ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್: ಅಂಕಿಸಂಖ್ಯೆಗಳ ಚಮತ್ಕಾರ ಬೇಡ

Last Updated 28 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 2012-13ನೇ ಸಾಲಿನ ಮುಂಗಡ ಪತ್ರಗಳ ಸಿದ್ಧತೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿವೆ. ದೇಶದ ಅರ್ಥ ವ್ಯವಸ್ಥೆ ಬಗ್ಗೆ ಊಹೆ ಹರಿಬಿಡಲು ಇದು ಸಕಾಲವೂ ಹೌದು.

ಊಹೆ ಎನ್ನುವ ಮಾತು ಸರಿಯೇ ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವಿಸಬಹುದು. ಅದು ನಿಜವೂ ಹೌದು. ಏಕೆಂದರೆ, ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಹಿಂದಿನ ದಿನವಷ್ಟೇ ಆರ್ಥಿಕ ಸಮೀಕ್ಷೆಯ ಫಲಿತಾಂಶ ಪ್ರಕಟಗೊಳ್ಳುತ್ತದೆ. ಹೀಗಾಗಿ ಪ್ರತಿಯೊಂದನ್ನೂ ಊಹಿಸುವುದು ಅನಿವಾರ್ಯ.

ಇತ್ತೀಚಿನ ವರ್ಷಗಳಲ್ಲಿ, ಜನಸಾಮಾನ್ಯರ ಮೇಲೆ ಆಗುವ ಪರಿಣಾಮಗಳ ದೃಷ್ಟಿಯಿಂದ ಕೇಂದ್ರ ಸರ್ಕಾರದ ಮುಂಗಡ ಪತ್ರದ ಮಹತ್ವ ಕಡಿಮೆಯಾಗುತ್ತ ಬಂದಿದೆ. ತೆರಿಗೆ ದರಗಳಲ್ಲಿ ಸಾಮಾನ್ಯವಾಗಿ ಹೆಚ್ಚಳ ಮಾಡುತ್ತಿದ್ದ ಸಂಪ್ರದಾಯವನ್ನು ಬಿಟ್ಟು ಕೊಟ್ಟಿದ್ದರಿಂದ ಬಹುತೇಕ ಜನರಿಗೆ ಬಜೆಟ್ ದಿನ ಹೆಚ್ಚು ಮಹತ್ವದ್ದು ಆಗಿ ಉಳಿದಿಲ್ಲ.

ಆದಾಗ್ಯೂ, ಈ ವರ್ಷ ಇಂತಹ ಧೋರಣೆ ಬದಲಾಗುವ ಸಾಧ್ಯತೆಗಳು ಇವೆ. ಪರೋಕ್ಷ ತೆರಿಗೆಗಳನ್ನು ಹೆಚ್ಚಿಸುವ ಸಾಧ್ಯತೆಗಳು ಕಂಡು ಬರುತ್ತಿವೆ. ಇನ್ನೊಂದು ಮಹತ್ವದ ವಿದ್ಯಮಾನ ಏನೆಂದರೆ, ದೇಶದ ಅರ್ಥ ವ್ಯವಸ್ಥೆಯು 12ನೇ ಪಂಚವಾರ್ಷಿಕ ಯೋಜನಾ ಅವಧಿಗೆ ಪ್ರವೇಶಿಸುತ್ತಿರುವ ಘಟ್ಟ ಇದಾಗಿದೆ.

ಬಜೆಟ್, ತನ್ನ ಒಡಲೊಳಗೆ ಏನೆಲ್ಲಾ ಗುಟ್ಟುಗಳನ್ನು ಇಟ್ಟುಕೊಂಡಿರಲಿ, ಅದಕ್ಕೂ ಮೊದಲು ನಾವು ದೇಶದ ಅರ್ಥ ವ್ಯವಸ್ಥೆಯ ಸದ್ಯದ ಸ್ಥಿತಿಗತಿ ಪರಾಮರ್ಶಿಸಬಹುದು.
ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರ ಶೇ 7ರಷ್ಟು ಸಾಧಾರಣ ಏರಿಕೆ ಕಾಣಲಿದೆ.

ಹಣದುಬ್ಬರವು ನಿಧಾನವಾಗಿ ಕುಸಿಯುತ್ತಿದೆ. ರಫ್ತು ವಹಿವಾಟು ಮಾಂತ್ರಿಕ ಸಂಖ್ಯೆಯಾಗಿರುವ 300 ಶತಕೋಟಿ ಡಾಲರ್‌ನ (15,00,000 ಕೋಟಿ ರೂಪಾಯಿಗಳ) ಗಡಿ ದಾಟುವ ಸಾಧ್ಯತೆಗಳು ನಿಚ್ಚಳವಾಗಿವೆ.
 
ವಿದೇಶಿ ವಿನಿಮಯ ಮೀಸಲು ಕೂಡ ಸ್ಥಿರವಾಗಿದೆ. ರೂಪಾಯಿ ವಿನಿಮಯ ದರವು ಅಮೆರಿಕದ ಡಾಲರ್ ಎದುರು ಪ್ರತಿ ಡಾಲರ್‌ಗೆ ರೂ 50ರಂತೆ ಸ್ಥಿರಗೊಂಡಿದೆ.  ಷೇರುಪೇಟೆಯ ಏರಿಳಿತ  ಮುಂದುವರೆದಿದ್ದರೂ ಚೇತರಿಕೆ ಹಾದಿಯಲ್ಲಿದೆ.

ಬ್ಯಾಂಕ್ ಸಾಲಗಳ ಬಡ್ಡಿ ದರಗಳು ಕಳೆದ ವರ್ಷ 13 ಬಾರಿ ಹೆಚ್ಚಳಗೊಂಡಿರುವುದು, ತೆರಿಗೆ ಸಂಗ್ರಹ ಪ್ರಮಾಣ ಕಡಿಮೆಯಾಗಿರುವುದು. ಇದರಿಂದ ವಿತ್ತೀಯ ಕೊರತೆ ಹೆಚ್ಚಿರುವುದು ಮಾತ್ರ ಕಳವಳಕಾರಿ ಸಂಗತಿಯಾಗಿದೆ.

ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಪರಿಗಣನೆಗೆ ತೆಗೆದುಕೊಂಡರೆ, ಯೂರೋಪ್ ಒಕ್ಕೂಟವು ಎರಡನೇ ಬಾರಿಗೆ ಆರ್ಥಿಕ ಹಿಂಜರಿತಕ್ಕೆ ಒಳಗಾಗುವ ಸಂಭವನೀಯತೆ ಕಂಡು ಬರುತ್ತಿದೆ. ಅಮೆರಿಕದ ಅರ್ಥ ವ್ಯವಸ್ಥೆಯು ಶಕ್ತಿಗುಂದಿದ ರೀತಿಯಲ್ಲಿ ಚೇತರಿಸಿಕೊಳ್ಳುತ್ತಿದೆ. ಹೊಸ ಆರ್ಥಿಕ ಶಕ್ತಿಯಾಗಿರುವ ಚೀನಾದ ಆರ್ಥಿಕ ವೃದ್ಧಿ ದರವೂ ಒಂದಂಕಿ ವೃದ್ಧಿ ಕಾಣುತ್ತಿದೆ.

ಅಣುಶಕ್ತಿ ಅಭಿವೃದ್ಧಿಪಡಿಸುವ ಕಾರ್ಯಕ್ರಮಕ್ಕಾಗಿ ಇಡೀ ವಿಶ್ವವನ್ನೇ ಎದುರು ಹಾಕಿಕೊಂಡಿರುವ ಇರಾನಿನ ದೃಢ ನಿರ್ಧಾರದ ಫಲವಾಗಿ ಕಚ್ಚಾ ತೈಲದ ಬೆಲೆ ಮತ್ತೆ ಏರತೊಡಗಿದೆ. ತೈಲ ಬೆಲೆಯ ಜೊತೆ ಇತರ ಸರಕುಗಳ ಬೆಲೆಗಳೂ ಏರುಗತಿಯಲ್ಲಿ ಇವೆ. ಒಟ್ಟಾರೆಯಾಗಿ ಹೇಳುವುದಾದರೆ, 2011-12ನೇ ಹಣಕಾಸು ವರ್ಷದಲ್ಲಿ ದೇಶಿ ಅರ್ಥ ವ್ಯವಸ್ಥೆಯ ಸಾಧನೆ ತೃಪ್ತಿದಾಯಕವಾಗಿದೆ.

ಇಷ್ಟಕ್ಕೆ ನಾವು ತೃಪ್ತಿಪಡಬಹುದೇ ಎನ್ನುವ ಪ್ರಶ್ನೆಯೂ ಇಲ್ಲಿ ಎದುರಾಗುತ್ತದೆ. ಅಭಿವೃದ್ಧಿಯ ವೇಗವು ಮುಂಬರುವ ದಿನಗಳಲ್ಲಿ ಕುಂಠಿತಗೊಳ್ಳುವುದೇ ಎನ್ನುವ ಭೀತಿಯೂ ಕಾಡುತ್ತಿದೆ. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಸದ್ಯದ ಅಗತ್ಯವಾಗಿದೆ. ಮೇಲಿನ ಎರಡೂ ಪ್ರಶ್ನೆಗಳಿಗೆ ಕ್ರಮವಾಗಿ ಹೌದು ಮತ್ತು ಇಲ್ಲ ಎನ್ನುವ ಉತ್ತರ ಕಂಡುಕೊಳ್ಳಬಹುದು.

ಉತ್ತಮ ಸಾಧನೆ ಮಾಡುವ ಅರ್ಥ ವ್ಯವಸ್ಥೆಯ ಸಾಮರ್ಥ್ಯದ ಬಗ್ಗೆ ನಾವು ಮಾತನಾಡುವಾಗಲೆಲ್ಲ, ನಮ್ಮ ನಾಯಕರಲ್ಲಿ ಗರಿಷ್ಠ ಸಾಧನೆಯ ಕನಸು ಕಾಣುವ ದೂರದೃಷ್ಟಿಯೂ ಇಲ್ಲದಿರುವುದು ಅನುಭವಕ್ಕೆ ಬರುತ್ತದೆ.  ಎಲ್ಲ ಬಗೆಯ ಆರ್ಥಿಕ ಚಟುವಟಿಕೆಗಳಲ್ಲಿ ಸಾಧಾರಣ ಮಟ್ಟದ ಸಾಧನೆಯೇ ವಿಜೃಂಭಿಸುತ್ತಿದ್ದು, ಅಷ್ಟಕ್ಕೆ ಎಲ್ಲರಲ್ಲಿ ಸಂತೃಪ್ತ ಭಾವ ಕಂಡು ಬರುತ್ತಿದೆ.

ದೇಶದ ಅರ್ಥವ್ಯವಸ್ಥೆ ಉದಾರೀಕರಣಗೊಳಿಸಿದ ನಂತರವೇ 1990ರ ದಶಕದಲ್ಲಿ ಬೆಳವಣಿಗೆ ದರ ವೇಗ ಪಡೆಯತೊಡಗಿತು. ಈ ಆರ್ಥಿಕ ವೃದ್ಧಿ ದರದಿಂದ ತಕ್ಷಣಕ್ಕೆ ದೊರೆತ ಫಲಗಳನ್ನು ಸುಲಭವಾಗಿ ಪಡೆದುಕೊಳ್ಳಲಾಯಿತು. ಈ ಬದಲಾವಣೆಯ ವ್ಯಾಪ್ತಿ ಸೀಮಿತವಾಗಿದ್ದರೂ ಅದರ ಫಲಿತಾಂಶ ಮಾತ್ರ ಗಮನಾರ್ಹವಾಗಿತ್ತು. ಇದು ಎಲ್ಲರ ಗಮನ ಸೆಳೆಯಿತು.

ಈ ಹಿಂದಿನ ಸೀಮಿತ ಪ್ರಮಾಣದ ಆರ್ಥಿಕ ವೃದ್ಧಿ ದರ ಈಗ ಕಾಲ ಗರ್ಭದಲ್ಲಿ ಹೂತು ಹೋಗಿದೆ. ನಂತರದ ಕೆಲ ವರ್ಷಗಳಲ್ಲಿ ವೃದ್ಧಿ ದರವು ಎರಡಂಕಿ ತಲುಪಿತು. ಆದರೆ, ಇದೇ ವೇಗವನ್ನು ಕಾಪಾಡಿಕೊಳ್ಳುವಲ್ಲಿ ನಾವು ವಿಫಲರಾದೆವು. ನಾವು ಈಗ ಮತ್ತೆ ಎರಡಂಕಿಯ ಆರ್ಥಿಕ ವೃದ್ಧಿ ದರ ಗುರಿ ಸಾಧಿಸುವತ್ತ ಗಮನ ಕೇಂದ್ರೀಕರಿಸಬೇಕಾಗಿದೆ.

ಆದರೆ, ಇದಕ್ಕೆ ಹಲವಾರು ಅಡಚಣೆಗಳು ಎದುರಾಗಿವೆ. ಅಭಿವೃದ್ಧಿಗೆ ಪೂರಕವಾದ ನೀತಿ ನಿರೂಪಣಾ ಕಾರ್ಯಕ್ರಮಗಳನ್ನು ಜಾರಿಗೆ ತರದಿರುವುದೇ ಪ್ರಮುಖ ಅಡಚಣೆ ಆಗಿದೆ ಎನ್ನುವುದು ನನ್ನ ಖಚಿತ ಅಭಿಪ್ರಾಯ.

ದೇಶಿ ಅರ್ಥ ವ್ಯವಸ್ಥೆಯಲ್ಲಿ ಬೃಹತ್ ಮೂಲ ಸೌಕರ್ಯ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ನಿರೀಕ್ಷೆಗಿಂತ ಹೆಚ್ಚಿನ ವಿಳಂಬ ಕಂಡು ಬರುತ್ತಿದೆ. ಮೂಲ ಸೌಕರ್ಯ ರಂಗದ ಹಲವಾರು ಯೋಜನೆಗಳು ಅರ್ಥವ್ಯವಸ್ಥೆಗೆ ಹೆಚ್ಚು ಪ್ರಯೋಜನಕಾರಿ ಆಗಿರುತ್ತವೆ. ಇವುಗಳನ್ನು ಸಕಾಲಕ್ಕೆ ಪೂರ್ಣಗೊಳಿಸಿದರೆ ಅದರಿಂದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಹೆಚ್ಚಳಗೊಡು ವೃದ್ಧಿ ದರವು ಶೇ 1ರಷ್ಟು ಏರಿಕೆಯಾಗಲು ಬಲ ನೀಡುತ್ತದೆ.

ಬಹುತೇಕ ರಾಜ್ಯಗಳಲ್ಲಿ ಮೂಲ ಸೌಕರ್ಯಗಳು ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಪ್ರಮಾಣದಲ್ಲಿ ಲಭ್ಯ ಇವೆ. ಕೈಗಾರಿಕಾ ಉತ್ಪಾದನೆಗೆ ಅನಿವಾರ್ಯವಾಗಿರುವ ವಿದ್ಯುತ್ ಲಭ್ಯತೆಯಂತೂ ಅನೇಕ ರಾಜ್ಯಗಳಲ್ಲಿ ತೀರ ಕಳಪೆ ಪ್ರಮಾಣದಲ್ಲಿ ಇದೆ.

ತಮಿಳುನಾಡಿನಲ್ಲಿ ಕೈಗಾರಿಕೆಗಳ ಬಳಕೆಗೆ  ಸರಾಸರಿ ಶೇ 50ರಷ್ಟು ಮಾತ್ರ ವಿದ್ಯುತ್ ದೊರೆಯುತ್ತಿದೆ. ಇದಕ್ಕೆ ಹೊಸ ವಿದ್ಯುತ್ ಉತ್ಪಾದನಾ ಯೋಜನೆಗಳನ್ನು ಸಕಾಲಕ್ಕೆ ಪೂರ್ಣಗೊಳಿಸದಿರುವುದು ಮತ್ತು ಕಲ್ಲಿದ್ದಲು ದೊರೆಯದಿರುವುದು ಮುಖ್ಯ ಕಾರಣ.

ಗಣಿಗಾರಿಕೆ ಯೋಜನೆಗಳ ವಿಳಂಬವೂ ಇಲ್ಲಿ ಪರಿಗಣನೆಗೆ ಬರುತ್ತದೆ.
ಇಂತಹ ಮೂಲ ಸೌಕರ್ಯ ಯೋಜನೆಗಳ ವೆಚ್ಚವು ಪ್ರತಿ ವರ್ಷ ಶೇ 20ರಷ್ಟು ಹೆಚ್ಚಳಗೊಳ್ಳುತ್ತಲೇ ಇರುತ್ತದೆ. ಈ ಹೆಚ್ಚುವರಿ ಹೊರೆಯನ್ನು ಒಟ್ಟಾರೆ ಅರ್ಥ ವ್ಯವಸ್ಥೆಯೇ ಭರಿಸಬೇಕಾಗುತ್ತದೆ.

ಮೂಲ ಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಚೀನಾದ ಮಾದರಿ ನಮಗೆ ಆದರ್ಶವಾಗಬೇಕು. ಮೂಲ ಸೌಕರ್ಯ ಯೋಜನೆಯೊಂದು ಪೂರ್ಣಗೊಳ್ಳಲು ನಮ್ಮಲ್ಲಿ ತೆಗೆದುಕೊಳ್ಳುವ ಸಮಯದ ಅರ್ಧಕ್ಕಿಂತ ಕಡಿಮೆ ಅವಧಿಯಲ್ಲಿ ಅಲ್ಲಿ ಯೋಜನೆಗಳು ಪೂರ್ಣಗೊಳ್ಳುತ್ತವೆ. ಚೀನಾದಿಂದ ನಾವು ಇಂತಹ ಹಲವಾರು ಪಾಠಗಳನ್ನು ಕಲಿಯಬೇಕಾಗಿದೆ.

ಮೂಲ ಸೌಕರ್ಯಗಳ ಜಾರಿಯಲ್ಲಿ ಚೀನಾ, ವಿಶ್ವದಲ್ಲಿಯೇ ಮುಂಚೂಣಿಯಲ್ಲಿ ಇದೆ. ಆ ದೇಶದ ಆದರ್ಶವನ್ನು ಕೆಲ ಕಾಲ ಬದಿಗೊತ್ತಿ, ನಮ್ಮಲ್ಲಿ ಆರ್ಥಿಕ ನೀತಿ ನಿರೂಪಣೆಯಲ್ಲಿನ ಬದಲಾವಣೆಗಳತ್ತ ಗಮನ ಹರಿಸಿದರೆ, ಅಲ್ಲಿಯೂ ನಿರಾಶೆಯೇ ಎದುರಾಗುತ್ತದೆ. ಇವುಗಳ ಜಾರಿಗೆ ಹೆಚ್ಚಿನ ಚಾಣಾಕ್ಷತೆಯೇನೂ ಬೇಕಾಗಲಾರದು.

ನೇರ ತೆರಿಗೆ ನೀತಿ ಸಂಹಿತೆ (ಡಿಟಿಸಿ), ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿ ಮತ್ತಿತರ ನೀತಿ ನಿರೂಪಣೆಗಳ ಬದಲಾವಣೆಗಳ ಬಗ್ಗೆ  ಕಳೆದ ಕೆಲ ವರ್ಷಗಳಿಂದ ನಾವು ಮಾತನಾಡುತ್ತಲೇ ಇದ್ದೇವೆ.

ಈ ನೀತಿ ನಿರೂಪಣೆಗಳಿಗೆ ತಾತ್ವಿಕ ಅಂತ್ಯ ಕಾಣಿಸಲು ಗಂಭೀರ ಪ್ರಯತ್ನಗಳೇ ಕಂಡು ಬರುವುದಿಲ್ಲ. ಅವುಗಳ ಜಾರಿ ಬಗ್ಗೆ ಸ್ಪಷ್ಟ ಧೋರಣೆ, ಬದ್ಧತೆಗಳೂ ಕಂಡು ಬರುವುದೇ ಇಲ್ಲ. ಎಲ್ಲ ಗೊಂದಲಗಳು ದೂರವಾದ ನಿರ್ಧಾರಗಳೂ ನೆನೆಗುದಿಗೆ ಬಿದ್ದಿವೆ. ಇವು ಅರ್ಥ ವ್ಯವಸ್ಥೆಯ ಸಾಮಾನ್ಯ ಕಾರ್ಯ ನಿರ್ವಹಣೆಗೂ ಅಡಚಣೆ ಸೃಷ್ಟಿಸಿವೆ.

ಎಲ್ಲಕ್ಕಿಂತ ಮುಖ್ಯವಾಗಿ ದುಬಾರಿ ಬಡ್ಡಿ ದರಗಳು ಅರ್ಥ ವ್ಯವಸ್ಥೆಯ ಪ್ರಗತಿಗೆ ತಡೆ ಒಡ್ಡಿವೆ. ನಮ್ಮಲ್ಲಿನ ಬಡ್ಡಿ ದರಗಳು ವಿಶ್ವದಲ್ಲಿಯೇ ಗರಿಷ್ಠ ಮಟ್ಟದಲ್ಲಿ ಇವೆ. ಬಡ್ಡಿ ದರಗಳು ಕಡಿಮೆಯಾದರೆ ಅದರಿಂದ ಗೃಹ ನಿರ್ಮಾಣ, ಮೂಲ ಸೌಕರ್ಯ ಮತ್ತಿತರ ರಂಗಗಳಲ್ಲಿ ಉತ್ಸಾಹ ಗರಿಗೆದರಲಿದೆ.

ಈ ವಲಯದಲ್ಲಿನ ನಿರ್ಮಾಣ ಚಟುವಟಿಕೆಗಳು ಹೆಚ್ಚಿದರೆ ಆರ್ಥಿಕ ವೃದ್ಧಿ ದರಕ್ಕೆ ಖಂಡಿತವಾಗಿಯೂ ಗಮನಾರ್ಹ ಕೊಡುಗೆ ನೀಡಲಿವೆ. ತಯಾರಿಕೆ ಮತ್ತು ಸೇವಾ ವಲಯಗಳು ಇದರಿಂದ ಪ್ರಯೋಜನ ಪಡೆದು, ಹೆಚ್ಚು ಲಾಭ ಗಳಿಸಲಿವೆ. ಗರಿಷ್ಠ ಪ್ರಮಾಣದ ಆದಾಯ ತೆರಿಗೆ ಪಾವತಿಸಲಿವೆ.
 
ಭಾರತೀಯ ರಿಜರ್ವ್ ಬ್ಯಾಂಕ್, ಕೇವಲ ಹಣದುಬ್ಬರ ನಿಗ್ರಹಕ್ಕಷ್ಟೇ ಗಮನ ನೀಡದೆ, ಉತ್ಪಾದನಾ ರಂಗದ ಚಟುವಟಿಕೆ ಉತ್ತೇಜಿಸಲು ಬಡ್ಡಿ ದರಗಳನ್ನು ತಗ್ಗಿಸುವ ಅನಿವಾರ್ಯತೆಯೂ  ಈಗ ಉದ್ಭವಿಸಿದೆ.

ದೇಶದ ಅರ್ಥ ವ್ಯವಸ್ಥೆಯ ಪ್ರಗತಿಯಲ್ಲಿ ರಾಜ್ಯಗಳೂ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಹೆಚ್ಚು ಕ್ರಿಯಾಶೀಲರಾಗಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್, ರಾಜ್ಯದ ಅಭಿವೃದ್ಧಿ ವೇಗವನ್ನು ಶೇ 10ರಿಂದ ಶೇ 14ಕ್ಕೆ ಹೆಚ್ಚಿಸಿದ್ದಾರೆ. ರಾಜ್ಯ ಸರ್ಕಾರ ಕೈಗೊಂಡ ಹಲವಾರು ಉಪಕ್ರಮಗಳಿಂದಾಗಿ ಗುಜರಾತ್ ಕೂಡ ನಿರಂತರವಾಗಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ವೃದ್ಧಿ ದರದ ಹಾದಿಯಲ್ಲಿ ಇದೆ.

ಐದು ವರ್ಷಗಳ ಹಿಂದೆ ಕೈಗೊಂಡಿದ್ದ ಅಧ್ಯಯನದ ಪ್ರಕಾರ, ರಾಜ್ಯ ಸರ್ಕಾರಗಳು ಆರ್ಥಿಕ ಪ್ರಗತಿಗೆ ಪೂರಕವಾಗಿ ಭೂಮಿ ಬಳಕೆಯನ್ನು ಉದಾರೀಕರಣಗೊಳಿಸಿದ ನಂತರ, `ಜಿಡಿಪಿ~ ಬೆಳವಣಿಗೆಯು ಶೇ 1ರಷ್ಟು ಹೆಚ್ಚಳಗೊಂಡಿದೆ. ಸಾರಿಗೆ ವಲಯವು ಈಗಲೂ ರಾಜ್ಯ ಸರ್ಕಾರದ ಅಧಿಕಾರಶಾಹಿ ನಿಯಂತ್ರಣದಲ್ಲಿಯೇ ಇದೆ. ಈ ವಲಯವೊಂದೇ ರಾಜ್ಯದ ಆರ್ಥಿಕ ಬೆಳವಣಿಗೆಯ ಗತಿಯನ್ನೇ ಬದಲಿಸುವ ಗರಿಷ್ಠ ಸಾಮರ್ಥ್ಯ ಹೊಂದಿದೆ.

ಕಾಲದ ಪರೀಕ್ಷೆಯಲ್ಲಿ ಗೆದ್ದು ಬಂದಿರುವ ಈ ಎಲ್ಲ ಆರ್ಥಿಕ  ಧೋರಣೆಗಳು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜಾರಿಯಲ್ಲಿ ಇವೆ. ಈ ದೇಶಗಳ ಸಾಲಿಗೆ ಸೇರ್ಪಡೆಗೊಳ್ಳಲು ಬಯಸುವ ರಾಷ್ಟ್ರಗಳು, ಮೂಲ ಸೌಕರ್ಯ ಯೋಜನೆಗಳನ್ನೆಲ್ಲ ತ್ವರಿತವಾಗಿ ಜಾರಿಗೆ ತರಲು ಹವಣಿಸುತ್ತಿವೆ.

ಹಲವಾರು ಸವಾಲುಗಳ ಮಧ್ಯೆಯೂ ನಮ್ಮ ಅರ್ಥ ವ್ಯವಸ್ಥೆ ಉತ್ತಮ ರೀತಿಯಲ್ಲಿಯೇ ಬೆಳವಣಿಗೆ ಸಾಧಿಸುತ್ತಿರುವುದನ್ನು ಕಂಡು ನಾವು ಅದೆಷ್ಟು ಅದೃಷ್ಟವಂತರು ಎಂದೂ ಭಾವಿಸಬಹುದು.

ಮೂಲ ಸೌಕರ್ಯ ಯೋಜನೆಗಳು  ಮತ್ತು ಆರ್ಥಿಕ ನೀತಿ ನಿರೂಪಣೆಗಳ ತ್ವರಿತ ಜಾರಿಗೆ ನಾವು ಕೂಡ ಆದ್ಯತೆ ನೀಡಿ, ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಎರಡಂಕಿಯ ಆರ್ಥಿಕ ವೃದ್ಧಿ ದರ ಸಾಧ್ಯವಾಗುವುದರಲ್ಲಿ ಅನುಮಾನವೇ ಇಲ್ಲ.

ವಾರ್ಷಿಕ ಬಜೆಟ್ ಮಂಡನೆಯ ಜತೆಯಲ್ಲಿಯೇ ಹಲವಾರು ನೀತಿ ನಿರೂಪಣೆಗಳನ್ನು ಪ್ರಕಟಿಸುತ್ತ ಬರಲಾಗಿದೆ. ಅದೊಂದು ಸಂಪ್ರದಾಯವಾಗಿದೆ. ಈ ಬಾರಿ ಬರೀ ಅಂಕಿ ಸಂಖ್ಯೆಗಳ  ಕಣ್ಕಟ್ಟಿಗಿಂತ, ಆರ್ಥಿಕ ಧೋರಣೆಗಳ ಬಗ್ಗೆ ಹೆಚ್ಚು ಪ್ರಕಟಣೆಗಳನ್ನು ಕೇಳುವ ಸೌಭಾಗ್ಯ ನಮಗೆ ದೊರೆಯಲಿ ಎಂದು ಆಶಿಸೋಣ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavai.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT