ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರ ಬಣ್ಣದ ನೀರಿಗೆ ಎಂಥಾ ತಾಕತ್ ಅಂತೀರಿ!

Last Updated 4 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಯರ್ಲಗಡ್ಡ ಈಶ್ವರಿ ಎನ್ನುವ ಹುಡುಗಿ ಹೇಗೆ ವರ್ಷ ಮಧ್ಯದಲ್ಲಿ ಪ್ರವೇಶ ಪಡೆದಳೋ ಗೊತ್ತಿಲ್ಲ. ಅಂತೂ ಬಂದಳು. ಬಂದಳೂಂದರೆ ಹೇಗೆ!...ಯಾಕಾದರೂ ಬಂದಳೋ ಎನ್ನಿಸುವ ಹಾಗೆ ಬಂದಳು. ಆಗಲೇ ಮೂರು ಜನ ಇದ್ದ ರೂಮಿನಲ್ಲಿ ಇವಳನ್ನು ಎಕ್ಟ್ರಾ ಅಂತ ಹಾಕಿದರು. ರಶ್ಮಿ, ರಿಂಕಿ, ವಿಜಿ ಮೂರೂ ಜನಕ್ಕೆ ಇಲ್ಲದ ಕಿರಿಕಿರಿಯಾಯಿತು. ಇವರಿಲ್ಲದ ದಿನ ಬಂದು ಐದು ಬ್ಯಾಗುಗಳನ್ನು ರೂಮಿನ ಹೊರಗೆ ಸಾಲಾಗಿ ಜೋಡಿಸಿ ಹೋಗಿತ್ತು ಈಸ್ವರಕ್ಕ! ಆ ಬ್ಯಾಗುಗಳು ಆ ಹುಡುಗಿಯದ್ದೇ ಎಂದು ಗೊತ್ತಾದಮೇಲೂ ಯಾರೂ ಎತ್ತಿಡುವ ಒಳ್ಳೆಯತನ ತೋರಿಸಿರಲಿಲ್ಲ. ಅಕಸ್ಮಾತ್ ಸೊಕ್ಕಿನವಳಾಗಿದ್ದು ನಮ್ಮನ್ನ ನಾಳೆಯಿಂದ ಕೆಲ್ಸದೋರ್ ಥರಾ ನೋಡಿದ್ರೆ?

ಸುಮ್ನೆ ಡಿಮಾಂಡ್ ಇಟ್ಕೊಂಡು ಇರೋದು ಒಳ್ಳೇದು. ಇಲ್ಲದಿದ್ರೆ ಕಾಲ ಕಸಕ್ಕಿಂತ್ಲೂ ಕಡೆ ಆಗ್ತೀವಿ. ಇದು ಹಾಸ್ಟೆಲಿನ ಪಾಠಗಳಲ್ಲಿ ಬಹಳ ಮುಖ್ಯವಾದದ್ದು. ಅಯ್ಯೋ ಪಾಪ ಅಂದ್ರೆ ನಮ್ ಕರ್ಮ ಸಾವ್ರ ವರ್ಷ ಮುಗಿಯಲ್ವಂತೆ ಅಂತ ಯಾರೋ ಇನ್ಯಾರಿಗೋ ಬಚ್ಚಲ ಹೊರಗೆ ಹೇಳುತ್ತಿದ್ದುದನ್ನು ಆಗಾಗ ಕೇಳಿಸಿಕೊಳ್ಳಬಹುದಿತ್ತು. ಇಂಗ್ಲೀಷ್ ಮಾತಾಡೋ ಹುಡುಗೀರ ಮುಂದೆ ಕನ್ನಡದ ಹುಡುಗೀರು ತಮ್ಮ ಸ್ಪೆಷಾಲಿಟಿ ತೋರಿಸಿಕೊಳ್ಳುತ್ತಿದ್ದುದು ಹೀಗೆ.
ಏನೇ ಇರಲಿ. ಈಶ್ವರಿ ಹೆಸರಿಗೆ ತಕ್ಕ ಹಾಗೆ ನೋಡಲು ಗೋಧಿ ಬಣ್ಣ, ಉದ್ದ ನಿಲುವು, ಬಳುಕುವ ಸೊಂಟ, ಉದ್ದ ಜಡೆ, ವೀಣೆ ಮೀಟಿದಂತಹ ಧ್ವನಿ – ಊಹೂಂ. ಯಾವೂ ಇರಲಿಲ್ಲ. ಈಶ್ವರಿ ಈ ದೇಶದಲ್ಲಿ ಸಾಧಾರಣ ಕಾಣುವ ಎಲ್ಲ ಹುಡುಗಿಯರ ಹಾಗೆ ಕಪ್ಪಗೆ, ಸ್ವಲ್ಪ ದಪ್ಪಗೆ, ಭುಜದ ತನಕ ಕೂದಲು ಹೊಂದಿದ್ದು ಪರಮ ಸೋಮಾರಿಯಾಗಿದ್ದಳು.

ಈ ರೂಮಿನ ಎಲ್ಲಾ ಬೆಡ್ಡುಗಳೂ ತುಂಬಿದ್ದವು, ಆದರೆ ರಿಂಕಿ ಹೊರಗಿನ ಆಟ ಶುರು ಮಾಡಿಕೊಂಡಿದ್ದರಿಂದ ಅವಳ ಬೆಡ್ಡು ಸದಾ ಖಾಲಿ ಇರುತ್ತಿತ್ತು. ಇಂದುಮತಿ ಈಶ್ವರಿಗೆ ಈ ಮಾತನ್ನು ತಿಳಿಸಿ ಅವಳ ಪರ್ಮಿಶನ್ ಕೇಳಿ ಬೆಡ್ ಉಪಯೋಗಿಸ್ಕೋ, ಎಷ್ಟು ದಿನಾ ನೆಲದ ಮೇಲೆ ಮಲಗುತ್ತೀಯಾ ಅಂತ ಸಲಹೆ ನೀಡಿದಳು. ಈಶ್ವರಿ ಇಂದುಮತಿಯ ಬಗ್ಗೆ ಆ ಕ್ಷಣದಿಂದ ಆಜನ್ಮ ಪ್ರೀತಿಯನ್ನು ಹೊಂದಿ ಪಾವನಳಾದಳು.

ರಿಂಕಿಗೆ ಅಂಥಾ ಆಬ್ಜೆಕ್ಷನ್ ಏನೂ ಇಲ್ಲದ್ದರಿಂದ ಒಂದು ಒಳ್ಳೆಯ ಘಳಿಗೆಯಲ್ಲಿ ಇಟ್ಟ ಕೋರಿಕೆಯನ್ನು ಮನ್ನಿಸಿದಳು. ತಗೋ, ರಿಂಕಿಯ ಜಾಗದಲ್ಲಿ ಆ ಮೂರು ಪ್ಲಸ್ ಒಂದು ಜನಗಳಿದ್ದ, ಮೇಲೆ ಇನ್ನೊಂದೋ ಎರಡೋ ಪುಡಿ ದೆವ್ವಗಳಿದ್ದ ರೂಮಿನಲ್ಲಿ ಈಶ್ವರಿಯ ವಾಸ ಶುರುವಾಯಿತು.

ರಘು ಬಂದು ದುಡ್ಡು ತಗೊಂಡು ಹೋಗಿ ವಾರ ಕಳೆಯಲು ಬಂದಿತ್ತು. ಇಂದು, ರಶ್ಮಿ, ವಿಜಿಗೆ ಬಾಯಿಗೆ ಬಂದಂತೆ ಬಯ್ಯುವವರೇ. ‘ಥುತ್ ಲೌಡಿ. ಯಾವನೋ ಬಂದ, ಇವ್ಳು ಕಾಸ್ ಕೊಟ್ಳು. ಅವ್ನ್ ಪತ್ತೆ ಇಲ್ದಂಗೆ ಹೋದ. ಇವ್ಳ್ ದೆಸಿಯಿಂದ ನಂ ಗೋವಾ ಟ್ರಿಪ್ ಹಳ್ಳ ಹಿಡೀತು’ ಅಂತ ಕೂತಲ್ಲಿ ನಿಂತಲ್ಲಿ ಝಾಡಿಸತೊಡಗಿದರು.

ಇದರಿಂದ ವಿಜಿಗೆ ಬಹಳ ನೋವೇನೂ ಆಗಲಿಲ್ಲ. ಅವಳು ಎಷ್ಟೆಂದರೂ ಆಶಾವಾದಿ. ದೊಡ್ಡ ಗಂಡಾಂತರ ಈ ಮೂಲಕ ತಪ್ಪಿರಬಹುದು ಅಂತ ಬಹಳ ಸಂತೋಷವಾಗಿ ಇದ್ದಳು. ಅವಳ ಚಿಂತೆಯಿಲ್ಲದ ಮುಖ ನೋಡಿ ಉಳಿದ ಇಬ್ಬರು ಮತ್ತೂ ಚುಚ್ಚುತ್ತಿದ್ದರು.

ನೋಡೋ ತನಕ ನೋಡಿ ಒಂದು ದಿನ ವಿಜಿ ಹೇಳಿದಳು. ‘ಅಲ್ಲಾ ಕಣ್ರೇ. ನಾನ್ ದುಡ್ಡ್ ಕೊಟ್ಟ್ ಕಳ್ಕೊಂಡಿದ್ದು. ಸದ್ಯ ನೀವ್ಯಾರೂ ಕೊಡ್ಲಿಲ್ಲ ಅನ್ನೋ ಸಮಾಧಾನ ದೊಡ್ಡದು. ಅಕಸ್ಮಾತ್ ಎಲ್ಲಾದ್ರೂ ನಿಮ್ಮತ್ರ ಒಂದ್ ಸ್ವಲ್ಪ ಇಸ್ಕೊಂಡು ಕೊಟ್ಟಿದ್ರೆ ನನ್ ಹರಾಜ್ ಕೂಗ್ತಿದ್ರೇನೋ! ಸದ್ಯ ದೇವ್ರು ಯಾರ್ ಋಣಕ್ಕೂ ಹಾಕ್ದಂಗ್ ಪಾರ್ ಮಾಡ್ದ’

‘ಲೈ! ನಾವೇನ್ ನಿನ್ನಷ್ಟು ಗಮಾಡ್ ಅಲ್ಲ ತಿಳ್ಕೋ. ನಮ್ಮೂರೋನು ಅಂತ ಕಳ್ಳ ಬಂದ್ರೂ ಕೊಟ್ಯಲ್ಲ? ನಿನ್ ಬುದ್ಧಿ ಹುಲ್ಲ್ ಮೇಯಕ್ ಹೋಗಿತ್ತಾ?’ ಇಂದುಮತಿ ಲೇವಡಿ ಮಾಡಿದಳು.

‘ಹೌದ್ ಕಣೆ. ಈಗ ಒಂದು ತಿಂಗ್ಳ ಹಿಂದೆ ಯಾರೋ ಪಿಕಾಸೋ ಥರಾ ಆರ್ಟಿಸ್ಟ್ ಆಗಕ್ಕೆ ಹೋಗಿ ಪಿಕಾಸಿ ಆಗಿ ಬಂದಿದ್ದು ಮರೆತೇ ಹೋಯ್ತೇನೋ!’ ವಿಜಿಯೂ ಬಡಪೆಟ್ಟಿಗೆ ಸೋಲುವವಳಲ್ಲ. ತಾನೂ ಒಂದು ಎಲೆ ಆಡಿದಳು.

ಇದ್ಯಾಕೋ ಕೈ ಮೀರಿ ಹೋಗುತ್ತಿದೆ ಎನ್ನಿಸಿ ರಶ್ಮಿ ಶಾಂತಿಯ ಸಂಕೇತವಾದ ಬಿಳಿ ಬಾವುಟ ಬೀಸಿದಳು. ‘ಲೈ...ಯಾಕ್ರೇ ಸುಮ್ನೆ ಒಬ್ರ್ ಬಟ್ಟೆ ಇನ್ನೊಬ್ರ್ ಕಿತ್ತಾಕ್ತಿದೀರಾ? ಸುಮ್ಮನೆ ಇರ್ರೇ’

‘ಅಯ್ಯೋ ಅಯ್ಯೋ! ನೋಡ್ ಬಾರೆ ವಿಜಿ...ಕಿಸಾ ಗೌತಮಿ ಇವ್ಳು. ಅಯ್ಯೋ ಅಯ್ಯೋ! ಯಾವಾಗ್ಲಿಂದಾ ಈ ಅವತಾರಾ? ಎಷ್ಟ್ ದಿನಾ ಇರುತ್ತೆ ಅಕ್ಕೋರೆ’ ಇಂದುಮತಿ ರಶ್ಮಿಗೆ ಕಡ್ಡಿ ಚುಚ್ಚುತ್ತಾ ಹೇಳಿದಳು.ಈ ಜಗಳ ಬಿಟ್ಟರೆ ಮೂರು ದಿನ ಬಗೆಹರಿಯುವಂಥದ್ದಲ್ಲ ಎಂಬ ವಿಚಾರ ಬಂದು ರಶ್ಮಿ ಒಂದು ಪ್ರಸ್ತಾವನೆ ಮುಂದಿಟ್ಟಳು. ‘ಈಗ ದುಡ್ಡಂತೂ ತೋಪಾಯ್ತು. ಕೊಟ್ ಕೂತಿದಾಳೆ ಲೌಡಿ. ಅದಕ್ಕೆ ಎಲ್ರ ಗೋವಾ ಟ್ರಿಪ್ಪೂ ಯಾಕ್ ಕ್ಯಾನ್ಸಲ್ ಆಗ್ಬೇಕು? ಇನ್ನೊಬ್ರನ್ನ ಸೇರಿಸ್ಕೊಳನಾ. ಬಜೆಟ್ ಜಾಸ್ತಿ ಆಗುತ್ತೆ. ನಾಲ್ಕು ಜನ ಆದ್ರೆ ಒಬ್ಬೊಬ್ಬ್ರಿಗೆ ಖರ್ಚೂ ಕಡಿಮೆ ಆಗುತ್ತೆ’

ಗೋವಾ ಅಂದ ಕೂಡಲೇ ಎಲ್ಲರಿಗೂ ಕಿವಿ ನೆಟ್ಟಗಾದವು.‘ಪಿಕಾಸಿ’ ಇಂದುವಿನಿಂದ ಮೊದಲ ಬಾರಿಗೆ ಒಂದು ಒಳ್ಳೆಯ ಸಲಹೆ ಬಂತು. ‘ಮೊದ್ಲು ಹೋಗಿ ಬಸ್ ಟಿಕೆಟ್ ಬುಕ್ ಮಾಡಿ ಬರನಾ. ಆಮೇಲೆ ದುಡ್ಡಿನ ವಿಷಯ ಯೋಚಿಸಿದರೆ ಆಯ್ತು’

ಇಷ್ಟೆಲ್ಲ ಮಾತು ನಡೆಯುವಾಗ ಈಶ್ವರಿ ರೂಮಿನಲ್ಲೇ ಇದ್ದಳು. ಇವರ ವ್ಯಕ್ತಿತ್ವಗಳನ್ನು ಅರ್ಧಂಬರ್ಧ ಗ್ರಹಿಸಿಕೊಂಡು ಗೋವಾಕ್ಕೆ ಬರಲು ಬಹಳ ಉತ್ಸುಕಳಾಗಿ ಇದ್ದಳು. ಅವಳೂ ಕೈ ಜೋಡಿಸಿದ್ದರಿಂದ ಒಳ್ಳೆಯದೇ ಆಯಿತು. ಬಸ್ ಟಿಕೆಟ್ ಬುಕ್ಕಾಯಿತು. ಮಧ್ಯದಲ್ಲಿ ಒಂದು ಪುಟ್ಟ ‘ಆಕಸ್ಮಿಕ’ವನ್ನು ನಡೆಸಿ ವಿಜಿ ಮನೆಯಿಂದ ಹೆಚ್ಚುವರಿ ‘ಮನಿ’ ತರಿಸಿಕೊಂಡಿದ್ದಾಯಿತು. ದುಡ್ಡಿನ ವ್ಯವಸ್ಥೆ ಆದ ಕೂಡಲೇ ಅಂಗನೆಯರು ಬಸ್ ಹತ್ತಿದರು.

ರೈಇಇಇಇಇರೈಯ್ಯಾ!
ಮೈಸೂರಿನಿಂದ ಗೋವಾಕ್ಕೆ ಹದಿನೈದು– ಹದಿನೆಂಟು ಗಂಟೆಗಳ ಪ್ರಯಾಣ. ಸ್ಲೀಪರ್ ಬಸ್ ಅಂದರೂ ಕಷ್ಟವೇ. ಆದರೆ, ಕೆಲವು ತೊಂದರೆಗಳಿಗೆ ಮೈಯೊಡ್ಡಬೇಕು ಅನ್ನುವ ವಯಸ್ಸು ಕುಣಿಸುತ್ತಾ ಇರುವಾಗ, ದೇವರು ಬಂದು ಬುದ್ಧಿ ಹೇಳಿದರೂ ಕೇಳೋರು ಯಾರು?

ಬಾತ್ರೂಮ್ ಬ್ರೇಕ್ ಅಂತ ಮೊದಲ ಸ್ಟಾಪಿನಲ್ಲಿ ನಿಲ್ಲಿಸಿದಾಗ ಬಸ್ಸಿನಲ್ಲಿ ಕೂತ ಹುಡುಗಿಯರು ಸಂಕೋಚ ಪಟ್ಟುಕೊಂಡರು. ನಿಸರ್ಗ ಸಹಜವಾದ ಕೆಲಸಗಳನ್ನು ನಾಚಿಕೆಗೆ ಬಲಿಯಾಗಿ ಮಾಡದೇ ಹೋದರೆ ಅದೇನು ಆವಿಯಾಗಿ ಮೇಲಕ್ಕೆ ಹೋಗುತ್ತದೆಯೇ?ಮೈಯೊಳಗೇ ಉಳಿದು ಕೊಡಬಾರದ ತೊಂದರೆ ಕೊಡುತ್ತದೆ.

ಬಸ್ಸಿನಲ್ಲಿ ಕೂತು ರಾತ್ರಿ ಕೆಲ ತಾಸು ಕಳೆದ ಮೇಲೆ ರಶ್ಮಿಗೆ ಒಂದಕ್ಕೆ ಹೋಗಬೇಕನ್ನಿಸಿ ಇಂದುಮತಿಗೆ ಹೇಳಿದಳು. ‘ಬಸ್ಸಲ್ಲಿ ಟಾಯ್ಲೆಟ್ ಇರಲ್ಲ ಕಣೆ’ ಇಂದು ಮುಖ ತಿರುಗಿಸಿ ಮಲಗಿದಳು.

‘ನೀನು ಎದ್ದೇಳು. ನನ್ ಜೊತೆ ಬಾ. ಡ್ರೈವರ್‌ಗೆ ಬಸ್ ನಿಲ್ಸು ಅಂತ ಹೇಳಕ್ಕೆ ಹೆಲ್ಪ್ ಮಾಡು’ ರಶ್ಮಿ ಹಟ ಹಿಡಿದಳು.
ಎಷ್ಟು ಬೋಲ್ಡ್ ಅಂದುಕೊಂಡರೂ ಹುಡುಗಿಯರಿಗೆ ತಮ್ಮ ದೇಹ ಬಾಧೆಗಳ, ಅವಶ್ಯಕತೆಗಳ ಬಗ್ಗೆ ಒಂದು ಬೃಹತ್ತಾದ ನಾಚಿಕೆ ಇರುತ್ತದೆ. ಅದಕ್ಕಾಗೇ ಹಳ್ಳಿಯಿಂದ ದಿಲ್ಲಿಯವರೆಗೂ ನೋಡಿ ಬೇಕಾದರೆ, ಹೆಣ್ಣು ಮಕ್ಕಳು ಗಂಡಸರ ಹಾಗೆ ಬೀದಿ ಬದಿಯಲ್ಲಿ ಹಕ್ಕಿನ ವಿಷಯವೇನೋ ಎನ್ನುವ ಹಾಗೆ ಹನಿ ನೀರಾವರಿ ಮಾಡಲ್ಲ. ಬಹಳ ನಾಚಿಕೆಯಿಂದ, ಮೈಯ್ಯೆಲ್ಲ ಹಿಡಿ ಮಾಡಿಕೊಂಡು ಕತ್ತಲಲ್ಲಿ ತಲೆ ತಗ್ಗಿಸಿ ಕೆಲಸ ಮುಗಿಸುವವರಿದ್ದಾರೆ. ಇದನ್ನು ಮುಂಬೈ ಮಹಾನಗರದಲ್ಲೂ ಕಾಣಬಹುದು. ಗಂಡಸರು ಬಿಡಿ, ಅವರಿಗೆ ಟಾಯ್ಲೆಟ್ ನಿಮಿತ್ತ ಮಾತ್ರ. ಮೊಬೈಲ್ ಬಂದ ಮೇಲೆ ಮಂಗ್ಯಾತನ ಇನ್ನೂ ಜಾಸ್ತಿಯಾಗಿದೆ. ಕೆಲವರಂತೂ ರಸ್ತೆಯ ಪಕ್ಕ ನಿಂತು ನಿಸರ್ಗ ಕರೆಯನ್ನು ಒಂದು ಕೈಯ್ಯಲ್ಲಿ, ಮೊಬೈಲ್ ಕರೆಯನ್ನು ಇನ್ನೊಂದು ಕೈಯಲ್ಲಿ ನಿಭಾಯಿಸುವ ಛಾತಿಯುಳ್ಳವರು.

ಗಂಡಸರ ಹಾಗೆ ನಿರ್ಭಿಡೆಯಿಂದ ಮೂತ್ರವನ್ನು ಹೊರಕ್ಕೆ ಕಳಿಸಲು ಸಾಧ್ಯವಾಗಿದ್ದರೆ ಎಷ್ಟೋ ಹೆಣ್ಣು ಮಕ್ಕಳ ಆರೋಗ್ಯವೂ ಚೆನ್ನಾಗಿರುತ್ತಿತ್ತು. ಏಕೆಂದರೆ ಗಂಟೆಗಟ್ಟಲೆ ಮೂತ್ರವನ್ನು ಮೈಯ್ಯಲ್ಲೇ ಹಿಡಿದಿಟ್ಟುಕೊಳ್ಳುವಾಗ ಎಷ್ಟು ಅಪಾಯಕಾರೀ ಇನ್‌ಫೆಕ್ಷನ್ ಅನ್ನು ಸಾಕುತ್ತಿರುತ್ತಾರೆ ಎನ್ನುವುದು ಅವರಿಗೆ ಗೊತ್ತಿಲ್ಲ. ಇರಲಿ, ನಮ್ಮ ಕಥಾನಾಯಕಿಯರು ಯಾರೂ ಅಷ್ಟರಮಟ್ಟಿಗಿನ ‘ಹೆಣ್ತನ’ ಅನುಭವಿಸುವವರಲ್ಲ. ಹಾಗಾಗಿ ಒಂದೇ ಸ್ಲೀಪರ್‌ನಲ್ಲಿ ಇದ್ದ ಕಾರಣ ರಶ್ಮಿ ಇಂದುಮತಿಯನ್ನು ಬೆಂಬಲಕ್ಕಾಗಿ ಕರೆದಳು. ಇಬ್ಬರೂ ಎದ್ದು ಹೊರಟರು. ಗಾಡಿ ಕಗ್ಗತ್ತಲಲ್ಲಿ ಜುರ್ ರ್ ರ್ ರ್ ರ್ ಎಂದು ಕತ್ತಲನ್ನು ಸೀಳುತ್ತಾ ಸಾಗುತ್ತಿತ್ತು. ಡ್ರೈವರ್ ಸ್ವಲ್ಪ ಮಧ್ಯ ವಯಸ್ಕನಿದ್ದ. ‘ಅಂಕಲ್, ಸ್ವಲ್ಪ ಗಾಡಿ ನಿಲ್ಸಿ’ ಎಂದಳು ರಶ್ಮಿ.

ಅವನಿಗೆ ಇವಳು ಹೇಳಿದ್ದು ಕೇಳಲಿಲ್ಲ. ಅವನು ಇತ್ತ ತಿರುಗಿಯೂ ನೋಡಲಿಲ್ಲ. ಇಂದುಮತಿ ‘ಸಾರ್, ಸಾರ್’ ಎಂದು ಕರೆದಳು. ಆತ ನಿಧಾನವಾಗಿ ತಿರುಗಿ ನೋಡಿದ.
‘ಪ್ಲೀಸ್ ಬಸ್ ಸ್ಟಾಪ್ ಮಾಡಿ’ ಅಂದಳು.
‘ಆಂ...???’

ಮೂತ್ರವಿಸರ್ಜನೆಗೆ ಸಾಂಪ್ರದಾಯಿಕವಾಗಿ ಇರುವ ಸಂಜ್ಞಾ ಭಾಷೆಯ ಮೊರೆ ಹೋಗಿ ಇಂದುಮತಿ ಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿದಂತೆ ನಗುನಗುತ್ತಾ ಕಿರು ಬೆರಳೆತ್ತಿ ಮುಖ ಕಿವಿಚಿಕೊಂಡಳು, ಅರ್ಜಂಟ್ ಅನ್ನೋ ಥರ. ಡ್ರೈವರಣ್ಣ ತಲೆಯಾಡಿಸಿ ಹತ್ತು ನಿಮಿಷ ಬಿಟ್ಟು ನಿಲ್ಲಿಸಿದ. ವಿಚಿತ್ರ ಎಂದರೆ ನಿಲ್ಲಿಸಿದ ತಕ್ಷಣ ಧುಡು ಧುಡು ಅಂತ ಎಲ್ಲ ಗಂಡಸರೂ ಇಳಿದು ಸಕಲ ದಿಕ್ಕುಗಳಲ್ಲಿ ನಿಂತರು.

ಮತ್ತೆ ಭಿಡೆಗೆ ಒಳಗಾಗಿ ರಶ್ಮಿ ಇಂದುಮತಿಯ ಮುಖ ನೋಡಿದಳು. ‘ಸುಮ್ನೆ ಕಣ್ ಮುಚ್ಕೊಂಡು ಹೋಗಿ ಬಾ. ಇಲ್ಲಂದ್ರೆ ನಿನ್ ಬ್ಲಾಡರ್ರು ಇನ್ನ್ ಸ್ವಲ್ಪ ಹೊತ್ತಿಗೆ ಒಡೆದು ಹೋಗುತ್ತೆ’ ಎಂದಳು ಇಂದು.

ಇಂತಹ ಸಂದರ್ಭಗಳನ್ನು ಪರಮಾನಂದ ಎನ್ನುವ ಶಬ್ದಕ್ಕೆ ಬಹಳ ಉನ್ನತ ಅರ್ಥ ಬರುತ್ತದೆ. ತಿಂದು, ಕುಡಿದು ಅಥವಾ ಬೇಕಾದ ಒಡವೆಯನ್ನು ಕೊಂಡು ಪರಮಾನಂದ ಅನುಭವಿಸುವುದಕ್ಕೂ, ದೇಹಬಾಧೆಯನ್ನು ಬಹಳ ಹೊತ್ತಿನ ನಂತರ ತೀರಿಸಿಕೊಳ್ಳುವ ಪರಮಾನಂದಕ್ಕೂ ಎಷ್ಟು ಆಳವಾದ ಉಸಿರಿನ ವ್ಯತ್ಯಾಸವಿದೆ!

ಯಾವುದರ ಬಗ್ಗೆಯೂ ನಾಚಿಕೆ ಬೆಳೆಸಿಕೊಂಡರೆ ಹಿಂಸೆ ಅನುಭವಿಸುವುದು ನಾವೇ ಎನ್ನುವುದು ರಶ್ಮಿಗೆ ಆ ರಾತ್ರಿ ಯಾವುದೋ ಪೊದೆಯ ಹಿಂದೆ ಮನದಟ್ಟಾಯಿತು. ವಾಪಾಸು ಬರುವಾಗ ತನ್ನ ಉಳಿದ ಗೆಳತಿಯರೂ ಜ್ಞಾನೋದಯದ ಜಾಗ ಹುಡುಕುತ್ತಿದ್ದರು. ಒಬ್ಬರಿಗೊಬ್ಬರು ಬೆಂಗಾವಲಾಗಿ ಎಲ್ಲರೂ ಕೆಲಸ ಮುಗಿಸಿ ಮತ್ತೆ ಬಸ್ ಹತ್ತಿದರು.

ಹಾಗೂ ಹೀಗೂ ಗೋವಾ ತಲುಪಿದಾಗ ಮಧ್ಯಾಹ್ನ ಆಗಿತ್ತು. ಬೀಚಿನ ಹತ್ತಿರ ಇರುವ ಪುಟ್ಟ ರೂಮ್ ಬಾಡಿಗೆಗೆ ತೆಗೆದುಕೊಂಡರು. ಅಲ್ಲಿ ಬಹಳಷ್ಟು ವಿದೇಶೀಯರೂ, ದೇಸೀ ಜನವೂ ಇದ್ದರು. ಇದು ಈಶ್ವರಿಯ ಸಂಬಂಧಿಯೊಬ್ಬರು ನಡೆಸುತ್ತಿದ್ದ ಜಾಗ, ಬಹಳ ಸೇಫಾಗಿದೆ ಎನ್ನುವ ಕಾರಣಕ್ಕೆ ಅಲ್ಲಿ ಉಳಿಯುವ ನಿರ್ಧಾರ ಮಾಡಿದ್ದರು.

ಮಧ್ಯಾಹ್ನ ಸ್ವಲ್ಪ ಹೊತ್ತು ನೀರಾನೆಗಳಂತೆ ಬಿದ್ದುಕೊಂಡು ಕಾಲ ಕಳೆದರು. ನಂತರ ಐದು ಗಂಟೆಯ ಸುಮಾರಿಗೆ ಬೀಚಿನ ಹತ್ತಿರ ನಡೆದರು. ಗೋವಾದ ಬೀಚುಗಳಲ್ಲಿ ಏನುಂಟು ಏನಿಲ್ಲ ಎನ್ನುವುದು ಪ್ರಶ್ನೆ ಅಲ್ಲ. ಅಲ್ಲಿಗೆ ಹೋದ ತಕ್ಷಣ ಮನುಷ್ಯರಿಗೆ ತಮ್ಮ ಪೂರ್ವಜನ ನಡವಳಿಕೆ ಯಾಕೆ ಮರುಕಳಿಸುತ್ತದೆ ಎನ್ನುವುದು ಒಂದು ಕಗ್ಗಂಟು. ಆದರೆ, ಇದನ್ನು ಉತ್ತರಿಸುವವರಾರು?

ಅಲ್ಲಿಗೆ ಹೋದರೆ ಹುಡುಗರು, ಹುಡುಗಿಯರೂ ಎಲ್ಲರೂ ಮನಸೋ ಇಚ್ಛೆ ನಡೆದುಕೊಂಡು ಉಲ್ಲಸಿತರಾಗುತ್ತಿರುವಾಗ ಕಟ್ಟುಪಾಡುಗಳ ಪ್ರಶ್ನೆ ಯಾಕೆ ಬರಬೇಕು?

ಸೂರ್ಯ ಸಮುದ್ರದ ನೀರನ್ನು ಬಂಗಾರ ಮಾಡುತ್ತಿದ್ದ. ಫೆನ್ನಿಯ ಹೆಸರು ಕೇಳಿದ ವಿಜಿ ಅದನ್ನು ಕುಡಿಯಲೇ ಬೇಕು ಅಂತ ಒಂದು ತಟ್ಟಿ ಅಂಗಡಿಯ ಹೊರಗೆ ಹಾಕಿದ್ದ ಟೇಬಲ್ಲಿಗೆ ಕೂತು ಗಲಾಟೆ ಮಾಡುತ್ತಿದ್ದಳು.

‘ಫೆನ್ನಿ ಬ್ಯಾಡ. ಬಿಯರ್ ಕುಡ್ಕೋ ಇಲ್ಲಾ ವೈನ್ ಕುಡಿ’ ಅಂತ ಹಿಂದಿನಿಂದ ಯಾರೋ ಹೇಳಿದರು
ಇಂದುಮತಿಯೇ ಇರಬೇಕೆಂದುಕೊಂಡು ವಿಜಿ ತಿರುಗಿ ನೋಡಿದರೆ ಅಲ್ಲಿ ನಿಂತಿದ್ದಾದರೂ ಯಾರು? ಮುಗ್ಧತೆಯ ವಿಶ್ವರೂಪದಂತಿದ್ದ ಈಸ್ವರಕ್ಕ! ಎಲ್ಲಾ ಮಗಳೇ! ಏನೂ ಗೊತ್ತಿಲ್ಲದ ಗರತಿಯಂತೆ ಹುಡುಗರ ವಿಷಯ ಮಾತಾಡಿದರೂ ನಾಚಿಕೊಳ್ಳುತ್ತಿದ್ದ ಹುಡುಗಿ ಏನು ಕುಡೀಬೇಕು ಅಂತ ಸಲಹೆ ಕೊಡುವಷ್ಟು ಜ್ಞಾನಭಂಡಾರ ಇಟ್ಟಿದ್ದಾಳೆ!

ವಿಜಿಗೆ ಬಹಳ ಹೆಮ್ಮೆಯಾಯಿತು.
ಸರಿ, ಎಲ್ಲರಿಗೂ ಬಿಯರ್ ಬಂತು. ಶೇಂಗಾ ಬೀಜವೂ ಬಂತು. ಇಂದುಮತಿ ಹಾಡು ಹೇಳತೊಡಗಿದಳು. ರಶ್ಮಿ ಸೂರ್ಯನನ್ನು ಕಣ್ತುಂಬಿಕೊಳ್ಳುತ್ತಿದ್ದಳು. ಈಶ್ವರಿ ಯಾಕೋ ಮಂಕಾಗತೊಡಗಿದಳು.

ಕತ್ತಲಾಯಿತು. ಹಾಡು ಜೋರಾಯಿತು. ಈಶ್ವರಿಯ ಕಣ್ಣಿನಲ್ಲಿ ನೀರು ಇನ್ನೂ ತುಂಬಿಕೊಂಡಿತು. ಇವಳು ಅಳ್ತಾ ಕೂತರೆ ಇಲ್ಲೀ ತನಕ ಬಂದದ್ದು ಲಾಸ್ ಆಗುತ್ತೆ. ಇದನ್ನು ಹೇಗಾದರೂ ಮಾಡಿ ಅವಾಯ್ಡ್ ಮಾಡಬೇಕೆಂದುಕೊಂಡ ವಿಜಿ ಅತ್ತಿತ್ತ ನೋಡಿದಳು.

ಮೂರು ಟೇಬಲ್ಲಿನ ಆಚೆಗೆ ಹುಡುಗರು ಕೂತಿದ್ದರು. ಇಲ್ಲಿ ಹುಡುಗಿಯರಿರುವುದನ್ನು ಗಮನಿಸಿದ್ದ ಸಣಕಲನೊಬ್ಬ ಸಖತ್ ಸ್ಟೈಲ್ ಹೊಡೆಯುತ್ತಾ ಬಾಡಿ ಬಿಲ್ಡರ್ ಪೋಸು ಕೊಡುತ್ತಿದ್ದ. ಕತ್ತಲಾಗುತ್ತಾ ಬಂದಿದ್ದರೂ ಸಣಕಲ ಕಪ್ಪು ಬಣ್ಣದ ರೇ ಬ್ಯಾನ್ ಗಾಗಲ್ಸ್ ಅನ್ನು ಮಾತ್ರ ಇಳಿಸಿರಲಿಲ್ಲ. ಎದ್ದು ಇನ್ನೊಂದು ಟೇಬಲ್ಲಿಗೆ ನಡೆಯಲು ಹೋಗಿ ಕತ್ತಲಲ್ಲಿ ಮುಗ್ಗುರಿಸಿ ಬಿದ್ದ.

ಅವನು ರಪ್ ಅಂತ ಬಿದ್ದ ರಭಸಕ್ಕೆ ವಿಜಿಗೆ ನಗು ಬಂತು. ‘ನೋಡಲ್ಲೀ!! ಹುಚ್ ಮಂಗ್ಯಾನ ಮರಿ ಕನ್ನಡಕ ಹಾಕೊಂಡೈತೆ!!!’ ವಿಜಿ ಸಣಕಲನನ್ನು ಈಶ್ವರಿಗೆ ತೋರಿಸಿ ನಗತೊಡಗಿದಳು. ಸಣಕಲ ಒಮ್ಮೆ ಇವರತ್ತ ನೋಡಿ, ಸಾವರಿಸಿಕೊಂಡು ಎದ್ದು ನಿಂತ. ಇವರತ್ತಲೇ ಬರತೊಡಗಿದ. ಇಂದುಮತಿ ಹಾಡು ನಿಲ್ಲಿಸಿ ಅಖಾಡಕ್ಕೆ ಬರಲು ರೆಡಿಯಾದಳು. ಅವನು ಸೀದಾ ಬಂದ. ವಿಜಿಯ ಹತ್ತಿರ ನಿಂತ. ಮೆಲ್ಲಗೆ ಉಸುರಿದ. ‘ಅಕ್ಕಾ, ನಾನೂ ನಿಮ್ಮೂರೋನೆ ಕಣೇ. ನಮ್ಮದು ದಾವಣಗೆರೆನೇ. ನಿನ್ನೇ ಮಾತಾಡ್ಸಕೆ ಬಂದೆ’.

ವಿಜಿ ಬಿಟ್ಟ ಬಾಯಿ ಹಾಗೇ ಇತ್ತು. ಇಂದುಮತಿ, ಈಶ್ವರಿ ನೆಲದ ಮೇಲೆ ಹೊರಳಾಡಿ ನಗಲು ಶುರುಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT