ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಿಗಳ ರನ್ನಿಂಗ್ ರೇಸ್­

Last Updated 16 ಜುಲೈ 2014, 19:30 IST
ಅಕ್ಷರ ಗಾತ್ರ

ಕಾಲೇಜು ಹಂತದಲ್ಲಿ ಪ್ರೀತಿಸಿ ಓಡಿ ಹೋಗುವ ಪ್ರೇಮಿಗಳ ಸಂಖ್ಯೆಗೆ ಯಾವತ್ತೂ ಕೊರತೆಯಾಗಿಲ್ಲ. ನೋಡು ನೋಡುತ್ತಿದ್ದಂತೆಯೇ ಒಂದು ದಿನ ಮಾಯವಾಗಿ ಬಿಡುತ್ತಾರೆ. ಹುಡುಗಿಯ ತಂದೆಯೋ ತಾಯಿಯೋ ಮಗಳನ್ನು ಹುಡುಕುತ್ತಾ ಕಾಲೇಜಿಗೆ ಬಂದಾಗಲೇ ನಮಗೆ ಈ ಮ್ಯಾರಥಾನ್ ಓಟ ನಡೆದಿರುವ ವಿಷಯ ಗೊತ್ತಾಗುವುದು. ಎಷ್ಟೋ ಸಲ ಪೊಲೀಸರೂ ಮಾಹಿತಿ ಕೇಳಿಕೊಂಡು ಬರುತ್ತಾರೆ. ಆಗ ನಮಗೆ ಓಹೋ ಇಂಥ ಹುಡುಗ ಸದರಿ ಇಂಥ ಹುಡುಗಿಯ ಜೊತೆ ಜಾಗ ಖಾಲಿ ಮಾಡಿದ್ದಾನೆ ಅಂತ ತಿಳಿಯುವುದು. ಈ ವಿಷಯದಲ್ಲಿ ಸದ್ಯಕ್ಕೆ ಅಷ್ಟು ದಡ್ಡರು ನಾವು.

ಇಲ್ಲಿ ಪ್ರೀತಿಸುವುದು ತಪ್ಪು ಎಂದು ನಾನು ವಾದಿಸುತ್ತಿಲ್ಲ. ಆದರೆ ಅದಕ್ಕೆ ಓದುವ ವಯಸ್ಸು ಸೂಕ್ತವಲ್ಲ ಎಂಬ ನಂಬಿಕೆ ನನ್ನದು. ಇನ್ನೂ ಮದುವೆಯ ವಯಸ್ಸು ಮುಟ್ಟದ ಎಳೆಯ ಮಕ್ಕಳು ಪ್ರೇಮಿಗಳಾದ ನಂತರ ಊರು ಬಿಡುವ ಕಾರ್ಯಕ್ರಮ ಹಾಕಿಕೊಳ್ಳುತ್ತಾರೆ. ಆಮೇಲೆ ಸಾಕಷ್ಟು ಅನಾಹುತಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಮುಂದೇನು ಮಾಡಬೇಕೆಂದು ತಿಳಿಯದೆ ಪರದಾಡುತ್ತಾರೆ.

ಓಡಿ ಹೋಗುವಾಗ ಇರುವ ಉತ್ಸಾಹ ಆನಂತರದಲ್ಲಿ ಅವರಲ್ಲಿ ಕಿಂಚಿತ್ತೂ ಉಳಿದಿರುವುದಿಲ್ಲ. ಎಲ್ಲೋ ಹೋಗಿ, ಏನೇನೋ ಆಗಿ, ಕೊನೆಗೆ ಯಾರದೋ ಕೈಗೆ ಸಿಕ್ಕು ಇಡೀ ಬದುಕನ್ನೇ ದುರಂತ ಮಾಡಿಕೊಳ್ಳುತ್ತಾರೆ. ಈ ಅವಸರದ ಪ್ರೀತಿಗೆ ಉರುಳಿ ಬಿದ್ದ ಹೆಣ್ಣು ಮಕ್ಕಳ ಶಿಕ್ಷಣ ನಾನು ಕಂಡಂತೆ ಮೊಟಕಾಗಿದ್ದೇ ಹೆಚ್ಚು. ಇದರಲ್ಲಿ ಹುಡುಗರು ಹೇಗೋ ಬಚಾವಾಗುತ್ತಾರೆ. ನಿಜಕ್ಕೂ ಸಂಕಷ್ಟಕ್ಕೆ ಸಿಲುಕುವವರು, ಜೀವನ ಹಾಳು ಮಾಡಿಕೊಳ್ಳುವವರು ಹೆಣ್ಣು ಮಕ್ಕಳು ಮಾತ್ರ.

ನಮ್ಮಲ್ಲಿ ಒಬ್ಬರು ಉಪನ್ಯಾಸಕರಿದ್ದರು. ಅವರು ಇಂಥ ರನ್ನಿಂಗ್ ಪ್ರೇಮಿಗಳನ್ನು ಪತ್ತೆ ಹಚ್ಚುವುದರಲ್ಲಿ ಎಕ್ಸ್‌ಪರ್ಟ್ ಎನಿಸಿದ್ದವರು. ಕಾಲೇಜಿನ ಮೈದಾನದಲ್ಲಿ ಯಾವ ಹುಡುಗ ಯಾವ ಹುಡುಗಿಯ ಜೊತೆ ಮಾತಾಡುತ್ತಿದ್ದಾನೆ? ಅವರದು ಪ್ರೇಮವೋ ಇಲ್ಲ ಸ್ನೇಹವೋ? ಪ್ರೀತಿ ಪ್ರೇಮವಾಗಿದ್ದರೆ ಶುರುವಾಗಿ ಎಷ್ಟು ಸಮಯವಾಗಿರಬಹುದು? ಈಗ ಅದು ಯಾವ ಹಂತದಲ್ಲಿದೆ ಎಂಬುದನ್ನು ಸನ್ನೆ ಸೂಕ್ಷ್ಮಗಳಲ್ಲೇ ಪತ್ತೆ ಹಚ್ಚಿ ನಮಗೆ ವಿವರಿಸುತ್ತಿದ್ದರು. ನವಪ್ರೇಮಿಗಳ ಪತ್ತೆ ಹಚ್ಚುವ ತೀಕ್ಷ್ಣ ಕಣ್ಣು ಅವರಿಗೆ ಮಾತ್ರ ಇತ್ತು.

ಕಾಲೇಜಿನಲ್ಲಿ ಸದರಿ ಇಂಥ ಹುಡುಗಿ ನಾಪತ್ತೆಯಾಗಿದ್ದಾಳೆ ಎಂದು ತಿಳಿದರೆ ಅವಳು ಸದರಿ ಇಂಥ ಹುಡುಗನ ಜೊತೆಗೇ ಓಡಿ ಹೋಗಿದ್ದಾಳೆ ಎಂದು ಕರಾರುವಾಕ್ಕಾಗಿ ಹೇಳುತ್ತಿದ್ದರು. ಅಷ್ಟು ಪರ್ಫೆಕ್ಟ್ ಅವರ ಪರಾರಿ ಸಮೀಕ್ಷೆ ಇರುತ್ತಿತ್ತು. ಪೊಲೀಸರು, ಪೋಷಕರು, ಪರಾರಿಯಾದ ಪ್ರೇಮಿಗಳ ಪ್ರಕರಣ ತಂದರೆ ನಾವು ಮೊದಲು ಅವರಲ್ಲಿಗೆ ಓಡಿಸುತ್ತಿದ್ದೆವು. ಅವರು ಪರಾರಿ ಪ್ರೇಮಿಗಳ ಚರಿತ್ರೆಯನ್ನು  ಚಿತ್ರಕಥೆಯಂತೆ ಮೊದಲಿನಿಂದ ಕೊನೆಯ ತನಕ ವಿವರವಾಗಿ ಹೇಳುತ್ತಿದ್ದರು. ಅವರೊಂಥರ  ನಡೆದಾಡುವ ಪ್ರೇಮಿಗಳ ಮಾಹಿತಿಯ ಕೋಶ.

ಇದನ್ನೆಲ್ಲಾ ಅಷ್ಟು ಕರೆಕ್ಟಾಗಿ ಹೇಗೆ ಹೇಳುತ್ತೀರಿ ಸಾರ್ ಎಂದು ನಾನು ಕುತೂಹಲ ತಡೆಯಲಾರದೆ ಒಮ್ಮೆ ಪ್ರಶ್ನಿಸಿದೆ. ಅದಕ್ಕವರು ತುಂಬಾ ಸಿಂಪಲ್ಲಾಗಿ, ‘ನನ್ನದು ಅದೇ ಪರಾರಿ ಕೇಸ್ ಅಲ್ವಾ ಸಾರ್! ಹಂಗಾಗಿ ಚಕ್ ಅಂತ ಪತ್ತೆ ಹಚ್ಚುತ್ತೀನಿ. ನಾನು ಬಿಡಿ, ಮೆಜಾರಿಟಿಗೆ ಬಂದ ಮೇಲೆ, ಕೆಲಸ ಸಿಕ್ಕ ಮೇಲೆ ಆ ಧೈರ್ಯ ಮಾಡಿದೆ. ಈ ಬಡ್ಡೆತ್ತವಕ್ಕೆ ಏನಿದೆ ಹೇಳಿ? ನೆಟ್ಟಗೆ ಮೀಸೆ ಇಲ್ಲ. ನಾಲ್ಕು ಕಾಸು ದುಡಿಯೋ ಧೈರ್ಯ ಇಲ್ಲ. ಇವರಿಗ್ಯಾಕ್ರಿ ಬೇಕು ಇದೆಲ್ಲಾ. ಈ ಗೌರ್ಮೆಂಟ್‌ನೋರು ಮದುವೆಗೆ ಒಂದು ವಯಸ್ಸು ಅಂತ ಫಿಕ್ಸ್ ಮಾಡಿದಂಗೆ ಈ  ಪ್ರೀತಿಗೂ ಒಂದು ಮಿನಿಮಮ್ ಏಜ್  ಅಂತ ಫಿಕ್ಸ್ ಮಾಡ್ಬೇಕ್ರಿ. ಜವಾಬ್ದಾರಿ, ಗೊತ್ತೂ ಗುರಿ ಇಲ್ಲದ ಅವಿವೇಕಿಗಳು ಪ್ರೀತಿಸಿದರೆ ಅದನ್ನ ಕ್ರೈಂ ಅಂತ ಪರಿಗಣಿಸಬೇಕ್ರಿ. ಒದ್ದು ಬುದ್ಧಿ ಕಲಿಸಬೇಕ್ರಿ’ ಎನ್ನುತ್ತಿದ್ದರು. ಆಗ ನಾನು ನೀವು ಸಿಐಡಿಯಲ್ಲಿರಬೇಕಾದವರು ಮಿಸ್ಸಾಗಿ ಮೇಷ್ಟ್ರಾಗಿದ್ದೀರಿ ಎನ್ನುತ್ತಿದ್ದೆ. ನನ್ನ ಮಾತಿಗೆ ಮೀಸೆ ನೀವಿಕೊಂಡು ತೆಳ್ಳಗೆ ನಕ್ಕು ತುಟಿ ಮೇಲೆ ಸಿಗರೇಟ್ ಹಚ್ಚುತ್ತಿದ್ದರು.

ಒಂದು ದಿನ ಕಾಲೇಜಿಗೆ ಹೋದಾಗ ಹಿಂದಿನ ದಿನವಷ್ಟೇ ತಪ್ಪಿಸಿಕೊಂಡ ಇಬ್ಬರು ಪ್ರೇಮಿಗಳ ವಿವರಗಳಿಗಾಗಿ ಅವರು ಪ್ರತಿ ಕ್ಲಾಸಿಗೂ ಅಲೆಯುತ್ತಿದ್ದರು. ಇತ್ತ ಕಡೆ ಪ್ರೇಮಿಗಳ ತಲೆ ಕಂಡರಾಗದ ಪ್ರಾಂಶುಪಾಲರು ಕಾಲೇಜಿನ ಮರ್ಯಾದೆ ಹೋಗುತ್ತಿದೆ ಎಂದು ಕೆಂಡದಂತೆ ಚಡಪಡಿಸುತ್ತಿದ್ದರು. ಪೊಲೀಸರು ಕೇಸನ್ನು ಸೀರಿಯಸ್ಸಾಗಿ ಪರಿಗಣಿಸಿದವರಂತೆ ಬಂದು ಕೂತಿದ್ದರು. ಕಾಲೇಜಿನಿಂದ ಓಡಿ ಹೋದ ಜೋಡಿಗಳು ಯಾರು ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲ ಎಲ್ಲಾ ಉಪನ್ಯಾಸಕರಲ್ಲಿ ಮೂಡಿತ್ತು.  ಯಾರಂತೆ? ಯಾವಾಗಂತೆ? ಯಾವ ಸೆಕ್ಷನ್ನಂತೆ? ಎಂದು ಪರಸ್ಪರ ಪ್ರಶ್ನಿಸಿಕೊಳ್ಳುತ್ತಿದ್ದರು. ಕೆಟ್ಟ ಕುತೂಹಲ ತಡೆದುಕೊಳ್ಳದ ಒಬ್ಬರು ಏನಾಯಿತು ಸಾರ್ ಎಂದು ವಿಚಾರಿಸಲು ಪ್ರಿನ್ಸಿಪಾಲರ ರೂಮಿನಲ್ಲಿ ಇಣುಕಿ ಸಿಕ್ಕಿಹಾಕಿಕೊಂಡು ಬಿಟ್ಟರು. ಮೊದಲೇ ಕುದಿಯುತ್ತಿದ್ದ ಸಾಹೇಬರು ‘ಹೋಗ್ರಿ ಮುಚ್ಕೊಂಡು ಪಾಠ ಮಾಡ್ ಹೋಗ್ರಿ. ಈ ಕಾಲೇಜಲ್ಲಿ ಏನೇನು ಆಗಬಾರದೋ ಅದದೇ ಆಗ್ತಾಯಿದೆ.

ಮಕ್ಕಳಲ್ಲಿ ಹೆದರಿಕೆ, ಮಾನ ಮರ್ಯಾದಿ ಮೂರು ಕಾಸಿನಷ್ಟು ಇಲ್ಲದಂಗಾಗಿದೆ. ಅಪ್ಪ ಅಮ್ಮ ಕಾಲೇಜಿಗೆ ಯಾತಕ್ಕೆ ಕಳಿಸ್ತಾರೆ ಅನ್ನೋ ಜ್ಞಾನವೇ ಈ ಹಾಳಾದ ಹುಡುಗರಿಗಿಲ್ಲ. ಈ ವಯಸ್ಸಿಗೇ ಲವ್ವು ಬೇಕು ಇವರಿಗೆ ಲವ್ವು. ಈ ಅನಿಷ್ಟಾನೆಲ್ಲಾ  ನಾನು ನಿಮಗೆ ಹರಿಕಥೆ ಮಾಡಿ ಒದರಬೇಕು ಅಂತ ಬಯಸ್ತೀರಲ್ರಿ  ಹೋಗ್ರಿ ಮೊದಲು ಕ್ಲಾಸಿಗೆ’ ಎಂದು ಗದರಿಸಿ ಎಲ್ಲರನ್ನೂ ಕಳಿಸಿದರು.

ಅಷ್ಟರಲ್ಲಿ  ಅಕಸ್ಮಾತ್ ಆಗಿ ಗುಂಪಿನಲ್ಲಿ ಕಿವಿ ಅಗಲಿಸಿಕೊಂಡು ನಿಂತಿದ್ದ ನಾನು ಅವರ ಕಣ್ಣಿಗೆ ಅದು ಹೇಗೋ ಕಂಡು ಬಿಟ್ಟೆ. ತಕ್ಷಣ ನನಗೆ ತಗಲಾಕಿಕೊಂಡರು. ‘ರೀ ನೀವು ಕನ್ನಡದೋರು. ಪ್ರೀತಿ, ಪ್ರೇಮ, ಕಥೆ, ಕವಿತೆ ಬಂದಾಗ ದಯವಿಟ್ಟು ತುಂಬಾ ರೊಮ್ಯಾಂಟಿಕ್ ಆಗಿ ಒದರಬ್ಯಾಡ್ರಪ್ಪ. ನಿಮಗೆ ಕೈ ಮುಗೀತೀನಿ. ನಿಮ್ಮ ಕನ್ನಡದೋರ ಪಾಠ ಮಕ್ಕಳಿಗೆ ಒಂಥರ ಎನ್ಕರೇಜ್‌ ಥರಾನೇ ಇರುತ್ತೆ. ಅದರಿಂದ ಏನೇನೋ ಆಗುತ್ತೆ! ನೋಡಿ ನಿಮ್ಮದು ಬೇರೆ ಸಬ್ಜೆಕ್ಟ್ ಥರ ಅಲ್ಲ. ಕುವೆಂಪು, ಬೇಂದ್ರೆ, ಮೈಸೂರು ಮಲ್ಲಿಗೆ, ಪ್ರೀತಿ, ಪ್ರೇಮಗೀತೆ ಅಂತ ಏನೇನೋ ರೀಲ್ ಬಿಟ್ಟು ವಿಚಿತ್ರ ಭ್ರಮಾಲೋಕ ಸೃಷ್ಟಿಸಿಬಿಡ್ತೀರಿ. ಅದರ ಎಫೆಕ್ಟು ಈಗ ಹೆಂಗೆ ಅಟಕಾಯಿಸಿಕೊಂಡಿದೆ ನೋಡಿ. ಯಾವುದಕ್ಕೂ ಸ್ವಲ್ಪ ಹುಷಾರಾಗಿ ಪಾಠ ಮಾಡ್ಬೇಕಪ್ಪ. ಈ ಸುಡುಗಾಡು ಪ್ರೀತಿ ಪ್ರೇಮದ ವಿಷಯ ಬಂದಾಗ ಹಂಗೆ ಒಂದಿಷ್ಟು ತೇಲಿಸಿ ಹೇಳಿ ಬಿಡಿ. ಇಲ್ಲ ಹಾಳಾಗಿ ಹೋಗ್ಲಿ ಬಿಟ್ಟೇ ಬಿಡಿ. ಯಾಕೆ ಹೆಚ್ಚು ಡೀಟೈಲಾಗಿ ಹೋಗ್ತೀರಾ?  ಕವಿಗಳು ತಿಳೀದೆ ಖುಷಿಗಂತ ಏನೋ ಬರೆದಿದ್ದಾರಪ್ಪ! ಅದನ್ನೆಲ್ಲಾ ಈ ವಯಸ್ಸಲ್ಲಿ ಈ ದರಿದ್ರ ಹುಡುಗರು ತಿಳ್ಕೊಂಡು ಏನು ಮಾಡಬೇಕಾಗಿದೆ ಹೇಳಿ?’ ಎಂದು ಎಲ್ಲರೆದುರು  ಅಪರಾಧಿಗೆ ನ್ಯಾಯಾಧೀಶರು ಬುದ್ಧಿ ಹೇಳುವಂತೆ ನನಗೆ ಹೇಳಿಬಿಟ್ಟರು.

ಅಷ್ಟರಲ್ಲಿ ತನಿಖೆಗೆ ಬಂದಿದ್ದ ಪೊಲೀಸರು ತಕ್ಷಣ ನೆಟ್ಟಗೆ ಕುಳಿತು ನನ್ನನ್ನೇ ಈ ಪರಾರಿ ಹಿಂದಿನ ಮೇನ್ ಮಾಸ್ಟರ್ ಮೈಂಡರ್ ಎಂಬಂತೆ ದುರುಗುಟ್ಟಿಕೊಂಡು ನೋಡತೊಡಗಿದರು. ಓಡಿ ಹೋಗುವ ಪ್ರೇಮಿಗಳಿಗೆ ನಾನೇ ಸಾಹಿತ್ಯದ ಭೋಧನೆಯ ಮೂಲಕ ತರಬೇತಿ ಕೊಟ್ಟು ಕಳಿಸುತ್ತಿದ್ದೇನೆ. ಅವರನ್ನೆಲ್ಲಾ ಹಾಳು ಮಾಡುತ್ತಿರುವವನು ನಾನೇನೆ! ಈ ಘನ ಕಾರ್ಯಕ್ಕೆ ಕನ್ನಡದ ಕವಿಗಳನ್ನು ನಾನು ಉಪಯೋಗಿಸಿಕೊಳ್ಳುತ್ತಿದ್ದೇನೆ ಎನ್ನುವ ಅರ್ಥ ಬರುವಂತೆ ನಮ್ಮ ಪ್ರಿನ್ಸಿಪಾಲರು ಮಾತಾಡಿದ್ದು ಪೊಲೀಸರಿಗೆ ವರದಾನವಾಯಿತು.  ಒಂದೇ ಮಾತಿನಲ್ಲಿ ನನ್ನನ್ನೂ, ಕನ್ನಡ ಕವಿಗಳನ್ನೂ ಪ್ರೇಮಿಗಳಿಗೆ ಚಿತಾವಣೆ ಮಾಡುವ ಕೇಸಿನಲ್ಲಿ ಫಿಟ್ ಆಗುವಂತೆ ಪ್ರಿನ್ಸಿಪಾಲರು ವ್ಯವಸ್ಥೆಗೊಳಿಸಿ ಬಿಟ್ಟಿದ್ದರು.  ನಾನು ಏನು ಮಾತಾಡಿದರೂ ಅವರಾಗಲೀ, ಪೊಲೀಸರಾಗಲಿ ಒಪ್ಪುವ ಸ್ಥಿತಿಯಲ್ಲಿ ಇಲ್ಲದಂತೆ ಕಂಡರು. ನಾನು ಕನ್ನಡ ಎಂ.ಎ. ಮಾಡಿದ್ದೇ ಅಪರಾಧವಾಯಿತಲ್ಲಪ್ಪ! ಎಂದು ಚಡಪಡಿಸುತ್ತಾ ಕಂಗಾಲಾಗಿ ನಿಂತೆ. 

ವಿದ್ಯಾರ್ಥಿಗಳು ಪ್ರೇಮಿಗಳಾಗಿ ಪರಿವರ್ತನೆಗೊಂಡು ಊರು ಬಿಟ್ಟು  ಓಡಿ ಹೋಗುವಂತೆ ಪ್ರೇರೇಪಣೆ ನೀಡಿರುವ ಪದ್ಯವಾದರೂ ಯಾವುದಿರಬಹುದು? ಪರಾರಿಗೆ ಪ್ರೇರಣೆ ನೀಡುವ ಯಾವ ಪಾಠವೂ ನಮ್ಮ ಪಠ್ಯದಲ್ಲಿ ಇಲ್ಲವಲ್ಲ!. ಈ ಅನಿಷ್ಟ ಪ್ರಿನ್ಸಿಪಾಲ ಅದನ್ನೆಲ್ಲಿ ಓದಿಕೊಂಡ? ನಾನು ಯಾವಾಗ ಹುಡುಗರಿಗೆ ಈ ಪರಾರಿ ಕಲೆ ಹೇಳಿಕೊಟ್ಟೆ? ವಿದ್ಯಾರ್ಥಿಗಳು ಪ್ರೀತಿಸಿ ಜಾಗ ಖಾಲಿ ಮಾಡಿದರೆ ಅದಕ್ಕೆಲ್ಲಾ ನಾನೇ ಕಾರಣ ಎನ್ನುವಂತೆ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಯಿತಲ್ಲ! ಈಗ ಏನು ಹೇಳುವುದೆಂದು ನಾನು ಚಿಂತಾಕ್ರಾಂತನಾದೆ.

ಅಷ್ಟರಲ್ಲಿ ನನಗೊಂದು ಮನೆಹಾಳು ಐಡಿಯಾ ಹೊಳೆಯಿತು. ‘ಸಾರ್ ಇಂಗ್ಲೀಷ್ ಪಾಠ ಮಾಡೋರಿಗೂ ಒಂದು ಮಾತು ಕರೆದು ಕೇಳಿ ಸಾರ್. ಅವರದು ಫಾರಿನ್ ಪಾಠ. ಇಂಥದ್ದೆಲ್ಲಾ ಅಲ್ಲಿ ಸಿಕ್ಕಾಪಟ್ಟೆ ಇರುತ್ತೆ. ಜೊತೆಗೆ ಸಮಾಜಶಾಸ್ತ್ರದವರನ್ನು ಒಂದು ಸಲ ಕರೆದು ಕೇಳಿ ಸಾರ್. ಅವರೂ  ಕುಟುಂಬ, ವಿವಾಹ, ಪ್ರೇಮ ಅಂತ ಏನೇನೋ ಹೇಳ್ತಾ ಇರ್ತಾರೆ. ಇನ್ನು ಬಯಾಲಜಿಯವರು ಚಿತ್ರಗಳನ್ನು ಬಿಡಿಸಿ  ಖುಲ್ಲಂ ಖುಲ್ಲಾ ಹೇಳ್ತಾರೆ ಸಾರ್.

ಹಿಸ್ಟರಿಯವರನ್ನೂ ಒಂದುಮಾತು ಕರೆದು ಕೇಳಿ ಸಾರ್. ಅವರ ಪಾತ್ರನೂ ಇದರಲ್ಲಿ ತಳ್ಳಿ ಹಾಕುವಂತಿಲ್ಲ ಎನ್ನುತ್ತಾ ಎಲ್ಲಾ ಸಬ್ಜೆಕ್ಟ್‌ಗಳನ್ನೂ, ಅವುಗಳನ್ನು ಭೋಧಿಸುವ ಉಪನ್ಯಾಸಕರನ್ನೂ ಈ ಕೇಸಿಗೆ ಗಂಟು ಹಾಕಲು ಪ್ರಯತ್ನಿಸಿದೆ. ಅವರಿಗೆ ನಾನು ಕೊಟ್ಟ ವಿವರಣೆಗಳಿಂದ ತಲೆ ಕೆಟ್ಟು ಹೋಯಿತು. ಯಾವ ಸಬ್ಜೆಕ್ಟ್‌ನ ಪಾಠದಿಂದ ಪ್ರೇಮಿಗಳು ಪರಾರಿ ಆಗುತ್ತಿದ್ದಾರೆ ಎಂದು ಪತ್ತೆ ಹಚ್ಚಲು ಹೊರಡುವುದು ಪಕ್ಕಾ ತಲೆಬಿಸಿಯ ಕೆಲಸ. ಮತ್ತದನ್ನು ಹೌದೆಂದು ಸಾಕ್ಷಿ ಸಮೇತ ನಿರೂಪಿಸುವುದು ಇನ್ನೂ ಕಷ್ಟದ ಕೆಲಸ. ಇದೆಲ್ಲಾ ಎಲ್ಲಿಂದ ಎಲ್ಲಿಗೋ ಹೋಗುತ್ತೆ. ಇಷ್ಟೆಲ್ಲಾ ಪತ್ತೆ ಹಚ್ಚುವುದರಲ್ಲಿ ಆ ಓಡಿ ಹೋದ ಪ್ರೇಮಿಗಳಿಗೆ ಮಕ್ಕಳಾಗಿ ಅವು ಮದುವೆ ವಯಸ್ಸಿಗೆ ಬಂದಿರುತ್ತವೆ. ಇದೆಲ್ಲಾ ಆಗದ ಹೋಗದ ಕೆಲಸ ನೀವು ಕ್ಲಾಸಿಗೆ ಹೋಗ್ರಿ. ನಿಮ್ಮ ಸಹವಾಸ ಅಲ್ಲ’ ಎಂದು ಎರಡೂ ಕೈಗಳನ್ನು ಮುಗಿದರು.

ಇನ್ಸ್‌ಪೆಕ್ಟರ್ ‘ಯಾವುದಕ್ಕೂ ಇವರೂ ಇರಲಿ. ಪಾಠದ ಮೂಲಕ ಪ್ರಚೋದನೆ ಕೊಟ್ಟಿರುವ ಬಗ್ಗೆಯೂ ಒಮ್ಮೆ ವಿಚಾರಣೆ ನಡೆಸಬಹುದು’ ಎಂದು ಹಟ ಹಿಡಿದು ಕೂತನು. ಇದೆಲ್ಲದರಿಂದ ಹುಳ ಬಿಟ್ಟುಕೊಂಡಂತಾದ ಪ್ರಿನ್ಸಿಪಾಲರು ಅದೆಲ್ಲಾ ಬೇಡ ಬಿಡಿ. ಕಾರಣ ಏನೋ ಬೇರೆ ಇರಬಹುದು. ಅದನ್ನು ನಾನು ಪತ್ತೆ ಹಚ್ಚುತ್ತೇನೆ ಎಂದು ಪರಪರ ಬೋಳು ತಲೆ ಕೆರೆದುಕೊಂಡರು.

ಅಷ್ಟರಲ್ಲಿ ನನ್ನ ಪುಣ್ಯಕ್ಕೆ ಫೋನು ರಿಂಗಾಯಿತು. ಪ್ರಿನ್ಸಿಪಾಲರು ಎತ್ತಿಕೊಂಡರು. ಎಲ್ಲರೂ ಕೇಳಲೆಂದು  ಫೋನಿನ ಲೌಡ್ ಸ್ಪೀಕರ್ ಆನ್ ಮಾಡಿದರು. ಆ ಕಡೆಯಿಂದ ಪ್ರೇಮಿ ‘ಸಾರ್ ನಾನು ರಮೇಶ. ನಾನು ಜಯಲಕ್ಷ್ಮೀ ಇಬ್ಬರು ಆರಾಮಾಗಿ ಮೈಸೂರಿನಲ್ಲಿ ಇದ್ದೀವಿ ಸಾರ್. ನೀವೇನು ಟೆನ್ಷನ್ ಮಾಡ್ಕೋಬ್ಯಾಡಿ. ಎಲ್ಲರಿಗೂ ಕರೆದು ನೀವೇ ಸಮಾಧಾನ ಹೇಳಬೇಕು ಸಾರ್. ನೀವು ಒಂದ್ಸಲ ನನಗೆ ಜೀವನದಲ್ಲಿ ಏನಾದರೂ ಸಾಧಿಸಿ ತೋರಿಸು ಅಂದಿದ್ರಲ್ಲಾ ಸಾರ್. ನೋಡಿ ಸಾಧಿಸಿದ್ದೇನೆ. ಇಷ್ಟಕ್ಕೆಲ್ಲಾ ನೀವೇ ಸ್ಫೂರ್ತಿ ಸಾರ್. ನಿಮ್ಮ ಆಶೀರ್ವಾದ ನನ್ನ ಪ್ರೀತಿಗೆ ಇರಲಿ ಸಾರ್’ ಎಂದು ಹೇಳತೊಡಗಿದ.   ಕೆಂಡಾಮಂಡಲವಾದ ಪ್ರಿನ್ಸಿಪಾಲರು  ತಕಪಕ ಕುದಿಯುತ್ತಾ ಫೋನಿನ ಲೌಡ್ ಸ್ಪೀಕರ್ ಬಟನ್ ಆಫ್ ಮಾಡಿ ರಾಸ್ಕಲ್ ಎಂದು ಫೋನನ್ನು ಟೇಬಲ್‌ಗೆ  ಗುದ್ದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT