ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಕ್ಷಕರ ಲೂಟಿಗೆ ಸರ್ಕಾರದ ಅಭಯ `ಹಸ್ತ'

Last Updated 18 ಜುಲೈ 2013, 19:59 IST
ಅಕ್ಷರ ಗಾತ್ರ

ರೂಪಾಯಿಗೊಂದು ಕೇಜಿ ಅಕ್ಕಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿನಿಮಾ ಪ್ರೇಕ್ಷಕನ ಜೇಬಿಗೆ ಕೈಹಾಕಿ ಮೂರು ರೂಪಾಯಿ ಕಸಿದುಕೊಂಡಿರುವುದು ಸರಿಯೇ? ಈ ಸಲದ ರಾಜ್ಯ ಬಜೆಟ್‌ನಲ್ಲಿ ಚಿತ್ರರಂಗದವರು ಕೇಳಿದ್ದನ್ನೆಲ್ಲಾ ಕೊಡಲಾಗಿದೆ ಎಂದು ಚಿತ್ರೋದ್ಯಮಿಗಳು ಹರ್ಷದಿಂದ ನಲಿಯುತ್ತಿದ್ದಾರೆ.

ಚಿತ್ರರಂಗದ ಉಳಿವಿಗೆ ಬಜೆಟ್ ಪೂರಕವಾಗಿದೆ ಎಂಬ ಖುಷಿಯಲ್ಲಿ ಚಿತ್ರೋದ್ಯಮದ ಗಣ್ಯರೆಲ್ಲ, ಮುಖ್ಯಮಂತ್ರಿಗಳನ್ನು ಖುದ್ದಾಗಿ ತೆರಳಿ ಅಭಿನಂದಿಸಿದ್ದಾರೆ. ಆದರೆ ಚಿತ್ರರಂಗದ ಬಗ್ಗೆ ಯಾವುದೇ ಒಳನೋಟಗಳಿಲ್ಲದ, ಚಿತ್ರೋದ್ಯಮದ ನಿಜ ಸಂಕಟವನ್ನು ಅರಿಯದೆ `ಕಾಟಾಚಾರದ ಕಾಣಿಕೆ'ಯನ್ನು ನೀಡಿರುವ ಸಿದ್ದರಾಮಯ್ಯನವರ ಬಜೆಟ್ ಚಿತ್ರರಂಗದ ಪಾಲಿಗೆ ಯಾವುದೇ ಪ್ರಯೋಜನ ನೀಡಿದಂತೆ ಕಾಣುವುದಿಲ್ಲ.

ಡಾ. ರಾಜ್‌ಕುಮಾರ್ ಅವರ ಸ್ಮಾರಕವನ್ನು ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಾಗುವುದು ಎನ್ನುವುದು ಸುದ್ದಿಯಾಗುತ್ತದೆಯೇ ಹೊರತು ಬಜೆಟ್‌ನಲ್ಲಿ ಸೇರುವ ವಿಷಯವಾಗಿರಲಿಲ್ಲ. ರಾಜ್ ಸ್ಮಾರಕಕ್ಕಾಗಿ ಈಗಾಗಲೇ ಹತ್ತು ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಸಾವಿರಾರು ಜನ ನಿತ್ಯ ಅಲ್ಲಿಗೆ ಭೇಟಿ ಕೊಡುತ್ತಿದ್ದಾರೆ. ಈ ಹಿಂದಿನ ಸರ್ಕಾರಗಳು ಈ ಸ್ಮಾರಕಕ್ಕೆ ಏನೇನು ಬೇಕೋ ಎಲ್ಲವನ್ನೂ ಕೊಟ್ಟಿವೆ.

ಉದ್ಘಾಟನೆ ಎಂಬ ಸರ್ಕಾರಿ ಕಾರ್ಯಕ್ರಮ ನಡೆದಿಲ್ಲ ಎನ್ನುವುದನ್ನು ಬಿಟ್ಟರೆ, ಅಭಿಮಾನಿಗಳಿಗೆ ಅದು ಈಗಾಗಲೇ ಮುಕ್ತವಾಗಿದೆ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಎರಡು ಎಕರೆ ಜಮೀನನ್ನು ಬಜೆಟ್‌ಗೆ ಮುನ್ನಾದಿನವೇ ನೀಡಿದ್ದನ್ನು ಸುದ್ದಿ ಮಾಡಲಾಗಿದ್ದು ಅದು ಬಜೆಟ್ ರಹಸ್ಯವಾಗೇನೂ ಉಳಿದಿರಲಿಲ್ಲ. ಸ್ಮಾರಕ ಕಾಮಗಾರಿಗೂ ಹಿಂದಿನ ಸರ್ಕಾರವೇ ಎರಡು ಕಂತಿನಲ್ಲಿ ಹಣ ಬಿಡುಗಡೆ ಮಾಡಿರುವುದರಿಂದ ಪ್ರಸ್ತುತ ಸರ್ಕಾರ ಅದರ `ಲಾಭ' ವನ್ನು ಪಡೆಯಲು ಯತ್ನಿಸಬಾರದಿತ್ತು.

ಚಿತ್ರೋದ್ಯಮದ ಅಮೃತ ಮಹೋತ್ಸವ ಭವನ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ಎರಡೂವರೆ ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ ಮೀಸಲಾಗಿರಿಸಿರುವುದೂ ಕೂಡ ಹೊಸ ವಿಷಯವೇ ಅಲ್ಲ. ಅಮೃತ ಮಹೋತ್ಸವ ಭವನದ ಕಲ್ಪನೆ ಏನು ಎನ್ನುವುದು ಚಿತ್ರರಂಗದವರಿಗಾಗಲೀ ಸರ್ಕಾರಕ್ಕಾಗಲಿ ಇದ್ದಂತಿಲ್ಲ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಮೃತ ಮಹೋತ್ಸವ ಭವನದ ಸಂಪೂರ್ಣ ಸ್ವಾಮ್ಯವನ್ನು ಪಡೆಯಲು  ಹಕ್ಕುಚಲಾಯಿಸುತ್ತಿರುವುದು ಕೂಡ ತಮಾಷೆಯ ವಿಷಯವಾಗಿ ಕಾಣುತ್ತಿದೆ. ಅಮೃತೋತ್ಸವ ಭವನಕ್ಕೆ ಐದು ಕೋಟಿ ರೂಪಾಯಿಗಳನ್ನು ಮೀಸಲಿಟ್ಟು, ನಿವೇಶನವನ್ನು ಗುರುತಿಸಿ ಕೊಟ್ಟ ಕೀರ್ತಿ ಕೂಡ ಯಡಿಯೂರಪ್ಪ ಅವರ ಸರ್ಕಾರದ್ದೇ ಆಗಿದೆ.

ಆದರೆ ಚಲನಚಿತ್ರಕ್ಕೆ ಸಂಬಂಧಪಟ್ಟದ್ದೆಲ್ಲಾ ನಮ್ಮದೇ ಆಗಬೇಕು ಎನ್ನುವ ಚಿತ್ರೋದ್ಯಮಿಗಳ ಸ್ವಾರ್ಥಗುಣದಿಂದಾಗಿ ಅಮೃತ ಮಹೋತ್ಸವ ಭವನಕ್ಕಾಗಿ ಇದುವರೆಗೆ ಮಣ್ಣು ತೆಗೆಯುವ ಕೆಲಸವಾಗಿದೆಯೇ ಹೊರತು ಉಳಿದ ಕೆಲಸಗಳೇನೂ ಆಗಿಲ್ಲ.ಅಮೃತ ಮಹೋತ್ಸವ  ಭವನ ಒಂದು ಸಾಂಸ್ಕೃತಿಕ ಕೇಂದ್ರವಾಗಿ ತಲೆ ಎತ್ತಬೇಕು.

ಸಿನಿಮಾ ಚರ್ಚೆಗಳ ಕೇಂದ್ರವಾಗಿ, ನಾಟಕ, ಸಿನಿಮಾಗಳ ಪ್ರದರ್ಶನ ವೇದಿಕೆಯಾಗಿ ರೂಪುಗೊಂಡಾಗ ಮಾತ್ರ ಭವನದ ಉದ್ದೇಶ ಈಡೇರುತ್ತದೆ. ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಚಿತ್ರೋದ್ಯಮಿಗಳು ಮುಂದಾಗುವುದು ಸೂಕ್ತ. ಪ್ರಸ್ತುತ 75 ಚಿತ್ರಗಳಿಗೆ ಸರ್ಕಾರ ಸಹಾಯಧನ ನೀಡುತ್ತಿದೆ. ಇನ್ನು ಮುಂದೆ 100 ಗುಣಮಟ್ಟದ ಚಿತ್ರಗಳು ತಲಾ ಹತ್ತು ಲಕ್ಷ ರೂಪಾಯಿ ಸಹಾಯ ಧನ ಪಡೆಯುತ್ತವೆ.

ಚಿತ್ರ ನಿರ್ಮಾಪಕರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಇದೊಂದು ಸ್ವಾಗತಾರ್ಹ ಬೆಳವಣಿಗೆ. ಆದರೆ ಸರ್ಕಾರದ ಸಹಾಯಧನ ಪಡೆಯುವ ವಿಷಯದಲ್ಲಿ ಚಿತ್ರೋದ್ಯಮದಲ್ಲಿ ಭಿನ್ನಾಭಿಪ್ರಾಯಗಳಿವೆ. ಪ್ರತೀ ವರ್ಷ ಕನ್ನಡದಲ್ಲಿ ತಯಾರಾಗುವ ಚಿತ್ರಗಳ ಸಂಖ್ಯೆ ಸುಮಾರು 120ರಿಂದ 130. ಇವುಗಳಲ್ಲಿ ರೀಮೇಕ್ ಚಿತ್ರಗಳೇ ಸುಮಾರು 40 ಇರುತ್ತವೆ. ರೀಮೇಕ್ ಚಿತ್ರಗಳಿಗೆ ಸಹಾಯಧನ ಇಲ್ಲ.

ಅಂತಹ ಚಿತ್ರಗಳನ್ನು ಹೊರತು ಪಡಿಸಿದರೆ ಸುಮಾರು ನೂರು ಚಿತ್ರಗಳು ಸಬ್ಸಿಡಿಗಾಗಿ ಕಾಯುತ್ತವೆ. ಈ ಪಟ್ಟಿಯಲ್ಲಿ ಎಂಟು ಕೋಟಿ ವೆಚ್ಚದಲ್ಲಿ ತಯಾರಾದ ಚಿತ್ರವೂ ಇರಬಹುದು, ಒಂದೇ ಕೋಟಿಯಲ್ಲಿ ತಯಾರಾದ ಚಿತ್ರವೂ ಇರಬಹುದು. 45 ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಾಗುವ ಪರ್ಯಾಯ ಚಿತ್ರಗಳೂ ಇರಬಹುದು. ಎಲ್ಲ ಚಿತ್ರಗಳೂ ತಲಾ ಹತ್ತು ಲಕ್ಷ ರೂಪಾಯಿಗಳ ಸಹಾಯಧನ ಪಡೆಯಲು ಅರ್ಹವಾಗುತ್ತದೆ.

ಗುಣಮಟ್ಟದ ಚಿತ್ರವನ್ನು ನೀಡುವ ಉದ್ದೇಶದಿಂದ ದೂರವೇ ಉಳಿದು, ಅಗ್ಗದ ಮನರಂಜನೆಯ ತಂತ್ರಕ್ಕೆ ಬಲಿಬಿದ್ದಿರುವ ನಿರ್ಮಾಪಕರು ಕೂಡ ಸಹಾಯ ಧನವನ್ನು ನಿರೀಕ್ಷಿಸುತ್ತಾರೆ. ಕನ್ನಡದ ಸಂಸ್ಕೃತಿ, ಭಾಷೆ, ಕಾದಂಬರಿ ಹೀಗೆ ಯಾವುದನ್ನು ಒಳಗೊಳ್ಳದ ಚಿತ್ರಗಳೂ ಕೂಡ ಸಹಾಯಧನ ಪಡೆದುಕೊಳ್ಳುತ್ತವೆ ಎನ್ನುವುದೇ ವಿಷಾದದ ಸಂಗತಿ.

ಮನರಂಜನಾ ತೆರಿಗೆ ವಿನಾಯಿತಿ, ಸಬ್ಸಿಡಿ ಮೊದಲಾದ ಸೌಲಭ್ಯಗಳೆಲ್ಲಾ ಚಿತ್ರರಂಗದ ಪ್ರಗತಿಗೆ ಪ್ರೇರಕವಾಗುವ ಬದಲು ಮಾರಕವಾಗುತ್ತಿವೆ ಎನ್ನುವ ಒಂದು ವರ್ಗವೂ ಚಿತ್ರರಂಗದಲ್ಲಿದೆ. ಚಿತ್ರರಂಗ ಅಭಿವೃದ್ಧಿ ಹಂತದಲ್ಲಿರುವಾಗ, ಕನ್ನಡ ಚಿತ್ರಗಳ ನಿರ್ಮಾಣಕ್ಕೆ ಪ್ರೋತ್ಸಾಹ ಕೊಡುವ ಉದ್ದೇಶದಿಂದ ಅರವತ್ತರ ದಶಕದಲ್ಲಿ ಇಂತಹ ಪ್ರೋತ್ಸಾಹದ ಅಗತ್ಯ ಬಹಳ ಇತ್ತು.

ಆದರೆ ಇಂದು ಪರಭಾಷಾ ನಿರ್ಮಾಪಕರು ಬಂದು, ಯಶಸ್ಸಿನ ತುದಿಯಲ್ಲಿರುವ ನಟರ ಬೆನ್ನುಹತ್ತಿ ದುಡ್ಡು ಸುರಿದು, ದುಡ್ಡು ಬಾಚುತ್ತಿರುವ ಸಂದರ್ಭದಲ್ಲಿ ಹಾಗೂ ಮಾರುಕಟ್ಟೆಯ ವಿಸ್ತಾರ ಸಾಧ್ಯತೆಗಳ ಮೂಲಕ ತಮ್ಮ ಬಂಡವಾಳಕ್ಕೆ ಸಂಚಕಾರ ಬರದಂತೆ ನೋಡಿಕೊಳ್ಳುವ ಜಾಣ್ಮೆ ಚಿತ್ರರಂಗದಲ್ಲಿ ಇರುವುದರಿಂದ ಅಂತಹ ದೊಡ್ಡ ನಿರ್ಮಾಪಕರಿಗೆ ಸಬ್ಸಿಡಿ ಹಣ ಅರೆಕಾಸಿನ ಮಜ್ಜಿಗೆಯಂತಾಗಿದೆ ಎನ್ನುವ ಅಭಿಪ್ರಾಯವೂ ಇದೆ.

1966ರಲ್ಲಿ ಸರ್ಕಾರ ಬಜೆಟ್ಟಿನಲ್ಲಿ ಮೈಸೂರು ರಾಜ್ಯದಲ್ಲಿ ತಯಾರಾದ ಎಲ್ಲ ಕನ್ನಡ ಚಿತ್ರಗಳಿಗೆ ಸಹಾಯಧನ ನೀಡುವ ಯೋಜನೆಯನ್ನು ಪ್ರಕಟಿಸಿತ್ತು. ಮನರಂಜನಾ ತೆರಿಗೆಯ ಮೇಲೆ ಸರ್‌ಚಾರ್ಜ್ ವಿಧಿಸಿ ಇದರಿಂದ ಸಂಗ್ರಹವಾಗುವ ಸಮಗ್ರ ಮೊತ್ತವನ್ನು ಕನ್ನಡ ಚಿತ್ರೋದ್ಯಮದ ಅಭಿವೃದ್ಧಿಗೆ ಬಳಸುವ ಭರವಸೆ ನೀಡಿತು. ಆ ವೇಳೆಗೆ ಕನ್ನಡದಲ್ಲಿ ತಯಾರಾಗಿದ್ದುದು ಕೇವಲ 164 ಚಲನಚಿತ್ರಗಳು ಮಾತ್ರ. 32 ವರ್ಷಗಳ ವಾಕ್ಚಿತ್ರ ಬೆಳವಣಿಗೆಯಲ್ಲಿ ಇದು ಅತ್ಯಂತ ಕಡಿಮೆ ಸಾಧನೆ.

ಪರಭಾಷಾ ಚಿತ್ರಗಳ ಪೈಪೋಟಿಯ ನಡುವೆ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಚಿತ್ರಮಂದಿರಗಳನ್ನು ಹೊಂದಿಸಿಕೊಳ್ಳುವುದೇ ದೊಡ್ಡ ಸಮಸ್ಯೆ ಎನಿಸಿತ್ತು. ಅದಕ್ಕಾಗಿ 1960ರಿಂದಲೇ ಕನ್ನಡ ಚಳವಳಿಗಾರರು ಹೋರಾಟವನ್ನೇ ಆರಂಭಿಸಿದ್ದರು. ಈ ಹಂತದಲ್ಲಿ ಕನ್ನಡ ಚಿತ್ರ ನಿರ್ಮಾಣಕ್ಕೆ ಸರ್ಕಾರದ ಪ್ರೋತ್ಸಾಹ ಅತ್ಯಗತ್ಯವಾಗಿತ್ತು. 1966ರ ಬಜೆಟ್ಟಿನಲ್ಲಿ ಪ್ರತೀ ಚಿತ್ರಕ್ಕೆ 30 ಸಾವಿರ ರೂಪಾಯಿ ಸಹಾಯ ಧನ ಘೋಷಿಸಲಾಯಿತು.

ನಂತರದ ವರ್ಷದಲ್ಲಿ ಅದನ್ನು 50 ಸಾವಿರಕ್ಕೆ ಹೆಚ್ಚಿಸಲಾಯಿತು. 1974ರಲ್ಲಿ ಈ ಮೊತ್ತವನ್ನು ಕಪ್ಪುಬಿಳುಪು ಚಿತ್ರಕ್ಕೆ ಒಂದು ಲಕ್ಷ, ಬಣ್ಣದ ಚಿತ್ರಕ್ಕೆ ಒಂದೂವರೆ ಲಕ್ಷ ಎಂದು ಹೆಚ್ಚಿಸಲಾಯಿತು. 1996ರಲ್ಲಿ ಗರಿಷ್ಠ ಹತ್ತು ಲಕ್ಷಕ್ಕೆ ಈ ಮೊತ್ತ ಏರಿದೆ. 100 ಗುಣಮಟ್ಟದ ಚಿತ್ರಗಳನ್ನು ತಯಾರಿಸಿ ಸರ್ಕಾರದ ಈ ಸೌಲಭ್ಯವನ್ನು ಚಿತ್ರರಂಗದವರು ಸದುಪಯೋಗ ಮಾಡಿಕೊಳ್ಳಬೇಕಿದೆ.

ರಾಜ್ಯದ ಚಿತ್ರಮಂದಿರಗಳ ಉಳಿವಿಗೆ ತೆರಿಗೆ ರಹಿತ ಸೇವಾ ಶುಲ್ಕವನ್ನು ಹೆಚ್ಚಳ ಮಾಡಿರುವುದು ಕನ್ನಡ ಸಿನಿಮಾ ಪ್ರೇಕ್ಷಕರ ದೃಷ್ಟಿಯಿಂದ ತೀರಾ ನಿರಾಶಾದಾಯಕ ನಿರ್ಧಾರ. ಸರ್ಕಾರ ಸದ್ದಿಲ್ಲದೆ ಬಡ ಸಿನಿಮಾ ಪ್ರೇಕ್ಷಕರನ್ನು ಹಗಲು ದರೋಡೆ ಮಾಡಿದೆ. ವಾರ್ಷಿಕ ವರ್ಗಾವಣೆಯ ಅವಧಿಯನ್ನು ದಂಧೆಕೋರರ ಒತ್ತಡಕ್ಕೆ ಮಣಿದು ಮೂರು ಬಾರಿ ವಿಸ್ತರಣೆ ಮಾಡಿದ ಮುಖ್ಯಮಂತ್ರಿಗಳು, ಕಾರ್ಪೊರೇಟ್ ಕುಳಗಳ ಒತ್ತಡಕ್ಕೆ ಒಳಗಾಗಿ ಚಿತ್ರಮಂದಿರಗಳ ಮಾಲೀಕರು ತೆರಿಗೆ ರಹಿತ ಸೇವಾ ಶುಲ್ಕವನ್ನು ಹೆಚ್ಚಿಸಿಕೊಳ್ಳಲು ಬಜೆಟ್ಟಿನಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ.

ಇದರಿಂದಾಗಿ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವ ಪ್ರೇಕ್ಷಕ ಮೂರು ರೂಪಾಯಿ ಹೆಚ್ಚಾಗಿ ಕೊಡಬೇಕು. ಚಿತ್ರಮಂದಿರಗಳು ಇತ್ತೀಚಿನ ದಿನಗಳಲ್ಲಿ ಮಾಲ್‌ಗಳಾಗಿ, ಆಸ್ಪತ್ರೆಗಳಾಗಿ ಪರಿವರ್ತನೆಯಾಗುತ್ತಿವೆ. ನಷ್ಟದಲ್ಲಿರುವ ಇಂತಹ ಚಿತ್ರಮಂದಿರಗಳನ್ನು ಉಳಿಸಲು ಏನಾದರೂ ಯೋಜನೆಗಳನ್ನು ರೂಪಿಸಿದರೆ ಅದು ಸ್ವಾಗತಾರ್ಹ. ಆದರೆ ನೂರರಿಂದ 300 ರೂಪಾಯಿವರೆಗೆ ಟಿಕೆಟ್ ದರ ವಿಧಿಸಿ, ಮನರಂಜನೆ ಬಯಸಿ ಬರುವ ಪ್ರೇಕ್ಷಕರ ಜೇಬು ಲೂಟಿ ಮಾಡುವ ಮಲ್ಟಿಫ್ಲೆಕ್ಸ್ ಚಿತ್ರಮಂದಿರದವರಿಗೆ ತೆರಿಗೆ ರಹಿತವಾಗಿ ಮೂರು ರೂಪಾಯಿ ವಸೂಲಿ ಮಾಡಲು ಅವಕಾಶ ಕೊಟ್ಟಿರುವುದು ಜನಪರ ಎನ್ನಿಸುವುದಿಲ್ಲ.

ಪ್ರದರ್ಶಕರ ಪರವಾದ ಈ ಒಲವು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಗಳಿಗೆ ಹೇಗೆ ಮೂಡಿತು ಎನ್ನುವುದೇ ಚೋದ್ಯ. ಸಾಲ ಸೋಲ ಮಾಡಿ ಚಿತ್ರ ನಿರ್ಮಿಸುವ ನಿರ್ಮಾಪಕರ ಹಿತವನ್ನು ಇದರಿಂದ ಕಾಯ್ದಂತಾಗಲಿಲ್ಲ. ವಾಕ್ಚಿತ್ರ ಕಾಲದಿಂದಲೂ ಪ್ರದರ್ಶಕರಿಂದ ಚಿತ್ರ ನಿರ್ಮಾಪಕರಿಗೆ ಯಾವುದೇ ರೀತಿಯ ಬೆಂಬಲ ಸಿಕ್ಕಿಲ್ಲ. ಪ್ರದರ್ಶಕರು ಪರಭಾಷಾ ಚಿತ್ರಗಳಿಗೇ ಒಲವು ತೋರುತ್ತಾರೆ. ಚಿತ್ರಮಂದಿರಗಳ ಬಾಡಿಗೆಯನ್ನು ಯದ್ವಾ ತದ್ವಾ ವಸೂಲು ಮಾಡುತ್ತಾರೆ.

ಒಂದೊಂದು ಚಿತ್ರಮಂದಿರವೂ ಒಂದೊಂದು ರೀತಿಯ ಬಾಡಿಗೆಯನ್ನು ವಿಧಿಸುತ್ತದೆ. ಪರಭಾಷಾ ಚಿತ್ರವನ್ನು ಪ್ರದರ್ಶಿಸುವ ಪ್ರದರ್ಶಕರು, ಕನ್ನಡ ಚಿತ್ರವನ್ನೇ ಪ್ರದರ್ಶಿಸಿದ್ದೇವೆ ಎನ್ನುವ ದಾಖಲೆಗಳನ್ನು ಸೃಷ್ಟಿಸಿ, ಮನರಂಜನಾ ತೆರಿಗೆ ವಿನಾಯಿತಿ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಂಡಿರುವ ಉದಾಹರಣೆಗಳು ಕೂಡ ಬಹಳಷ್ಟಿವೆ. ಇಂದು ತೀರಾ ಸಂಕಷ್ಟ ಸ್ಥಿತಿಯಲ್ಲಿರುವವನು ನಿರ್ಮಾಪಕ.

ಕೋಟ್ಯಂತರ ರೂಪಾಯಿ ಪಣಕ್ಕಿಟ್ಟು ವ್ಯವಹಾರ ನಡೆಸುವ ನಿರ್ಮಾಪಕ ಅಕಸ್ಮಾತ್ ಕೈಸುಟ್ಟುಕೊಂಡರೆ, ಕಾಲ್‌ಶೀಟ್‌ಗೆ ಕೋಟಿ ಕೋಟಿ ಕೇಳುವ ನಾಯಕ ನಟ ಯಾರರೂ ರಕ್ಷಣೆಗೆ ಬರುವುದಿಲ್ಲ. ಪ್ರದರ್ಶಕರೂ ಕೂಡ ಕಿಂಚಿತ್ತೂ ದಯೆ ತೋರುವುದಿಲ್ಲ. ನಷ್ಟ ಪೀಡಿತ ನಿರ್ಮಾಪಕರಿಗೆ ಸರ್ಕಾರದಿಂದಲೂ ಯಾವ ರಕ್ಷಣೆ ಇಲ್ಲ.

ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ, ನಿರ್ಮಾಪಕರಿಗೆ ಲಾಭವಾಗುವಂತಹ ಯೋಜನೆಗಳನ್ನು ರೂಪಿಸುವ ಅಗತ್ಯ ಬಹಳವಾಗಿತ್ತು. ಪ್ರೇಕ್ಷಕರನ್ನು ಲೂಟಿ ಮಾಡುವುದೇ ಪರಮಗುರಿಯನ್ನಾಗಿಸಿಕೊಂಡಿರುವ ಚಿತ್ರಮಂದಿರಗಳ ಮಾಲೀಕರನ್ನು ಸಂತೃಪ್ತಗೊಳಿಸುವ ಪರಮಧ್ಯೇಯವನ್ನು ಸಿದ್ದರಾಮಯ್ಯನವರು ಏಕೆ ಹೊಂದಿದ್ದಾರೋ ಅರ್ಥವಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT