ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಭಯಕ್ಕೆ ವ್ಯಕ್ತಿ ಮೂಲವೋ ಅಥವಾ ವಸ್ತುವೋ?

Last Updated 17 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಆವತ್ತು ರಾತ್ರಿ ಕಿಟಕಿಯ ಪಕ್ಕ ಹೆಣ ತೂಗಿದ್ದು ವರ್ಷಗಳ ನಂತರ ನೆನೆಸಿಕೊಂಡರೂ ಮೈ ಝುಂ ಎನ್ನಿಸುವಷ್ಟು ಸಾದೃಶ್ಯವಾಗಿತ್ತು. ಕತ್ತಲ ರಾತ್ರಿ... ಪೇಟೆಯ ಬೀದಿ ದೀಪದ ಮಂದ ಬೆಳಕು ಮನಸ್ಸಿನ ಸುಪ್ತ ಭಯಗಳಿಗೆಲ್ಲ ಕ್ರೌರ್ಯ ತುಂಬಿದಂತೆ. ಗೋಡೆಯ ಪಕ್ಕ ಉರಿಯುವ ಜ್ವಾಲೆ ತನ್ನೆಲ್ಲಾ ಬೆಳಕನ್ನು ಉಪಯೋಗಿಸಿ ಪ್ರತಿಫಲನಗಳಿಗೆ ಜೀವ ಕೊಟ್ಟ ಹಾಗೆ...  ಆ ಜೀವಗಳು ಪ್ರಾಣಿಗಳನ್ನೂ ಮನುಷ್ಯರನ್ನೂ ಏಕಕಾಲಕ್ಕೆ ಬೆದರಿಸಿ ಸುಖ ದುಃಖಗಳೆಲ್ಲವನ್ನೂ ನುಂಗಿ ನೀರು ಕುಡಿದು ಬರೀ ಬದುಕುವ ಆಸೆಯನ್ನು ಮಾತ್ರ ಉಳಿಸಿದ ಹಾಗೆ.

ಅದಕ್ಕೆ ಅಲ್ಲವೇ ಜೀವ ಇಲ್ಲದೆ ಮಲಗಿರುವ ಹೆಣಕ್ಕಿಂತ, ಹೆದರಿಕೆ ದೊಡ್ಡದು ಅನ್ನಿಸೋದು? ಆ ಹೆದರಿಕೆ ಜೀವನ ಶಕ್ತಿಯನ್ನೂ ಮೀರಿಸೋದು? ಧಡ್ ಧಡ್ ಅಂತ ಬಂದು ಕಿಟಕಿಯ ಗಾಜಿಗೆ ಡಿಕ್ಕಿ ಹೊಡಿಯುತ್ತಿದ್ದ, ತೂಗುತ್ತಿದ್ದ ದೇಹಕ್ಕೆ ಈ ಮೊದಲು ಜೀವ ಇತ್ತು ಎನ್ನುವ ಪರಿಕಲ್ಪನೆಯೇ ಕೈಕಾಲು ನಡುಕ ಹುಟ್ಟಿಸುವಂಥದ್ದಾಗಿತ್ತು. ಅದಕ್ಕೇ ಯಾರೂ ಕಣ್ಣು ತೆರೆಯುವ ಧೈರ್ಯ ಮಾಡದೇ ಕಿರುಚಾಟ ಕೂಗಾಟದಲ್ಲಿ ತೊಡಗಿದರು. ಸ್ವಲ್ಪ ಹೊತ್ತಿನಲ್ಲೇ ಮನೆ ಎಲ್ಲಾ ಕಿರುಚಾಟದಿಂದ ತುಂಬಿ ಹೋಯಿತು.

ಕಣ್ಣು ತೆರೆದರೆ ಒಬ್ಬರನ್ನೊಬ್ಬರು ನೋಡುತ್ತಿದ್ದರೇ ವಿನಾ ಕಿಟಕಿ ಕಡೆ ಅಪ್ಪಿತಪ್ಪಿಯೂ ನೋಡುತ್ತಿರಲಿಲ್ಲ. ಸರಳಾ ದಿಂಬಿನ ಕೆಳಗಿನಿಂದ ಚಂದ್ರಮಣಿಗಳ ಜಪಮಾಲೆ ತೆಗೆದುಕೊಂಡರೆ, ಸೂಸನ್ ಪ್ಲಾಸ್ಟಿಕ್ ಮಣಿಯ ರೋಸರಿ ಕೈಗೆತ್ತಿಕೊಂಡಳು.

ಚಿತ್ರಾ ಮತ್ತು ವಿಜಿಯ ಹತ್ತಿರ ಇನ್ನೇನೂ ಕೈಗೆತ್ತಿಕೊಳ್ಳಲು ಇರಲಿಲ್ಲವಾದ್ದರಿಂದ ಇಬ್ಬರೂ ಒಬ್ಬರ ಕೈಯನ್ನೊಬ್ಬರು ಹಿಡಿದು ಕಿರುಚುತ್ತಿದ್ದರು. ಇದನ್ನು ಕೇಳಿ ಗಾಬರಿಯಾದ ಜಯಸುಧಾ, ಕೋಟಿ ಎದ್ದು ಹುಡುಗಿಯರ ರೂಮಿಗೆ ಬಂದದ್ದು ಮಾತ್ರ ಬಹಳ ವಿಚಿತ್ರ ಸನ್ನಿವೇಶದಲ್ಲಿ. ಕಿಟಕಿಯ ಹೊರಗೆ ತೂಗುತ್ತಿದ್ದುದು ವಾಸ್ತವದಲ್ಲಿ ಏನು ಎಂದು ಗೊತ್ತಾಗುವಷ್ಟರಲ್ಲಿ ಕಿರುಚಾಟ ಶುರುವಾಗಿ ಎರಡು ಮೂರು ನಿಮಿಷಗಳು ಕಳೆದುಹೋಗಿತ್ತು. ಅಷ್ಟು ಹೊತ್ತಿಗೆ ನಾಲ್ಕೂ ಜನ ಅಕ್ಷರಶಃ ನಡುಗುತ್ತಿದ್ದರು.

ಅಲ್ಲಿ ತೂಗುತ್ತಿರುವುದು ಹೆಣ ಆಗಿರಲಿಲ್ಲ. ಹಾಗಂತ ಮೊದಲಿಗೆ ಹೇಳಿದವನೇ ಕೋಟಿ. ಮನೆಗೊಬ್ಬನೇ ದಿಕ್ಕಾದ ಆ ಗಂಡಾಳು ‘ಜಗದೇಕ ವೀರುಡು’ ಎಂದು ಭ್ರಮಿಸುತ್ತಾ ತನ್ನ ‘ಅತಿಲೋಕ ಸುಂದರಿ’ಯನ್ನು ಭೇಟಿ ಮಾಡುವ ಸುದೈವಕ್ಕಾಗಿ ಕಾಯುತ್ತಾ ತನ್ನೊಳಗಿನ ಲೈಂಗಿಕತೆಯನ್ನು ನಿಭಾಯಿಸಲಾಗದೆ ಬದುಕುತ್ತಿದ್ದ.

ತನ್ನ ಗಂಡಸ್ತನಕ್ಕೆ, ಧೈರ್ಯದ ಪ್ರದರ್ಶನಕ್ಕೆ ಇದೇ ಸೂಕ್ತ ವೇದಿಕೆ ಎನ್ನಿಸಿತೋ ಅಥವಾ ಅವನಿಗೆ ಹೆದರಿದ್ದ ಹೆಣ್ಣು ಮಕ್ಕಳನ್ನು ಕಂಡು ನಿಜವಾಗಿಯೂ ಅಯ್ಯೋ ಅನ್ನಿಸಿತೋ ಹೇಳಲು ಸಾಧ್ಯವಿಲ್ಲ. ಒಬ್ಬನೇ ಕಿಟಕಿ ತನಕ ಹೋಗುವ ಧೈರ್ಯ ತೋರಿದ್ದೇ ಅಲ್ಲದೆ ಅತ್ತ ಇರುವುದನ್ನು ಲಕ್ಷಿಸಿ ನೋಡಿದ. ಅದು ಏನು ಅಂತ ಗೊತ್ತಾದ ಮೇಲೆ ಜೋರು ಜೋರಾಗಿ ನಗಲು ಶುರು ಮಾಡಿದ. ಆ ಕಾರಣಕ್ಕಾಗಿ ಆವತ್ತಿನಿಂದ ಕೋಟಿ ‘ಹಿ ಮ್ಯಾನ್’ ಆಗಿಬಿಟ್ಟ!

ಇನ್ನೂ ಹೆಚ್ಚು ಕಿರುಚಾಟಕ್ಕೆ ತಯಾರಾಗಿದ್ದ ಹೆಣ್ಣುಮಕ್ಕಳು ಕೋಟಿಯ ನಗುವನ್ನು ಕಂಡು ತಬ್ಬಿಬ್ಬಾಗಿ ಮುಂದೇನು ಎಕ್ಸ್‌ಪ್ರೆಷನ್ ಕೊಡಬೇಕಂತ ತಿಳಿಯದೆ ತಬ್ಬಿಬ್ಬಾದರು.ಜಯಾ ಅವನ ತಲೆ ಮೇಲೆ ಮೊಟಕಿದಾಗ ಅವನಿಗಿಷ್ಟು ಎಚ್ಚರವಾಗಿ ನಗುತ್ತಲೇ ಹೊರಗೆ ಹೋದ. ಅತ್ತ ಕಡೆಯಿಂದ ಬಂದು ಇವರ ಭ್ರಮೆಯ ಆ ಹೆಣವನ್ನು ಆರಾಮಾಗಿ ಕೈಯಲ್ಲಿ ಹಿಡಿದು ತೂಗಿಸಿದ.

‘ಕೋಟೀ... ಏಮರಾ ಅದಿ?’ (ಏನೋ ಅದು?) ‘ಅಕ್ಕಾ, ಅದು ಹೆಣ ಅಲ್ಲಕ್ಕಾ, ಬೆಡ್‌ಶೀಟು’ ಎಂದ. ‘ಆಂ? ಏನಂದೆ? ಅಲ್ಲಿ ತಲೆ ಥರ ಕಾಣ್ತಾ ಇದೆಯಲ್ಲೊ?!!’ ‘ಆ ಅದೇ! ಅದು ತಲೆ ಅಲ್ಲಕ್ಕಾ, ಬೆಡ್‌ಶೀಟು ಒಂದಕ್ಕೊಂದು ಗಂಟು ಹಾಕಿದಾರೆ. ಅದೇ ತಲೆ ಥರ ಕಾಣ್ತಿದೆ’ ಅಬ್ಬಾ! ಎಂದು ಎಲ್ಲರೂ ಒಮ್ಮೆ ದೀರ್ಘ ಉಸಿರು ಎಳೆದುಕೊಂಡರು. ತಲೆ ಥರ ದಪ್ಪಕ್ಕೆ ಕಂಡಿದ್ದೇನೋ ಸರಿ. ಆದರೆ ದೇಹ? ಉಳಿದದ್ದು ದೇಹದ ಥರ ಕಾಣ್ತಿತ್ತಲ್ಲ?

ಅಸಲಿಗೆ ಉಳಿದ ಭಾಗಕ್ಕೆ ಮನುಷ್ಯ ದೇಹದ ಯಾವ ಹೋಲಿಕೆಯೂ ಇರಲಿಲ್ಲ. ಅಂದಮೇಲೆ ಇಡೀ ಸನ್ನಿವೇಶ ಅಷ್ಟೊಂದು ಡ್ರಮಾಟಿಕ್ ಆದದ್ದಾದರೂ ಹೇಗೆ? ಮನಸ್ಸಿನಲ್ಲಿ ಸದಾ ಮಲಗಿರುವ ಹೆದರಿಕೆಗೆ ತರ್ಕ ಇರುವುದಿಲ್ಲ. ಆಗಾಗ ಹೆಡೆ ಎತ್ತಿದ ಸಂದರ್ಭದಲ್ಲಿ ಮನುಷ್ಯನನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳಬಲ್ಲ ಭಾವನೆಗಳಲ್ಲಿ ಹೆದರಿಕೆ ಅತ್ಯಂತ ಪ್ರಮುಖವಾದದ್ದು ಮತ್ತು ಬಹುತೇಕ ತಾತ್ಕಾಲಿಕವಾದದ್ದು. ಹೆದರಿಕೆಗೆ ಹಸಿವೆ, ನಿದ್ದೆ, ನೀರಡಿಕೆ, ನೋವು ಯಾವುದನ್ನೂ ಅನುಭವಕ್ಕೆ ತರದೆ ದೂರವೇ ಇಡುವ ಸಾಮರ್ಥ್ಯ ಇದೆ.

ಅದಕ್ಕಾಗೇ ನಾವು ಕತ್ತಲಲ್ಲಿ ಮೆಟ್ಟಿದ ಹಗ್ಗವನ್ನೂ ಹಾವೆಂದು ಭ್ರಮಿಸುವುದು. ಮೇಲಿಂದ ತೂಗುತ್ತಿದ್ದ ಕಾರಣಕ್ಕೇ ಮನುಷ್ಯನಂತೆ ಕಾಣುತ್ತಿದ್ದ ಆ ಬೆಡ್‌ಶೀಟಿಗೆ ಇನ್ನೊಂದು ದೊಡ್ಡ ಬೆಡ್ ಶೀಟನ್ನೇ ಯಾರೋ ಗಂಟು ಹಾಕಿದ್ದರು. ಭಾರ ತಡೆಯಲಿ  ಅಂತ ಹಾಕಿದ ಗಂಟು ಸ್ವಲ್ಪ ದಪ್ಪಕ್ಕೇ ಇತ್ತು. ಅದು ಕತ್ತಲ ನೆರಳಲ್ಲಿ ವಾರೆ ತಿರುಗಿದ ತಲೆ ಥರ ಕಾಣಿಸುತ್ತಿತ್ತು.

ಅಲ್ಲದೆ ಮೇಲಿನ ಫ್ಲಾಟಿನ ಬಾಲ್ಕನಿಯ ಗ್ರಿಲ್ಲಿನ ತಳಭಾಗಕ್ಕೆ ಹಾಕಿದ್ದರಿಂದ ಆ ಗಂಟು ಸೀದಾ ಕಿಟಕಿಯ ಎದುರಿಗೇ ಬಂದಿತ್ತು. ಬಾಲ್ಕನಿ ಚಿಕ್ಕದಾಗಿದ್ದು, ಈ ಕಿಟಕಿಗೆ ಸಜ್ಜಾ ಇರಲಿಲ್ಲವಾದ್ದದಿಂದ ಆಗಾಗ ಗಾಳಿಗೆ ಬಂದು ಬಡಿಯುತ್ತಿತ್ತು.

ಆ ಗಂಟು ತಲೆಯ ಥರ ಕಂಡಿದ್ದರಿಂದ ಉಳಿದ ಭಾಗವನ್ನು ಮನಸ್ಸೇ ಸಂಪೂರ್ಣವಾಗಿ ಊಹಿಸಿಕೊಂಡಿತ್ತು. ಒಬ್ಬಳು ಕಿರುಚಲು ಶುರು ಮಾಡಿದ ವಿಷಯ ಪರಿಶೀಲನೆ ಮಾಡುವ ವ್ಯವಧಾನ, ಅಥವಾ ಧೈರ್ಯವಾದರೂ ಇನ್ನು ಯಾರಿಗೆ ಬಂದೀತು? ಭಯ ತುಂಬಿ ಚೆಲ್ಲಾಡಿ ಹೋಗಿದ್ದ ಆ ರೂಮಿನಲ್ಲಿ, ಕೋಟಿ ಚೆಕಿಂಗ್ ಮಾಡಿ ಬಂದ ಮೇಲೆ ಸಮಾಧಾನದ ನಗು ತುಂಬಿತು. ಅನಿರೀಕ್ಷಿತವಾಗಿ ಪರಿಸ್ಥಿತಿಯನ್ನು ತಹಬಂದಿಗೆ ತರುತ್ತಾ ಸೂಸನ್ ಈ ಸಂದರ್ಭವನ್ನು ವಿಜಿಯ ನಾಸ್ತಿಕತೆಯನ್ನು ಹೀಗಳೆಯಲು ಉಪಯೋಗಿಸಿಕೊಂಡಳು.

‘ಅದಕ್ಕೇ ದೇವರ ಪೂಜೆ ಮಾಡಬೇಕು ಅನ್ನೋದು. ನೋಡು! ನೀನು ಹೆದರಿದ್ದಲ್ಲದೆ ಎಲ್ಲರನ್ನೂ ಹೆದರಿಸಿದೆ!’ ಅಂತ ಸೂಸನ್ ಕಟಕಿಯಾಡುತ್ತಾ ತನ್ನ ರೋಸರಿಯನ್ನು ಭದ್ರವಾಗಿ ಹಿಡಿದುಕೊಂಡಳು.

‘ನನಗೆ ದೇವರಿಲ್ಲ, ಒಪ್ಪಿದೆ. ನಾನು ಹೆದರಿದ್ದು ಓಕೆ. ಆದರೆ ಮಾತ್ ಮಾತಿಗೂ ದೇವರ ಹೆಸರು ತರ್ತೀಯಲ್ಲಾ? ನೀನ್ಯಾಕೆ ಹೆದರಿದೆ?’ ವಿಜಿ ತಿರುಗಿಸಿ ಕೇಳಿದಳು. ಹಳೇ ಪೇಪರ್ ಹಳೇ ಪಾತ್ರೆ ಅಂತ ಕೂಗಿ ಕೇಳಿದಾಗಲೆಲ್ಲಾ ಮನೆಯಲ್ಲಿರುವ ಅನುಪಯುಕ್ತ ವಸ್ತುಗಳೆಲ್ಲಾ ಕಣ್ಣ ಮುಂದೆ ಬರುವ ಹಾಗೆ ಜೀವದ ಹೆದರಿಕೆಯ ಮುಂದೆ ಪಾಪಪ್ರಜ್ಞೆ ಇನ್ನೂ ಜಾಗೃತವಾಗುತ್ತೆ. ಮನುಷ್ಯ ಕುಬ್ಜನಾಗುತ್ತಾನೆ. ದೆವ್ವಕ್ಕೊ, ದೇವರಿಗೂ ತಾನೇ ಜನ್ಮ ಕೊಟ್ಟು ಒದ್ದಾಡುತ್ತಾನೆ ಅನ್ನುವುದು ವಿಜಿಯ ನಂಬಿಕೆಯಾಗಿತ್ತು.

‘ದೇವರು ಇದ್ದ ಕಡೆ ಹೆದರಿಕೆ ಇರಲ್ಲ. ಆದರೆ ನೀನು ನನ್ನನ್ನು ಹೆದರಿಸಿದೆ’ ಸೂಸನ್ ನಿರ್ಣಾಯಕವೆಂಬಂತೆ ಮಾತನಾಡಿದಳು. ‘ನಾನು ನಿನ್ನ ದೇವರಿಗಿಂತ ದೊಡ್ಡವಳೇನು? ಒಂದು ಪಕ್ಷ ಮನುಷ್ಯರ ಪಾಪ ಜಾಸ್ತಿಯಾದ್ರೆ ದೇವರಿಗೆ ಲೋಡ್ ಹೆಚ್ಚಾದಾಗ ಏನು ಮಾಡ್ತಾನೆ? ದೇವರು ಅದನ್ನ ಯಾರಿಗೆ ಶಿಫ್ಟ್ ಮಾಡ್ತಾನೆ?’ ಅಂತ ಕೇಳಿ ವಿಜಿ ಸೂಸನ್ ಕೈಲಿ ಯಕ್ಕಾಮಕ್ಕಾ ಬೈಸಿಕೊಂಡಳು. ಒಂದು ದಿನಕ್ಕೂ ದೇವರ ಮುಂದೆ ದೀಪ ಹಚ್ಚದೆ, ನಂಬಿಕೆ ಇಡದೆ, ಇಂಥಾ ಸಂದಿಗ್ಧಗಳನ್ನು ಕೇಳಿದರೆ ತಲೆಹರಟೆ ಅನ್ನೋಲ್ಲವೇನು?
‘ನೀನು ಸ್ವಲ್ಪ ಸುಮ್ಮನೆ ಇರು. ಇದು ಸೀರಿಯಸ್ ವಿಷಯ’ ಅಂದಳು ಸೂಸನ್. ಅವಳಿಗೆ ಇದ್ದ ಜಿಜ್ಞಾಸೆಯೇ ಬೇರೆ.

‘ಸತ್ತವರು ದೇವರ ಹತ್ತಿರ ಹೋಗುತ್ತಾರೆ ಅಂತಾರಲ್ಲ? ಮತ್ತೆ ಹೆಣವನ್ನು ನೋಡಿ ನಾವು ಹೆದರೋದು ಯಾಕೆ?’ ಎನ್ನುವ ಪ್ರಶ್ನೆಗೆ ಉತ್ತರ ಸಿಗದೆ ತೊಳಲಾಡುತ್ತಿದ್ದಳು ಸೂಸನ್. ಏಕೆಂದರೆ ಅವಳ ಧರ್ಮದಲ್ಲಿ ‘ದೆವ್ವ’ ಎನ್ನುವ ಪದಕ್ಕೆ ಅಸ್ತಿತ್ವ ಇಲ್ಲ. ದೇವರನ್ನು ‘ಹೋಲಿ ಘೋಸ್ಟ್’ ಅಂದರೆ ‘ಪವಿತ್ರಾತ್ಮ’ ಅಂತ ನಂಬುತ್ತಾರೆ. ಸೇಟನ್ ಅಂದರೆ ಕೇಡು ಮಾಡಲು ಪ್ರೇರೇಪಿಸುವ ಮನಸ್ಸಿನ ಒಂದು ಭಾಗ. ವ್ಯಕ್ತಿತ್ವದ ಮೇಲೆ ಸೇಟನ್ನನ ಪ್ರಭಾವ ಹೆಚ್ಚಾದಾಗ ಮನುಷ್ಯ ಪಶುವಾಗುತ್ತಾನೆ ಎನ್ನುವುದು ಚರ್ಚ್ ನಂಬಿರುವ ಅಂಶ.

ಯಾವ ಸಂದರ್ಭದಲ್ಲೇ ಆಗಲಿ, ಸಾವಿನ ಸಮ್ಮುಖದಲ್ಲಿ ಜೀವನ ಮೊದಮೊದಲಿಗೆ ಭಯಾನಕ ಎನ್ನಿಸುತ್ತದೆ. ಸತ್ತವರ ಬಗ್ಗೆ ಕನಿಕರ, ಅವರನ್ನು ಉಳಿಸಿಕೊಳ್ಳಲಾಗದ ತನ್ನ ಬಗ್ಗೆ ಅಸಹಾಯಕತೆ ಆಮೇಲೆ ಎಲ್ಲವೂ ಪಾರಮಾರ್ಥಿಕವಾಗಿ, ಯಾರಿಗೆ ಬೇಕು ಈ ಜಂಜಾಟ ಎನ್ನಿಸುತ್ತದೆ.

ಸ್ವಲ್ಪ ದಿನಗಳ ನಂತರ ಅಕ್ಕಿ, ಬೇಳೆ, ಟೈಲರ್ರು, ಬ್ಲೌಸು. ಡ್ರಸ್ ಮಟೀರಿಯಲ್ಲು, ಪೆಟ್ರೋಲು, ಹೊಸಾ ಕಾರು ಇತ್ಯಾದಿಗಳು ಮುಖ್ಯವಾಗಿ, ದುಃಖ ಒಂಥರಾ ಲಕ್ಷುರಿಯ ವಸ್ತುವಾಗುತ್ತದೆ. ಅಳುತ್ತಾ ಕೂತರೆ ಅಕ್ಕಿ ತಂತಾನೇ ಕುಕ್ಕರಿನಲ್ಲಿ ಕೂತು ಅನ್ನ ಆಗುತ್ತಾ? ಬೇಳೆ ತರಕಾರಿ ತಂತಾವೇ ಕೂಡಿಕೊಂಡು ಬೆಂಕಿ ಮೇಲೆ ಬಂದು ಬೆಂದು ಸಾರಾಗುತ್ತಾ? ಹುಳಿಯೋ ಖಾರವೋ ಹೆಚ್ಚಾದರೆ ಅದನ್ನು ನಾಲಿಗೆ ಗುರುತಿಸದೆ ಇರುತ್ತಾ? ಮನಸ್ಸಿಗೆ ಖುಷಿ ಕೊಡುವುದನ್ನು ನೋಡಿದರೆ ರೋಮಾಂಚನವಾಗದೇ ಇರುತ್ತಾ? ಕಾಮಕ್ಕೆ ದೇಹ ಸ್ಪಂದಿಸದೆ ಇರುತ್ತಾ?

ದುಃಖಕ್ಕೆ ‘ಶೆಲ್ಫ್ ಲೈಫ್’ ಕಡಿಮೆ, ಹಾಗೇ ಸುಖಕ್ಕೂ ಕೂಡ. ಮಧ್ಯದ ಸ್ಥಿತಿ ಸದಾ ಸಮತೋಲಿತವಲ್ಲದಿದ್ದರೂ ಆಗಾಗ ಚಿಕ್ಕಪುಟ್ಟ ‘ಧಡಕು’ಗಳಿಂದ, ಪುಟ್ಟಾಣಿ ಸಂತೋಷಗಳಿಂದ ಕೂಡಿರುವುದು ಏಕಮಾತ್ರ ಸತ್ಯ. ಅದನ್ನೇ ಬದುಕುತ್ತಾ ಸುಖ ಬರಲಿ ಅಂತ ಕಾಯುತ್ತಾ, ದುಃಖ ಬಂದುಬಿಟ್ಟರೆ ಅಂತ ಹೆದರುತ್ತಾ ಒಂದು ದಿನ ಸತ್ತೇಹೋಗಿಬಿಡುತ್ತೇವೆ.

ಅದಕ್ಕೇ ಸೂಸನ್ ಹೇಳಿದ ಉತ್ತರ ಸಮರ್ಪಕವಾಗಿರಲಿಲ್ಲ ಅನ್ನಿಸಿತು ವಿಜಿಗೆ. ‘ನೀನು ಏನ್ ಬೇಕಾದರೂ ಅಂದ್ಕೋ. ನನ್ ಪ್ರಶ್ನೆಗೆ ಉತ್ತರ ಕೊಡು’ ಅನ್ನುತ್ತಾ ವಿಜಿ ಉತ್ತರ ಹೊರಡಿಸಿಯೇ ತೀರಬೇಕೆನ್ನುವ ನಿರ್ಧಾರಕ್ಕೆ ಕಟಿಬದ್ಧಳಾಗಿದ್ದಳು.

‘ದೇವರಿಗೆ ಭಾರ ಅಂತ ಯಾವುದೂ ಇಲ್ಲ. ಎಲ್ಲವನ್ನೂ ಸರಿಯಾಗಿಯೇ ವಿಲೇವಾರಿ ಮಾಡ್ತಾನೆ. ತನ್ನನ್ನು ನಂಬದವರಿಗೆ ಶಿಕ್ಷೆಯನ್ನೂ ಸರಿಯಾಗೇ  ಕೊಡ್ತಾನೆ’ ಅಂತ ಕಿರುಗಣ್ಣಾಗಿಸಿ ಕೊಂಕು ನುಡಿದಳು ಸೂಸನ್.

‘ಅವನನ್ನು ನಂಬದೆ ಪಾಪ ಮಾಡುವವರಿಗಿಂತ ಅವನನ್ನು ನಂಬಿಯೂ ಪಾಪ ಮಾಡುವವರು ಇನ್ನೂ ಪಾಪಿಷ್ಟರಲ್ವಾ? ಕನಿಷ್ಠ ನಂಬಿಕೆ ಇಲ್ಲದವರು ಮಾತ್ ಮಾತಿಗೂ ‘ದೇವ್ರೇ’ ಅಂತ ಅವನನ್ನ ಕರೆದು ತೊಂದರೆ ಕೊಡಲ್ಲ. ಅಲ್ವಾ?’ ಅಂತ ವಿಜಿ ಕೇಳಿದಳು.

‘ಸಾರಿ. ನಾನು ಉತ್ತರ ಕೊಡಕ್ಕೆ ಆಗಲ್ಲ. ಬೇಕಾದ್ರೆ ಒಟ್ಟಿಗೇ ಕೂತು ಬೈಬಲ್ ಓದೋಣ ಬಾ’ ಅಂತ ಸೂಸನ್ ಸುಲಭ ಮಾರ್ಗದಲ್ಲಿ ಪರಿಹಾರ ಹುಡುಕಿದಳು. ಇದಕ್ಕೆಲ್ಲ ವಿಜಿ ಒಪ್ಪುವ ಚಾನ್ಸೇ ಇಲ್ಲ. ‘ನೀನೇ ಓದು. ಆಮೇಲೆ ನನಗೆ ಹೇಳು’ ‘ಹೇಳ್ತೀನಷ್ಟೇ. ಪ್ರಶ್ನೆ ಗಿಶ್ನೆ ಕೇಳೋದಿದ್ರೆ ಚರ್ಚಿಗೆ ಬಾ. ಫಾದರ್ ಉತ್ತರ ಹೇಳ್ತಾರೆ.’ ‘ಅವರ ಉತ್ತರ ನನಗೆ ಬೇಡ. ನೀನು ಸಾವಿರ ಸಾರಿ ಓದಿದ್ದೀಯಲ್ಲಾ? ನೀನೇ ಹೇಳು’ ಅದ್ಯಾಕೋ ಧರ್ಮದ ಬಗ್ಗೆ ಆಡಿದ್ದು ಕೊಂಕುಮಾತೆನಿಸಿ ಸೂಸನ್ ತಿರುಗಿಸಿ ಮಾತನಾಡಿದಳು. ‘ನಿನ್ ಭಗವದ್ಗೀತೇಲಿ ಎಲ್ಲಾ ಇರಬೇಕಲ್ಲ? ಅದರಲ್ಲೇ ಹುಡುಕ್ಕೋ...’

‘ಹಹಹ!! ಎಲ್ಲಾ ಇದೆ ನಿಜ. ಅದರೆ ನನಗೆ ಇನ್ನೂ ಹುಡುಕಾಟ ಶುರುವಾಗಿಲ್ಲ. ದೇವರಿದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ ಅವನನ್ನು ಲೈಟ್ ಹಾಕಿ ಹುಡುಕೋದಕ್ಕಿಂತ ಕತ್ತಲೇಲಿ ಹುಡುಕೋ ಜನಗಳ ಬಗ್ಗೆ ನನಗೆ ಕನಿಕರ ಇದೆ. ಓದಿಲ್ಲ ಅನ್ನುವ ಕಾರಣಕ್ಕೆ ಬೈಬಲ್ಲೂ ಭಗವದ್ಗೀತೆಯೂ ಒಂದೇ.’ ‘ಅಹಂಕಾರ ನಿನಗೆ. ನಾವು ಲೈಟ್ ಹಾಕಿಯೇ ಹುಡುಕ್ತಿದೀವಿ. ನೀನ್ ಮುಚ್ಕೊಂಡು ಕೂತ್ಕೋ...’ ‘ಲೈಟ್ ಹಾಕಿದೀಯ ಸರಿ. ಆದರೆ, ಮುಖ್ಯವಾಗಿ ನಿನ್ನ ಕಣ್ಣು ಓಪನ್ ಆಗಿದೆಯಾ? ಅಕಸ್ಮಾತ್ ದೇವರು ಕಂಡ್ರೂ ನಿನಗೆ ಹೇಗೆ ಗೊತ್ತಾಗಬೇಕು?’

ಇಡೀ ಪ್ರಕರಣ ಎಂಥ ಅಸಂಬದ್ಧತೆಯಿಂದ ಕೂಡಿತ್ತೆಂದರೆ, ಹೆದರಿಕೆ ಕಳೆದ ಕೂಡಲೇ ದೇವರ ಬಗ್ಗೆ ಜಗಳ ಶುರುವಾಗಿತ್ತು. ಆದರೆ ವಾಸ್ತವದ ಪ್ರಜ್ಞೆಯುಳ್ಳ ಕೋಟಿ ಮಾತ್ರ ‘ಈ ಬೆಡ್‌ಶೀಟು ಯಾಕೆ ಕಟ್ಟಿರಬಹುದು? ಯಾರು ಕಟ್ಟಿರಬಹುದು?’ ಅಂತ ಜಯಸುಧಾನ್ನ ಕೇಳಿ ಎಲ್ಲರನ್ನೂ ಬಚಾವ್ ಮಾಡಿದ. ಜಯಸುಧಾಗೆ ಗೊತ್ತಾಗದೇ ತಲೆ ಆಡಿಸಿದಳು.

ಕೋಟಿ ಮೇಲಿನ ಫ್ಲಾಟಿಗೆ ಹೋಗಿ ಬಂದ. ಯಾರೂ ಇರಲಿಲ್ಲ. ಮನೆ ಬೀಗ ಹಾಕಿತ್ತು. ಅವರು ಮೂರು-ನಾಲ್ಕು ಜನ ಬಂಗಾಳ, ಉತ್ತರ ಪ್ರದೇಶ, ದಿಲ್ಲಿ ಹೀಗೆ ಎಲ್ಲೆಲ್ಲಿಂದಲೋ ಬಂದ ಹುಡುಗರು ಶೇರಿಂಗ್ ವ್ಯವಸ್ಥೆಯಲ್ಲಿ ಒಂದೇ ಮನೆಯನ್ನು ಬಾಡಿಗೆ ತೆಗೆದುಕೊಂಡು ವಾಸವಾಗಿದ್ದರು. ಬೆಡ್‌ಶೀಟು ಅವರ ಬಾಲ್ಕನಿಯಿಂದಲೇ ಬಂದಿತ್ತು. ಯಾರೂ ಇಲ್ಲದ ಸಮಯದಲ್ಲಿ ಮನೆಯನ್ನು ಪ್ರವೇಶಿಸಿದ ಯಾರೋ ಅಲ್ಲಿಂದ ಇಳಿದು ಹೋಗಿದ್ದರು. ಮುಂದಿನಿಂದ ಮನೆಗೆ ಹಾಕಿದ್ದ ಬೀಗ ಹಾಗೇ ಇತ್ತು.

ಆ ಬಾಡಿಗೆ ಮನೆ ಹುಡುಗರು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ತಮ್ಮ ಪಾಡಿಗೆ ತಾವು ವಿಪ್ರೋ, ಇನ್ಫೋಸಿಸ್ಸು ಕಂಪೆನಿಗಳಲ್ಲಿ ಕೆಲಸ ಮಾಡಿಕೊಂಡಿದ್ದರು. ಆರ್ಥಿಕ ಉದಾರ ನೀತಿ ಇನ್ನೂ ಜೀವ ತಳೆಯುತ್ತಿದ್ದ ಸಮಯ. ಐಟಿ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳಲು ಮೊದಲ ಹಂತದ ಗುಳೆ ಹೊರಟವರ ಜೀವನ ಅದು. ಬೆಂಗಳೂರಲ್ಲೇ ಜನ್ಮಜನ್ಮಾಂತರದಿಂದ ಇದ್ದವರ ಕಥೆ ಬಿಡಿ, ಈಗ ಬರುತ್ತಿದ್ದವರು ಮೊದಲ ಪೀಳಿಗೆಯ ಜನ.

ದೂರದ ರಾಜ್ಯಗಳಿಂದ ಹುಡುಗರು ಬೆಂಗಳೂರಿಗೆ ಬಂದು ಇಳಿಯ ತೊಡಗಿದ ಮೇಲೆ ಊರೆನ್ನುವ ಆ ಮನೆ, ಮೊದಲಿಗೆ ಮಂಟಪವಾಯಿತು, ನಂತರ ಛತ್ರವಾಯಿತು, ನಂತರ ಗಿಜಿಗುಟ್ಟುವ ರೈಲು ನಿಲ್ದಾಣವಾಯಿತು. ಎಲ್ಲರೂ ಬ್ಯಾಗು ಕಟ್ಟಿ ಬಂದು ಇಳಿಯುವವರೇ! ಅದಕ್ಕೆ ತಕ್ಕಂತೆ ಜಾಗ ಖಾಲಿ ಮಾಡಿ ಹೊರಡುವವರು ಯಾರೂ ಇರಲಿಲ್ಲ.

ಹದಿನೈದಿಪ್ಪತ್ತು ಸಿಗ್ನಲ್ ಲೈಟುಗಳಿಂದ ಮುಗಿದು ಹೋಗುತ್ತಿದ್ದ ಊರ ಗಡಿ ಸುತ್ತಲ ಹಳ್ಳಿಗಳನ್ನು ನುಂಗಿ ನೊಣೆದು ಬಕಾಸುರನಂತೆ ಮತ್ತೆ ಹಸಿದು ನಿಂತಿತ್ತು. ಈಗ ಚುಕ್ಕಿ ಆಟದಂತೆ ಅರ್ಧ ಕಿಲೋಮೀಟರಿಗೆ ಸಿಗ್ನಲ್ ಲೈಟುಗಳು ಅವತರಿಸತೊಡಗಿದವು. ದಿನದಿನಕ್ಕೂ ಒನ್ ವೇಗಳು ಹುಟ್ಟಿದವು. ಸಂಬಳ ಬೆಳೆದಂತೆಲ್ಲ ಬಾಡಿಗೆಯೂ ಹೆಚ್ಚಿತು.

ಕನ್ನಡದ ಜನಕ್ಕೆ ಮನೆ ಬಾಡಿಗೆ ಸಿಗುವುದೇ ಕಷ್ಟವಾಗಿ ಕೊತ್ತಂಬರಿ ಮಾರುವವರೂ ಹಿಂದಿ ಕಲಿತು ತಂತಮ್ಮ ಮಾರ್ಕೆಟ್ಟುಗಳನ್ನು ಬಹುಬೇಗ ಅರ್ಥಮಾಡಿಕೊಂಡರು. ಕನ್ನಡಿಗರು ಅವಡುಗಚ್ಚಿಕೊಂಡು ತಮ್ಮ ಬಾಂಧವ ಕೆಂಪೇಗೌಡರು ಕಟ್ಟಿದ ನಾಲ್ಕು ಕಂಬಗಳ ಗಡಿಯ ಈ ಊರು ತಮಿಳು, ಮಲಯಾಳಂ, ತೆಲುಗು, ಹಿಂದಿ, ಇಂಗ್ಲೀಷಿಗೆ ಮಣೆ ಹಾಕುವುದನ್ನು ನೋಡುತ್ತಾ ಆಕ್ರೋಶಪಡುತ್ತಲೇ ಎಲ್ಲಾ ಭಾಷೆಗಳಲ್ಲೂ ಮಾತಾಡುವುದನ್ನು ಕಲಿಯುತ್ತಾ ಕಾಲಾಂತರದಲ್ಲಿ ಕನ್ನಡಪರ ಸಂಘಟನೆಗಳ ಹುಟ್ಟಿಗೆ ಕಾರಣರಾದರು.

ಸದ್ಯದ ಪರಿಸ್ಥಿತಿಯಲ್ಲಿ ಈ ಮನೆಯಲ್ಲಿ ಕಳ್ಳತನವಾಗಿತ್ತು. ಯಾರೋ ಬಾಲ್ಕನಿ ಮಾರ್ಗವಾಗಿ ಹತ್ತಿ, ಅಲ್ಲಿನ ಬಾಗಿಲಿನಿಂದ ಮನೆ ಪ್ರವೇಶಿಸಿ ತಮ್ಮ ಕೆಲಸ ಮುಗಿಸಿ ಇಳಿದು ಹೋಗಿದ್ದರು.

‘ಅಂದ್ರೆ, ನಾವ್ ಮಲ್ಕೊಂಡಿದ್ದಾಗ ಯಾರೋ ಇಲ್ಲೆಲ್ಲಾ ಓಡಾಡಿದಾರಾ? ನಮ್ಮ ರೂಮಿನೊಳಗೆ ಇಣುಕಿರಬಹುದಾ?’ ವಿಜಿಗೆ ನಿಜಕ್ಕೂ ಭಯಕ್ಕಿಟ್ಟುಕೊಂಡಿತು. ತಾನು ಮಲಗಿದ್ದ ಗೋಡೆ ಆಚೆ ರಹಸ್ಯವಾದದ್ದೇನೋ ನಡೆದು ಹೋಗುವಾಗ ತಾನು ಗಾಢ ನಿದ್ರೆಯಲ್ಲಿದ್ದೆ ಎನ್ನುವ ಆಲೋಚನೆ ಮತ್ತೆ ನಡುಕ ತರಿಸಿತು. ಈ ಬಾರಿಯ ಹೆದರಿಕೆ ಸತ್ತವರ ಬಗ್ಗೆ ಅಲ್ಲ, ಬದುಕಿದವರ ಬಗ್ಗೆ. ಕಣ್ಣಿಗೆ ಕಾಣದೆ ನಡುಗಿಸುವ ದೆವ್ವಕ್ಕಿಂತ ಜೀವಂತ ಮನುಷ್ಯ ಹೆದರಿಕೆ ಹುಟ್ಟಿಸಿದ್ದು ಹೇಗೆ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT