ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಲಾಗುವವರು ದಡ್ಡರಲ್ಲ...

Last Updated 18 ಜೂನ್ 2014, 19:30 IST
ಅಕ್ಷರ ಗಾತ್ರ

ನನ್ನ ಮಗ ಎಂಟನೇ ಕ್ಲಾಸಿನಲ್ಲಿ ಫೇಲಾಗಿಬಿಟ್ಟಿದ್ದಾನೆ. ಏನು ಮಾಡಿದರೂ ನಾನು ಆ ಶಾಲೆಯಲ್ಲಿ ಓದಲ್ಲ ಅಂತಿದ್ದಾನೆ. ಅದು ಪ್ರೈವೇಟ್ ಶಾಲೆ. ಇಪ್ಪತ್ತೈದು ಸಾವಿರ ಡೊನೇಷನ್ ಕೊಟ್ಟು ಸೇರಿಸಿದ್ದೆ. ಈಗ ಶಾಲೆಯವರು ಟಿ.ಸಿ ಕೊಡ್ತೀವಿ, ಎಲ್ಲಾದರೂ ಕರ್ಕೊಂಡು ಹೋಗಿ ಸೇರಿಸಿ ಇವನು ನಮ್ಮ ಶಾಲೆಯಲ್ಲಿ ಇರುವುದೇ ಬ್ಯಾಡ ಅಂತಿದ್ದಾರೆ. ಫೇಲಾಗುವ ಮಕ್ಕಳನ್ನು ನಾವು ಇಟ್ಟುಕೊಳ್ಳಲ್ಲ ಅಂತಿದ್ದಾರೆ. ನಾನವರ ಕೈಕಾಲು ಹಿಡಿದು ಬೇಡಿಕೊಂಡೆ. ಅವರು ಬಿಲ್‌ಕುಲ್ ಒಪ್ತಾನೆ ಇಲ್ಲ. ಈಗ ಏನ್ ಮಾಡ್ಬೇಕು ಅಂತಾನೆ ಗೊತ್ತಾಗ್ತಿಲ್ಲ. ನಾನು ಕಷ್ಟಪಟ್ಟು ಸಾಲ ಮಾಡಿ ಓದುಸ್ತಾ ಇದ್ದೆ. ಈಗೇನ್ ಮಾಡೋದು, ನೀವಾದ್ರೂ ಒಂದು ಪರಿಹಾರ ಹೇಳಿ ಸಾರ್ ಎಂದು ನನ್ನ ಪರಿಚಯದ ಗೆಳೆಯರೊಬ್ಬರು ದಳದಳ ಕಣ್ಣೀರು ಸುರಿಸಿದರು.

ಎಂಟನೇ ಕ್ಲಾಸಿನಲ್ಲಿ ಫೇಲಾಗುವುದು ಸಾಧ್ಯವೇ ಇಲ್ಲವಲ್ಲ. ಅವನ ಈ ಹಿಂದಿನ ಓದು, ಮಾರ್ಕ್ಸ್ ಕಾರ್ಡ್ ಎಲ್ಲಾ ತರಿಸಿ ನೋಡೋಣ ಎಂದೆ. ತರಿಸಿದರು. ನೋಡಿದರೆ ಅವನು ದ್ವಿತೀಯ ದರ್ಜೆಯಲ್ಲಿ ಪಾಸಾಗುತ್ತಾ ಬಂದಿದ್ದ. ಆತ ಬರೆದಿಟ್ಟುಕೊಂಡ ನೋಟ್ಸ್‌ಗಳನ್ನು ನೋಡಿದರೆ ಅವೂ ಚೆನ್ನಾಗಿದ್ದವು. ಅವನು ಫೇಲಾಗುವ ವಿದ್ಯಾರ್ಥಿ ಎಂಬ ಯಾವ ಲಕ್ಷಣಗಳೂ ಅಲ್ಲಿ ತೋರಲಿಲ್ಲ. ಮಧ್ಯಮ ಶ್ರೇಣಿಯಲ್ಲಿ ಪಾಸಾಗಬಹುದಾದ ವಿದ್ಯಾರ್ಥಿ ಅಂತನ್ನಿಸಿತು.

ಫೇಲಾದರೇನಂತೆ ಒಂದಿಷ್ಟು ಶ್ರಮ ಹಾಕಿ ಮತ್ತೆ ಓದಿದರೆ ಪಾಸಾಗ್ತಾನೆ. ಅವನಿಗೆ ತಿಳಿಯದ್ದನ್ನು ಹೇಳಿಕೊಟ್ಟರೆ, ಪರೀಕ್ಷೆ ಬರೆಯುವ ರೀತಿ ಕಲಿಸಿದರೆ ಆರಾಮಾಗಿ ಕಲಿತು ಪಾಸಾಗ್ತಾನೆ. ಇಲ್ಲೀ ತನಕ ಅವನು ಕಲಿತಾನೆ ಬಂದಿದ್ದಾನಲ್ಲ? ಅಷ್ಟೊಂದು ದಡ್ಡನಾಗಿದ್ದರೆ ಅವನು ಎಂಟನೇ ತರಗತಿ ತನಕ ಹೇಗೆ ಪಾಸಾಗುತ್ತಾ ಬರಲು ಸಾಧ್ಯ? ಶಾಲೆಯವರು ಯಾಕೆ ಇವನನ್ನು ಬ್ಯಾಡಾಂತ ಹೇಳ್ತಿದ್ದಾರೆ? ಸರಿಯಾಗಿ ತಿಳ್ಕೊಳ್ರಿ ಎಂದು ಹೇಳಿದೆ.

ಅಷ್ಟರಲ್ಲಿ ನಮ್ಮ ಮಾತುಗಳನ್ನು ಕೇಳುತ್ತಿದ್ದ ವ್ಯಕ್ತಿಯೊಬ್ಬರು ತಾವಾಗಿಯೇ ಬಂದು ನಡುವೆ ಬಾಯಿ ಹಾಕಿದರು. ಅದೆಲ್ಲಾ ಈ ಪ್ರೈವೇಟ್ ಸ್ಕೂಲ್‌ನವರು ಮಾಡುವ ಟೆಕ್ನಿಕ್ ಸಾರ್ ಎಂದು ರಾಗ ಎಳೆದರು. ನಾನು ಏನು ಟೆಕ್ನಿಕ್ ಹೇಳಿ ಎಂದು ಅವರತ್ತ ತಿರುಗಿ ಪ್ರಶ್ನಿಸಿದೆ. ಇದು ನನ್ನ ಮಗನ ವಿಷಯದಲ್ಲೂ ನನಗಾಗಿರುವ ಅನುಭವ ಸಾರ್. ನೋಡಿ ಈ ಪ್ರೈವೇಟ್ ಸ್ಕೂಲ್‌ನೋರು ಎಂಟನೇ ಕ್ಲಾಸಿಗೆ ಡೊನೇಶನ್ ಆಸೆಗೆ ಮಕ್ಕಳನ್ನ ಸೇರಿಸ್ಕೊಳ್ತಾರೆ. ನಮ್ಮ ಹುಡುಗ ಎಸ್ಸೆಸ್ಸೆಲ್ಸಿ ತನಕ ಇಲ್ಲೇ ಓದ್ತಾನೆ ಬಿಡು ಅಂತ ನಾವೂ ಖುಷಿಯಾಗಿ ಅವರು ಕೇಳಿದಷ್ಟು ದುಡ್ಡು ಕೊಟ್ಟು ಕಲರ್ ಟೈ, ಕಲರ್ ಕೋಟು, ಎಲ್ಲಾ ತರ್ತೀವಿ? ಆಗೆಲ್ಲಾ ಎಲ್ಲಾ ಚೆನ್ನಾಗಿದೆ ಅನ್ಸುತ್ತೆ ಸಾರ್.

ಶಾಲೆಯವರು ಬಹಳ ಹುಷಾರು ಜನ. ಅವರು ಎಂಟನೇ ಕ್ಲಾಸಿನಲ್ಲೇ ಜೊಳ್ಳು ಯಾರು? ಗಟ್ಟಿ ಕಾಳುಗಳು ಯಾರು ಅನ್ನೋದನ್ನ ಮೊದಲೇ ಪರೀಕ್ಷೆ ಮಾಡ್ಕೋತಾರೆ. ಸಲೀಸಾಗಿ ಓದಿ ಪಕ್ಕಾ ಪಾಸಾಗುವ ಹುಡುಗರನ್ನು ಇಟ್ಟುಕೊಂಡು ಮುಂದೆ ಎಸ್ಸೆಸ್ಸೆಲ್ಸಿಯಲ್ಲಿ ಫೇಲಾಗುವ ಸಾಧ್ಯತೆ ಇರುವ ರಿಸ್ಕಿ ಮಕ್ಕಳನ್ನು ಎಂಟನೇ ಕ್ಲಾಸಿನ ಕೊನೆಯಲ್ಲೇ ಫಿಲ್ಟರ್ ಮಾಡಿ ಬಿಸಾಕ್ಬಿಟ್ತಾರೆ ಸಾರ್. ಡಲ್ ಇರೋ ಹುಡುಗರ ಜವಾಬ್ದಾರಿ ತಗೋಳಕ್ಕೆ ಅವರು ರೆಡಿ ಇರಲ್ಲ. ಎಸ್.ಎಸ್.ಎಲ್.ಸಿ ಫೈನಲ್ ರಿಸಲ್ಟ್‌ನಲ್ಲಿ  ನಮ್ಮ ಶಾಲೆ ಹಂಡ್ರೆಡ್ ಪರ್ಸೆಂಟ್ ಅಂತ ಬಡಾಯಿ ಕೊಚ್ಕೋಬೇಕಲ್ಲ ಅದಕ್ಕೇ ಈ ಪ್ಲಾನು ಮಾಡ್ತಾರೆ. ಓದಿನಲ್ಲಿ ಹಿಂದಿರುವ ಮಕ್ಕಳಿಗೆ ಚೆನ್ನಾಗಿ ಓದ್ಸಿ ಒಳ್ಳೆ ಮನುಷ್ಯನ ಮಾಡ್ಬೇಕು ಅನ್ನೋ ನಿಯತ್ತು ಅವರಿಗೆಲ್ಲಿದೆ ಸಾರ್. ಒಟ್ನಲ್ಲಿ ಅವರ ಸ್ಕೂಲ್ ಹೆಸ್ರು ಫಸ್ಟ್‌ ಬರ್ಬೇಕು. ಅವರಿಗೆ ಕಾಸು ಕಮಾಯಿ ಆಗ್ಬೇಕು. ಅಷ್ಟೇ ಅವರ ಟಾರ್ಗೆಟ್. ಇದಕ್ಕಾಗಿ ಅವರು ಏನು ಬೇಕಾದರೂ ಮಾಡ್ತಾರೆ ಸಾರ್.

ಇವರು ಡಲ್ ಹುಡುಗರು ಅಂತ ನಿಕ್ಕಿಯಾದ ಮೇಲೆ ಅವರಿಗೆ ಬೇರೆ ಬೇರೆ ಥರ ಹಿಂಸೆ ಕೊಡ್ತಾರೆ ಸಾರ್. ಮಕ್ಕಳು ತಾವಾಗಿಯೇ ಈ ಶಾಲೆ ಸಹವಾಸ ಬ್ಯಾಡಪ್ಪ ಅಂತ ಬಿಟ್ಟು ಓಡಿ ಹೋಗಬೇಕು, ಅಷ್ಟು ಟಾರ್ಚರ್ ಮಾಡ್ತಾರೆ ಸಾರ್. ಯಾರು ಯಾರನ್ನ ಶಾಲೆಯಿಂದ ತೆಗೀಬೇಕು ಅಂತ ಡಿಸೈಡ್ ಮಾಡ್ತಾರೋ ಅವರನ್ನ ಮೇನ್ ಟಾರ್ಗೆಟ್ ಮಾಡ್ತಾರೆ ಸಾರ್. ನೀವು ಫೇಲ್ ಆಗ್ತಿರಿ ಅಂತ ಮೊದ್ಲಿನಿಂದಲೇ ಅವರಿಗೆ ಹೆದರಿಸೋದು, ಅವರವರ ಅಪ್ಪ ಅಮ್ಮನಿಗೆ ಕರೆಸಿ ಮಕ್ಕಳ ಸಣ್ಣ ಸಣ್ಣ ಕಂಪ್ಲೇಂಟನ್ನೇ ದೊಡ್ಡ ಹರಿಕಥೆ ಮಾಡಿ ತೋರ್ಸೋದು. ಎಲ್ಲರ ಎದುರು ಆ ಹುಡುಗರನ್ನ ಕಿಂಡಲ್ ಮಾಡೋದು. ಇಷ್ಟೂ ತೊಂದರೇನ ಸ್ಟೂಡೆಂಟು ಮತ್ತೆ ಅವರಪ್ಪ ಅಮ್ಮ ಸಹಿಸಿಕೊಂಡು ಭಂಡ ಧೈರ್ಯ ಮಾಡಿ ಶಾಲೆಯಲ್ಲೇ ಉಳಿಯುವ ಸೂಚನೆ ಸಿಕ್ಕರೆ ಬಾಯಿಗೆ ಬಂದಂಗೆ ಡೊನೇಶನ್ ಕೇಳೋದು. ಡೊನೇಶನ್‌ಗೂ ರೆಡಿಯಾದರೆ ಕೊನೆಗೆ ಹೀಗೆ ಫೇಲು ಮಾಡಿ ಟಿ.ಸಿ ಕೊಟ್ಟು ಓಡಿಸ್ತಾರೆ ಸಾರ್.

ಇಂಥ ಹುಡುಗರಿಗೆಲ್ಲಾ ಕೊನೆಗೆ ಗೌರ್ಮೆಂಟ್ ಶಾಲೆನೇ ಗತಿ. ಸುಮ್ನೆ ಹುಡುಗನ್ನ ಅದೇ ಪ್ರೈವೇಟ್ ಶಾಲೆಯಲ್ಲಿ ಓದೂಂತ ಬಲವಂತ ಮಾಡ್ಬೇಡಿ ಸಾರ್. ಬೆಸ್ಟ್ ಅಂದ್ರೆ ಸರ್ಕಾರಿ ಶಾಲೆಗೆ ಸೇರಿಸಿ. ನನ್ನ ಮಗನಿಗೂ ಹಿಂಗೇ ಚಿತ್ರ ಹಿಂಸೆ ಕೊಟ್ಟು  ಫೇಲು ಮಾಡಿದರು. ಕೊನೆಗೆ ನಾನು ಇವರ ಸಹವಾಸನೆ ಬ್ಯಾಡಂತ ಸರ್ಕಾರಿ ಸ್ಕೂಲಿಗೆ ಸೇರಿಸಿದೆ. ಸರ್ಕಾರಿ ಸ್ಕೂಲಲ್ಲಿ ಫೀಸೂ ಕಮ್ಮಿ ಟಾರ್ಚರ್ರೂ ಇರಲ್ಲ. ಅಲ್ಲೂ ಒಳ್ಳೊಳ್ಳೆ ಮೇಷ್ಟ್ರುಗಳಿದ್ದಾರೆ ಸಾರ್. ಗೌರ್ಮೆಂಟ್‌ನೋರು ಒಳ್ಳೆ ಕ್ಯಾಲಿಬರ್ ಇರೋ ಟೀಚರ್‌ಗಳನ್ನೇ ಸೆಲೆಕ್ಟ್ ಮಾಡಿರ್ತಾರೆ ಅಲ್ವಾ?  ನಾವು ಮಿಡಲ್ ಕ್ಲಾಸ್ ಜನ ಬರೀ ಪ್ರೆಸ್ಟೀಜ್‌ಗೆ ಸಾಯ್ತೀವಿ. ಪ್ರೈವೇಟ್ ಸ್ಕೂಲ್ ಬಿಲ್ಡಿಂಗು, ಕಲರ್ ಬಟ್ಟೆ ನೋಡಿ ಮಂಗ ಆಗ್ತೀವಿ. ನಮ್ಮ ಈ ವೀಕ್ನೆಸ್ಸೇ ಅವರ ಬಂಡವಾಳ ಆಗ್ಬಿಟ್ಟಿದೆ ಎಂದು ತಮ್ಮ ಸುದೀರ್ಘ ಅನುಭವ ಹೇಳಿ ನಿಟ್ಟುಸಿರು ಚೆಲ್ಲಿದರು.

ಮಕ್ಕಳ ಓದಿನ ಬಗ್ಗೆ, ಕೆಲವು ಪ್ರೈವೇಟ್ ಶಾಲೆಗಳ ಬಗ್ಗೆ ಇಷ್ಟೊಂದು ಅಗಾಧ ಜ್ಞಾನ ಇವರಿಗೆ ಹೇಗೆ ಬಂತು? ಇವರ ಮಾಹಿತಿ ಪಕ್ಕಾನಾ? ಅಥವಾ ಸುಳ್ಳು ಹೇಳುತ್ತಿದ್ದಾರಾ? ಎಂದು ಪರೀಕ್ಷಿಸಲು ನಾನು, ಸ್ವಾಮಿ ಇಷ್ಟೊಂದು ಚೆನ್ನಾಗಿ ಈ ವಿಷಯದ ಬಗ್ಗೆ ಹೇಳಿದಿರಲ್ಲ! ನಿಮಗೆ ಇದೆಲ್ಲಾ ಹೇಗೆ ಗೊತ್ತಾಯಿತು? ಅಷ್ಟೊಂದು ನಿಖರವಾಗಿ ಆ ಪ್ರೈವೇಟ್ ಶಾಲೆಗಳ ನಡವಳಿಕೆಯನ್ನು ಹೇಗೆ ಹೇಳುತ್ತೀರಿ. ಎಲ್ಲಾ ಪ್ರೈವೇಟ್ ಶಾಲೆಗಳೂ ನೀವು ಹೇಳುವ ಹಾಗೆ ಇದ್ದಾವ? ಎಂದು ಪ್ರಶ್ನಿಸಿದೆ.

ಅದಕ್ಕವರು ಅಯ್ಯೋ ಸ್ವಾಮಿ ಹೆಚ್ಚು ಕಮ್ಮಿ ಬಹಳಷ್ಟು ಶಾಲೆಗಳ ಹಣೆಬರಹ ಇದೇನೆ. ಇದು ಹೊರಗಿನವರಿಗೆ ಅಷ್ಟು ಸುಲಭವಾಗಿ ಗೊತ್ತಾಗಲ್ಲ. ಬೇಕಾದರೆ ಸರ್ಕಾರಿ ಶಾಲೆಗೆ ಹೋಗಿ ನೋಡಿ. ಪ್ರತಿ ವರ್ಷ ಹೀಗೆ ಪ್ರೈವೇಟ್ ಶಾಲೆಗಳಿಂದ ಅವಮಾನವಾಗಿ ಬಂದು ಸೇರುವ ಎಷ್ಟು ಮಕ್ಕಳು ನಿಮಗೆ ಬೇಕು. ಎಲ್ಲಾ ಸರ್ಕಾರಿ ಸ್ಕೂಲಲ್ಲಿ ಸಿಕ್ತಾರೆ. ನಾನು ನೀವು ಹೇಳುವ ಅದೇ ಪ್ರೈವೇಟ್ ಶಾಲೆಯಲ್ಲಿ ಇಪ್ಪತ್ತು ವರ್ಷ ಅಟೆಂಡರ್ ಆಗಿ ಕೆಲಸ ಮಾಡಿ ಬಿಟ್ಟಿದ್ದೀನಿ. ಅವರ ಹಣೇಬರಾನ ಬಹಳ ಹತ್ತಿರದಿಂದ ನೋಡಿದ್ದೀನಿ. ಅವಮಾನ ಅನುಭವಿಸಿ ಕಣ್ಣೀರು ಹಾಕಿದ ಬಡ ಹುಡುಗರನ್ನ ನೋಡಿದ್ದೀನಿ. ಬರೀ ಬುದ್ಧಿವಂತ ಹುಡುಗರನ್ನ ಗುಡ್ಡೆ ಹಾಕ್ಕೊಂಡು ಹಂಡ್ರೆಡ್‌ ಪರ್ಸೆಂಟ್ ರಿಸಲ್ಟ್ ಕೆತ್ತೋಕೆ ಅವರೇ ಬೇಕಾ?

ಓದಲ್ಲಿ ಎಲ್ಲರೂ ಒಂದೇ ಥರ ಇರಲ್ಲ ಸ್ವಾಮಿ. ಕೆಲವು ಮಕ್ಕಳು ಡಲ್ ಇರ್ತಾರೆ. ಅವರಿಗೂ ಕಲಿಸೋದು ಇವರ ಧರ್ಮ ಅಲ್ವಾ ಹೇಳಿ? ಅವೂ ಮಕ್ಕಳಲ್ಲವಾ? ಅವರಿಗೆ ಭವಿಷ್ಯ ಬೇಡವಾ? ಐದು ಬೆರಳೂ ಒಂದೇ ಥರ ಇರುತ್ತಾ ಹೇಳಿ ಎಂದು ಖಡಕ್ಕಾಗಿ ಹೇಳಿ ನಮ್ಮನ್ನೇ ದಿಟ್ಟಿಸಿ ನೋಡಿದರು. ಅವರು ಹೇಳುತ್ತಿರುವುದರಲ್ಲೂ ನಿಜವಿದೆ ಅಂತನ್ನಿಸಿತು. ಅವರ ಮಾತು ಕೇಳಿದ ಗೆಳೆಯ ಇರ್ಲಿ ಬಿಡಿ ಸಾರ್. ನನ್ನ ಮಗನನ್ನ ಗೌರ್ಮೆಂಟ್ ಸ್ಕೂಲಲ್ಲೇ ಓದಿಸ್ತೀನಿ. ಗೌರ್ಮೆಂಟ್ ಸ್ಕೂಲಲ್ಲಿ ಓದಿರೊ ಎಷ್ಟೊಂದು ಜನ ಇವತ್ತು ಒಳ್ಳೆ ಪೊಝಿಶನ್‌ನಲ್ಲಿಲ್ಲ? ಎಂದು ತನಗೆ ತಾನೇ ಸಮಾಧಾನ ಹೇಳಿಕೊಂಡ.

ಇಷ್ಟು ಕಥೆ ಕೇಳಿ ಹೈರಾಣಾಗಿ ನಾನು ಮನೆಗೆ ಬಂದಾಗ ನನ್ನ ಗೆಳೆಯರೊಬ್ಬರು ಫೋನು ಮಾಡಿದರು. ಅವರು ತುಂಬಾ ಆತಂಕದಲ್ಲಿದ್ದರು. ಅವರ ಮಗಳು ನಮ್ಮೂರಿನ ಮತ್ತೊಂದು ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಪರೀಕ್ಷೆ ಎದುರಿಸಿ ಒಂದು ವಿಷಯದಲ್ಲಿ ಫೇಲಾಗಿದ್ದಳು. ಇವಳ ಫೇಲಿನಿಂದ ಆ ಶಾಲೆಯವರ ಹಂಡ್ರೆಂಡ್‌ ಪರ್ಸೆಂಟ್ ರಿಸಲ್ಟ್‌ಗೆ ಧಕ್ಕೆ ಬಂದಿತ್ತು. ಅವಳನ್ನು ಕರೆಸಿಕೊಂಡ ಅಲ್ಲಿನ ಪ್ರಾಂಶುಪಾಲರು ನಿನ್ನಿಂದ ನಮ್ಮ ಕಾಲೇಜಿನ ಮರ್ಯಾದೆಯೇ ಹಾಳಾಗಿ ಹೋಯಿತೆಂದು ಬೈದು, ಅವಮಾನಿಸಿ ಕಳಿಸಿದ್ದರು. ನೊಂದುಕೊಂಡ ಆಕೆ ತನ್ನ ಮನೆಗೆ ಹೋಗಿ ರೂಮಿನ ಚಿಲಕ ಹಾಕಿಕೊಂಡು ಒಳ ಸೇರಿದವಳು ಹದಿನೈದು ದಿನದಿಂದ ಸರಿಯಾಗಿ ಊಟ ಮಾಡುತ್ತಿಲ್ಲವಂತೆ. ಮನೆಯಲ್ಲಿ ಯಾರೊಂದಿಗೂ ನೆಟ್ಟಗೆ ಮಾತಾಡುತ್ತಿಲ್ಲವಂತೆ. ಅವಳಿಗೆ ಹೇಗೆ ಬುದ್ಧಿ ಹೇಳುವುದೆಂದು ನಮಗೂ ತಿಳಿಯುತ್ತಿಲ್ಲ. ತುಂಬಾ ಹೆದರಿಕೆಯಾಗುತ್ತಿದೆ. ಏನು ಮಾಡುವುದು ನೀವಾದರೂ ಹೇಳಿ ಎನ್ನುತ್ತಲೇ ದುಃಖ ತಡೆಯಲಾರದೆ ಗೊಳೋ ಎಂದು ರೋಧಿಸತೊಡಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT