ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ಮುಚ್ಚುವ ನಗರದ ಬಾಗಿಲು

Last Updated 28 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲ
ಒಡಲ ಬೆಂಕೀಲಿ ಹೆಣ ಬೆಂದೋ/ ಪರಶಿವನೇ
ಬಡವರಿಗೆ ಸಾವ ಕೊಡಬೇಡ.

‘ಕೊಳಚೆ ನಿರ್ಮೂಲನ ಮಂಡಳಿ’. ಬಹು ವರ್ಷಗಳಿಂದ ಆ ಬೋರ್ಡ್ ನೋಡುವಾಗಲೆಲ್ಲ ನಗರದ ಕೊಳಚೆ ಯನ್ನು ನಿರ್ಮೂಲನ ಮಾಡುವ ಇಲಾಖೆ ಯೆಂದೇ ಭಾವಿಸಿದ್ದೆ. ಆದರೆ ಅದು ಕೊಳಚೆ ವಾಸದ (ಸ್ಲಂ) ನಿರ್ಮೂಲನ ಮಂಡಳಿ­­ಯೆಂದು ಅರ್ಥವಾದಾಗ ನಿಜವಾಗಿಯೂ ಮನಸ್ಸಿಗೆ ನೋವಾಯಿತು.

‘ನಿರ್ಮೂಲನ ಅಭಿವೃದ್ಧಿ’ ಮಂಡಳಿ ನಿರ್ಮೂಲನಗೊಳಿಸಿದ ಮೇಲೆ ಅಭಿವೃದ್ಧಿಪಡಿಸುವುದಾದರೂ ಏನನ್ನು? ಕೊಳಚೆವಾಸಿಗಳಿಗಾಗಿ ಮನೆಗಳನ್ನು ಕಟ್ಟಿ ಅದರ ಉದ್ಘಾಟನಾ ಸಂದರ್ಭದಲ್ಲಿ ಮಂತ್ರಿಗಳೊಬ್ಬರು 2020ರ ಹೊತ್ತಿಗೆ ಬೆಂಗಳೂರನ್ನು ಕೊಳಚೆ ಮುಕ್ತ ಪ್ರದೇಶವನ್ನಾಗಿ ಮಾಡಲಾಗುವುದು ಎಂದು ಭಾಷಣ ಮಾಡುತ್ತಾರೆ. ಇದರ ಅರ್ಥವಾದರೂ ಏನು. ಅರ್ಥ ಬಹುಸ್ಪಷ್ಟ. ಸ್ಲಂಗಳೇ ಇಲ್ಲದಂತೆ ಮಾಡುವುದು.

ಕೊಳಚೆ ವಾಸವನ್ನು ನಗರಗಳ ಕಪ್ಪುಚುಕ್ಕಿ, ಕ್ಯಾನ್ಸರ್‌ ಎಂದೆಲ್ಲಾ ವರ್ಣಿಸುವುದಿದೆ. ನಗರ ಗಳಿರುವುದು ಶ್ರೀಮಂತರಿಗೆ ಮಾತ್ರ ಎಂಬ ಭಾವನೆಯಿರುವುದರಿಂದಲೇ ಇಂತಹ ಮಾತು ಗಳು ಬರುತ್ತವೆ. ‘ಸ್ಲಂ ಆ್ಯಕ್‌್ಟ’ ಸಹ ಇದನ್ನೇ ಹೇಳುತ್ತದೆ. ಸ್ಲಂ ವಿಸ್ತರಿಸದಂತೆ ನೋಡಿ ಕೊಳ್ಳುವುದು, ಜನ ವಲಸೆ ಬರದಂತೆ ತಡೆಯುವುದು. ಕ್ಷಮಿಸಿ ‘ಬಡಜನತೆ’ ವಲಸೆ ಬರದಂತೆ ತಡೆಯುವುದು ಅದರ ಉದ್ದೇಶ.

ಹಾಗಾದರೆ ನಗರಗಳು ಯಾರಿಗೆ ಸೇರಿದ್ದು? ‘ಸ್ಲಂ’ ಎಂದರೇನೆಂದು ವಿವರಿಸಿಕೊಳ್ಳುವ ಮೊದಲು ನಗರಗಳೆಂದರೇನೆಂದು ಸ್ಪಷ್ಟಪಡಿಸಿ ಕೊಳ್ಳಬೇಕು. ಕೃಷಿಯನ್ನು ಹೊರತುಪಡಿಸಿ ಉಳಿ ದೆಲ್ಲ ಮಾನವನ ಉತ್ಪಾದನಾ ಚಟುವಟಿಕೆಗಳು ನಡೆಯುವ ಸ್ಥಳ ನಗರವೆನಿಸುತ್ತದೆ. ಅಲ್ಲಿ ಕೈಗಾ ರಿಕೆ, ವ್ಯಾಪಾರ, ಆಡಳಿತ, ಶಿಕ್ಷಣ, ಮನರಂಜನೆ ಹೀಗೆ ಮಾನವ ನಾಗರಿಕನಾದಂತೆ ಬೆಳೆಸಿ ಕೊಳ್ಳುತ್ತಾ ಬಂದ ಎಲ್ಲಾ ಚಟುವಟಿಕೆಗಳಿಗೆ ಅವಕಾಶವನ್ನು ಕಲ್ಪಿಸಿಕೊಳ್ಳಲಾಗುತ್ತದೆ.

ಕೈಗಾರಿಕೆಗಳೆಂದಾಗ ಅಲ್ಲಿ ಬಂಡವಾಳ ಗಾರರು, ಬೌದ್ಧಿಕ ವರ್ಗವಲ್ಲದೆ ದುಡಿಯುವ ಕಾರ್ಮಿಕರೂ ಇರಲೇಬೇಕು. ದುಡಿಮೆಗೆ ತಕ್ಕಹಾಗೆ ಒಳ್ಳೆ ಸಂಬಳ ಸಿಗುವುದೇ ಆದರೆ ಅವರು ಉತ್ತಮ ವಸತಿಯಲ್ಲೇ ಬದುಕನ್ನು ಸಾಗಿಸುತ್ತಾರೆ. ನಗರವೆಂದರೇ ಜನ ಒಂದು ಕಡೆ ಒತ್ತೊತ್ತಾಗಿ ಬದುಕುವುದು ಅನಿವಾರ್ಯ ವಾಗಿದೆ. ಹಾಗಾಗಿ ಕಿರಿದಾದ ಜಾಗಗಳಲ್ಲಿ ವಸತಿ ಯನ್ನು ರೂಪಿಸಿಕೊಳ್ಳತೊಡಗಿದರೆ ಜನಜಂಗುಳಿ ಹೆಚ್ಚಾಗುತ್ತದೆ.

ಹೆಚ್ಚಿದ ಜನಸಂಖ್ಯೆಗೆ ಮೂಲ ಭೂತ ಸೌಕರ್ಯಗಳನ್ನು ಒದಗಿಸುವ ಜವಾ ಬ್ದಾರಿಯನ್ನು ಹೊರುವವರು ಯಾರು? ಬಂಡವಾಳಗಾರರೇ, ಸರ್ಕಾರವೇ? ದುಡಿಯುವ ವರ್ಗಕ್ಕೆ ಬೇಡಿಕೆಯಿದ್ದರೆ ಬಂಡವಾಳಗಾರರೇ ಮುಂದಾಗಿ ಅವರ ಬದುಕಿಗೆ ಅನುಕೂಲ ಮಾಡಲು ಮುಂದಾಗುತ್ತಾರೆ. ಮೂರು ಸಾವಿರ ರೂಪಾಯಿಗೆ ತಿಂಗಳೆಲ್ಲಾ ದುಡಿಯಲು ಗಾರ್ಮೆಂಟ್‌ ಕೆಲಸಗಾರರು, ಯೂನಿಫಾರ್ಮು ಹಾಕಿ ಸಲಾಮು ಹೊಡೆಯುವ ಸೆಕ್ಯೂರಿಟಿ, ಮಾಲ್‌ಗಳಲ್ಲಿ ದುಡಿಯಲು ಸೇಲ್‌್ಸ ಹುಡುಗ ಹುಡುಗಿಯರು ಸಿದ್ಧವಾಗಿರುವಾಗ ಅವರ ಬದುಕಿನ ಮೇಲ್ವಿಚಾರಣೆಯನ್ನು ಯಾವ ಬಂಡ ವಾಳಗಾರನೂ ತೆಗೆದುಕೊಳ್ಳುವುದಿಲ್ಲ. ಅದನ್ನು ಸಾಮಾಜಿಕ ಜವಾಬ್ದಾರಿಯಾಗಿ ನೋಡಬೇಕಾ ದುದು ಪ್ರಜಾ ಸರ್ಕಾರದ ಜವಾಬ್ದಾರಿ.

ಯೋಜಿತ ನಗರಗಳನ್ನು ರೂಪಿಸುವಾಗಲೂ ಆ ಎಲ್ಲಾ ಯೋಜನೆಗಳು ರೂಪಿತವಾಗುವುದು ಉಳ್ಳವರಿಗೆ ಮಾತ್ರ. ಬಡಾವಣೆಗಳನ್ನು ನಿರ್ಮಿಸುವುದು ಮೇಲ್ವರ್ಗ ಹಾಗೂ ಸಂಬಳ ಪಡೆಯುವ ಮಧ್ಯಮ ವರ್ಗಕ್ಕೆ ಹೊರತು ಕೂಲಿ ಮಾಡುವ ಬಡವರಿಗಲ್ಲ. ಅಂತಹ ಮಹತ್ವದ ಯೋಜನೆಗಳೇನಾದರೂ ರೂಪಿತವಾದರೂ ಕೆಲವೇ ವರ್ಷಗಳಲ್ಲಿ ಆ ನಿವೇಶನಗಳನ್ನು ಮಾರಿಕೊಳ್ಳುವ ಸ್ಥಿತಿಗೆ ಬಡತನ ತಳ್ಳುತ್ತದೆ. ಕಡೆಗೂ ಬಡವರು ಊರ ಹೊರಗೆ ಜಾಗ ಹುಡುಕಿಕೊಳ್ಳಬೇಕು.

ಅಬ್ಬರದಲ್ಲಿ ಕೈಚಾಚುವ ನಗರ ಯಾವ ಮುಲಾಜು ಇಲ್ಲದೆ ಮಗ್ಗುಲಲ್ಲಿರುವ ಹಳ್ಳಿಗಳನ್ನೆಲ್ಲಾ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಶತಮಾನಗಳಿಂದ ಬದುಕಿದ ಮೂಲನಿವಾಸಿಗಳು ಭೂಮಿ ಕಳೆದುಕೊಂಡು, ಭೂಹೀನರಾಗಿ ‘ಸ್ಲಂ’ ಆಗಿ ರೂಪಾಂತರಗೊಳ್ಳುವ ಹಳ್ಳಿಯಲ್ಲಿ ಬದುಕು ಮುಂದುವರೆಸುತ್ತಾರೆ. ಭೂಮಿ ಕಸಿದುಕೊಂಡ ಜನರ ಮನೆಗಳು ಬೆಳೆದಂತೆ ನಗರದ ಮೂಲನಿವಾಸಿಗಳು ನೆಲಕಚ್ಚುತ್ತಾರೆ. ಆ ಹಳ್ಳಿಗೆ ನಗರದ ಸ್ವರೂಪ ಬರುವ ಹೊತ್ತಿಗೆ ಆ ಹಳ್ಳಿಯ ಜನ ‘ಸ್ಲಂ’ವಾಸಿಗಳೆಂಬ ಹೊಸ ‘ಶಿರೋನಾಮೆ’ ಹೊತ್ತು ಸಿಂಗರಿಸಿಕೊಂಡ ನಗರಕ್ಕೆ ಬೇಡದವರಾಗುತ್ತಾರೆ. ಆ ನೆಲದ ಭಾಷೆ, ಸಂಸ್ಕೃತಿಯು ಕುಟುಕು ಜೀವ ಹಿಡಿದು ಉಸಿರುಗಟ್ಟಿ ಸಾಯಲೂ ಆಗದೆ ಬದುಕಲೂ ಆಗದೆ ತನ್ನ ಕೊನೆ ಗಳಿಗೆಗಾಗಿ ಕಾಯುತ್ತದೆ.

ದಿನವೂ ನಗರದ ಕೊಳಚೆ ತೆಗೆಯುವ ಜನರ ಬದುಕು ಮಾತ್ರ ಕೊಳಗೇರಿಯಲ್ಲೇ, ಇಕ್ಕಟ್ಟಾದ ಜಾಗದಲ್ಲಿ ಮೂಲ ಸೌಕರ್ಯಗಳಿಲ್ಲದೆ ನೀರು, ಬೆಳಕು, ಒಲೆ ಉರಿಸುವ ಬೆಂಕಿಗಾಗಿ ದಿನಾ ಪರದಾಡಬೇಕು. ಒಳ್ಳೆ ಗಾಳಿ, ಒಳ್ಳೆ ನೀರು ಅದನ್ನು ಮಾತನಾಡುವುದೂ ದುಬಾರಿಯೇ. ಆಗಾಗ್ಗೆ ಬರುವ ರಾಜಕಾರಣಿಗಳು ಭರವಸೆ ಗಳನ್ನು ಕೊಟ್ಟು ಹೋಗುತ್ತಾರೆ. ನಿರಂತರವಾಗಿ ಅದೇ ಜಾಗದಲ್ಲಿ ಬದುಕಿದ್ದ ಅವರ ಬಾಗಿಲು ಗಳಿಗೂ ಸಂಖ್ಯೆಯೊಂದನ್ನು ನೀಡಿ ಮನೆ ಎಂತಲೋ ಜೋಪಡಿ ಎಂತಲೋ ಗುರುತಿಸಿದ್ದರೆ ಬಿ.ಪಿ.ಎಲ್‌. ಕಾರ್ಡ್ ದೊರೆಯುತ್ತದೆ. ಅದ ರೊಳಗೂ ಹೊಂದಿಸಿಕೊಂಡ ಹಳೆಯ ಟಿವಿ ಇದ್ದರೆ, ಸೈಕಲ್‌ ಇದ್ದರೆ, ಸಿಗುವ ಅಕ್ಕಿಗೂ ಕಲ್ಲು ಬೀಳುತ್ತದೆ.

ಸ್ಲಂವಾಸಿ ಮಹಿಳೆಯೊಬ್ಬರು ಹೇಳಿದ ಮಾತುಗಳಿವು. ಗರ್ಭಿಣಿಯೊಬ್ಬಳಿಗೆ ಹೆರಿಗೆ ಸಮಯ ಹತ್ತಿರವಾಗಿ ತೆರೆದ ಜೋಪಡಿಯಲ್ಲಿ ಹೆರಿಗೆಯಾಗುತ್ತಿದ್ದರೆ ಪಕ್ಕದ ಎತ್ತರ ಕಟ್ಟಡದಿಂದ ಜನ ನೋಡುತ್ತಾ ನಿಂತಿದ್ದರು. ರಸ್ತೆಯಲ್ಲಿ ಹೋಗುವ ಬಸ್‌ನ ಜನ ಬಗ್ಗಿ ಬಗ್ಗಿ ನೋಡು ತ್ತಿದ್ದರು. ಹಗಲುಹೊತ್ತಿನಲ್ಲಿ ಎಲ್ಲರೂ ಕೆಲಸಕ್ಕೆ ಹೋದರೆ ಅವಳ ಹೆರಿಗೆ ಅವಳೇ ಮಾಡಿ ಕೊಳ್ಳಬೇಕು. ಸರ್ಕಾರಿ ಆಸ್ಪತ್ರೆ, ದಾದಿ, ಹೀಗೆ ಏನೇನೋ ಮಾತಾಡಿ ಆ ಹೆಣ್ಣುಮಕ್ಕಳಿಗೆ ಅವಮಾನ ಮಾಡಲಾರೆ.

ಇಂತಹ ಸ್ಲಂಗಳಿಂದ ಕಾಯಿಲೆ ಹರಡುತ್ತದೆ. ಇಲ್ಲಿನ ಜನ ಕಳ್ಳತನ, ಕೊಲೆ ಸುಲಿಗೆ, ವೇಶ್ಯಾವಾಟಿಕೆಯಲ್ಲಿ ತೊಡಗು ತ್ತಾರೆ.  ಹೀಗೆ ಸ್ಲಂ ಸಮಸ್ಯೆಯನ್ನು ಕುರಿತು ಸಂಶೋಧನೆಗಳು ಪ್ರಕಟಗೊಳ್ಳುತ್ತವೆ. ಸ್ಲಂನ ಹುಳುಕುಗಳನ್ನು ಹೆಕ್ಕಿ ಹೆಕ್ಕಿ ತೆಗೆಯಲಾಗುತ್ತದೆ. ಆದ್ದರಿಂದ ಈ ಸ್ಲಂಗಳ ನಿರ್ಮೂಲನ ಅನಿವಾರ್ಯವೆಂಬ ತೀರ್ಮಾನಕ್ಕೆ ಬರಲಾಗು ತ್ತದೆ. ಆದರೂ ರಾಜಕಾರಣಿಗಳಿಗೆ ವೋಟ್‌ ಬ್ಯಾಂಕ್‌ ಆಗುವುದರಿಂದ ಅವುಗಳನ್ನು ಉಳಿಸಿ ಬೆಳೆಸುತ್ತಾರೆಂಬುದು ಅಡಿಟಿಪ್ಪಣಿ. ಹೀನ ಆರ್ಥಿಕತೆ ಬಹು ಸುಲಭವಾಗಿ ಯಾವುದೇ ಸಮಾಜವನ್ನು ಪಟ್ಟಭದ್ರ ಹಿತಾಸಕ್ತಿಗಳ ಕೈಗೆ ಸಿಕ್ಕಿಸುತ್ತದೆ. ಭೂಗತ ಜಗತ್ತು ತನ್ನ ಸೈನಿಕ ಪಡೆಯನ್ನು ಇಲ್ಲಿ ಕಟ್ಟಿಕೊಳ್ಳುತ್ತದೆ. ಇದು ಕೊನೆ ಮೊದಲಿಲ್ಲದ ವಿಷವರ್ತುಲ. ಬಹಳಷ್ಟು ಬಾರಿ ಕಾನೂನಿನ ಚೌಕಟ್ಟಿಗೆ ಸಿಕ್ಕದ ಸಮಾಜ ವಾಗುತ್ತದೆ.

ಈ ಜಗತ್ತಿನ ಕಥೆಗಳೇ ನಮ್ಮ ಸಿನಿಮಾ ಲೋಕದ ಆಕರ್ಷಕ ವಿಷಯಗಳು. ಲಾಂಗು, ಮಚ್ಚು, ಚೈನು ಇತ್ಯಾದಿಗಳನ್ನು ಹಿಡಿದ ಸ್ಲಂ ಯುವಕರ ಕಥೆಗಳು ಕನ್ನಡ ಸಿನಿಮಾ ಜಗತ್ತಿಗೆ ಮಾತ್ರವಲ್ಲ ಬಾಲಿವುಡ್‌ ನಿರ್ಮಾಪಕರಿಗೂ ರೋಚಕವೇ. ಮುಂಬೈ ಸ್ಲಂಗೂ, ಕೋಲ್ಕತ್ತ ಸ್ಲಂಗೂ, ಬೆಂಗಳೂರಿನ ಸ್ಲಂಗೂ ಬಹಳಷ್ಟು ಅಂತರವಿದೆ. ಇಕ್ಕಟ್ಟಾದ ಜಾಗ ಜನಸಂಖ್ಯೆಯ ಹೆಚ್ಚಳ, ನಿರಂತರವಾದ ವಲಸೆ ಮುಂಬೈ ಸ್ಲಂನ ವಿಸ್ತರಣೆಗೆ ಕಾರಣವಾಗಿದೆ.

ಮುಂಬೈನ ಅರ್ಧದಷ್ಟು ಜನ ಸ್ಲಂನಲ್ಲೇ ವಾಸಿಸುತ್ತಾರೆಂದರೆ ಅತಿಶಯೋಕ್ತಿಯಲ್ಲ. ಹಾಗಾಗಿ ಕೆಳಮಧ್ಯಮ ವರ್ಗವೂ ಒಂದು ಕೋಣೆಯ ಮನೆಗಳಲ್ಲಿ ತಮ್ಮನ್ನು ನಿರ್ಬಂಧಿಸಿಕೊಳ್ಳುತ್ತವೆ. ಲೇಖಕರು, ನಾಟಕಕಾರರು, ಪತ್ರಕರ್ತರು ಸ್ಲಂಗಳಲ್ಲಿ ವಾಸಿಸುತ್ತಿದ್ದರೆ ಆಶ್ಚರ್ಯವಲ್ಲ, ಈ ಕಾರಣಕ್ಕೂ ಅವರ ಸಾಹಿತ್ಯದಲ್ಲಿ ‘ಸ್ಲಂ’ನ ಬದುಕು ಪ್ರಧಾನವಾಗಿರುತ್ತದೆ. ಭಾರತವನ್ನು ಚಿತ್ರಿಸಿದ ‘ಸ್ಲಂ ಡಾಗ್‌ ಮಿಲಿಯನೇರ್‌’ ಸಿನಿಮಾ ಸ್ಲಂನ ವಿಕಾರತೆಯನ್ನು ಮಾತ್ರ ಕಾಣಲು ಸಾಧ್ಯ ವಾಯಿತು.

ಕೋಲ್ಕತ್ತದ ಸ್ಲಂನ ಕೇಂದ್ರದಲ್ಲೇ ಸಿ.ಐ.ಐ.ಎಂ.ನ ಕೇಂದ್ರ ಕಚೇರಿ ನೆಲೆಸಿದೆ. ಅದು ಬಡತನವನ್ನು ಎದುರಿಸುವ ರೀತಿ ಬಹು ಭಿನ್ನವಾಗಿದೆ. ಕೋಲ್ಕತ್ತ ಅಥವಾ ಮುಂಬೈನಲ್ಲಿನ ಸ್ಲಂನ್ನು ವಿಭಿನ್ನ ನೆಲೆಯಲ್ಲೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಭಾರತದ ಅತಿದೊಡ್ಡ ಸ್ಲಂಗಳಿರುವುದೇ ಮುಂಬೈ, ಕೋಲ್ಕತ್ತ ಮತ್ತು ದೆಹಲಿಗಳಲ್ಲಿ. ಅದರ ಪ್ರಾಚೀನತೆ ಅಗಾಧತೆಯ ಕಾರಣದಿಂದಾಗಿ ಅಷ್ಟು ಸುಲಭವಾಗಿ ಸುಧಾರಿಸಲು ಸಾಧ್ಯವಿಲ್ಲ.

ಆದರೆ ಕರ್ನಾಟಕದ ಕಥೆ ಬೇರೆಯದೇ ಆದ ನೆಲೆಯಲ್ಲಿ ಹುಟ್ಟಿದೆ. ಇಲ್ಲಿ ಸ್ಲಂನ ಬೆಳವಣಿಗೆಗೆ ಬಡತನ ಬಹುಮುಖ್ಯ ಕಾರಣವಾಗಿದೆ. ಕರ್ನಾಟಕದಲ್ಲಿರುವ 2722 ಸ್ಲಂಗಳಲ್ಲಿ 2491ನ್ನು ಮಾತ್ರ ಸರ್ಕಾರ ಸ್ಲಂ ಎಂದು ಗುರುತಿಸಿದೆ. ಅದರಲ್ಲಿ 473 ಸ್ಲಂಗಳು ಬೆಂಗಳೂರು ನಗರದಲ್ಲೇ ಕಂಡುಬರುತ್ತವೆ. ಆದರೆ ಅದರ ಅರ್ಧದಷ್ಟನ್ನೂ ಸರ್ಕಾರ ‘ಸ್ಲಂ’ ಎಂದು ಪರಿಗಣಿಸಲು ಸಿದ್ಧವಿಲ್ಲ.
 

ಕೇವಲ 207 ಸ್ಲಂಗಳನ್ನು ಮಾತ್ರ ಅಂಕಿ ಸಂಖ್ಯೆಗಳಲ್ಲಿ ತೋರಿಸುತ್ತಿದೆ. ಐ.ಟಿ. ನಗರವೆಂಬ ಕಿರೀಟವನ್ನು ಹೊತ್ತ ಬೆಂಗಳೂರಿನ, ಸ್ಲಂನ ಸಂಖ್ಯೆಯನ್ನು ಹೇಳಿಕೊಳ್ಳುವುದು ನಾಚಿಕೆಯ ವಿಷಯ ವಿರಬೇಕು. ನಿಜವನ್ನೇ ಹೇಳುವುದಾದರೆ 473 ಸ್ಲಂಗಳು ಬೆಂಗಳೂರಿನಲ್ಲಿವೆ. ಸ್ಲಂ ಎಂದು ಗುರುತಿಸಿದರೆ  ಅವರಿಗೆಲ್ಲ ಮೂಲ ಸೌಕರ್ಯ ವನ್ನು ಕಲ್ಪಿಸಬೇಕಾಗುತ್ತದೆ. ಅವರ ಅಸ್ತಿತ್ವವನ್ನೇ ಗುರುತಿಸದಿದ್ದರೆ ನೀರು, ವಿದ್ಯುತ್‌ ಕಲ್ಪಿಸುವ ಜವಾಬ್ದಾರಿ ಸರ್ಕಾರಕ್ಕಿರುವುದಿಲ್ಲ.

ಸ್ಲಂಗಳನ್ನು ನಗರಗಳಿಗೆ ಅಂಟಿದ ಕಾಯಿಲೆ, ದೀಪದ ಕೆಳಗಿನ ನೆರಳು ಎಂದಿತ್ಯಾದಿಯಾಗಿ ರೂಪಕಗಳಲ್ಲಿ ಹೀಗಳೆಯುವ ಬದಲು ಅಲ್ಲಿ ಬದುಕುವ ಜನರ ವಿಶಿಷ್ಟವಾದ ಗುಣವನ್ನು ಅರಿಯಬೇಕಾಗಿದೆ. ಕರ್ನಾಟಕದ ಅದರಲ್ಲೂ ಬೆಂಗಳೂರಿನ ಸ್ಲಂಗಳಲ್ಲಿ ವಾಸಿಸುವ ಜನರು ಯಾರು? ಮೊದಲನೆಯದಾಗಿ ಬೆಂಗಳೂರು ಕಬಳಿಸಿದ ಹಳ್ಳಿಗಳಲ್ಲಿರುವ ಮೂಲನಿವಾಸಿಗಳು.

ಬೆಂಗಳೂರು ನಗರವನ್ನು ಕಟ್ಟಲು ಬಂದ ಅಂದರೆ ಇಲ್ಲಿಯ ರಸ್ತೆಗಳು, ಬೃಹತ್‌ ಕಟ್ಟಡಗಳು, ವಾಸದ ಮನೆಗಳನ್ನು ಕಟ್ಟಲು ಬಂದ ಕೂಲಿ ಕಾರ್ಮಿಕರು. ಒಂದು ಕಾಲಕ್ಕೆ ತಮಿಳು ನಾಡಿನಿಂದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದರು. ಕಷ್ಟಪಟ್ಟು ದುಡಿಯುವ ಮಂದಿ. ಇಲ್ಲಿ ಬಂದು ನೆಲೆನಿಂತ ಮೇಲೆ  ನಿಧಾನಕ್ಕೆ ಹೂವು ತರಕಾರಿ ಮಾರುವ ಕಾಯಕವನ್ನು ಹಿಡಿದಿದ್ದಾರೆ. ಒಂದು ಕಾಲಕ್ಕೆ ಶ್ರೀಲಂಕಾದ ತಮಿಳರು ಬೆಂಗಳೂರಿಗೆ ವಲಸೆ ಬಂದು ಬಟ್ಟೆ ಇಸ್ತ್ರಿ ಮಾಡುವ, ತಳ್ಳುವ ಗಾಡಿಗಳಲ್ಲಿ ಜೀವನ ಸಾಗಿಸುವುದನ್ನು ಕಲಿತರು.

ತಮಿಳುನಾಡಿನ ಸುಧಾರಣಾ ಕಾರ್ಯಕ್ರಮ ಗಳಿಂದಾಗಿ ಇಂದು ಕರ್ನಾಟಕದ ಕಡೆ ವಲಸೆ ಬರುವವರ ಸಂಖ್ಯೆ ಕಡಿಮೆಯಾಗಿದೆ.
ಕಳೆದ ದಶಕದಲ್ಲಿ ಹೊಸದಾಗಿ ಬರುತ್ತಿರುವ ಕಾರ್ಮಿಕರು ಬಿಹಾರದವರು. ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳ ನಿರ್ಮಾಣಕ್ಕೆ ಕಂಟ್ರಾಕ್ಟರ್‌ಗಳು ಜನರನ್ನು ಕರೆತರುತ್ತಾರೆ. ಒಂದು ಕಾಲಕ್ಕೆ ಉತ್ತರ ಕರ್ನಾಟಕದಿಂದ ಮುಂಬೈಗೆ ಗುಳೆಹೋಗುತ್ತಿದ್ದ ಜನ ಈಗ ಬೆಂಗಳೂರಿನ ಕಡೆ ಮುಖ ಮಾಡಿದ್ದಾರೆ. ಪುಟ್ಟ ಜೋಪಡಿಗಳಲ್ಲಿ ದಬದಬನೆ ರೊಟ್ಟಿ ಬಡಿಯುತ್ತಾ ತಾವೇನು ದುಡಿಮೆಯಲ್ಲಿ ಕಡಿಮೆಯಿಲ್ಲ ಎಂದು ತೋರಿಸುತ್ತಿದ್ದಾರೆ. ಕಲಸುಮೇಲೋಗರವಾಗಿದ್ದ ಬೆಂಗಳೂರಿಗೆ ಗಟ್ಟಿ ಕನ್ನಡವನ್ನು ಹಚ್ಚುತ್ತಿದ್ದಾರೆ. ನಾಳೆ ಬೆಂಗಳೂರಿನ ಭಾಷೆ ಕನ್ನಡವೇ ಆಗಿ ಉಳಿದರೆ ಅದೂ ಈ ಕೂಲಿ ಮಾಡಲು ಬಂದ ಮಂದಿಯಿಂದ.

ಇವರಲ್ಲದೆ ಬಸವನ ಹಿಡಿದು ಕಣಿ ಹೇಳುವ ಮಂದಿ, ಬೆತ್ತ ಬಿದರಿನಲ್ಲಿ ಅಲಂಕಾರದ ಬುಟ್ಟಿ ನೇಯುವ ಕಸುಬುದಾರರು, ಮಣ್ಣಿನ ಗೊಂಬೆ ಗಳಿಗೆ ಬಣ್ಣಹಚ್ಚಿ ಚಿತ್ತಾರ ಮಾಡಿ ರಸ್ತೆ ಬದಿಯಲ್ಲಿ ಮಾರುವ ರಾಜಸ್ತಾನದ ಜನ ಇವರಲ್ಲಿ ಯಾರು ಯಾರನ್ನು ಹಿಂದಕ್ಕೆ ಓಡಿಸಬೇಕು? ಅವರವರ ಮನೆಗಳನ್ನು ಅವರೇ ಗುಡಿಸಿ ಒರಸಿಕೊಳ್ಳುವುದಾದರೆ, ಶ್ರೀಮಂತರ ಮನೆಯ ಮುಂದಿನ ದುಬಾರಿ ಕಾರುಗಳನ್ನು ಡ್ರೈವರ್‌ಗಳಿಲ್ಲದೇ ಅವರೇ ಓಡಿಸುವುದಾದರೆ ಅಭ್ಯಂತರವೇನು? ನಗರವನ್ನು ಶ್ರೀಮಂತರಿ ಗಾಗಿಯೇ ಕಟ್ಟಿಕೊಳ್ಳಲಿ.

ಮೂರು ಜನರಿರುವ ಶ್ರೀಮಂತ ಬಂಗಲೆ ಗಳಲ್ಲಿ ದುಡಿಯುವ ಹತ್ತು ಜನರಿಗೂ ಬಂಗಲೆ ಯಲ್ಲೇ ಜಾಗ ಕೊಡಬಲ್ಲರೆ? ಕೊಳಚೆ ನಿರ್ಮೂ ಲನ ಮಾಡುವುದೆಂದರೆ ಬಡವರು ಬದುಕುವ ಜಾಗಗಳನ್ನು ಅಚ್ಚಕಟ್ಟಾಗಿಸಿ ಕೊಡಿ. ನಗರ ದಲ್ಲಿದ್ದೂ ನಗರದ ಸೌಲಭ್ಯಗಳನ್ನು ಅನುಭವಿ ಸದ ಎರಡನೆ ದರ್ಜೆ ನಾಗರಿಕರಾಗಿ ನಾಗರಿಕ ಹಕ್ಕುಗಳನ್ನು ಕಳೆದುಕೊಂಡು ಬದುಕುವ ನಮ್ಮದೇ ಒಡಲ ಬಳ್ಳಿಗಳನ್ನು ಉಳಿಸುವುದೂ ನಮ್ಮದೇ ಜವಾಬ್ದಾರಿಯಲ್ಲವೆ? ಸ್ಲಂನ ಬದು ಕನ್ನು ಕುರಿತ ಸಾಹಿತ್ಯವೂ ಈ ನೆಲದಲ್ಲಿ ಅಷ್ಟಾಗಿ ಮೂಡಿಬರಲಿಲ್ಲವೇಕೆ? ಗೀತಾ ನಾಗಭೂಷಣ ಅವರ ‘ಬದುಕು’ ಕಾದಂಬರಿ, ಲಂಕೇಶರ ‘ಅಕ್ಕ’ ಗಮನ ಸೆಳೆದ ಕಾದಂಬರಿಗಳು. ಆತ್ಮಕಥನವಾಗಿ ಬಂದ ಸಿದ್ದಲಿಂಗಯ್ಯನವರ ‘ಊರುಕೇರಿ’ ಯಂತಹ ಬೆರಳೆಣಿಕೆಯ ಸಾಹಿತ್ಯವನ್ನು ಮಾತ್ರವೇ ಕನ್ನಡನಾಡು ಈವರೆಗೆ ಕಟ್ಟಿಕೊಟ್ಟಿದೆ.

ಸ್ಲಂನಿಂದ ಬಂದ ಬರಹಗಾರರು ಗಾಢವಾದ ಬದುಕಿನ ಅನುಭವದೊಂದಿಗೆ ಸಾಹಿತ್ಯವನ್ನು ಸೃಷ್ಟಿಸಬೇಕಾಗಿದೆ. ಅದರದೇ ಆದ ಭಾಷೆ, ಶೈಲಿ ಗಳೂ ಒಡಮೂಡಬೇಕಾಗಿದೆ. ನಟನೆ, ಕ್ರೀಡೆ, ಹಾಡು ಹೀಗೆ ಗಮನವಿಟ್ಟು ಹೊಸ ಕ್ಷೇತ್ರಗಳಲ್ಲಿ ಸ್ಲಂ ಪ್ರತಿಭೆಗಳನ್ನು ಹುಡುಕಿ ಕೊಳ್ಳಬೇಕಾಗಿದೆ.

ಕಸದಲ್ಲಿ ಎಸೆದ ಬಣ್ಣದ ಡಬ್ಬಗಳಲ್ಲಿ ಗಿಟಾರ್‌ ಮಾಡಿಕೊಂಡು ನುಡಿಸುವ ಬೈಸಿಲ್‌ನ ವಾದ್ಯ ತಂಡವೊಂದು ಇಂತಹ ಆಸೆಯನ್ನು ಹುಟ್ಟು ಹಾಕಿತು. ಸ್ಲಂನ ಶಕ್ತಿ ಸಾಧ್ಯತೆಯ ಕನಸು ಕಟ್ಟಿಕೊಳ್ಳುವಂತೆ ಮಾಡಿದೆ. ನಿರ್ಮೂಲನ ವಾಗಬೇಕಾಗಿರುವುದು ಮನಸ್ಸಿಗೆ ಹತ್ತಿರುವ ಕೊಳೆ, ಯೋಜನೆಗಳಿಗೆ ತಗುಲಿರುವ ಕೊಳಚೆ, ನಗರವೆಂಬ ಸೋಗಿನ ದುರ್ನಾತ, ಮುಸುಕಿನೊಳಗೆ ನಾರುವ ಭ್ರಷ್ಟಾಚಾರ.
ನಿಮ್ಮ ಅನಿಸಿಕೆ ತಿಳಿಸಿ: :  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT