ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್ ಯುಗ: ವಹಿವಾಟಿನ ಹೊಸ ಮಾಧ್ಯಮ

Last Updated 13 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಪದವಿಪೂರ್ವ ಮತ್ತು ಎಂಬಿಎ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗುವ ಹಲವಾರು ವಿಚಾರಸಂಕಿರಣ, ಸಭೆ - ಸಮಾರಂಭ ಮತ್ತು ಉಪನ್ಯಾಸ ಕಾರ್ಯಕ್ರಮಗಳಲ್ಲಿ ನಾನು ನಿಯಮಿತವಾಗಿ ಭಾಗವಹಿಸುತ್ತಲೇ ಇರುತ್ತೇನೆ. ಸಭಿಕರಿಗೆ ಒಂದು ನಿರ್ದಿಷ್ಟ ಪ್ರಶ್ನೆ ಕೇಳುವುದರೊಂದಿಗೆ ನಾನು ನನ್ನ ಉಪನ್ಯಾಸಕ್ಕೆ ಚಾಲನೆ ನೀಡುವೆ.

ಆ ಪ್ರಶ್ನೆಗೆ ದೊರೆಯುವ ಉತ್ತರವು ನಾವು ಯಾವ ಯುಗದಲ್ಲಿ ಜೀವಿಸುತ್ತಿದ್ದೇವೆ ಎನ್ನುವುದನ್ನು ತಿಳಿದುಕೊಳ್ಳಲು ನೆರವಾಗುತ್ತದೆ. `ನಿಮ್ಮಲ್ಲಿ ಎಷ್ಟು ಜನ ಇಂದು ಉದ್ದಿಮೆ ಹಣಕಾಸಿಗೆ ಮಾತ್ರ ಸಂಬಂಧಿಸಿದ (ಬಿಸಿನೆಸ್) ದಿನಪತ್ರಿಕೆ ಓದಿದ್ದೀರಿ~ ಎಂದು ಕೇಳಿದಾಗ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಕೈ ಮೇಲೆ ಎತ್ತುತ್ತಾರೆ. `ಎಷ್ಟು ಜನ ಇಂದಿನ ದಿನಪತ್ರಿಕೆಗಳನ್ನು ಓದಿದ್ದೀರಿ~ ಎಂದು ಕೇಳಿದಾಗ ಅನೇಕರು ಕೈ ಮೇಲೆತ್ತುತ್ತಾರೆ.
 
`ನಿಮ್ಮಲ್ಲಿ ಎಷ್ಟು ಜನ ಇಂದು `ಫೇಸ್‌ಬುಕ್~ ತಾಣಕ್ಕೆ  ಭೇಟಿಕೊಟ್ಟಿದ್ದೀರಿ (ಲಾಗ್ ಆನ್)~ ಎಂದು ಕೇಳಿದಾಗ, ಅಲ್ಲಿದ್ದವರ್ಲ್ಲೆಲರೂ ಕೈ ಮೇಲೆತ್ತುತ್ತಾರೆ. ನಾವು ಈಗ `ಫೇಸ್‌ಬುಕ್ ಯುಗ~ದಲ್ಲಿ ಬದುಕುತ್ತಿದ್ದೇವೆ ಎಂದು ಬಣ್ಣಿಸಲು ಇದು ಉತ್ತಮ ನಿದರ್ಶನ. ಹೌದು, ಕಾಲ ನಿಜಕ್ಕೂ ಬದಲಾಗಿದೆ.

ವಾಸ್ತವದಲ್ಲಿ ನಾನು ಕೂಡ `ಫೇಸ್‌ಬುಕ್~ನಲ್ಲಿ ಸಾಕಷ್ಟು ಆಸಕ್ತಿ ತಳೆದಿದ್ದೇನೆ. ಫೇಸ್‌ಬುಕ್ ಮತ್ತು ಇಂತಹ ಇತರ ಸಾಮಾಜಿಕ ಸಂಪರ್ಕ ತಾಣಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನೂ ಕಲೆಹಾಕಿರುವೆ. ಫೇಸ್‌ಬುಕ್‌ಅನ್ನು ನಿಯಮಿತವಾಗಿ ಬಳಸುವ, ಈ ವಿಷಯದಲ್ಲಿ ನಿಷ್ಣಾತರಾದ ಅನೇಕರನ್ನೂ ಸಂಪರ್ಕಿಸಿ ಸಾಕಷ್ಟು ವಿಷಯ ಸಂಗ್ರಹಿಸಿರುವೆ.

`ಫೇಸ್‌ಬುಕ್~ ಈಗ ವಿಶ್ವದ ಅತಿದೊಡ್ಡ ಸಾಮಾಜಿಕ ಸಂಪರ್ಕದ ಅಂತರ್ಜಾಲ ತಾಣವಾಗಿದ್ದು, ಭಾರತದಲ್ಲಿಯೇ 3.5 ಕೋಟಿಗಳಷ್ಟು ನೋಂದಾಯಿತ ಬಳಕೆದಾರರು ಇದ್ದಾರೆ. ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ಸಾಮಾಜಿಕ ಸಂಪರ್ಕ ತಾಣಗಳು ನಮ್ಮಲ್ಲೂ ಭಾರಿ ಅಲೆಯನ್ನೇ ಎಬ್ಬಿಸಿವೆ.

ಆರಂಭದಲ್ಲಿ ಆರ್ಕುಟ್, ಪ್ರಾಥಮಿಕ ಸಾಮಾಜಿಕ ಸಂಪರ್ಕ ತಾಣವಾಗಿ ಜನಪ್ರಿಯವಾಗಿತ್ತು. ಆದರೆ, ಈಗ `ಫೇಸ್‌ಬುಕ್~ ಮುಂಚೂಣಿ ಸ್ಥಾನಕ್ಕೆ ಏರಿದೆ. ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಗರಿಷ್ಠ ಸಂಖ್ಯೆಯ `ಫೇಸ್‌ಬುಕ್~ ಬಳಕೆದಾರರು ಇದ್ದಾರೆ. ದೇಶದಲ್ಲಿನ ಶೇ 70ರಷ್ಟು `ಫೇಸ್‌ಬುಕ್~ ಬಳಕೆದಾರರು ಪುರುಷರೇ ಆಗಿದ್ದಾರೆ. ಶೇ 85ರಿಂದ 90ರಷ್ಟು ಬಳಕೆದಾರರು ದೊಡ್ಡ ನಗರಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ  ಇದ್ದಾರೆ.

ಈ `ಫೇಸ್‌ಬುಕ್~ ತಾಣವು 2004ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಆಗ 20 ಹರೆಯದವನಾಗಿದ್ದ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಮಾರ್ಕ್ ಜುಕರ್‌ಬರ್ಗ್ ತನ್ನ ಕೋಣೆಯಲ್ಲಿಯೇ ಈ ತಾಣಕ್ಕೆ ಚಾಲನೆ ನೀಡಿದ್ದ.

ಈ ಅಂತರ್ಜಾಲ ತಾಣವು, ಪ್ರತಿಯೊಬ್ಬ ಬಳಕೆದಾರರು ತಮ್ಮ ಹುಟ್ಟೂರು, ವಿದ್ಯಾಭ್ಯಾಸ, ವಾಸಸ್ಥಳ, ಸಿನಿಮಾ, ಕ್ರೀಡೆ, ಪುಸ್ತಕ, ಸಂಗೀತ ಮತ್ತಿತರ ಹವ್ಯಾಸ ಮತ್ತು ಅಭಿರುಚಿಗಳಿಗೆ ಸಂಬಂಧಿಸಿದ ವಿವರಗಳನ್ನು ದಾಖಲಿಸಲು ಅವಕಾಶ ಕಲ್ಪಿಸಿಕೊಡುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಪರಿಚಿತರು ಮತ್ತು ಸ್ನೇಹಿತರನ್ನು ಪತ್ತೆ ಹಚ್ಚಿ ಅವರನ್ನು ತಮ್ಮ ಸಂಪರ್ಕ ಜಾಲಕ್ಕೆ ಸೇರಿಸಿಕೊಳ್ಳಲು ನೆರವಾಗುತ್ತದೆ. ಸದ್ಯಕ್ಕೆ ವಿಶ್ವದಾದ್ಯಂತ ಈ ತಾಣದಲ್ಲಿ 70 ಕೋಟಿಗಳಷ್ಟು ಬಳಕೆದಾರರು ಇದ್ದಾರೆ. ವಿಶ್ವದ ಅತಿದೊಡ್ಡ ಸಾಮಾಜಿಕ ಸಂಪರ್ಕ ತಾಣವಾಗಿ `ಫೇಸ್‌ಬುಕ್~ ದಿನೇ ದಿನೇ ಜನಪ್ರಿಯಗೊಳ್ಳುತ್ತಲೇ ಇದೆ.

`ಫೇಸ್‌ಬುಕ್~ ಬಗ್ಗೆ ಮಾಹಿತಿ ಕಲೆ ಹಾಕುವಾಗ, ಇಂತಹ ಸಾಮಾಜಿಕ ಸಂಪರ್ಕ ತಾಣಗಳ ಮಹತ್ವ ಮತ್ತು ಉಪಯುಕ್ತತೆಯು ನನಗೂ ಸಾಕಷ್ಟು ಮನವರಿಕೆಯಾಯಿತು. ಹಳೆಯ ಸ್ನೇಹಿತರ ಜತೆ ಸಂಪರ್ಕ ಸಾಧಿಸಲು, ಅವರ ಬಗ್ಗೆ ಮಾಹಿತಿ ಕಲೆ ಹಾಕಲು, ಸಹೋದ್ಯೋಗಿಗಳ ಜತೆ ಸಂಪರ್ಕ ಹೊಂದಲು, ಹೊಸ ವಿದ್ಯಮಾನಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಇಂತಹ ತಾಣಗಳು ಅತ್ಯುತ್ತಮ ವೇದಿಕೆಯಾಗಿವೆ.

ಇವೆಲ್ಲಕ್ಕಿಂತ ಹೆಚ್ಚಾಗಿ ನನಗೆ ಹೊಳೆದ ಆಲೋಚನೆ ಏನೆಂದರೆ,  ಎಲ್ಲ ಬಗೆಯ ಉದ್ದಿಮೆ ವಹಿವಾಟುದಾರರು ತಮ್ಮ ಉತ್ಪನ್ನ ಮತ್ತು ಸೇವೆಗಳಿಗೆ ಇಂತಹ ಸಾಮಾಜಿಕ ಸಂಪರ್ಕ ತಾಣಗಳನ್ನು ಬಳಸಿಕೊಳ್ಳುವುದರಿಂದ ದೊರೆಯಲಿರುವ ಪ್ರಯೋಜನಗಳು ಮತ್ತು ವಹಿವಾಟು ವಿಸ್ತರಿಸುವ ಸಾಧ್ಯತೆಗಳು.

ಕಳೆದ ದಶಕದಲ್ಲಿ  ಇಂಟರ್‌ನೆಟ್ ಬಳಕೆಯ ಜನಪ್ರಿಯತೆಯು ಗಮನಾರ್ಹವಾಗಿ ಹೆಚ್ಚಳಗೊಂಡಿತು. ಇಂಟರ್‌ನೆಟ್ ಸಂಬಂಧಿ ಚಟುವಟಿಕೆಗಳು ವ್ಯಾಪಕವಾಗಿ ಗರಿಗೆದರಲು ಇದು ತುಂಬ ಮಹತ್ವದ ಮತ್ತು ಅಗತ್ಯ ಬೆಳವಣಿಗೆಯಾಗಿತ್ತು.
ಇಂಟರ್‌ನೆಟ್‌ನಲ್ಲಿಯೇ ಸರಕು - ಸೇವೆ ಖರೀದಿಯ `ಇ-ವಾಣಿಜ್ಯ~, ಆನ್‌ಲೈನ್ ಗೇಮಿಂಗ್ ಮತ್ತು ಸಾಮಾಜಿಕ ಸಂಪರ್ಕ ಮತ್ತಿತರ ಚಟುವಟಿಕೆಗಳು ಅಗಾಧ ಪ್ರಮಾಣದಲ್ಲಿ ಜನಪ್ರಿಯಗೊಳ್ಳಲು ಇಂಟರ್‌ನೆಟ್ ಬಳಕೆಯ ಹೆಚ್ಚಳವೂ ಕಾರಣವಾಗಿತ್ತು.

21ನೇ ಶತಮಾನದ ಆರಂಭದ ವರ್ಷಗಳಿಗೆ ಹೋಲಿಸಿದರೆ ನಂತರದ ದಿನಗಳಲ್ಲಿ ಇಂಟರ್‌ನೆಟ್‌ನ ಬಳಕೆ ದ್ವಿಗುಣಗೊಂಡಿದೆ. ಸದ್ಯಕ್ಕೆ ದೇಶದಲ್ಲಿ 7ರಿಂದ 7.5 ಕೋಟಿಗಳಷ್ಟು ಇಂಟರ್‌ನೆಟ್ ಬಳಕೆದಾರರು ಇದ್ದಾರೆ. 2000ರಲ್ಲಿ ಕೇವಲ ಶೇ 1ರಿಂದ ಶೇ 2ರಷ್ಟಿದ್ದ ಇಂಟರ್‌ನೆಟ್ ಬಳಕೆದಾರರ ಪ್ರಮಾಣವು ಈಗ ಶೇ  7ರಿಂದ ಶೇ 8ಕ್ಕೆ ಏರಿಕೆಯಾಗಿದೆ.

ದೇಶದ ಜನಸಂಖ್ಯೆಗೆ ಹೋಲಿಸಿದರೆ 7.5 ಕೋಟಿಗಳಷ್ಟು ಇರುವ ಇಂಟರ್‌ನೆಟ್ ಬಳಕೆದಾರರ ಪ್ರಮಾಣ ಕಡಿಮೆ ಇರಬಹುದು. ಆದರೆ, ಉದ್ದಿಮೆ ವಹಿವಾಟುದಾರರು ಈ ಬಳಕೆದಾರರನ್ನು ಅಷ್ಟು ಸುಲಭವಾಗಿ ನಿರ್ಲಕ್ಷಿಸುವಂತಿಲ್ಲ. ಈ 7.5 ಕೋಟಿಗಳಷ್ಟು ಬಳಕೆದಾರರು ಮಹಾನಗರಗಳಲ್ಲಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಇರುವವರು. ಇವರೆಲ್ಲ ಗಮನಾರ್ಹ ಪ್ರಮಾಣದಲ್ಲಿ ಹಣ ವೆಚ್ಚ ಮಾಡುವ ಸಾಮರ್ಥ್ಯ ಹೊಂದಿದ ಗ್ರಾಹಕರು.

ಇವರು ನೇರವಾಗಿ ಮಾರುಕಟ್ಟೆಯಿಂದ ಮತ್ತು ಆನ್‌ಲೈನ್‌ನಲ್ಲಿಯೂ ವೈವಿಧ್ಯಮಯ ಸರಕು ಮತ್ತು ಸೇವೆಗಳನ್ನು ಖರೀದಿಸುವವರು. ಜತೆಗೆ ಸರಕಿನ ಬ್ರಾಂಡ್ ಮತ್ತು ಗುಣಮಟ್ಟದ ಬಗ್ಗೆ ಸಾಕಷ್ಟು ಕಾಳಜಿ ವಹಿಸುವವರು. ಆನ್‌ಲೈನ್‌ನಲ್ಲಿ ಸರಕುಗಳನ್ನು ಖರೀದಿಸುವಾಗ  ಅದರ ಗುಣವಿಶೇಷಗಳ ಬಗ್ಗೆ ಇತರ ಬಳಕೆದಾರರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಪರಿಗಣಿಸಿಯೇ ಖರೀದಿ ನಿರ್ಧಾರಕ್ಕೆ ಬರುವ ವಿಶಿಷ್ಟ ಗ್ರಾಹಕರು ಇವರು.

ಈ ಕಾರಣಕ್ಕೆ ಉದ್ದಿಮೆದಾರರು ಮತ್ತು ಸರಕುಗಳ ತಯಾರಕರು ತಮ್ಮ ವಹಿವಾಟು ವಿಸ್ತರಣೆಗೆ ಸಾಮಾಜಿಕ ಸಂಪರ್ಕ ತಾಣ ಮತ್ತು ಇತರ ಆನ್‌ಲೈನ್ ಮಾರುಕಟ್ಟೆ ವಿಧಾನಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ.

`ಫೇಸ್‌ಬುಕ್~ ತಾಣದಲ್ಲಿ ಉದ್ದಿಮೆ ವಹಿವಾಟು ವಿಸ್ತರಣೆ ಉದ್ದೇಶಕ್ಕೆ ಪುಟಗಳನ್ನು ಸೃಷ್ಟಿಸುವುದರಿಂದ (ಆನ್‌ಲೈನ್ ಮಳಿಗೆ ತೆರೆಯುವುದು) ಉತ್ಪನ್ನವೊಂದರ ಬ್ರಾಂಡ್ ಮತ್ತು  ವ್ಯಾಪಾರ - ವಹಿವಾಟು ಗ್ರಾಹಕರ ನೇರ ಸಂಪರ್ಕಕ್ಕೆ ಬರುತ್ತದೆ. ಉತ್ಪನ್ನ ಮತ್ತು ಸೇವೆ ಬಗ್ಗೆ ಬಳಕೆದಾರರ ಅಭಿಪ್ರಾಯ ಪಡೆಯಲೂ ಸಾಧ್ಯವಾಗಲಿದೆ. ಜತೆಗೆ ಆಫ್‌ಲೈನ್‌ನಲ್ಲಿಯೂ ಅಂದರೆ ಮಾರುಕಟ್ಟೆಯಲ್ಲಿಯೂ ಸಾಕಷ್ಟು ಪ್ರಚಾರ ದೊರೆಯುತ್ತದೆ.

ಇಂಟರ್‌ನೆಟ್‌ನ ಒಂದೇ ತಾಣದಲ್ಲಿ 3.5 ಕೋಟಿಗಳಷ್ಟು ಗ್ರಾಹಕರು ದೊರೆಯುವುದರಿಂದ ಪ್ರತಿಯೊಂದು ಉದ್ದಿಮೆ ವಹಿವಾಟು ಸಾಮಾಜಿಕ ಸಂಪರ್ಕ ತಾಣದ ಮಾರುಕಟ್ಟೆ ಜಾಲದ ಸದುಪಯೋಗ ಪಡೆಯುವಂತಾಗಬೇಕು.

ಜಾಹೀರಾತಿನ ಮೂಲಕ ಉತ್ಪನ್ನವೊಂದರ ನಿರ್ದಿಷ್ಟ ಗ್ರಾಹಕರನ್ನು ತಲುಪಲು ಈ ತಾಣವು ಹೇಳಿ ಮಾಡಿಸಿದಂತೆ ಇರುವುದು ಇದರ ಇನ್ನೊಂದು ಹೆಗ್ಗಳಿಕೆಯಾಗಿದೆ.
`ಫೇಸ್‌ಬುಕ್~ ತಾಣದಲ್ಲಿ ನೋಂದಾಯಿತರಾದ ಬಳಕೆದಾರರು ತಮ್ಮ ವಯಸ್ಸು, ಲಿಂಗ, ತಮ್ಮ ಇಷ್ಟಾನಿಷ್ಟ, ತಾವು ವಾಸಿಸುವ ಸ್ಥಳ ಮತ್ತಿತರ ಮಾಹಿತಿಗಳನ್ನು ಹಂಚಿಕೊಂಡಿರುತ್ತಾರೆ. ಬಳಕೆದಾರರ ಮಾಹಿತಿ ಆಧರಿಸಿ ನಿರ್ದಿಷ್ಟ ಗ್ರಾಹಕರನ್ನು ತಲುಪಲು ಮತ್ತು ಅವರಿಷ್ಟದ ಸರಕು ತಲುಪಿಸಲು ಉದ್ದಿಮೆದಾರರಿಗೆ ಇಲ್ಲಿ ವಿಪುಲ ಅವಕಾಶಗಳು ಇವೆ.

ಉದಾಹರಣೆಗೆ, ಬೆಂಗಳೂರು ಮೂಲದ ಉದ್ದಿಮೆ ಸಂಸ್ಥೆಯೊಂದು ವಿಶಿಷ್ಟ ಉತ್ಪನ್ನವೊಂದನ್ನು ತಯಾರಿಸಿದೆ ಎಂದು ಭಾವಿಸೋಣ.  ಕ್ರಿಕೆಟ್‌ನಲ್ಲಿ ಆಸಕ್ತರಾದ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಸಂಸ್ಥೆ ಮೊಬೈಲ್ ತಯಾರಿಸಿರುತ್ತದೆ.

ಕ್ರಿಕೆಟ್ ಪ್ರೀತಿಸುವ, ಸಚಿನ್ ತೆಂಡೂಲ್ಕರ್ ಮತ್ತಿತರ ಆಟಗಾರರನ್ನು ಆರಾಧಿಸುವ  ಬೆಂಗಳೂರಿನಲ್ಲಿ ನೆಲೆಸಿರುವ 17ರಿಂದ 24 ವಯಸ್ಸಿನ ವಿದ್ಯಾರ್ಥಿಗಳಿಗಾಗಿ ಫೇಸ್‌ಬುಕ್‌ನಲ್ಲಿ ಜಾಹೀರಾತು ಪ್ರದರ್ಶಿಸಲು ಈ ಸಂಸ್ಥೆ ಮುಂದಾಗುತ್ತದೆ.

ಪ್ರತಿಯೊಬ್ಬ ವಿದ್ಯಾರ್ಥಿ ಈ ಜಾಹೀರಾತು ವೀಕ್ಷಿಸಲು ಇಚ್ಛೆಪಟ್ಟು ಅದರ ಮೇಲೆ ಕ್ಲಿಕ್ ಮಾಡಿದರೆ ಮಾತ್ರ ಉದ್ದಿಮೆ ಸಂಸ್ಥೆಯು ಜಾಹೀರಾತಿಗೆ ದುಡ್ಡು ಪಾವತಿಸಬೇಕಾಗುತ್ತದೆ.

ಅಂದರೆ, ಇಂತಹ ಜಾಹೀರಾತನ್ನು ಎಷ್ಟು ಬಾರಿಯಾದರೂ ಈ ತಾಣದಲ್ಲಿ ಪ್ರದರ್ಶಿಸಬಹುದು. ಆದರೆ, ಆಸಕ್ತರು ಅದನ್ನು ವೀಕ್ಷಿಸಲು ಮುಂದಾದರೆ ಮಾತ್ರ ಸಂಸ್ಥೆಯು ಜಾಹೀರಾತು ಶುಲ್ಕ ಪಾವತಿಸಬೇಕಾಗುತ್ತದೆ. ವಿವಿಧ ಬ್ರಾಂಡ್‌ನ ಉತ್ಪನ್ನಗಳು ಮತ್ತು ಸಂಘಟನೆಗಳು ಸಾಮಾಜಿಕ ಸಂಪರ್ಕ ತಾಣಗಳನ್ನು ಮಾರುಕಟ್ಟೆ ಮತ್ತು ಜಾಹೀರಾತು ಉದ್ದೇಶಕ್ಕೆ ಬಳಸಿಕೊಳ್ಳಲು ಇರುವ ಅವಕಾಶಗಳ ಬಗ್ಗೆ ಇದೊಂದು ಅತ್ಯುತ್ತಮ ನಿದರ್ಶನವಷ್ಟೆ.

ಕಳೆದ ದಶಕದಲ್ಲಿ ದೇಶದಲ್ಲಿ ಇಂಟರ್‌ನೆಟ್ ಬಳಕೆಯು ವ್ಯಾಪಕವಾಗಿ ಬಳಕೆಗೆ ಬಂದಿದೆ. ಮಾಹಿತಿ ಶೋಧ, ಸಾಮಾಜಿಕ ಮಾಧ್ಯಮ, ಇ-ವಾಣಿಜ್ಯ ಮತ್ತಿತರ ಚಟುವಟಿಕೆಗಳು ಆನ್‌ಲೈನ್ ವಹಿವಾಟಿನ ಗಡಿಯನ್ನು ಗಮನಾರ್ಹವಾಗಿವಿಸ್ತರಿಸಿವೆ.

ಮುಂಬರುವ ದಶಕಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆ ನಿರಂತರವಾಗಿ ವೃದ್ಧಿ ಆಗಲಿದೆ. ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳ ಮಾರಾಟ,`3ಜಿ~ ಮತ್ತು `4ಜಿ~ ಮೊಬೈಲ್‌ಗಳ ಬಳಕೆ,  ಸ್ಮಾರ್ಟ್‌ಫೋನ್‌ಗಳಲ್ಲಿ ಇಂಟರ್‌ನೆಟ್ ಲಭ್ಯತೆ  ಹೆಚ್ಚಲಿದೆ. ಇನ್ನಷ್ಟು ಇಂಟರ್‌ನೆಟ್ ಸೇವಾ ಸಂಸ್ಥೆಗಳು ಗ್ರಾಹಕರಿಗೆ ಸ್ಪರ್ಧಾತ್ಮಕ ದರಗಳಲ್ಲಿ ಇಂಟರ್‌ನೆಟ್ ಒದಗಿಸುವುದರಿಂದ, ಲಕ್ಷಾಂತರ ಸಂಖ್ಯೆಯಲ್ಲಿ ಇಂಟರ್‌ನೆಟ್ ಬಳಕೆದಾರರು ಹೆಚ್ಚಲಿದ್ದಾರೆ. ಆನ್‌ಲೈನ್ ಖರೀದಿ, ಸಂಶೋಧನೆ, ಸಂವಹನವೂ ದುಪ್ಪಟ್ಟಾಗಲಿದೆ.

ಈ ಎಲ್ಲ ಕಾರಣಗಳಿಗೆ ಉದ್ದಿಮೆ ಸಣ್ಣದಿರಲಿ, ದೊಡ್ಡದಿರಲಿ, ಸ್ಥಳೀಯವಾಗಿರಲಿ ಅಥವಾ ಬಹುರಾಷ್ಟ್ರೀಯವಾಗಿರಲಿ, ಫೇಸ್‌ಬುಕ್, ಗೂಗಲ್‌ನಂತಹ ಇಂಟರ್‌ನೆಟ್ ತಾಣಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ.
 

(ನಿಮ್ಮ ಅನಿಸಿಕೆಗಳನ್ನು ಇಲ್ಲಿಗೆ ಕಳುಹಿಸಿ: editpagefeedback@prajavani.co.in)
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT