ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನದಲ್ಲೂ ಶ್ರೀಮಂತರು ಈ ಹೃದಯವಂತರು

Last Updated 18 ಏಪ್ರಿಲ್ 2011, 19:00 IST
ಅಕ್ಷರ ಗಾತ್ರ

ಬಡತನಕ್ಕೆ ಒಬ್ಬೊಬ್ಬರ ದೃಷ್ಟಿಯಲ್ಲಿ ಒಂದೊಂದು ಅರ್ಥವಿದೆ. ಕೆಲವರಿಗೆ ಬಡತನವೆಂದರೆ ಬರೀ ಹಣದ ಕೊರತೆ; ಇನ್ನು ಕೆಲವರಿಗೆ ಹಣದಿಂದ ಕೊಳ್ಳಲಾಗದ ವಸ್ತುಗಳ ಅಲಭ್ಯತೆ. ವ್ಯಕ್ತಿಯೊಬ್ಬನ ಆದಾಯ ದಿನಕ್ಕೆ ಒಂದು ಡಾಲರ್‌ಗಿಂತಲೂ ಕಡಿಮೆಯಿದ್ದಾಗ ಅದು ಬಡತನ ಎಂದು ವಿಶ್ವಬ್ಯಾಂಕ್ ವ್ಯಾಖ್ಯಾನಿಸುತ್ತದೆ. ಮತ್ತೆ ಕೆಲವರು ದಿನವೊಂದಕ್ಕೆ ನಿಗದಿತ ಕ್ಯಾಲೊರಿಗಿಂತಲೂ ಕಡಿಮೆ ಪ್ರಮಾಣದಲ್ಲಿ ತಿನ್ನುವವರನ್ನು ಬಡವರು ಎನ್ನುತ್ತಾರೆ. ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮವು (ಯುಎನ್‌ಡಿಪಿ) ಈ ಎರಡನ್ನೂ ವಿಸ್ತರಿಸಿ, ಅದಕ್ಕೆ ಇನ್ನಷ್ಟನ್ನು ಸೇರಿಸಿ ಬಡತನದ ಆಯಾಮವನ್ನುಅರ್ಥೈಸುತ್ತದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಇತ್ತೀಚೆಗೆ ಬಡತನಕ್ಕೆ ಬಹು ಆಯಾಮಗಳ ಸೂಚ್ಯಂಕವೊಂದನ್ನು (ಎಂಡಿಐ) ಸಿದ್ಧಪಡಿಸಿದೆ. ನಮ್ಮ ಯೋಜನಾ ಆಯೋಗವೂ ಈ ಕುರಿತ ಚರ್ಚೆಯಲ್ಲಿ ಹಿಂದೆ ಬಿದ್ದಿಲ್ಲ. ಅದು ಸಕ್ಸೇನಾ ಸಮಿತಿ ಆಗಿರಬಹುದು ಅಥವಾ ತೆಂಡೂಲ್ಕರ್ ಸಮಿತಿಯೇ ಆಗಿರಬಹುದು. ರಾಷ್ಟ್ರೀಯ ಅನ್ವಯಿಕ ಅರ್ಥಶಾಸ್ತ್ರ ಸಂಶೋಧನಾ ಮಂಡಳಿಯ ಅರ್ಥಶಾಸ್ತ್ರ ಪರಿಣತರು ಮತ್ತು ಶಿಕ್ಷಣ ತಜ್ಞರು ಸಹ ತಮ್ಮದೇ ನೆಲೆಯಲ್ಲಿ ಬಡತನವನ್ನು ವಿಶ್ಲೇಷಿಸುತ್ತಾರೆ. ಆದರೆ ಇವುಗಳಲ್ಲಿ ಯಾವುದು ಅಧಿಕೃತ, ನಮ್ಮ ಯೋಜಕರು ಮತ್ತು ನೀತಿ ನಿರೂಪಕರಿಗೆ ಯಾವುದು ರಾಜಕೀಯವಾಗಿ ಸಮ್ಮತ ಎಂಬುದು ಮಾತ್ರ ನಮಗೆ ಇನ್ನೂ ಅರ್ಥವೇ ಆಗಿಲ್ಲ.

ಹಾಗಿದ್ದರೆ ಬಡತನವನ್ನು ಯಾವ ರೀತಿ ವಿಶ್ಲೇಷಿಸಬೇಕು? ನಾಳಿನ ಭರವಸೆಯ ಆಶಾಕಿರಣದ ನಿರೀಕ್ಷೆಯಲ್ಲಿ ಬೆವರು ಬಸಿದು ದುಡಿಯುತ್ತಿರುವ ಭಾರತದ ಲಕ್ಷಾಂತರ ಶ್ರಮಿಕರ ದೃಷ್ಟಿಯಲ್ಲಿ ಅದರ ಅರ್ಥ ಏನಾಗಿರಬಹುದು? ಅದು ಬರವಣಿಗೆಯ ರೂಪದಲ್ಲಿರುವ ಈ ಎಲ್ಲ ವ್ಯಾಖ್ಯಾನಗಳನ್ನೂ ಮೀರಿದ್ದೇ? ಇಂತಹ ವ್ಯಾಖ್ಯಾನಗಳ ಬದಲಾವಣೆಯಿಂದೇನಾದರೂ ಈ ಜನರ ಬದುಕು ಬದಲಾಗಬಲ್ಲದೇ?

ಕರ್ನಾಟಕದ ಬುಡಕಟ್ಟು ಮತ್ತು ಕುಗ್ರಾಮಗಳ ಜನರೊಂದಿಗೆ ನೆಲೆಸಿ ಕೆಲಸ ಮಾಡಿದ ಅನುಭವವಿರುವ ನನ್ನನ್ನು ಈ ವಿಷಯ ಸಾಕಷ್ಟು ಬಾರಿ ಕಾಡಿದೆ. ಬಡತನ ಮತ್ತು ಅದರ ಪರಿಣಾಮಗಳ ಬಗ್ಗೆ ನಾನು ಚಿಂತಿಸಿದಷ್ಟು ಪ್ರಮಾಣದಲ್ಲಿ, ನಾವೆಲ್ಲರೂ ಬಡವರೆಂದು ತಿಳಿದುಕೊಂಡಿರುವವರು ಚಿಂತಿಸುವಂತೆ ಕಾಣುವುದಿಲ್ಲ. ಬಡತನವನ್ನು ಹಲವು ಕೋನಗಳಿಂದ ವಿಶ್ಲೇಷಿಸುವ ನಾವು, ಅದನ್ನು ಖುದ್ದಾಗಿ ಅನುಭವಿಸುತ್ತಿರುವವರ ದೃಷ್ಟಿಕೋನದಿಂದ ಎಂದಿಗೂ ನೋಡ ಹೋಗುವುದಿಲ್ಲ. ಇತ್ತೀಚೆಗೆ ನಮ್ಮ ಆಸ್ಪತ್ರೆಯಲ್ಲಿ ನಡೆದ ಘಟನೆಯೊಂದು ಹಲವು ವರ್ಷಗಳಿಂದ ಬಡತನದ ಬಗ್ಗೆ ನನ್ನಲ್ಲಿದ್ದ ನಂಬಿಕೆಯ ಬುಡವನ್ನೇ ಅಲುಗಾಡಿಸಿತು.

ಕೆಲ ವರ್ಷಗಳ ಹಿಂದೆ ನನಗೆ ಪರಿಚಯವಾದ ಕುಮಾರ ಜೇನುಕುರುಬ ಪಂಗಡಕ್ಕೆ ಸೇರಿದವನು. ಆತ ನಾಚಿಕೆ ಮತ್ತು ಸೌಮ್ಯ ಸ್ವಭಾವದ ವ್ಯಕ್ತಿ. ಯುವಜನರ ಸಭೆಯೊಂದರಲ್ಲಿ ಯಾರ ಕಣ್ಣಿಗೂ ಬೀಳದಂತೆ ಒಂದು ಮೂಲೆಯಲ್ಲಿ ಕುಳಿತುಕೊಂಡಿದ್ದ ಆತ, ಯಾರೋ ಸಭೆಯ ಛಾಯಾಚಿತ್ರ ತೆಗೆಯಲು ಮುಂದಾದಾಗ ಬೆದರಿ ಮೆಲ್ಲಗೆ ಅಲ್ಲಿಂದ ಜಾರಿಕೊಂಡಿದ್ದ.

ವಿಷದ ಗೆಡ್ಡೆ ತಿಂದು ಪ್ರಜ್ಞಾಶೂನ್ಯನಾಗಿದ್ದ ತನ್ನ ಮಾವನಿಗೆ ಚಿಕಿತ್ಸೆ ಕೊಡಿಸಲು ಇತ್ತೀಚೆಗೆ ಅವನು ನಮ್ಮ ಆಸ್ಪತ್ರೆಗೆ ಬಂದಿದ್ದ. ವಿಶೇಷ ಚಿಕಿತ್ಸೆಯ ಅಗತ್ಯ ಇದ್ದುದರಿಂದ ನಾವು ಅವನ ಮಾವನನ್ನು ದೂರದ ಮೈಸೂರಿನ ದೊಡ್ಡಾಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದೆವು. ಇದನ್ನು ಕೇಳಿದ ಕೂಡಲೇ ಕುಮಾರ ದಿಗ್ಭ್ರಾಂತನಾದ. ಯಾಕೆಂದರೆ ಅವನು ಎಂದಿಗೂ ಮೈಸೂರಿನಂತಹ ದೊಡ್ಡ ನಗರವನ್ನು ಕಂಡೇ ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಮಾವನನ್ನು ಕರೆದೊಯ್ಯಲು ಬೇಕಾದ ಹಣವೂ ಅವನ ಬಳಿ ಇರಲಿಲ್ಲ. ಆದರೆ ತೀವ್ರ ಅಸ್ವಸ್ಥನಾದ ಮಾವನನ್ನು ಕರೆದೊಯ್ಯಲೇಬೇಕಾದ ಅನಿವಾರ್ಯವನ್ನು ಬಿಡಿಸಿ ಹೇಳಿದ ಕೆಲ ವೈದ್ಯರು ಅವನ ಸ್ಥಿತಿ ಕಂಡು ಮರುಗಿ ಕೂಡಲೇ ಒಂದು ಸಾವಿರ ರೂಪಾಯಿಯನ್ನು ಸಂಗ್ರಹಿಸಿ ಅವನಿಗೆ ಕೊಟ್ಟರು. ಇದನ್ನು ತೆಗೆದುಕೊಂಡ ಕುಮಾರ ತಕ್ಷಣ ಮೈಸೂರಿಗೆ ಹೊರಟ.

ಕಾಲ ಕ್ರಮೇಣ ಆ ಯುವಕ ನಮ್ಮೆಲ್ಲರ ನೆನಪಿನಿಂದ ಮರೆಯಾದ. ಆದರೆ ಇದ್ದಕ್ಕಿದ್ದಂತೆ ಒಂದು ದಿನ ನಮ್ಮ ಆಸ್ಪತ್ರೆಯಲ್ಲಿ ಪ್ರತ್ಯಕ್ಷನಾದ ಆತ ವೈದ್ಯರ ತಂಡವನ್ನು ಭೇಟಿ ಮಾಡಿ, ಆ ದಿನ ಅವರೆಲ್ಲಾ ಕೊಟ್ಟಿದ್ದ ಹಣ ಹಿಂದಿರುಗಿಸಲು ಬಂದಿರುವುದಾಗಿ ತಿಳಿಸಿದ. ಕುಮಾರನಂತಹ ಸ್ಥಿತಿಯಲ್ಲಿರುವ ವ್ಯಕ್ತಿ ಮುಂದೊಂದು ದಿನ ಹೀಗೆ ಬಂದು ಹಣ ಹಿಂದಿರುಗಿಸಬಹುದು ಎಂಬುದನ್ನು ಊಹಿಸಿಯೇ ಇರದ ಅವರೆಲ್ಲರಿಗೂ ಅತೀವ ಅಚ್ಚರಿಯಾಯಿತು. ತಬ್ಬಿಬ್ಬಾದ ಒಬ್ಬರಂತೂ ಹೀಗೆ ಹಣ ಹಿಂದಿರುಗಿಸುತ್ತಿರುವ ಉದ್ದೇಶವಾದರೂ ಏನು ಎಂದು ಅವನನ್ನು ಕೇಳಿಯೇಬಿಟ್ಟರು.

ಆಗ ಕುಮಾರ ಹೇಳಿದ ಮಾತು- ಈಗ ಆತನ ಮಾವ ಚೇತರಿಸಿಕೊಂಡು ಹಾಡಿಗೆ ಮರಳಿದ್ದಾನೆ. ಇಬ್ಬರೂ ಸಮೀಪದ ಗದ್ದೆ ಕೆಲಸಕ್ಕೆ ದುಡಿಯಲು ಹೋಗುತ್ತಿದ್ದಾರೆ. ಸ್ವಲ್ಪ ಮಟ್ಟಿನ ಹಣ ಸಂಪಾದನೆ ಆಗುತ್ತಿದ್ದಂತೆಯೇ ವೈದ್ಯರು ಕೊಟ್ಟಿದ್ದ ಹಣವನ್ನು ಮರಳಿಸುವ ವಿಚಾರ ಅವನಿಗೆ ಬಂತು. ಏಕೆಂದರೆ ದಿನಾ ಆತನಂತೆಯೇ ನೂರಾರು ಬಡವರು ಆಸ್ಪತ್ರೆಗೆ ಬರುವುದರಿಂದ ಈಗ ಹಣ ಮರಳಿಸಿದರೆ ಮುಂದೊಂದು ದಿನ ತನ್ನಂತೆಯೇ ಕಷ್ಟದಲ್ಲಿರುವವರಿಗೆ ವೈದ್ಯರು ಅದನ್ನು ಕೊಡಲು ಅನುಕೂಲವಾಗುತ್ತದೆ.

ಹೀಗೆ ಹೇಳಿದ ಕುಮಾರನ ಉದ್ದೇಶ ಬರೀ ಹಣ ಹಿಂದಿರುಗಿಸುವುದಷ್ಟೇ ಆಗಿರಲಿಲ್ಲ, ಸಮಾಜದಲ್ಲಿ ತನಗಿಂತಲೂ ಬಡವರಾದವರಿಗೆ ಸಹಾಯ ಮಾಡುವ ಹಂಬಲವೂ ಅದರ ಹಿಂದಿತ್ತು. ಈ ಅಂಶ ನಮ್ಮನ್ನು ಸಾಕಷ್ಟು ಚಿಂತನೆಗೆ ಹಚ್ಚುವಂತಿತ್ತು.

ಈ ಘಟನೆಯಾದ ಬಳಿಕ ಕುಮಾರನ ಬಗೆಗಿದ್ದ ನನ್ನ ಮೆಚ್ಚುಗೆ ಮತ್ತು ಗೌರವ ನೂರ್ಮಡಿಯಾಯಿತು. ಬಡವರಾಗಿದ್ದುಕೊಂಡು ಗೌರವಯುತವಾದ ಬದುಕಿನ ಹುಡುಕಾಟದಲ್ಲಿರುವ ಕುಮಾರನಂತಹ ಜನರಿಗೆ ಸಾಮಾನ್ಯವಾಗಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ನೆರವಿನ ಅಗತ್ಯವಿರುತ್ತದೆ. ಆದರೆ ಕೆಲವೊಮ್ಮೆ ಅವರಿಗೆ ಸಹಾಯ ಮಾಡಲು ಹೊರಡುವ ಧಾವಂತದಲ್ಲಿ ನಾವು ಅವರ ಗೌರವ ಮತ್ತು ಆತ್ಮಾಭಿಮಾನವನ್ನು ಕಿತ್ತುಕೊಂಡುಬಿಡುತ್ತೇವೆ.

ಪೀಠದ ಮೇಲೆ ಕುಳಿತು ‘ಹೇ ಬಡವನೇ ತಗೋ ಈ ಕಾಸು ನಿನಗೆ’ ಎಂದು ಹೇಳುತ್ತಾ ಎಂದಿಗೂ ದಾನ ಮಾಡದಿರಿ ಎಂದು ಶತಮಾನದ ಹಿಂದೆ ಸ್ವಾಮಿ ವಿವೇಕಾನಂದರು ತಮ್ಮ ಶಿಷ್ಯರಿಗೆ ಹೇಳಿದ್ದ ಎಚ್ಚರಿಕೆಯ ಮಾತು ಈ ಸಂದರ್ಭದಲ್ಲಿ ನೆನಪಾಗುತ್ತದೆ. ಸೇವೆ ಮಾಡುವ ಅವಕಾಶವನ್ನು ಬಡವರು ನಮಗೆ ನೀಡಿದ್ದಾರೆ ಎಂದು ತಿಳಿಯಬೇಕು ಎಂಬುದು ವಿವೇಕಾನಂದರ ಇಂಗಿತವಾಗಿತ್ತು.
ಕುಮಾರನಂತಹ ವ್ಯಕ್ತಿಗಳಿಗೆ ಮಾತ್ರ ಬಡತನವನ್ನು ಅರ್ಥ ಮಾಡಿಕೊಳ್ಳಲು ಮತ್ತು ತಮ್ಮ ಪಾಲಿಗೆ ಬಡತನ ಎಂದರೇನು ಎಂಬುದನ್ನು ವ್ಯಾಖ್ಯಾನಿಸಿಕೊಳ್ಳಲು ಸಾಧ್ಯ. ಬಡತನವನ್ನು ನಮ್ಮಂತಹವರು ಹಲವು ಬಗೆಯಲ್ಲಿ ವ್ಯಾಖ್ಯಾನಿಸಬಹುದು.

ಆದರೆ ಕುಮಾರನ ರೀತಿಯಲ್ಲಿ ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಂತಹದೊಂದು ಪ್ರಯತ್ನಕ್ಕೆ ನಾವು ಎಷ್ಟೇ ಕಷ್ಟಪಟ್ಟರೂ ನಮ್ಮ ಮೂಗಿನ ನೇರಕ್ಕೆ ಅದನ್ನು ನೋಡುತ್ತೇವೆ ಮತ್ತು ನಮ್ಮ ಅನುಭವ, ಸಂಕುಚಿತ ದೃಷ್ಟಿಕೋನದ ಮೂಲಕವಷ್ಟೇ ಅದಕ್ಕೆ ಅರ್ಥ ನೀಡುತ್ತಾ ಹೋಗುತ್ತೇವೆ. ಕುಮಾರನಾದರೆ ತನ್ನ ಬಡತನದ ನಿಜವಾದ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದಷ್ಟೇ ಅಲ್ಲ, ಆತನಂತಹವರನ್ನು ತಲುಪಲೂ ನಮಗೆ ನೆರವಾಗಬಲ್ಲ. ಬಡತನವನ್ನು ಸಮರ್ಥವಾಗಿ ನಿಭಾಯಿಸುವುದು ಮಾತ್ರವಲ್ಲದೆ ಅದರಿಂದ ಅವರು ಹೊರಗೆ ಬರುವಂತೆ ನೆರವಾಗಲು ಸಹ ನಮಗೆ ಉತ್ತಮ ಸಂಪರ್ಕ ಸೇತು ಆಗಬಲ್ಲ.

ಬಡವನಾಗಿದ್ದುಕೊಂಡೇ ಶ್ರೀಮಂತವಾಗಿ ಬದುಕುವುದನ್ನು ಕುಮಾರ ಕಲಿತಿದ್ದಾನೆ. ಆದರೆ ಅಭಿವೃದ್ಧಿಯ ನಿರ್ಮಾತೃಗಳಿಗೆ ಮಾತ್ರ ಇಂತಹ ಸೂಕ್ಷ್ಮಗಳು ಅರ್ಥವಾಗುವುದೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT