ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದ ಲೋಕದವರ ಪ್ರಸಂಗಗಳು

Last Updated 24 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಆಂಧ್ರಪ್ರದೇಶದ ಕುಗ್ರಾಮದಲ್ಲಿ ಹುಟ್ಟಿ ಬೆಳೆದ ಸುಂದರ ಯುವತಿಯೊಬ್ಬರು ಚಲನಚಿತ್ರ ನಟಿಯಾಗಿ ಪ್ರಸಿದ್ಧಿಗೆ ಬಂದರು. ಅವರಿಗೆ ಬದುಕನ್ನು ಗಟ್ಟಿಗೊಳಿಸಲು ಗಂಡಿನ ಆಸರೆ ಬೇಕಿತ್ತು. ನಿರ್ಮಾಪಕರೂ, ವಿತರಕರೂ ಆಗಿದ್ದ ಒಬ್ಬರನ್ನು ಆಕೆ ಮದುವೆಯಾದರು.

ತುಂಬಾ ಮೋಹಿಸಿ, ಪ್ರೀತಿಸಿದ ನಂತರ ಆಗಿದ್ದ ಮದುವೆ ಅದು. ಆಮೇಲೆ ಇಬ್ಬರ ನಡುವೆ ಒಡಕು ಶುರುವಾಯಿತು. ನಟಿಯನ್ನು ಆ ವ್ಯಕ್ತಿ ಅನುಮಾನಿಸತೊಡಗಿದರು. ಬೇಸತ್ತ ನಟಿ ಆತ್ಮಹತ್ಯೆಗೆ ಯತ್ನಿಸಿದರು. ಬೆಂಗಳೂರಿನ ಗಾಂಧಿನಗರದ ಮನೆಯಲ್ಲಿ ವಿಷ ಸೇವಿಸಿದ್ದ ಅವರನ್ನು ವಿಲ್ಸನ್ ಗಾರ್ಡನ್‌ನ ಅಗಡಿ ನರ್ಸಿಂಗ್ ಹೋಮ್‌ಗೆ ಸೇರಿಸಲಾಯಿತು. `309 ಐಪಿಸಿ~ ಪ್ರಕಾರ ಆತ್ಮಹತ್ಯೆ ಯತ್ನ ಅಪರಾಧ. ನಾನು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಆಗ ಕೆಲಸ ಮಾಡುತ್ತಿದ್ದೆ. `ಮೆಡಿಕೋ ಲೀಗಲ್ ಕೇಸ್~ ಮೇಲೆ ಪ್ರಕರಣ ದಾಖಲಿಸಿಕೊಳ್ಳುವಂತೆ ನನಗೆ ಆಸ್ಪತ್ರೆಯಿಂದ ಮನವಿ ಬಂತು. `ಅವರು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ~ ಎಂದು ಮನವಿಯಲ್ಲಿ ಸ್ಪಷ್ಟವಾಗಿ ನಮೂದಾಗಿತ್ತು. ಹಾಗಾಗಿ ನಾನು ಪ್ರಕರಣ ದಾಖಲಿಸಿಕೊಂಡೆ.

ಜನಪ್ರಿಯ ನಟಿಯ ಆತ್ಮಹತ್ಯೆ ಯತ್ನದ ಪ್ರಕರಣ ಅದಾಗಿದ್ದರಿಂದ ವಿಷಯ ಬೇಗ ಮೇಲಧಿಕಾರಿಗಳವರೆಗೆ ಹೋಯಿತು. `ನಮ್ಮ ಗಮನಕ್ಕೆ ತರದೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಏಕೆ?~ ಎಂದು ಡಿಸಿಪಿ ಪ್ರಶ್ನಿಸಿದರು. ಕಾನೂನಿನ ಪ್ರಕಾರ ಸಹಜವಾಗಿಯೇ ಪ್ರಕರಣ ದಾಖಲಿಸಿಕೊಂಡಿದ್ದರಿಂದ ಅದನ್ನು ಅವರ ಗಮನಕ್ಕೆ ತರುವ ಅಗತ್ಯ ಇರಲಿಲ್ಲ. ಉಪ್ಪಾರಪೇಟೆ ಸರಹದ್ದಿನ ಇನ್ಸ್‌ಪೆಕ್ಟರ್ ಕೂಡ ಅದನ್ನು ಮುಚ್ಚಿಹಾಕಬೇಕಿತ್ತು ಎಂದರು. ಆಮೇಲೆ ಆ ಪ್ರಕರಣವನ್ನು ಅಲ್ಲಿನ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿಸಿಕೊಂಡರು. ಮುಂದೆ ಅದೇ ನಟಿ ರಾಜಕಾರಣಿಯಾಗಿಯೂ ಮೆರೆದರು. ಕರ್ತವ್ಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿಯೂ ನಾನು ಮೇಲಧಿಕಾರಿಗಳಿಂದ ವೃಥಾ ಮಾತು ಕೇಳಬೇಕಾಯಿತು.
ಸಮಾಜದಲ್ಲಿ ಎಂತೆಂಥ ಸ್ಥಾನದಲ್ಲಿರುವ ಹೆಣ್ಣುಮಕ್ಕಳೂ ಪ್ರೀತಿಯ ಕಾರಣಕ್ಕೆ ಏನೆಲ್ಲಾ ಅನುಭವಿಸುತ್ತಾರೆ ಎಂಬುದಕ್ಕೆ ಈ ಪ್ರಕರಣ ಇನ್ನೊಂದು ಸಾಕ್ಷಿ.
* * *
ರಾಮಕೃಷ್ಣ ಹೆಗಡೆಯವರ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಲ. ಹರ್ಲಂಕರ್ ಆಗ ಬೆಂಗಳೂರಿನ ಕಮಿಷನರ್ ಆಗಿದ್ದರು. ಮಗುವೊಂದು ನಾಪತ್ತೆಯಾಗಿರುವ ಪ್ರಕರಣ ದೊಡ್ಡ ಸುದ್ದಿಯಾಯಿತು. ಆಗ ಮರಿಸ್ವಾಮಿಯವರು ಡಿಸಿಪಿ ಆಗಿದ್ದರು. ಆ ಪ್ರಕರಣದಲ್ಲಿ ಅನುಮಾನಕ್ಕೆ ಗುರಿಯಾಗಿದ್ದವರು ಒಬ್ಬ ನಟಿ. ಆ ಕಾಲಕ್ಕೆ ಅವರು ಜನಪ್ರಿಯ ತಾರೆ. ಮೇಲಾಗಿ ವಿಧಾನ ಪರಿಷತ್ ಸದಸ್ಯೆಯೂ ಆಗಿದ್ದರು. ಅವರ ಬೆಂಬಲಿಗರಾಗಿ ಹೆಗಡೆ ಸರ್ಕಾರದ ಪ್ರಮುಖ ಮಂತ್ರಿಯೊಬ್ಬರಿದ್ದರು.

ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಮಗು ನಾಪತ್ತೆಯಾದ ಕೇಸು ದಾಖಲಾಗಿತ್ತು. ವಿಧಾನಸಭೆಯಲ್ಲಿ ಗಟ್ಟಿ ಧ್ವನಿಯಲ್ಲಿ ಪ್ರಕರಣದ ಪ್ರಸ್ತಾಪವಾದದ್ದರಿಂದ ಫ್ರೇಜರ್ ಟೌನ್ ಸರ್ಕಲ್ ಇನ್ಸ್‌ಪೆಕ್ಟರ್ ಸಿ.ಕೆ.ನಾಗರಾಜ್ ಅವರಿಗೆ ಡಿಸಿಪಿ ಆ ಕೇಸನ್ನು ವಹಿಸಿದರು.

ಜೆ.ಪಿ.ನಗರದ ಅಧಿಕಾರಿಗಳು ರಜೆ ಇದ್ದ ಕಾರಣ ನಾಗರಾಜ್ ಅವರಿಗೆ ಈ ಹೊಣೆ ವಹಿಸಿದರು. ಅವರಿಗೆ ತನಿಖೆಯಲ್ಲಿ ಸಹಾಯ ಮಾಡುವಂತೆ ನನಗೆ ಆದೇಶ ಬಂತು. ನಾಲ್ಕೈದು ದಿನಗಳಲ್ಲಿ ನಾವು ಮಗುವನ್ನು ಪತ್ತೆ ಮಾಡಲೇಬೇಕಿತ್ತು. ಆಗತಾನೆ ಮೇಲಕ್ಕೇರುತ್ತಿದ್ದ ಪ್ರತಿಭಾನ್ವಿತ ನಟನ ಮಗು ಅದು. ಮಗು ನಾಪತ್ತೆಯಾಗುವಲ್ಲಿ ಆ ಜನಪ್ರಿಯ ತಾರೆಯ ಕೈವಾಡವಿದೆ ಎಂದು ಅವರು ಆರೋಪಿಸಿದ್ದರು. ಹಾಗೆ ನೋಡಿದರೆ ಆ ಇಬ್ಬರೂ ನಟ-ನಟಿಯರು ದಕ್ಷಿಣ ಭಾರತದ ಪ್ರತಿಭಾವಂತ ನಿರ್ದೇಶಕರ ಸೃಷ್ಟಿ.

ತನಿಖೆ ಮಾಡಲೆಂದು ನಾನು ನಟಿಯ ಮನೆಗೆ ಹೋದೆ. ಅದಾಗಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದ ಆ ನಟಿ ವಿಚಾರಣೆಗೆ ಸಹಕರಿಸಲಿಲ್ಲ. `ನೀನು ಯಾವುದೋ ಹಳ್ಳಿ ಪೊಲೀಸ್. ಇಲ್ಲಿಗೆ ಯಾಕೆ ಬಂದಿದ್ದೀಯಾ~ ಎಂಬುದು ಅವರ ಮೊದಲ ಪ್ರಶ್ನೆಯಾಗಿತ್ತು. ನಾನು ಅವರಿಗೆ ವಿಷಯ ಮನವರಿಕೆ ಮಾಡಿಕೊಡಲು ಮುಂದಾದೆ. `ನಾನು ನಿರೀಕ್ಷಣಾ ಜಾಮೀನು ಪಡೆದಿದ್ದೇನೆ. ನನ್ನನ್ನು ಪ್ರಶ್ನೆ ಕೇಳಿದರೆ ನ್ಯಾಯಾಂಗ ನಿಂದನೆಯಾಗುತ್ತದೆ~ ಎಂದು ದಬಾಯಿಸಿದರು. ನಿರೀಕ್ಷಣಾ ಜಾಮೀನು ಸಿಕ್ಕಿದ್ದಲ್ಲಿ ಅಂಥವರನ್ನು ದಸ್ತಗಿರಿ ಮಾಡುವಂತಿಲ್ಲ, ಅಷ್ಟೆ; ವಿಚಾರಣೆ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ ಎಂಬುದನ್ನು ಅವರಿಗೆ ಮನದಟ್ಟು ಮಾಡಿಕೊಟ್ಟೆ. ಆದರೂ ಅವರು ಮಗುವಿನ ಬಗ್ಗೆ ಏನೊಂದನ್ನೂ ಹೇಳಲಿಲ್ಲ.

ನಾವು ತೀವ್ರವಾಗಿ ತನಿಖೆ ಪ್ರಾರಂಭಿಸಿದಾಗ ಪ್ರಕರಣದ ಹಿನ್ನೆಲೆ ಗೊತ್ತಾಯಿತು.
ನಟಿಯ ಮನೆಯಲ್ಲಿ ಉತ್ತರ ಕನ್ನಡದ ಹುಡುಗಿ ಒಬ್ಬರಿದ್ದರು. ಆಕೆ ಬುದ್ಧಿವಂತೆ, ನಂಬಿಕಸ್ಥೆ. ಮನೆಯ ತಿಜೋರಿಯ ಕೀಲಿ ಕೈಯನ್ನೇ ನಟಿ ಆಕೆಗೆ ಕೊಟ್ಟಿದ್ದರು. ಮನೆಯ ಸಕಲ ವ್ಯವಹಾರಗಳನ್ನು ನೋಡಿಕೊಳ್ಳು ತ್ತಿದ್ದದ್ದು ಆ ಹೆಣ್ಣುಮಗಳೇ. ನಿರ್ದೇಶಕರು ಹಾಗೂ ನಟಿ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಆ ನಿರ್ದೇಶಕರನ್ನು ನಟ ಗುರುವೆಂದು ಭಾವಿಸಿದ್ದರು. ಅವರ ಮನೆಗೆ ಹೋಗಿ ಬರುವುದು ಮಾಮೂಲಾಗಿತ್ತು.

ನಟ ಸ್ಫುರದ್ರೂಪಿ. ಪ್ರತಿಭಾನ್ವಿತ. ಪದೇಪದೇ ನಟಿಯ ಮನೆಗೆ ಭೇಟಿ ನೀಡುತ್ತಿದ್ದಾಗ ಮನೆಯ ಎಲ್ಲಾ ಕೆಲಸಗಳನ್ನು ಚುರುಕಾಗಿ ನೋಡಿಕೊಂಡಿದ್ದ ಆ ಯುವತಿಯ ಪರಿಚಯವಾಯಿತು. ಪರಿಚಯ ಪ್ರೇಮಕ್ಕೆ ತಿರುಗಿತು. ಇಬ್ಬರೂ ಪರಸ್ಪರ ಹತ್ತಿರಾದರು.

ಯುವತಿ ಗರ್ಭವತಿಯಾದ ಸಂಗತಿ ತಡವಾಗಿ ಗೊತ್ತಾಯಿತು. ಆದರೆ, ಆ ನಟ ಯುವತಿಯ ಹೊಟ್ಟೆಯಲ್ಲಿದ್ದ ಮಗು ತನ್ನದೇ ಒಪ್ಪಿಕೊಳ್ಳಲು ಮುಂದೆ ಬರಲಿಲ್ಲ. ಆ ನಟಿಯದ್ದು ಮಾತೃಹೃದಯ. ಆ ಹೆಣ್ಣುಮಗಳಿಗೆ ಮಗು ಹುಟ್ಟಲು ಅವಕಾಶ ಮಾಡಿಕೊಟ್ಟು, ಅಗತ್ಯ ಆರೈಕೆಯನ್ನೂ ಮಾಡಿಸಿದರು. ಮಗು ಹುಟ್ಟಿತು. ಆ ದಿನಾಂಕವನ್ನು ತೆಗೆದುಕೊಂಡು ಹೋಗಿ ಅರಮನೆ ರಸ್ತೆಯಲ್ಲಿನ ಆಂಜನೇಯನ ಗುಡಿಯಲ್ಲಿ ನಟಿ ಭವಿಷ್ಯ ಕೇಳಿದರು. ಆ ಮಗು ಎಲ್ಲಿರುತ್ತದೋ ಅಂಥ ಮನೆಗೆ ತುಂಬಾ ಒಳ್ಳೆಯದಾಗುತ್ತದೆ ಎಂದು ಭವಿಷ್ಯಕಾರರು ಹೇಳಿದರು. ನಟಿಗೆ ಆ ಮಗುವಿನ ಮೇಲೆ ಪ್ರೀತಿ ಹೆಚ್ಚಾಯಿತು.

ಆಗಾಗ ಮನೆಗೆ ಬರುತ್ತಿದ್ದ ನಟನ ಬರುವಿಕೆಗಾಗಿ ಮಗುವಿಗೆ ಜನ್ಮ ನೀಡಿದ ತಾಯಿ ಕಾಯುತ್ತಲೇ ಇದ್ದರು. ತಮ್ಮ ನೋವನ್ನೆಲ್ಲಾ ಒಳಗೊಳಗೇ ನುಂಗಿಕೊಂಡು ಒದ್ದಾಡುತ್ತಿದ್ದರು. ಅದೇನಾಯಿತೋ, ಇದ್ದಕ್ಕಿದ್ದಂತೆ ನಟನಿಗೆ ಪಿತೃಪ್ರಜ್ಞೆ ಜಾಗೃತವಾಯಿತು. ಆತನ ಪುಕ್ಕಲುತನ ಕಂಡು ಸಿಟ್ಟಿಗೆದ್ದಿದ್ದ ನಟಿ ಅದಾಗಲೇ ಮಗುವನ್ನು ಮುಚ್ಚಿಟ್ಟಿದ್ದರು. ನಟ ಬಂದು ತಾನು ಮೆಚ್ಚಿದ್ದ ಹುಡುಗಿಯನ್ನು ಕರೆದುಕೊಂಡು ಹೋದರು. ಮಗು ಮಾತ್ರ ಅಲ್ಲಿರಲಿಲ್ಲ. ಎಲ್ಲಿ ಎಂದು ಕೇಳಿದಾಗ ನಟಿ ಹೇಳಲಿಲ್ಲ. ಅದೇ ಕಾರಣಕ್ಕೆ ನಟ ಆ ಮಗುವನ್ನು ಪತ್ತೆಮಾಡಿಕೊಡುವಂತೆ ದೂರು ಕೊಟ್ಟಿದ್ದು.

ಆಗ ಮೊಬೈಲ್ ಇರಲಿಲ್ಲ. ಟೆಲಿಫೋನ್ ಟ್ರ್ಯಾಪಿಂಗ್ ಮಾಡುವ ವ್ಯವಸ್ಥೆ ಕೂಡ ಇರಲಿಲ್ಲ. `ಅದು ಹೇಗೆ ಹುಡುಕುತ್ತೀಯೋ ನಾನೂ ನೋಡುತ್ತೇನೆ~ ಎಂದು ಆ ನಟಿಯು ನಟನಿಗೆ ಸವಾಲೊಡ್ಡಿದರು. ಇಬ್ಬರ ನಡುವೆ ಸಾಕಷ್ಟು ವಾಗ್ವಾದ ನಡೆಯಿತು. ಆ ಸಂಭಾಷಣೆಯನ್ನು ನಾವು ಟೇಪ್‌ನಲ್ಲಿ ರೆಕಾರ್ಡ್ ಮಾಡಿಕೊಂಡೆವು. ಆದರೂ ಸಾಕ್ಷಿ ಸಿಗಲಿಲ್ಲ. ಮಗು ಎಲ್ಲಿ ಹುಟ್ಟಿದೆ ಎಂಬುದು ಕೂಡ ಗೊತ್ತಾಗಲಿಲ್ಲ. ನಾವು ಶೂನ್ಯದಲ್ಲಿ ಹುಡುಕಾಡಬೇಕಾಯಿತು. ಯಾರನ್ನು ಮಾತನಾಡಿಸಲು ಹೋದರೂ ಎಲ್ಲಾ ಪ್ರಭಾವಿ ವಲಯದಲ್ಲೇ ಇದ್ದವರೇ. ಪ್ರಶ್ನೆ ಕೇಳುವ ಮೊದಲೇ ಗೇಟ್ ಹಾಕುತ್ತಿದ್ದರು.

ಪ್ರಭಾವಿ ಮಠವೊಂದರ ದೇವಸ್ಥಾನದ ಹಿಂಭಾಗದಲ್ಲಿ ಒಂದು ಆಸ್ಪತ್ರೆ ಇತ್ತು. ಅದು ಬೆಂಗಳೂರಿನ ಒಂದು ಸೇವಾ ಆಸ್ಪತ್ರೆ. ಆ ಮಗು ಬಗ್ಗೆ ಅಲ್ಲಿನ ಒಬ್ಬ ವೈದ್ಯರಿಗೆ ಮಾಹಿತಿ ಇದೆ ಎಂಬ ವಿಷಯ ನಮಗೆ ತಿಳಿಯಿತು. ಆಸ್ಪತ್ರೆ ನಡೆಸುತ್ತಿದ್ದ ಮಠದ ಸ್ವಾಮೀಜಿ ಸರ್ಕಾರವನ್ನೇ ಅಲ್ಲಾಡಿಸಬಲ್ಲ ತಾಕತ್ತಿದ್ದಂಥವರು.

ನಾನು ಆ ವೈದ್ಯರನ್ನು ಪ್ರಶ್ನಿಸಲೆಂದು ಹೋದೆ. ಅವರು ಗೌರವಾನ್ವಿತ, ಜ್ಞಾನವಂತ, ಸಭ್ಯ. ತುಸುವೂ ಅಹಂಕಾರವಿರಲಿಲ್ಲ. ತಮಗೇನೂ ಗೊತ್ತಿಲ್ಲ ಎಂದು ಸೌಮ್ಯವಾಗಿಯೇ ಹೇಳುತ್ತಿದ್ದರು. ನೀವು ಏನು ಮಾಡಿದರೂ ನನ್ನ ಬಾಯಿ ಬಿಡಿಸಲು ಸಾಧ್ಯವಿಲ್ಲ ಎಂದರು.

ಕಾನೂನಾತ್ಮಕ ಹೌದೋ ಅಲ್ಲವೋ? ಕೆಲವೊಮ್ಮೆ ನಾವು ತುಸು ಬಿಗಿಪಟ್ಟು ಹಿಡಿದು ವಿಚಾರಣೆ ನಡೆಸಬೇಕಾಗುತ್ತದೆ. ನಾನು ಎದ್ದು ಹೊರಡುವಾಗ ಅವರು ಆರಾಧಿಸುವ ದೇವರ ಫೋಟೋ ತೋರಿಸಿ ಅದನ್ನು ಸಾಕ್ಷಿಯಾಗಿಸಿಕೊಂಡು ನಿಮಗೇನೂ ಗೊತ್ತಿಲ್ಲವೆಂದು ಹೇಳಿ ನೋಡೋಣ ಎಂದು ಕೇಳಿದೆ. ಬೇರೆ ಯಾರಾದರೂ ಭಂಡರಾಗಿದ್ದರೆ ದೇವರ ಮೇಲೂ ಪ್ರಮಾಣ ಮಾಡಿ ಸುಳ್ಳು ಹೇಳುತ್ತಿದ್ದರು. ಅವರು ಸಭ್ಯರಾಗಿದ್ದ ಕಾರಣಕ್ಕೇ ತಡಬಡಾಯಿಸಿದರು. `ದಯವಿಟ್ಟು ನನ್ನನ್ನು ಬಿಟ್ಟುಬಿಡಿ. ನಾಳೆ ಎಲ್ಲವನ್ನೂ ಹೇಳಿಬಿಡುತ್ತೇನೆ~ ಎಂದರು.

ಆ ವಿಷಯ ನಟಿಗೆ ಗೊತ್ತಾಗಿ, ಅವರು ತಮಗೆ ಗೊತ್ತಿದ್ದ ಮಂತ್ರಿಯಿಂದ ಮುಖ್ಯಮಂತ್ರಿವರೆಗೆ ವಿಷಯ ಮುಟ್ಟಿಸಿದರು. ಆಗ ನನ್ನ ಹುಡುಕಾಟ ಶುರುವಾಯಿತು. ಕಮಿಷನರ್‌ಗೆ ನನ್ನ ಮೇಲೆ ಕೋಪ ಬಂತು. ಡಿಸಿಪಿ ಮರಿಸ್ವಾಮಿಯವರು ಮಾತ್ರ ನಾವು ಕಾನೂನಿನ ಚೌಕಟ್ಟಿನಲ್ಲೇ ಒತ್ತಡ ಹಾಕಿ ಮಗುವನ್ನು ಪತ್ತೆಮಾಡುತ್ತಿದ್ದೇವೆ ಎಂಬುದನ್ನು ಅರಿತು ಬೆಂಬಲಿಸಿದ್ದರು.

ಮರುದಿನ ಸುದ್ದಿಗೋಷ್ಠಿ ನಿಗದಿಯಾಯಿತು. ಅದುವರೆಗೆ ನಾನು ಯಾರ ಕೈಗೂ ಸಿಕ್ಕಿರಲಿಲ್ಲ. ಇನ್ನು ವಿಷಯವನ್ನು ಎಳೆಯುವುದರಲ್ಲಿ ಅರ್ಥವಿಲ್ಲ ಎಂದುಕೊಂಡು ಆ ನಟಿ ಮಗುವನ್ನು ತಂದು ನಟನಿಗೆ ಒಪ್ಪಿಸಿ ಕೇಸನ್ನು ವಾಪಸ್ ಪಡೆದರು. ಪ್ರಕರಣ ಸುಖಾಂತ್ಯವಾಯಿತು.
ಮುಂದಿನ ವಾರ: ಅಜ್ಜಿಯ ಮುಖದ ನೆರಿಗೆಗಳಲ್ಲಿ ಹುದುಗಿದ ದೊಡ್ಡ ಕಷ್ಟ

ಶಿವರಾಂ ಅವರ ಮೊಬೈಲ್ ಸಂಖ್ಯೆ 94483 13066
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT