ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾರಬ್ಧಗಳಿಗೆ ಅಂತ್ಯಹಾಡಿದ ‘ಕುವೆಂಪು ಯುಗ’

Last Updated 2 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಎರಡು ವಾರಗಳ ಹಿಂದೆ ‘ಧಾರವಾಡ ಸಾಹಿತ್ಯ ಸಂಭ್ರಮ’ದಲ್ಲಿ ಭಾಗವಹಿಸಿದ್ದೆ. ಇತ್ತೀಚಿನ ದಿನಗಳಲ್ಲಿ ಬಹಳ ಅಚ್ಚುಕಟ್ಟಾಗಿ ನಡೆದ ಒಂದು ಸಾಂಸ್ಕೃತಿಕ ಹಬ್ಬ. ಒಂದೇ ಸೂರಿ­ನಡಿ ನಾಡಿನ ಹಿರಿಯ ಕವಿ, ಸಾಹಿತಿ, ಸಂಶೋಧಕ­ರನ್ನು ನೋಡುವ, ಕೇಳುವ ಅವಿಸ್ಮರಣೀಯ ಅನುಭವ.

ಮೂವತ್ತೇಳು ವರ್ಷಗಳ ಹಿಂದೆ ನನ್ನ ವೃತ್ತಿ ಜೀವನ ಪ್ರಾರಂಭಿಸಿದ ಜಿಲ್ಲೆ ಧಾರವಾಡ. ಕೆ.ವಿ. ಇರ್ನಿರಾಯರು ಜಿಲ್ಲಾಧಿಕಾರಿಯಾಗಿ ನನಗೆ ಗುರುಕುಲ ಮಾದರಿಯಲ್ಲಿ ತರಬೇತಿ ನೀಡಿ ಎಲ್ಲ ಆಡಳಿತ ವಿಷಯಗಳ ಒಳನೋಟದ ದರ್ಶನ ಮಾಡಿಸಿದ್ದರು. ಮಿತಭಾಷಿ, ವಿಶೇಷ ಸಮಯ­ಪ್ರಜ್ಞೆಯ ಇರ್ನಿರಾಯರು ನನಗೆ ಸದಾ ಪ್ರಾತಃ­ಸ್ಮರ­ಣೀಯರು. ಆಡಳಿತದಲ್ಲಿ ‘ಕೇಳಿಸಿಕೊಳ್ಳು­ವುದು’ ಎಷ್ಟು ಮುಖ್ಯ ಎಂದು ತಿಳಿಸಿದವರು.

ತರಬೇತಿ ಸಮಯದಲ್ಲಿ ಹುಬ್ಬಳ್ಳಿಯ ರೆವಿನ್ಯೂ ಇನ್ಸ್‌ಪೆಕ್ಟರ್ ದೇಶಪಾಂಡೆ ನನ್ನ ಸ್ಥಳೀಯ ಅವಶ್ಯಕತೆಗಳನ್ನು ನಿರ್ವಹಿಸುತ್ತಿದ್ದರು. ಈ ದೇಶಪಾಂಡೆ ಒಮ್ಮೆ ನನಗೆ ‘ಸರ್, ನಿಮ್ಮ ಅಡ್ಡ ಹೆಸರೇನ್ರಿ’ ಎಂದರು. ಅಲ್ಲಿಯತನಕ ನನಗೆ ಈ ಅಡ್ಡಹೆಸರಿನ ಮಹತ್ವ, ಮಹಿಮೆ ತಿಳಿದಿರಲಿಲ್ಲ. ‘ಈಗಲೇ ಇಷ್ಟೊಂದು ಉದ್ದವಿರುವ ನನ್ನ ಹೆಸರಿಗೆ ಮತ್ತೊಂದು ಅಡ್ಡ ಹೆಸರೇ’ ಎಂದು ಗಲಿಬಿಲಿಗೊಂಡೆ.

ಉತ್ತರ ಕರ್ನಾಟಕ ಭಾಗದ ಅಡ್ಡ ಹೆಸರುಗಳ ಒಂದು ಸುದೀರ್ಘ ಪಟ್ಟಿಯನ್ನೇ ಬಿಡುಗಡೆ ಮಾಡಿದರು. ಮೆಣಸಿನಕಾಯಿ­ಯಂತಹ ಖಾರದ ಹೆಸರಿನಿಂದ ಹಿಡಿದು ಕಣ್ಣೀರು ತರಿಸುವ ಉಳ್ಳಾಗಡ್ಡಿ, ಸಿಹಿಯೆನಿಸುವ ಬೆಲ್ಲದ, ಲಿಂಬಿಕಾಯಿ, ಒಣಕುದುರಿ, ಕರಡಿ, ಹೋರಿ, ಕೋರಿ, ಸಂಗಟಿ,  ಚೂರಿ, ಈಟಿ, ಕೊಡ್ಲಿ.. ಹೀಗೆ ಬಗೆಬಗೆಯ ಹೆಸರುಗಳು. ಅವುಗಳು ಎಷ್ಟೊಂದು ಆಕರ್ಷಕ ಮತ್ತು ಕುತೂಹಲಕಾರಿ!

ದಕ್ಷಿಣ ಭಾಗದ ಜನರ ಹೆಸರುಗಳನ್ನು ನೆನೆದು ತುಂಬಾ ಖಿನ್ನನಾದೆ. ಇವೇನು ಹೆಸರುಗಳೇ? ಹೆಸರುಗಳಿಗೆ ಒಂದು ಕ್ಯಾರೆಕ್ಟರ್ ಸಹ ಇಲ್ಲ ಎನಿಸಿತು. ನನ್ನ ಹೆಸರನ್ನೇ ನೆನೆದು ತುಂಬಾ ನಿರಾಶನಾದೆ. ಪಾಂಡುರಂಗನಿಂದ ಪ್ರಾರಂಭ­ವಾಗಿ ವಿಠಲನಾ­ಗಿದ್ದ ನನ್ನ ಹೆಸರು ನಮ್ಮೂರಿನ ಹೆಡ್ ಮಾಸ್ಟರ್ ಭೀಮರಾಯರಿಂದಾಗಿ ವಿಠಲ­ಮೂರ್ತಿ­ಯಾಯ್ತು. ಬರೀ ವಿಠಲ ಎನ್ನುವ ಹೆಸರು ಯಾವುದೋ ಮರಾಠಿ ಟೇಲರ್ ಹೆಸರಿ­ನಂತಿದೆ ಎಂದು ನನ್ನ ಹೆಸರಿಗೆ ಮೂರ್ತಿ ಸೇರಿಸಿಬಿಟ್ಟರು. ನನ್ನ ಊರಿನವರು ಈಗಲೂ ಕರೆಯುವ ಮತ್ತೊಂದು ಹೆಸರು ಪುಟ್ಟಸ್ವಾಮಿ,  ಪುಟ್ಟ­ಸ್ವಾ­ಮಣಯ್ಯ!

ಪಾಸ್‌ಪೋರ್ಟ್‌ನಲ್ಲಿ ಐರವಳ್ಳಿ ಮಲ್ಲೇಗೌಡ ವಿಠಲಮೂರ್ತಿ ಎನ್ನುವ ಹೆಸರಿದೆ. ನನ್ನ ಮೊದಲ ಹೆಸರನ್ನು ಎಲ್ಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ‘ಐರವಳ್ಳಿ, ಇರವಳ್ಳಿ’ ಎಂದು ವಿಧ ವಿಧವಾಗಿ, ಮಧುರವಾಗಿ ಕೂಗುತ್ತಾರೆ. ನನ್ನನ್ನೇ ಕರೆಯುತ್ತಿರುವುದು ಎಂದು ತಿಳಿದು­ಕೊಳ್ಳಲು ಬಹಳ ಸಮಯ ಹಿಡಿಯುತ್ತದೆ. ಹೊರದೇಶಗಳಲ್ಲಿ ನಾನು ಈಗ ‘ಮಿ. ಐರವಳ್ಳಿ’.

ಇವೆಲ್ಲ ಹೆಸರುಗಳ ಸಂಕೀರ್ಣತೆಯ ಅರಿವಿದ್ದ ನನಗೆ ಕನಿಷ್ಠಪಕ್ಷ ನನ್ನ ಮಕ್ಕಳಿಗಾದರೂ ಕರೆ­ಯಲು ಕಷ್ಟವಾಗದ ಸರಳ ಹೆಸರುಗಳನ್ನು ಇಡ­ಬೇಕೆಂದು ಅವರು ಹುಟ್ಟುವ ಮೊದಲೇ ತೀರ್ಮಾನಿ­ಸಿ­ಬಿಟ್ಟಿದ್ದೆ. ಮಗಳಿಗೆ ‘ಶ್ರೀಗೌರಿ’, ಮಗನಿಗೆ ‘ಶ್ರೀರಾಮ’ ಎಂದು ಅಂದುಕೊಂಡಂತೆ ಹೆಸರಿಟ್ಟೆ. ನನ್ನ ಮಗಳನ್ನು ಸಹಜವಾಗಿ ‘ಗೌರಿ’ ಎಂದು ಕರೆಯುತ್ತಾರೆ. ‘ಅಪ್ಪ, ಅದು ಹಸುವಿನ ಹೆಸರೆಂದು ಶಾಲೆಯಲ್ಲಿ ಎಲ್ಲ ರೇಗಿಸುತ್ತಾರೆ’ ಎನ್ನುತ್ತಿ­ದ್ದಳು. ಈಗ ಅಮೆರಿಕದಲ್ಲಿ ಹುಟ್ಟಿದ ಅವಳ ಮಗಳಿಗೆ ‘ರಾಧ’ ಎಂದು ಹೆಸರಿಟ್ಟಿದ್ದಾಳೆ. ನನ್ನ ಮಗ ‘ಅಯೋಧ್ಯೆಯ ಕಾರಣಕ್ಕಾಗಿ ವಿವಾದಕ್ಕೆ ಒಳಗಾದ ಶ್ರೀರಾಮನ ಹೆಸರು ನನಗೇಕೆ’ ಎನ್ನುತ್ತಾನೆ.

ಬೇಸಿಗೆಯ ರಜೆಯಲ್ಲಿ ನನ್ನ ಸಂಸಾರವನ್ನು ನನ್ನ ತಂದೆ-–ತಾಯಿ ಇರುತ್ತಿದ್ದ ಕೀತೂರಿನಲ್ಲಿ ಬಿಟ್ಟು ಬರುತ್ತಿದ್ದೆ. ಅದೇ ಸಮಯಕ್ಕೆ ನನ್ನ ಅಕ್ಕ-–ತಂಗಿಯರ ಮಕ್ಕಳು ಸಹ ರಜೆಗೆ ಬರುತ್ತಿದ್ದರು. ಏಳೆಂಟು ಮಕ್ಕಳ ಆಟ-–ಜಗಳ, ಕೆಲಸದವರನ್ನು ಅವರು ಪೀಡಿಸುತ್ತಿದ್ದ ರೀತಿ ಎಲ್ಲವೂ ನಮ್ಮ ಅಪ್ಪ–ಅಮ್ಮನಿಗೆ ಸಂತೋಷದ ಕ್ಷಣಗಳು. ಹೀಗೆ ರಜೆಗೆ ಹೋಗಿದ್ದ ಮನೆಯವರನ್ನು ಒಮ್ಮೆ ಕರೆತರಲು ಹೋಗಿದ್ದೆ. ನನ್ನ ಮಗಳು ಶ್ರೀಗೌರಿ ‘ಅಪ್ಪ ಮನೆಗೆ ಕೆಲಸಕ್ಕೆ ಬರುತ್ತಾರಲ್ಲ ಹುಚ್ಚಮ್ಮ, ಅವರಿಗೆ ಅವರ ಅಪ್ಪ-–ಅಮ್ಮ ಯಾಕೆ ಆ ಹೆಸರಿಟ್ಟಿದ್ದಾರಪ್ಪ’ ಎಂದಳು.  ಅವಳಿಗೆ ಏನೋ ಸಮಾಧಾನ ಹೇಳಿದೆ. ಆದರೆ, ಇಷ್ಟು ವರ್ಷ ನನಗೆ ಏನೂ ಅನಿಸದಿದ್ದ ಆ ಒಂದು ಹೆಸರಿನ ಬಗ್ಗೆ ನನ್ನ ಮಗಳು ದುಗುಡಗೊಂಡಿದ್ದ ಬಗೆಗೆ ಯೋಚಿಸಿದೆ.

ಇದೊಂದೇ ಹೆಸರಲ್ಲ. ನಮ್ಮ ಊರಿನ ಆಸುಪಾಸಿನಲ್ಲಿ ಈ ರೀತಿಯ ಅಮಾನವೀಯ ಹೆಸರುಗಳಿಂದ ಒಂದು ತಲೆಮಾರಿನ ಜನ ಶಾಪಗ್ರಸ್ತರಾಗಿದ್ದನ್ನು ನೆನೆದು ಗಾಬರಿಯಾದೆ. ಒಂದೊಂದು ಹೆಸರನ್ನೂ ನೆನೆದು ಅರ್ಥೈಸಲು ಹೋದಾಗ ನಡೆದು ಹೋಗಿದ್ದ ದುರಂತದ ಅರಿವಾಗಿತ್ತು. ನಮ್ಮೂರಿನ ಜಾತಕದ ಜೋಯಿಸ­ರುಗಳಿಗೆ ಒಳ್ಳೆಯ ಹೆಸರುಗಳು ಗೊತ್ತಿರಲಿಲ್ಲ ಎಂದಲ್ಲ. ಕೇವಲ ಹೆಸರಿನಿಂದಲೇ ಒಂದು ಸಮು­ದಾಯವನ್ನು ಗುರುತಿಸಬಹುದಾದ,  ಬೇರ್ಪಡಿ­ಸ­ಬಹುದಾದ ಜಾಣ್ಮೆ ಅವರಲ್ಲಿ ಎದ್ದು ಕಾಣುತ್ತಿತ್ತು.

ಹುಚ್ಚೇಗೌಡ, ಹೊಟ್ಟೇಗೌಡ, ಹುಚ್ಚಮ್ಮ, ಕಾಳೇಗೌಡ, ಅಮಾಸೆಗೌಡ... ಹೀಗೆ ತರಾವರಿ ಹೆಸರುಗಳು. ಒಂದೇ ಊರಿನಲ್ಲಿ ಹೊಟ್ಟೇಗೌಡ ಎಂಬ ಹೆಸರಿನವರು ನಾಲ್ಕಾರು ಜನರು ಇರುತ್ತಿದ್ದರು. ಅವರ ಹೊಟ್ಟೆ ಸದಾ ಬೆನ್ನಿಗೆ ಅಂಟಿಕೊಂಡಿದ್ದರೂ ಅವರು ಹೊಟ್ಟೇಗೌಡ್ರೆ! ಹುಚ್ಚೇಗೌಡ ಎಂಬ ಹೆಸರಿನ ನಮ್ಮ ಸಂಬಂಧಿ­ಕರನ್ನು ‘ಈಗ ಬಂದ್ರ ಹುಚ್ ಮಾವ’ ಎಂತಲೂ ಅದೇ ರೀತಿ ‘ಹುಚ್ ಚಿಕ್ಕಪ್ಪ, ಹುಚ್ ದೊಡ್ಡಪ್ಪ’ ಎಂದೂ ಆದರಿಸುತ್ತಿದ್ದರು. ಅವರೂ ಏನೊಂದು ಭಾವಿಸದೆ ಬಹು ಖುಷಿಯಿಂದ ಕೈಕಾಲು ತೊಳೆದುಕೊಂಡು ಮನೆಯೊಳಗೆ ಬರುತ್ತಿದ್ದರು.

ಅದೇ ರೀತಿ ನಮ್ಮೂರಿನ ಜೋಯಿಸರ ಸೃಜನಶೀಲತೆಯಿಂದ ಸೃಷ್ಟಿಯಾದ ಇನ್ನೊಂದು ಹೆಸರು ಹೊಟ್ಟೇಗೌಡ. ಅವರನ್ನು ‘ಹೊಟ್ ಮಾವ, ಹೊಟ್ ಚಿಕ್ಕಪ್ಪ’ ಎಂದು ಕರೆಯಬೇಕಾ­ಗಿತ್ತು. ಒಂದೇ ಹೆಸರಿಗೆ ಎರಡು ಅರ್ಥ ಬರುವ ಹೆಸರು! ಹೊಟ್ಟೆ ಎಂದು ಒಂದರ್ಥವಾದರೆ ಬೇರೆಯವರು ಕರೆಯುವಾಗ ‘ಹೊಟ್ ಮಾವ’ ಅಂದರೆ ಕಿವುಡನೆಂಬ ಅರ್ಥ ಬರುತ್ತಿತ್ತು. ಆ ಕಾಲದಲ್ಲಿ ಹೆಸರು ಬದಲಾಯಿಸಿಕೊಳ್ಳುವ ಅನುಕೂಲವಿಲ್ಲದ್ದರಿಂದ ಇಡೀ ಜೀವಮಾನ ಅದೇ ಹೆಸರಿನಲ್ಲಿ ಪ್ರಖ್ಯಾತರಾಗಬೇಕಿತ್ತು, ಹೆಸರುವಾಸಿ ಆಗಬೇಕಿತ್ತು! ಇತ್ತೀಚಿನ ವರ್ಷಗಳಲ್ಲಿ ನಮ್ಮೂರಿ­ನಲ್ಲಿ ಒಬ್ಬ ಹುಡುಗನಿಗೆ ‘ಹೊಟ್ಟೆಪ್ಪ’ ಎಂದು ಹೆಸರಿಟ್ಟಿದ್ದರು. ಅವನಿಗೆ ತಿಳಿವಳಿಕೆ ಬಂದ ತಕ್ಷಣ ಅವರ ಅಪ್ಪನ ಮೇಲೆ ರೇಗಿ, ಸ್ವಲ್ಪ ದುಡ್ಡು ಖರ್ಚುಮಾಡಿ ‘ಹರೀಶ’ನೆಂದು ಹೆಸರು ಬದಲಾ­ಯಿ­ಸಿ­ಕೊಂಡು ಚಿಕ್ಕಮಗಳೂರಿನಲ್ಲಿ ಬಾರ್ ಅಂಡ್ ರೆಸ್ಟೊರೆಂಟ್ ನಡೆಸಿಕೊಂಡು ನೆಮ್ಮದಿ­ಯಿಂದ ಇದ್ದಾನೆ.

ನಮ್ಮ ಪ್ರಾಂತ್ಯದ ಆಸುಪಾಸಿನಲ್ಲಿ ಈ ರೀತಿಯ ಅಥವಾ ಇನ್ನೂ ಅಧ್ವಾನದ ಹೆಸರುಗಳು ಒಂದು ತಲೆಮಾರಿನ ಪೂರ್ತಿ ಚಾಲ್ತಿಯಲ್ಲಿದ್ದವು. ಕೆಲ­ವೊಂದು ಸಮುದಾಯಗಳಿಗೆ ಮಾತ್ರ ಈ ಶಾಪ. ಹೆಸರಿಡುವ ಸ್ಥಾನಮಾನದಲ್ಲಿ ಇದ್ದವರೆಲ್ಲ ಅವರ ಮಕ್ಕಳಿಗೆ ಅನಂತರಾಮು, ಕೃಷ್ಣಮೂರ್ತಿ, ಚಂದ್ರ­ಶೇಖರ, ವೆಂಕಟೇಶ, ಮಂಜುನಾಥ ಮುಂತಾದ ಆ ಕಾಲಕ್ಕೆ ಸುಂದರವಾದ ಹೆಸರುಗಳಿಂದ ಕರೆಯುತ್ತಿದ್ದರು.

ಬಹುಶಃ ಕುವೆಂಪು ಯುಗ ಪ್ರಾರಂಭವಾದ ನಂತರ ನಮ್ಮ ಭಾಗದ ಮಕ್ಕಳಿಗೆ ಸುಧಾರಿಸಿದ ಹೆಸರಿಡುವ ಸಂಪ್ರದಾಯ ಬೆಳೆದು ಬಂದಿದೆ ಎನ್ನಬಹುದು. ಕುವೆಂಪು ಸ್ವತಃ ಅವರ ಮಕ್ಕಳಿಗೆ ಹೆಸರಿಟ್ಟ ಬಗ್ಗೆ ತಮಾಷೆಗೆ ಒಂದು ಮಾತಿದೆ. ‘Kuvempu did not name his sons, but he sentenced them’ ಅಂತ. ಹೌದು, ಕುಪ್ಪಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ, ಕುಪ್ಪಳಿ ಪುಟ್ಟಪ್ಪ ಕೋಕಿಲೋದಯ ಚೈತ್ರ, ಈ ಹೆಸರುಗಳೆಲ್ಲ ವಾಕ್ಯಗಳೇ! ಅವರನ್ನನುಸರಿಸಿ ಕಳೆದ ಐದಾರು ದಶಕಗಳಲ್ಲಿ ಇಡೀ ಸಮು­ದಾಯದ ಹೆಸರುಗಳ ಚಿತ್ರಣವೇ ಬದಲಾಗಿದೆ. ಮಕ್ಕಳಿಗೆ ಹೆಸರಿಡುವುದೂ ತಮ್ಮ ಕರ್ತವ್ಯ ಎಂದು ತಂದೆ-–ತಾಯಂದಿರು ಭಾವಿಸಿದ್ದಾರೆ.

ಕುವೆಂಪು ಯುಗದ ಪ್ರಾರಂಭ ಎಲ್ಲ ಪ್ರಾರಬ್ಧಗಳ ಅಂತ್ಯಕ್ಕೆ ನಾಂದಿ ಎನ್ನಬಹುದು. ‘ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು’ ಎಂದ ಕವಿ, ವಿಚಾರಕ್ರಾಂತಿಗೆ ಆಹ್ವಾನ ನೀಡಿ, ಒಂದು ತಲೆಮಾರಿನ ಜನರನ್ನು ಮಾನಸಿಕ ಅತ್ಯಾಚಾರದಿಂದ ಬಿಡುಗಡೆಗೊಳಿಸಿ, ಶೋಷಿತ­ರಿಗೆ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ತುಂಬಿದ ಪರಿವರ್ತನೆಯ ಹರಿಕಾರ. ‘ನೂರು ದೇವರನ್ನೆಲ್ಲ ನೂಕಾಚೆ ದೂರ’ ಎಂದು ಪುರೋಹಿತಶಾಹಿಯ ವಂಚಕ ಮುಖವಾಡ ಕಳಚಿದ ವಿಭೂತಿಪುರುಷ.

‘ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷ­ವಾಗುತ್ತದೆ’ ಎಂದು ಸದಾ ಭಾಷಾಭಿಮಾನದ ಕೆಚ್ಚು ತುಂಬಿದ ಕನ್ನಡದ ಋಷಿ. ‘ಜಯ ಭಾರತ ಜನನಿಯ ತನುಜಾತೆ’ ಎಂದು ಭಾರತ ಮಾತೆ­ಯೊಂದಿಗೆ ಕರ್ನಾಟಕವನ್ನೂ ಸಮೀಕರಿಸಿ ನೋಡಿದ ಕವಿ. ‘ನೇಗಿಲ ಯೋಗಿ’ಯ ಕೈಂಕರ್ಯ ಕೊಂಡಾಡಿದ ರಸಋಷಿ. ‘ಮನುಜ ಮತ, ವಿಶ್ವಪಥ’ ಎಂದ ದಾರ್ಶನಿಕ. ‘ಓ ನನ್ನ ಚೇತನ’ದ ಮೂಲಕ ವಿಶ್ವಮಾನವ ಸಂದೇಶ ಸಾರಿದ ಮಹಾ ಮಾನವತಾವಾದಿ. ನನ್ನ ಪೀಳಿಗೆಯವರ ‘ಆರಾಧ್ಯ ದೈವ’. ಅದೂ ಅವರೇ ಹೇಳಿರುವ ದೇವರ ಅರ್ಥದ ದೈವ.

ಕುವೆಂಪು ಅವರನ್ನು ನಾನು ಮೊದಲ ಬಾರಿಗೆ ನೋಡಿದ್ದು ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಿಂದ ಪುಟ್ಟಣ್ಣ ಚೆಟ್ಟಿ ಪುರಭ­ವನದವರೆಗೆ ‘ಶ್ರೀ ರಾಮಾಯಣ ದರ್ಶನಂ’ ಮಹಾ­ಕಾವ್ಯ­ವನ್ನು ಶೃಂಗರಿಸಿದ ಆನೆಯ ಮೇಲಿಟ್ಟು ಮೆರ­ವ­ಣಿಗೆಯಲ್ಲಿ ತಂದರು. ನಾಡಿನ ಹಿರಿ-ಕಿರಿಯ ಸಾಹಿತಿ­ಗಳು, ಕಲಾವಿದರು, ಕುವೆಂಪು ಅಭಿಮಾ­ನಿಗಳು, ಜಾನಪದ ನೃತ್ಯ ತಂಡಗಳು, ಅಲಂಕೃತ ಪೂರ್ಣ­ಕುಂಭದೊಂದಿಗೆ ಬರುತ್ತಿದ್ದ ಮಹಿಳಾ ತಂಡಗಳು, ಅದೊಂದು ಜಾತ್ರೆಯ ಸಂಭ್ರಮ, ಸಡ­ಗರ. ಮ

ೆರವಣಿಗೆ ಪುರ­ಭವನ ತಲುಪುವ ವೇಳೆಗೆ ಜನಜಾತ್ರೆ. ವಿದ್ಯಾರ್ಥಿ­ಯಾಗಿದ್ದ ನಾನು ಈ ಗದ್ದಲದೊಳಗೆ ಹೇಗೋ ನುಸುಳಿಕೊಂಡು ಪುರ­ಭವನದೊಳಗೆ ಹೋಗಿ ಆರನೇ ಸಾಲಿನಲ್ಲಿ ಕುಳಿತೆ. ಅಲ್ಲಿಯವರೆಗಿನ ಸಾಲುಗಳನ್ನೆಲ್ಲ ದಾರ­ಕಟ್ಟಿ ಕಾಯ್ದಿರಿಸಿದ್ದರು. ರಾಷ್ಟ್ರಕವಿ ಕುವೆಂಪು, ಮುಖ್ಯ­ಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್, ಕೆ.ವಿ. ಶಂಕರೇಗೌಡ, ದೇಜಗೌ ಹೀಗೆ ಗಣ್ಯಾತಿ­ಗಣ್ಯರ ದಂಡೇ ಮಂಗಳ ವಾದ್ಯದೊಂದಿಗೆ ಸಭಾಂಗ­ಣದೊಳಗೆ ಪ್ರವೇಶಿ­ಸಿತು. ಒಂದು ಕ್ಷಣ ನನ್ನನ್ನು ಹೊರಗಟ್ಟು­ತ್ತಾರೇನೋ ಎಂಬ ಭಯ­ಕಾಡಿತು. ಕುವೆಂಪು ಅವರ ದಯದಿಂದ ಹಾಗಾಗಲಿಲ್ಲ.

ಕುವೆಂಪು ಅವರ ಸಮೀಪದರ್ಶನ ನನ್ನನ್ನು ಪುಳಕಗೊಳಿಸಿತ್ತು. ವೇದಿಕೆಯ ಮೇಲೆ ಕುಳಿತಿದ್ದ ಎಲ್ಲರಿಗಿಂತ ಕುವೆಂಪು ಆಕರ್ಷಕರಾಗಿ ಕಂಡರು. ನಾನು ಮನಸ್ಸಿನಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚು ಎತ್ತರ, ಕಾಂತಿಯುತ ಗಂಭೀರ ಮುಖಭಾವ, ಹೊಳೆಯುವ ಕಣ್ಣುಗಳು, ಲವಲವಿಕೆಯ ಲಕ್ಷಣ­ಗಳು, ವಿಶೇಷವಾದ ಹೇರ್‌ಸ್ಟೈಲ್. ಉಳಿದವರೆಲ್ಲ ಕಾಂತಿಹೀನರಂತೆ ಕಂಡರು. ಅಂದು ಕಂಡ ಕುವೆಂಪು ನನ್ನ ಮನಸ್ಸಿನಲ್ಲಿ ಹಾಗೆಯೇ ಉಳಿದಿದ್ದಾರೆ.

ನಂತರ ೧೯೮೩ರಲ್ಲಿ ದೇಜಗೌ, ಚದುರಂಗ ಮತ್ತು ಶ್ರೀಕಷ್ಣ ಆಲನಹಳ್ಳಿ ಅವರು ‘ಉದಯ­ರವಿ’ಗೆ ಕರೆದೊಯ್ದು ಸಂಸ್ಕೃತಿ ಇಲಾಖೆಯ ನಿರ್ದೇಶಕನಾಗಿದ್ದ ನನ್ನನ್ನು ಪರಿಚಯಿಸಿದರು. ನಂತರ ಒಬ್ಬನೇ ಹೋಗಿ ಹಲವಾರು ಬಾರಿ ಅವರನ್ನು ಭೇಟಿಯಾದೆ, ಮಾತಾಡಿದೆ. ಅವರ ಕೃತಿಗಳ ಬಗ್ಗೆ ಅವರಿಂದಲೇ ತಿಳಿದಿದ್ದೆ. ಧನ್ಯತೆಯ ಕ್ಷಣಗಳವು.

ಮೊಟ್ಟಮೊದಲ ಪಂಪ ಪ್ರಶಸ್ತಿ ಕುವೆಂಪು ಅವರಿಗೆ ಬಂದ ಸಂದರ್ಭ. ಆ ವಿಷಯವನ್ನು ತಿಳಿಸುವ, ಸಮಾರಂಭಕ್ಕೆ ಆಹ್ವಾನಿಸುವ ಮತ್ತು ಇಡೀ ಸಮಾರಂಭ ನಿರ್ವಹಿಸುವ ಅವಕಾಶ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕನಾಗಿ ನನ್ನ ಪಾಲಿಗೆ ಒದಗಿದ್ದು ನನ್ನ ಸೌಭಾಗ್ಯ. ಎಸ್.ಆರ್. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಆ ದಿನಗಳಲ್ಲಿ ಮೈಸೂರಿನ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮ ಸದಾ ನೆನಪಿನಲ್ಲಿ ಉಳಿ­ಯುವಂಥದ್ದು. ಪಂಪ ಪ್ರಶಸ್ತಿ ಪಡೆದಿದ್ದ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು ಕಡಿಮೆ ದರದಲ್ಲಿ ಪುನರ್ ಮುದ್ರಣ ಮಾಡಲು ಸರ್ಕಾರ ತೀರ್ಮಾನಿಸಿತು. ಅದಕ್ಕಾಗಿ ರಾಷ್ಟ್ರ­ಕವಿಯ ಅನುಮತಿಗೆ ಭೇಟಿಯಾದೆ. ಒಪ್ಪಿದರು.

ನಾವಿಬ್ಬರೇ ಇದ್ದೆವು. ಬಹಳ ಮೃದುವಾಗಿ ‘ನನ್ನದೊಂದು ಸಣ್ಣ ಕೋರಿಕೆಯಿದೆ’ ಎಂದರು. ಒಬ್ಬ ಮಹಾನ್ ಕವಿ ಈ ರೀತಿ ಕೋರಿಕೆ ಎಂಬ ಪದ ಬಳಸಿದ್ದು ನನಗೆ ತುಂಬಾ ಮುಜು­ಗರ­ವಾಯ್ತು. ನಾನು ಮೌನವಾಗಿ ಕುಳಿತೆ. ಮುಂದು­ವರಿಸಿ ಹೇಳಿದರು. ‘ನನ್ನ ರಾಮಾಯಣ ದರ್ಶನಂ ಕೃತಿ ಯಾವುದೇ ಮುದ್ರಣ ದೋಷ­ವಿಲ್ಲದೆ ಅಚ್ಚಾಗಬೇಕೆಂಬುದು ನನ್ನ ಅಪೇಕ್ಷೆ’ ಎಂದರು.

ನನಗೋ ಮುದ್ರಣದ ಬಗ್ಗೆ ಮೂರು­ಕಾಸಿನ ಜ್ಞಾನವಿರಲಿಲ್ಲ. ಆದರೂ ನನ್ನ ಪ್ರೀತಿಯ ಕವಿಯ ಆಸೆ ಈಡೇರಿಸುತ್ತೇನೆಂದು ಮಾತು­ಕೊಟ್ಟೆ. ನಂತರ ದೇಜಗೌ ಅವರಿಗೆ ನನ್ನ ಪರಿಸ್ಥಿತಿ ತಿಳಿಸಿದೆ. ಅವರು ಮೈಸೂರಿನ ದಾಸೇಗೌಡ ಎಂಬು­ವವರನ್ನು ಕರಡು ತಿದ್ದಲು ವ್ಯವಸ್ಥೆ ಮಾಡಿಕೊಟ್ಟರು. ಚಿಂತಾಮಣಿ ಪ್ರಿಂಟರ್ಸ್ ಮಾಲೀಕರೊಡನೆ ಈ ಬಗ್ಗೆ ತಿಳಿಸಿದೆ. ಅವರೂ ಸಹ ಕವಿಯ ಆಶಯಕ್ಕೆ ತಕ್ಕಂತೆ ಪ್ರಿಂಟ್ ಮಾಡಿ­ಕೊಡಲು ಸನ್ನದ್ಧರಾದರು. ಎಲ್ಲರ ಬಯಕೆ ಮತ್ತು ಸಹಾಯದಿಂದ ಪುನರ್ ಮುದ್ರಣ­ವಾದ ರಾಮಾಯಣ ದರ್ಶನಂ ಕೃತಿ ಹೊರಬಂತು. ಅಳುಕಿನಿಂದ ನಾನೇ ಕುವೆಂಪು ಅವರಿಗೆ ಕೊಟ್ಟುಬಂದೆ.

ಸುಮಾರು ಒಂದು ವಾರದ ನಂತರ ನನ್ನ ಕಚೇರಿಗೆ ಒಂದು ಪೋಸ್ಟ್ ಕಾರ್ಡ್ ಬಂತು. ನನ್ನ ಪಿ.ಎ. ಲೀಲಾವತಿಯವರು ‘ಸಾರ್ ಕುವೆಂಪು ಅವರು ಕಾಗದ ಬರೆದಿದ್ದಾರೆ’ ಎಂದರು. ‘ರಾಮಾ­ಯಣ ದರ್ಶನಂ ಕೃತಿಯನ್ನು ಯಾವುದೇ ಮುದ್ರಣ ದೋಷವಿಲ್ಲದೆ ಅಚ್ಚುಮಾ­ಡಿ­ಸಿ­ದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ’ ಎಂದು ಬರೆದಿದ್ದರು. ಹೃದಯ–-ಮನಸ್ಸು ತುಂಬಿ­ಬಂದಿತ್ತು. ನಿಜವಾಗಿ ನಾನು ಅವರಿಗೆ ಕೃತಜ್ಞನಾಗಿದ್ದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT