಬುದನ್ನು ಈ ವರದಿಗಳು ಬಹಿರಂಗಪಡಿಸಿವೆ. ಗುಜರಾತ್‍ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಈ ಆರೋಪವನ್ನು ನಿರಾಕರಿಸಲು ತಿಣುಕಾಡುತ್ತಿತ್ತು. ಆದರೆ, ಸತ್ಯಾಂಶಗಳನ್ನು ದೃಢಪಡಿಸಿಕೊಳ್ಳದೆ ರಾಯ್‍ ಅವರು ಬರೆದ ಲೇಖನ ಪ್ರಕಟವಾಗುವುದರೊಂದಿಗೆ ಬಿಜೆಪಿಗೆ ಪ್ರತಿದಾಳಿಗೆ ಅವಕಾಶ ಸಿಕ್ಕಿತು. ಹಿಂದೂಗಳ ಹೆಸರಿಗೆ ಕಳಂಕ ತರುವುದಕ್ಕಾಗಿ ಸತ್ಯವನ್ನು ‘ಕಲ್ಪಿಸಿ’ಕೊಳ್ಳುವುದರಲ್ಲಿ ಮಾತ್ರ ಮಾಧ್ಯಮಕ್ಕೆ ಆಸಕ್ತಿ ಎಂದು ಬಿಜೆಪಿ ಹೇಳಿತು.

‘ರಾಷ್ಟ್ರೀಯವಾದಿ ಶಕ್ತಿಗಳನ್ನು ವಿಕಾರಗೊಳಿಸಲು ಲೇಖಕರು ಕಲ್ಪನೆಯನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಬಿಜೆಪಿಯ ಪ್ರಮುಖ ವಕ್ತಾರರೊಬ್ಬರು ಹೇಳಿದ್ದರು. ‘ಭಾರತದ ಬಹಳ ಪ್ರಮುಖ ಲೇಖಕರೊಬ್ಬರು ಸಂಪೂರ್ಣ ಕಟ್ಟುಕತೆಯನ್ನು ಸತ್ಯ ಎಂಬಂತೆ ಉಲ್ಲೇಖಿಸಿದ್ದಾರೆ’ ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದರು. ತಮ್ಮ ಲೇಖನ ಪ್ರಕಟವಾಗಿ ಮೂರು ವಾರಗಳ ಬಳಿಕ ಅರುಂಧತಿ ರಾಯ್‍ ಕ್ಷಮೆ ಕೇಳಿದರು.

ಸೆಹ್ವಾಗ್‍ ಅದೃಷ್ಟವಂತ; ಅವರು ಪ್ರಮಾದ ಎಸಗುವ ಹೊತ್ತಿಗೆ ಟ್ವಿಟರ್ ಬಂದಿತ್ತು. ಹಾಗಾಗಿ, ಅವರಿಗೆ ತಪ್ಪಿನ ಅರಿವಾಗುವಂತೆ ಮಾಡಿದ್ದರಿಂದ ಅವರು ಕ್ಷಮೆ ಕೇಳುವುದು ಸಾಧ್ಯವಾಯಿತು. ಒಂದು ಕ್ಷೇತ್ರದಲ್ಲಿ ಹೆಸರು ಮಾಡಿ ಬೇರೆ ವಿಷಯಗಳ ಬಗ್ಗೆಯೂ ಪ್ರತಿಕ್ರಿಯೆ ನೀಡಲು ಬಯಸುವ ಜನರು ಈ ಪ್ರಕರಣವನ್ನು ಅರ್ಥ ಮಾಡಿಕೊಂಡಿರಬಹುದು ಎಂದು ನಾನು ಭಾವಿಸಿದ್ದೇನೆ. ಸಿನಿಮಾ ತಾರೆಯರು ಮತ್ತು ಕ್ರಿಕೆಟ್‍ ಆಟಗಾರರು ಅಪಾರವಾದ ಪ್ರಭಾವ ಹೊಂದಿದ್ದಾರೆ. ಹಾಗಾಗಿ ಅವರು ಇಂತಹ ವಿಚಾರಗಳಲ್ಲಿ ವಿಶೇಷ ಎಚ್ಚರಿಕೆ ವಹಿಸುವುದು ಅಗತ್ಯ. ಅಜ್ಞಾನದಿಂದ ಅಥವಾ ದುರುದ್ದೇಶದಿಂದ ಅವರು ಸತ್ಯವನ್ನು ತಿರುಚಿದರೆ ಅಥವಾ ಮುಚ್ಚಿಟ್ಟರೆ ಅದು ಅವರ ವಿಶ್ವಾಸಾರ್ಹತೆಗೆ ಧಕ್ಕೆ ತರುವುದರೊಂದಿಗೆ ಭಾರತದ ಅತ್ಯಂತ ನಾಜೂಕಾದ ಸಾಮಾಜಿಕ ರಚನೆಗೇ ಹಾನಿ ಉಂಟು ಮಾಡುತ್ತದೆ (ವೀರೇಂದ್ರ ಸೆಹ್ವಾಗ್‍ ಪ್ರಕರಣದಲ್ಲಿ ನಾನು ತಕ್ಷಣಕ್ಕೆ ಕಲಿತ ಪಾಠವೆಂದರೆ, ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ‘ಆಫ್‍ ಸ್ಟಂಪ್‌’ನಿಂದ ಹೊರಗಿದ್ದಾಗ ಅತಿಹೆಚ್ಚು ಜಾಗರೂಕನಾಗಿರಬೇಕು ಎಂಬುದಾಗಿದೆ).

ಸೆಹ್ವಾಗ್‍ ಪ್ರಕರಣದಲ್ಲಿ ಇನ್ನೊಂದು ಕಲಿಕೆಯೂ ಇದೆ. ಎರಡನೆಯದು ಏನೆಂದರೆ, ಈ ರೀತಿಯ ತಪ್ಪುಗಳನ್ನು ಯಾರಾದರೂ ಮಾಡಿದರೆ, ತಕ್ಷಣವೇ ಅದನ್ನು ಒಪ್ಪಿಕೊಂಡು ಕ್ಷಮೆ ಕೇಳಿಬಿಡುವುದು ಉತ್ತಮ. ಸೆಹ್ವಾಗ್‍ ಅವರು ಭಾಗಶಃ ಕ್ಷಮೆ ಕೇಳಿದ್ದರಿಂದ ನಾನು ನಿರಾಳನಾದೆ. ಮತ್ತಷ್ಟು ಒತ್ತಡ ಹೇರಿದ ಬಳಿಕ, ಅಪ್ರಾಮಾಣಿಕವಾಗಿದ್ದ ಮೂಲ ಟ್ವೀಟನ್ನೇ ಅಳಿಸಿ ಹಾಕಿದ್ದು ನನಗೆ ಇನ್ನಷ್ಟು ನೆಮ್ಮದಿ ಕೊಟ್ಟಿತು. ತಪ್ಪು ಮಾಡುವುದು ಮಾನವ ಸಹಜ ಎಂಬ ಮಾತಿದೆ. ಆದರೆ, ನಮ್ಮ ಸಿನಿಮಾ ತಾರೆಯರು ಮತ್ತು ಕ್ರಿಕೆಟ್‍ ಆಟಗಾರರಲ್ಲಿ ಕೆಲವರು ತಪ್ಪೇ ಮಾಡುವುದಿಲ್ಲ. ನಮ್ಮ ವಿಜ್ಞಾನಿಗಳು ಮತ್ತು ಉದ್ಯಮಿಗಳು, ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ರಾಜಕಾರಣಿಗಳಲ್ಲಿ ಯಾರೂ ತಪ್ಪೇ ಎಸಗುವುದಿಲ್ಲ. ತಮ್ಮ ತಪ್ಪನ್ನು ಬೊಟ್ಟು ಮಾಡಿ ತೋರಿಸಿದಾಗ ಈ ಆರಂಭಿಕ ಬ್ಯಾಟ್ಸ್‌ಮನ್‌  ಏನು ಮಾಡಿದರು ಎಂಬುದನ್ನು ಈ ಎಲ್ಲ ಜನರೂ ಗಮನಿಸಬೇಕು. ಇಂತಹ ನಡವಳಿಕೆ ಜನರನ್ನು ಹೆಚ್ಚು ಮಾನವೀಯವಾಗಿಸುತ್ತದೆ, ಅಷ್ಟೇ ಅಲ್ಲ, ಅವರನ್ನು ನಾವು ಇನ್ನಷ್ಟು ಹೆಚ್ಚು ಇಷ್ಟಪಡುವಂತೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT