ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಂಟ್, ಪ್ರಿಂಟ್

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬರವಣಿಗೆ ಮತ್ತು ಸಂವಹನದ ತಂತ್ರಜ್ಞಾನದಲ್ಲಿ ಆಗುವ ಬದಲಾವಣೆಗಳೆಲ್ಲ ಜ್ಞಾನದ ಸ್ವರೂಪ, ಸಮಾಜದ ಸ್ವರೂಪ, ಭಾಷೆಯ ಸ್ವರೂಪದ ಬದಲಾವಣೆಗಳಿಗೆ ಕಾರಣವಾಗಿವೆ.

ಪ್ರಿಂಟಿಂಗ್ ಅಂತ ಕರೆಯುತ್ತೇವಲ್ಲ ಆ ಮುದ್ರಣ ತಂತ್ರಜ್ಞಾನ ಕ್ರಿಪೂ 3000ದಷ್ಟು ಹಳೆಯದು. ಮೆಸೊಪೊಟಾಮಿಯ, ಚೀನಾಗಳಲ್ಲಿ, ಭಾರತದಲ್ಲೂ ಮುದ್ರಣದ ಕಲೆ ಗೊತ್ತಿತ್ತಂತೆ. ಮುದ್ರಿಕೆಗಳನ್ನು ಬಳಸಿ `ಮುದ್ರಣ~ ಮಾಡುತಿದ್ದರು. ಕಾಗದ ಕೂಡ ಪ್ರಾಚೀನವೇ.
 
ಆದರೆ ಅಚ್ಚುಮೊಳೆಗಳನ್ನು ಬಳಸಿ, ಯಂತ್ರದ ಸಹಾಯದಿಂದ ಕಾಗದದ ಮೇಲೆ ಪ್ರಿಂಟು ಮಾಡುವ ತಂತ್ರಜ್ಞಾನ ಜಗತ್ತನ್ನೆಲ್ಲ ವ್ಯಾಪಿಸಿದ್ದು 1439ರಿಂದ. ಜ್ಞಾನವನ್ನು ದಾಖಲೆಮಾಡುವ ಮತ್ತು ಪ್ರಸರಿಸುವ ತಂತ್ರಜ್ಞಾನ ಮುದ್ರಣ ಬಳಕೆಗೆ ಬಂದಮೇಲೆ ಜ್ಞಾನದ ಸ್ವರೂಪವೇ ಬದಲಾಯಿಸಿತು.

ನುಡಿ ಮುಖ್ಯವಾಗಿದ್ದ ಸಂಸ್ಕೃತಿಯಲ್ಲಿ ಭಾಷಾ ರೂಪದ ಜ್ಞಾನ ಆಯ್ದ ಕೆಲವರ ನೆನಪಿನ ಭಂಡಾರದಲ್ಲಿತ್ತು. ಹಸ್ತಪ್ರತಿಗಳ ಬಳಕೆಗೆ ತೊಡಗಿದ ಮೇಲೆ ಜ್ಞಾನವು ಬಲ್ಲಿದ ವ್ಯಕ್ತಿಗಳ, ಸಂಸ್ಥೆಗಳ ಹಕ್ಕು ಆಯಿತು. ಮುದ್ರಣದ ಕಾರಣದಿಂದಲೇ ಅಕ್ಷರವನ್ನು ಬಲ್ಲ, ಪುಸ್ತಕವನ್ನು ಕೊಳ್ಳಬಲ್ಲ ಎಲ್ಲರಿಗೂ ಜ್ಞಾನ ಎಟುಕುವಂತಾಯಿತು. ಜ್ಞಾನವನ್ನು ಬಳಸುವ ರೀತಿ ಬದಲಾಯಿತು.

ಸಂವಹನದಲ್ಲಿ ಆಗುವ ಯಾವುದೇ ಬೆಳವಣಿಗೆಯಿಂದ ಸಮಾಜ ಹೆಚ್ಚು ಸಂಕೀರ್ಣವಾಗುತ್ತದೆ. ಮುದ್ರಣದ ತಂತ್ರಜ್ಞಾನದಿಂದಲೇ ಅಖಂಡ ಶಿಲೆಯಂತೆ ಇದ್ದ ಕ್ರಿಶ್ಚಿಯನ್ ಧರ್ಮದ ಸ್ವರೂಪ ಬದಲಾಯಿತು; ಧಾರ್ಮಿಕ ಮತ್ತು ಸಾಮಾಜಿಕ

ನಿಯಂತ್ರಣ ಅಧಿಕಾರದ ಕೇಂದ್ರದಿಂದ ಸಮಾಜದ ಅಂಚುಗಳತ್ತ ಸರಿಯಲು ತೊಡಗಿತು; ಯೂರೋಪಿನ ಪುನರುಜ್ಜೀವನ, ಧಾರ್ಮಿಕ ಸುಧಾರಣೆ, ತಿಳಿವಳಿಕೆಯ ಯುಗ, ವೈಜ್ಞಾನಿಕ ಕ್ರಾಂತಿ, ಆಧುನಿಕ ಜ್ಞಾನಾಧಾರಿತ ಆರ್ಥಿಕತೆ, ಜನಸಾಮಾನ್ಯರಿಗೆ ವಿದ್ಯಾಭ್ಯಾಸದ ಅವಕಾಶ, ಪುಸ್ತಕೋದ್ಯಮ, ಇವೆಲ್ಲ ಸಾಧ್ಯವಾಯಿತು ಎಂದು ಹೇಳುವವರಿದ್ದಾರೆ.
 
ಈ ವಾದ ಅತಿರೇಕದ್ದು. ಆಧುನಿಕತೆಯನ್ನು ಸಾಧ್ಯವಾಗಿಸಿದ ತಂತ್ರಜ್ಞಾನಗಳಲ್ಲಿ ಮುದ್ರಣಕ್ಕೆ ಪ್ರಾಮುಖ್ಯವಿದೆ ಅನ್ನುವುದು ನಿಜ. ಜರ್ಮನಿಯ ಮೇಯ್ನಸ್ ನಗರದಲ್ಲಿ ಜೊಹನ್ನೆಸ್ ಗೆನ್‌ಫ್ಲೀಶ್ ಝರ್ ಲಾಡೆನ್ ಝುಮ್ ಗೂಟೆನ್‌ಬರ್ಗ್ (ಸು. 1398-ಫೆಬ್ರುವರಿ 3, 1468) 1439ರಲ್ಲಿ ಎರಕ ಹೊಯ್ದ ಅಚ್ಚಿನ ಮೊಳೆಗಳನ್ನು ಕಂಡು ಹಿಡಿದ. ಕಮ್ಮಾರಿಕೆ, ಅವನ ಕುಲ ಕಸುಬು.

ಅವನ ಮುಖ್ಯ ಕಾರ್ಯ ಗುಟೆನ್ ಬರ್ಗ್ ಬೈಬಲಿನ ಮುದ್ರಣ. ಅದು 42 ಸಾಲಿನ ಬೈಬಲ್ ಎಂದೂ ಪ್ರಸಿದ್ಧವಾಗಿದೆ. ಅದರ ಬಹುಮಟ್ಟಿಗೆ ಸಂಪೂರ್ಣವಾಗಿರುವ 48 ಪ್ರತಿಗಳು ಇಂದಿಗೂ ಉಳಿದು ಬಂದಿವೆ. ಅದರ ಒಂದು ಪ್ರತಿಗೆ 30 ಫಾರ‌್ಲಿನ್ಸ್ ಬೆಲೆ, (200 ಡಾಲರ್), ಸಾಮಾನ್ಯ ಗುಮಾಸ್ತನೊಬ್ಬನ ಮೂರು ವರ್ಷಗಳ ಸಂಬಳದಷ್ಟಾಗಿದ್ದರೂ ಒಬ್ಬ ಪ್ರತಿಕಾರ ಒಂದು ಇಡೀ ವರ್ಷ ದುಡಿದು ತಯಾರು ಮಾಡಬೇಕಿದ್ದ ಹಸ್ತಪ್ರತಿ ಪುಸ್ತಕಕ್ಕಿಂತ ಅಗ್ಗವಾಗಿತ್ತು. (ಹಸ್ತಪ್ರತಿ ಮತ್ತು ಮೊದಲ ಮುದ್ರಿತ ಪುಸ್ತಕದ ಹೋಲಿಕೆಯನ್ನು ಇಲ್ಲಿ ನೋಡಿ:

http://prodigi.bl.uk/treasures/gutenberg/search.asp)ಮುದ್ರಣದ ತಂತ್ರಜ್ಞಾನ ಬಲು ಬೇಗ ಯೂರೋಪಿನಲ್ಲ್ಲೆಲ ಹರಡಿತು. 1455ರಲ್ಲಿ ಮುದ್ರಿತ ಪುಸ್ತಕಗಳು ಯಾವುವೂ ಇರಲಿಲ್ಲ. 1500ರ ಹೊತ್ತಿಗೆ 20 ಮಿಲಿಯನ್ ಪುಸ್ತಕಗಳ 35 ಸಾವಿರ ಆವೃತ್ತಿಗಳು ಇದ್ದವು; ಬೈಬಲ್ಲಿನ 200ಕ್ಕೂ ಹೆಚ್ಚು ಆವೃತ್ತಿಗಳು ದೊರೆಯುತಿದ್ದವು. 245 ನಗರಗಳಲ್ಲಿ ಮುದ್ರಣಾಲಯಗಳು ತಲೆ ಎತ್ತಿದವು. 1500ರಿಂದ 1600ರ ಹೊತ್ತಿಗೆ 150-200 ಮಿಲಿಯನ್ ಮುದ್ರಿತ ಪಠ್ಯಗಳು ಲಭ್ಯವಿದ್ದವು. 

ಯುರೋಪಿನ ಬೇರೆ ಬೇರೆ ದೇಶಭಾಷೆಗಳಲ್ಲಿ ಬೈಬಲ್ಲು ಮುದ್ರಣಗೊಂಡರೆ ತನ್ನ ಅಧಿಕಾರ ಮತ್ತಷ್ಟು ಗಟ್ಟಿಯಾಗುತ್ತದೆಂದು ರೋಮ್‌ನ ಕ್ಯಾತೊಲಿಕ್ ಚರ್ಚು ಭಾವಿಸಿತ್ತು. ಆದರೆ ಆದದ್ದೇ ಬೇರೆ. 1466ರಲ್ಲಿ ಮೊಟ್ಟಮೊದಲ ದೇಶಭಾಷಾ ಬೈಬಲು ಜರ್ಮನ್ ಭಾಷೆಯಲ್ಲಿ, 1471ರಲ್ಲಿ ಇಟಾಲಿಯನ್, 1477ರಲ್ಲಿ ಡಚ್, 1500ರ ಹೊತ್ತಿಗೆ ಇನ್ನೂ ಆರು ಭಾಷೆಗಳಲ್ಲಿ ಮುದ್ರಣಗೊಂಡಿತು.

ಈ ಪ್ರಕಟಣೆಗಳಿಂದ ಆಯಾ ಭಾಷೆಗಳಿಗೆ ಶಾಶ್ವತತೆ ಲಭ್ಯವಾಯಿತು, ಅವು ಮುದ್ರಣಗೊಂಡ ಸ್ಥಳಗಳಿಗೆ ಪ್ರಾಮುಖ್ಯ ಬಂದಿತು. ಯಾವ ಭಾಷೆಯಲ್ಲಿ ಬೈಬಲ್ ಮುದ್ರಣಗೊಂಡಿತೋ ಆಯಾ ಭಾಷೆಯನ್ನಾಡುವ ಜನರ ರಾಷ್ಟ್ರೀಯ ಭಾವನೆಗಳು ಗಟ್ಟಿಯಾದವು.

ಮುದ್ರಿತ ಬೈಬಲುಗಳಿಲ್ಲದ ಭಾಷೆಗಳು ಹಿಂದೆ ಸರಿದವು, ಅಂಥ ಭಾಷೆಗಳ ರಾಜಕೀಯ ಚಹರೆಗಳು ಮಸುಕಾದವು. ಧರ್ಮ ಮತ್ತು ಜ್ಞಾನದ ಮಾಧ್ಯಮವಾಗಿದ್ದ ಲ್ಯಾಟಿನ್ ಪದಚ್ಯುತಗೊಂಡಿತು.

ಅಂದರೆ ಬರವಣಿಗೆಯೂ ಒಂದು ತಂತ್ರಜ್ಞಾನ. ಅದನ್ನು ಅಳವಡಿಸಿಕೊಳ್ಳದ, ಅಳವಡಿಸಿಕೊಳ್ಳಲು ಒಲ್ಲದ ಭಾಷಾ ಸಮುದಾಯಗಳು ಕಾಲದ ಚಲನೆಯಲ್ಲಿ ಹಿಂದುಳಿದು ಮರೆಯಾದಂತೆಯೇ ಮುದ್ರಣ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದ ಭಾಷಾ-ರಾಷ್ಟ್ರೀಯ ಸಮುದಾಯಗಳ ಗತಿಯೂ ಆಯಿತು.

ಬದಲಾದ ಯುಗಕ್ಕೆ ದೇಹವು ತಕ್ಕ ಜೈವಿಕ ಹೊಂದಾಣಿಕೆ ಮಾಡಿಕೊಳ್ಳುವುದು ಎಷ್ಟು ಮುಖ್ಯವೋ ಮನಸ್ಸು ಸಮಕಾಲೀನ ತಾಂತ್ರಿಕ ಬೆಳವಣಿಗೆಯನ್ನು ಅಳವಡಿಸಿಕೊಳ್ಳುವುದೂ ಅಷ್ಟೇ ಮುಖ್ಯ ಅನಿಸುತ್ತದೆ.

ಮುದ್ರಣದ ತಂತ್ರಜ್ಞಾನ ಮತ್ತು ಆರ್ಥಿಕತೆ, ಪ್ರಸರಣ ಇವೆಲ್ಲ ಸಹಜವಾಗಿ, ಅನಿವಾರ್ಯವಾಗಿ ಕೆಲವೇ ದೊಡ್ಡ ಮಾರುಕಟ್ಟೆಗಳನ್ನು ರೂಪಿಸುವ ಅನಿವಾರ್ಯತೆಯನ್ನು ಹುಟ್ಟಿಸಿತು; ಯೂರೋಪಿನ ಹಲವಾರು ಉಪಭಾಷೆಗಳು ಏಕೀಕರಣಗೊಂಡು ಕೆಲವೇ ಮುಖ್ಯಭಾಷೆಗಳು ರೂಪತಳೆಯುವಲ್ಲಿ ಮುದ್ರಕರಿಂದ ದೊರೆತ ಪ್ರಚೋದನೆಯ ಪಾಲು ದೊಡ್ಡದು.
 
ಮುದ್ರಣದಿಂದಾಗಿಯೇ ಭಾಷೆಯ ಪ್ರಮಾಣೀಕರಣ ಸಾಧ್ಯವಾಯಿತು. ಎಲಿಸಬೆತ್‌ಳ ಕಾಲದ ಇಂಗ್ಲೆಂಡಿನಲ್ಲಿ ಇದರ ನಿದರ್ಶನ ದೊರೆಯುತ್ತದೆ. ಇಂಗ್ಲಿಷ್ ಬುಕ್ ಆಫ್ ಕಾಮನ್ ಪ್ರೇಯರ್ ಮುದ್ರಣವಾದದ್ದು 1549ರಲ್ಲಿ. 1600ರ ಹೊತ್ತಿಗೆ ಮುದ್ರಿತ ಭಾಷೆಯ ಸಹಾಯದಿಂದ ಇಂಗ್ಲೆಂಡು ಸಾಂಸ್ಕೃತಿಕ ಮತ್ತು ಭಾಷಿಕ ಚಹರೆಯನ್ನು ಸ್ಪಷ್ಟಮಾಡಿಕೊಂಡಿತು.

ಕಿಂಗ್ ಜೇಮ್ಸನ ಬೈಬಲ್ಲು ಪ್ರಕಟವಾಗಿದ್ದು 1611. ಇದರಿಂದ ಭಾಷೆ ಮತ್ತು ಧರ್ಮ ಮತ್ತಷ್ಟು ಪ್ರಮಾಣೀಕೃತಗೊಂಡವು. ಮುದ್ರಣಗೊಳ್ಳುತಿದ್ದ ಬಹುತೇಕ ಪಠ್ಯಗಳು ಅಧಿಕಾರಕ್ಕೆ ಹೊಂದಿಕೊಂಡು ನಿಷ್ಠವಾಗಿರುವ ಅಗತ್ಯವನ್ನು ಬೋಧಿಸುತಿದ್ದವು.

ಕನ್ನಡದ್ದೇ ಉದಾಹರಣೆ ಬೇಕಿದ್ದರೆ ನನ್ನ ನೆನಪಿನ ಚಿತ್ರವನ್ನು ಹೇಳಬೇಕು. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಮುದ್ರಣಗೊಂಡಿದ್ದ `ಕರ್ಣಾಟಕ ಭಾಷಾ ಭೂಷಣ~ದ ಶೀರ್ಷಿಕೆ ನನ್ನ ಕಣ್ಣಿಗೆ `ಛಾಷಾ ಛೂಷಣ~ದಂತೆ ಕಂಡಿತ್ತು. ಯಾಕೆಂದರೆ ಆಗ ಬಳಸಿದ್ದ ಭಾ ಅನ್ನುವ ಅಕ್ಷರ ನಮ್ಮ ಈಗಿನ `ಛ~ದಂತೆ ಕಾಣುತಿತ್ತು.
 
ಈಗಿನ ಮುದ್ರಿತ ಕನ್ನಡವನ್ನೇ ಕಂಡ ಕಣ್ಣುಗಳಿಗೆ ಕನ್ನಡ ಅಕ್ಷರ ಎಂದಿನಿಂದಲೂ ಹೀಗೇ ಇದ್ದವು ಅನ್ನಿಸೀತು. ನಿರ್ದೇಶಕ ಅನ್ನುವುದನ್ನು ನಿರ್ದೇಶಕ ಎಂದು ಬರೆಯುತಿದ್ದ, ಪರ್ಯಂತವನ್ನು ಪಯರ್ಂತ ಎಂದು ಬರೆಯುತಿದ್ದ ಕ್ರಮ ನನಗಿನ್ನೂ ನೆನಪಿದೆ. ಈಗಿನ ತಂತ್ರಾಂಶಗಳ ಕಾರಣದಿಂದ ಒತ್ತಕ್ಷರ, ಸಂಯುಕ್ತಾಕ್ಷರ, ಅಕ್ಷರಾನುಕ್ರಮ ಎಲ್ಲವೂ ಪಂಡಿತರ ಕಟ್ಟಳೆಗಳನ್ನೂ ಮೀರಿ ತಂತ್ರಜ್ಞಾನವನ್ನಾಧರಿಸಿದ ಪ್ರಮಾಣೀಕರಣ ರೂಪುಗೊಳ್ಳುತ್ತಿದೆ. 

ಮುದ್ರಣದ ಕಾರಣದಿಂದಲೇ ಸಾಕ್ಷರತೆಗೆ ಹೊಸ ರೂಪ ಬಂದಿತು. ಕಸುಬು ಬಲ್ಲ ಕುಶಲಕರ್ಮಿಯ ಶಿಷ್ಯತ್ವವಹಿಸಿ ನೇರ ಅನುಭವದ ಮೂಲಕ ಜ್ಞಾನ ಸಂಪಾದನೆ ಮಾಡುವ ಕ್ರಮ ಮರೆಯಾಯಿತು. ಪುಸ್ತಕದಿಂದ ದೊರೆಯುವ ಮಾಹಿತಿಯನ್ನು ಪಡೆಯುವುದು ಕಸುಬಿನ ನೇರ ಅನುಭವಕ್ಕಿಂತ ಮುಖ್ಯ ಅನ್ನುವ ಧೋರಣೆ ಬೆಳೆಯಿತು.
ಹೊಸ ಬಗೆಯಲ್ಲಿ ದೊರೆಯುವ ಜ್ಞಾನವನ್ನು ಎಷ್ಟು ಮಟ್ಟಿಗೆ, ಯಾವ ರೂಪದಲ್ಲಿ ಕ್ಷೇಮವಾಗಿ ಪ್ರಸರಿಸಲು ಅವಕಾಶಮಾಡಿಕೊಡಬಹುದು ಎಂಬ ಚಡಪಡಿಕೆಯೂ ಹುಟ್ಟಿತು. ಅಧಿಕಾರಸ್ಥರೂ, ಅಧಿಕಾರ ವಿರೋಧಿಗಳೂ ಶಿಕ್ಷಣಕ್ಕೆ ಪ್ರಾಮುಖ್ಯ ನೀಡಲು ಶುರುಮಾಡಿದರು. ಅಂದರೆ ಯುವ ಮನಸುಗಳಲ್ಲಿ ನಿರ್ದಿಷ್ಟ ಸಿದ್ಧಾಂತವನ್ನು ಬಲವಾಗಿ ಸ್ಥಾಪಿಸುವ ಅಗತ್ಯ ಹೆಚ್ಚಿತು.

ಶಿಕ್ಷಣದ ಮೂಲಕ ಅಧಿಕಾರದ ವಿನ್ಯಾಸಗಳನ್ನು ಬಲಪಡಿಸುವಂಥ ಪಾತ್ರವಹಿಸಲು ಸನ್ನದ್ಧರಾಗುವಂತೆ ಯುವ ಮನಸುಗಳನ್ನು ತಿದ್ದುವ ಕೆಲಸ ತೊಡಗಿತು. ರೋಮ್‌ನ ಚರ್ಚು 1542ರಲ್ಲಿ ಜೆಸೂಯಿಟ್ ಕಾಲೇಜುಗಳನ್ನು ಸ್ಥಾಪಿಸಿತು. ಎಂಟನೆಯ ಹೆನ್ರಿ ರಾಯಲ್ ಕಾಲೇಜ್ ಆಫ್ ಮೆಡಿಸಿನ್ ಶುರು ಮಾಡಿದ. ಇಂಥದೇ ಅನೇಕ ಸಂಸ್ಥೆಗಳು ತಲೆ ಎತ್ತಿದವು.

ಇವತ್ತಿಗೂ ಶಿಕ್ಷಣದ ಉದ್ದೇಶ ಅಧಿಕಾರ ಸ್ಥಾನಗಳಿಗೆ ತಕ್ಕ ಜನರನ್ನು ಆಯ್ದುಕೊಳ್ಳುವುದಕ್ಕೆ ಅಧಿಕಾರಸ್ಥರಿಗೆ ಸಹಾಯಮಾಡುವುದೇ ಆಗಿದೆ. ಅದನ್ನು ಸಾಧ್ಯವಾಗಿಸುವ ಹೊಸ ಶಿಕ್ಷಣ ತಜ್ಞರು ತಲೆ ಎತ್ತಿದರು. ಎಳೆಯ ಮನಸುಗಳನ್ನು ಹೊಸ ರೀತಿಯಲ್ಲಿ ತಿದ್ದುವ ಕೆಲಸ, ನಿಯಂತ್ರಿಸುವ ಉಪಾಯಗಳನ್ನು ಕಂಡು ಹಿಡಿವ ಕೆಲಸ ಅವರದ್ದಾಯಿತು.

ಅಫಿಶಿಯಲ್ ಆದ ಪಠ್ಯಕ್ರಮಗಳು ರೂಪಗೊಂಡವು; ಶಿಕ್ಷಕರ ತರಬೇತಿಯ ಮೇಲೆ ರಾಜ್ಯದ ಅಧಿಕಾರ ಮೊದಲಾಯಿತು; ಒಪ್ಪಿತವಾದ ಪಠ್ಯಗಳ ಮುದ್ರಣ, ಲ್ಯಾಟಿನ್, ಸಂಸ್ಕೃತ ಅಥವ ಇಂಗ್ಲಿಷ್ ಬದಲು ಸ್ಥಳ ಭಾಷೆಯ ಬಳಕೆ ಶುರುವಾಯಿತು. ಇವೆಲ್ಲದರ ಉದ್ದೇಶ ಅಧಿಕಾರದ ಸ್ವರೂಪ ಭಾಷೆಯ ಮೂಲಕ ಸಮಾಜದ ತಳಸ್ತರದವರೆಗೆ ತಲುಪುವಂತೆ ಮಾಡುವುದೇ ಆಗಿದೆ. 

`ಎಲ್ಲ ಮನುಷ್ಯರ ಕಣ್ಣಿಗೂ ಒಂದೇ ಬಗೆಯ ಸತ್ಯಗಳು ಕಾಣುವಂತೆ ಮಾಡಿದಾಗ ಭಿನ್ನಮತಕ್ಕೆ, ವಿರೋಧಕ್ಕೆ ಅವಕಾಶವೇ ಇರುವುದಿಲ್ಲ~- ಹೀಗೆಂದವನು ಝೆಕ್ ಬಿಷಪ್ ಮತ್ತು ಶಿಕ್ಷಣ ಚಿಂತಕ ಕೋಮೆನ್‌ಸ್ಕಿ (1592-1670). ಇಂದಿಗೂ `ಶಿಕ್ಷಣ~ವೆಂದರೆ ಇರುವ ಅಧಿಕಾರದ ಸ್ವರೂಪವನ್ನು ಭಾಷೆಯ ಮೂಲಕ, ಐಡಿಯಾಗಳ ಮೂಲಕ ಮಗುವಿನ ಮನಸ್ಸಿಗೆ ನಾಟುವಂತೆ ಮಾಡಿ ತಿದ್ದುವುದೇ ಅಲ್ಲವೇ!

ಸಂವಹನದ ಹೊಸ ತಂತ್ರಜ್ಞಾನ ತಲೆ ಎತ್ತಿದಾಗ ಭಯ ಮೂಡುವುದು ಹೊಸತಲ್ಲ. 15ನೇ ಶತಮಾನದಲ್ಲಿನ ಮುದ್ರಣ ತಂತ್ರಜ್ಞಾನವನ್ನು ಚರ್ಚು ಸೈತಾನ ಸಂತಾನವೆಂದು ಜರಿಯಿತು. ಸಮಾಜದ ರಚನೆಯ ಮೇಲ್ತುದಿಯಲ್ಲಿದ್ದ ಧಾರ್ಮಿಕರು ಸೆನ್ಸಾರಿಲ್ಲದೆ ಐಡಿಯಾಗಳು ಪ್ರಸಾರವಾದರೆ ಸಾಮಾಜಿಕ ವ್ಯವಸ್ಥೆ ಕುಸಿಯುತ್ತದೆ, ಅಸಂಖ್ಯಾತ ಆತ್ಮಗಳು ನರಕಭಾಜನವಾಗುತ್ತವೆ ಅಂದರು.

ಗೂಟೆನ್‌ಬರ್ಗ್‌ನ ಬೈಬಲ್ ನಂತರ ಐವತ್ತೇ ವರ್ಷಗಳೊಳಗೆ 1486ರಲ್ಲಿ, ಫ್ರಾಂಕ್‌ಫರ್ಟ್‌ನಲ್ಲಿ ಸ್ಟೇಟ್ ಸೆನ್ಸಾರ್‌ಶಿಪ್ ಜಾರಿಯಾಯಿತು. ಬೈಬಲಿನ, ಟ್ರಾಕ್ಟುಗಳ ಅನಧಿಕೃತ/ಸಂಪ್ರದಾಯವಿರೋಧಿ ಅನುವಾದ ತಡೆಯುವುದು ಅದರ ಉದ್ದೇಶ. ಪೋಪ್ ಆರನೆಯ ಅಲೆಕ್ಸಾಂಡರ್ 1501ರಲ್ಲಿ ಲೌಕಿಕ ಪುಸ್ತಕಗಳಿಗೂ ಸೆನ್ಸಾರ್‌ಶಿಪ್ ಅನ್ವಯಿಸಿದ.

400 ವರ್ಷಗಳ ನಂತರ ಸೆನ್ಸಾರ್‌ಶಿಪ್ ಮತ್ತು ನಿಯಂತ್ರಣದ ಬಗ್ಗೆ ಇಂಥದೇ ಚಡಪಡಿಕೆ ಶುರುವಾಗಿತ್ತು: ಟೆಲಿಗ್ರಾಫ್, ಟೆಲಿಫೋನ್, ಮತ್ತು ಬಾನುಲಿಗಳಂಥ ಹೊಸ ಸಂವಹನ ತಂತ್ರಗಳ ಅನ್ವೇಷಣೆ ತರುವ ರಾಜಕೀಯ ಪರಿಣಾಮಗಳನ್ನು ಎದುರಿಸಲೆಂದು ಟೆಲಿಗ್ರಾಫ್ ಕುಟುಂಬವನ್ನು ನಾಶಮಾಡುತ್ತದೆ, ಅಪರಾಧವನ್ನು ಹೆಚ್ಚಿಸುತ್ತದೆ; ಟೆಲಿಫೋನು ಸಮಾಜವನ್ನೇ ಸ್ಫೋಟಿಸುತ್ತದೆ; ಬಾನುಲಿಯು ಪ್ರಚಾರದ ದನಿಯಾಗುತ್ತದೆ ಅನ್ನುವ ಕಳವಳ ಕಾಣಿಸಿತ್ತು. ಪ್ರತಿಯೊಂದು ಸಂದರ್ಭದಲ್ಲೂ ನಿರ್ದಿಷ್ಟವಾಗಿ ಭಾಷೆಯನ್ನು ಕೇಂದ್ರವಾಗಿಟ್ಟುಕೊಂಡಿದ್ದ ಪರ ವಿರುದ್ಧ ಚರ್ಚೆಗಳು ನಡೆದವು. 

ಬೈಬಲು ಮುದ್ರಣಗೊಂಡಾಗ ಹುಟ್ಟಿದ `ಧರ್ಮದ ವಿಚಾರದಲ್ಲಿ ಸ್ಥಳೀಯ ಭಾಷೆಗಳನ್ನು ಬಳಸುವುದು ಎಷ್ಟು ಸೂಕ್ತ~ ಎಂಬ ಚರ್ಚೆ ಆಗ ಆರಂಭವಾದದ್ದು ಈಗಲೂ ಆಗಾಗ ಕೇಳುತಿರುತ್ತದೆ. ರೇಡಿಯೋ ಮೂಲಕ ಆಯ್ದ ಕೆಲವು ದನಿಗಳು ಲಕ್ಷಾಂತರ ಜನರ ಕಿವಿಗೆ ಬೀಳುವಂತಾದಾಗ ಸರಿಯಾದ ಉಚ್ಚಾರಣೆ, ಸ್ಪಷ್ಟತೆ, ಅರ್ಥವಾಗುವಂಥ ಭಾಷೆಯನ್ನು ಬಳಸಬೇಕೋ, ಸ್ಥಳೀಯ ಉಚ್ಚಾರಣಾ ವೈವಿಧ್ಯಕ್ಕೆ ಅವಕಾಶ ನೀಡಬೇಕೋ ಎಂಬಂಥ ಚರ್ಚೆಗಳು ಇಪ್ಪತ್ತೊಂದನೆಯ ಶತಮಾನದಲ್ಲೂ ನಡೆಯುತಿವೆ.

ಅಂತರ್ಜಾಲ, ಈ ಮೇಲ್, ಉಪಯೋಗಕಾರಿ ಮಾಹಿತಿ, ಶಾಪಿಂಗ್, ವ್ಯಾಪಾರ, ಜಾಹೀರಾತು, ಸೃಜನಶೀಲ ಬರವಣಿಗೆ, ಸಂಶೋಧನೆ, ಚಲನಚಿತ್ರ, ಟೀವಿ, ಪ್ರಕಾಶನ, ಫೋನು, ಎಲ್ಲದರ ಸಂಗಮವಾಗಿರುವ ಸೈಬರ್ ಸ್ಪೇಸ್‌ನ ಭಾಷೆಯ ಪ್ರಶ್ನೆಗಳು ಈಗ ಮುನ್ನೆಲೆಯಲ್ಲಿವೆ. ಸಂವಹನ ತಂತ್ರ ಬದಲಾದಂತೆ ಭಾಷೆಯ ಪ್ರಶ್ನೆಯ ಹಳೆಯ ವಾಗ್ವಾದ ಹೊಸ ರೂಪ ಪಡೆಯುತ್ತ ಮೈದೋರುತ್ತದೆ.

ಮುದ್ರಣವು ಯೂರೋಪಿಯನ್ ಸಮಾಜದ ಮೇಲೆ ಮಾಡಿದ ಪರಿಣಾಮಗಳನ್ನು ಕುರಿತು ಮಾರ್ಷಲ್ ಮೆಕ್‌ಲುಹಾನ್ ಬರೆದಿರುವ `ಗುಟೆನ್‌ಬರ್ಗ್ ಗ್ಯಾಲಾಕ್ಸಿ~ (1962) ಎಂಬ ಅದ್ಭುತ ಪುಸ್ತಕವನ್ನು ನೋಡಿ.

ರೇಖಾಚಿತ್ರ: ಡಾ.ಸಿ.ರವೀಂದ್ರನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT