ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಸುರಕ್ಷತೆಗೆ ಎಚ್ಚರ ಅಗತ್ಯ

Last Updated 30 ಏಪ್ರಿಲ್ 2017, 19:46 IST
ಅಕ್ಷರ ಗಾತ್ರ
ಷೇರುಪೇಟೆಯ ಸಂವೇದಿ ಸೂಚ್ಯಂಕ 4ನೇ ಮಾರ್ಚ್ 2015 ರಂದು 30,024   ತಲುಪಿ  ಸರ್ವಕಾಲೀನ  ದಾಖಲೆ ಬರೆದಿತ್ತು. ಅದಾದ ಎರಡು ವರ್ಷಗಳ  ನಂತರ ಮತ್ತೊಮ್ಮೆ  ಈ ವಾರ ಮೂವತ್ತು ಸಾವಿರದ  ಗಡಿ ದಾಟಿದ ಸೂಚ್ಯಂಕ 30,184  ತಲುಪಿ ಹೊಸ ದಾಖಲೆ ನಿರ್ಮಿಸಿದೆ.  
 
ತನ್ನೊಂದಿಗೆ  ಉಪ ಸೂಚ್ಯಂಕಗಳಾದ ಭಾರಿ ಶ್ರೇಯಾಂಕ, ಮಧ್ಯಮ ಶ್ರೇಯಾಂಕ, ಕೆಳಮಧ್ಯಮ ಶ್ರೇಯಾಂಕ, ಬಿಎಸ್ಇ 100, ಬಿಎಸ್ಇ 200 , ಬಿಎಸ್ಇ 500, ಎಲ್ಲ ಶ್ರೇಯಾಂಕ, ಸರ್ಕಾರಿ ಸ್ವಾಮ್ಯದ ವಲಯ ಘಟಕ,  ಇಂಡಿಯಾ ಇನ್‌ಫ್ರಾಸ್ಟ್ರಕ್ಚರ್, ಸಿಪಿಎಸ್ಇ, ಇಂಡಿಯಾ ಮ್ಯಾನುಫ್ಯಾಕ್ಚರಿಂಗ್,  ಬ್ಯಾಂಕೆಕ್ಸ್, ಕ್ಯಾಪಿಟಲ್ ಗೂಡ್ಸ್,  ಫೈನಾನ್ಸ್, ಇಂಡಸ್ಟ್ರಿಯಲ್ಸ್, ಎಫ್ಎಂಸಿಜಿ,  ತೈಲ ಮತ್ತು ಅನಿಲ, ರಿಯಾಲ್ಟಿ ಮುಂತಾದವು ಸಹ ಸರ್ವಕಾಲೀನ ದಾಖಲೆ ನಿರ್ಮಿಸಿ  ಪೇಟೆಯಲ್ಲಿ ಉತ್ಸಾಹ ಮೂಡಿಸಿವೆ.
 
ಗಮನಿಸಬೇಕಾದ ಅಂಶವೆಂದರೆ ಸಂವೇದಿ ಸೂಚ್ಯಂಕದಲ್ಲಿನ ಭಾರಿ ತೂಕ ಹೊಂದಿರುವ ಕಂಪೆನಿಗಳು ಕಾಣುವ ಏರಿಕೆಯಾಗಲಿ, ಇಳಿಕೆಯಾಗಲಿ ಹೆಚ್ಚಾಗಿರುವುದು.  ಶುಕ್ರವಾರ ಎಚ್‌ಡಿ ಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ,  ರಿಲಯನ್ಸ್ ಇಂಡಸ್ಟ್ರೀಸ್, ಹಿಂದೂಸ್ತಾನ್ ಯುನಿಲಿವರ್, ಐಟಿಸಿ  ಇಳಿದರೆ, ಮಾರುತಿ ಸುಜುಕಿ, ಐಸಿಐಸಿಐ ಬ್ಯಾಂಕ್, ಗೇಲ್  ಷೇರು ಏರಿಕೆ ಕಂಡಿವೆ.   
 
ಅದರ ಹಿಂದಿನ ದಿನವಾದ ಗುರುವಾರ, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಐಟಿಸಿ ಏರಿಕೆ ಕಂಡಿದ್ದವು.  ಸೋಜಿಗದ ಸಂಗತಿ ಎಂದರೆ ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಮಾರುತಿ ಸುಜುಕಿ, ಗೇಲ್  ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ ಏಪ್ರಿಲ್ 29, 2016 ರಂದು ವಾರ್ಷಿಕ ಕನಿಷ್ಠ ದಾಖಲಿಸಿದ್ದವು.  
 
ಈ ರೀತಿಯ ಏರಿಳಿತಗಳು ಕಾಕತಾಳಿಯವೋ, ಕೃತಕವೋ ಯಾವುದಾದರೂ ಸರಿ ಆದರೆ ಈ ಸಮಯದಲ್ಲಿ ದೀರ್ಘಕಾಲೀನ ಹೂಡಿಕೆಯಾಗಿ ಇಂತಹ ಕಂಪೆನಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅಡಕವಾಗಿರಬಹುದಾದ ಅಪಾಯದ ಮಟ್ಟ ಅರಿತು ನಿರ್ಧರಿಸುವುದು ಒಳಿತು. ರಿಯಲ್ ಎಸ್ಟೇಟ್ ವಲಯದ ಅಗ್ರಮಾನ್ಯ  ಕಂಪೆನಿ  ಡಿಎಲ್ಎಫ್ ಲಿಮಿಟೆಡ್ ಕಳೆದ ಆಗಸ್ಟ್ 2014ರಲ್ಲಿ ಕಂಡಿದ್ದ ದರವನ್ನು ಸುಮಾರು ಮೂರು ವರ್ಷಗಳ ನಂತರ ಆ ಮಟ್ಟ ತಲುಪಿದೆ.
 
ಅದೇ ರೀತಿ ಅದೇ ವಲಯದ ಪ್ರೆಸ್ಟೀಜ್ ಎಸ್ಟೇಟ್ ಷೇರಿನ ಬೆಲೆಯೂ ಸಹ ಕಳೆದ ಜುಲೈ 2015 ರ ಬೆಲೆಗೆ ಸುಮಾರು 22 ತಿಂಗಳ ನಂತರ ಆಗಿನ ಬೆಲೆ ಕಂಡುಕೊಂಡಿದೆ.  ವರ್ಷಗಳ ಹಿಂದೆ ಖರೀದಿಸಿದ ದರ ತಲುಪಿತಾದರೂ ಸ್ಥಿರತೆ ಕಾಣದೆ ಮತ್ತೆ ಕುಸಿಯಿತು.  ಕೇವಲ ಕಂಪೆನಿಗಳು ನೀಡಿದ ಲಾಭಾಂಶವೆ ಆದಾಯವಾಗಿದೆ.
 
ಎರೋಸ್ ಇಂಟರ್ ನ್ಯಾಷನಲ್ ಮೀಡಿಯಾ ಲಿಮಿಟೆಡ್ ಷೇರಿನ ಬೆಲೆಯು ಕಳೆದ ಮಾರ್ಚ್ ಮಧ್ಯದಲ್ಲಿ ₹200 ರ ಸಮೀಪವಿದ್ದು ಅಲ್ಲಿಂದ ಷೇರಿನ ಬೆಲೆಯು ಏಕಮುಖವಾಗಿ ಏರಿಕೆ ಕಂಡು  ಮಾರ್ಚ್ 28 ರಂದು ಷೇರಿನ ಬೆಲೆಯು ₹308 ನ್ನು ತಲುಪಿ ಕ್ಷಣಾರ್ಧದಲ್ಲಿ ಇಳಿಕೆ ಕಂಡು ಸಧ್ಯ ₹215 ರ ಸಮೀಪವಿದೆ. 
ಇದೇ ಷೇರಿನ ಬೆಲೆಯು 2015 ರ ನವೆಂಬರ್‌ನಲ್ಲಿ  ₹290ರ  ಸಮೀಪವಿದ್ದು ಆ ದರವು ನಂತರ ಕುಸಿದಿದೆ.  
 
ಈ ಚಟುವಟಿಕೆಯು ವರ್ಷಾಂತ್ಯದ ವೇಳೆಯ ಚಟುವಟಿಕೆಯೂ ಆಗಿರಬಹುದು, ಆದರೆ ಆ ಸಂದರ್ಭದಲ್ಲಿ ಬರಬಹುದಾದ ವರ್ಣರಂಜಿತ, ಅಲಂಕಾರಿಕ ವಿಶ್ಲೇಷಣೆಗಳಿಗೆ ಸ್ಪಂದಿಸಿ ಷೇರುಗಳನ್ನು ಕೊಂಡವರು ಅನಿವಾರ್ಯವಾಗಿ ಹಾನಿಗೊಳಗಾಗಬೇಕಾಗುವುದು ಅಥವಾ ದೀರ್ಘಕಾಲಿನ ಹೂಡಿಕೆದಾರರಾಗಬೇಕಾಗಬಹುದು. 
 
ಅಸ್ಥಿರತೆ ಪ್ರದರ್ಶನ: ಪೇಟೆಯಲ್ಲಿ ಎಷ್ಟರ ಮಟ್ಟಿಗೆ ಅಸ್ಥಿರತೆ ಕಂಡುಬರುತ್ತದೆ ಎಂಬುದಕ್ಕೆ ಗುರುವಾರ ಆಟೋ ವಲಯದ ಟಿವಿಎಸ್ ಮೋಟಾರ್‍್ಸ್‌ ಷೇರಿನ ಬೆಲೆ ನಿದರ್ಶನ. 
 
ಮಧ್ಯಾಹ್ನ2.30 ಗಂಟೆಯಲ್ಲಿ ₹500ರ ಸಮೀಪವಿದ್ದ ಬೆಲೆ ಆ ಸಂದರ್ಭದಲ್ಲಿ ಪ್ರಕಟವಾದ ಫಲಿತಾಂಶದ ಕಾರಣ  ವಾರ್ಷಿಕ ಗರಿಷ್ಠ  ₹518 ರವರೆಗೂ ಜಿಗಿತ ಕಂಡಿತು.  ನಂತರ  ₹485ರವರೆಗೂ ಕುಸಿದು ₹503ರ ಸಮೀಪ ಕೊನೆಗೊಂಡಿತು. 
 
ಒಟ್ಟಾರೆ ಈ ವಾರ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ  553 ಅಂಶ ಏರಿಕೆ ಕಂಡು ತನ್ನೊಂದಿಗೆ ಮಧ್ಯಮ ಶ್ರೇಣಿಯ ಸೂಚ್ಯಂಕ 310 ಅಂಶ ಮತ್ತು ಕೆಳಮಧ್ಯಮ ಶ್ರೇಣಿಯ ಸೂಚ್ಯಂಕ 206 ಅಂಶ ಏರಿಕೆ ಕಾಣುವಂತೆ ಮಾಡಿದೆ.
 
 ಗುರುವಾರ ಕಂಡ ವಾರ್ಷಿಕ ಗರಿಷ್ಠದ ಹಂತವು ಸಹ ತಾತ್ಕಾಲಿಕವಾಗಿತ್ತು,  ಶುಕ್ರವಾರ 2015ರ ಮಾರ್ಚ್‌ನಲ್ಲಿ ಕಂಡಂತಹ ಗರಿಷ್ಠ ಉಳಿಸಿಕೊಳ್ಳಲಾಗದೆ  ಮೂವತ್ತು ಸಾವಿರದ ಗಡಿಯೊಳಗೆ ಕುಸಿದು 29,918 ಅಂಶಗಳಲ್ಲಿ ವಾರಾಂತ್ಯಕಂಡಿತು.  
 
ವಿದೇಶಿ ವಿತ್ತೀಯ ಸಂಸ್ಥೆಗಳು ತಮ್ಮ ಮಾರಾಟದ ಹಾದಿಯಲ್ಲಿ ಮುಂದುವರೆದು ₹1,925 ಕೋಟಿ ಹಣವನ್ನು ಪೇಟೆಯಿಂದ ಹಿಂದೆ ಪಡೆದರೆ, ಸ್ವದೇಶಿ ವಿತ್ತೀಯ ಸಂಸ್ಥೆಗಳು ₹4,914 ಕೋಟಿ ಮೌಲ್ಯದ ಷೇರನ್ನು ಖರೀದಿಸಿವೆ.
 
ಸ್ವದೇಶಿ ವಿತ್ತೀಯ ಸಂಸ್ಥೆಗಳು ಎಂದರೆ ಬ್ಯಾಂಕ್‌ಗಳು, ಇನ್ವೆಸ್ಟಮೆಂಟ್ ಬ್ಯಾಕಿಂಗ್ ಸಂಸ್ಥೆಗಳು, ಮ್ಯೂಚುಯಲ್ ಫಂಡ್‌ಗಳು, ಪೆನ್ಶನ್ ಫಂಡ್‌ಗಳು ಸೇರಿರುತ್ತವೆ.  ಇದರಲ್ಲಿ ಕಾಲ್ ಮನಿ, ಲಿಕ್ವಿಡ್  ಫಂಡ್, ಮುಂತಾದವು ಸಹ ಸೇರಿಕೊಂಡಿರುತ್ತದೆ. ಪೇಟೆಯ ಬಂಡವಾಳೀಕರಣ ಮೌಲ್ಯವು ₹124.82 ಲಕ್ಷ ಕೋಟಿಗೆ ಏರಿಕೆ ಕಂಡಿದ್ದು, ಬುಧವಾರ ₹124.83  ಲಕ್ಷ ಕೋಟಿಯು ಸರ್ವಕಾಲೀನ ಗರಿಷ್ಠವಾಗಿದೆ.
 
ಬೋನಸ್ ಷೇರು:  ಬಯೋಕಾನ್ ಲಿಮಿಟೆಡ್ ಪ್ರತಿ ಒಂದು ಷೇರಿಗೆ ಎರಡರಂತೆ ಬೋನಸ್ ಷೇರು ಪ್ರಕಟಿಸಿದೆ. ಬೆರ್ಡ್ ಸೆಲ್ ಲಿಮಿಟೆಡ್  ವಿತರಿಸಲಿರುವ 2:5 ಅನುಪಾತದ ಬೋನಸ್ ಷೇರಿಗೆ ಮೇ 6, ನಿಗದಿತ ದಿನವಾಗಿದೆ. ಕೈಟಿಕ್ಸ್ ಗಾರ್ಮೆಂಟ್ಸ್ ಲಿ, ಕಂಪೆನಿಯು 2:5 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. 
 
ಲಾಭಾಂಶ ವಿಚಾರ: ಬಯೋಕಾನ್ ಪ್ರತಿ ಷೇರಿಗೆ ₹3 (ಮುಖಬಲೆ ₹5), ಚೋಳಮಂಡಲಂ ಇನ್ವೆಸ್ಟ್‌ಮೆಂಟ್ಸ್  ₹2,  ಕೋರಮಂಡಲ್ ಇಂಟರ್ ನ್ಯಾಷನಲ್  ₹5 (₹1),  ಫೆಡರಲ್ ಬ್ಯಾಂಕ್ ₹0.90 (₹1), ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್  ₹9 (₹2, ಮೇ 5) , ಮಾರುತಿ ಸುಜುಕಿ  ₹75 (₹ 5),  ನವೀನ್ ಫ್ಲೋರಿನ್ ಇಂಟರ್ ನ್ಯಾಷನಲ್ ಪ್ರತಿ ಷೇರಿಗೆ ₹13,  ರಿಲಯನ್ಸ್ ಕ್ಯಾಪಿಟಲ್ ಪ್ರತಿ ಷೇರಿಗೆ ₹10.50, 
 
ಮುಖಬೆಲೆ ಸೀಳಿಕೆ: ನವೀನ್ ಫ್ಲೋರಿನ್ ಇಂಟರ್ ನ್ಯಾಷನಲ್  ಲಿಮಿಟೆಡ್‌ ಕಂಪೆನಿಯು ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲಿದೆ. ಒರೊಸೀಲ್ ಸ್ಮಿತ್ ಇಂಡಿಯಾ ಲಿಮಿಟೆಡ್ (ಹಿಂದಿನ ಹೆಸರು: ಸಿಲ್ವರ್ ಸ್ಮಿತ್ ಇಂಡಿಯಾ ಲಿ.) ಕಂಪೆನಿಯ ಷೇರಿನ ಮುಖಬೆಲೆ ಸೀಳಲು ಮೇ 16 ರಂದು ನಿರ್ಧರಿಸಲಿದೆ.  ಈ ಹಿಂದೆ ಅಂದರೆ ಜೂನ್ 2014 ರಲ್ಲಿ ಕಂಪೆನಿಯ ₹10 ರ ಮುಖಬೆಲೆ  ಷೇರನ್ನು  ₹5 ಕ್ಕೆ ಸೀಳಲಾಗಿತ್ತು.
 
‘ಟ್ರೇಡ್ ಟು ಟ್ರೇಡ್' ಗುಂಪಿಗೆ ವರ್ಗಾವಣೆ: ಆಲ್ಫಾ ಟ್ರಾನ್ಸ್ ಫಾರ್ಮರ್ಸ್,  ಆಮ್ ಫೋರ್ಜ್ ಇಂಡಸ್ಟ್ರೀಸ್, ಬರಾಕ್ ವ್ಯಾಲಿ ಸಿಮೆಂಟ್,  ಕ್ಲಿಯೋ ಇನ್ಫೋ ಟೆಕ್, ಗೋಂಟರ್ ಮ್ಯಾನ್ ಪೈಪರ್ಸ್,  ಹಿಂದೂಸ್ತಾನ್ ಆರ್ಗ್ಯಾನಿಕ್ಸ್ ಲಿಮಿಟೆಡ್, ಇಂಡ್ ಸ್ವಿಫ್ಟ್ ಲಿಮಿಟೆಡ್‌, ಕಿಲ್ಲಿಚ್ ಡ್ರಗ್ಸ್,  ಕೆ ಎಸ್ ಕೆ ಎನರ್ಜಿ ವೆಂಚರ್ಸ್, ಕ್ರಿಪ್ಟಾನ್ ಇಂಡಸ್ಟ್ರೀಸ್, ಆನ್ ವರ್ಡ್  ಟೆಕ್ನಾಲಜಿಸ್ , ಪಂಜಾಬ್ ಕಮ್ಯುನಿಕೇಷನ್ಸ್,  ಪಿ ವಿ ಪಿ ವೆಂಚರ್ಸ್, ತನೇಜಾ ಏರೋ ಸ್ಪೇಸ್, ಟೆಕ್ಸ್ಮೋ ಪೈಪ್ಸ್ ಅಂಡ್ ಪ್ರಾಡಕ್ಟ್ಸ್,  ತಿಜಾರಿಯಾ ಪೊಲಿಪೈಪ್ಸ್,  ಇನ್ನೂ ಅನೇಕ ಕಂಪೆನಿಗಳನ್ನು ಏ.27 ರಿಂದ 'ಟ್ರೇಡ್ ಟು ಟ್ರೇಡ್' ವಿಭಾಗ ಟಿ ಗುಂಪಿಗೆ ವರ್ಗಾಯಿಸಲಾಗಿದೆ. ಈ ಗುಂಪಿನ ಷೇರುಗಳಲ್ಲಿ ಡೇ ಟ್ರೇಡ್ ಮಾಡುವಂತಿಲ್ಲ.  ಮಧ್ಯಮ ಶ್ರೇಣಿ, ಕೆಳಮಧ್ಯಮ ಶ್ರೇಣಿ, ಕಳಪೆ ಷೇರುಗಳಲ್ಲಿ ವಹಿವಾಟು ನಡೆಸುವಾಗ, ವಿಶೇಷವಾಗಿ ಡೇ ಟ್ರೇಡಿಂಗ್ ಮಾಡುವಾಗ ಹೆಚ್ಚಿನ ಎಚ್ಚರ ಅಗತ್ಯ.
 
ಷೇರು ವಾಪಸ್‌: ಟಿಸಿಎಸ್‌ ಕಂಪೆನಿ 
ಪ್ರತಿ ಷೇರಿಗೆ ₹2850ರಂತೆ ಷೇರುದಾರರಿಂದ ವಾಪಸ್ ಕೊಳ್ಳಲು ಮೇ 8 ನಿಗದಿತ ದಿನವಾಗಿದೆ. ಮೇ 5ರಿಂದ ಖರೀದಿಸಿದ ಷೇರುಗಳು ಈ ವಾಪಸ್‌ ಕೊಳ್ಳುವಿಕೆಯಲ್ಲಿ ಪಾಲ್ಗೊಳ್ಳಲು ಅರ್ಹವಾಗಿರುವುದಿಲ್ಲ.
****
ಷೇರು ಪೇಟೆಯ ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್) ಈ ವಾರ ಸಾರ್ವಕಾಲೀನ ಗರಿಷ್ಠ  ಕಂಡಿರುವ ಈ ಸಂದರ್ಭದಲ್ಲಿ ಕೆಲವು ವಿಚಾರಗಳನ್ನು ತಿಳಿದರೆ ಮುಂದಿನ ಚಾಲನೆ ಹೇಗಿರಬಹುದೆಂಬುದಕ್ಕೆ ಮಾರ್ಗದರ್ಶಿಯಾಗಬಹುದು.

ಮೇ 6, 2016 ರಂದು 25,057 ವಾರ್ಷಿಕ ಕನಿಷ್ಠ ಮಟ್ಟದಲ್ಲಿದ್ದ ಸಂವೇದಿ ಸೂಚ್ಯಂಕವು ಜನವರಿ 31 ರಂದು 27,655ನ್ನು ತಲುಪಿತ್ತು. ಅಂದರೆ ಕನಿಷ್ಠ ಮಟ್ಟದಿಂದ ಸುಮಾರು 2,598 ಅಂಶಗಳ ಏರಿಕೆಗೆ ಎಂಟು ತಿಂಗಳ ಸಮಯ ಹಿಡಿಯಿತು.   ಅಲ್ಲಿಂದ ಸಾರ್ವಕಾಲೀನ ಗರಿಷ್ಠ 30,184 ಅಂಶಗಳ ಏರಿಕೆಯಿಂದ ಸುಮಾರು 2,525 ಅಂಶ ತಲುಪಲು ಕೇವಲ ಮೂರೇ ತಿಂಗಳು ಸಾಕಾಗಿದೆ.  ಸ್ವದೇಶಿ ವಿತ್ತೀಯ ಸಂಸ್ಥೆಗಳ ಹೂಡಿಕೆಯೇ ಇದಕ್ಕೆ ಮುಖ್ಯ ಕಾರಣ.   

ಮೇ 6, 2016  ರಂದು ಪೇಟೆಯ ಬಂಡವಾಳೀಕರಣ ಮೌಲ್ಯ ₹95.75 ಲಕ್ಷ ಕೋಟಿಯಲ್ಲಿತ್ತು.  ಅದು ಜನವರಿ 31, 2017 ರಂದು ₹112.56 ಲಕ್ಷ ಕೋಟಿಗೆ ಏರಿಕೆ ಕಂಡಿತ್ತು. ಅಂದರೆ ಸುಮಾರು 2,598 ಅಂಶಗಳ ಏರಿಕೆಯು ಪೇಟೆಯ ಬಂಡವಾಳೀಕರಣ ಮೌಲ್ಯವನ್ನು ₹16.81 ಲಕ್ಷ ಕೋಟಿ ಹೆಚ್ಚಿಸಿದೆ. 

ಹಾಗೆಯೇ ಜನವರಿ 31 ರಿಂದ  ಏಪ್ರಿಲ್ 27ರ ಅವಧಿಯ 2,525  ಅಂಶಗಳ ಅವಧಿಯಲ್ಲಿ ಕೇವಲ 12.19 ಲಕ್ಷ ಕೋಟಿಯಷ್ಟು ಮಾತ್ರ ಏರಿಕೆ ಕಂಡಿದೆ.  ಅಂದರೆ ಎರಡನೇ ಅವಧಿಯಲ್ಲಿ ಅಲ್ಪ ಮೌಲ್ಯದ ಷೇರಿನ ಚಟುವಟಿಕೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎನ್ನಬಹುದು.   

ಹಿಂದೆ ಜನವರಿ  2008ರ ಸಾರ್ವಕಾಲೀನ ಗರಿಷ್ಠ ತಲುಪಿದ ನಂತರ ಸೆನ್ಸೆಕ್ಸ್  ಮಾರ್ಚ್ 2009 ರಲ್ಲಿ 8,160 ಅಂಶಗಳ ಮಟ್ಟಕ್ಕೆ ಕುಸಿದ ವೇಗವನ್ನು ನೆನಪಿನಲ್ಲಿಟ್ಟು ಚಟುವಟಿಕೆ ನಡೆಸಿದಲ್ಲಿ ವಹಿವಾಟು ಸುಗಮವಾಗಬಹುದು. 

ಪೇಟೆಯತ್ತ ಹರಿದುಬರುವ ಒಳಹರಿವಿನ ಕಾರಣ ‘ಪಾಪ್‌ಕಾರ್ನ್' ಬೆಲೆಯನ್ನು ರಸ್ತೆಬದಿ ಅಂಗಡಿಯ ಹಂತದಿಂದ ಮಲ್ಟಿಪ್ಲೆಕ್ಸ್‌ನ ಬೆಲೆಗೆ ಕೊಂಡೊಯ್ದಿರಬಹುದೇ ಎಂಬ ಪ್ರಶ್ನೆಗೆ ಭವಿಷ್ಯವೇ  ಉತ್ತರಿಸಲಿದೆ. ಎಚ್ಚರಿಕೆ ವಹಿಸಿದರೆ ಮಾತ್ರ ಬಂಡವಾಳ ಸುರಕ್ಷಿತವಾಗಿ ಇರಿಸಬಹುದು ಎಂಬುದು ನಿರ್ವಿವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT