ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್ ಸಿದ್ಧಪಡಿಸುತ್ತಿರುವ ಮುಖ್ಯಮಂತ್ರಿಗಳ ಅವಗಾಹನೆಗಾಗಿ...

Last Updated 5 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ಆತ್ಮೀಯ ಮುಖ್ಯಮಂತ್ರಿಯವರೇ,   ಇದು ನೀವು ಮತ್ತು ನಿಮ್ಮ ಸಂಪುಟ ಸಹೋದ್ಯೋಗಿಗಳು ಎಂದಿನಂತೆ ರಾಜ್ಯದ ವಾರ್ಷಿಕ ಬಜೆಟ್‌ಅನ್ನು ತಯಾರಿಸಲು ಬಿಜಿಯಾಗಿರುವ ಸಮಯ.
 
ಬಜೆಟ್ ಸಿದ್ಧಪಡಿಸುವಲ್ಲಿ ಹಲವಾರು ರಾಜಕೀಯ ಒತ್ತಡಗಳು ನಿಮಗೆ ಇರಬಹುದು. ಅದರ ನಡುವೆಯೂ ನೀವು ರಾಜ್ಯದ ಅಭಿವೃದ್ಧಿಯ ಜತೆಗೆ ರಾಜ್ಯವನ್ನು ಯಶಸ್ವಿಯಾಗಿ ಮುನ್ನಡೆಸಲು ಅಗತ್ಯವಾದ ಕಾರ್ಯತಂತ್ರ ದಿಶೆಯ ಬಗ್ಗೆ ಪ್ರಾಮುಖ್ಯ ನೀಡುತ್ತೀರೆಂದು ನಾನು ಖಚಿತವಾಗಿ ನಂಬಿದ್ದೇನೆ. ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸುವ ಪದ್ಧತಿಯನ್ನು ರಾಜ್ಯ ಹುಟ್ಟುಹಾಕಿದ್ದು, ಯುವಜನತೆ ಹಾಗೂ ಆದಿವಾಸಿ ಬುಡಕಟ್ಟು ಜನರಿಗಾಗಿಯೂ ಪ್ರತ್ಯೇಕ ಬಜೆಟ್ ಮಂಡಿಸಬೇಕೆಂಬ ಬೇಡಿಕೆ ಇದೆ.

ಸರ್ಕಾರ ಕೋಟಿ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದ್ದರೂ ಹೂಡುತ್ತಿರುವ ಬಂಡವಾಳಕ್ಕೆ ನಿಗದಿತ ಪ್ರತಿಫಲವನ್ನು ನಾವಿನ್ನೂ ಸಾಧಿಸಿಲ್ಲ ಎಂಬುದು ನೋವಿನ ಸಂಗತಿ. ಅಭಿವೃದ್ಧಿ ಆದ್ಯತೆಗಳು ಹಾಗೂ ಜನರ ನಿಜವಾದ ಅಗತ್ಯಗಳನ್ನು ಆಧರಿಸಿ ನನ್ನ ಕೆಲವು ಚಿಂತನೆಗಳನ್ನು ನಿಮ್ಮ ಗಮನಕ್ಕೆ ತರಬಯಸಿದ್ದು, ಬಜೆಟ್ ಸಿದ್ಧಪಡಿಸುವ ಮಹತ್ವದ ಸಂದರ್ಭದಲ್ಲಿ ಅವನ್ನು ಗಣನೆಗೆ ತೆಗೆದುಕೊಳ್ಳುತ್ತೀರೆಂದು ಭಾವಿಸುತ್ತೇನೆ.

ನಿಮಗೆ ಗೊತ್ತಿರುವಂತೆ ಕನಿಷ್ಠ ಕಾರ್ಯಕ್ರಮ ಯೋಜನೆ (ಎಂಎನ್‌ಪಿ) ಐದನೇ ಪಂಚವಾರ್ಷಿಕ ಯೋಜನೆಯಲ್ಲಿ ಜಾರಿಗೆ ಬಂತು. ಗ್ರಾಮ ಭಾರತದ ಎಲ್ಲ ವರ್ಗಗಳ ಜನರ ಹಾಗೂ ನಗರದ ಬಡಜನತೆಯ ಕನಿಷ್ಠ ಘನತೆಯ ಜೀವನಮಟ್ಟವನ್ನು ಖಾತರಿಗೊಳಿಸಬೇಕಿತ್ತು. ಕೆಲವು ನಿಶ್ಚಿತ ವಸ್ತುಗಳನ್ನು ಕಾಲಮಿತಿಯೊಳಗೆ ಜನ ಕೊಂಡು ಅವನ್ನು ಬಳಸುವಂತಾಗಬೇಕು ಎಂಬುದು ಇದರ ಹಿಂದಿನ ಚಿಂತನೆಯಾಗಿತ್ತು. ಆರ್ಥಿಕ ಮುಗ್ಗಟ್ಟು ಎದುರಾದಾಗ, ಸರ್ಕಾರ ಆತುರಾತುರವಾಗಿ ಸಾಮಾಜಿಕ ಕ್ಷೇತ್ರಕ್ಕೆ ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸಿರುವುದನ್ನೂ ನಾವು ನೋಡಿದ್ದೇವೆ.

ಆರಂಭದಲ್ಲಿ, ಪ್ರಾಥಮಿಕ ಶಿಕ್ಷಣ, ಗ್ರಾಮೀಣ ಆರೋಗ್ಯ, ಗ್ರಾಮೀಣ ನೀರು ಪೂರೈಕೆ, ಗ್ರಾಮೀಣ ವಿದ್ಯುದೀಕರಣ, ಗ್ರಾಮೀಣ ವಸತಿ, ನಗರಗಳ ಕೊಳೆಗೇರಿಗಳ ಸ್ಥಿತಿಯಲ್ಲಿ ಸುಧಾರಣೆ ಹಾಗೂ ಪೌಷ್ಟಿಕತೆಗಳನ್ನು ಕನಿಷ್ಠ ಅಗತ್ಯಗಳೆಂದು ಪಟ್ಟಿ ಮಾಡಲಾಗಿತ್ತು. ನಂತರ ಆರನೇ ಯೋಜನೆಯಲ್ಲಿ ವಯಸ್ಕರ ಶಿಕ್ಷಣವನ್ನು ಅದಕ್ಕೆ ಸೇರಿಸಲಾಯಿತು. ನಂತರದ ಏಳನೇ ಯೋಜನೆಯಲ್ಲಿ ಗ್ರಾಮೀಣ ಇಂಧನ, ಗ್ರಾಮೀಣ ನೈರ್ಮಲ್ಯ ಮತ್ತು ಸಾರ್ವಜನಿಕ ಪಡಿತರ ವ್ಯವಸ್ಥೆ ಸೇರ್ಪಡೆಗೊಂಡವು.

ಯೋಜನೆಗಾರರ ಸದುದ್ದೇಶದ ಹೊರತಾಗಿಯೂ, 11ನೇ ಪಂಚವಾರ್ಷಿಕ ಯೋಜನೆ ಮುಗಿಸುತ್ತಿರುವ ಈ ಸಂದರ್ಭದಲ್ಲೂ ಹತ್ತಾರು ಲಕ್ಷ ಜನಕ್ಕೆ ಕನಿಷ್ಠ ಅಗತ್ಯಗಳನ್ನು ಪಡೆಯುವುದು ದೊಡ್ಡ ಹೋರಾಟವೇ ಆಗಿದೆ. ಯೋಜನೆಗಾರರ ಗುರಿಗಳು ವರ್ಷದಿಂದ ವರ್ಷಕ್ಕೆ, ಯೋಜನೆಯಿಂದ ಯೋಜನೆಗೆ ನಮಗೆ ಮರೀಚಿಕೆಯಾಗುತ್ತಲೇ ಇವೆ.

ಸಾಮಾಜಿಕ ವಲಯಕ್ಕೆ ಸರ್ಕಾರ ಮಾಡುತ್ತಿರುವ ವೆಚ್ಚದ ಬಗ್ಗೆ ನಾನು ನಿಮ್ಮ ಗಮನಸೆಳೆಯಲು ಇಚ್ಛಿಸುತ್ತೇನೆ. 1996ರ ಕೊಥಾರಿ ಆಯೋಗದ ಶಿಫಾರಸಿನ ಪ್ರಕಾರ, ಶಿಕ್ಷಣ ಕ್ಷೇತ್ರಕ್ಕೆ ರಾಜ್ಯದ ಒಟ್ಟು ಉತ್ಪಾದನೆಯ (ಜಿಎಸ್‌ಡಿಪಿ) ಶೇ 6ರಷ್ಟು ನಿಗದಿ ಮಾಡಲಾಗಿದೆ. ಆದರೆ, ಈ ಪ್ರಮುಖ ಕ್ಷೇತ್ರಕ್ಕೆ 2010-11ರಲ್ಲಿ ಸರ್ಕಾರ ಮಾಡಿರುವ ವೆಚ್ಚ ಶೇ 3.8ರಷ್ಟು ಜಿಎಸ್‌ಡಿಪಿ ಮಾತ್ರ. ಹಾಗೆಯೇ, ಆರೋಗ್ಯ ಕ್ಷೇತ್ರಕ್ಕೆ ಶೇ 2ರಷ್ಟು ಜಿಎಸ್‌ಡಿಪಿ ಸಲಹೆ ನೀಡಲಾಗಿದ್ದರೆ, ಸರ್ಕಾರ ಕೇವಲ ಶೇ 0.9 ಜಿಎಸ್‌ಡಿಪಿ ವ್ಯಯಿಸುತ್ತಿದೆ. ರಾಜ್ಯದ ಯೋಜನಾ ಗಾತ್ರ ಹಾಗೂ ವೆಚ್ಚ ವರ್ಷದಿಂದ ವರ್ಷಕ್ಕೆ ಉಬ್ಬುತ್ತಿದ್ದರೂ ಅದು ಪ್ರಮುಖ ಸಾಮಾಜಿಕ ವಲಯಗಳ ಮೇಲಿನ ವೆಚ್ಚದಲ್ಲಿ ಪ್ರತಿಬಿಂಬಿತವಾಗಿಲ್ಲ.

ತನ್ನ ಆರ್ಥಿಕ ಉದ್ದೇಶಗಳನ್ನು ಸಾಧಿಸಲು ಸರ್ಕಾರ ತನ್ನ ಆರ್ಥಿಕ ನೀತಿಯನ್ನು ಪದೇ ಪದೇ ಬದಲಾಯಿಸುವುದೂ ಇದರ ಮೇಲೆ ದುಷ್ಪರಿಣಾಮ ಬೀರಿದೆ. ಈ ಬದಲಾವಣೆಗಳಿಂದಾಗಿ ಕೆಲವು ಸಾಮಾಜಿಕ ವಲಯಗಳಿಗೆ ನೀಡಬೇಕಿದ್ದ ನಿಧಿ ಪ್ರಮಾಣ ಇಳಿದಿದೆ. ಹೀಗೆ ಮನಸೋಇಚ್ಛೆ ಮಾಡುತ್ತಿರುವ ವೆಚ್ಚ ರಾಜ್ಯದ ಮಾನವ ಸಂಪನ್ಮೂಲದ ಮೇಲೆ ಗಂಭೀರ ಪರಿಣಾಮ ಬೀರುತ್ತದೆಂಬುದನ್ನು ನೀವು ಹಾಗೂ ನಿಮ್ಮ ಸಂಪುಟ ಸಹೋದ್ಯೋಗಿಗಳು ಒಪ್ಪುತ್ತೀರೆಂದು ಭಾವಿಸುತ್ತೇನೆ. ರಾಜ್ಯದ ಪ್ರಜೆಗಳ ಜೀವನದ ಗುಣಮಟ್ಟದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

`ಬಡತನ ನಿರ್ಮೂಲನೆ~, `ಸಾಮಾಜಿಕ- ಪ್ರಾದೇಶಿಕ- ಲಿಂಗ ತಾರತಮ್ಯಗಳ ನಿವಾರಣೆಗೆ ಬದ್ಧ~ ಎಂದು ನಿಮ್ಮ ಸರ್ಕಾರ ಪದೇಪದೇ ಹೇಳುತ್ತದೆ. ಬಡತನ ನಿವಾರಣೆಯಲ್ಲಿ ಸರ್ಕಾರ ಸ್ವಲ್ಪಮಟ್ಟಿನ ಸಾಧನೆ ಮಾಡಿರುವುದು ನಿಜ. ಆದರೆ ಸಾಮಾಜಿಕ- ಲಿಂಗ- ಪ್ರಾದೇಶಿಕ ನ್ಯಾಯಗಳ ವಿಷಯದಲ್ಲಿ ಸಾಧನೆ ಮಾಡಲು ನಾವು ಬಹುದೂರ ಕ್ರಮಿಸಬೇಕಾಗಿದೆ. ಪರಿಶಿಷ್ಟ ಜಾತಿ/ವರ್ಗದವರ ಬದುಕು ಸುಧಾರಿಸಲೆಂದು ಸರ್ಕಾರ ತೋರುತ್ತಿರುವ ಬದ್ಧತೆ ಶ್ಲಾಘನೀಯ.

ಆದರೆ, ಯೋಜನಾ ಸಂಪನ್ಮೂಲದ ಶೇ 22.75 ರಷ್ಟನ್ನು ಸ್ಪೆಷಲ್ ಕಾಂಪೊನೆಂಟ್ ಪ್ಲಾನ್ ಮತ್ತು ಬುಡಕಟ್ಟು ಉಪ ಯೋಜನೆಗೆ ಮೀಸಲು ಇಡಬೇಕೆಂದು ರಾಷ್ಟ್ರೀಯ ಯೋಜನಾ ಆಯೋಗ ನಿಗದಿ ಮಾಡಿರುವ ಬಗ್ಗೆ ನಿಮ್ಮ ಗಮನ ಸೆಳೆಯಲು ಬಯಸುತ್ತೇನೆ. ಆದರೆ ರಾಜ್ಯ ಸರ್ಕಾರವು ಇದಕ್ಕಾಗಿ ಶೇ 13.78ರಿಂದ 17.35 ರಷ್ಟು ಹಣವನ್ನು ಮಾತ್ರ ಒದಗಿಸುತ್ತಿದೆ.

ಇಲಾಖಾವಾರು ಅನುದಾನ ಮಂಜೂರು ಮಾಡುವಲ್ಲಿ ಲಿಂಗ ಸಂವೇದನಾಶೀಲತೆಯಲ್ಲೂ ಸ್ಥಿರತೆ ಇಲ್ಲ. ಬಜೆಟ್‌ನ ಜಿಲ್ಲಾವಾರು ವಿಂಗಡಣೆ ಹಾಗೂ ವಿಕೇಂದ್ರೀಕೃತ ಮೇಲ್ವಿಚಾರಣಾ ವ್ಯವಸ್ಥೆಯೂ ಇಲ್ಲ. ಶಿಕ್ಷಣ, ಆರೋಗ್ಯ ಮತ್ತಿತರ ಕ್ಷೇತ್ರಗಳಲ್ಲಿ ರಾಜ್ಯದ ವಿವಿಧ ವಿಭಾಗಗಳ ನಡುವೆ ಇರುವ ಅಂತರ ಕಣ್ಣಿಗೆ ರಾಚುತ್ತದೆ. ವಿಕೇಂದ್ರೀಕೃತ ಆಡಳಿತ ಮತ್ತು ಅಭಿವೃದ್ಧಿಯ ಹರಿಕಾರರೆಂದು ಘೋಷಿಸಿಕೊಳ್ಳುವುದಕ್ಕೂ ವಾಸ್ತವ ಅಂಕಿಅಂಶಗಳಿಗೂ ತಾಳಮೇಳವಿಲ್ಲ.
 
ಜಿಲ್ಲಾವಾರು ಯೋಜನಾ ಅಂದಾಜುಪಟ್ಟಿ (ಔಟ್‌ಲೇ) ವರ್ಷ ಕಳೆದಂತೆ ಕುಗ್ಗುತ್ತಿದೆ. 2000-01ರಲ್ಲಿ ಅದು ಶೇ 20 ಇದ್ದುದು 2010-11ರಲ್ಲಿ ಶೇ 14.4ಕ್ಕೆ ಇಳಿದಿದೆ. ನಮ್ಮಲ್ಲಿ ಜಿಲ್ಲಾವಾರು ಯೋಜನೆಗಳಿಗೆ ಮೇಲ್ವಿಚಾರಣಾ ವ್ಯವಸ್ಥೆ ಇದೆಯಾದರೂ ರಾಜ್ಯ ವಲಯದ ಯೋಜನೆಗಳಿಗೆ ಮೇಲ್ವಿಚಾರಣಾ ವ್ಯವಸ್ಥೆಯೆಂಬುದೇ ಇಲ್ಲ. ವಿಪರ್ಯಾಸವೆಂದರೆ, ಬಹುತೇಕ ಯೋಜನಾ ಅಂದಾಜು ಪಟ್ಟಿಗಳು (ಔಟ್‌ಲೇ) ರಾಜ್ಯ ವಲಯದ ಯೋಜನೆಗಳೇ ಆಗಿವೆ. ಜಿಲ್ಲಾ ಮಟ್ಟದಲ್ಲಿ ಯೋಜನೆಗಳನ್ನು ರೂಪಿಸಬೇಕೆಂಬುದನ್ನು ಇದು ತೋರಿಸುತ್ತದೆ.

ಪ್ರತಿಯೊಂದನ್ನೂ ಪ್ರಮಾಣೀಕರಿಸಬೇಕಾದ ಹಾಗೂ ಉತ್ತರದಾಯತ್ವ ನಿರೀಕ್ಷಿಸುವ ಜಗತ್ತಿನಲ್ಲಿ ನಾವು ಇಂದು ಬದುಕುತ್ತಿದ್ದೇವೆ. ಕಾರ್ಯನಿರ್ವಹಣೆಯ ಮೌಲ್ಯಾಂಕನ ಮಾಡಿ ಉತ್ತರದಾಯತ್ವ ಖಾತರಿಗೊಳಿಸುವುದು ಉತ್ತಮ ಆಡಳಿತದ ಒಂದು ಪ್ರಮುಖ ಸೂಚಕ. ರಾಜ್ಯದಲ್ಲಿ ಸಾಮಾಜಿಕ ಹಾಗೂ ಮಾನವ ಅಭಿವೃದ್ಧಿಗೆ ಪೂರಕವಾಗಿ ಸರ್ಕಾರವು ಲೆಕ್ಕವಿಲ್ಲದಷ್ಟು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ.

ಆದರೆ ಇದರಲ್ಲಿ ಬಹುತೇಕ ಕಾರ್ಯಕ್ರಮಗಳು ಮತ್ತು ಸ್ಕೀಂಗಳನ್ನು ಕಾರ್ಯನಿರ್ವಹಣೆಯ ಕಲ್ಪನೆಯೇ ಇಲ್ಲದೆ ರೂಪಿಸಲಾಗಿದೆ. ಇದರಿಂದ ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಎಂಬುದೇ ಇಲ್ಲವಾಗಿದೆ. ಈ ಬಹುತೇಕ ಸ್ಕೀಂಗಳು ಅವಕಾಶ ವಂಚಿತರ ಪ್ರಮುಖ ಅಗತ್ಯಗಳನ್ನು ಕಡೆಗಣಿಸಿ ಸಾರ್ವಜನಿಕ ಸಂಪತ್ತು ಸೃಷ್ಟಿಸುವ ಬಗ್ಗೆ ಕೇಂದ್ರೀಕರಿಸುತ್ತವೆ.
 
ಸರ್ಕಾರದ ಈ ಉಲ್ಟಾ ಧೋರಣೆಯು ಕಾರ್ಯಕ್ರಮಗಳ ಪರಿಣಾಮವನ್ನು ಸೀಮಿತಗೊಳಿಸುವ ಜತೆಗೆ ರಾಜ್ಯದ ಬಹುತೇಕ ಪ್ರದೇಶದಲ್ಲಿ ತಾರತಮ್ಯ (ಅಂತರ) ಹೆಚ್ಚಿಸಿ ಅದನ್ನೇ ಬೆಳೆಸಿಕೊಂಡು ಬರುತ್ತಿದೆ. ನಮ್ಮ ಸರ್ಕಾರದ ನೀತಿಗಳೂ, ಕಾರ್ಯಕ್ರಮಗಳು, ಪ್ರಾಜೆಕ್ಟ್‌ಗಳು ಮತ್ತು ಸ್ಕೀಂಗಳನ್ನು ಫಲಶ್ರುತಿಯ ಮತ್ತು ಸಂಪನ್ಮೂಲಗಳ ಸಮರ್ಥ ಬಳಕೆಗೆ ಪೂರಕವಾಗುವಂತೆ ಸ್ಟಾಂಡರ್ಡೈಸ್ ಮಾಡುವುದು ಉಪಯೋಗಕರ.

ಕಾರ್ಯನಿರ್ವಹಣೆಯ ಪ್ರಮುಖ ಅಳತೆಗೋಲು ವೆಚ್ಚ ಮಾಡಲಾದ ಹಣದ ಪ್ರಮಾಣವೇ ಆಗಿದೆ. ಸ್ಕೀಂಗಳು, ಕಾರ್ಯಕ್ರಮಗಳ ಹಾಗೂ ಪ್ರಾಜೆಕ್ಟ್‌ಗಳ ಯಶಸ್ಸನ್ನು ಸಾಮಾನ್ಯವಾಗಿ ಅವುಗಳ ಇನ್‌ಪುಟ್‌ಗಳ ಮೇಲೆ ಲೆಕ್ಕಹಾಕಲಾಗುತ್ತದೆ. ಈ ಪದ್ಧತಿಯು ಎಕಾನಮಿ ಆಫ್ ಇನ್‌ಪುಟ್ಸ್‌ಗಳನ್ನು ತೃಪ್ತಿಪಡಿಸುತ್ತದೆ ಹಾಗೂ ಪ್ರಕ್ರಿಯೆ ನಿಯಂತ್ರಣಕ್ಕೆ ಪೂರಕವಾಗಿದೆ. ಆದರೆ ಇದು ಸರ್ಕಾರದ ಕಾರ್ಯಕ್ರಮಗಳ ಫಲಿತಾಂಶವೇನು, ಸಾರ್ವಜನಿಕ ನಿಧಿಯ ಹಂಚಿಕೆಯ ಬಗ್ಗೆ ಇದು ಏನನ್ನೂ ಹೇಳಲು ವಿಫಲವಾಗುತ್ತದೆ.

ನಿಜ ಹೇಳಬೇಕೆಂದರೆ, ಉತ್ತರದಾಯಿತ್ವ ಮತ್ತು ನಿಯಂತ್ರಣಕ್ಕಾಗಿ ಇನ್‌ಪುಟ್ ಮೇಲೆ ಗಮನ ಕೇಂದ್ರೀಕರಿಸುವುದರಿಂದ ನಾಗರಿಕ ಸೇವಾ ಅಧಿಕಾರಿಗಳನ್ನು ವೈಫಲ್ಯಕ್ಕಾಗಿ ಹೊಣೆ ಮಾಡುವುದು ಭಾರಿ ಅಪರೂಪ. ನಿಶ್ಚಿತವಾಗಿಯೂ ಉದ್ದೇಶವು ಆದ್ಯತೆಯನ್ನು ವೆಚ್ಚ, ನಿಗದಿತ ರೂಪುರೇಷೆಯೊಳಗೆ ಕೆಲಸವನ್ನು ಮುಗಿಸುವ ಸಾಂಪ್ರದಾಯಿಕ ರೀತಿಗಿಂತ ಫಲಿತಾಂಶವನ್ನು ನೀಡಬಲ್ಲ ರೂಪುರೇಷೆಯಾಗಿ ಬದಲಾಗಬೇಕು.

ಇದಕ್ಕೆ ಪೂರಕವಾಗಿ ಫಲಿತಾಂಶ ಮತ್ತು ಪರಿಣಾಮಗಳನ್ನು ಲೆಕ್ಕ ಹಾಕುವ ಸಶಕ್ತ ಸೂಚಕಗಳನ್ನು ಸಿದ್ಧಗೊಳಿಸಬೇಕು. ಇದು ಪರಿಶಿಷ್ಟ ಜಾತಿ/ ಪಂಗಡ ಹಾಗೂ ಇತರ ಕೆಳಸ್ತರದ ಸಮುದಾಯಗಳ ಅಭಿವೃದ್ಧಿಯ ಸಂದರ್ಭದಲ್ಲಿ ಇದು ಇನ್ನಷ್ಟು ಪ್ರಮುಖವಾಗುತ್ತದೆ.

ಈ ಸಮುದಾಯದ ಜನರನ್ನು ಆರ್ಥಿಕ ಮುಖ್ಯವಾಹಿನಿಗೆ ಕರೆತರಲಾಗಿದ್ದು ಈ ಪ್ರಕ್ರಿಯೆಯನ್ನು ಸರ್ಕಾರ ಸ್ಥಿರವಾಗಿ ಮುನ್ನಡೆಸಿಕೊಂಡು ಹೋಗುತ್ತದೆಂಬ ಖಾತರಿ ಅವರಿಗೆ ಮೂಡಬೇಕು. ಸರ್ಕಾರದ ನೀತಿಯ ಪ್ರಕಾರ ಕಾರ್ಯಸಾಧನೆಯ ನಿರ್ವಹಣೆಯು ಮುಂಗಡಪತ್ರ ಸಿದ್ಧಪಡಿಸುವಿಕೆ, ಸಚಿವಾಲಯಗಳು, ಇಲಾಖೆಗಳು ಪ್ರಕಟಿಸುವ ವಾರ್ಷಿಕ ವರದಿಗಳು, ಪರ್ಫಾರ್ಮೆನ್ಸ್ ಬಜೆಟ್ ಹಾಗೂ ಔಟ್‌ಕಂ ಬಜೆಟ್‌ನಂತಹ ಸಾಂಪ್ರದಾಯಿಕ ಸಾಧನಗಳನ್ನು ಒಳಗೊಂಡಿರುತ್ತದೆ.
 
ಸಚಿವಾಲಯಗಳು ಮತ್ತು ಇಲಾಖೆಗಳು ನಿಗದಿತ ಅವಧಿಯಲ್ಲಿ ತಮ್ಮ ಕಾರ್ಯಸಾಧನೆ ಅವಲೋಕಿಸುವ ವಿವಿಧ ಮಾದರಿಗಳನ್ನು ಹೊಂದಿವೆ. ಆದರೆ ಇಲಾಖೆಗಳಿಗೆ ತಮ್ಮ ಬಜೆಟ್ ಅನ್ನು ನ್ಯಾಯಸಮ್ಮತ ಹಾಗೂ ಸಮಾನ ಅವಕಾಶ ಇರುವಂತೆ ರೂಪಿಸಬೇಕೆಂಬ ಯಾವ ನಿಯಮವೂ ಇಲ್ಲ.

ಈ ಎಲ್ಲ ಅಂಶಗಳನ್ನೂ ಪರಿಗಣಿಸಿ ಕಾರ್ಯಸಾಧನೆ, ನಿರ್ವಹಣಾ ವ್ಯವಸ್ಥೆಯ ಮೂಲಕ ಕನಿಷ್ಠ ಮಟ್ಟದ ಪ್ರಗತಿಯನ್ನು ಖಾತರಿಗೊಳಿಸುವಂತಹ ಒಂದು ಮಸೂದೆ ಜಾರಿಗೊಳಿಸುವ ಬಗ್ಗೆ ಪರಿಶೀಲಿಸಲು ತಮ್ಮಲ್ಲಿ ಮನವಿ ಮಾಡುತ್ತೇನೆ. ಇದು ಪಾರದರ್ಶಕ, ವಿಕೇಂದ್ರೀಕೃತ ಆಡಳಿತ, ಸಾಮಾಜಿಕ ಮತ್ತು ಲಿಂಗ ಸಮಾನತೆ ಇರುವ ಆಡಳಿತವನ್ನು ಒದಗಿಸುವುದಕ್ಕೆ ಹಾಗೂ ಪ್ರಾದೇಶಿಕ ಅಸಮಾನತೆಯನ್ನು ತೊಡೆದುಹಾಕುವುದಕ್ಕೆ ಪೂರಕವಾಗಿರಬೇಕು. ಈ ಮಸೂದೆಯು ಆರಂಭದಲ್ಲಿ ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ವಸತಿ, ಪೌಷ್ಟಿಕತೆ ಮತ್ತು ಆಹಾರ ಭದ್ರತೆಗೆ ಆದ್ಯತೆ ನೀಡಬಹುದು.
 
ಇಂತಹ ಮಸೂದೆಯು ಆಡಳಿತಾರೂಢ ಸರ್ಕಾರದ ಸಾಮಾಜಿಕ ಆದ್ಯತೆಗಳನ್ನು ಪ್ರತಿಬಿಂಬಿಸುವುದರ ಜೊತೆಗೆ ದಲಿತರು, ಆದಿವಾಸಿಗಳು ಹಾಗೂ ಇತರ ಹಿಂದುಳಿದ ಸಮುದಾಯಗಳ ಸಾಮಾಜಿಕ, ಆರ್ಥಿಕ ಸಂಯೋಜನೆಯನ್ನು ರಾಜಕೀಯವಾಗಿ ಸ್ವೀಕಾರಾರ್ಹ ಮಾರ್ಗದಲ್ಲಿ ಖಾತರಿಗೊಳಿಸುತ್ತದೆ.

ಸರ್ಕಾರದ ಹಲವು ಅಭಿವೃದ್ಧಿಪರ ಯೋಜನೆಗಳು ಮತ್ತು ಕಾರ್ಯಕ್ರಮಗಳು ಯಾರಿಗಾಗಿ ರೂಪಿತವಾಗಿವೆಯೋ ಅವರನ್ನು ತಲುಪುತ್ತವೆಂಬ ಆಶಾಭಾವವನ್ನು ನೀಡುತ್ತದೆ. ಇದು ಆಡಳಿತದಲ್ಲಿ ಪಾರದರ್ಶಕತೆಯನ್ನು ಹಾಗೂ ವಾಸ್ತವ ಸ್ಥಿತಿಯನ್ನು ಆಧರಿಸಿದ ನಿಜವಾದ ಅಳತೆಗೋಲುಗಳನ್ನು ತರಬಲ್ಲದು. ಅಲ್ಲದೆ ಸಾಂದರ್ಭಿಕವಾಗಿ ಸೂಕ್ತ ಹಾಗೂ ಕಾರ್ಯಸಾಧುವಾಗುವಂತಹ ಯೋಜನೆಗಳನ್ನು ಹಾಕಿಕೊಳ್ಳಲು ಅನುವು ಮಾಡಿಕೊಡಬಲ್ಲದು.
 
ಪ್ರಾದೇಶಿಕ ಹಾಗೂ ಲಿಂಗ ತಾರತಮ್ಯಗಳನ್ನು ನಿವಾರಿಸಿ ಕಾರ್ಯಕ್ರಮದ ಅನುಷ್ಠಾನದ ಹೊಣೆಯನ್ನು ಅನುಷ್ಠಾನಾಧಿಕಾರಿಗೆ ವಹಿಸುತ್ತದೆ. ಸಂಪನ್ಮೂಲದ ಅನಗತ್ಯ ಪೋಲನ್ನು ತಡೆಯುತ್ತದೆ. ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸರ್ಕಾರ ನೀತಿ ರೂಪಿಸಲು ತೊಡಕಾಗುವ ರಾಜಕೀಯ ವಿಳಂಬವನ್ನು ತಕ್ಕಮಟ್ಟಿಗೆ ಕಡಿಮೆ ಮಾಡುತ್ತದೆ. ಸಾಮಾಜಿಕ ವಲಯದ ಕಾರ್ಯಕ್ರಮಗಳಿಗೆ ನಿರಪೇಕ್ಷತೆ ಹಾಗೂ ಪ್ರಯೋಗಶೀಲತೆಯನ್ನು ತಂದುಕೊಡುತ್ತದೆ.

ಅಂತಿಮವಾಗಿ ಇದು ತನ್ನೆಲ್ಲಾ ಜನಗಳಿಗೆ ಸಮಾನ ಮತ್ತು ನ್ಯಾಯಯುತ ಅಭಿವೃದ್ಧಿಯನ್ನು ತಲುಪಿಸಬೇಕೆಂಬ ಸರ್ಕಾರದ ಕನಸು ನನಸಾಗಲು ಕಾರಣವಾಗುತ್ತದೆ.
ನಮ್ಮ ರಾಷ್ಟ್ರದ ಯಾವುದೇ ರಾಜ್ಯವು ಇಂತಹ ಮಸೂದೆಯ ಬಗ್ಗೆ ಚಿಂತನೆಯನ್ನೇ ಮಾಡಿಲ್ಲ. ನಿಮ್ಮಂತಹ ಸಾಮಾಜಿಕ ಅಂತಃಕರಣದ ವ್ಯಕ್ತಿಯು ದೂರದೃಷ್ಟಿ, ಪರಿಪಕ್ವ ವ್ಯಕ್ತಿತ್ವ ಪ್ರದರ್ಶಿಸಿ ಈ ವೈಜ್ಞಾನಿಕವಾದ, ಭಿನ್ನ ರೀತಿಯ ಬಜೆಟ್ ಮಂಡಿಸುವ ಮೂಲಕ ರಾಜ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಿರೆಂಬ ನಿರೀಕ್ಷೆ ನಮ್ಮದಾಗಿದೆ.
ವಂದನೆಗಳು.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT