ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮಾಣಿಕ ಪೊಲೀಸರ ಕಷ್ಟಗಳು

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನಾನು ಅಶೋಕನಗರದಲ್ಲಿ ಇನ್ಸ್‌ಪೆಕ್ಟರ್ ಆಗಿದ್ದಾಗ ಕೆಲವು ಖೊಟ್ಟಿ ಪತ್ರಕರ್ತರಿದ್ದರು. ಅಂಥವರಲ್ಲಿ ಮೂರು ಜನ ನನ್ನ ಬಳಿ ಬಂದರು. ರಾತ್ರಿ 7 ಗಂಟೆಯ ಸಮಯ. ಡಿನ್ನರ್‌ಗೆ ಕರೆದುಕೊಂಡು ಹೋಗಿ ಎಂದು ದುಂಬಾಲುಬಿದ್ದರು. ಕಾಕ್‌ಟೇಲ್ ಪಾರ್ಟಿ ಕೊಡಿಸಿ ಎಂಬುದು ಅವರ ನೇರ ಬೇಡಿಕೆಯಾಗಿತ್ತು. ನಾನಿನ್ನೂ ಆಗ ಡ್ಯೂಟಿಯಲ್ಲಿದ್ದೆ. ಅಷ್ಟು ಬೇಗ ಊಟ ಮಾಡುವ ಅಭ್ಯಾಸವೂ ಇರಲಿಲ್ಲ. `ಇಷ್ಟು ಬೇಗ ಊಟ ಮಾಡೋದು ಹೇಗೆ? ರಾತ್ರಿ 9.30ರ ನಂತರ ಆದರೆ ಆಗಬಹುದು~ ಎಂದೆ. ಅವರು ಮುಖ ಮುಖ ನೋಡಿಕೊಂಡರು. ಡ್ಯೂಟಿಯಲ್ಲಿರುವುದರಿಂದ ಈಗ ಬರುವುದು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿ ಕಳುಹಿಸಿದೆ.

ಕೆಲವು ದಿನಗಳ ನಂತರ ಮಂಗಳೂರು ಮೂಲದ ದಿನಪತ್ರಿಕೆಯೊಂದರ (ಈಗ ಆ ಪತ್ರಿಕೆ ಇಲ್ಲ) ಮುಖಪುಟದಲ್ಲಿ ನನ್ನನ್ನು ಸಿಬಿಐನವರು ಬಂಧಿಸಿದ್ದಾರೆ ಎಂಬ ಸುದ್ದಿ ಪ್ರಕಟವಾಯಿತು. ಅದನ್ನು ನಾನು ಮೊದಲು ಗಮನಿಸಿರಲಿಲ್ಲ. ಅದನ್ನು ಓದಿದ ಹಿರಿಯ ಅಧಿಕಾರಿಗಳು ನನಗೆ ಫೋನ್ ಮಾಡಿ, `ಎಲ್ಲಿದ್ದೀರಿ? ಕ್ಷೇಮವೇ?~ ಎಂದೆಲ್ಲಾ ಮೊದಲು ಪ್ರಶ್ನಿಸಿ, ಆಮೇಲೆ ಆ ಸುದ್ದಿಯ ಪ್ರಸ್ತಾಪ ಮಾಡಿದರು. ಓದಿ, ನನಗೂ ಗಾಬರಿಯಾಯಿತು.

ನಾನು ಆ ಸುದ್ದಿ ಬಂದ ದಿನ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ಕಾರ್ಯವೈಖರಿಯನ್ನು ಗಮನಿಸಿದ್ದ ಹಿರಿಯ ಅಧಿಕಾರಿಗಳು ಇದು ಪತ್ರಕರ್ತರ ಅಸಹ್ಯಕರವಾದ ಧೋರಣೆ. ಮಾನನಷ್ಟ ಮೊಕದ್ದಮೆ ಹೂಡಲೇಬೇಕು ಎಂದು ನನಗೆ ಕಿವಿಮಾತು ಹಾಕಿದರು. ಅಂತೆಯೇ ನಾನು ಮಾನನಷ್ಟ ಪ್ರಕರಣ ದಾಖಲಿಸಿದೆ.

ಮೇಯೋಹಾಲ್ ಕೋರ್ಟ್‌ನ ಹನ್ನೊಂದನೇ ನ್ಯಾಯಾಲಯದಲ್ಲಿ ದೂರು ದಾಖಲಿಸಿ, ನನಗೆ ಸಿಕ್ಕಿರುವ ಗೌರವ- ಮನ್ನಣೆಗಳನ್ನೂ ಹೇಳಿ, ನನಗೆ ನೋವಾಗಿರುವ ಸಂಗತಿಯನ್ನು ನ್ಯಾಯವಾದಿಗಳ ಎದುರು ಅರುಹಿದೆ. ನನ್ನ ಓರಗೆಯವರು, ಸಂಬಂಧಿಕರು ಎಲ್ಲರೂ ನೋವುಂಡಿದ್ದಾರೆ ಎಂದೂ ಹೇಳಿದೆ. ಭೂಗತಲೋಕದ ಪಾತಕಿಗಳು, ಪೊಲೀಸ್ ಇಲಾಖೆಯಲ್ಲಿರುವ ಕೆಟ್ಟ ಮನಸ್ಸಿನವರು ಸೇರಿ ನನ್ನ ವಿರುದ್ಧ ಇಲ್ಲಸಲ್ಲದ ಸುದ್ದಿ ಪ್ರಕಟವಾಗಲು ಕಾರಣರಾಗಿದ್ದಾರೆಂಬುದು ಗೊತ್ತಾಯಿತು.

ಸಂಪಾದಕರು, ಪ್ರಕಾಶಕರು ಹಾಗೂ ಸುದ್ದಿ ಬರೆದ ವರದಿಗಾರರಿಗೆ ಕೋರ್ಟ್ ಸಮನ್ಸ್ ಜಾರಿಮಾಡಿತು. ಕಾಲಕಾಲಕ್ಕೆ ಅವರು ಕೋರ್ಟಿಗೆ ಬರುತ್ತಿದ್ದರು. ವಿಚಾರಣೆ ಪ್ರಾರಂಭವಾದ ದಿನ ಅವರ ಪರ ವಾದ ಮಾಡಲು ಬಂದ ವಕೀಲರನ್ನು ನೋಡಿ ಆಚ್ಚರಿಗೊಂಡೆ. ಅವರೇ ಹಿರಿಯ ವಕೀಲರಾದ ಬಾಲಕೃಷ್ಣ. ನನಗೆ ಚೆನ್ನಾಗಿ ಪರಿಚಯ ಇದ್ದವರು. ನನ್ನ ಬಗ್ಗೆ ಎಲ್ಲವನ್ನೂ ತಿಳಿದುಕೊಂಡಿದ್ದವರು. ಅವರೇ ನನ್ನ ವಿರುದ್ಧ ವಾದ ಮಾಡಲು ಬಂದಿದ್ದಾರೆಂದುಕೊಂಡು ತುಂಬಾ ಬೇಸರವಾಯಿತು. ಅವರು ಕಡತಗಳನ್ನು ಪರಿಶೀಲಿಸಲು ಇನ್ನಷ್ಟು ಕಾಲಾವಕಾಶ ಬೇಕು ಎಂದು ಕೇಳಿಕೊಂಡರು. ವಿಚಾರಣೆಗೆ ಇನ್ನೊಂದು ದಿನಾಂಕ ನಿಗದಿಯಾಯಿತು.

ಆ ದಿನ ಬಾಲಕೃಷ್ಣ ಅವರು ನನ್ನನ್ನು ಪಾಟೀ ಸವಾಲಿಗೆ ಒಳಪಡಿಸಬೇಕಿತ್ತು. ನನ್ನ ಬಳಿಗೆ ನಗುನಗುತ್ತಲೇ ಬಂದರು. ಸ್ವಲ್ಪ ಹೊತ್ತು ಸುಮ್ಮನೆ ನಿಂತರು. ಮ್ಯಾಜಿಸ್ಟ್ರೇಟರು ಬೇಗ ಸವಾಲು ಕೇಳಿ ಮುಗಿಸಿ ಎಂದರು. `ಈ ಕೇಸನ್ನು ನಾನು ನಡೆಸುವುದೇ ಇಲ್ಲ~ ಎಂದು ಬಾಲಕೃಷ್ಣ ಹೇಳಿಬಿಟ್ಟರು. `ಮತ್ತೆ ಇಷ್ಟು ದಿನ ಸುಮ್ಮನಿದ್ದಿರಲ್ಲ?~ ಎಂಬ ಪ್ರಶ್ನೆ ಮ್ಯಾಜಿಸ್ಟ್ರೇಟರಿಂದ ಬಂತು. ತಾವು ಕಡತಗಳನ್ನು ಪರಿಶೀಲಿಸಿದ್ದೇ ಇತ್ತೀಚೆಗೆ. ಅದನ್ನು ಓದಿದ ನಂತರ ಶಿವರಾಂ ಅವರಿಗೆ ಎಷ್ಟು ನೋವಾಗಿದೆ ಎಂಬುದು ಗೊತ್ತಾಯಿತು.

ಪತ್ರಿಕೆಯವರು ಅವರ ವಿರುದ್ಧ ಹೀಗೆಲ್ಲಾ ಬರೆಯಬಾರದಿತ್ತು. ತಪ್ಪಾಗಿದೆ ಎಂದು ಹೇಳಿದರು. ಮ್ಯಾಜಿಸ್ಟ್ರೇಟರು ಒಂದು ಕ್ಷಣ ತಬ್ಬಿಬ್ಬಾದರು. ಪತ್ರಿಕೆಯ ಪ್ರಕಾಶಕರು, ಸಂಪಾದಕರು ಹಾಗೂ ವರದಿಗಾರರು ಗಾಬರಿಗೊಳಗಾದರು. ಮ್ಯಾಜಿಸ್ಟ್ರೇಟರು ಅಲ್ಲೇ ಈ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದರು. ತಮ್ಮ ಪತ್ರಿಕೆಯಲ್ಲಿ ಕ್ಷಮಾಪಣೆ ಕೇಳುವುದಾಗಿ ಪ್ರಕಾಶಕರು, ಸಂಪಾದಕರು ಒಪ್ಪಿಕೊಂಡರು. ಬಾಕ್ಸ್ ಮಾಡಿ ಪತ್ರಿಕೆಯಲ್ಲಿ ಕ್ಷಮಾಪಣೆ ಪ್ರಕಟಿಸಿದರು. ನಾನೂ ಕೇಸನ್ನು ವಾಪಸ್ ಪಡೆದೆ.

ಆ ವರದಿಗಾರರು ಆಮೇಲೆ ತಮಗೆ ಆ ಸುದ್ದಿ ಕೊಟ್ಟ ಪತ್ರಕರ್ತರು ಯಾರೆಂದು ತಿಳಿಸಿದರು. ಸುದ್ದಿ ಕೊಟ್ಟ ಆ ಪತ್ರಕರ್ತರಿಗೂ ವರದಿ ಪ್ರಕಟವಾದ ಪತ್ರಿಕೆಗೂ ಸಂಬಂಧವೇ ಇರಲಿಲ್ಲ. ಪರಿಶೀಲಿಸದೆ ವರದಿ ಬರೆದದ್ದಕ್ಕೆ ಪತ್ರಿಕೆಯ ವರದಿಗಾರರು ನೊಂದುಕೊಂಡರು. ಡಿನ್ನರ್ ಕೇಳಲು ಬಂದಿದ್ದ ಪತ್ರಕರ್ತರು ಕೂಡ ಇಂಥ ಇಲ್ಲಸಲ್ಲದ ಸುದ್ದಿಗಳನ್ನು ಬೇರೆಯವರ ಕಿವಿಗೆ ಹಾಕಿ, ಪ್ರಾಮಾಣಿಕ ಅಧಿಕಾರಿಗಳ ವಿರುದ್ಧ ಹುನ್ನಾರ ಹೂಡುವವರೇ ಆಗಿದ್ದರು.
***
ಪೊಲೀಸ್ ಇಲಾಖೆಯಲ್ಲಿ ಸಹೋದ್ಯೋಗಿಗಳ ನಡುವೆ ಆರೋಗ್ಯಕರ ಪೈಪೋಟಿ ಇರುತ್ತದೆ. ಅದು ಇದ್ದಾಗಲೇ ಅಪರಾಧಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಿಡಿಯುವುದು ಸಾಧ್ಯ. ಎರಡು ಬಣಗಳ ನಡುವೆ ಆರೋಗ್ಯಕರ ಸ್ಪರ್ಧೆ ಇದ್ದು, ಸಾಕಷ್ಟು ಪಾತಕಿಗಳನ್ನು ಬಗ್ಗುಬಡಿದಾಗ ಸಮಾಜಕ್ಕೆ ಒಳಿತೇ ಆಗುತ್ತದೆ. ಆದರೆ, ಈ ಸ್ಪರ್ಧೆಯಲ್ಲೇ ಇಲ್ಲದ ಇನ್ನೊಂದು ಬಣ ಇಲಾಖೆಯಲ್ಲಿ ಇರುತ್ತದೆ.
 
ಅದು ಹೊಟ್ಟೆಕಿಚ್ಚು ಪಡುವ ಬಣ. ಯಾರು ಶ್ರದ್ಧೆಯಿಂದ ಮುನ್ನುಗ್ಗಿ ಕೆಲಸ ಮಾಡುತ್ತಾರೋ, ಹೆಚ್ಚು ಪ್ರಕರಣಗಳನ್ನು ಪತ್ತೆ ಮಾಡುತ್ತಾರೋ ಅಂಥವರ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡುವುದೇ ಈ ಬಣದ ಕೆಲಸ. ತಾವೇ ಅಪರಾಧಿಗಳಿಗೆ ಕುಮ್ಮಕ್ಕು ಕೊಟ್ಟು ಅವರಿಂದ ಅಪರಾಧ ಮಾಡಿಸಿ ಹಿಡಿದು ದೊಡ್ಡವರಾಗುತ್ತಾರೆ ಎಂದು ಮಾತನಾಡುವ ಮಂದಿಯೂ ಈ ಬಣದಲ್ಲಿ ಇದ್ದಾರೆ. ಜೀವದ ಹಂಗು ತೊರೆದು ಕೆಲಸ ಮಾಡುವವರನ್ನು ಅಧಿಕಾರಿಗಳು ಬೆಂಬಲಿಸುವುದು ಸಹಜ. ಅದನ್ನು ಕೂಡ ಕೈಲಾಗದವರು ಅನುಮಾನಿಸುತ್ತಾರೆ. ತಮಗೂ ಸೌಕರ್ಯ ಕೊಟ್ಟರೆ ಪಾತಕಿಗಳನ್ನು ಬಗ್ಗುಬಡಿದೇವು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ.
ಅಂಥವರು ಕತ್ತಲನ್ನು ಕಂಡರೆ ಕಿರುಚಿಕೊಳ್ಳುತ್ತಾರೆ. ಮತ್ತೆ ಕೆಲವರು ವೃತ್ತಿಬದುಕಿನಲ್ಲೇ ಸಾಹಸಕ್ಕೆ ಕೈಹಾಕುವುದಿಲ್ಲ. ಅಧಿಕಾರಿಗಳಿಗೆ ಬಕೆಟ್ ಹಿಡಿಯುತ್ತಾ ತಮಗೆ ಬೇಕಾದ ಸೌಕರ್ಯಗಳನ್ನು ದಕ್ಕಿಸಿಕೊಳ್ಳುತ್ತಾ ಮೇಲೇರುತ್ತಾರೆ. ಇವರೆಲ್ಲಾ ಆಸ್ಥಾನದ ವಿದೂಷಕರಂತೆ. ಪೊಲೀಸ್ ಇಲಾಖೆಯಲ್ಲೇ ಅಂಥವರಿಗೆ ಮರ್ಯಾದೆ ಇರುವುದಿಲ್ಲ.
***
ಅಶೋಕನಗರ ಪೊಲೀಸ್ ಠಾಣೆಯಲ್ಲಿ ನಾನು ಇನ್ಸ್‌ಪೆಕ್ಟರ್ ಆಗಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕಮಿಷನರ್ ಕೆಂಡಾಮಂಡಲವಾದರು. ಅಪರಾಧ ಪ್ರಮಾಣ ಹೆಚ್ಚಾಗುತ್ತಿದೆಯೆಂದೂ ಇನ್ಸ್‌ಪೆಕ್ಟರ್‌ಗಳು ಸೂಕ್ತ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲವೆಂದೂ ಮಾತನಾಡಿದರು. ಕಮಿಷನರ್ ಎದುರಲ್ಲಿ ಆಗೀಗ ಪೆರೇಡ್ ನಡೆಯುತ್ತದೆ.

ಕಾನ್‌ಸ್ಟೇಬಲ್‌ಗಳು ಆ ಪೆರೇಡ್‌ನಲ್ಲಿ ಭಾಗವಹಿಸುತ್ತಾರೆ. ಪ್ಲಟೂನ್‌ಗಳನ್ನು ಸಬ್ ಇನ್ಸ್‌ಪೆಕ್ಟರ್‌ಗಳು, ಇನ್ಸ್‌ಪೆಕ್ಟರ್‌ಗಳು ನಿಯಂತ್ರಿಸುತ್ತಾರೆ. ಆದರೆ, ಕಮಿಷನರ್ ಈ ಸಲ ಪೆರೇಡ್‌ನಲ್ಲಿ ಕಾನ್‌ಸ್ಟೇಬಲ್‌ಗಳ ಸ್ಥಾನದಲ್ಲಿ ಇನ್ಸ್‌ಪೆಕ್ಟರ್‌ಗಳು ನಿಲ್ಲಲಿ ಇನ್ಸ್‌ಪೆಕ್ಟರ್‌ಗಳ ಜಾಗದಲ್ಲಿ ಎಸಿಪಿಗಳು ನಿಲ್ಲಲಿ ಎಂದುಬಿಟ್ಟರು.
 
ಪ್ರಾಮಾಣಿಕರು, ಸ್ವಾಭಿಮಾನಿಗಳಿಗೆ ಇದು ಅವಮಾನದ ಸಂಗತಿ. ಬೆಂಗಳೂರಿನ ಎಲ್ಲಾ ಇನ್‌ಸ್ಪೆಕ್ಟರ್‌ಗಳೂ ಪೆರೇಡ್‌ನಲ್ಲಿ ಪಾಲ್ಗೊಳ್ಳಬೇಕಿದ್ದರಿಂದ ಬೇಸರ ಇದ್ದವರೂ ವಿಧಿಯಿಲ್ಲದೆ ಪೆರೇಡ್‌ನಲ್ಲಿ ಭಾಗವಹಿಸಿದ್ದಾಯಿತು. ಪೆರೇಡ್ ನಂತರ ಕಮಿಷನರ್ ಉಪಹಾರ ಕೊಡಿಸುವುದು ರೂಢಿ. ಆ ದಿನ ಉಪಹಾರಕ್ಕೆ ನಾನೂ ಸೇರಿದಂತೆ 30 ಇನ್‌ಸ್ಪೆಕ್ಟರ್‌ಗಳು ಹೋಗಲಿಲ್ಲ.

ಕಮಿಷನರ್‌ಗೆ ಕಿವಿಯೂದಿದ್ದ ಕೆಲವರು ಪೆರೇಡ್ ಅದ್ಭುತ ಅನುಭವ ಕೊಟ್ಟಿತು ಎಂದು ಹೇಳುತ್ತಿದ್ದರು. ಯಾರು ಉಪಹಾರಕ್ಕೆ ಹೋಗಲಿಲ್ಲವೋ ಅವರಲ್ಲಿ 20 ವರ್ಷಕ್ಕಿಂತ ಹೆಚ್ಚು ಸೇವಾವಧಿ ಆಗಿರುವವರೇ ಹೆಚ್ಚಾಗಿದ್ದಾರೆಂದೂ, ಅವರನ್ನೆಲ್ಲಾ ಬೇರೆಡೆಗೆ ವರ್ಗಾವಣೆ ಮಾಡಬೇಕೆಂದೂ ಯಾರೋ ಕಮಿಷನರ್‌ಗೆ ಕುಮ್ಮಕ್ಕು ಕೊಟ್ಟರು.

ಅಂತೆಯೇ ಕಮಿಷನರ್ ಒಂದಿಷ್ಟು ಪೊಲೀಸರ ವರ್ಗಾವಣೆಗೆ ಪಟ್ಟಿ ಸಿದ್ಧಪಡಿಸಿದರು. ಉಪಹಾರಕ್ಕೆ ಹೋಗದೆ ನಾವೆಲ್ಲಾ ದಂಗೆ ಎದ್ದಿದ್ದೇವೆ ಎಂಬ ಭಾವನೆ ಅವರಿಗಿತ್ತು. ಆ ಪಟ್ಟಿಯಲ್ಲಿ ನನ್ನ ಹೆಸರೂ ಇತ್ತು. ಆದರೆ, ನಗರದ ಆಯಕಟ್ಟಿನ ಜಾಗಗಳನ್ನು, ಭೂಗತಲೋಕದವರ ನೆಲೆಗಳನ್ನು ಅರಿತಿದ್ದ ಅನೇಕ ಇನ್ಸ್‌ಪೆಕ್ಟರ್‌ಗಳು ವರ್ಗಾವಣೆಯಾಗುವುದು ಹಿರಿಯ ಅಧಿಕಾರಿಗಳಿಗೆ ಬೇಕಿರಲಿಲ್ಲ. ಕಮಿಷನರ್ ನಿರ್ಧಾರಕ್ಕೆ ಅಂಥವರ ಬೆಂಬಲವಿರಲಿಲ್ಲ.

ಕೊನೆಗೊಂದು ದಿನ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿದ್ದ ಶ್ರೀನಿವಾಸುಲು ನನಗೆ ಫೋನ್ ಮಾಡಿ, `ಹ್ಯಾಪಿ ನ್ಯೂಸ್, ನೀವು ಟ್ರಾನ್ಸ್‌ಫರ್ ಆಗ್ತಾ ಇಲ್ಲ. ನಿಮ್ಮ ಸರ್ವಿಸ್ ಆಗಿರುವುದು 19 ವರ್ಷ ಅಷ್ಟೆ. ನೀವು ಇನ್ನೂ ಆರು ತಿಂಗಳು ಬೆಂಗಳೂರಿನಲ್ಲೇ ಇರುತ್ತೀರಿ~ ಎಂದರು. ವರ್ಗಾವಣೆ ಆಗುವುದಾದರೆ ಆಗಲಿ ಎಂದು ನಾನು ಹೇಳಿದೆ. ಅದಕ್ಕೆ ಅವರು, `ನಿಮ್ಮಂಥವರೆಲ್ಲಾ ನಗರಕ್ಕೆ ಬೇಕು. ಕ್ರೈಮ್ ಪ್ರಮಾಣ ತಗ್ಗಿಸಲು~ ಅದು ಅನಿವಾರ್ಯ ಎಂದರು. ನನಗೆ ಹೆಮ್ಮೆ ಎನ್ನಿಸಿತು. ಆಗ ನನ್ನ ವರ್ಗಾವಣೆ ಆಗಲಿಲ್ಲ.

ಮುಂದಿನ ವಾರ: ನನ್ನ ಮನೆಯಲ್ಲಿ ಮೂಡಿದ ಬೇಸರ.
ಶಿವರಾಂ ಅವರ ಮೊಬೈಲ್ ಸಂಖ್ಯೆ: 9448313066

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT