ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾಗುತ್ತಿರುವ ವೃತ್ತಿಯ ಚಕ್ರವ್ಯೂಹದಲ್ಲಿ ಪತ್ರಕರ್ತ

Last Updated 1 ಜುಲೈ 2012, 19:30 IST
ಅಕ್ಷರ ಗಾತ್ರ

ನಾಲ್ಕು ದಿಕ್ಕುಗಳಿಂದಲೂ ದಾಳಿ ನಡೆಯುತ್ತಿದೆ, ಪತ್ರಕರ್ತ ಯುದ್ಧಭೂಮಿಯ ಚಕ್ರವ್ಯೂಹ ದಲ್ಲಿದ್ದಾನೆ. ಭ್ರಷ್ಟ, ಅಪ್ರಾಮಾಣಿಕ,  ಸ್ವಾರ್ಥಿ, ...ಇತ್ಯಾದಿ ಟೀಕಾಸ್ತ್ರಗಳು ಆತನನ್ನು ಒಂದೇ ಸಮನೆ ಇರಿಯುತ್ತಿವೆ. 

ವೈಯಕ್ತಿಕ ನೆಲೆಯಲ್ಲಿ ಈ ಆರೋಪಗಳನ್ನು ನಿರಾಕರಿಸಬಹುದಾದರೂ ತಾವು ಭಾಗವಾಗಿರುವ ಇಡೀ ಸಮುದಾಯವನ್ನು ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿ ಆತನೂ ಇಲ್ಲ.

ಹೆಚ್ಚೆಂದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿರೋಧಪಕ್ಷದ ನಾಯಕರನ್ನು ಉಡಾಫೆಯಿಂದ ಕೇಳಿದಂತೆ `ನೀವೇನು ಸಾಚಾನಾ?~ ಎಂದು ಪ್ರಶ್ನಿಸಿ ಬಾಯಿಮುಚ್ಚಿಸಬಹುದು.

ಎಲ್ಲ ವೃತ್ತಿಗಳಂತೆ ಪತ್ರಿಕೆಗಳಲ್ಲಿಯೂ ಒಂದಷ್ಟು `ಕಪ್ಪುಕುರಿ~ಗಳು ಹಿಂದೆಯೂ ಇದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಉಳಿದವರನ್ನು ಅಲ್ಪಸಂಖ್ಯಾತರನ್ನಾಗಿ ಮಾಡುವಷ್ಟರ ಮಟ್ಟಿಗೆ ಈ `ಕಪ್ಪುಕುರಿ~ಗಳ ಸಂಖ್ಯೆ ಬೆಳೆಯುತ್ತಿದೆ. ಪತ್ರಕರ್ತನ ಆದರ್ಶದ ಹಾದಿ ತಪ್ಪಿದ್ದೆಲ್ಲಿ?

ಪತ್ರಕರ್ತನದ್ದು ಏಕವ್ಯಕ್ತಿ ಪ್ರದರ್ಶನ ಅಲ್ಲ, ಸಾಮೂಹಿಕ ಪ್ರಯತ್ನದ ಮೂಲಕವೇ ಪತ್ರಿಕೆ ರೂಪುಗೊಳ್ಳುವುದು. ಬದಲಾಗುತ್ತಿರುವ ಈ `ಸಮೂಹ~ವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಮಾತ್ರ ಪತ್ರಕರ್ತರಲ್ಲಿನ ಬದಲಾವಣೆಯನ್ನೂ ಅರ್ಥಮಾಡಿಕೊಳ್ಳಲು ಸಾಧ್ಯ. ಪತ್ರಕರ್ತರ ತಲೆಮೇಲೆ ಆತನ ಮಾಲೀಕರಿರುತ್ತಾರೆ, ಕಣ್ಣೆದುರಿನಲ್ಲಿ ಪತ್ರಿಕೆಯ ಓದುಗರಿರುತ್ತಾರೆ, ಅಕ್ಕಪಕ್ಕದಲ್ಲಿ ಸಹೋದ್ಯೋಗಿಗಳಿರುತ್ತಾರೆ, ಬೆನ್ನಹಿಂದೆ ಕಟ್ಟಿಕೊಂಡ ಸಂಸಾರ ಇರುತ್ತದೆ, ಇವುಗಳ ಮಧ್ಯೆ ಆತ ಇರುತ್ತಾನೆ, ಆತನೊಳಗೆ ಸದಾ ಪ್ರಶ್ನಿಸುವ, ಎಚ್ಚರಿಸುವ, ಕುಟುಕುವ, ಬುದ್ಧಿಹೇಳುವ ಆತ್ಮಸಾಕ್ಷಿ ಇರುತ್ತದೆ.

ಮುಖ್ಯವಾಗಿ ಆರ್ಥಿಕ ಉದಾರೀಕರಣ ಮತ್ತು ಜಾಗತೀಕರಣ ಯುಗ ಪ್ರಾರಂಭವಾದ ನಂತರದ ಎರಡು ದಶಕಗಳಲ್ಲಿ ಪತ್ರಕರ್ತನ ಸುತ್ತಮುತ್ತ ಇರುವ ಈ ಎಲ್ಲ ಪಾತ್ರಧಾರಿಗಳು ಗುರುತಿಸಲಾಗದಷ್ಟು ಬದಲಾಗಿ ಹೋಗಿದ್ದಾರೆ. ಬದಲಾಗುತ್ತಲೇ ಇರುವ ಈ ಪಾತ್ರಧಾರಿಗಳ ಒತ್ತಡಗಳ ನಡುವೆ ಪತ್ರಕರ್ತ ತನ್ನ ಆತ್ಮಸಾಕ್ಷಿಯ ಕರೆಗೆ ಓಗೊಡುತ್ತಾ ಕೆಲಸಮಾಡಬೇಕಾಗಿದೆ.

ಮೊದಲನೆಯದಾಗಿ  ಮಾಲೀಕ ವರ್ಗ.  169 ವರ್ಷಗಳ ಹಿಂದೆ ಕಲ್ಲಚ್ಚನ್ನು ಕೊರೆದು ಅಚ್ಚುಮೊಳೆ ಮಾಡಿ ಕನ್ನಡದ ಮೊದಲ ಪತ್ರಿಕೆ `ಮಂಗಳೂರು ಸಮಾಚಾರ~ ಪ್ರಕಟಿಸಿದ ಹೆರ್ಮನ್ ಫ್ರೆಡ್ರಿಕ್ ಮೊಗ್ಲಿಂಗ್‌ನ ಕಾಲದಿಂದ ಪತ್ರಿಕಾವೃತ್ತಿ ಬಹುದೂರ ಸಾಗಿ ಬಂದಿದೆ. ನಿಧಾನವಾಗಿ ವಾಣಿಜ್ಯೀಕರಣಗೊಳ್ಳುತ್ತಾ ಬಂದ ಈ ವೃತ್ತಿ ಈಗ ಪೂರ್ಣಪ್ರಮಾಣದ ಉದ್ಯಮವಾಗಿ ಪರಿವರ್ತನೆಗೊಂಡಿದೆ.
 
ಬದಲಾದ ಪರಿಸ್ಥಿತಿಯಲ್ಲಿ ಹೊಸ ಆಟಗಾರರು ಮೈದಾನ ಪ್ರವೇಶ ಮಾಡಿದ್ದಾರೆ, ಆಟ ಬದಲಾದಾಗ ಅದರ ನಿಯಮಾವಳಿಗಳೂ ಬದಲಾಗುತ್ತವೆ. ಹಳೆಯ ಆಟಗಾರರು ಹಳೆಯ ನಿಯಮಗಳ ಪ್ರಕಾರವೇ ಆಡುತ್ತೇನೆಂದು ಹೊರಟರೆ ಮೈದಾನದಿಂದ ಹೊರಬೀಳಬೇಕಾಗುತ್ತದೆ. ಉದ್ಯಮವನ್ನು ಸಮಾಜ ಸೇವಾ ಸಂಸ್ಥೆಯ ರೀತಿಯಲ್ಲಿ ನಡೆಸಿಕೊಂಡು ಹೋಗಲಾಗುವುದಿಲ್ಲ, ಅಂತಹ ದುಸ್ಸಾಹಸ ಮಾಡಿದವರು  ದಿವಾಳಿಯಾಗಬೇಕಾಗುತ್ತದೆ.

ಉದ್ಯಮದ ರೂಪ ಪಡೆದ ನಂತರ ಮಾಧ್ಯಮದ ಕಚೇರಿಯೊಳಗಿನ ಸಂಪಾದಕೀಯ ಮತ್ತು ಜಾಹೀರಾತು ವಿಭಾಗಗಳ ನಡುವಿನ ಗೆರೆ  ತೆಳ್ಳಗಾಗುತ್ತಿದೆ.  ಮುದ್ರಣ ವೆಚ್ಚಕ್ಕೆ ಅನುಗುಣವಾಗಿ ಪತ್ರಿಕೆಯ ಮುಖಬೆಲೆಯನ್ನು, ಮಾರುಕಟ್ಟೆಯಲ್ಲಿನ ಪೈಪೋಟಿಯಿಂದಾಗಿ ಹೆಚ್ಚಿಸಲಾರದ ಮಾಲೀಕರು  ಜಾಹೀರಾತುದಾರರನ್ನು ಹೆಚ್ಚುಹೆಚ್ಚು ಅವಲಂಬಿಸಬೇಕಾಗಿದೆ.
 
ಈ ಅಸಹಾಯಕತೆಯನ್ನು ಬಳಸಿಕೊಂಡು ಜಾಹೀರಾತು ನೀಡುವ ಉದ್ಯಮಗಳು ಮಾಧ್ಯಮಗಳ ಮೇಲಿನ ಹಿಡಿತವನ್ನು ಬಿಗಿಗೊಳಿಸುತ್ತಿವೆ. ಈ ವ್ಯವಸ್ಥೆ ಮಾಧ್ಯಮರಂಗವನ್ನು ಸದಾ ಉದ್ಯಮಿಗಳು ಮತ್ತು ಸರ್ಕಾರದ ಋಣಭಾರದಲ್ಲಿರುವಂತೆ ಮಾಡಿದೆ.
 
ಈ ಅನಾರೋಗ್ಯಕಾರಿ ವಾತಾವರಣದಲ್ಲಿಯೇ ಕಾಸಿಗಾಗಿ ಸುದ್ದಿಯಂತಹ ಲಾಲಸೆ, ರಾಡಿಯಾ ಟೇಪ್‌ನಂತಹ ವೃತ್ತಿದ್ರೋಹಗಳು ಹುಟ್ಟಿಕೊಂಡಿರುವುದು.  ಪತ್ರಿಕೋದ್ಯಮ  ಅತ್ತ ಪೂರ್ಣಪ್ರಮಾಣದಲ್ಲಿ ಉದ್ಯಮವಾಗಿಯೂ ಬೆಳೆಯದೆ, ಇತ್ತ ಆದರ್ಶ ವೃತ್ತಿಯಾಗಿಯೂ ಉಳಿಯದೆ ತ್ರಿಶಂಕು ಸ್ಥಿತಿಯಲ್ಲಿದೆ. ಇದನ್ನು ಓದುಗರಿಗೆ ಅರ್ಥಮಾಡಿಕೊಡಲು ಪತ್ರಿಕೆಯ ಮಾಲೀಕರಿಗೂ ಸಾಧ್ಯವಾಗಿಲ್ಲ.

 ವೃತ್ತಿಯಿಂದ ಉದ್ಯಮವಾಗಿ ಬದಲಾವಣೆಗೊಂಡ ಈ ಕ್ಷೇತ್ರಕ್ಕೆ ಈಗ ರಾಜಕಾರಣಿಗಳು ಪ್ರವೇಶಿಸುತ್ತಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರಗಳ ಬಹುತೇಕ ಟಿವಿ ಚಾನೆಲ್‌ಗಳು ರಾಜಕಾರಣಿಗಳ ಒಡೆತನದಲ್ಲಿವೆ,ಪತ್ರಿಕೆಗಳು ಕೂಡಾ ಇದಕ್ಕೆ ಹೊರತಲ್ಲ.

ಇದು ಉದ್ಯಮಿಗಳ ಪ್ರವೇಶಕ್ಕಿಂತಲೂ ಅಪಾಯಕಾರಿ ಬೆಳವಣಿಗೆ. ಜನಾಭಿಪ್ರಾಯವೇ ಪ್ರಜಾಪ್ರಭುತ್ವದ ಬುನಾದಿ. ರಾಜಕಾರಣಿಗಳ ಒಡೆತನದಲ್ಲಿರುವ ಮಾಧ್ಯಮಗಳು ತಮಗೆ ಅನುಕೂಲವಾಗುವ ರೀತಿಯಲ್ಲಿ ಜನಾಭಿಪ್ರಾಯವನ್ನೇ ಉತ್ಪಾದಿಸುವ ಪ್ರಯತ್ನ ನಡೆಸಿವೆ. ಆಂಧ್ರಪ್ರದೇಶದಲ್ಲಿ ವೈಎಸ್‌ಆರ್ ಸಾವಿನ ನಂತರ ಅವರ ಒಡೆತನದ ಟಿವಿಚಾನೆಲ್ ಸೃಷ್ಟಿಸಿದ್ದ ಸಮೂಹ ಸನ್ನಿ ಇದಕ್ಕೆ ಉತ್ತಮ ಉದಾಹರಣೆ. ತಮಿಳುನಾಡು, ಕರ್ನಾಟಕಗಳು ಇದರಲ್ಲಿ ಹಿಂದೆ ಬಿದ್ದಿಲ್ಲ.

ಪತ್ರಿಕಾಮಂಡಳಿಯ ಏರ್‌ಕಂಡೀಷನ್ ಕಚೇರಿಯೊಳಗೆ ಕೂತಿರುವ ಅದರ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಅವರಂತೆ `ಐಶ್ಚರ್ಯ ರೈ ಅವರಿಗೆ ಮಗು ಹುಟ್ಟಿದ್ದನ್ನು ದೊಡ್ಡ ಸುದ್ದಿ ಮಾಡುವ ಮಾಧ್ಯಮಗಳಿಗೆ, ಪೋಷಕಾಂಶಗಳ ಕೊರತೆಯಿಂದ ಸಾಯುತ್ತಿರುವ ಮಕ್ಕಳು ಸುದ್ದಿಯೇ ಅಲ್ಲ~ ಎಂದು ಚುಚ್ಚುವುದು ಸುಲಭ. ಆದರೆ ವಾಸ್ತವ ಬೇರೆಯಾಗಿದೆ.
 
ಐಶ್ಚರ್ಯರೈ ಕನಿಷ್ಠ ಒಂದು ಡಜನ್ ಉತ್ಪನ್ನಗಳಿಗೆ ಮಾಡೆಲ್, ಆಕೆಯ ಸುದ್ದಿ ಪ್ರಕಟಿಸಿದರೆ ಜಾಹೀರಾತು ಬರುತ್ತದೆ, ಬಡ ಮಕ್ಕಳ ಬಗ್ಗೆ ಬರೆದರೆ ಏನು ಸಿಗುತ್ತದೆ? ಇನ್ನೂ ಉಳಿದುಕೊಂಡಿರುವ ಒಂದಷ್ಟು ಸಹೃದಯಿಗಳು ಅಯ್ಯ ಪಾಪ  ಎಂದು ಉದ್ಗರಿಸಬಹುದು ಅಷ್ಟೆ.
 
ಇಂತಹ ಸ್ಥಿತಿಗೆ ಮಾಧ್ಯಮಕ್ಷೇತ್ರವನ್ನು ತಳ್ಳಿದ ವ್ಯವಸ್ಥೆಯನ್ನು ಬದಲಾವಣೆ ಮಾಡುವ ಬಗೆಯ ಬಗ್ಗೆ ನ್ಯಾ.ಖಟ್ಜು ಯೋಚನೆ ಮಾಡಿದರೆ ಅವರು ಬಯಸುವಂತೆ ಪತ್ರಿಕೆಗಳು,ಟಿವಿಚಾನೆಲ್‌ಗಳು ವರದಿ ಮಾಡಲು ಸಾಧ್ಯವಾಗಬಹುದು.

ಎರಡನೆಯದಾಗಿ ಪತ್ರಕರ್ತನ ಮುಂದಿರುವ ಓದುಗರು ಮತ್ತು ಟಿವಿ ವೀಕ್ಷಕರು. ಪ್ರಜ್ಞಾವಂತ ಓದುಗರೇ ಪತ್ರಿಕೆಯ ಶಕ್ತಿ, ಅಂತಹವರನ್ನೊಳಗೊಂಡ ಜಾಗೃತ ಸಮಾಜದಲ್ಲಿ ಮಾತ್ರ ಪತ್ರಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ. 

ಶಿಕ್ಷಣ, ಸಂಪರ್ಕ ಮತ್ತು ಆರ್ಥಿಕ ಅಭಿವೃದ್ಧಿಯಿಂದಾಗಿ 2-3ದಶಕಗಳ ಹಿಂದಿನ ಓದುಗರಿಗಿಂತ ಈಗಿನವರು ಹೆಚ್ಚು ಪ್ರಜ್ಞಾವಂತರು. ಟಿವಿಚಾನೆಲ್‌ಗಳು ಹಳ್ಳಿಮನೆಗಳನ್ನೂ ಪ್ರವೇಶಿಸಿದ ನಂತರ ಅನಕ್ಷರಸ್ಥರು ಕೂಡಾ  ಸಮಕಾಲೀನ ವಿದ್ಯಮಾನಗಳನ್ನು ನೋಡಿ, ಕೇಳಿ ತಿಳಿದುಕೊಳ್ಳಬಲ್ಲರು.

ಮಾಧ್ಯಮಗಳ ನಡುವಿನ ಪೈಪೋಟಿಯಿಂದಾಗಿ ಯಾವುದೇ ಪತ್ರಿಕೆ ಇಲ್ಲವೇ ಟಿವಿಚಾನೆಲ್ ಯಾವ ಸುದ್ದಿಯನ್ನೂ ಬಚ್ಚಿಡುವ ಸ್ಥಿತಿಯಲ್ಲಿ ಇಲ್ಲ. ಒಬ್ಬರು ಬಚ್ಚಿಟ್ಟರೆ ಇನ್ನೊಬ್ಬರು ಬಿಚ್ಚಿಡುತ್ತಾರೆ, ಒಟ್ಟಿನಲ್ಲಿ ಎಲ್ಲವೂ ಬಟಾಬಯಲು. ಆದರೆ ಈ ಜನಜಾಗೃತಿಯ ಪ್ರತಿಬಿಂಬ ಓದುಗ ಸಮುದಾಯದ ನೀತಿ-ನಿರ್ಧಾರಗಳಲ್ಲಿ ಹುಡುಕಲು ಹೊರಟರೆ ನಿರಾಶೆಯಾಗುತ್ತದೆ.

ಇದಕ್ಕೆ ಉತ್ತಮ ಉದಾಹರಣೆ ರಾಜ್ಯದ ಬಿಜೆಪಿ ನಡೆಸಿದ `ಆಪರೇಷನ್ ಕಮಲ~ದ ನಂತರದ ಬೆಳವಣಿಗೆಗಳು. ಪಕ್ಷಾಂತರ ಮಾಡಿದ ಶಾಸಕರು ಯಾವ ಆಮಿಷಕ್ಕೆ ಬಲಿಯಾಗಿದ್ದರು ಎನ್ನುವುದನ್ನು ಎಲ್ಲ ಮಾಧ್ಯಮಗಳು ಕೂಗಿಕೂಗಿ ಹೇಳಿದ್ದವು. ಆ ಶಾಸಕರ ಬಗ್ಗೆ ಮತದಾರರಿಗೆ ಸಂಪೂರ್ಣ ಮಾಹಿತಿ ಇತ್ತು.
 
ಹೀಗಿದ್ದರೂ ಪ್ರಜಾಪ್ರಭುತ್ವವನ್ನೇ ಅಣಕಿಸುವಂತೆ ಅವರು ಮತ್ತೆ ಅದೇ ಪಕ್ಷಾಂತರಿ ಶಾಸಕರನ್ನು ಉಪಚುನಾವಣೆಯಲ್ಲಿ ಆರಿಸಿಕಳುಹಿಸುತ್ತಾರೆ. ವಿಜ್ಞಾನದ ಪದವೀಧರರೇ ಟಿವಿ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುವ ಜ್ಯೋತಿಷಿ-ಬಾಬಾಗಳ ಮುಂದೆ ಬಾಯಿಬಿಟ್ಟು ಕೂತಿರುತ್ತಾರೆ, ಎಂಜಲೆಲೆಯ ಮೇಲೆ ಉರುಳಾಡುತ್ತಿರುತ್ತಾರೆ.

ಸ್ವಜಾತಿ ರಾಜಕಾರಣಿಯ ಪರ ವಾದಕ್ಕೆ ನಿಲ್ಲುತ್ತಾರೆ. ಪತ್ರಿಕೆ ಜನಪರವಾಗಿರಬೇಕೆಂದು ಬೋಧನೆ ಮಾಡುವ ಈ ಓದುಗರು ಮಾರುಕಟ್ಟೆಯಲ್ಲಿ ಇನ್ನೊಂದು ಪತ್ರಿಕೆ ಎಂಟಾಣೆ ಕಡಿಮೆಮಾಡಿದರೆ ಆ ಕಡೆ ಓಡುತ್ತಾರೆ.
 
ಅನೈತಿಕ ಪೈಪೋಟಿಯ ದರ ಸಮರ ಅಂತಿಮವಾಗಿ ಜನರ ಜತೆಯಲ್ಲಿರಬೇಕಾದ ಪತ್ರಿಕೆಯನ್ನು ಜಾಹೀರಾತುದಾರರ ಕಾಲಬುಡಕ್ಕೆ ಕೊಂಡೊಯ್ದು ಅಡ್ಡಬೀಳಿಸುತ್ತದೆ ಎನ್ನುವುದು ಅವರಿಗೆ ಅರ್ಥವಾಗುವುದಿಲ್ಲ. ಹತ್ತು ರೂಪಾಯಿ ಉತ್ಪಾದನಾವೆಚ್ಚದ ಪತ್ರಿಕೆ ಏಳು ರೂಪಾಯಿ ಕೊಡುವ ಜಾಹಿರಾತುದಾರರ ಬದಲಿಗೆ ಮೂರು ರೂಪಾಯಿಯನ್ನಷ್ಟೇ ಕೊಡುವ ಓದುಗನಿಗೆ ಹೇಗೆ ನಿಷ್ಠೆಯಿಂದಿರಲು ಸಾಧ್ಯ?
ಮೂರನೆಯದಾಗಿ ಅಕ್ಕಪಕ್ಕದಲ್ಲಿರುವ ಸಹೋದ್ಯೋಗಿಗಳು.

25 ವರ್ಷಗಳ ಹಿಂದೆ ನನ್ನಂತಹವರು ಈ ವೃತ್ತಿ ಪ್ರವೇಶಿಸಿದಾಗ ಪ್ರಾಮಾಣಿಕತೆ ಮತ್ತು ವೃತ್ತಿನಿಷ್ಠೆಯನ್ನು ಪಾಲಿಸುವುದು ದೊಡ್ಡ ಸವಾಲು ಆಗಿರಲೇ ಇಲ್ಲ. ರಾತ್ರಿಪಾಳಿ ಮುಗಿಸಿ ಪ್ರೆಸ್‌ನಲ್ಲಿಯೇ ನ್ಯೂಸ್‌ಪ್ರಿಂಟ್ ಎಳೆದುಕೊಂಡು ಮಲಗಿದಾಗ, ಪಕ್ಕದಲ್ಲಿ ಹಾಗೆಯೇ ಮಲಗಿದ್ದ ಹತ್ತು ಮಂದಿ ಸಹೋದ್ಯೋಗಿಗಳಿರುತ್ತಿದ್ದರು.
 
ಕ್ಯಾಂಟೀನ್‌ನಲ್ಲಿ ಸಾಲ ಕೇಳಲು ಮುಜುಗರ ಆಗುತ್ತಿರಲಿಲ್ಲ, ಯಾಕೆಂದರೆ ಸಾಲದ ಪಟ್ಟಿಯಲ್ಲಿ ಆಗಲೇ ಸಹೋದ್ಯೋಗಿಗಳ ಹೆಸರುಗಳು ರಾರಾಜಿಸುತ್ತಿರುತ್ತಿತ್ತು. ಆದರೆ ಕಾಲ ತ್ವರಿತ ಗತಿಯಲ್ಲಿ ಬದಲಾಗಿ ಹೋಗಿದೆ.

ಕಳೆದ ಹತ್ತು ವರ್ಷಗಳಲ್ಲಿ ಕಡಿಮೆಯಾಗುತ್ತಿರುವ ಜಾಹೀರಾತು ಮತ್ತು ಏರುತ್ತಿರುವ ಉತ್ಪಾದನಾ ವೆಚ್ಚದಿಂದಾಗಿ ಪತ್ರಿಕಾ ಸಂಸ್ಥೆಗಳು, ಟಿವಿ ಚಾನೆಲ್‌ಗಳು ನಿರೀಕ್ಷಿತ ರೀತಿಯಲ್ಲಿ ಲಾಭ ಗಳಿಸಲಾಗುತ್ತಿಲ್ಲ. ಆದರೆ ಅವುಗಳಲ್ಲಿ ಕೆಲಸ ಮಾಡುವ ಕೆಲವು ಉದ್ಯೋಗಿಗಳ ಶ್ರಿಮಂತಿಕೆ ಏರುತ್ತಲೇ ಇದೆ. 

ಆದಾಯ ಮೀರಿದ ಆಸ್ತಿಗಳಿಸಿದ ಆರೋಪ ಸರ್ಕಾರಿ ನೌಕರರ ಮೇಲೆ ಮಾತ್ರವಲ್ಲ ಕೆಲವು ಪತ್ರಕರ್ತರ ಮೇಲೂ ಇದೆ. ನೌಕರರ ಮನೆ ಮೇಲೆ ದಾಳಿ ನಡೆಸುವ ಲೋಕಾಯುಕ್ತರು ಪತ್ರಕರ್ತರ ಮೇಲೂ ನಡೆಸಬಹುದಲ್ಲವೇ ಎಂದು ಜನ ಕೇಳುತ್ತಿರುವುದು ಇದೇ ಕಾರಣಕ್ಕೆ.

ಇಂತಹ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಬದುಕಬೇಕೆನ್ನುವವರು ಬದುಕುವ ಕಲೆ ಗೊತ್ತಿಲ್ಲದ ಹುಚ್ಚರು ಎಂದು ಅನಿಸಿಕೊಳ್ಳುತ್ತಾರೆ ಅಷ್ಟೆ. ಭ್ರಷ್ಟರಾಗುವುದಕ್ಕೆ ಸಮರ್ಥನೆಗಳನ್ನು ಹುಡುಕಿಕೊಂಡು ಹೊರಟರೆ ಊರೆಲ್ಲ ಉದಾಹರಣೆಗಳು ಸಿಗುತ್ತವೆ. ಪ್ರಾಮಾಣಿಕವಾಗಿ ಉಳಿಯಬಯಸುವ ಪತ್ರಕರ್ತ ಸಮರ್ಥನೆಗಳನ್ನು ತನ್ನೊಳಗೆ ಹುಡುಕಬೇಕು. ಇಡೀ ಜಗತ್ತು ಭ್ರಷ್ಟಗೊಂಡರೂ ನಾನು ಭ್ರಷ್ಟನಾಗಲಾರೆ ಎಂಬ ತೀರ್ಮಾನಕ್ಕೆ ಬರಲು ಆತನಿಗೆ ಸಾಧ್ಯವಾಗಬೇಕು.

ಕೊನೆಯದಾಗಿ ಪತ್ರಕರ್ತ ಬೆನ್ನಿಗೆ ಕಟ್ಟಿಕೊಂಡ ಸಂಸಾರ.  ಈತ ಒಂದು ಆದರ್ಶ ವೃತ್ತಿಯಲ್ಲಿದ್ದಾನೆ ಎನ್ನುವ ಕಾರಣಕ್ಕೆ ಯಾರೂ ಮನೆಬಾಡಿಗೆ ಕಡಿಮೆ ಮಾಡುವುದಿಲ್ಲ, ಕಿರಾಣಿ ಅಂಗಡಿಯವ ಪುಕ್ಕಟೆಯಾಗಿ ಅಕ್ಕಿ-ಬೇಳೆ ತಂದುಹಾಕುವುದಿಲ್ಲ. ಈತನ ಮನೆಯ ಒಂದು ಪಕ್ಕದಲ್ಲಿ ಇನ್ಫೋಸಿಸ್‌ನ ಉದ್ಯೋಗಿ ಇರುತ್ತಾನೆ, ಇನ್ನೊಂದು ಪಕ್ಕದಲ್ಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಇರುತ್ತಾನೆ.

ಪ್ರತಿಯೊಬ್ಬನ ಸಂಸಾರದ ಬಹುಪಾಲು ಬೇಕುಬೇಡಗಳು ನೆರೆಹೊರೆಯವರನ್ನು ನೋಡಿಯೇ ನಿರ್ಧಾರವಾಗುವುದು. ಆಧುನಿಕ ಬದುಕಿನಲ್ಲಿ ಬಹುಪಾಲು ಗಳಿಕೆ ವ್ಯಯವಾಗುತ್ತಿರುವುದು ಸಾಮಾಜಿಕವಾದ ಹುಸಿ ಸ್ಥಾನಮಾನವನ್ನು ಕಾಯ್ದುಕೊಂಡು ಹೋಗುವ ವ್ಯಸನಕ್ಕಾಗಿ. ಇದನ್ನು ಮೀರಿಹೋಗುವ ಇಲ್ಲವೇ ಬದಲಾಯಿಸುವ ಶಕ್ತಿ ಪತ್ರಕರ್ತರಲ್ಲಿಯೂ ಇಲ್ಲ.

ಇವೆಲ್ಲವನ್ನೂ ಯೋಚನೆ ಮಾಡುತ್ತಾ ಹೋದರೆ ಈ ವೃತ್ತಿ ಸಾಕಪ್ಪ ಸಾಕು ಎಂಬ ತೀರ್ಮಾನಕ್ಕೆ ಬರಲು ಹತ್ತು ಕಾರಣಗಳು ಸುಲಭದಲ್ಲಿ ಸಿಗುತ್ತವೆ, ಆದರೆ ಪತ್ರಿಕೆಯನ್ನು ಬಿಡಿಸಿಕೊಂಡು ಕೂತರೆ ಇದೇ ವೃತ್ತಿಯಲ್ಲಿ ಮುಂದುವರಿಯಲು ನೂರು ಕಾರಣಗಳು ಪುಟಪುಟಗಳಲ್ಲಿ ಸಿಗುತ್ತವೆ.

ಸಮಾಜ ಎಷ್ಟೇ ಕೆಟ್ಟುಹೋದರೂ ಪ್ರಾಮಾಣಿಕರಿಗೆ, ಮಾನವಂತರಿಗೆ ಬದುಕಲು ಜಾಗ ಇದ್ದೇ ಇರುತ್ತದೆ.  ಅದೇ ರೀತಿ ಮಾಧ್ಯಮ ಕ್ಷೇತ್ರ ಎಷ್ಟೇ ಕೆಟ್ಟುಹೋದರೂ ಜನಪರ ಪತ್ರಿಕೋದ್ಯಮಕ್ಕೆ ಜಾಗ ಇದ್ದೇ ಇರುತ್ತದೆ. ಅದು ಸ್ವಲ್ಪ ಕಡಿಮೆಯಾಗಿರಬಹುದು ಅಷ್ಟೆ.

ಉದ್ಯಮವಾದ ವೃತ್ತಿ, ಬದಲಾಗಿ ಹೋಗಿರುವ ಓದುಗರು, ಸಹೋದ್ಯೋಗಿಗಳು, ಸಂಸಾರದ ಒತ್ತಡದ ನಡುವೆಯೂ ವೃತ್ತಿನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆನ್ನುವವರಿಗೆ  ಅವಕಾಶ ಇದೆ.
 
ಸಮಸ್ಯೆ ಅವಕಾಶದ್ದು ಅಲ್ಲವೇ ಅಲ್ಲ, ಅದನ್ನು ಬಳಸಿಕೊಳ್ಳುವ ಪತ್ರಕರ್ತರದ್ದು. ಹಳ್ಳಿಗಳಿಗೆ ಹೋಗಿ ಬರಪರಿಸ್ಥಿತಿಯ ವರದಿ ಮಾಡಿಕೊಂಡು ಬರುತ್ತೇನೆ ಎಂದೋ, ಮಲದ ಗುಂಡಿಗೆ ಬಿದ್ದು ಸಾಯುತ್ತಿರುವ ಪೌರಕಾರ್ಮಿಕರ ಬಗ್ಗೆ ಬರೆಯುತ್ತೇನೋ ಎಂದೋ ಒಬ್ಬ ವರದಿಗಾರ ಆಸಕ್ತಿ ತೋರಿದರೆ ಸಾಮಾನ್ಯವಾಗಿ ಯಾವ ಸಂಪಾದಕರೂ ಬೇಡ ಎಂದು ಹೇಳಲಾರರು.

ಆ ರೀತಿಯ ಆಸಕ್ತಿಯನ್ನು ತೋರಿಸುವ ಪತ್ರಕರ್ತರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕದ ಬೆಳವಣಿಗೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT