ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಕುಳವೆಂಬುದು ಬೇಲಿಗೂಟ

Last Updated 23 ಜೂನ್ 2017, 19:30 IST
ಅಕ್ಷರ ಗಾತ್ರ

ಬಕುಳದ ಹೆಸರನ್ನು ನಾನು ಮೊದಲು ಕೇಳಿದ್ದು ಹುಡುಗನಾಗಿದ್ದಾಗ. ಹಬ್ಬ ಹರಿದಿನಗಳಲ್ಲಿ ಮನೆಗಳಲ್ಲಿ ವಿಶೇಷ ಪೂಜೆ ನಡೆದಿದ್ದಾಗ, ‘ಬಕುಳ ಪುಷ್ಪಂ ಸಮರ್ಪಯಾಮಿ’ ಎಂದು ಪುರೋಹಿತರು ಹೇಳುತ್ತಿದ್ದ ಮಂತ್ರವಾಗಿ, ಅರ್ಥಾತ್ ದೇವರಿಗೆ ಸಮರ್ಪಿಸಲು ಯೋಗ್ಯವಾದ ಹೂವುಗಳ ಯಾದಿಯಾಗಿ ಬಕುಳದ ಹೆಸರನ್ನು ಕೇಳಿದ್ದೆ.

ಮಂತ್ರವನ್ನೇನೋ ಕೇಳಿದ್ದೆ. ಆದರೆ, ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಹೂವಾದ್ದರಿಂದ ಬಕುಳವನ್ನು ಕಂಡಿರಲಿಲ್ಲ. ಪುರೋಹಿತರು ಹೂವಿನ ಹೆಸರಿನಲ್ಲಿ ನಾಲ್ಕು ಕಾಳು ಮಂತ್ರಾಕ್ಷತೆಯನ್ನು ದೇವರತ್ತ ಉಗ್ಗಿ ಮುಂದಾಗುತ್ತಿದ್ದುದ್ದನ್ನು ಕಂಡಿದ್ದೆ ಅಷ್ಟೆ. ಹಾಗಾಗಿ ಬಹಳ ಕಾಲದವರೆಗೆ ಬಕುಳವೆಂಬುದು ಮಂತ್ರಪುಷ್ಪ ಮಾತ್ರವೇ ಆಗಿ ಉಳಿದಿತ್ತು ನನಗೆ.

ಹಳ್ಳಿಯಲ್ಲಿ ವಾಸಿಸಲು ಆರಂಭಿಸಿದ ಮೇಲೆ ಬಕುಳವನ್ನು ಕಂಡೆ. ಬಕುಳಪುಷ್ಪ ದೊಡ್ಡ ಹೂವಲ್ಲ, ಸುಂದರವಾದ ಹೂವೂ ಅಲ್ಲ. ಸಾಸಿವೆಗಾತ್ರದ, ಬಿಳಿಯ ಬಣ್ಣದ, ನೂರಾರು ಸಣ್ಣ ಹೂವುಗಳ ಗೊಂಚಲು ಅದು. ಗಿಡದ ಹೂವೂ ಅಲ್ಲ, ಸಂಪಿಗೆಯಂತೆ ಮರದ ಹೂವು ಬಕುಳ. ಆದರೆ ಪುಷ್ಪದ ಪರಿಮಳ ಮಾತ್ರ ಮಂತ್ರಮುಗ್ಧವಾಗಿಸುವಂತಹದ್ದು.

ಹಳದಿಹಸುರಿನ ಬಣ್ಣ ಹಾಗೂ ಮಾಟವಾದ ಎಲೆಗಳನ್ನು ಚಿಗುರಿಸಬಲ್ಲ ಬಕುಳವು ವಿಪರೀತ ಹರಡಿಕೊಳ್ಳದೆ ಸಪೂರವಾಗಿ ಹಾಗೂ ಸುಂದರವಾಗಿ ಬೆಳೆಯಬಲ್ಲದು. ರೈತರು ಹಸಿರುಬೇಲಿಯಾಗಿ, ಅರ್ಥಾತ್ ಬೇಲಿಗೂಟವಾಗಿ ಈ ಮರವನ್ನು ಖಾಯೀಷು ಮಾಡುತ್ತಾರೆ. ಉಪಯುಕ್ತ ನಾಟ ಕೂಡಾ ಹೌದು ಬಕುಳ.

ಮಲೆನಾಡಿನಲ್ಲಿ ಅಡಕೆ ತೋಟಗಳ ಬೇಲಿಗೆ ಬಕುಳ ನೆಡುತ್ತಾರೆ. ಕಾರಣವಿಷ್ಟೆ: ಅಡಕೆ ಮರಗಳ ಕಾಂಡವು ಸೂಕ್ಷ್ಮ ಪ್ರವೃತ್ತಿಯದ್ದು, ಬಿರು ಬಿಸಿಲಿನ ಝಳವನ್ನದು ತಾಳಲಾರದು. ಅಡಕೆಯಷ್ಟೇ ಎತ್ತರಕ್ಕೆ ಬೆಳೆಯಬಲ್ಲ ಬಕುಳವನ್ನು ಬೇಲಿಗೆ ನೆಡುತ್ತಾರೆ ರೈತರು. ಸಣ್ಣದೊಂದು ಕೊಂಬೆ ಕಡಿದು ಬುಡ ಚೂಪಾಗಿಸಿ ಹಸಿನೆಲದಲ್ಲಿ ಬಲವಾಗಿ ಊರಿದರೂ ಸಾಕು ಚಿಗುರಿಬಿಡುತ್ತದೆ ಬಕುಳ. ಯಾವ ವಿಶೇಷ ಆರೈಕೆಯನ್ನೂ ಬೇಡದ ಸಸ್ಯ ಪ್ರಭೇದವಿದು.

ಮಂತ್ರಪುಷ್ಪ- ಬೇಲಿಗೂಟ, ಬಕುಳಕ್ಕಿರುವ ಎರಡು ಆಯಾಮಗಳಿವು. ಇವೆರಡರಲ್ಲಿ ಯಾವುದು ಮೊದಲು ಬಂದಿತು, ಮಂತ್ರಪುಷ್ಪವೋ ಬೇಲಿಗೂಟವೋ? ಅನುಭವದ ಆಧಾರದ ಮೇಲೆ ಹೇಳುವುದಾದರೆ ಬೇಲಿಗೂಟವೇ ಮೊದಲು ಬಂದಿತು. ಅರ್ಥಾತ್ ಬಕುಳದ ಉಪಯುಕ್ತತೆಯು ಮಾನವನ ಅನುಭವಕ್ಕೆ ಮೊದಲು ಬಂದಿತು. ಮಂತ್ರಪುಷ್ಪದ ಘನತೆ ನಂತರ ರೂಪಿತವಾಯಿತು ಎಂದೆನ್ನಬಹುದು.

ಅದು ಹೀಗಾಗಿರಬೇಕು: ಕಾಡಂಚಿನಲ್ಲಿ ಬದುಕುತ್ತಿದ್ದ ಯಾರೋ ಒಬ್ಬ ರೈತ ಕಾಡಿನಲ್ಲಿ ಅಲೆಯುವಾಗ, ವಿಪರೀತ ಹರಡಿಕೊಳ್ಳದೆ ಸಪೂರವಾಗಿ ಬೆಳೆದಿರುವ ಈ ಸುಂದರ ಸಸ್ಯವನ್ನು ಕಂಡಿರಬೇಕು. ‘ಆಹಾ! ಇದು ನನ್ನ ತೋಟಕ್ಕೆ ಹಸಿರುಬೇಲಿಯಾಗಿ ಬಳಕೆಯಾಗಬಲ್ಲುದು!’ ಎಂದು ಅವನಿಗೆ ಅನ್ನಿಸಿರಬೇಕು. ಸರಿ, ಆ ರೈತ ಬಕುಳದ ಕಡ್ಡಿಯೊಂದನ್ನು ತಂದು ಬೇಲಿ ಬದಿಗೆ ನೆಟ್ಟಿರಬೇಕು. ಬೇಲಿಯು ಚಿಗುರೊಡೆದು, ಹೂವರಳಿಸಿ, ಪರಿಮಳಿಸಿ ತನ್ನ ಮತ್ತೊಂದು ಯೋಗ್ಯತೆಯನ್ನು ಜಗತ್ತಿಗೆ ಸಾರಿರಬೇಕು.

ಮನೆಯೊಡತಿ ದೇವರ ಪೂಜೆಗೆಂದು ಹೂವಾಯಲೆಂದು ತೋಟಕ್ಕಿಳಿದಾಗ ದಾಸವಾಳ, ನಂದಿಬಟ್ಟಲು, ಮಲ್ಲಿಗೆ, ಸೇವಂತಿಗೆ, ಸಂಪಿಗೆ ಹೂವುಗಳೊಟ್ಟಿಗೆ, ಬೇಲಿ ಬದಿಯ ಈ ಹೊಸ ಪರಿಮಳಕ್ಕೆ ಮನಸೋತು, ಬಕುಳವನ್ನೂ ಆಯ್ದು ಮನೆಯೊಳಗೆ ತಂದಿರಬೇಕು. ಪುರೋಹಿತರು ನಂತರ ಸಂಸ್ಕೃತ ಮಂತ್ರವನ್ನು ಹೆಣೆದಿರಬೇಕು. ಹೀಗೆ ಬಕುಳವು ಮಂತ್ರಪುಷ್ಪಗಳ ಸರಮಾಲೆಯನ್ನು ಸೇರಿರಬೇಕು.

ಹಾಗಲ್ಲದೆ ಯಾವುದೋ ಪುರೋಹಿತ, ದೇವರಾಣತಿಯಂತೆ ಕಾಡಿಗೆ ನಡೆದು, ಕಲ್ಲು ಮುಳ್ಳುಗಳ ಹಾದಿ ತುಳಿದು, ಕಾಡುಪ್ರಾಣಿಗಳ ಕಾಟ ಎದುರಿಸಿ ಈ ಪುಷ್ಪವನ್ನು ಹುಡುಕಿ ಹಿಡಿದನೆಂದರೆ ನಂಬಲಿಕ್ಕಾಗದು. ಇಷ್ಟಕ್ಕೂ ಪುರೋಹಿತರು ಸುಲಭಜೀವಿಗಳು. ಕಾಡುಮೇಡು ಅಲೆಯಲಾರರು ಅವರು. ಇರಲಿ. ಬಕುಳದ ಬಗೆಗೆ ಇಷ್ಟೆಲ್ಲ ವಿವರವಾಗಿ ಬರೆಯುತ್ತಿರುವುದಕ್ಕೆ ಕಾರಣವಿದೆ. ಬಕುಳ ಒಂದು ರೂಪಕ. ಬೇಲಿಗೂಟ ಹಾಗೂ ಮಂತ್ರಪುಷ್ಪಗಳ ನಡುವಣ ಸಂಬಂಧ ಹಾಗೂ ಸಮತೋಲನಗಳನ್ನು ಸಮರ್ಥವಾಗಿ ಸೂಚಿಸುವ ಒಂದು ರೂಪಕ. ಸಮಕಾಲೀನ ಸಂದರ್ಭದ ಚರ್ಚೆಗೆ ಬಕುಳದ ರೂಪಕ ತುಂಬ ತುಂಬ ಅಗತ್ಯ.

ಬೇಲಿಗೂಟ ಹಾಗೂ ಮಂತ್ರಪುಷ್ಪಗಳ ನಡುವಣ ಸಂಬಂಧ ಹಾಗೂ ಸಮತೋಲನದ ಮಾತನಾಡಿದೆ ನಾನು. ಬೇಲಿಗೂಟವು ಮನುಷ್ಯನನ್ನು ಸಹಜ ಪ್ರಕೃತಿಯತ್ತ ಎಳೆದರೆ, ಮಂತ್ರಪುಷ್ಪವು ಅದೇ ಮನುಷ್ಯನನ್ನು ಅಸಹಜ ನಾಗರಿಕತೆಯತ್ತ ಜಗ್ಗುತ್ತಿರುತ್ತದೆ. ಬೇಲಿಗೂಟವು  ಗ್ರಾಮದತ್ತ ಜಗ್ಗಿದರೆ, ಮಂತ್ರಪುಷ್ಪವು ನಗರೀಕರಣದತ್ತ ಜಗ್ಗುತ್ತಿರುತ್ತದೆ, ಇತ್ಯಾದಿ.

ಇಷ್ಟಕ್ಕೂ ನಾವು ಆಧುನಿಕರು ಬೇಲಿಗೂಟದೊಟ್ಟಿಗಿನ ನಮ್ಮ ಸಂಬಂಧವನ್ನು ಒಪ್ಪಿಕೊಂಡದ್ದು ಅಷ್ಟಕ್ಕಷ್ಟೆ. ಎಲ್ಲೋ ಕಾರಂತರ ಕಾದಂಬರಿಯಲ್ಲಿ ಅಥವಾ ಕುವೆಂಪು– ಬೇಂದ್ರೆ ಕಾವ್ಯದಲ್ಲಿ ಬೇಲಿಗೂಟ ತಲೆತೂರಿಸಿರಬಹುದು ಅಷ್ಟೆ. ಇನ್ನು ಸಮತೋಲನವಂತೂ ಸರಿಯೇ ಸರಿ, ಎಂದಿಗೂ ಇರಲಿಲ್ಲ. ಆದರೆ ಹಳೆಯ ನಾಗರಿಕತೆಗಳು, ಕನಿಷ್ಠಪಕ್ಷ ಬೇಲಿಗೂಟದ ಉಪಯುಕ್ತತೆಯನ್ನು ಮಾನ್ಯ ಮಾಡಿದ್ದವು. ಬೇಲಿಗೂಟವಿಲ್ಲದೆ ಅವರ ಕೆಲಸ ಸಾಗುತ್ತಿರಲಿಲ್ಲ. ಶ್ರಮಜೀವಿಗಳಾಗಿದ್ದರು ಅವರು.

ಯಂತ್ರನಾಗರಿಕತೆಗಾದರೋ ಜೀವಂತಗೂಟದ ಅನಿವಾರ್ಯತೆಯೇ ಇಲ್ಲ. ಜೀವವನ್ನು ತಿರಸ್ಕರಿಸಿದ ನಾಗರಿಕತೆ ಅದು. ಹಸಿರುಬೇಲಿಯ ಜಾಗದಲ್ಲಿ ಐಬೆಕ್ಸ್ ಬೇಲಿ ಅಳವಡಿಸಿದೆ ಅಥವಾ ಕಾಂಕ್ರೀಟಿನ ಕಾಂಪೌಂಡು ಅಥವಾ ಪ್ಲಾಸ್ಟಿಕ್ಕಿನಿಂದ ಆವೃತವಾದ ಬೇಸಾಯಮನೆ ಇತ್ಯಾದಿ. ಯಂತ್ರನಾಗರಿಕತೆ ಸಂಪೂರ್ಣ ಅಸಮತೋಲ ನಾಗರಿಕತೆ. ಈ ನಾಗರಿಕತೆಯೊಳಗೆ ಮಂತ್ರಪುಷ್ಪ ಮಾತ್ರ ಆಗಬಲ್ಲದು ಬಕುಳ, ಒಂದು ಕಾಲ್ಪನಿಕ ಪುಷ್ಪ. ಆದರೆ ಬೇಲಿಗೂಟವನ್ನು ತಿರಸ್ಕರಿಸಿರುವ ಕಾರಣಕ್ಕಾಗಿ ಪಾಪಪ್ರಜ್ಞೆಯಿಂದ ಬಳಲುವ ಯಂತ್ರನಾಗರಿಕರಾದ ನಾವು ಮಂತ್ರಪುಷ್ಪವನ್ನು ವಿಪರೀತ ಹಚ್ಚಿಕೊಂಡಿದ್ದೇವೆ.

ಮಂತ್ರಪುಷ್ಪಗಳೇ ನಮಗೆ ಪರಂಪರೆಯಾಗಿವೆ. ಮಂತ್ರಪುಷ್ಪಗಳಿಗಾಗಿ ಬಡಿದಾಡುತ್ತೇವೆ, ಧರ್ಮಯುದ್ಧ ನಡೆಸುತ್ತೇವೆ. ಮಂತ್ರಪುಷ್ಪಕ್ಕಾಗಿಯೇ ಸೊಂಟಕ್ಕೆ ಬಾಂಬು ಸಿಕ್ಕಿಸಿಕೊಂಡು, ನಾವೂ ಸಿಡಿದು ಇತರರನ್ನೂ ಸಿಡಿಸಿ ಆತಂಕವಾದ ಮಾಡುತ್ತೇವೆ, ಇತ್ಯಾದಿ. ಬೇಲಿಗೂಟ ನಮಗೆ ಸಂಸ್ಕೃತಿಯೂ ಅಲ್ಲ ಸಭ್ಯತೆಯೂ ಅಲ್ಲ. ಅದೊಂದು ಕತ್ತೆ ಕೆಲಸ ಅಷ್ಟೆ. ಸುಲಭ ಬದುಕು, ಯಾಂತ್ರಿಕ ಜೀವನಶೈಲಿ ಹಾಗೂ ಕಾಲ್ಪನಿಕ ಪರಂಪರೆಗಳು ನಮ್ಮವು.

ಇರಲಿ, ಒಂದು ಆಟ ಆಡೋಣವಂತೆ. ಬಕುಳದ ರೂಪಕವನ್ನು ಬೇರೆ ಬೇರೆ ಸಂಗತಿಗಳಿಗೆ ಅಳವಡಿಸಿ ಪರಿಣಾಮ ಗಮನಿಸೋಣವಂತೆ. ಮೊದಲಿಗೆ ಗೋವಿನ ಉದಾಹರಣೆ ತೆಗೆದುಕೊಳ್ಳಿ. ಇತ್ತೀಚೆಗೆ ವಿಪರೀತ ಚರ್ಚಿತವಾಗುತ್ತಿರುವ ಸಂಗತಿ ಗೋವು. ಈ ರೂಪಕವನ್ನು ಅಳವಡಿಸಿದಾಕ್ಷಣ ಗೋವು ಒಡೆದು ಎರಡಾಗುತ್ತದೆ. ಕಾಮಧೇನುವೆಂಬ ಮಂತ್ರಪುಷ್ಪವೂ, ನೇಗಿಲಿಗೆ ಕಟ್ಟಲ್ಪಡುವ ದನವೂ ಪ್ರತ್ಯೇಕಗೊಂಡು ನಿಲ್ಲುತ್ತವೆ. ನೇಗಿಲಿಗೆ ಕಟ್ಟುವ ದನ ಗಲೀಜಾಗಿರುತ್ತದೆ. ದಿನವೂ ಸೆಗಣಿ ಹಾಕುತ್ತದೆ. ಹುಲ್ಲು ಬೇಡುತ್ತದೆ... ಇತ್ಯಾದಿ. ಕಿರಿಕಿರಿ. ಸಹಜವಾಗಿಯೇ ನಾವು ದನವನ್ನು ತಿರಸ್ಕರಿಸಿದ್ದೇವೆ. ದನದ ಜಾಗೆಯಲ್ಲಿ ಫಳಫಳ ಹೊಳೆಯುವ ಹಾಗೂ ಅತ್ಯಾಧುನಿಕವಾದ ಕೃಷಿಯಂತ್ರಗಳನ್ನು ಅಳವಡಿಸಿದ್ದೇವೆ. ಪಾಪಪ್ರಜ್ಞೆ ಕಳೆಯಲೆಂದು ಕಾಲ್ಪನಿಕ ಕಾಮಧೇನುವನ್ನು ತಲೆಯ ಮೇಲೆ ಹೊತ್ತು ತಿರುಗುತ್ತೇವೆ.

ವಾಸ್ತವಿಕ ದನವು ಚೋಮನ ದುಡಿಯ ಪ್ರಖ್ಯಾತ ಮುದುಕ ಚೋಮನಂತೆ, ಸಾಯಲೂ ಆಗದೆ ಬದುಕಲೂ ಬಾರದೆ ಬಾಧೆಪಡುತ್ತಿರುತ್ತದೆ. ಅದರ ಚಿಂತೆಯಿಲ್ಲ ನಮಗೆ. ಆದರೆ ಅದರ ಮಾಂಸದ ಚಿಂತೆಯಿದೆ! ಕಾನೂನಿನ ಬಲವಂತ ಹೇರಿ ದನದ ಮಾಂಸ ತಿನ್ನುವ ಸಾಬರು, ದಲಿತರು, ಕ್ರೈಸ್ತರು ಇತ್ಯಾದಿ ಸಮುದಾಯಗಳನ್ನು ಪಾಪಿಗಳೆಂದು ಪರಿಗಣಿಸಿ, ಕೊಂದು, ಕಾಮಧೇನುವನ್ನು ಸಲಹುತ್ತೇವೆ. ದೇವರು ಒಂದೊಮ್ಮೆ ಇರುವುದೇ ಆದರೆ, ದನದ ಗಲೀಜಾದ ಶ್ರಮದೊಳಗೆ ಅಡಗಿದ್ದಾನೆಯೇ ಹೊರತು ಕಾಲ್ಪನಿಕ ಕಾಮಧೇನುವಿನಲ್ಲಿ ಖಂಡಿತಾ ಅಲ್ಲ ಎಂದು ತಿಳಿದೂ ಕಾಲ್ಪನಿಕ ಜಗತ್ತಿಗೆ ಶರಣಾಗುತ್ತೇವೆ ನಾವು.

ಅಥವಾ ಶಿಕ್ಷಣದ ಉದಾಹರಣೆ ತೆಗೆದುಕೊಳ್ಳಿ. ರೂಪಕ ಬಳಸಿದಾಕ್ಷಣ ವಿದ್ಯೆ ಎರಡಾಗಿ ಒಡೆಯುತ್ತದೆ. ಒಂದು ಕಡೆ ವಿಜ್ಞಾನ ನಿಲ್ಲುತ್ತದೆ, ಮತ್ತೊಂದು ಕಡೆ ಜನರ ತಿಳಿವಳಿಕೆ ನಿಲ್ಲುತ್ತದೆ. ಒಂದು ಕಡೆ ಇಂಗ್ಲಿಷು ನಿಲ್ಲುತ್ತದೆ, ಮತ್ತೊಂದು ಕಡೆ ಮಾತೃಭಾಷೆ ನಿಲ್ಲುತ್ತದೆ, ಇತ್ಯಾದಿ. ವಿಜ್ಞಾನವನ್ನು ಪರಮಪೂಜ್ಯ ಮಂತ್ರಪುಷ್ಪವೆಂದು ತಿಳಿದು ಸ್ವೀಕರಿಸುತ್ತೇವೆ. ಜನಪದ ತಿಳಿವಳಿಕೆಯನ್ನು ಗಲೀಜು ಗೂಟವೆಂದು ತಿಳಿದು ತಿರಸ್ಕರಿಸುತ್ತೇವೆ.

ಗುಡ್ಡಗಾಡು ಜನರ ಮೆಟಲರ್ಜಿ, ದಲಿತರ ದೊಡ್ಡಾಟ, ಹಳ್ಳಿ ಮುದುಕಿಯ ನಾಟಿವೈದ್ಯ, ರೈತಾಪಿಜನರ ಪರಿಸರಜ್ಞಾನ ಇತ್ಯಾದಿ ಎಲ್ಲ ಜ್ಞಾನವನ್ನೂ ಗಲೀಜುಗೂಟವೆಂದು ತಿಳಿದು ತಿರಸ್ಕರಿಸುತ್ತೇವೆ. ತಿಳಿಯಲಾಗದ ಇಂಗ್ಲಿಷು, ತಿಳಿಯಲಾಗದ ಸಂಸ್ಕೃತಗಳನ್ನು ಬಳಸಿ ತಿಳಿಗನ್ನಡ, ತುಳುವ, ಕೊಂಕಣಿಗಳನ್ನು ನುಂಗಿಹಾಕುತ್ತೇವೆ. ಮಕ್ಕಳ ಗತಿಯಂತೂ ಹೇಳಲಿಕ್ಕಾಗದು! ಬಾರ್ಬಿಡಾಲುಗಳಂತೆ ಬೆಳೆಸುತ್ತಿದ್ದೇವೆ ನಾವು ನಮ್ಮ ಮಕ್ಕಳನ್ನು.

ಇನ್ನು ಯೂನಿವರ್ಸಿಟಿ ಪಂಡಿತರು! ಅನುಭವಹೀನರಾದಷ್ಟೂ ಇವರ ಹಿರಿಮೆ ದೊಡ್ಡದಾಗುತ್ತ ನಡೆಯುತ್ತದೆ. ಪ್ರತ್ಯೇಕತೆಯೇ ಇವರ ವಿಧಾನವಾಗಿದೆ. ಎಲ್ಲವನ್ನೂ ಪ್ರತ್ಯೇಕಿಸಿ, ಎಲ್ಲವನ್ನೂ ಒಡೆದು ನೋಡುವುದನ್ನು ಇವರಿಗೆ ಕಲಿಸಲಾಗಿದೆ. ಫಾರಿನ್ನಿಗೆ ಇವರನ್ನು ಕಳಿಸಿ ಅಥವಾ ಫಾರಿನ್ನಿನಿಂದ ಇತರರನ್ನು ಕರೆಸಿ ಪ್ರತ್ಯೇಕತೆಯನ್ನು ಕಲಿಸಲಾಗಿದೆ. ಕೆಮಿಸ್ಟ್ರಿ ಪ್ರತ್ಯೇಕ, ಜಾನಪದ ಪ್ರತ್ಯೇಕ, ಸಂಸ್ಕೃತ ಪ್ರತ್ಯೇಕ, ಪಂಡಿತ ಪ್ರತ್ಯೇಕ, ಪಾಮರ ಪ್ರತ್ಯೇಕ... ಇತ್ಯಾದಿ. ಪ್ರತ್ಯೇಕತೆ ನಾಯಿಕೊಡೆಗಳಂತೆ ನಮ್ಮ ಸುತ್ತ ಎದ್ದು ನಿಂತಿವೆ!

ಅಥವಾ ರಾಜಕಾರಣದ ಉದಾಹರಣೆ ತೆಗೆದುಕೊಳ್ಳಿ. ಬೇಲಿಗೂಟವನ್ನು ಕಡೆಗಣಿಸುವುದೇ ಇಂದಿನ ರಾಜಕಾರಣವಾಗಿದೆ. ಎಲ್ಲ ಪಕ್ಷಗಳ ರಾಜಕಾರಣವೂ ಇದೇ ಆಗಿದೆ. ರಾಜಕಾರಣಿಗಳನ್ನು ಈ ಬಗ್ಗೆ ಕೇಳಿದರೆ, ‘ರೈತನ ಸಾಲ ಮನ್ನಾ ಮಾಡಿದ್ದೇವಲ್ಲ!’ ಎಂದು ಪ್ರತ್ಯುತ್ತರ ಕೊಡುತ್ತಾರೆ. ರೈತನ ಸಾಲ ಮನ್ನಾ ಮಾಡಿದಾಕ್ಷಣ ಬೇಲಿಗೂಟ ಚಿಗುರಲಾರದು ಎಂಬ ಅರಿವಿದ್ದೂ ಹೀಗೆ ಹೇಳುತ್ತಾರೆ. ಆದರೆ ತಪ್ಪು ಅವರದ್ದಲ್ಲ. ವೋಟು ಕೊಡುವ ನಾವು ಅವರಿಂದ ಹಾಗೆ ಹೇಳಿಸುತ್ತಿದ್ದೇವೆ. ಒಂದು ಕೈಯಲ್ಲಿ ಮಂತ್ರಪುಷ್ಪ, ಮತ್ತೊಂದು ಕೈಯಲ್ಲಿ ಯಂತ್ರಪುಷ್ಪ ಹಿಡಿದು ನಿಂತಿದೆ ಇಂದಿನ ರಾಜಕಾರಣ ಹಾಗೂ ಇಂದಿನ ಸರ್ಕಾರ! ಇನ್ನು ಬೇಲಿಗೂಟಕ್ಕೆಲ್ಲಿ ಜಾಗ?
ಅಥವಾ ಧಾರ್ಮಿಕ ಸಂಸ್ಥೆಗಳನ್ನು ತೆಗೆದುಕೊಳ್ಳಿ. ಧರ್ಮದ ಮೂಲ ಆಶಯ ಬೇಲಿಗೂಟ ಚಿಗುರಿಸಬಯಸುತ್ತದೆ. ಸಾಂಸ್ಥಿಕ ವ್ಯವಸ್ಥೆ ಮಂತ್ರಪುಷ್ಪ ಚಿಗುರಿಸ ಬಯಸುತ್ತದೆ. ಮಂತ್ರಪುಷ್ಪಾರ್ಚನೆಗಾಗಿಯೇ ನಿರ್ಮಿತವಾದಂತಿವೆ ಸಾಂಸ್ಥಿಕ ಧರ್ಮಗಳು. ಮಂತ್ರಪುಷ್ಪವು ದೇವರು ಹೇಗಾದೀತು?

‘ಮಂತ್ರಪುಷ್ಪವನ್ನು ತಿರಸ್ಕರಿಸಬೇಕು’. ಹೀಗೆ ಹೇಳಿದಾಗಲೆಲ್ಲ, ‘ಪೂಜೆಯೆಂಬ ಧನ್ಯತಾಭಾವದ ತಿರಸ್ಕಾರಕ್ಕೆ ಕರೆಕೊಡುತ್ತಿದ್ದಾರೆ ಇವರು’ ಎಂದು, ಹೇಳಿದವರ ಮೇಲೆ ಗೂಬೆ ಕೂರಿಸಲಾಗುತ್ತದೆ. ದೇವರೊಟ್ಟಿಗೆ ತಕರಾರಿಲ್ಲ ನಮಗೆ. ತಕರಾರು ಇರುವುದೇನಿದ್ದರೂ ಪೂಜಾರಿ ವ್ಯವಸ್ಥೆಯೊಟ್ಟಿಗೆ.

ದೇವರ ತಲೆಯ ಮೇಲೆ, ಒಂದೊಮ್ಮೆ ಧನ್ಯತೆಯ ಹೂವನ್ನಿಡುವುದೇ ಆದರೆ ನಿಜದ ಹೂವನ್ನಿಡೋಣ. ಬಕುಳದ ಹೂವನ್ನಿಡೋಣ. ಆದರೆ, ಬೇಲಿಗೂಟ ಚಿಗುರಿಸದೆ ಬಕುಳದ ಹೂವು ಲಭ್ಯವಾಗದು, ನೆನಪಿರಲಿ!

ಒಟ್ಟು ಕತೆಯ ನೀತಿಯೆಂದರೆ, ನೀವು ಯಾರೇ ಆಗಿರಿ- ಆರೆಸ್ಸೆಸ್ಸಿನವರೇ ಆಗಿರಿ, ಸಮಾಜವಾದಿಯೇ ಆಗಿರಿ, ಸಮತಾವಾದಿಯೇ ಆಗಿರಿ... ಅಥವಾ ಯೂನಿವರ್ಸಿಟಿ ಪ್ರೊಫೆಸರ್ ಆಗಿರಿ ಅಥವಾ ಹಿಂದೂ– ಕ್ರೈಸ್ತ– ಮುಸಲ್ಮಾನ... ಯಾರೇ ಆಗಿರಿ, ನಿಮ್ಮ ತತ್ವಾದರ್ಶ ಏನೇ ಇರಲಿ, ಸಿದ್ಧಾಂತ ಏನೇ ಇರಲಿ, ಮಂತ್ರಪುಷ್ಪವು ಪರಂಪರೆಯಲ್ಲ, ಸಂಸ್ಕೃತಿ ಖಂಡಿತಾ ಅಲ್ಲ.

ಬೇಲಿಗೂಟವೇ ಪರಂಪರೆ, ಬೇಲಿಗೂಟವೇ ಸಂಸ್ಕೃತಿ. ಮಂತ್ರಪುಷ್ಪವೆಂದು ನೀವು ಭ್ರಮಿಸುತ್ತ ಆರಾಧಿಸುತ್ತಿರುವುದು ಯಂತ್ರಪುಷ್ಪವನ್ನು, ಅರ್ಥಾತ್ ಯಂತ್ರ ನಾಗರಿಕತೆಯನ್ನು. ನೆನಪಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT