ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗೆ ಬಗೆ ನೋಟ; ಬದುಕಿನ ಪಾಠ

Last Updated 3 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ನನಗಾಗ ವಯಸ್ಸು ಇನ್ನೂ ಮಾಗಿರಲಿಲ್ಲ, ಅನುಭವವೂ ಪಕ್ವವಾಗಿರಲಿಲ್ಲ. ಹೀಗಾಗಿ ಯಾವುದಾದರೂ ಕೆಲಸ ಮಾಡಿದರೆ ಮುಂದಾಗಬಹುದಾದ ಪರಿಣಾಮಗಳ ಬಗ್ಗೆ ಸಹಜವಾಗಿಯೇ ಭಯವೂ ಇರಲಿಲ್ಲ. 1993ರ ಆರಂಭದಲ್ಲಿ ನಾವು ಆಗಷ್ಟೇ ಬುಡಕಟ್ಟು ಮಹಿಳೆಯರ ಸಂಘಟನಾ ಕಾರ್ಯದಲ್ಲಿ ನಿರತರಾಗಿದ್ದೆವು.
 
ಆ ಸಂದರ್ಭದಲ್ಲೆಲ್ಲಾ ಪುರುಷರ ಮದ್ಯಸೇವನೆ ವಿಚಾರ ಪದೇ ಪದೇ ನಮ್ಮ ಚರ್ಚೆಗೆ ಬರುತ್ತಿತ್ತು. ಈ ಸಮಸ್ಯೆಯ ವಿರುದ್ಧ ಹೋರಾಡಲು ಗಂಡಸರೊಂದಿಗೆ ಚರ್ಚಿಸಿ ಅದರ ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡುವುದರಿಂದ ಹಿಡಿದು ಅಬಕಾರಿ ಇಲಾಖೆಗೆ ದೂರು ನೀಡುವವರೆಗೆ ಹಲವಾರು ವಿಭಿನ್ನ ಮಾರ್ಗಗಳನ್ನು ನಾವು ಹುಡುಕುತ್ತಿದ್ದೆವು.
 
ಆದರೆ ಅದ್ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಆದರೂ ಈ ಸಲುವಾಗಿ ಸಂಘಟನೆಯ ಬಗ್ಗೆ ಮಹಿಳೆಯರು ಆಸಕ್ತಿ ಮತ್ತು ನಂಬಿಕೆ ಕಳೆದುಕೊಳ್ಳದಿರುವಂತೆ ಏನಾದರೂ ಮಾಡಲೇಬೇಕೆಂಬ ಒತ್ತಡ ನನ್ನಲ್ಲಿ ಬಲವಾಯಿತು.

ಸಾರಾಯಿ ಮಾರುವವರತ್ತ ನಾವು ಗಮನಹರಿಸೋಣ ಎಂದು ಕಾಡುಕುರುಬ ಮಹಿಳೆ ಪುಟ್ಟಮ್ಮ ಹೇಳಿದಾಗ, ಅದೂ ಒಳ್ಳೆಯ ಸಲಹೆ ಎಂದು ನನಗನಿಸಿತು. ಇದನ್ನು ಅಹುದಹುದು ಎಂದು ಒಪ್ಪಿಕೊಂಡ ಎಲ್ಲ ಮಹಿಳೆಯರೂ, ಸಾರಾಯಿ ಸುಲಭವಾಗಿ ಸಿಗುತ್ತಿರುವುದರಿಂದಲೇ ತಮ್ಮ ಗಂಡಂದಿರು ಅದನ್ನು ಕುಡಿಯುತ್ತಿದ್ದಾರೆ ಎಂಬ ಅಭಿಪ್ರಾಯಕ್ಕೆ ಬಂದರು.
 
ಈ ಪ್ರದೇಶದಲ್ಲಿ ಅಧಿಕೃತವಾಗಿ ಸಾರಾಯಿ ಮಾರಾಟ ಮಾಡಲು ಪರವಾನಗಿ ಪಡೆದ ಗುತ್ತಿಗೆದಾರರು ಯಾರೂ ಇರಲಿಲ್ಲವಾದರೂ, ಅವರೆಲ್ಲಾ ಗುಟ್ಟಾಗಿ ತಮ್ಮ ವ್ಯಾಪಾರವನ್ನು ನಡೆಸುತ್ತಿದ್ದರು.

ತಾತ್ಕಾಲಿಕ ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದ ಸಣ್ಣ ವ್ಯಾಪಾರಿಗಳಿಗೆ ಪ್ರತಿ ಸಂಜೆ ಸಾರಾಯಿ ತಲುಪುತ್ತಿತ್ತು. ಅಷ್ಟೇ ಅಲ್ಲದೆ ಸಂಜೆ ದಿನಗೂಲಿ ಹಿಡಿದು ಬರುವ ಜನರನ್ನು ಸೆಳೆಯುವ ಸಲುವಾಗಿ ಜೀಪಿನೊಳಗೂ ಸಾರಾಯಿ ತುಂಬಿಸಿಕೊಂಡು ಬಂದು ಬುಡಕಟ್ಟು ಹಾಡಿಗಳ ಸುತ್ತ ಸಂಚರಿಸುತ್ತಾ ಮಾರಾಟ ಮಾಡಲಾಗುತ್ತಿತ್ತು.

ಕಾಡಿನ ಮೂಲೆಯ ಹಾಡಿಗಳಲ್ಲಿ ವಾಸಿಸುತ್ತಿದ್ದ ಆದಿವಾಸಿಗಳಿಗೆ ಆರೋಗ್ಯ, ಶಿಕ್ಷಣದಂತಹ ಮೂಲ ಸೌಲಭ್ಯವನ್ನು ಸರ್ಕಾರ ಹೀಗೆ ಗಾಲಿಗಳ ಮೂಲಕ ಒದಗಿಸಬಹುದಾದ ಸಾಧ್ಯತೆಯನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯವಾಗಿದ್ದ ಆ ದಿನಗಳಲ್ಲಿ, ಉದ್ಯಮಿಗಳು ಮಾತ್ರ ಸಂಚಾರಿ ಘಟಕಗಳ ಮೂಲಕ ಸಾರಾಯಿ ಮಾರುವ ಚಾಣಾಕ್ಷ ಮಾರ್ಗಗಳನ್ನು ಕಂಡುಕೊಂಡಿದ್ದರು.

ನಾವು ಇಷ್ಟರವರೆಗೆ ಇವರಿಗೆಲ್ಲಾ ಕೊಟ್ಟ ಅವಕಾಶ ಸಾಕು, ಇನ್ನೇನಿದ್ದರೂ ಪುಟ್ಟಮ್ಮನ ಸಲಹೆಯನ್ನು ಕಾರ್ಯರೂಪಕ್ಕೆ ತರುವುದೇ ಸರಿ ಎಂಬ ತೀರ್ಮಾನಕ್ಕೆ ಬಂದೆವು. ಪ್ರತಿ ಸಂಜೆ ಒಂದಷ್ಟು ಮಹಿಳೆಯರೊಂದಿಗೆ ಈ ಸಣ್ಣ ವ್ಯಾಪಾರಿಗಳ ಬಳಿ ಹೋಗುತ್ತಿದ್ದ ನಾನು, ಸಾರಾಯಿ ಮಾರಾಟ ಮಾಡದಂತೆ ಅವರಿಗೆ ತಿಳಿ ಹೇಳುತ್ತಿದ್ದೆ.
 
ಬಳಿಕ ಅವರನ್ನು ಪುಸಲಾಯಿಸುವುದು, ಒತ್ತಾಯಪೂರ್ವಕ ನಿಬಂಧನೆಗಳನ್ನು ಹಾಕುವುದು, ಕಾನೂನಿನ ಭಯ ಹುಟ್ಟಿಸುವುದೂ ಸೇರಿದಂತೆ ನಮ್ಮ ಕೈಲಾದ ಎಲ್ಲ ಪ್ರಯತ್ನಗಳನ್ನೂ ಮಾಡಿ ನೋಡಿದೆವು.
 
ಉಹ್ಞುಂ! ಇದ್ಯಾವುದರಿಂದಲೂ ಯಾವ ಪ್ರಯೋಜನವೂ ಆಗಲೇ ಇಲ್ಲ. ಇದರಿಂದ ತೀವ್ರ ಹತಾಶರಾದ ನಮ್ಮ ಮುಂದೆ ಬೇರ‌್ಯಾವ ಮಾರ್ಗೋಪಾಯವೂ ಕಾಣಲಿಲ್ಲ. ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಮಹಿಳೆಯರನ್ನು ಅವರ ಹಾಡಿಗಳ ಜನರೇ ಗೇಲಿ ಮಾಡಲು ಆರಂಭಿಸಿದ್ದರು.
 
ಇದರಿಂದ ಸಂಘಟನೆಯ ಬಗೆಗಿನ ನಮ್ಮ ವಿಶ್ವಾಸಾರ್ಹತೆಗೆ ಹೊಡೆತ ಬೀಳುವ ಸ್ಥಿತಿ ನಿರ್ಮಾಣವಾಗಿತ್ತು. ಈ ಸಮಸ್ಯೆ ಬಗೆಹರಿಸಲು ಎಲ್ಲರಿಗೂ ಮೇಲ್ನೋಟಕ್ಕೆ ಗೋಚರಿಸುವಂತಹ ಹಾಗೂ ಮಹಿಳೆಯರಲ್ಲಿ ಗೆಲುವಿನ ಭಾವ ಮೂಡಿಸುವಂತಹ ಯಾವುದಾದರೊಂದು ಪರಿಹಾರವನ್ನು ನಾನು ಕಂಡುಹಿಡಿಯಲೇಬೇಕಾಗಿತ್ತು.

ಪೊಲೀಸರು ಮತ್ತು ಅಬಕಾರಿ ಇಲಾಖೆಗೆ ದೂರು ಕೊಟ್ಟಿದ್ದರಿಂದ ಆದ ಒಂದೇ ಪ್ರಯೋಜನವೆಂದರೆ ಅವರು ಇನ್ನಷ್ಟು `ಮಾಮೂಲಿ~ ವಸೂಲಿ ಮಾಡಿಕೊಳ್ಳಲು ಒಳ್ಳೆಯ ಅವಕಾಶ ಒದಗಿಸಿಕೊಟ್ಟಂತೆ ಆಗಿತ್ತು ಅಷ್ಟೆ. ಇಷ್ಟೆಲ್ಲಾ ಆದಮೇಲೆ ಸಣ್ಣ ವ್ಯಾಪಾರಿಗಳು ಸಾರಾಯಿ ಮಾರಾಟ ಮಾಡದಂತೆ ತಡೆಯಲು ಸ್ವತಃ ಕಾನೂನನ್ನೇ ಕೈಗೆತ್ತಿಕೊಳ್ಳಬೇಕೆಂಬ ತೀರ್ಮಾನಕ್ಕೆ ನಾವು ಬಂದೆವು.
 
ತಾತ್ಕಾಲಿಕ ಮಳಿಗೆಗಳ ಮೇಲೆ ದಾಳಿ ನಡೆಸಿ ಅಲ್ಲಿದ್ದ ಸಾರಾಯಿಯನ್ನೆಲ್ಲಾ ಬಲವಂತದಿಂದ ನಾಶ ಮಾಡಲು ಮುಂದಾದೆವು. ಅವರು ನಡೆಸುತ್ತಿದ್ದುದೇ ಅಕ್ರಮ ಚಟುವಟಿಕೆಯಾದ್ದರಿಂದ ನಮ್ಮ ಈ ಕೃತ್ಯದ ವಿರುದ್ಧ ಕಾನೂನಿನ ಮೊರೆ ಹೋಗಲು ಅವರಿಗೆಲ್ಲ ಸಾಧ್ಯವೇ ಇಲ್ಲ ಎಂಬ ಸತ್ಯ ನಮಗೆ ತಿಳಿದಿತ್ತು.

ಮಾರಾಟ ಮಾಡಲು ಪರವಾನಗಿಯೇ ಇಲ್ಲದಿರುವಾಗ ಇನ್ನು ಅಧಿಕೃತವಾಗಿ ದೂರು ನೀಡುವ ಮಾತು ಎಲ್ಲಿಂದ ಬರಬೇಕು. ಮುಂದಿನ 10- 12 ದಿನಗಳ ಕಾಲ ನಾವು ಇದೇ ಕಾರ್ಯವನ್ನು ಮುಂದುವರಿಸಿದೆವು. ನಂತರದಲ್ಲಿ ಅದರ ಪರಿಣಾಮ ನಮಗೆ ಗೋಚರಿಸಲಾರಂಭಿಸಿತು.
 

ನಮ್ಮ ಕಾರ್ಯದಿಂದ ತಮಗಾಗುತ್ತಿದ್ದ ನಷ್ಟವನ್ನು ಭರಿಸಲಾರದೇ ಮೂರು ತಾತ್ಕಾಲಿಕ ಅಂಗಡಿಗಳು ಬಂದ್ ಆದವು. ಇದನ್ನು ಕಂಡು ನಾವಂತೂ ಖುಷಿಯಿಂದ ಬೀಗಿದೆವು. ತಮ್ಮ ಗಂಡಂದಿರಿಗೆ ಸುಲಭವಾಗಿ ಸಾರಾಯಿ ಸಿಕ್ಕುವುದು ತಪ್ಪಿದ್ದಕ್ಕೆ ಮಹಿಳೆಯರೂ ಸಂತಸಗೊಂಡರು. ಅಂತಿಮವಾಗಿ ಬಂದ ಈ ಫಲಶ್ರುತಿ ನಾನು ಅನುಸರಿಸಿದ ಮಾರ್ಗವನ್ನು ಪುಷ್ಟೀಕರಿಸುವಂತಿದ್ದುದರಿಂದ ಕೈಗೆ ಸಿಕ್ಕ ಯಶಸ್ಸಿನಿಂದ ನಾನು ಕೂಡ ಉಬ್ಬಿಹೋದೆ.

ಇದಾದ ಕೆಲ ದಿನಗಳ ನಂತರ ಒಂದು ದಿನ ನಾನು ನಮ್ಮ ಬುಡಕಟ್ಟು ಶಾಲೆಯಲ್ಲಿ ಒಬ್ಬನೇ ಕುಳಿತು ಕೆಲಸ ಮಾಡುತ್ತಿದ್ದೆ. ಆಗ ಇದ್ದಕ್ಕಿದ್ದಂತೆಯೇ ಒಂದಷ್ಟು ವಾಹನಗಳು ಭರ‌್ರನೆ ಅಲ್ಲಿಗೆ ಬಂದು ನಿಂತವು. ಪಕ್ಕಾ ಬಾಲಿವುಡ್ ಶೈಲಿಯಲ್ಲಿ ತರಾತುರಿಯಲ್ಲಿ ಅದರಿಂದ ಕೆಳಗಿಳಿದ ಯುವಕರು ಶಾಲೆಯ ಒಳಗೆ ಬರಲಾರಂಭಿಸಿದರು.
 
ಅವರಲ್ಲೊಬ್ಬ ನನ್ನ ಹೆಸರನ್ನು ಹಿಡಿದು ಜೋರಾಗಿ ಕೂಗು ಹಾಕಿದ. ಆಗ ಅವರೆಲ್ಲಾ ಅಷ್ಟೊಂದು ಕ್ರುದ್ಧರಾಗಿದ್ದುದು ಯಾಕೆ ಎಂಬುದು ನನಗೆ ತಿಳಿದುಹೋಯಿತು. ಅವರೆಲ್ಲರ ಮುಂದಾಳತ್ವ ವಹಿಸಿದ್ದ ಯುವಕನಿಗೆ ಸುಮಾರು 30 ವರ್ಷ ಇದ್ದಿರಬಹುದು. ತನ್ನನ್ನು ಅಬಕಾರಿ ಗುತ್ತಿಗೆದಾರ ಎಂದು ಪರಿಚಯಿಸಿಕೊಂಡ ಅವನು, ತಾಲ್ಲೂಕಿನಲ್ಲಿ ಪರವಾನಗಿ ಪಡೆದ ಅಂಗಡಿಗಳಿಗೆ ಸಾರಾಯಿ ಮಾರಾಟ ಮಾಡುವ ಹಕ್ಕು ತನಗಿದೆ ಎಂದು ಹೇಳಿಕೊಂಡ.

ಬುಡಕಟ್ಟು ಹಾಡಿಗಳಲ್ಲಿ ನನ್ನ ಜನ ಸಾರಾಯಿ ಮಾರುವುದನ್ನು ತಡೆಯಲು ನೀನ್ಯಾರು ಎಂದು ಕೇಳಿದ. ಆದರೆ ಪರವಾನಗಿ ರಹಿತ ಅಂಗಡಿಗಳ ಮೂಲಕ ಅವನು ಸಾರಾಯಿ ಮಾರುವಂತಿಲ್ಲ ಎಂಬ ನನ್ನ ವಿವರಣೆ ಆ ಗದ್ದಲದಲ್ಲಿ ಅಡಗಿಹೋಯಿತು. ನಮ್ಮ ಮಾತಿನ ಕಾವು ಏರುತ್ತಿದ್ದಂತೆಯೇ ಅವನು ತೀವ್ರ ಉದ್ವೇಗಕ್ಕೆ ಒಳಗಾದ.
 
ದುರುಗುಟ್ಟಿಕೊಂಡು ನನ್ನನ್ನು ನೋಡುತ್ತಾ `ನೋಡು ಈ ಏರಿಯಾದ ಗಾಂಧಿ ಆಗುವ ಪ್ರಯತ್ನ ಮಾಡಬೇಡ, ಅಂತಹ ಗಾಂಧಿಯಂತಾ ಗಾಂಧಿಯನ್ನೇ ಕೊಂದ ದೇಶ ಇದು ಎಂಬುದು ನಿನಗೆ ನೆನಪಿರಲಿ. ಅಷ್ಟಕ್ಕೂ ನೀನು ನಮಗೆ ಲೆಕ್ಕವೇ ಅಲ್ಲ. ನಿಜವಾಗಲೂ ಸಾರಾಯಿ ಮಾರಾಟ ತಡೆಯಬೇಕೆಂಬ ಇಚ್ಛೆ ನಿನಗಿದ್ದರೆ ಅದನ್ನು ಕುಡಿಯದಂತೆ ಮೊದಲು ನಿನ್ನ ಆದಿವಾಸಿಗಳ ಮನಸ್ಸು ಬದಲಿಸು.

ಅದು ಬಿಟ್ಟು ನಾನು ಮಾರಾಟ ಮಾಡದಂತೆ ತಡೆಯುತ್ತಿರುವುದ್ಯಾಕೆ? ಆದಿವಾಸಿಗಳ ಬಗ್ಗೆ ನಿನಗೆ ಕಳಕಳಿ ಇರುವುದು ನಿಜವೇ ಆಗಿದ್ದರೆ ಅಂತಹ ಕೆಲಸ ಮಾಡಲು ನಿನ್ನಿಂದ ಸಾಧ್ಯವಾಗದೇ?~ ಎಂದು ಅಬ್ಬರಿಸಿದ. ಹೀಗೆ ಬೆದರಿಕೆ ಹಾಕಿ ತನ್ನ ಗುಂಪಿನೊಂದಿಗೆ ಅವನು ಬಿರಬಿರನೆ ಹೊರಟುಹೋದ.

ಈ ಘಟನೆಯಿಂದ ನನಗೆ ದಿಗಿಲು ಮತ್ತು ಹೆಮ್ಮೆ ಎರಡೂ ಒಟ್ಟೊಟ್ಟಿಗೇ ಆಯಿತು. ಅವನು ಹಾಕಿದ ಬೆದರಿಕೆಯಿಂದ ದಿಗಿಲಾದರೆ, ಪ್ರಾಣ ಬೆದರಿಕೆ ಹಾಕಿಸಿಕೊಳ್ಳುವಷ್ಟು ದೊಡ್ಡ ಮನುಷ್ಯ ನಾನಾದೆನಲ್ಲಾ ಎಂದು ಹೆಮ್ಮೆಯಾಗಿತ್ತು. ವಾತಾವರಣ ಕೊಂಚ ತಿಳಿಯಾದ ಮೇಲೆ ಅವನು ಹೇಳಿದ ವಿಷಯಗಳ ಬಗ್ಗೆ  ಪರಾಮರ್ಶೆ ಮಾಡಿಕೊಳ್ಳಲು ಆರಂಭಿಸಿದೆ.

ಸಮಾಜ ಸೇವೆಯ ಬಗ್ಗೆ ತೀವ್ರ ಆಸಕ್ತಿಯುಳ್ಳ ನನ್ನಂತಹವನನ್ನು ನಿಷ್ಕ್ರಿಯಗೊಳಿಸಲು ಅಂತಹ ದುಷ್ಟಶಕ್ತಿಗಳಿಗೆ ಅಷ್ಟೇನೂ ಸಮಯ ಬೇಕಾಗದು. ಅದರಿಂದ ಅಂತಿಮವಾಗಿ ನಾನು ಸಾಧಿಸುವುದು ಕೆಲ ನಿಮಿಷಗಳ ಖ್ಯಾತಿ ಮಾತ್ರ. ಅದನ್ನು ಬಿಟ್ಟರೆ ನಾನು ಹೂಡಿದ್ದ ಸಮರದಲ್ಲಿ ನನಗೆ ಸೋಲಂತೂ ಖಚಿತ.

ವಾಸ್ತವದಲ್ಲಿ, ಬದುಕುಳಿದು ನಮ್ಮ ಗುರಿ ಸಾಧನೆಗಾಗಿ ಹೋರಾಡುವುದೇ ನಾಯಕತ್ವ. ಆದರೆ ಈ ಕಾರ್ಯವನ್ನು ಏಕಾಂಗಿಯಾಗಿ ಮಾಡಲು ನನಗೆ ಸಾಧ್ಯವಿರಲಿಲ್ಲ. ಅದಕ್ಕಾಗಿ ಮಿತ್ರಕೂಟಗಳನ್ನು ರಚಿಸಿಕೊಂಡು ಇತರ ಸಮಾನ ಮನಸ್ಕರೊಂದಿಗೆ ಕೂಡಿ ಕೆಲಸ ಮಾಡುವುದನ್ನು ಕಲಿಯಲೇಬೇಕಾಗಿತ್ತು.

ಇದರ ಜೊತೆಗೆ ಬೇಡಿಕೆ ಮತ್ತು ಪೂರೈಕೆಯ ಅರ್ಥವನ್ನೂ ನಾನಾಗ ಸರಿಯಾಗಿ ಅರಿತುಕೊಂಡೆ. ಅವನದೇ ಆದ ರೋಷಾವೇಶದ ಧಾಟಿಯಲ್ಲೇ ಮಾರುಕಟ್ಟೆಯ ಒಳನೋಟಗಳ ಮೂಲ ಪಾಠವನ್ನು ಆ ಯುವಕ ನನಗೆ ಕಲಿಸಿಕೊಟ್ಟಿದ್ದ. ಆದಿವಾಸಿಗಳ ನಡವಳಿಕೆಯಲ್ಲೇ ಬದಲಾವಣೆ ತಂದು ಅವರು ಸಾರಾಯಿಯಿಂದ ದೂರ ಇರುವಂತೆ ಮಾಡುವಲ್ಲಿ ನಾನು ಯಶಸ್ಸು ಸಾಧಿಸಿದ್ದೇ ಆದರೆ ಆಗ ಬೇಡಿಕೆ ತಾನೇ ತಾನಾಗಿ ಕುಸಿಯುತ್ತದೆ.
 
ಸರಬರಾಜೂ ತನ್ನಷ್ಟಕ್ಕೇ ನಿಂತು ಮಾರುಕಟ್ಟೆ ಶಕ್ತಿಗಳು ಆ ವೇಳೆಗೆ ಆಕರ್ಷಣೆ ಕಳೆದುಕೊಳ್ಳುತ್ತವೆ. ಆಗ ಪೂರೈಕೆಯೂ ಸ್ಥಗಿತವಾಗುತ್ತದೆ. ಇದು ಸಮಸ್ಯೆಗೆ ಕಾಯಂ ಪರಿಹಾರದಂತೆ ತೋಚಿ, ಈ ನಿಟ್ಟಿನಲ್ಲಿ ನಾನು ಪ್ರಯತ್ನ ಮಾಡಬೇಕೆನಿಸಿತು.

ಆದರೆ ಅಂತಿಮವಾಗಿ ಅದು ಕೂಡ ಫಲ ನೀಡಲಿಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕಾಗುತ್ತದೆ. ನಮ್ಮ ಆದಿವಾಸಿ ಪುರುಷರಲ್ಲಿ ಇಂತಹ ವೈಯಕ್ತಿಕ ಬದಲಾವಣೆಯನ್ನು ತರಲು ಕೊನೆಗೂ ನಮಗೆ ಸಾಧ್ಯವಾಗಲೇ ಇಲ್ಲ. ಇಂದಿಗೂ ಮದ್ಯ ಮಾರಾಟ ಎಂದಿನಂತೆ ಅಲ್ಲಿ ಬಿರುಸಾಗಿ ನಡೆಯುತ್ತಲೇ ಇದೆ.

ಆದರೆ ಹಿಂದಿನ ಘಟನೆಯನ್ನು ನೆನೆಸಿಕೊಂಡಾಗಲೆಲ್ಲಾ ನಾನು ಆ ಕೋಪೋದ್ರಿಕ್ತ ಯುವ ಅಬಕಾರಿ ಗುತ್ತಿಗೆದಾರನಿಗೆ ಮನಸ್ಸಿನಲ್ಲೇ ವಂದಿಸಿಕೊಳ್ಳುತ್ತೇನೆ. ಪ್ರಸ್ತುತ ನಾವು ತೊಡಗಿಕೊಂಡಿರುವ ಭ್ರಷ್ಟಾಚಾರ ವಿರೋಧಿ ಕಾರ್ಯಕ್ಕೆ ಅವನು ತನ್ನದೇ ಆದ ರೀತಿಯಲ್ಲಿ ಅಡಿಗಲ್ಲು ಹಾಕಿ ನನಗೆ ನೆರವಾಗಿದ್ದಾನೆ.
 
ಭ್ರಷ್ಟಾಚಾರ ಸರ್ವವ್ಯಾಪಿ ಆಗಿರುವುದರಿಂದ ನಮ್ಮ ಹೋರಾಟ ಏನಿದ್ದರೂ ಲಂಚ ಕೊಡುವವರತ್ತ ಮತ್ತು ಕೊಡುವ ಮನಸ್ಸು ಹೊಂದಿ ವ್ಯವಸ್ಥೆಯನ್ನು ಹಾಳುಗೆಡವುತ್ತಾ ಇರುವವರತ್ತ ಕೇಂದ್ರೀಕೃತವಾಗಬೇಕು.

ನಾವು ಪ್ರತಿಯೊಬ್ಬರೂ ಪ್ರಾಮಾಣಿಕರಾಗಿದ್ದು ಯಾರೊಬ್ಬರಿಗೂ ಲಂಚ ಕೊಡುವುದಿಲ್ಲ ಎಂದು ಸ್ವಯಂ ಶಪಥ ಮಾಡಿಕೊಂಡರೆ ಆಗ ಸಹಜವಾಗಿಯೇ ಲಂಚ ಪಡೆಯುವವರೂ ಇರುವುದಿಲ್ಲ.
 
ಮೇಲ್ನೋಟಕ್ಕೆ ಇದು ಸರಳವಾದ ಕಾರ್ಯದಂತೆ ಕಂಡರೂ, ನಾವು ಯಾವ ಬದಲಾವಣೆ ಆಗಬೇಕೆಂದು ಬಯಸುತ್ತೇವೆಯೋ ಅದು ಮೊದಲು ನಮ್ಮಿಂದಲೇ ಆಗಬೇಕು ಎಂಬುದು ಗಾಂಧೀಜಿಯವರ ಕನಸೂ ಆಗಿತ್ತು ಅಲ್ಲವೇ?

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT