ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಯ ಕರೆ ಕೇಳಿ...ಆತ್ಮನಾ ಮೊರೆ ಕೇಳಿ...

Last Updated 7 ಅಕ್ಟೋಬರ್ 2015, 19:54 IST
ಅಕ್ಷರ ಗಾತ್ರ

ಕೆಲವೊಮ್ಮೆ ಎಲ್ಲವೂ ಸರಿಹೋಗುತ್ತದೆ ಎನ್ನುವಾಗ ಪ್ರತಿಯೊಂದು ವಿಚಾರವೂ ಎಕ್ಕುಟ್ಟಿ ಹೋಗಿರುತ್ತದೆ, ಏನೇನೂ ಸರಿಹೋಗಲಿಕ್ಕಿಲ್ಲ ಎಂದುಕೊಂಡಾಗ ನಮ್ಮ ಊಹೆಗೂ ಮೀರಿದ ಕೆಲವು ಒಳ್ಳೆಯ ಸಂಗತಿಗಳು ಘಟಿಸಿಬಿಡುತ್ತವೆ. ನಿರ್ಮಲಾಗೆ ಕಣ್ಣು ಕಾಣುವುದಿಲ್ಲ ಎನ್ನುವ ವಿಷಯ ಹಾಸ್ಟೆಲಿನಲ್ಲಿ ನಿಧಾನವಾಗಿ ಹರಡತೊಡಗಿದಾಗ, ಕೆಲವು ಒಳ್ಳೆಯ ಮನಸ್ಸಿನ ಹುಡುಗಿಯರು ಆಗಾಗ ಅವಳ ರೂಮಿಗೆ ಹೋಗಿ ಮಾತನಾಡಿಸತೊಡಗಿದರು.
ನಿರ್ಮಲಾಗೆ ಸಂತೋಷವೇನೋ ಆಯಿತು. ಆದರೆ, ಹೀಗೇ ಒಬ್ಬರಲ್ಲಾ ಒಬ್ಬರು ನೆಂಟರ ಥರಾ ರೂಮಿಗೆ ಬಂದು ಕೂರುತ್ತಿದ್ದರೆ ಎಲ್ಲರ ಅತೀ ಉತ್ಸಾಹಕ್ಕೆ ಬಲಿಯಾಗಿ ತನ್ನ ಓದು ಕುಂಠಿತವಾಗುತ್ತದೆ ಎಂದು ಆತಂಕ ಪಡತೊಡಗಿದಳು.

ಒಂದು ದಿನ ವಿಜಿ ಹಾಸ್ಟೆಲಿಗೆ ವಾಪಸ್ಸು ಬರುತ್ತಿರುವಾಗ ನಿರ್ಮಲಾ ಯಾವುದೋ ಹುಡುಗನ ಬೈಕ್ ಮೇಲೆ ಕೂತು ಹಾಸ್ಟೆಲ್ ಕಡೆ ಬರುತ್ತಿದ್ದುದು ಕಾಣಿಸಿತು. ಹುಡುಗ ಬೈಕ್ ನಿಲ್ಲಿಸಿ ಏನೋ ಹೇಳುತ್ತಿದ್ದುದೂ, ನಿರ್ಮಲಾ ತಲೆ ಅಡ್ಡಡ್ಡ ಅಲ್ಲಾಡಿಸುತ್ತಿದ್ದುದೂ ಕಾಣಿಸಿತು. ಬಲವಂತ ಎನ್ನುವಂತೆ ಹಾಸ್ಟೆಲಿನ ಹತ್ತಿರವೇ ಇದ್ದ ಕ್ಯಾಂಟೀನಿಗೆ ಹುಡುಗ ಅವಳನ್ನು ಕರೆದೊಯ್ದ. ಸುಮ್ಮನೆ ಅವರಿವರ ವಿಚಾರಕ್ಕೆ ಇಲ್ಲದ ಬಣ್ಣ ಯಾಕೆ ಬಳಿಯೋದು ಅಂದುಕೊಂಡು ವಿಜಿ ತನ್ನ ಪಾಡಿಗೆ ತಾನು ಹಾಸ್ಟೆಲಿಗೆ ವಾಪಸ್ಸಾದಳು. ಆ ಸಂಜೆ ನಿರ್ಮಲಾ ಅವಳನ್ನು ಹುಡುಕಿಕೊಂಡು ಬಂದಳು. ‘ವಿಜಿ, ನಿಂ ಹತ್ರ ಮ್ಯಾಗಝೀನ್ ಇದ್ರೆ ನನಗೆ ಕೊಡಿ’ ಎಂದಳು.

‘ಯಾಕ್ ನಿರ್ಮಲಾ? ಯಾವ್ ಮ್ಯಾಗಝೀನ್ ಬೇಕಿತ್ತು?’
‘ಯಾವ್ದಾರೂ ಸರಿಯೇ. ನೀವು ಓದಿ ಮುಗಿಸಿ ಆದ ಮೇಲೆ, ರದ್ದಿಗೆ ಹಾಕೋ ಬದ್ಲು ನಂಗೆ ಕೊಡಿ ಅಂತ ಕೇಳಕ್ಕೆ ಬಂದೆ. ಹಾಸ್ಟೆಲಿನಲ್ಲಿ ಉಳಿದವರನ್ನೂ ಕೇಳ್ತಿದೀನಿ’

‘ರದ್ದಿಗೆ ಹಾಕೋ ಮ್ಯಾಗಝೀನ್ ತಗೊಂಡು ಏನ್ ಮಾಡ್ತೀಯಾ?’
‘ನಾನು ಬ್ರೈಲ್ ನಲ್ಲಿ ಓದೋದು ಅಲ್ವಾ? ನಂಗೆ ಹಾಳೆ ಯಾವ್ದಾದ್ರೆ ಏನು, ನನ್ ಭಾಷೆ ಬರಿಯಕ್ಕೆ ಆದ್ರೆ ಸಾಕು’. ವಿಜಿ ಎಂದೂ ಬ್ರೈಲ್ ನೋಡಿರಲಿಲ್ಲ. ಎಂಥಾ ಹಾಳೆಯ ಮೇಲೆ ಬೇಕಾದರೂ ಮೂಡುತ್ತೆ ಅಂದ್ರೆ, ಇದು ಹೆಂಗಿದೆ ನೋಡಬೇಕು ಅಂತ ನಿರ್ಮಲಾಳನ್ನು ಕೇಳಿದಳು.

‘ನಂಗೊಂದ್ಸಾರಿ ಬ್ರೈಲ್ ತೋರಿಸು ನಿರ್ಮಲಾ! ಹೆಂಗಿರುತ್ತೆ ಅಂತ ನೋಡಬೇಕು’ ಎಂದು ವಿಜಿ ಕೇಳಿಕೊಂಡಳು. ಒಂದು ನಿಮಿಷ ಮೌನದ ನಂತರ, ಬ್ರೈಲ್ ‘ತೋರಿಸೋದು’ ನಿರ್ಮಲಾಗೆ ದೊಡ್ಡ ಜೋಕಾಗಿ ಭಾಸವಾಗಿ ಗಹಗಹಿಸಿ ನಗತೊಡಗಿದಳು. ನಿರ್ಮಲಾ ಯಾಕೆ ನಗುತ್ತಿದ್ದಾಳೆ ಎಂದು ವಿಜಿಗೆ ಗೊತ್ತಾಗದೇ ಹೋದರೂ, ಅವಳ ಮುಖದ ಮೇಲಿನ ನಗು ಯಾಕೋ ಕಾರ್ತೀಕ ಮಾಸದ ದೇವಸ್ಥಾನದ ಸಾವಿರ ಸಾವಿರ ದೀಪಗಳ ಬೆಳಕಿನಂತೆ ಕಂಡು ವಿಜಿ ಸುಮ್ಮನೇ ಅವಳನ್ನು ನೋಡುತ್ತಾ ನಿಂತುಬಿಟ್ಟಳು. ಯಾಕೋ ಈ ಹುಡುಗಿಯ ಮೇಲೆ ಕಕ್ಕುಲತೆ ಉಕ್ಕಿ ಬಂದು ‘ನನಗೂ ಬ್ರೈಲ್ ಕಲಿಸ್ತೀಯಾ ನಿರ್ಮಲ?’ ಎಂದು ವಿಜಿ ಕೇಳಿದಳು.

‘ನನಗೆ ಕಾಣಲ್ಲ ಅಂತ ಬ್ರೈಲ್ ಓದುತ್ತೀನಿ. ನಿಮಗೆ ಕಾಣುತ್ತೆ, ಆದರೂ ಬ್ರೈಲ್ ಕಲೀತೀನಿ ಅಂತೀರಾ. ಅದೆಲ್ಲ ಬ್ಯಾಡ. ನನಗೆ ಸಹಾಯ ಮಾಡಬೇಕೆನ್ನಿಸಿದರೆ, ನನಗೆ ಹೆಚ್ಚಿನ ಅಟೆನ್ಷನ್ ಕೊಡೋದು ನಿಲ್ಲಿಸಿ. ನಿಮ್ಮ ಎಲ್ಲಾ ಫ್ರೆಂಡ್ಸ್ ಅನ್ನು ಹೇಗೆ ಕಾಣ್ತೀರೋ ನನ್ನೂ ಹಂಗೇ ಕಾಣಬೇಕು. ನನ್ನಿಂದ ತೊಂದರೆ ಆಗುತ್ತಿದ್ದರೆ ನನಗೆ ಮುಲಾಜಿಲ್ಲದೆ ಹೇಳಬೇಕು. ಇಲ್ಲಾಂದ್ರೆ ನನಗೆ ಮುಜುಗರ ಆಗುತ್ತೆ. ನನ್ನೊಂದಿಗೆ ಫ್ರಾಂಕ್ ಆಗಿ ಇರ್ತೀನಿ ಅಂತ ಪ್ರಾಮಿಸ್ ಮಾಡಿ’ ಎಂದು ನಿರ್ಮಲ ಕೈ ಮುಂದು ಮಾಡಿದಳು. ವಿಜಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಸುಮ್ಮನೆ ‘ಆಯ್ತು. ನೀನು ಹೇಳಿದಂಗೇ ಆಗಲಿ’ ಎಂದಳು.

ನಿರ್ಮಲಾ ಜೊತೆ ಮಧ್ಯಾಹ್ನ ಕಂಡ ಹುಡುಗನ ವಿಚಾರ ಕೇಳಬೇಕೆಂದು ಒಂದು ಕ್ಷಣ ಅನ್ನಿಸಿದರೂ, ನನಗ್ಯಾಕೆ ಉಸಾಬರಿ ಎಂದು ಸುಮ್ಮನಾದಳು ವಿಜಿ.
ನಿರ್ಮಲ ನೋಡಲು ಬಹಳ ಲಕ್ಷಣವಾಗಿದ್ದಳು. ನಕ್ಕರೆ ಮಿನುಗುತ್ತಿದ್ದಳು. ಕಪ್ಪು ನಾಗರದಂಥ ಜಡೆ ಸೊಂಟದ ತನಕ ಬೀಳುತ್ತಿತ್ತು. ಸಾಮಾನ್ಯವಾಗಿ ಉದ್ದನೆ ಸ್ಕರ್ಟ್, ಮೇಲೊಂದು ಶರಟಿನ ಥರದ ಟಾಪ್ ಧರಿಸಿರುತ್ತಿದ್ದಳು. ಶಿಸ್ತು ಅಂದರೆ ಭರ್ಜರಿ ಶಿಸ್ತು. ಅವಳ ಕೂದಲು ಎಂದೂ ಅತ್ತಿತ್ತ ಆಗುತ್ತಿರಲಿಲ್ಲ. ಚೆನ್ನಾಗಿ ಎಣ್ಣೆ ಹಚ್ಚಿಕೊಂಡು ತಲೆ ಬಾಚಿ ಹೇರ್ ಪಿನ್ ಹಾಕಿಕೊಂಡು ಕೂದಲನ್ನು ಭದ್ರ ಮಾಡಿಕೊಂಡಿರುತ್ತಿದ್ದಳು. ಬಟ್ಟೆಯನ್ನು ಶುಭ್ರವಾಗಿ ಒಗೆದು ಚೆನ್ನಾಗಿ ಒದರಿ ಒಣಗಿಸಿದರೆ ಇಸ್ತ್ರಿ ಮಾಡಿದಂತೆ ಕಾಣುವ ಕಲೆಯನ್ನು ಕರಗತ ಮಾಡಿಕೊಂಡಿದ್ದಳು.

ಅವಳ ರೂಮಂತೂ ಒಂದು ಚೂರೂ ಕಸವಿಲ್ಲದ ಹಾಗೆ ಫಳಫಳ ಹೊಳೆಯುತ್ತಿತ್ತು. ಕೈಯ್ಯಿಂದ ಗಡಿಯಾರದ ಮುಳ್ಳಿನ ಸ್ಥಾನ ಗೊತ್ತು ಮಾಡಿಕೊಂಡು ಸಮಯ ಕರಾರುವಾಕ್ಕಾಗಿ ಹೇಳುತ್ತಿದ್ದಳು. ಸಂಜೆಯಾದರೆ ಸಾಕು, ಅವಳ ನೀಟಾದ ಹಾಸಿಗೆಯ ಮೇಲಿಂದ ಸೊಳ್ಳೆ ಪರದೆ ಕೆಳಗೆ ಇಳಿದಿರುತ್ತಿತ್ತು. ಸಾಮಾನ್ಯವಾಗಿ ಒಳಗೆ ಕೂತೇ ಓದುತ್ತಿದ್ದಳು. ತುಂಬಾ ಶೆಖೆ ಇದ್ದರೆ ಮಾತ್ರ ಹಾಸ್ಟೆಲಿನ ವರಾಂಡಕ್ಕೆ ಬಂದು ಕುರ್ಚಿಯ ಮೇಲೆ ಕೂತು ಯಾವುದೋ ಮ್ಯಾಗಝೀನಿನಲ್ಲಿ ತನ್ನ ಬ್ರೈಲ್ ತೂತುಗಳನ್ನು ಕೊರೆದಿರುವ ನೋಟ್ಸ್ ಓದುತ್ತಿದ್ದಳು.

ಒಮ್ಮೆ ಹೀಗೇ ನಿರ್ಮಲ ಓದಿಕೊಳ್ಳುವಾಗ ಫೋನ್ ರಿಂಗಾಗಲು ಶುರುವಾಯಿತು. ಬಹಳ ಹೊತ್ತು ಕಾದರೂ ಎತ್ತಲು ಯಾರೂ ಬರಲಿಲ್ಲ. ನಿರ್ಮಲಾಗೆ ರಿಂಗಾಗುವ ಶಬ್ದ ಕೇಳಿಕೊಂಡು ಸುಮ್ಮನಿರಲು ಆಗಲಿಲ್ಲ. ಹೋಗಿ ಫೋನ್ ಎತ್ತಿದರೆ ಅನಿತಾ ಎನ್ನುವ ಹೆಸರಿನ ಹಾಸ್ಟೆಲಿಗೆ ಹೊಸದಾಗಿ ಸೇರಿದ್ದ ವಿದ್ಯಾರ್ಥಿನಿಯ ತಂದೆ ಕೊಳ್ಳೇಗಾಲದಿಂದ ಫೋನ್ ಮಾಡಿದ್ದರು.

ಹಾಸ್ಟೆಲಿನಲ್ಲಿ ನಿರ್ಮಲಾಗೆ ಎಲ್ಲ ಹುಡುಗಿಯರ ಹೆಸರೂ ಗೊತ್ತಿತ್ತು. ಅನಿತಾ ಹೊಸದಾಗಿ ಸೇರಿದ ವಿಷಯ ಅವಳ ಗಮನಕ್ಕೆ ಬಂದಿರಲಿಲ್ಲವೋ ಏನೋ. ನಿರ್ಮಲಾ ಏಳೆಂಟು ಬಾರಿ ಆ ಹೆಸರು ಕೂಗಿದರೂ ಯಾರೂ ಪ್ರತಿಕ್ರಿಯಿಸಲಿಲ್ಲ. ಹಾಗಾಗಿ ಆ ಹೆಸರಿನ ಹುಡುಗಿಯೇ ಇಲ್ಲ ಎಂದು ಹೇಳಿ ನಿರ್ಮಲಾ ಫೋನಿಟ್ಟುಬಿಟ್ಟಳು. ಅವಳು ಫೋನ್ ಇಡುವುದಕ್ಕೂ, ಅನಿತಾಳ ಫ್ರೆಂಡ್ ಮತ್ತು ರೂಮ್ ಮೇಟ್ ನಂದಿನಿ ವರಾಂಡಕ್ಕೆ ಬರುವುದಕ್ಕೂ ಸರಿಯಾಯಿತು. ನಿರ್ಮಲಾಳನ್ನು ಕಂಡವಳೇ ತನ್ನ ಸ್ನೇಹಿತೆಯ ಹೆಸರನ್ನು ಕರೆದ ಕಾರಣ ಕೇಳಿದಳು.

ನಿರ್ಮಲಾ ನಡೆದದ್ದನ್ನು ಹೇಳಿದ ತಕ್ಷಣ ನಂದಿನಿ ಅವಳಿಗೆ ಬಾಯಿಗೆ ಬಂದ ಹಾಗೆ ಬಯ್ಯಲು ಶುರುಮಾಡಿದಳು. ‘ಅಲ್ಲಾ ಕಣೇ ಕಣ್ ಕಾಣಲ್ಲ ಅಂದ್ರೆ ಮುಚ್ಕೊಂಡು ಕೂರೋದು ತಾನೆ? ಯಾಕೇ ನಿಂಗೆ ಫೋನ್ ಎತ್ತೋ ದೊಡ್ಡಸ್ತಿಕೆ? ನೀನೇನು ವಾರ್ಡನ್ನಾ? ಅನಿತಾ ಅಪ್ಪ ಈಗ ಏನನ್ಕೊಂಡಿರಲ್ಲ? ಮಗ್ಳು ಹಾಸ್ಟೆಲ್ ಸೇರ್ತೀನಿ ಅಂತ ಹೇಳಿ ಚಂಗುಲಿ ಅಲಿಯಕ್ಕೆ ಹೋಗಿದಾಳೆ ಅನ್ಕೊಳಲ್ವಾ? ಈಗ ಅವಳ ಕೋರ್ಸು ಬಿಡಿಸಿದರೆ ನೀನ್ ದುಡ್ ಕೊಟ್ ಸೇರ್ಸ್ತೀಯಾ?’

ಜಗಳ ಶುರುವಾದಾಗಲೇ ತಾರಕಕ್ಕೇರಿತ್ತು. ಹತ್ತು ನಿಮಿಷದ ಕೂಗಾಟದ ನಂತರ ನಿರ್ಮಲ ಸುಮ್ಮನಾಗಿಬಿಟ್ಟಳು. ಅವಳ ಉಸಿರು ಏರುಪೇರಾಗುತ್ತಿತ್ತು. ಊಟಕ್ಕೇಂತ ಹೊರಟ ಹುಡುಗಿಯರು ಕೂಗಾಟ ಕೇಳಿ ಉಚಿತ ಮನರಂಜನೆ ಆಸ್ವಾದಿಸಲು ಸುತ್ತಲೂ ಗುಂಪು ಸೇರಿದರು. ಇದರಲ್ಲಿ ನಿರ್ಮಲ ಮಾಡಿದ್ದು ಅಂಥಾ ತಪ್ಪೇನಿಲ್ಲ ಎಂದು ವಾದಿಸುತ್ತಾ ನಂದಿನಿಯನ್ನು ಬಯ್ಯುವವರೇ ಇದ್ದರು.

‘ಪಾಪ ಬಿಡೇ ಗೊತ್ತಾಗಿಲ್ಲ, ಏನೋ ಹೇಳಿದಾಳೆ. ಅನಿತಾ ಆಮೇಲೆ ಅವರಪ್ಪನಿಗೆ ವಿವರಿಸಿ ಹೇಳಲಿ’
‘ಅಯ್ಯೋ ಸಣ್ ವಿಷಯಾನಪ್ಪ. ಯಾಕಿಷ್ಟು ದೊಡ್ದದು ಮಾಡ್ತಿದೀಯಾ?’
‘ಬಿಡೇ ಹೋಗ್ಲಿ. ಅನಿತಾ ಬಂದು ಮಾತಾಡ್ಕೊಳ್ಳಿ’

ನಂದಿನಿ ಸ್ವಲ್ಪ ಹೊತ್ತು ಕೂಗಾಡಿದ ನಂತರ ಸುಮ್ಮನಾದಳು. ನಿರ್ಮಲಾಗೆ ಎಲ್ಲರೂ ರೂಮಿಗೆ ಹೋಗು ಎಂದು ಹೇಳಿದರೂ ಅವಳು ಅಲ್ಲಿಂದ ಜಾಗ ಖಾಲಿ ಮಾಡಲು ಒಪ್ಪಲಿಲ್ಲ. ಏಕೆಂದರೆ ನಂದಿನಿ ಅಷ್ಟೆಲ್ಲ ಸಿಟ್ಟು ಮಾಡಿಕೊಂಡು ಬಯ್ಯುವಂಥ ಕೆಲಸ ತಾನು ಮಾಡಿಲ್ಲ ಎನ್ನುವ ಬಗ್ಗೆ ಅವಳಿಗೆ ಖಚಿತತೆ ಇತ್ತು. ಅಲ್ಲದೆ ಮನುಷ್ಯರನ್ನು ಅರ್ಥಮಾಡಿಕೊಳ್ಳುವಲ್ಲಿ ನಿರ್ಮಲಾಳ ಮನೋಬಲ ಅದ್ವಿತೀಯವಾಗಿತ್ತು. ‘ನೀವೆಲ್ಲ ಹೋಗಿ. ನಂದಿನಿ ಹತ್ರ ನಾನು ಮಾತಾಡ್ಬೇಕು’ ಎಂದಳು. ಗುಂಪು ಸೇರಿದ್ದ ಹುಡುಗಿಯರು ಊಟ ಮಾಡಿ ವಾಪಸ್ಸು ಬರುವ ಹೊತ್ತಿಗೆ ನಿರ್ಮಲಾ, ನಂದಿನಿ ಇಬ್ಬರೂ ಅತ್ತಿದ್ದರೇನೋ ಎನ್ನುವಂತೆ ಕಣ್ಣು ಕೆಂಪಗಾಗಿದ್ದವು. ಗಲಾಟೆ ವಿಷಯ ವಿಜಿ ಮತ್ತು ಸಂಗಡಿಗರಿಗೆ ಗೊತ್ತಾಗಿರಲಿಲ್ಲ. ಊಟಕ್ಕೆ ಹೋದಾಗ ಯಾರೋ ಹೀಗಾಯ್ತು ಅಂತ ಹೇಳಿದ್ದೇ ತಡ ನಿರ್ಮಲಾ ಬೆಂಬಲಕ್ಕೆ ವಿಜಿ ಓಡಿ ಬಂದಿದ್ದಳು. ಆದರೆ, ಅಲ್ಲಿ ನೋಡಿದರೆ ಸ್ವಲ್ಪ ಹೊತ್ತಿಗೆ ಮುಂಚೆ ಇಲ್ಲಿ ಗುಡುಗು ಸಿಡಿಲಿನ ವಾತಾವರಣ ಇತ್ತು ಎನ್ನುವುದನ್ನು ನಂಬಲೂ ಸಾಧ್ಯವಾಗದ ಹಾಗೆ ನಿರ್ಮಲಾ, ನಂದಿನಿ ತಲೆ ತಗ್ಗಿಸಿ ಕೂತಿದ್ದರು.

‘ನಡಿ ಊಟ ಮಾಡೋವಂತೆ’ ಎಂದು ನಂದಿನಿಯನ್ನು ದುರುಗುಟ್ಟಿ ನೋಡುತ್ತಾ ವಿಜಿ ನಿರ್ಮಲಾಗೆ ಬಲವಂತ ಮಾಡಿದಳು. ನಿರ್ಮಲಾ ‘ಶ್ ಶ್ ಶ್... ಎಂದು ಹೇಳುತ್ತಾ ವಿಜಿಗೆ ಕೂರುವಂತೆ ಸನ್ನೆ ಮಾಡಿದಳು. ನಂದಿನಿಯೂ ಊಟ ಮಾಡಿರಲಿಲ್ಲ. ಸುಮ್ಮನೆ ತಲೆ ತಗ್ಗಿಸಿ ಕೂತಿದ್ದಳು. ಮೌನ ಅಸಹನೀಯವೆನ್ನಿಸಿ ವಿಜಿ, ಐಸ್ ಬ್ರೇಕಿಂಗ್ ಕಾರ್ಯ ಕೈಗೆತ್ತಿಕೊಂಡಳು.

‘ಅಲ್ಲಾ ನಂದಿನಿ, ನಿರ್ಮಲ ಏನು ಬೇಕಂತ ಅನಿತಾ ಅಪ್ಪನಿಗೆ ತಪ್ಪು ಮಾಹಿತಿ ಕೊಟ್ಟಳಾ? ಅವಳಿಗೆ ಅನಿತಾ ಇಲ್ಲಿ ಇರೋದು ತಿಳಿದಿರಲಿಲ್ಲ. ಅಲ್ಲದೆ, ಅವರಪ್ಪ ಫೋನ್ ಮಾಡ್ತಾರೆ ಅನ್ನೋದಾದ್ರೆ ಅನಿತಾ ಇಲ್ಲೇ ಇರಬೇಕಿತ್ತು. ಎಲ್ಲಿಗೆ ಹೋಗಿದಾಳೆ?’ ಎಂದಳು.

ನಂದಿನಿ ವಿಜಿ ಹೇಳಿದ ಮಾತಿಗೆ ತಲೆ ಎತ್ತದೆ ಸುಮ್ಮನೆ ನೆಲ ನೋಡುತ್ತಿದ್ದಳು. ಮುಂದಕ್ಕೆ ಮಾತಾಡದಂತೆ ನಿರ್ಮಲಾ ವಿಜಿಯನ್ನು ತಡೆದಳು.
‘ಇದು ನೀವು ಹೇಳೋ ಅಷ್ಟು ಸರಳ ವಿಚಾರ ಅಲ್ಲ ವಿಜಿ. ನಾನು ಅಪ್ಪಿ ತಪ್ಪಿ ಮಾತಾಡಿರಬಹುದು. ಅದರಲ್ಲಿ ನನ್ನ ತಪ್ಪು ಇಲ್ಲದೇನೇ ಇರಬಹುದು. ಆದರೆ, ಅದರಿಂದ ಇನ್ಯಾರಿಗೋ ತೊಂದರೆ ಆಗುತ್ತೆ ಅನ್ನೋದಾದ್ರೆ ಅದಕ್ಕೆ ಪರಿಹಾರನೂ ಹುಡುಕಬೇಕು. ಈಗ, ಅನಿತಾ ಇಲ್ಲ ಅಂತ ಹೇಳಿರೋದು ತಪ್ಪಲ್ಲ ಅಂತ ನೀವು ನಾನು ವಾದ ಮಾಡಬಹುದು. ಆದರೆ, ಆ ಮಾಹಿತಿಯನ್ನು ಕೊಡದೇ ಇರಲಿಕ್ಕೂ ಅವಕಾಶ ಇತ್ತು. ಹಾಗೆ ಮಾಡಿದ್ದಿದ್ದ್ರೆ ಬಹುಷಃ ಸರಿ ಇರ್ತಿತ್ತೋ ಏನೋ’ ಅಂತ ನಿರ್ಮಲ ಹೇಳುತ್ತಿರುವಾಗ ವಿಜಿಗೆ ಸಿಟ್ಟು ಏರುತ್ತಿತ್ತು.

‘ಅಲ್ಲಾ ಅದೇನೋ ಅಂತಾರಲ್ಲ ಹಾಗೆ. ಹಿರೇತನಕ್ಕೆ ಗಂಧ ಕೊಟ್ರೆ ಮುದುರಿ ಮುಕ್ಳಿಗೆ ಹಚ್ಕೊಂಡಿದ್ರಂತೆ ಅಂತ ನಮ್ ಕಡೆ ಗಾದೆ ಮಾತಿದೆ. ನಂಗ್ಯಾಕೆ ನಿಂ ಸಾವಾಸ. ಜಗಳ ಆಡಿದ್ದೂ ಅಲ್ದೆ, ಸಮಾಧಾನ ಮಾಡೋಕೆ ಬಂದವರಿಗೆ ವೇದಾಂತ ಹೇಳ್ತೀಯಲ್ಲ? ಏನಾರಾ ಮಾಡ್ಕೊಂಡು ಸಾಯಿ ಅತ್ಲಾ ಕಡೆ. ಇನ್ನೊಂದ್ ಸಾರಿ ಯಾರಾದ್ರೂ ನಿನ್ಜೊತೆ ಜಗಳ ಆಡೋದಿರ್ಲಿ ನಿನ್ ಹಿಡ್ಕೊಂಡ್ ಹೊಡೀತಿದ್ರೂ ನಿನ್ ಸಹಾಯಕ್ಕೆ ನಾನ್ ಬರಲ್ಲ. ಹೋಗ್!’ ಎಂದು ಅವಡುಗಚ್ಚಿಕೊಂಡು ವಿಜಿ ಹೇಳಿದಳು.

ವಿಜಿಯ ವಿನಾಕಾರಣದ ಸಿಟ್ಟು ಕೇಳಿ ನಿರ್ಮಲಾ ಆಳವಾದ ಉಸಿರೊಂದನ್ನು ಹೊರ ಹಾಕಿದಳು.
‘ವಿಜಿ, ಅನಿತಾ ಅವರ ಅಪ್ಪನಿಗೆ ಅವಳು ಇಲ್ಲಿಗೆ ಓದೋಕೆ ಬರೋದು ಇಷ್ಟ ಇರಲಿಲ್ವಂತೆ. ಅವಳೇ ಹಟ ಹಿಡಿದು ಬಂದಿದ್ದಾಳೆ’
‘ಅದಕ್ಕೆ?’
‘ಅನಿತಾ ಮೈಸೂರಿಗೆ ಬರ್ತಿರೋದನ್ನ ಕೇಳಿ ನಂದಿನಿನೂ ಮನೇಲಿ ಒಪ್ಪಿಸಿ ಓದು ಮುಂದುವರೆಸೋಕೆ ಬಂದಿದಾಳೆ’. ವಿಜಿಗೆ ಹುಚ್ಚೇ ಹಿಡಿದಂತಾಯ್ತು. ‘ಎಲ್ಲಿಂದೆಲ್ಲೀ ಸಂಬಂಧ ಹೇಳ್ತಿದೀಯಾ?’

‘ಈಗ ಅನಿತಾ ಅವರ ಅಪ್ಪನಿಗೆ ಮಗಳು ಇಲ್ಲಿ ಇಲ್ಲ ಅನ್ನೋ ಭಾವನೆ ಬಂದುಬಿಟ್ಟರೆ ಅವಳನ್ನ ವಾಪಸ್ಸು ಕರ್ಕೊಂಡು ಹೋಗೋಕೂ ಹಿಂದು ಮುಂದು ನೋಡಲ್ವಂತೆ. ಅನಿತಾ ಹೋಗಬೇಕಾಗಿ ಬಂದರೆ ನಂದಿನಿ ಇಲ್ಲಿರೋದು ಸಾಧ್ಯವೇ ಇಲ್ಲ’

‘ಅದೇನು ಹಂಗೆ?’
‘ಹೌದು. ಅಕಸ್ಮಾತ್ ಏನಾದ್ರೂ ಅನಿತಾ ವಾಪಸ್ ಹೋದ್ರೆ ನಂದಿನಿ ಲೈಫು ಮುಗಿದಂಗೇ ಲೆಕ್ಕ. ಯಾಕಂದ್ರೆ ನಂದಿನೀನ ಅವಳ ಇಷ್ಟಕ್ಕೆ ವಿರುದ್ಧವಾಗಿ ಅವಳ ಶ್ರೀಮಂತ ಸೋದರ ಮಾವನಿಗೆ ಮದುವೆ ಮಾಡಬೇಕು ಅಂತ ಮನೇಲಿ ತಯಾರಿ ಮಾಡಿಕೊಂಡಿದ್ದಾರಂತೆ. ಆಯಪ್ಪನ ಹೆಂಡ್ತಿ ಇತ್ತೀಚೆಗೆ ತೀರೋದ್ರಂತೆ. ಅವ್ರಿಗೆ ಭಾಳಾ ವಯಸ್ಸಾಗಿದ್ದು ಇಬ್ರು ದೊಡ್ಡ ಮಕ್ಕಳಿದ್ದಾರಂತೆ’...

ಟೇಬಲ್ಲಿನ ತುದಿಗೆ ತಲೆ ತಗ್ಗಿಸಿ ಕೂತಿದ್ದ ನಂದಿನಿಯ ಕಣ್ಣಿಂದ ಫಳಕ್ ಅಂತ ಕಣ್ಣೀರು ಉದುರಿದವು.
‘ಈಗೇನು ಮಾಡೋದು ಮತ್ತೆ?’

‘ಅದೇ ಯೋಚಿಸ್ತಿದೀನಿ’
‘ಅನಿತಾ ಎಲ್ಲಿದಾಳೆ?’ ವಿಜಿ ಕೇಳಿದಳು.

‘ರೂಮಲ್ಲಿ ಮಲಗಿದಾಳೆ’
‘ಎಬ್ಸು. ನಾನು ಮನೋಹರನ ಹತ್ರ ಲೂನಾ ಇಸ್ಕೊಂಡು ಅವಳನ್ನ ಕಾಳಿದಾಸ ರಸ್ತೆಗೆ ಕರ್ಕೊಂಡು ಹೋಗಿ ಎಸ್ ಟಿ ಡಿ ಕಾಲ್ ಮಾಡ್ಸಿ ಅವರಪ್ಪನ ಹತ್ರ ಮಾತಾಡಿಸ್ತೀನಿ’ ಎಂದು ವಿಜಿ ಹೇಳುತ್ತಿದ್ದಂತೆ ನಂದಿನಿಯ ಕಣ್ಣಲ್ಲಿ ಸಂತಸ ಪ್ರತಿಫಲಿಸಿತು. ಅನಿತಾ ಎದ್ದು ಕಣ್ಣುಜ್ಜುತ್ತಾ ವರಾಂಡಕ್ಕೆ ಬರುವುದಕ್ಕೂ, ಅವಳ ಅಪ್ಪ ಇನ್ನೊಮ್ಮೆ ಫೋನ್ ಮಾಡುವುದಕ್ಕೂ ಸರಿ ಹೋಯಿತು. ಅವಳ ಮಾತು ಮುಗಿಯುವ ತನಕವೂ ಅಲ್ಲಿದ್ದ ಮೂವರೂ ಜೋರಾಗಿ ಉಸಿರೂ ಆಡಿರಲಿಲ್ಲ. ತನ್ನ ಅಪ್ಪನ ಹತ್ತಿರ ಮಾತು ಮುಗಿದ ಮೇಲೆ ಅನಿತಾ ನಂದಿನಿಯ ಕಡೆ ನೋಡಿದಳು.

‘ನಮ್ಮಪ್ಪ ಆಗಲೆ ಫೋನ್ ಮಾಡಿದ್ರಂತೆ. ಯಾವ್ದೋ ರಾಂಗ್ ನಂಬರಿಗೆ ಹೋಗಿತ್ತೇನೋ, ನಿನ್ ಹೆಸರಿನ ಹುಡುಗೀನೇ ಇಲ್ಲ ಅಂದು ಬಿಟ್ರಂತೆ. ಅದಕ್ಕೆ ಸ್ವಲ್ಪ ಹೊತ್ತು ತಡೆದು ಮತ್ತೆ ಮಾಡಿದ್ರಂತೆ’ ಎಂದಳು ಅನಿತಾ. ಕಣ್ಣು ಕಾಣದ ಹುಡುಗಿಯೊಂದು ಸ್ವಲ್ಪ ಹೊತ್ತಿಗೆ ಮುಂಚೆ ಎಲ್ಲರ ಎದೆಯಲ್ಲೂ ದೀಪ ಹಚ್ಚಿದ್ದು ಅನಿತಾಗೆ ಗೊತ್ತಾಗಲಿಲ್ಲ. ನಿರ್ಮಲಾ ಬ್ರೈಲ್ ಪುಸ್ತಕ ಟಪ್ ಅಂತ ಮುಚ್ಚಿಟ್ಟು ಹೇಳಿದಳು.

‘ನಡಿ ನಂದಿನಿ, ಊಟಕ್ಕೆ ಹೋಗೋಣ. ಇಲ್ಲಿ ಕೂತ್ರೆ ಭಾಳ ಸೊಳ್ಳೆ ಕಚ್ತವೆ’
ವಿಜಿ ಹೊರಗಿನ ಕತ್ತಲ ಕಡೆ ಮುಖ ಮಾಡಿದಳು. ನಂದಿನಿ ಕಣ್ಣೊರೆಸಿಕೊಂಡು ನಕ್ಕಳು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT