ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡಗು ರಾಜಕಾರಣಕ್ಕೆ ಬೇಡವಾದ ತೆಂಕು ನಕ್ಷತ್ರ

Last Updated 29 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ಭಾರತ ರತ್ನ’ ಸಿ.ರಾಜಗೋಪಾಲಾಚಾರಿ ಅವರನ್ನು ಡಿಸೆಂಬರ್ ತಿಂಗಳಿನಲ್ಲಿ ನೆನಪು ಮಾಡಿಕೊಳ್ಳಲು ಎರಡು ‘ಸರ್ಕಾರಿ ಕಾರಣಗಳು’ ಸಿಗುತ್ತವೆ. ಅವರು ಹುಟ್ಟಿದ್ದು ಡಿಸೆಂಬರ್ 10ರಂದು ಮತ್ತು ತೀರಿಕೊಂಡದ್ದು ಡಿಸೆಂಬರ್ 25ರಂದು. ಆದರೆ ಈ ಎರಡೂ ದಿನ ರಾಜಾಜಿ ಸ್ಮರಣೆ ನಡೆದಂತೆ ಕಾಣಲಿಲ್ಲ.

ಹೋಗಲಿ, ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ವಿದೇಶಾಂಗ ನೀತಿಯಲ್ಲಾಗುತ್ತಿರುವ ಬದಲಾವಣೆ, ಜಾಗತಿಕ ರಾಜಕೀಯದ ಏರುಪೇರು ರಾಜಾಜಿ ಅವರನ್ನು ನೆನಪಿಸಬೇಕಿತ್ತು.

ಈ ಎಲ್ಲ ವಿಷಯಗಳ ಕುರಿತು ಮಾತನಾಡಿದ್ದ ಕೆಲವೇ ರಾಜಕಾರಣಿಗಳಲ್ಲಿ ಅವರೂ ಒಬ್ಬರಾಗಿದ್ದರು. ತಮ್ಮ ಚಿಂತನೆಗಳನ್ನು ಕರಾರುವಾಕ್ಕಾಗಿ ಮಂಡಿಸಿದ್ದರು. ದೇಶ ಮುನ್ನಡೆಯಬೇಕಾದ ದಿಕ್ಕು ಇದು ಎಂದು ಕೈಸನ್ನೆ ಮಾಡಿದ್ದರು. ಆದರೆ ದಿನಗಳು ಉರುಳಿದಂತೆ ಗಾಂಧಿ ತತ್ವಗಳಂತೆಯೇ, ರಾಜಾಜಿ ಚಿಂತನೆಗಳೂ ‘ಹಳತು’ ಎನಿಸಿಕೊಂಡವು.

ಬಾಲ್ಯದಲ್ಲಿ ರಾಜಾಜಿಯ ಪೋಷಕರು ಮಗನ ಜಾತಕವನ್ನು ಜ್ಯೋತಿಷಿಗೆ ತೋರಿಸಿದಾಗ, ‘ನಿಮ್ಮ ಮಗನ ಜಾತಕ ಹಲವು ಯೋಗಗಳ ಸಂಗಮ. ಈತ ರಾಜನಂತೆ ಬದುಕುತ್ತಾನೆ. ಗುರುವಾಗಿ ಮಾರ್ಗದರ್ಶನ ಮಾಡುತ್ತಾನೆ. ಜನ ಆತನನ್ನು ಪ್ರೀತಿಸುವಂತೆಯೇ, ತೆಗಳುವ ಕಾಲವೂ ಬರುತ್ತದೆ.

ಸಿಂಹಾಸನದಲ್ಲಿ ಕೂತು ಮೆರೆದರೂ, ಗುಡಿಸಿಲಿನಲ್ಲಿ ಬಾಳುವ ಯೋಗವೂ ಇದೆ’ ಎಂದು ಭವಿಷ್ಯ ನುಡಿದಿದ್ದರಂತೆ. ಕಾಕತಾಳೀಯವೆಂಬಂತೆ ಈ ಎಲ್ಲವೂ ಸಿ.ಆರ್. ಬದುಕಿನಲ್ಲಿ ಆಯಿತು. ಒಂದು ಕಾಲಘಟ್ಟದಲ್ಲಿ ಯಶಸ್ವಿ ವಕೀಲ, ಮೇಧಾವಿ ರಾಜಕಾರಣಿ ಎಂದು ಕರೆಸಿಕೊಂಡ ವ್ಯಕ್ತಿ, ಬದುಕಿನ ಕೊನೆಯ ಘಟ್ಟದಲ್ಲಿ, ಪ್ರಾಯೋಗಿಕವಲ್ಲದ ವಿಚಾರಗಳನ್ನು ಬಡಬಡಿಸುವ ಮುದುಕ ಎಂದೂ ಕರೆಸಿಕೊಳ್ಳಬೇಕಾಯಿತು.

ಸ್ವತಃ ನೆಹರೂ, ರಾಜಾಜಿ ಕುರಿತು ಆ ಧಾಟಿಯಲ್ಲಿ ಮಾತನಾಡಿದ್ದರು. ಭಾರತದ ಗೌರ್ನರ್ ಜನರಲ್ ಹುದ್ದೆಯಲ್ಲಿ ಕೂತರೂ, ಮದ್ರಾಸಿನ ಮುಖ್ಯಮಂತ್ರಿಯಾಗಿ ರಾಜ್ಯ ಆಳಿದರೂ, ಕೊನೆಗೆ ಪುಟ್ಟ ಮನೆಯೊಂದರಲ್ಲಿ ಓದು ಬರಹ ನೆಚ್ಚಿಕೊಂಡು, ಉಬ್ಬಸ ನೀಗಿಕೊಂಡು ಬದುಕು ದೂಡುವ ಪರಿಸ್ಥಿತಿ ರಾಜಾಜಿ ಅವರಿಗೆ ಬಂತು.

ರಾಜಾಜಿ ಸಂಪ್ರದಾಯವಾದಿ ಮನೆತನದಲ್ಲಿ ಬೆಳೆದರೂ ತಮ್ಮ ತಾರುಣ್ಯದ ದಿನಗಳಲ್ಲಿ ಸಮಾಜ ಸುಧಾರಣೆಗೆ ತೆರೆದುಕೊಂಡವರು. ಗಾಂಧೀಜಿಯ ಸಂಪರ್ಕ ಆಗುವ ಮೊದಲೇ, ಹಲವರ ವಿರೋಧದ ನಡುವೆ ಇಬ್ಬರು ಪಂಚಮರನ್ನು ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು.

1910ರಲ್ಲಿ ಕರ್ನೂಲ್ ಸಮಾವೇಶದಲ್ಲಿ ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಬೇಕು ಎಂದು ಕರೆ ಕೊಟ್ಟಾಗ, ತಮ್ಮ ಸಮುದಾಯದ ತೀವ್ರ ವಿರೋಧ ಎದುರಿಸಬೇಕಾಯಿತು. ಬಾಲ್ಯ ವಿವಾಹ ಕೂಡದು, ವಿಧವಾ ವಿವಾಹ ತಪ್ಪಲ್ಲ ಎಂಬ ಮಾತುಗಳನ್ನು ರಾಜಾಜಿ ಆಡಿದ್ದರು. ಅದಾದ ಹಲವು ವರ್ಷಗಳ ಬಳಿಕ ಗಾಂಧೀಜಿ, ‘ದಿ ಹಿಂದೂ’ ಪತ್ರಿಕೆಯ ಮಾಲೀಕ ಕಸ್ತೂರಿರಂಗನ್ ಅಯ್ಯಂಗಾರ್ ಅವರ ಅತಿಥಿಯಾಗಿ 1919ರಲ್ಲಿ ಮದ್ರಾಸಿಗೆ ಬಂದಾಗ, ರಾಜಾಜಿ ಮತ್ತು ಗಾಂಧೀಜಿ ಮೊದಲ ಬಾರಿಗೆ ಭೇಟಿಯಾದರು.

ರಾಜಾಜಿ ಅವರ ಬೌದ್ಧಿಕ ಸಾಮರ್ಥ್ಯ, ವಿಷಯ ಜ್ಞಾನ, ಸಮಾಜ ಪರಿವರ್ತನೆಯ ತುಡಿತವನ್ನು ಗಾಂಧೀಜಿ ಗುರುತಿಸಿದರು. ಗಾಂಧೀಜಿಯ ಆಪ್ತ ವಲಯದಲ್ಲಿ ರಾಜಾಜಿ ಸೇರಿಹೋದರು. ರಾಜಾಜಿ, ನೆಹರೂ ಮತ್ತು ಪಟೇಲರನ್ನು ಕ್ರಮವಾಗಿ ‘Head, Heart and Hands of Gandhiji’ ಎಂದು ಬಣ್ಣಿಸಲಾಗುತ್ತದೆ.

ಗಾಂಧಿ ಮತ್ತು ರಾಜಾಜಿ ಅವರ ಚಿಂತನೆಗಳಲ್ಲಿ ಸಾಮ್ಯ ಇತ್ತು. ನೆಹರೂರ ಬಗ್ಗೆ ಗಾಂಧೀಜಿಗೆ ಮಮಕಾರ ಇತ್ತು. ಪಟೇಲರ ಕರ್ತೃತ್ವ ಶಕ್ತಿಯ ಬಗ್ಗೆ ಗಾಂಧೀಜಿಗೆ ನಂಬಿಕೆಯಿತ್ತು.

ಗಾಂಧಿ ಸ್ವಾತಂತ್ರ್ಯಾಗ್ರಹದೊಂದಿಗೆ, ಅಷ್ಟೇ ಮಹತ್ವದ್ದು ಎಂದು ಪರಿಗಣಿಸಿದ್ದ ವಿಷಯಗಳು ಮೂರು. ಅಸ್ಪೃಶ್ಯತೆಯ ನಿವಾರಣೆ, ಪಾನ ನಿಷೇಧ, ಹಿಂದೂ-ಮುಸ್ಲಿಮ್ ಸಾಮರಸ್ಯ. ಸಿ.ಆರ್. ನಿಲುವು ಕೂಡ ಅದೇ ಆಗಿತ್ತು. ‘ಹಿಂದೂ- ಮುಸ್ಲಿಂ ಸಂಘರ್ಷ, ಜಾತಿ-ಜಾತಿಗಳ ನಡುವಿನ ವೈಮನಸ್ಯ, ಉತ್ತರ-ದಕ್ಷಿಣ ಭಾರತೀಯ ಎಂಬ ಭೇದ ದೂರವಾಗಿಸುವುದು ನಮ್ಮ ಮೊದಲ ಆದ್ಯತೆಯಾಗಬೇಕು’ ಎಂದು ರಾಜಾಜಿ ಪ್ರತಿಪಾದಿಸಿದ್ದರು.

ಗಾಂಧೀಜಿ 1927ರಲ್ಲಿ ವಿಶ್ರಾಂತಿಗೆಂದು ಬೆಂಗಳೂರಿಗೆ ಬಂದು, ನಂದಿಬೆಟ್ಟ ಮತ್ತು ಕುಮಾರ ಪಾರ್ಕ್ ಎಸ್ಟೇಟ್‌ನಲ್ಲಿ ಮೂರು ತಿಂಗಳು ವಾಸ್ತವ್ಯ ಹೂಡಿದ್ದರು. ಆ ಹೊತ್ತಿಗಾಗಲೇ, ಯಾವುದೇ ವಿಷಯದಲ್ಲಿ ಗಾಂಧೀಜಿ ಮನವೊಲಿಸಬೇಕಾದರೆ ‘ರಾಜಾಜಿ ಮಾರ್ಗ’ ಹಿಡಿಯಬೇಕು ಎನ್ನುವಷ್ಟರ ಮಟ್ಟಿಗೆ ಸಿ.ಆರ್.- ಗಾಂಧೀಜಿ ನಡುವೆ ಸಖ್ಯ ಇತ್ತು.

‘ರಾಜಾಜಿ ನನ್ನ ಏಕೈಕ ವಾರಸುದಾರ’ ಎಂಬ ಮಾತನ್ನೂ ಗಾಂಧೀಜಿ ಆಡಿದ್ದರು. ರಾಜಾಜಿ ಅವರಿಗೆ ಗಾಂಧೀಜಿಯವರಲ್ಲಿ ನಿಷ್ಠೆ ಇತ್ತು, ಆದರೆ ಅತಿನಮ್ರತೆ ತೋರುತ್ತಿರಲಿಲ್ಲ.

ಗಾಂಧೀಜಿಯ ತಪ್ಪು ಹೆಜ್ಜೆಗಳನ್ನು ತಪ್ಪು ಎನ್ನುವ ನಿಷ್ಠುರತೆ ಅವರಲ್ಲಿತ್ತು. ದೇಶದ ಅಖಂಡತೆಗೆ ವಿರುದ್ಧ ದಿಕ್ಕಿನಲ್ಲಿ ಮುಸ್ಲಿಂ ಲೀಗ್ ಹೆಜ್ಜೆ ಇಡುತ್ತಿದೆ ಎಂಬುದು ರಾಜಾಜಿಗೆ ಅರ್ಥವಾಗಿತ್ತು. ‘ಮುಸ್ಲಿಂ ಲೀಗನ್ನು ಕಾಂಗ್ರೆಸ್ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಇಲ್ಲವಾದರೆ ಅದು ನುಂಗಲಾರದ ಬಿಸಿ ತುಪ್ಪವಾಗುತ್ತದೆ’ ಎಂದು ರಾಜಾಜಿ ಎಚ್ಚರಿಸಿದ್ದರು.

ಗಾಂಧೀಜಿ ‘ಭಾರತ ಬಿಟ್ಟು ತೊಲಗಿ’ ಚಳವಳಿಗೆ ಕರೆ ಕೊಟ್ಟಾಗ, ಅದನ್ನು ವಿರೋಧಿಸುವ ಧೈರ್ಯವನ್ನು ರಾಜಾಜಿ ಮಾಡಿದರು. ‘ಕೇವಲ ಘೋಷಣೆಗಳು ಸಮಸ್ಯೆಯನ್ನು ಬಗೆಹರಿಸಲಾರವು. ಘೋಷಣೆಗೆ ಹೆದರಿ ಬ್ರಿಟಿಷರು ಭಾರತ ತೊರೆಯುತ್ತಾರೆ ಎಂದುಕೊಳ್ಳುವುದು ಮೂರ್ಖತನ. ಬ್ರಿಟಿಷರ ಜೊತೆ ಮಾತುಕತೆಗೆ ಮುಂದಾಗಲು ಇದು ಸಕಾಲ.

ಜಾಗತಿಕ ಪರಿಸ್ಥಿತಿಯೂ ಅದಕ್ಕೆ ಪೂರಕವಾಗಿದೆ’ ಎಂದಿದ್ದರು. ‘ಪರ್ಯಾಯ ಆಡಳಿತದ ಮಾದರಿ ಸಿದ್ಧವಾಗದೇ, ಬ್ರಿಟಿಷರು ಒಮ್ಮಿಂದೊಮ್ಮೆ ದೇಶ ತೊರೆದರೆ, ಭಾರತವನ್ನು ಇತರ ವಸಾಹತು ಶಕ್ತಿಗಳು ವಶ ಮಾಡಿಕೊಳ್ಳಬಹುದು’ ಎಂಬ ಆತಂಕ ರಾಜಾಜಿ ಅವರಲ್ಲಿತ್ತು. ಅದಾಗಲೇ ಜಪಾನ್, ‘ಪರ್ಲ್ ಹಾರ್ಬರ್’ ಮೇಲೆ ದಾಳಿ ನಡೆಸಿ, ಬ್ರಿಟಿಷ್ ವಸಾಹತುಗಳತ್ತ ಚಲಿಸುತ್ತಿತ್ತು.

ದಕ್ಷಿಣ ಭಾರತವನ್ನು ಜಪಾನ್ ತೆಕ್ಕೆಗೆ ತೆಗೆದುಕೊಳ್ಳಬಹುದು ಎಂಬ ಭೀತಿಯಿತ್ತು. ಆದರೆ ಗಾಂಧಿ ನಿಲುವನ್ನು ವಿರೋಧಿಸಿದ ಕಾರಣ, ಗಾಂಧಿ ಆಪ್ತ ವಲಯ ರಾಜಾಜಿ ಮೇಲೆ ಸಿಟ್ಟಾಯಿತು. ಕಾಂಗ್ರೆಸ್ಸಿನಿಂದ ರಾಜಾಜಿಯನ್ನು ಹೊರಹಾಕಬೇಕು ಎಂಬ ಮಾತು ಕೇಳಿಬಂತು. ಬಾಂಬೆಯ ಸಾರ್ವಜನಿಕ ಸಭೆಯೊಂದರಲ್ಲಿ ರಾಜಾಜಿಯತ್ತ ಮಸಿ ಎರಚಿದ ಪ್ರಸಂಗ ನಡೆಯಿತು.

ಈ ಟೀಕೆ, ವಿರೋಧ ವೈಯಕ್ತಿಕ ಸ್ತರದಲ್ಲಿ ಗಾಂಧಿ-ರಾಜಾಜಿ ನಡುವಿನ ಬಾಂಧವ್ಯಕ್ಕೆ ಧಕ್ಕೆ ತರಲಿಲ್ಲ. ಆ ಹೊತ್ತಿಗಾಗಲೇ ರಾಜಾಜಿ ಮಗಳು ಲಕ್ಷ್ಮಿ, ಗಾಂಧೀಜಿ ಪುತ್ರ ದೇವದಾಸ್ ಪ್ರೇಮಿಸಿ ಮದುವೆ ಆಗಿದ್ದರಿಂದ ಅವರು ಬೀಗರೂ ಆಗಿದ್ದರು. ಆದರೆ ದಕ್ಷಿಣದ ರಾಜಾಜಿ, ಉತ್ತರದ ಹಿಂದಿ ಭಾಷಿಕರನ್ನು ಪ್ರಭಾವಿಸಲಾರರು ಎಂಬ ಅಭಿಪ್ರಾಯ ಗಾಂಧೀಜಿಯಲ್ಲಿ ಮೂಡಿತ್ತು. ‘ವಾರಸುದಾರಿಕೆ’ಯ ಪ್ರಶ್ನೆ ಪುನರ್‌ಪರಿಶೀಲನೆಗೆ ಒಳಪಟ್ಟಿತು.

ರಾಜಾಜಿ, ಪಟೇಲ್ ಮತ್ತು ನೆಹರೂ ತ್ರಿಕೋನದ ಮೂರು ಬಿಂದುಗಳಂತೆ ಇದ್ದರು. ಮೂವರನ್ನೂ ಗಾಂಧೀಜಿ ಎಂಬ ಅಯಸ್ಕಾಂತ ಶಕ್ತಿ ಹಿಡಿದಿಟ್ಟಿತ್ತು. ಗಾಂಧಿ ಕಾಲಾನಂತರ ಈ ಮೂರು ಬಿಂದುಗಳು ಮೂರು ದಿಕ್ಕಿಗೆ ಚದುರಿದವು. ಪಟೇಲರು ಬಹುಬೇಗ ತೀರಿಕೊಂಡಿದ್ದರಿಂದ, ನೆಹರೂ- ಪಟೇಲ್ ಮಧ್ಯೆ ಬಹಿರಂಗ ಘರ್ಷಣೆಗೆ ಅವಕಾಶವಾಗಲಿಲ್ಲ. ಆದರೆ ನೆಹರೂ-ರಾಜಾಜಿ ಮಧ್ಯೆ ಸಂಘರ್ಷ ಮುಂದುವರೆಯಿತು.

ಗಾಂಧೀಜಿಯ ‘ನೂತನ ವಾರಸುದಾರ’ ನೆಹರೂ, ಪ್ರಧಾನಿ ಹುದ್ದೆ ಅಲಂಕರಿಸಿದರೆ, ರಾಜಾಜಿ ಗೌರ್ನರ್ ಜನರಲ್ ಆಗಿ, ಮಧ್ಯಂತರ ಸರ್ಕಾರದಲ್ಲಿ ಸಚಿವರಾಗಿ, ಬಂಗಾಲದ ರಾಜ್ಯಪಾಲರಾಗಿ ಕೆಲಸ ಮಾಡಿದರು. 1951ರಲ್ಲಿ ಪಟೇಲರ ನಿಧನಾನಂತರ ಗೃಹಖಾತೆ ಹೊಣೆ ರಾಜಾಜಿ ಹೆಗಲಿಗೆ ಬಿತ್ತು. ಸರ್ಕಾರದಲ್ಲಿ ನೆಹರೂ ನಂತರದ ಸ್ಥಾನ ರಾಜಾಜಿ ಅವರಿಗಿತ್ತು. ಆದರೆ ನೆಹರೂರ ಧೋರಣೆಗಳೊಂದಿಗೆ ರಾಜಾಜಿ ತಿಕ್ಕಾಟ ನಡೆದೇ ಇತ್ತು.

ನೆಹರೂರ ‘ಟಿಬೆಟ್ ನೀತಿ’ ಬಗ್ಗೆ ರಾಜಾಜಿಗೆ ಒಮ್ಮತವಿರಲಿಲ್ಲ. ನೆಹರೂ ‘ಹಿಂದಿ ಚೀನಿ ಭಾಯಿ- ಭಾಯಿ’ ಎನ್ನುತ್ತಾ ಮುಂದುವರೆದು, ಕೆಲ ವರ್ಷಗಳಲ್ಲೇ ಅತಿದೊಡ್ಡ ಬೆಲೆ ತೆತ್ತರು. ನೆಹರೂ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎನಿಸಿದಾಗ, ರಾಜಾಜಿ ಬಳಲಿಕೆಯ ಕಾರಣಕೊಟ್ಟು ರಾಜೀನಾಮೆ ನೀಡಿ ಮದ್ರಾಸಿನತ್ತ ನಡೆದರು. ರಾಜಾಜಿ ಮನವೊಲಿಸುವ ಹೊಣೆಯನ್ನು ಮೌಂಟ್ ಬ್ಯಾಟನ್ ಅವರಿಗೆ ಒಪ್ಪಿಸಿ ‘ಬ್ರಿಟನ್ ಹೈ ಕಮಿಷನರ್ ಜವಾಬ್ದಾರಿ’ ಪ್ರಸ್ತಾಪವನ್ನು ನೆಹರೂ ಇಟ್ಟರು.

ರಾಜಾಜಿ ಮೌಂಟ್ ಬ್ಯಾಟನ್ ಅವರಿಗೆ ‘ನನ್ನ ವೃತ್ತಿ ಬದುಕು ಏಳುಬೀಳುಗಳಿಂದ ಕೂಡಿದ್ದರೂ ಗಮನಾರ್ಹವಾಗಿದೆ. ಹಲವು ಹುದ್ದೆಗಳನ್ನು ನಿಭಾಯಿಸಿದ್ದೇನೆ. ಇದೀಗ ಬ್ರಿಟನ್ ಹೈ ಕಮಿಷನರ್ ಹುದ್ದೆಯ ಪ್ರಸ್ತಾಪ ಇಡಲಾಗಿದೆ. ಮುಂದೊಂದು ದಿನ ಯಾವುದೋ ಇಲಾಖೆಯ ಹಿರಿಯ ಕಾರಖೂನನ ಹುದ್ದೆಯನ್ನು ಒಪ್ಪಿಕೊಂಡು ಕಾರ್ಯ ನಿರ್ವಹಿಸಬೇಕೇ?’ ಎಂದು ಖಾರವಾದ ಪತ್ರವನ್ನೇ ಬರೆದರು.

52-54ರ ಅವಧಿಯಲ್ಲಿ ಆದ ಬೆಳವಣಿಗೆಗಳಿಂದ ರಾಜಾಜಿ ಮದ್ರಾಸಿನ ಮುಖ್ಯಮಂತ್ರಿಯಾದರು. ತತ್ವ, ಆದರ್ಶಗಳನ್ನು ಬದಿಗೊತ್ತಿ, ರಾಜಾಜಿ ಅಧಿಕಾರ ರಾಜಕಾರಣಕ್ಕೆ ಅಂಟಿಕೊಂಡರು ಎಂಬ ಮಾತು ಕೇಳಿಬಂದಿತ್ತು.

ಎರಡು ವರ್ಷಗಳ ಅವಧಿಯಲ್ಲಿ, ಪೊಟ್ಟಿ ಶ್ರೀರಾಮುಲು ಅವರ ಪ್ರತ್ಯೇಕ ತೆಲುಗು ರಾಜ್ಯದ ಚಳವಳಿ, ದ್ರಾವಿಡ ಪಕ್ಷಗಳ ವಿರೋಧ, ಕೆ.ಕಾಮರಾಜ್ ಅವರೊಂದಿಗೆ ಮೂಡಿದ ಭಿನ್ನಾಭಿಪ್ರಾಯ, ಪೆರಿಯಾರ್ ಬಂಧನದ ಜೊತೆಗೆ ರಾಜಾಜಿ ಅವರ ಗುಣಸ್ವಭಾವಗಳು ಬದಿಗೆ ಸರಿದು, ಜಾತಿ ಢಾಳಾಗಿ ಕಂಡಿತು. ರಾಜೀನಾಮೆ ನೀಡಬೇಕಾದ ಸಂದರ್ಭ ಸೃಷ್ಟಿಯಾಯಿತು. ಅದು ಅವರನ್ನು ರಾಜಕೀಯ ನಿವೃತ್ತಿಯ ಅಂಚಿಗೆ ದೂಡಿತು.

ಆದರೂ ರಾಜಾಜಿ ಸಮಕಾಲೀನ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುವ ಗುಣ ಬಿಡಲಿಲ್ಲ. ಸರ್ಕಾರದ ಧೋರಣೆಯನ್ನು ಒರೆಗೆ ಹಚ್ಚುವ ಕೆಲಸ ಮಾಡಿದರು. ಮುಕ್ತ ಮಾರುಕಟ್ಟೆ, ಆರ್ಥಿಕ ಬೆಳವಣಿಗೆಗೆ ಸಹಕಾರಿ, ನೆಹರೂ ಪ್ರಣೀತ ‘ಲೈಸೆನ್ಸ್-ರಾಜ್’ ಭ್ರಷ್ಟಾಚಾರಕ್ಕೆ ನಾಂದಿ ಹಾಡುತ್ತದೆ ಎಂದು ಟೀಕಿಸಿದರು.

‘ಸೋವಿಯತ್ ಮಾದರಿ’ ಎನ್ನುತ್ತಾ ನೆಹರೂ ಹೊರಟಾಗ, ‘Wanted: Independent Thinking’ ಎಂದು ಎಚ್ಚರಿಸಿದರು. ಒಕ್ಕೂಟ ವ್ಯವಸ್ಥೆಯ ಭಾಷಾ ನೀತಿ, ಅರ್ಥನೀತಿ, ವಿದೇಶಾಂಗ ನೀತಿ ಕುರಿತು ಸಾಕಷ್ಟು ಲೇಖನಗಳನ್ನು ಬರೆದರು.

‘ಕೇವಲ ಕೈಗಾರಿಕೀಕರಣದಿಂದ ಭಾರತದ ಪ್ರಗತಿ ಸಾಧ್ಯವಿಲ್ಲ. ಜನರನ್ನು ಉದ್ಯಮಶೀಲರನ್ನಾಗಿಸಬೇಕು. ದೊಡ್ಡ ಅಣೆಕಟ್ಟುಗಳನ್ನು ಕಟ್ಟುವುದು ಸರಿಯೆ. ಆದರೆ ಚಿಕ್ಕ ಪುಟ್ಟ ಯೋಜನೆಗಳಿಗೂ ಮಹತ್ವ ಸಿಗಬೇಕು’ ಎಂಬ ಸಲಹೆ ಇತ್ತರು. ಚುನಾವಣಾ ಸುಧಾರಣೆ, ಸಣ್ಣ ಕಾರುಗಳ ಉತ್ಪಾದನೆ ಬಗ್ಗೆಯೂ ರಾಜಾಜಿ ಮಾತನಾಡಿದ್ದರು. ಈ ಸಲಹೆಗಳನ್ನು ನೆಹರೂ ‘He likes the Old Testament. I like the New Testament’ ಎಂದು ಒಂದೇ ಮಾತಿನಲ್ಲಿ ಪಕ್ಕಕ್ಕೆ ಸರಿಸಿಬಿಟ್ಟರು.

ನಂತರ ರಾಜಾಜಿ, ಅಣ್ವಸ್ತ್ರದ ಅಪಾಯಗಳ ಕುರಿತು ಹೆಚ್ಚು ಮಾತನಾಡಿದರು. 1962ರಲ್ಲಿ ‘ಗಾಂಧಿ ಶಾಂತಿ ಪ್ರತಿಷ್ಠಾನ’ದ ಮೂಲಕ, ಆರ್.ಆರ್.ದಿವಾಕರ್ ಮತ್ತು ಬೆನಗಲ್ ಶಿವರಾವ್ ಜೊತೆಗೂಡಿ ಅಮೆರಿಕಕ್ಕೆ ತೆರಳಿದರು. ಅದಾಗ ರಾಜಾಜಿ ಅವರಿಗೆ 83 ವರ್ಷ! ಅಮೆರಿಕದ ಅಧ್ಯಕ್ಷ ಕೆನಡಿ ಅವರೊಂದಿಗೆ ಮಾತುಕತೆ ನಡೆಸಿದರು.

ಪತ್ರಕರ್ತರೂ ಆಗಿದ್ದ ಬಿ.ಶಿವರಾವ್ ಆ ಭೇಟಿಯ ಬಗ್ಗೆ ಬರೆಯುತ್ತಾ ‘ಕೆನಡಿ ಅವರ ಭೇಟಿ 25 ನಿಮಿಷಗಳಷ್ಟೇ ನಿಗದಿಯಾಗಿತ್ತು. ಆದರೆ ಒಂದು ತಾಸಿಗೂ ಹೆಚ್ಚು ವಿಸ್ತರಿಸಿತು. ಕೆನಡಿ ಅವರ ಕಾರ್ಯದರ್ಶಿ ಸಮಯವಾಯಿತು ಎಂದು ಹೇಳಲು ಪದೇ ಪದೇ ಬಂದರು. ಆದರೆ ಕೆನಡಿ ಅದನ್ನು ಉಪೇಕ್ಷಿಸಿ ರಾಜಾಜಿ ಮಾತಿಗೆ ಕಿವಿಯಾದರು’ ಎಂಬುದನ್ನು ಉಲ್ಲೇಖಿಸಿದ್ದಾರೆ. ನಂತರ ರಾಜಾಜಿ ಬದುಕು, ಓದು ಬರಹಗಳಿಗೆ ಸೀಮಿತವಾಯಿತು.

ಒಟ್ಟಾರೆಯಾಗಿ ಹೇಳುವುದಾದರೆ, ರಾಜಾಜಿಯವರಲ್ಲಿ ಎಡ ತತ್ವಗಳ ಆವೇಶ ಇರಲಿಲ್ಲ. ಸಂಪ್ರದಾಯವಾದಿಗಳಂತೆ ಅವರು ಬಿಗಿಮುಷ್ಟಿ ಹಿಡಿದವರಲ್ಲ. ಗಾಂಧೀಜಿಯಂತೆ ಅಧ್ಯಾತ್ಮದ ಚಕ್ಷುಗಳಿಂದಲೇ ಜಗತ್ತನ್ನು ನೋಡಲು ಯತ್ನಿಸಿದರು. ಹಿಂದೂ ಸ್ಮೃತಿ ಗ್ರಂಥಗಳ ಅನುವಾದ, ವ್ಯಾಖ್ಯಾನಗಳಲ್ಲಿ ಸಮಯ ವ್ಯಯಿಸಿದರು. ಗಾಂಧೀಜಿಯವರ ದೈಹಿಕ, ಮಾನಸಿಕ ಕಾಠಿಣ್ಯ ರಾಜಾಜಿಗೆ ಸಿದ್ಧಿಸಿರಲಿಲ್ಲ. ಬಾಲ್ಯದಿಂದಲೂ ಅಸ್ತಮಾದಿಂದ ನರಳುತ್ತಿದ್ದ ರಾಜಾಜಿ, ದೈಹಿಕವಾಗಿ ದುರ್ಬಲರಾಗಿದ್ದರು.

ಅಧಿಕಾರ ರಾಜಕಾರಣದಿಂದ ದೂರ ಉಳಿಯುವಷ್ಟು ನಿರ್ಮೋಹಿ ಆಗಿರಲಿಲ್ಲ. ಆದರೆ ಚಾರಿತ್ರ್ಯ ಕೆಡಿಸಿಕೊಳ್ಳಲಿಲ್ಲ. ಗಾಂಧಿ ಸುತ್ತಲಿದ್ದ ಮೂರು ಪ್ರಖರ ಬಿಂದುಗಳಲ್ಲಿ, ನೆಹರೂ ಮತ್ತು ಪಟೇಲರನ್ನು ಭಾರತದ ಎರಡು ಪ್ರಮುಖ ಪಕ್ಷಗಳು ನಂತರವೂ ಹೊತ್ತುಕೊಂಡವು. ಪ್ರತಿಮೆ, ಪ್ರತಿಷ್ಠಾನದ ರೂಪಕೊಟ್ಟವು. ಆದರೆ ರಾಜಾಜಿ ಎಂಬ ‘ದಕ್ಷಿಣ ಭಾರತದ’ ಅನನ್ಯ ವ್ಯಕ್ತಿತ್ವ ಮಾತ್ರ ಯಾರಿಗೂ ಬೇಡವಾಯಿತು.

editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT