ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಭರಿತ ಮರವ ಕಡಿದವರು ಯಾರು...?

Last Updated 8 ಜುಲೈ 2013, 19:59 IST
ಅಕ್ಷರ ಗಾತ್ರ

ಪ್ಪತ್ತೈದು ವರ್ಷಗಳ ಹಿಂದೆ ಯಾರಾದರೂ ಕೈಗೆ ವಾಚ್ ಕಟ್ಟಿದ್ದರೆ ಅದು ಯಾವ ವಾಚ್ ಅಂತ ಯಾರೂ ಕೇಳುತ್ತಿರಲಿಲ್ಲ. ಅದು ಎಚ್‌ಎಂಟಿ ಗಡಿಯಾರವೇ ಆಗಿರುತ್ತಿತ್ತು. ವರದಕ್ಷಿಣೆಯಾಗಿ ಕೈ ಗಡಿಯಾರ ಕೊಡಲಿಲ್ಲವೆಂದು ಮುನಿಸಿಕೊಂಡ ಭೂಪರೂ ಇದ್ದರು. ಒಬ್ಬ ವ್ಯಕ್ತಿಯ ಬದುಕಿಗೆ ಒಂದು ಕೈಗಡಿಯಾರ ಸಾಕಾಗುತ್ತಿತ್ತು. ರಿಪೇರಿಗೂ ಬರುತ್ತಿರಲಿಲ್ಲ.

ಯಾರೂ ಕೈಗಡಿಯಾರಗಳನ್ನಾಗಲಿ ವಾಹನಗಳನ್ನಾಗಲಿ ಆಗಾಗ್ಗೆ ಬದಲಾಯಿಸುತ್ತಿರಲಿಲ್ಲ. ಜನರ ಬದುಕಲ್ಲಿ ಈ ವಾಚ್‌ಗೊಂದು ಆತ್ಮೀಯ ಜಾಗವಿರುತ್ತಿತ್ತು. ಹಿಂದೂಸ್ತಾನ್ ಮೆಷಿನ್ ಟೂಲ್ಸ್ (ಎಚ್‌ಎಂಟಿ), ಸಾರ್ವಜನಿಕ ಕ್ಷೇತ್ರದ ಕೈಗಾರಿಕೆ. ಇದರಲ್ಲಿ ಯಂತ್ರೋಪಕರಣಗಳು, ಟ್ರ್ಯಾಕ್ಟರ್ ಇತ್ಯಾದಿಗಳನ್ನು ತಯಾರಿಸಿದರೂ ಅದರ ಹೆಸರು ಬೆಸೆದದ್ದು ಮಾತ್ರ ಕೈಗಡಿಯಾರದೊಂದಿಗೆ.

ಜಪಾನಿನ ಸಿಟಿಜನ್ ವಾಚ್ ಕಂಪೆನಿಯ ಸಹಯೋಗದೊಂದಿಗೆ 1961ರಲ್ಲಿ ಎಚ್‌ಎಂಟಿ ವಾಚ್ ಕಂಪೆನಿಯನ್ನು ಬೆಂಗಳೂರಿನಲ್ಲಿ ಹುಟ್ಟುಹಾಕಲಾಯಿತು. ಜಾಲಹಳ್ಳಿಯಲ್ಲಿ 630 ಎಕರೆ ಜಾಗದಲ್ಲಿ ನಗರವೇ ಆಗಿ ಬೆಳೆಯಿತು. ಉದ್ಯೋಗಕ್ಕೆ ಬಂದ ನೌಕರರಿಗಾಗಿ ವಸತಿ, ಶಾಲೆ, ಆಸ್ಪತ್ರೆ, ಥಿಯೇಟರ್...

ಹೀಗೆ ಯೋಜಿತವಾದ ಆ ನಗರದಲ್ಲಿ ಬದುಕುವುದು ಅದೃಷ್ಟವಾಗಿತ್ತು. 80ರ ದಶಕದಲ್ಲಿ ಕರ್ನಾಟಕದ ಒಳ್ಳೆಯ ಕ್ರೀಡಾ ತಂಡಗಳು ಎಚ್‌ಎಂಟಿ ಆಟಗಾರರಿಂದ ತುಂಬಿಹೋಗಿರುತ್ತಿತ್ತು. ಇದರ ಶಾಖೆ ತುಮಕೂರಿನಲ್ಲಿ ಆರಂಭವಾದಾಗ ಎಚ್‌ಎಂಟಿ  ಕಲಾವಿದರು ಕಟ್ಟಿದ ನಾಟಕ ತಂಡ ನೆನೆಯುವಂಥದ್ದು. ಕಾರ್ಖಾನೆಗಳು ಯಾಂತ್ರಿಕವಾಗದೆ ಸಾಂಸ್ಕೃತಿಕವಾಗಿ ಪರಿಪೂರ್ಣತೆಯನ್ನು ಸಾಧಿಸಿತ್ತು.

ಬೆಂಗಳೂರಿನಲ್ಲಿ ಒಂದು ಮತ್ತು ಎರಡನೆಯ ಯೂನಿಟ್ ಬೆಳೆದಂತೆ; ಅಗತ್ಯವಿದ್ದ ಎಲ್ಲಾ ಉಪಕರಣಗಳನ್ನು ತಯಾರಿಸಿಕೊಳ್ಳುವ ಸ್ವಾವಲಂಬಿ ಕಂಪೆನಿಯಾಯಿತು. ಮುಂದೆ ಎಚ್‌ಎಂಟಿ ಆಟೋಮ್ಯೋಟಿಕ್ ವಾಚ್‌ಗಳನ್ನು ಇಲ್ಲಿ ತಯಾರಿಸತೊಡಗಿತು. ಮೂರನೆಯ ಯೂನಿಟ್ ಕಾಶ್ಮೀರದ ಶ್ರೀನಗರದಲ್ಲೂ, ನಾಲ್ಕನೆಯದು ತುಮಕೂರಿನಲ್ಲಿ ಸ್ಥಾಪನೆಯಾಗಿ ಕ್ವಾರ್ಟ್ಸ್ ವಾಚ್‌ಗಳನ್ನು ತಯಾರಿಸತೊಡಗಿತು.

ಮೆಕಾನಿಕಲ್ ವಾಚ್‌ಗಳನ್ನು ತಯಾರಿಸುವ ಐದನೇ ಯೂನಿಟ್ ಉತ್ತರ ಪ್ರದೇಶದ ರಾಯಭಾಗ್‌ನಲ್ಲಿ ಆರಂಭವಾದಾಗ ವಾಚ್ ಕಂಪೆನಿ ತನ್ನ ಕೈಗಳನ್ನು ದೇಶದ ಉದ್ದಗಲಕ್ಕೂ ಚಾಚಿದಂತಾಗಿತ್ತು. 80ರ ದಶಕದ ಕಡೆಯ ಹೊತ್ತಿಗೆ ಎಚ್.ಎಂ.ಟಿ. ಕಂಪೆನಿಯಲ್ಲಿ ಒಟ್ಟು 10 ರಿಂದ 15 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಹೆಮ್ಮರವಾಗಿ ಬೆಳೆದಿದ್ದ ವಾಚ್ ಕಂಪೆನಿಯೊಂದು ಸಾವಿರಾರು ಜನರಿಗೆ ಬದುಕಲು ಆಸರೆಯ ತಾಣವಾಗಿತ್ತು.

ಇದು ಇಂದು ಕಣ್ಮರೆಯಾಗಿದೆ. ಭಾರತದ ಸಾರ್ವಜನಿಕ ಕ್ಷೇತ್ರದ ಕೈಗಾರಿಕೆಯೊಂದು ನಷ್ಟವನ್ನು ಹೊಂದಲು ಹೇಗೆ ಸಾಧ್ಯ? ಅಭಿವೃದ್ಧಿ ಯೋಜನೆಗಳು ನಿರಂತರವಾಗಿ ಕೈಗಾರಿಕೆಗಳ ಸ್ಥಾಪನೆಯನ್ನು ಬಯಸುತ್ತವೆ, ಯೋಜಿಸುತ್ತವೆ ಮತ್ತು ಬೆಂಬಲಿಸುತ್ತವೆ. ಹಾಗಾದರೆ ಅದರ ಸಾವನ್ನಾದರೂ ನಿರ್ಧರಿಸಿದವರು ಯಾರು?

ಮೂವತ್ತು ನಲವತ್ತು ವರ್ಷಗಳ ಕಾಲ ಬೆಳೆದು ನಿಂತಿದ್ದ ರಸ್ತೆ ಬದಿಯ ಬೃಹತ್ ಮರಗಳ ಚಿಗುರು ಇದ್ದಕ್ಕಿದ್ದಂತೆ ಒಣಗತೊಡಗುತ್ತದೆ. ಒಣಗಿದ ಮರದ ಕೊಂಬೆ ರೆಂಬೆಗಳನ್ನು ಜನ ಸೌದೆಗೆ ಮುರಿದುಕೊಂಡು ಹೋಗುತ್ತಾರೆ. ಒಣಗಿದ ಮರ ರಸ್ತೆಬದಿಯಲ್ಲಿದ್ದರೆ ಅಪಾಯವೆಂದು ಬುಡ ಸಮೇತ ಕಡಿದುರುಳಿಸಲಾಗುತ್ತದೆ.

ಒಣಗಿದ ಮರ ಉರುಳಿದರೆ ಅಪರಾಧವೇನಿಲ್ಲವಲ್ಲ. ಮರ ಸಾಯಲು ಮರದ ಬುಡಕ್ಕೆ ಸೀಮೆಎಣ್ಣೆಯನ್ನೋ ಆ್ಯಸಿಡನ್ನೋ ಸುರಿದವರು ಯಾರೋ ಕಾಣಲೇ ಇಲ್ಲ. ಪಬ್ಲಿಕ್ ಸೆಕ್ಟರ್ ಕಂಪೆನಿ ಉರುಳಿಸಲು ಯಾರ ಕೊಡಲಿ ಯಾರ ಕಾವು, ಬಲಿಯಾದದ್ದು ಮಾತ್ರ ನಮ್ಮ ಒಡನಾಡಿ. ಕೊಂಬೆ ರೆಂಬೆಗಳಾಗಿ ಉರುಳಿ ಬಿದ್ದವರು ದುಡಿವ ಕಾರ್ಮಿಕರು. ಬುಡಮೇಲಾದದ್ದು ಭಾರತದ ಕನಸಿನ ಕೂಸು.

ಈ ಹೊತ್ತಿಗಾಗಲೇ ಹೈದರಾಬಾದಿನಿಂದ ಆಲ್ವಿನ್ ವಾಚ್‌ಗಳು ತಯಾರಾಗುತ್ತಿದ್ದರೂ ಮಾರುಕಟ್ಟೆಯಲ್ಲಿ ಅದರ ಸ್ಥಾನ ಗೌಣವಾಗಿತ್ತು. ಖಾಸಗಿ ಒಡೆತನದಲ್ಲಿ ಟೈಟಾನ್ ಕಂಪೆನಿ 1987ರಲ್ಲಿ ವಾಚ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿತು. ಸಂಪೂರ್ಣವಾಗಿ ಎಲ್ಲಾ ಬಿಡಿಭಾಗಗಳನ್ನು ತಾನೇ ತಯಾರಿಸದಿದ್ದರೂ ಮಾರುಕಟ್ಟೆ ಹಿಡಿಯುವ ಪ್ರಯತ್ನ ತೀವ್ರವಾಗಿತ್ತು. ದುಬಾರಿ ಬೆಲೆ ತೆತ್ತು ವಾಚ್‌ಗಳನ್ನು ಕಟ್ಟಿಕೊಂಡು ಶೋಕಿ ಹೊಡೆಯುವುದು ಭಾರತೀಯನ ಜಾಯಮಾನವಾಗಿರಲಿಲ್ಲ. ತನಗೆ ತಕ್ಕ ಸಮಾಜವನ್ನು ರೂಪಿಸಿಕೊಳ್ಳುವಷ್ಟು ಚಾಲಾಕಿತನ ಇವತ್ತಿನ ಮಾರುಕಟ್ಟೆಗಿದೆ.

ಮೊದಲನೇ ಮಹಾಯುದ್ಧಾನಂತರ ಜಗತ್ತಿನಾದ್ಯಂತ ತಮ್ಮ ದೇಶಗಳ ಆರ್ಥಿಕತೆಯನ್ನು ಕಾಪಾಡಿಕೊಳ್ಳಲು ರಕ್ಷಣಾತ್ಮಕ ಆರ್ಥಿಕ ನೀತಿಯನ್ನು ಅಳವಡಿಸಿಕೊಂಡರು. ಹೊರ ರಾಷ್ಟ್ರಗಳು ಬಂಡವಾಳ ಹೂಡುವುದನ್ನಾಗಲಿ, ಹೊರ ದೇಶದಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳುವುದನ್ನಾಗಲಿ ತಡೆಹಿಡಿಯಲಾಯಿತು. ಸ್ವಾವಲಂಬಿ ಆರ್ಥಿಕತೆ ಅಂದಿನ ಮಂತ್ರ. ಭಾರತದ ಮಿಶ್ರ ಆರ್ಥಿಕತೆ ಸಾರ್ವಜನಿಕ ಕ್ಷೇತ್ರದಲ್ಲಿ ಮೂಲ ಕೈಗಾರಿಕೆಗಳನ್ನು ಉಳಿಸಿಕೊಳ್ಳುವಂತೆ ಯೋಜಿಸಿತು. ಹಾಗೆಯೇ ಖಾಸಗಿ ಬಂಡವಾಳಗಾರರಿಗೂ ಅವಕಾಶ ನೀಡಿತು. ಸಣ್ಣ ಪ್ರಮಾಣದ ಕೈಗಾರಿಕೆಗಳಲ್ಲಿ ಖಾಸಗಿಯವರು ತೊಡಗುವುದನ್ನು ಬಯಸಿತು.

ಬೆಳೆದು ಶ್ರೀಮಂತವಾದ ದೇಶಗಳು ಮಾರುಕಟ್ಟೆಯ ವಿಸ್ತರಣೆಗೆ ಮಾರ್ಗಗಳನ್ನು ಹುಡುಕತೊಡಗಿದವು. ಅಂತರರಾಷ್ಟ್ರೀಯ ಮಾರುಕಟ್ಟೆ ಒಪ್ಪಂದಗಳು (ಗ್ಯಾಟ್) ವ್ಯಾಪಾರ ವಾಣಿಜ್ಯದ ನೀತಿಗಳನ್ನೇ ಬದಲಿಸುವಂತೆ ಮಾಡಿದವು. ತಟ್ಟಿದ ಜಾಗತಿಕ ಮಾರುಕಟ್ಟೆಯ ಒತ್ತಡ, ಅದರ ಭಾಗವಾಗಿ ನುಗ್ಗಿದ ಖಾಸಗೀಕರಣ ಮತ್ತು ಉದಾರೀಕರಣ ದೇಶದ ಆರ್ಥಿಕತೆಯನ್ನು ಅಲುಗಾಡಿಸಿತು. ಇದೆಲ್ಲವನ್ನೂ ಸಂಭ್ರಮದಲ್ಲಿ ಸ್ವಾಗತಿಸಿದವರಿಗೇನು ಕೊರತೆಯಿಲ್ಲ.

ಇದನ್ನು ಸಮರ್ಥಿಸುವ ತಜ್ಞರ ಪಡೆಯೇ ಹುಟ್ಟಿಕೊಂಡಿತು. ಗ್ಯಾಟ್ ಒಪ್ಪಂದದ ನಿಬಂಧನೆಗಳಲ್ಲಿ ಹಣದ ಅಪಮೌಲ್ಯ ಮೊದಲನೆಯದಾದರೆ, ಸಾರ್ವಜನಿಕ ಕ್ಷೇತ್ರದಿಂದ ಬಂಡವಾಳವನ್ನು ಹಿಂತೆಗೆದುಕೊಳ್ಳುವುದು ಎರಡನೇ ಹೇರಿಕೆ.  ಜಾಗತಿಕ ಮಾರುಕಟ್ಟೆಗೆ ತನ್ನ ಬಾಗಿಲುಗಳನ್ನು ತೆರೆದ ಭಾರತ, ಜೊತೆಗೆ ಬದಲಾದ ಸರ್ಕಾರ 1991ರಲ್ಲಿ ತನ್ನ ಆರ್ಥಿಕ ನೀತಿಯನ್ನೇ ಬದಲಾಯಿಸಿತು.

ಎಲ್ಲಿ ಖಾಸಗಿ ಒಡೆತನ ಸಾಧ್ಯವೋ ಅಲ್ಲಿ ಸರ್ಕಾರ ಬಂಡವಾಳವನ್ನು ತೊಡಗಿಸಬಾರದೆಂಬ ತೀರ್ಮಾನಕ್ಕೆ ಬಂದಿತು. 92ರಲ್ಲಿ ಬಂಡವಾಳವನ್ನು ಹಿಂತೆಗೆದುಕೊಳ್ಳುವುದಕ್ಕಾಗಿ ಡಿಸ್‌ಇನ್‌ವೆಸ್ಟ್ ಮೆಂಟ್ ಮಿನಿಸ್ಟರ್‌ನನ್ನೇ ನೇಮಕ ಮಾಡಿತು. ಮಂತ್ರಿಯಾಗಿ ಅರುಣ್‌ಶೌರಿ ಅಧಿಕಾರ ಸ್ವೀಕರಿಸಿದರು. ಕೈಗಾರಿಕೆಗಳನ್ನು ಮುಚ್ಚುವುದಕ್ಕಾಗಿಯೇ ಒಬ್ಬ ಮಂತ್ರಿಯನ್ನು ನೇಮಕ ಮಾಡಿದ ಹೆಗ್ಗಳಿಕೆ ಅಂದಿನ ಸರ್ಕಾರದ್ದು.

ಅಮೆರಿಕಾದ ಟೈಮೆಕ್ಸ್ ಕಂಪೆನಿಯ ಆಗಮನಕ್ಕೆ 1998ರಲ್ಲಿ ರೆಡ್ ಕಾರ್ಪೆಟ್ ಹಾಸಿದಂತಾಯಿತು. ಟೈಟಾನ್ ಕಂಪೆನಿ ಹಲವು ರೀತಿಯ ರಾಜಿಗಳೊಂದಿಗೆ ಟೈಮೆಕ್ಸ್‌ನ ಜೊತೆಗೂಡಿ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿತು. ಭಾರತವಲ್ಲದೇ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಟೈಮೆಕ್ಸ್‌ನ ಬಾವುಟವನ್ನು ಹಾರಿಸುವಲ್ಲಿ ಟೈಟಾನ್ ಕಂಪೆನಿ ಯಶಸ್ವಿಯಾಗಿದೆ. ಈ ಬೆಳವಣಿಗೆಯನ್ನು ತೆರೆದ ಕೈಗಳಿಂದ ಸ್ವಾಗತಿಸುವ ಜನರಿಗೆ ಸಾರ್ವಜನಿಕ ಕ್ಷೇತ್ರ ಖಾಸಗಿ ಒಡೆತನ ಇವೆಲ್ಲಕ್ಕಿಂತ ಆ ಹೊತ್ತಿನ ಅನುಭೋಗವೇ ಮುಖ್ಯವಾಗಿರುತ್ತದೆ. ಗುಣಮಟ್ಟ, ಪ್ರತಿಭೆ, ಸ್ಪರ್ಧೆ ಇವು ಇಂದಿನ ಪರಿಭಾಷೆಯಾಗಿದೆ.

ಹಣ್ಣುಬಿಟ್ಟ  ಮರಗಳನ್ನು ಹುಡುಕಿ ಬುಡಮೇಲು ಮಾಡಿದ ದುರಂತ ಕಥೆಗಳಲ್ಲಿ ಎಚ್‌ಎಂಟಿ  ಕೈಗಡಿಯಾರದ್ದು ಒಂದು. ಬಂಡವಾಳದ ಹಿಂತೆಗೆತ ಆರಂಭವಾದಂತೆ ಎಚ್‌ಎಂಟಿ ಕಂಪೆನಿಯಲ್ಲಿ ಸಂಬಳವನ್ನು ಮೊಟಕು ಮಾಡಲು ಆರಂಭಿಸಿದರು. ಹೊಸ ನೇಮಕಾತಿಯನ್ನು ನಿಲ್ಲಿಸಿದರು. ಕಾರ್ಮಿಕರ ಸಂಖ್ಯೆ ವರ್ಷವರ್ಷಕ್ಕೆ ಕಡಿಮೆಯಾಗತೊಡಗಿತು.

ಕೆಲಸದ ಹೊರೆ ಹೆಚ್ಚಾದಂತೆ ಗುಣಮಟ್ಟ ಕಡಿಮೆಯಾಗಿದೆ ಎಂದು ದೂರಲು ಅವಕಾಶ ಸಿಕ್ಕಿತು. ರೋಗಗ್ರಸ್ಥ ಕೈಗಾರಿಕೆಗಳ ಪಟ್ಟಿಗೆ ಸೇರಿಸುವುದು ಸರ್ಕಾರದ ಉದ್ದೇಶವೂ ಆಗಿತ್ತು. ಕಂಪೆನಿಯಲ್ಲಿ ಕಾರ್ಮಿಕರಿಗೆ ಸ್ವಯಂ ನಿವೃತ್ತಿಗೆ ಅವಕಾಶ ಕಲ್ಪಿಸಿದರು. `ಗೋಲ್ಡನ್ ಹ್ಯಾಂಡ್ ಶೇಕ್'ನ ಹೆಸರಲ್ಲಿ ಆವರೆಗೆ ದುಡಿದಿದ್ದ  ಹಣವನ್ನು ಕೊಟ್ಟು ಮನೆಗೆ ಕಳುಹಿಸಿದರು. ಕೊಟ್ಟ ಐದಾರು ಲಕ್ಷ ಮನೆಗೆ ಖರ್ಚಾಯಿತು.

ನಿವೃತ್ತಿ ಹೊಂದಿ ಬೀದಿಗೆ ಬಿದ್ದ ಕುಟುಂಬಗಳ ಪಡಿಪಾಟಲಿಗೆ ಅನುಕಂಪ ತೋರುವವರು ಯಾರೂ ಇರಲಿಲ್ಲ. ಯೂನಿಯನ್‌ಗಳು ತಮ್ಮ ಪರಿಸ್ಥಿತಿಯ ಅರಿವೇ ಆಗದೇ ಹಾಗೆ ಕರಗಿಹೋಗಿವೆ. ನಿವೃತ್ತಿವೇತನ ನೂರು ಇನ್ನೂರರಿಂದ ಸಾವಿರ ರೂಪಾಯಿಗಳು ನಿಗದಿಯಾದರೆ ಬದುಕುವುದಾದರು ಹೇಗೆ? ಈ ಹೊತ್ತಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕರ ಹೆಸರು ಎಲ್ಲೂ ಪ್ರಕಟವಾಗಲೇ ಇಲ್ಲ. ಇಪ್ಪತ್ತು ವರ್ಷದಲ್ಲಿ ಕರಗಿ ನೀರಾಗಿ ಹರಿದು ನೂರೈವತ್ತು ಇನ್ನೂರು ಜನರಿರುವ ಕೈಗಡಿಯಾರದ ಕಂಪೆನಿ ಅಂತಿಮ ಗಳಿಗೆಗಾಗಿ ಕ್ಷಣಗಣನೆ ಮಾಡುತ್ತಿದೆ.   

ಎಚ್‌ಎಂಟಿ  ಕುಸಿಯುತಿದ್ದಂತೆ ಆ ನಗರದ 630 ಎಕರೆ ಜಾಗವನ್ನು ಮಾರಿಕೊಂಡು  ಗಗನಚುಂಬಿ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ. ಖಾಸಗೀಕರಣ ಯಶಸ್ವಿಯಾಗಿ ಮುಗಿಲು ಮುಟ್ಟುತ್ತಿದೆ. 1990ರಲ್ಲಿ ಭಾರತ ಉದಾರೀಕರಣವೆಂದು ದಾಪುಗಾಲು ಹಾಕತೊಡಗಿದಾಗ ಸಂಭ್ರಮಿಸಿದವರು ಸಾಫ್ಟ್‌ವೇರ್ ತಂತ್ರಜ್ಞರು, ಮಾಹಿತಿ ತಂತ್ರಜ್ಞರು ಮತ್ತು ಮಾರುಕಟ್ಟೆ ತಜ್ಞರುಗಳೇ ಆಗಿದ್ದರು. ಮುಂಬೈನ ಅರ್ಥಶಾಸ್ತ್ರಜ್ಞರ ಪಡೆಯೇ ಯೋಜನೆಗಳನ್ನು ರೂಪಿಸಲು ಕೆಲಸ ಮಾಡಿತು.

ಹೊಸ ಪೀಳಿಗೆಯ ವಿದ್ಯಾವಂತ ವರ್ಗ ಅಮೆರಿಕಾಗೆ ಹೋಗಲು ತುದಿಗಾಲಲ್ಲಿ ನಿಂತಿರುತ್ತಿದ್ದರು. ಭಾರತದ ಆರ್ಥಿಕತೆಯು ಅಂಕಿಸಂಖ್ಯೆಗಳಲ್ಲಿ ಜಿಗಿಯತೊಡಗಿತು. ಸಣ್ಣಪುಟ್ಟ ಕೈಗಾರಿಕೆಗಳು ಉರುಳಿಬಿದ್ದಾಗ ಅದು ಯಾರ ಕಣ್ಣಿಗೂ ಕಾಣುವಂತಿರಲಿಲ್ಲ. ಹೊಸ ಕಾರುಗಳು ರಸ್ತೆಗಿಳಿದವು. ಎಲ್ಲರ ಬಾಯಲ್ಲೂ ಅಭಿವೃದ್ಧಿಯ ಮಂತ್ರ.

ಯಾವ ರಾಜ್ಯ ವಿದೇಶಿ ಬಂಡವಾಳಗಾರರಿಗೆ ಕೆಂಪು ಜಖಾನವನ್ನು ಹಾಸ ತೊಡಗಿತ್ತೋ ಆ ರಾಜ್ಯ ಆದರ್ಶವೆನಿಸಿತ್ತು. ವಿದೇಶಿ ಬಂಡವಾಳವನ್ನು ದೇಶಕ್ಕೆ ತರುವುದೇ ಇಂದಿನ ಅಭಿವೃದ್ಧಿಯ ಮಾದರಿಯಾಗಿದೆ. ಈ ಮಾದರಿ ಅಮೆರಿಕಾದಂತಹ ಅತಿಯೋಜಿತ ಆರ್ಥಿಕತೆಯನ್ನೂ ಬಿಡಲಾರದೆಂಬ ಸುಳಿವು ರಿಸೆಶನ್ (ಆರ್ಥಿಕ ಬಿಕ್ಕಟ್ಟು) 2008ರಲ್ಲಿ ಹೊಡೆದಾಗಿನಿಂದ ಅರ್ಥವಾಗಿದೆ.

ಜಾಗತೀಕರಣ ವಿಸ್ತರಿಸಿದಂತೆ ಅದರೊಳಗೂ ಸುಖದಲ್ಲಿ ತೇಲಬಹುದೆಂಬುವವರನ್ನು  ನೋಡುವಾಗ, ಆಫ್ರಿಕಾದಲ್ಲಿ ಮರಳುಗಾಡು ಹರಡಿದ ಚಿತ್ರಣವೇ ಕಣ್ಣಮುಂದೆ ಬಂದುನಿಲ್ಲುತ್ತದೆ. ಮರಳಗಾಳಿ ಬೀಸತೊಡಗಿದಾಗ ಬೆಳೆದ ಹುಲ್ಲು ಒಣಗಿಹೋಗುತ್ತದೆ. ಹುಲ್ಲು ತಿಂದು ಬದುಕುವ ಮೊಲ, ಜಿಂಕೆ ಮುಂತಾದ ಪ್ರಾಣಿಗಳು ಅಲ್ಲಲ್ಲೇ ಸತ್ತು ಬೀಳತೊಡಗುತ್ತವೆ. ಓಡಲು ಶಕ್ತಿಯಿಲ್ಲದೇ ಕೈಗೆ ಬಾಯಿಗೆ ಸಿಕ್ಕ ಹುಲ್ಲೇಕರುಗಳನ್ನು ಹುಲಿ ಸಿಂಹಗಳು ತಿಂದು ತೇಗುತ್ತವೆ. ಕೆಲವೇ ದಿನಗಳಲ್ಲಿ ಸತ್ತ ಹುಲ್ಲೇಕರುಗಳನ್ನು ತಿನ್ನಲಾರದೇ, ಕುಡಿಯಲು ನೀರಿಲ್ಲದೆ ಅಬ್ಬರಿಸಿದ ಹುಲಿ ಸಿಂಹಗಳು ಹಾಗೇ ಕುಸಿಯತೊಡಗುತ್ತವೆ.

ಸಂದಿಗೊಂದಿಗಳಲ್ಲಿ ಸತ್ತ ಪ್ರಾಣಿಗಳನ್ನು ತಿನ್ನುವ ಗುಳ್ಳೆನರಿಗೂ ಹೆಚ್ಚು ಉಳಿಗಾಲವಿಲ್ಲದೇ ಹೋಗುತ್ತದೆ.  ಹೀಗೆ ಸತ್ತುಬಿದ್ದ ಕೊಳೆತುನಾರುವ ಮಾಂಸವನ್ನು ತಿನ್ನಲು ಬಂದ ರಣಹದ್ದುಗಳು ದಿನ ದಿನಕ್ಕೆ ಹೆಚ್ಚತೊಡಗುತ್ತವೆ. ಎರಡು ಮೂರು ಪಟ್ಟು ಹೆಚ್ಚಿದ ರಣಹದ್ದುಗಳು ಸತ್ತು ಕೊಳೆತ ಪ್ರಾಣಿಗಳ ಮೂಳೆಚಕ್ಕಳ ಮುಗಿದಂತೆ ಅವುಗಳ ತಲೆಯೂ ಜೋಲುಬೀಳತೊಡಗುತ್ತದೆ. ಮರುಭೂಮಿಯಲ್ಲಿ ತಡೆಯಿಲ್ಲದೇ ಬೀಸುವ ಬಿರುಗಾಳಿ ಎಲ್ಲವನ್ನೂ ಮುಚ್ಚಿ ಮರುಳಾಗಿಸುತ್ತದೆ. (ನ್ಯಾಷನಲ್ ಜಿಯಾಗ್ರಫಿ ಚಾನೆಲ್ ಬಿತ್ತರಿಸಿದ ಚಿತ್ರ).

ಜಾಗತೀಕರಣದ ಬಿಸಿ ಅಲೆ ಬೀಸತೊಡಗಿದಾಗ ಸತ್ತ ಸಣ್ಣಪುಟ್ಟ ಕೈಗಾರಿಕೆಗಳು, ಕೆಲಸ ಕಳೆದುಕೊಂಡು ನಿರ್ಗತಿಕರಾದ ಕಾರ್ಮಿಕರು, ಆತ್ಮಹತ್ಯೆ ಮಾಡಿಕೊಂಡ ಬಡ ರೈತರು ಯಾರಿಗೂ ಕಾಣುವುದೇ ಇಲ್ಲ. ವೈಟ್ ಕಾಲರ್ ಜಾಬ್‌ನ ಜನರ ಸಂಭ್ರಮದಲ್ಲಿ ಅಭಿವೃದ್ಧಿ, ಬೆಳವಣಿಗೆ, ರಫ್ತು, ತಂತ್ರಜ್ಞಾನ ಬೆಳವಣಿಗೆ ಹೀಗೆ ಹೇಳುತ್ತಾ ಹೊಗುತ್ತೇವೆ. 2008ರಲ್ಲಿ ಇದ್ದಕ್ಕಿದ್ದಂತೆ ಟೆಕ್ನೋಕ್ರಾಟ್ಸ್‌ಗಳು ಕೆಲಸ ಕಳೆದುಕೊಂಡು ಬೀದಿಗಿಳಿದಾಗ ಅಮೆರಿಕಾದಂತಹ ರಾಷ್ಟ್ರವೂ ತತ್ತರಿಸಿತು-ಹುಲಿಸಿಂಹದಂತೆ.

ಬೃಹತ್ ಕಂಪೆನಿಗಳು ಎಲ್ಲವನ್ನು ರಣಹದ್ದುಗಳಂತೆ ನುಂಗಿ ಹಾಕತೊಡಗಿವೆ. ನುಂಗಿ ಹೊಸೆಯುವ ಈ ಲಕ್ಷಣ ಭಾರತದಲ್ಲೂ ಭರದಿಂದ ಸಾಗಿದೆ.. ಭಾರತದಲ್ಲಿಂದು ಮೆಟ್ರೊಗಳು, ಮಾಲ್‌ಗಳ ಗಟಾರದಲ್ಲಿ ಸಣ್ಣಪುಟ್ಟ ವ್ಯಾಪಾರಿಗಳು ಮುಳುಗುತಿದ್ದಾರೆ. ಜೈವಿಕ ನಿಯಮದಂತೆ ಪ್ರಾಥಮಿಕ ಜೀವಿಗಳನ್ನು ಉಳಿಸಿಕೊಳ್ಳದೆ ರಣಹದ್ದುಗಳು ಉಳಿಯಲಾರವು.

ಈ ಸುಳಿಯಲ್ಲಿ ಕೊಚ್ಚಿ ಹೋಗದಂತೆ ಭಾರತವನ್ನು ಸ್ವಲ್ಪವಾದರೂ ಹಿಡಿದಿಡಲು ಸಾಧ್ಯವಾಗಿದ್ದು ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಿಂದ. ರಿಸೆಶನ್‌ನಲ್ಲಿ ಜಗ್ಗದೇ ಸಂಭಾಳಿಸಲು ಭಾರತಕ್ಕೆ ಸಾಧ್ಯವಾಗಿದ್ದೇ ಸಮಾಜವಾದಿ ನೆಲೆಯ ಆರ್ಥಿಕ ಸಾಮಾಜಿಕ ತಳಹದಿಯಿಂದಾಗಿ. ಬಂಡವಾಳಶಾಹಿ ಆರ್ಥಿಕತೆಗೆ ಮಾನವೀಯ ಮೌಲ್ಯಗಳಾಗಲಿ, ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಲಿ ಇರಲು ಸಾಧ್ಯವಿಲ್ಲ. 
ಭಾರತದ ಇನ್ಸೂರೆನ್ಸ್ ಕಂಪೆನಿ ಸಾರ್ವಜನಿಕ ಕ್ಷೇತ್ರದಲ್ಲಿದ್ದು ಸದಾ ಲಾಭದಾಯಕವಾಗಿ ಮುಂದುವರೆಯುತ್ತಿದ್ದರೂ ಅದನ್ನು ಮುಚ್ಚಲು ಹಲವು ತಂತ್ರಗಾರಿಕೆಗಳೂ ನಡೆದಿವೆ.

  ವಿದೇಶಿ ಇನ್ಸೂರೆನ್ಸ್ ಕಂಪೆನಿಗಳು ಸರ್ಕಾರದ ಮೇಲೆ ಹಾಕುವ ಒತ್ತಡದಿಂದಾಗಿ ಅದಕ್ಕೆ ಮಣಿಯಲೇ ಬೇಕಾದ ದುಃಸ್ಥಿತಿಯಲ್ಲಿ ಭಾರತ ಸರ್ಕಾರ ನಲುಗುತ್ತಿದೆ. ಇಂತಹ ಅಭಿವೃದ್ಧಿ ಮಾದರಿಗಳನ್ನು ಮುಂದು ಮಾಡಿಕೊಂಡು ಕಾಣಿಸುತ್ತಿರುವ ರಾಷ್ಟ್ರ ನಾಯಕತ್ವದ ಪ್ರಶ್ನೆಗಳು ದಿಗಿಲಾಗಿಸುತ್ತದೆ. 

ಫಲಫಲನೇ ನಗುತ್ತಿದ್ದ ಹೆಚ್‌ಎಂಟಿ ಕೈಗಡಿಯಾರದ ಕಂಪೆನಿಯನ್ನು ಹೊಸಕಿ ಹಾಕಿದ ಕಾಣದ ಕೈಗಳು, ಬಲಿತೆಗೆದುಕೊಂಡ ಮತ್ತು ತೆಗೆದುಕೊಳ್ಳಲಿರುವ ಸಂಸ್ಥೆಗಳಲ್ಲಿ ಕೈಗಾರಿಕೆಗಳು ಮಾತ್ರವಲ್ಲ ಸರ್ಕಾರಿ ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳೂ ಪಟ್ಟಿಯಲ್ಲಿ ಸೇರಲಿವೆ.

 (ಲೇಖಕಿ ಸಹ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ)
ನಿಮ್ಮ ಅನಿಸಿಕೆ ತಿಳಿಸಿ:       editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT