ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕನ್ನು ಹಗುರಾಗಿಸುವ ದಾರಿ

Last Updated 15 ಜನವರಿ 2015, 19:30 IST
ಅಕ್ಷರ ಗಾತ್ರ

ಇದು ತಾವೋ ಪಂಥದ ಸ್ಥಾಪಕ ಲಾ-ಓತ್ಸುವಿನ ಶಿಷ್ಯನೊಬ್ಬ ಹೇಳಿದ ಕಥೆ. ಚೀನಾ ದೇಶದ ಒಂದು ಹಳ್ಳಿಯಲ್ಲಿ ಒಬ್ಬ ತರುಣನಿದ್ದ. ಅವನಿಗೆ ಹುಟ್ಟಿದಾಗಿನಿಂದ ಬಡತನ ಅಂಟಿಕೊಂಡಿತ್ತು.  ತಂದೆ ತಾಯಿಯರನ್ನು ಬಾಲ್ಯದಿಂದಲೇ ಕಾಣದ ಆತ ಒಬ್ಬ ಜಮೀನುದಾರನ ಹೊಲದಲ್ಲಿ ಕೆಲಸ ಮಾಡುತ್ತಿದ್ದ. ಅವನದಾದದ್ದೆಂದರೆ ಒಂದು ಗುದ್ದಲಿ ಮಾತ್ರ. ನಿತ್ಯವೂ ಅದನ್ನು ತೊಳೆದು ಶುದ್ಧ ಮಾಡಿಕೊಂಡು ತೋಟಕ್ಕೆ ಹೋಗಿ ಸಂಜೆಯವರೆಗೂ ಕೆಲಸ ಮಾಡುತ್ತಿದ್ದ. ಗುದ್ದಲಿಯಿಂದ ನೆಲ­ವನ್ನು ಅಗಿದು ತರಕಾರಿ ಬೆಳೆದು ಪಟ್ಟಣಕ್ಕೆ ಹೋಗಿ ಮಾರಿಕೊಂಡು ಬಂದು ಹಣ­ವನ್ನು ಯಜಮಾನನಿಗೆ ಒಪ್ಪಿಸುತ್ತಿದ್ದ.

ವರ್ಷಗಳ ಕಾಲ ಹೀಗೆಯೇ ದುಡಿದ ರೈತನಿಗೆ ವೈರಾಗ್ಯ ಮೂಡಿತು. ಇನ್ನು ಎಷ್ಟು ವರ್ಷ ಹೀಗೆಯೇ ದುಡಿಯುವುದು? ಬದುಕಿಗೇನಾದರೂ ಅರ್ಥ­ವಿ­ದೆಯೇ? ಎಂದು ಚಿಂತಿಸಿ ಸನ್ಯಾಸ ತೆಗೆದುಕೊಳ್ಳಬೇಕೆಂದು ತೀರ್ಮಾನಿಸಿದ. ತನ್ನ ಏಕಮಾತ್ರ ಆಸ್ತಿಯಾದ ಗುದ್ದಲಿಯನ್ನು ಮನೆಯ ಹಿಂದೆ ನೆಲದಲ್ಲಿ ಹುಗಿದಿಟ್ಟು ದೂರ ಹೋಗಿ ಸನ್ಯಾಸ ತೆಗೆದುಕೊಂಡ.

ಮೂರು ತಿಂಗಳಿನ ನಂತರ ಅವನು ಅಷ್ಟು ನೆಚ್ಚಿಕೊಂಡಿದ್ದ ಗುದ್ದಲಿ ಕನಸಿನಲ್ಲಿ ಕಾಡತೊಡಗಿತು. ಬರಬರುತ್ತಾ ಆದರೆ ಸೆಳೆತ ತಡೆಯ­ದಂತಾ­ಯಿತು. ಒಂದು ದಿನ ಮರಳಿ ಬಂದು ಗುದ್ದಲಿಯನ್ನು ತೆಗೆದು ಮತ್ತೆ ಕೆಲಸ ಪ್ರಾರಂ­ಭಿಸಿದ.  ಮತ್ತೊಮ್ಮೆ ಇದೇ ರೀತಿ ಮನಸ್ಸು ತಳಮಳಿಸಿದಾಗ ತಿರುಗಿ ಹೋಗಿ ಸನ್ಯಾಸ ಕಾರ್ಯ ನಡೆಸಿದ. ಇದೇ ರೀತಿ ಮೂರು ಬಾರಿ ಆಯಿತು. 

ನಾಲ್ಕನೆಯ ಬಾರಿಗೆ ಮತ್ತೆ ಗುದ್ದಲಿಯ ಮೋಹ ಎಳೆದಾಗ ಅವನು ಮನಸ್ಸನ್ನು ಧೃಡಪಡಿಸಿಕೊಂಡು ಮನೆಗೆ ಬಂದ. ಈ ಮೊಂಡ ಗುದ್ದಲಿಗಾಗಿ ನಾನು ಪರಿಪಾ­ಟಲು ಪಟ್ಟಿದ್ದು ಸಾಕು ಎಂದು ಅದನ್ನು ತೆಗೆದುಕೊಂಡು ನದೀತೀರಕ್ಕೆ ಹೋದ.  ಅದು ನದಿಯಲ್ಲಿ ಬಿದ್ದ ಜಾಗೆ ಕಂಡರೆ ಮತ್ತೆ ಅದು ತನ್ನನ್ನು ಅದು ತನ್ನನ್ನು ಎಳೆದೀತು ಎಂದುಕೊಂಡು ಕಣ್ಣುಕಟ್ಟಿಕೊಂಡು ಜೋರಾಗಿ ಗರಗರನೇ ತಿರುಗಿ ನದಿಯ ಮಧ್ಯದಲ್ಲಿ ಬೀಳುವಂತೆ ಎಸೆದುಬಿಟ್ಟ. ಅವನ ಮನಸ್ಸು ನಿರಾಳವಾ­ಯಿತು.  ಸಂತೋಷಾತಿರೇಕದಲ್ಲಿ ಕೇಕೆ ಹಾಕಿ ಕೂಗಿದ, ನಾನು ಗೆದ್ದೆ, ಗೆದ್ದೇ ಬಿಟ್ಟೆ. ಹೀಗೆ ನಾಲ್ಕಾರು ಬಾರಿ ಕೂಗಿದ.

ಅದೇ ಸಮಯದಲ್ಲಿ ಚಕ್ರವರ್ತಿಯೊಬ್ಬ ನದಿಯಲ್ಲಿ ಸ್ನಾನಮಾಡುತ್ತಿದ್ದ.  ಆತ ಒಂದು ದೊಡ್ಡ ಯುದ್ಧದಲ್ಲಿ ಪ್ರಚಂಡ ವಿಜಯವನ್ನು ಸಾಧಿಸಿ ತನ್ನ ನಗರಿಗೆ ಮರಳುತ್ತಿದ್ದ.  ರೈತನ ಕೂಗನ್ನು ಕೇಳಿ ಕರೆದು ಕೇಳಿದ, ಅಯ್ಯೋ, ಯುದ್ಧ ಗೆದ್ದು ವಿಜಯಿಯಾಗಿ ಬಂದದ್ದು ನಾನು. ನೀನು ಏನು ಗೆದ್ದೆ? ಆಗ ರೈತ ತುಂಬ ಸಂತೋಷದಿಂದ, ಮಹಾರಾಜ ನೀನು ಕೇವಲ ಒಂದು ಯುದ್ಧವನ್ನು ಗೆದ್ದಿ­ದ್ದೀಯಾ. ನಾಳೆ ಮತ್ತೊಂದು, ನಾಡಿದ್ದು ಮಗುದೊಂದು ಯುದ್ಧ ಬಂದೀತು. ನೀನು ಲಕ್ಷ ಯುದ್ಧ ಗೆದ್ದರೂ ಅದು ನಿಜವಾದ ಗೆಲುವೇ ಅಲ್ಲ. ಯಾಕೆಂದರೆ ಅದು ಕೇವಲ ದೈಹಿಕ ಗೆಲುವು ನೀನು ಚಿತ್ತ ವಿಕಾರಗಳನ್ನು ಗೆದ್ದಿಲ್ಲ.

ಆದರೆ ನಾನು ಇಂದು ನನ್ನನ್ನು ಬಲವಾಗಿ ಕಾಡುತ್ತಿದ್ದ ಗುದ್ದಲಿಯ ಮೋಹವನ್ನು ಗೆದ್ದಿದ್ದೇನೆ. ನನಗೆ ನನ್ನ ಗುದ್ದಲಿಯ ಮೇಲಿನ ಮೋಹದ ತೀವ್ರತೆ ಎಷ್ಟಿತ್ತೋ ನಿನ್ನ ರಾಜ್ಯದ ಮೋಹವೂ ಅಷ್ಟೇ ಇದೆ. ಅದರಿಂದ ಪಾರಾಗುವ ತನಕ ಅದು ನಿಜವಾದ ಗೆಲು­ವಲ್ಲ. ರಾಜ ತದೇಕಚಿತ್ತದಿಂದ ರೈತನ ಮಾತುಗಳನ್ನು ಕೇಳುತ್ತಿದ್ದ. ಅವನಿಗೇನು ಹೊಳೆಯಿತೋ. ಆ ಕ್ಷಣದಲ್ಲೇ ಆತನೂ ತನ್ನ ಇಡೀ ರಾಜ್ಯದ ಮೋಹವನ್ನು ಕಳೆದು­ಕೊಂಡು, ನೆನೆದ ಬಟ್ಟೆಯಲ್ಲೇ, ರೈತನ ಕೈ ಹಿಡಿದುಕೊಂಡು ಪರ್ವತಗಳ ಕಡೆಗೆ ನಡೆದುಬಿಟ್ಟ.

ಲಾ-ಓತ್ಸು ಹೇಳುತ್ತಾನೆ, ಮೋಹ, ಕಾಮಗಳು ಮನುಷ್ಯನನ್ನು ಹಿಂಡುವಷ್ಟು ದೈಹಿಕ ಅವಸ್ಥೆಗಳ ಕಾಡುವುದಿಲ್ಲ. ಅವುಗಳನ್ನು ಮೀರುವುದು ತುಂಬ ಕಷ್ಟವಾ­ದರೂ ಅವುಗಳ ತೀಕ್ಷ್ಣತೆಯನ್ನಾದರೂ ಕಡಿಮೆ ಮಾಡಕೊಳ್ಳಬೇಕು ಬಹುಶ: ಇದೇ ಬದುಕನ್ನು ಹಗುರಾಗಿಸುವ ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT