ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇತಾತ್ಮಗಳಿಗೆ ಗುಂಡಿನ ಸತ್ಕಾರ, ಶಾಲೆ ಆರಂಭಕ್ಕೆ ವರ

Last Updated 11 ಜುಲೈ 2011, 19:30 IST
ಅಕ್ಷರ ಗಾತ್ರ

ಸಾಂದರ್ಭಿಕ ಮತ್ತು ಸಾಂಸ್ಕೃತಿಕ ಪ್ರಸ್ತುತತೆ ಇಲ್ಲದಿದ್ದರೆ ಯಾವುದೇ ಒಂದು ಅಭಿವೃದ್ಧಿಗೆ ಅರ್ಥ ಬರುವುದಿಲ್ಲ ಎಂಬುದು ನನ್ನ ಬಲವಾದ ನಂಬಿಕೆ. ಈ ನನ್ನ ದೃಷ್ಟಿಕೋನವನ್ನು ಹಲವರು ಪ್ರಶ್ನೆ ಮಾಡಿದ್ದಿದೆ. 23 ವರ್ಷಗಳ ಹಿಂದೆ ನನಗಾದ ಒಂದು ಅಪೂರ್ವವಾದ ಅನುಭವವೇ ನನ್ನ ಈ ನಂಬಿಕೆಯ ಮೂಲ.

1987ರಲ್ಲಿ ಬ್ರಹ್ಮಗಿರಿಯನ್ನು ನಾವು ಪ್ರವೇಶಿಸಿದಾಗ ಮೊದಲು ನಮಗೆ ಆಪ್ತನಾದ ವ್ಯಕ್ತಿಯೆಂದರೆ `ಯೆರವ~ ಆದಿವಾಸಿ ಪಂಗಡಕ್ಕೆ ಸೇರಿದ ಮುದ್ದಯ್ಯ. ನಾವು ಮಾಡಲು ಹೊರಟಿದ್ದ ಕೃಷಿ ಚಟುವಟಿಕೆಗೆ ಆತ ಅಗತ್ಯ ನೆರವು ನೀಡುತ್ತಿದ್ದುದು ಮಾತ್ರವಲ್ಲ, ಬಹಳಷ್ಟು ಬಾರಿ ಈ ಬಗ್ಗೆ ನಮ್ಮಡನೆ ಸೂಕ್ತ ಸಮಾಲೋಚನೆಯನ್ನೂ ನಡೆಸುತ್ತಿದ್ದ. ಹೊಸಹಳ್ಳಿಯಲ್ಲಿ ಆಗ ತಾನೇ ಸರ್ಕಾರ ನಮಗೆ ಐದು ಎಕರೆ ಜಮೀನು ಮಂಜೂರು ಮಾಡಿತ್ತು.

 ಇಲ್ಲಿ ಆದಿವಾಸಿಗಳ ಮಕ್ಕಳಿಗಾಗಿ ಶಾಲೆಯೊಂದನ್ನು ತೆರೆಯುವುದು ನಮ್ಮ ಉದ್ದೇಶವಾಗಿತ್ತು. ಆಗ ಬ್ರಹ್ಮಗಿರಿಯಲ್ಲಿದ್ದ ಕೊಟ್ಟಿಗೆಯಂತಹ ಶಾಲೆಗೆ 28 ಮಕ್ಕಳು ಬರುತ್ತಿದ್ದರು. ಹೊಸಹಳ್ಳಿಯ ನಮ್ಮ ಜಾಗದ ಮೂಲಕ ಈ ವ್ಯವಸ್ಥೆಗೆ ಹೊಸ ರೂಪ ಕೊಡಲು ನಾವು ಚಿಂತನೆ ನಡೆಸಿದ್ದೆವು. ಅಲ್ಲಿ ನಾವು ಶಾಲಾ ಕಟ್ಟಡ ನಿರ್ಮಿಸಲು ನಿರ್ಧರಿಸಿದ್ದ ವಿಷಯ ಬಹು ಬೇಗನೇ ಸುತ್ತಮುತ್ತಲಿನ ಜನರಿಗೆಲ್ಲಾ ಹರಡಿತು. ಕೆಲವು ದಿನಗಳ ಬಳಿಕ ಮಾಸ್ತಿ ಎಂಬಾತನ ನಾಯಕತ್ವದ್ಲ್ಲಲಿ ಜೇನು ಕುರುಬರ ತಂಡವೊಂದು ನನ್ನನ್ನು ಭೇಟಿ ಮಾಡಿತು.

 ಹೊಸಹಳ್ಳಿಯಲ್ಲಿ ಯಾವುದೇ ಶಾಶ್ವತ ಕಟ್ಟಡ ಕಟ್ಟುವುದನ್ನು ಈ ತಂಡ ಬಲವಾಗಿ ವಿರೋಧಿಸಿತು. ಇದರ ಹಿಂದೆ ಪ್ರಬಲವಾದ ಕಾರಣವೂ ಅವರಲ್ಲಿತ್ತು. ಅದೆಂದರೆ, ಸರ್ಕಾರ ನಮಗೆ ಮಂಜೂರು ಮಾಡಿಕೊಟ್ಟಿದ್ದ ಜಾಗ ಒಂದು ಕಾಲದಲ್ಲಿ ಅವರ ಪೂರ್ವಜರ ಸ್ಮಶಾನ ಆಗಿತ್ತು. ಹೀಗಾಗಿ ಅವರು ಚಿಂತಾಕ್ರಾಂತರಾಗಿದ್ದರು. ಬಹಳಷ್ಟು ವರ್ಷಗಳಿಂದ ಅವರು ಆ ಜಾಗವನ್ನು ತಮ್ಮವರ ಅಂತ್ಯಸಂಸ್ಕಾರಕ್ಕೆ ಬಳಸುತ್ತಿರಲಿಲ್ಲವಾದರೂ ಅಲ್ಲಿ ತಮ್ಮ ಪೂರ್ವಜರ ಪ್ರೇತಾತ್ಮಗಳು ವಾಸಿಸುತ್ತಿವೆ ಎಂದೇ ಅವರು ಭಾವಿಸಿದ್ದರು.

 ಅಂತಹ ಸ್ಥಳದಲ್ಲೇನಾದರೂ ಕಟ್ಟಡ ಕಟ್ಟಲು ಹೊರಟರೆ ಆ ಪ್ರೇತಾತ್ಮಗಳು ಬರೀ ನನಗಷ್ಟೇ ಅಲ್ಲ, ಶಾಲಾ ಮಕ್ಕಳು ಮತ್ತು ಆ `ಜಮ್ಮಾ~ದಲ್ಲಿ (ಒಬ್ಬ ಮುಖ್ಯಸ್ಥನ ನಿಯಂತ್ರಣದಲ್ಲಿ ಇರುವ, ಒಂದು ಆದಿವಾಸಿ ಪಂಗಡಕ್ಕೆ ಸೇರಿದ ಸಾಂಪ್ರದಾಯಿಕ ಪ್ರದೇಶ) ನೆಲೆಸಿರುವ ಇಡೀ ಜೇನು ಕುರುಬ ಸಮುದಾಯಕ್ಕೇ ಕೇಡುಂಟು ಮಾಡುತ್ತವೆ ಎಂದು ಅವರು ಹೇಳಿದರು.

ಕ್ರಮೇಣ ಆ ವಿವಾದಿತ ಸ್ಥಳಕ್ಕೆ ನನ್ನೊಂದಿಗೆ ತೆರಳದಂತೆ ಮಕ್ಕಳಿಗೂ ಸೂಚನೆ ನೀಡಲಾಯಿತು. ಇತರ `ಯಜಮಾನ~ರೂ ನನ್ನನ್ನು ಭೇಟಿಯಾಗಿ ಉದ್ದೇಶಿತ ಯೋಜನೆಯನ್ನು ಕೈಬಿಡುವಂತೆ ನನ್ನ ಮೇಲೆ ಒತ್ತಡ ಹೇರಿದರು. ಇದಕ್ಕೆ ನಾನು ಬಗ್ಗುವವನಲ್ಲ ಎಂಬುದು ತಿಳಿಯುತ್ತಿದ್ದಂತೆಯೇ, ಒಂದು ವೇಳೆ ಶಾಲೆ ಕಟ್ಟಿದರೂ ಅಲ್ಲಿಗೆ ತಮ್ಮ ಪಂಗಡದವರು ಮಕ್ಕಳನ್ನು ಕಳುಹಿಸದಂತೆ ನೋಡಿಕೊಳ್ಳುತ್ತೇವೆ ಎಂದು ತಾಕೀತು ಮಾಡಿದರು.

ಆಗ ನನಗೆ ನಿಜವಾದ ಸಂಕಟ ಶುರುವಾಯಿತು. ಆದಿವಾಸಿಗಳು ಮೊದಲೇ ಭಾವನಾ ಜೀವಿಗಳು. ತಮ್ಮ ಪ್ರೇತಾತ್ಮಗಳಿಗೆ ಯಾರೂ ತೊಂದರೆ ಕೊಡಬಾರದು, ಎಲ್ಲರೂ ಅವುಗಳನ್ನು ಗೌರವಿಸಬೇಕು ಎಂಬ ಗಟ್ಟಿ ನಂಬಿಕೆ ಅವರಲ್ಲಿದೆ. ವಸ್ತುಸ್ಥಿತಿ ಹೀಗಿರುವಾಗ ಒಂದು ವೇಳೆ ಈ ಮುಖ್ಯಸ್ಥರೇನಾದರೂ ತಾವು ಹೇಳಿದಂತೆಯೇ ನಡೆದುಕೊಂಡು ಬಿಟ್ಟರೆ ಶಾಲಾ ಕೊಠಡಿಗಳು ಮಕ್ಕಳಿಲ್ಲದೆ ಭಣಗುಟ್ಟುವುದಂತೂ ಖಂಡಿತ.

ಆದರೆ ಇಂತಹ ವಿರೋಧಗಳೆಲ್ಲಾ ಕಾಲಕ್ರಮೇಣ ದೂರಾಗುವ ಸಾಧ್ಯತೆ ಇರುವುದರಿಂದ ನನ್ನ ಪ್ರಯತ್ನದಿಂದ ಹಿಂದೆ ಸರಿಯದೆ ಶಾಲೆ ನಿರ್ಮಿಸಿಯೇ ತೀರಬೇಕು ಎಂಬ ಯೋಚನೆಯನ್ನೂ ಒಂದೆಡೆ ನಾನು ಮಾಡುತ್ತಿದ್ದೆ. ಮತ್ತೊಂದೆಡೆ, ನಾವು ಸೇವೆ ಮಾಡುವ ಸಲುವಾಗಿ ಬಂದಿರುವ ಸ್ಥಳೀಯರ ಭಾವನೆಗಳನ್ನು ಕಡೆಗಣಿಸುವುದು ಸರಿಯಲ್ಲ ಎಂದು ನನ್ನ ಜಾಗೃತ ಮನಸ್ಸು ಸಹ ನನ್ನನ್ನು ಎಚ್ಚರಿಸುತ್ತಿತ್ತು. ತಮಗೆ ಹಾಗೂ ತಮ್ಮ ಮಕ್ಕಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಧ್ವನಿ ಎತ್ತಲು ಅವರಿಗೆ ಅವಕಾಶವೇ ಸಿಗದಿದ್ದರೆ ಎಂತಹ ವಿರೋಧಾಭಾಸ ಆಗುತ್ತದಲ್ಲವೇ?

ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಏನು ಮಾಡಲೂ ನನಗೆ ದಿಕ್ಕೇ ತೋಚದಂತಾಯಿತು. ಒಂದು ಸಂಜೆ ಮುದ್ದಯ್ಯನ ಜೊತೆ ಹೊಸಹಳ್ಳಿಗೆ ನಡೆದು ಹೋಗುವಾಗ ಅವನ ಮುಂದೆ ನನ್ನ ಸಂಕಷ್ಟವನ್ನು ತೋಡಿಕೊಂಡೆ. ಇದನ್ನು ಕೇಳಿದ ಬಳಿಕ ತನ್ನ `ಅಮೂಲ್ಯ~ ಸಲಹೆ ಇಲ್ಲದೆ ನಾನು ಈ ಪ್ರದೇಶದಲ್ಲಿ ಯಾವ ಕಾರ್ಯವನ್ನು ತಾನೇ ಸುಸೂತ್ರವಾಗಿ ಮಾಡಲು ಸಾಧ್ಯ ಎಂಬಂತೆ ಆತ ನನ್ನನ್ನು ನೋಡಿ ಒಮ್ಮೆ ಜೋರಾಗಿ ನಕ್ಕ.
 
ತಮ್ಮ ಜೊತೆ ಬಂದಿರಲು ನಿರ್ಧರಿಸಿದ ನನ್ನ ಧೈರ್ಯದ ಬಗ್ಗೆ ಅವನಿಗೆ ಹೆಮ್ಮೆ ಇತ್ತಾದರೂ, ಇವನೊಬ್ಬ ಸ್ಥಳೀಯರ ಆಗುಹೋಗುಗಳ ಅರಿವಿಲ್ಲದ ಪೇಟೆಯ ಮನುಷ್ಯ ಎಂಬ ಭಾವನೆಯೂ ಅವನಿಗಿತ್ತು. `ಯಾವಾಗ ಕಟ್ಟಡವನ್ನು ಶಾಲೆ ಎಂದು ಕರೆಯಲಾಗುತ್ತದೆ ಹೇಳಿ~ ಎಂದಾತ ನನ್ನನ್ನು ಪ್ರಶ್ನಿಸಿದ. ಅದಕ್ಕೆ ನಾನು ಉತ್ತರಿಸುವ ಮೊದಲೇ, `ಮಕ್ಕಳು ಮತ್ತು ಶಿಕ್ಷಕರು ಇದ್ದರೆ ಯಾವ ಕಟ್ಟಡವನ್ನಾದರೂ ಸರಿ ಶಾಲೆಯನ್ನಾಗಿ ಮಾಡಬಹುದಲ್ಲವೇ~ ಎಂದು ಕೇಳಿದ. ಈಗ ತಾವು ಮಾಡಲು ಹೊರಟಿರುವುದೇನೂ ಸಣ್ಣ ಪ್ರಯತ್ನವಲ್ಲ, ಆದಿವಾಸಿಗಳ ಪರವಾಗಿ ಕೈಗೆತ್ತಿಕೊಳ್ಳುತ್ತಿರುವ ದೊಡ್ಡ ಯೋಜನೆ; ಆದ್ದರಿಂದ ವಾಸ್ತವದ ನೆಲೆಯಲ್ಲಿ ವ್ಯವಹರಿಸಬೇಕು ಎಂದು ಎಚ್ಚರಿಸಿದ.

 ಒಂದು ವೇಳೆ ಇವರೆಲ್ಲ ನನ್ನ ಯೋಜನೆಯನ್ನೇನಾದರೂ ತಿರಸ್ಕರಿಸಿದರೆ ನಾನು ಆ ಸ್ಥಳದಿಂದ ಗಂಟು ಮೂಟೆ ಕಟ್ಟಬೇಕಾದದ್ದು ಮಾತ್ರ ನಿಶ್ಚಿತವಾಗಿತ್ತು. ಒಟ್ಟಿನಲ್ಲಿ ನನಗೆ ಉಭಯ ಸಂಕಟ. ಇಂತಹ ಸ್ಥಿತಿಯಲ್ಲಿ ಮುದ್ದಯ್ಯ ಏನಾದರೂ ಯೋಗ್ಯವಾದ ಸಲಹೆ ನೀಡಬಹುದು ಎಂದು ಭಾವಿಸಿದ್ದ ನನಗೆ, ಆತನ ಮಾತುಗಳನ್ನು ಕೇಳಿ `ಉರಿಯುವ ಬೆಂಕಿಗೆ ತುಪ್ಪ~ ಸುರಿದಂತಾಯಿತು.

ನಾನು ಏನೇ ಮಾಡಲು ಹೊರಟರೂ ಅದಕ್ಕೆ ಜನಬೆಂಬಲ ಇರಲೇಬೇಕು. ಅದು ಅವರ ಬೇಡಿಕೆಗೆ ಅನುಗುಣವಾಗಿ ಇರಬೇಕು ಮಾತ್ರವಲ್ಲ, ಅದಕ್ಕೆ ಜನನಾಯಕರ ಬೆಂಬಲವೂ ಬೇಕಾಗುತ್ತದೆ ಎಂದಾತ ಹೇಳಿದ. ಜೊತೆಗೆ ನನ್ನ ಸಮಸ್ಯೆ ಪರಿಹಾರಕ್ಕೆ ಒಂದು `ಸರಳ~ವಾದ ಉಪಾಯವನ್ನೂ ಸೂಚಿಸಿದ. ಹೊಸಹಳ್ಳಿಯಲ್ಲಿ ಶಾಲಾ ಕಟ್ಟಡ ನಿರ್ಮಿಸಬೇಕಾದರೆ ಏನು ಮಾಡಬೇಕು ಎಂದು ತಮ್ಮ ಪ್ರೇತಾತ್ಮಗಳನ್ನೇ ಕರೆಸಿ ಕೇಳುವಂತೆ ಮಾಸ್ತಿಗೆ ಹೇಳಲು ತಿಳಿಸಿದ.

ತಮ್ಮ ಸಮಸ್ಯೆ ಪರಿಹಾರಕ್ಕೆ ಮಾರ್ಗೋಪಾಯ ತೋರುವುದಾದರೆ ಆದಿವಾಸಿ ಸಂಪ್ರದಾಯದಂತೆ ಪ್ರೇತಾತ್ಮಗಳನ್ನು ಸಂತೃಪ್ತಿಪಡಿಸಲು ಏನು ಬೇಕೋ ಅದೆಲ್ಲವನ್ನೂ ಮಾಡುವುದಾಗಿ ಹೇಳುವಂತೆ ತಿಳಿಸಿ ನನ್ನನ್ನು ಮಾಸ್ತಿ ಬಳಿಗೆ ಕರೆದೊಯ್ದ. ಇಬ್ಬರೂ ಬಹಳಷ್ಟು ಹೊತ್ತು ಹಿಂದಿನ ಘಟನೆಗಳನ್ನು ಉದಾಹರಣೆ ಕೊಟ್ಟುಕೊಳ್ಳುತ್ತಾ ಸುದೀರ್ಘವಾಗಿ ಚರ್ಚಿಸಿದರು. ಇಬ್ಬರೂ ಭಿನ್ನ ಪಂಗಡಕ್ಕೆ ಸೇರಿದವರಾಗಿದ್ದರೂ ಅವರ ಬಹಳಷ್ಟು ಆಚಾರ ವಿಚಾರಗಳಲ್ಲಿ ಸಾಮ್ಯ ಇತ್ತು.

ಕೊನೆಗೂ ಪ್ರೇತಾತ್ಮಗಳೊಂದಿಗೆ ಮಾತುಕತೆ ನಡೆಸುವುದಾಗಿ ಒಪ್ಪಿಕೊಂಡ ಮಾಸ್ತಿ, ಈ ಕುರಿತ ತಮ್ಮ ನಿರ್ಧಾರವನ್ನು ನನಗೆ ತಿಳಿಸುವುದಾಗಿ ಹೇಳಿದ.
ಕೆಲ ವಾರಗಳ ಬಳಿಕ ನನ್ನ ಬಳಿ ಬಂದ ಆತ, ಆದಿವಾಸಿ ಮಕ್ಕಳ ಭವಿಷ್ಯಕ್ಕೆ ನೆರವಾಗುವ ಶಾಲೆಯ ನಿರ್ಮಾಣಕ್ಕೆ ತಮ್ಮ ಪ್ರೇತಾತ್ಮಗಳು ಒಪ್ಪಿಕೊಂಡಿವೆ ಎಂದು ಹೇಳಿದ. ಆದರೆ ತಮಗೆ ಸೂಕ್ತ ಸತ್ಕಾರ ಮಾಡಿ ಅಮಾವಾಸ್ಯೆಯ ರಾತ್ರಿ ಹೊಸಹಳ್ಳಿಯ ಅರಳಿ ಮರದಿಂದ ಕಾಡಿನ ಒಳಗಿರುವ ಗುಂಡ್ರೆ ಮಾರಮ್ಮ ದೇವಸ್ಥಾನಕ್ಕೆ ತಮ್ಮನ್ನು ಕರೆದೊಯ್ದು ಬಿಡಬೇಕೆಂಬ ಷರತ್ತು ವಿಧಿಸಿರುವುದಾಗಿ ತಿಳಿಸಿದ.

 ಅವನ ಜೊತೆಯಲ್ಲೇ ಇದ್ದ ಮುದ್ದಯ್ಯ ನಿಧಾನವಾಗಿ ಮುಖ್ಯ ವಿಷಯಕ್ಕೆ ಬಂದ- ಪ್ರೇತಾತ್ಮಗಳಿಗೆ ಕಚ್ಚಾ ತಂಬಾಕು ಮತ್ತು ಸಾರಾಯಿ ಇಷ್ಟ ಎಂದು ಅರುಹಿದ. ತಂಬಾಕು ಮತ್ತು ಮದ್ಯದ ಕಟ್ಟಾ ವಿರೋಧಿಯಾದ ನನ್ನನ್ನು ಈ ಸುದ್ದಿ ಕೆರಳಿಸಿತು.

ಆದರೆ ವ್ಯವಹಾರ ಚತುರನಾದ ಮುದ್ದಯ್ಯ, ನಾನು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾದ ಅಗತ್ಯವಿಲ್ಲ, ತಂಬಾಕು ಮತ್ತು ಸಾರಾಯಿ ಕೊಳ್ಳಲು ಹಣ ಕೊಟ್ಟರಷ್ಟೇ ಸಾಕು ಎಂದು ನನ್ನನ್ನು ಸಾಂತ್ವನಗೊಳಿಸಿದ. ಅದೆಲ್ಲವನ್ನೂ ತಾವು ಪ್ರೇತಾತ್ಮಗಳಿಗಷ್ಟೇ ಉಣಬಡಿಸುವ ಭರವಸೆಯನ್ನೂ ಇಬ್ಬರೂ ನೀಡಿದರು!

ಬಳಿಕ ಆದಿವಾಸಿ ಸಂಪ್ರದಾಯದಂತೆ ಸಾಕಷ್ಟು ನೃತ್ಯ, ಹಾಡುಗಳ ನಡುವೆ ನಡೆದ ಆ ಕಾರ್ಯಕ್ರಮದಲ್ಲಿ, ಪ್ರೇತಾತ್ಮಗಳು ಮಾಸ್ತಿಯ ನೇತೃತ್ವದಲ್ಲಿ `ಅರಣ್ಯ ಸೇರಿದವು~. ತಮ್ಮ ಮಕ್ಕಳಿಗೆ ತೊಂದರೆ ಕೊಡದೆ ಜಾಗ ಖಾಲಿ ಮಾಡುವಂತೆ ಮಾಸ್ತಿ ಅವುಗಳನ್ನು ಬೇಡಿಕೊಳ್ಳುತ್ತಿದ್ದ. ಇದಾದ ಕೆಲ ತಿಂಗಳ ನಂತರ ಹೊಸಹಳ್ಳಿಯಲ್ಲಿ ನಾವು ಮೊದಲ ಶಾಲಾ ಕೊಠಡಿಯನ್ನು ತೆರೆದೆವು. ಇದೀಗ ಈ ಜಾಗದಲ್ಲಿ ಎದ್ದು ನಿಂತಿರುವ ಬೃಹತ್ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಕಲರವ ಅನುರಣಿಸುತ್ತಿದೆ. ನೂರಾರು ಮಕ್ಕಳು ಪದವಿ ಪಡೆದು ಹೊರಹೋಗಿದ್ದಾರೆ.

ತಮ್ಮ ಅಭಿವೃದ್ಧಿಗಾಗಿ ಸಂಧಾನ ಮಾಡಿಕೊಳ್ಳಲು ಸಮುದಾಯಗಳಿಗೆ ನೆರವಾಗುವ ಮುದ್ದಯ್ಯನಂತಹವರ ಅಗತ್ಯ ಇಂದು ನಮಗಿದೆ. ಇಷ್ಟು ಮಾತ್ರವಲ್ಲ, ಅಂತಹ ಅಭಿವೃದ್ಧಿಗೆ ಸಾಂಸ್ಕೃತಿಕ ಹಾಗೂ ಸಾಂದರ್ಭಿಕ ಪ್ರಸ್ತುತತೆಯೂ ಇರಲೇಬೇಕಾಗುತ್ತದೆ. ಸಮುದಾಯಗಳ ಬೇಡಿಕೆಯನ್ನು ಅತ್ಯಂತ ಸೂಕ್ಷ್ಮವಾಗಿ ಅರಿತು ಮಾನವೀಯ ನೆಲೆಯಲ್ಲಿ ಅದಕ್ಕೆ ಸ್ಪಂದಿಸಬೇಕಾದ ಮನಸ್ಸನ್ನು ನಮ್ಮ ಅಭಿವೃದ್ಧಿಯ ಪ್ರವರ್ತಕರು ಮತ್ತು ಅದನ್ನು ಜಾರಿಗೆ ತರುವವರು ಅಗತ್ಯವಾಗಿ ಹೊಂದಬೇಕಾಗುತ್ತದೆ.

(ನಿಮ್ಮ ಅನಿಸಿಕೆಗಳನ್ನು ಇಲ್ಲಿಗೆ ಕಳುಹಿಸಿ: editpagefeedback@prajavani.co.in )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT