ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ಅಂಚಿನಲ್ಲಿ...

Last Updated 1 ಜೂನ್ 2013, 19:59 IST
ಅಕ್ಷರ ಗಾತ್ರ

ಕಳೆದ ವಾರವಿಡೀ ಮನಸ್ಸು ಕುಗ್ಗಿಹೋಗಿತ್ತು. ನನ್ನ ವಾರ್ಡ್‌ನಲ್ಲಿದ್ದ ಮೂವರು ಮಕ್ಕಳಿಗೆ ಗುಣಪಡಿಸಲಾಗದ ಕಾಯಿಲೆ ಇರುವುದು ಪತ್ತೆಯಾಗಿತ್ತು. ಸಾಮಾನ್ಯವಾಗಿ ಕೆಲವು ಕಾಯಿಲೆಗಳ ರೋಗನಿರ್ಣಯ ಕಷ್ಟ. ಆದರೆ ಇಲ್ಲಿ ರೋಗನಿರ್ಣಯ ಸಾಧ್ಯವಾಗಿತ್ತು. ದುರದೃಷ್ಟವಶಾತ್ ಅದಕ್ಕೆ ಯಾವುದೇ ಚಿಕಿತ್ಸೆಗಳು ಲಭ್ಯವಿಲ್ಲ. ವೈದ್ಯ ಜೀವನದ ಅತಿ ಹತಾಶೆಯ ಕ್ಷಣಗಳಿವು.

ಮೆಟ್ರೊ ಕಾಮಗಾರಿ ನಮ್ಮ ಮಾಮೂಲಿ ವಾರ್ಡ್‌ಗಳಿಂದ ನಮ್ಮನ್ನು ಬೇರೆಡೆಗೆ ವರ್ಗಾಯಿಸಿದೆ. ವಾರ್ಡ್‌ಗಳನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ನಾವೆಲ್ಲರೂ ತೊಡಗಿದ್ದೇವೆ. ಆಗಿನ ಮೇಲ್ವಿಚಾರಕ ಮತ್ತು ಎಚ್‌ಓಡಿ ಡಾ. ಎಂ.ಎಲ್. ಸಿದ್ದರಾಜು ಅವರು ನನಗೆ ನೀಡಿದ್ದ ವಾರ್ಡ್ ಅನ್ನು `ಮಿಸ್' ಮಾಡಿಕೊಳ್ಳುತ್ತಿದ್ದೇನೆ. ಆ ವಾರ್ಡ್ ನನ್ನ ತಂದೆಯವರಿಗೂ ಸೇರಿತ್ತು ಎನ್ನುವುದು ವಿಶೇಷ. ನನ್ನ ನಿವೃತ್ತಿಯ ಸಮಯದಲ್ಲಿಯೇ ಆ ವಾರ್ಡ್‌ಗೆ ಮರಳಿ ಹೋಗುತ್ತೇನೆ ಎಂಬ ಕಹಿ ಸತ್ಯವನ್ನು ಒಪ್ಪಿಕೊಳ್ಳಲೇಬೇಕು. ಭಾವಾತಿರೇಕ ಕೆಲವೊಮ್ಮೆ ನಮ್ಮನ್ನು ಕದಡುತ್ತದೆ.

ನನ್ನ ಮನಸ್ಸು ಈ ಬಗೆಯಲ್ಲಿ ದುಃಖಿತವಾಗಿರುವಾಗಲೇ ನನ್ನ ಯುನಿಟ್‌ಗೆ ಜಗನ್ ದಾಖಲಾದ. ಹರಟೆಮಲ್ಲ ಮತ್ತು ನೋಡಲು ಆಕರ್ಷಕವಾಗಿದ್ದ ಹುಡುಗ ಸ್ವಲ್ಪ ಹೊತ್ತಿಗೇ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಅದಕ್ಕೆ ಆತನ ದೈಹಿಕ ಅಸಾಮರ್ಥ್ಯದ ಅನುಕಂಪವೂ ಕಾರಣವಿರಬಹುದು ಎನ್ನುವುದು ನನ್ನ ಊಹೆ. ಉಸಿರಾಟದ ತೊಂದರೆಯಿಂದ ಕಾಯಿಲೆಯ ತುತ್ತತುದಿಯಲ್ಲಿದ್ದ ಜಗನ್‌ನನ್ನು ಜಯದೇವ ಆಸ್ಪತ್ರೆಯ ಸೂಚನೆಯಂತೆ ವಾಣಿವಿಲಾಸ ಆಸ್ಪತ್ರೆಗೆ ಕರೆತರಲಾಗಿತ್ತು. ಆತ ತನ್ನ ಕಥೆ ವಿವರಿಸತೊಡಗಿದ.

ನೆಲಮಂಗಲ ಸಮೀಪದ ಸುಳುಕುಂಟೆಪಾಳ್ಯದ ಜಗನ್‌ಗೆ 14 ವರ್ಷ. ಆತ ಓದಿನಲ್ಲಿ ಚುರುಕು. ಒಂಬತ್ತನೇ ತರಗತಿಯಲ್ಲಿದ್ದ ಹುಡುಗನಿಗೆ ತನ್ನ ಕುಟುಂಬದ ಮೊದಲ ಪದವೀಧರ ಎನಿಸಿಕೊಳ್ಳುವ ಆಸೆ. ಬಡ ಮತ್ತು ಅನಕ್ಷರಸ್ಥ ಕೃಷಿಕ ಪೋಷಕರಿಗೆ ಆತ ಎರಡನೇ ಮಗ. ಎರಡು ಎಕರೆ ಜಮೀನನ್ನು ಹಂಚಿಕೊಂಡ ನಾಲ್ವರು ಸಹೋದರರ ಅವಿಭಕ್ತ ಕುಟುಂಬಕ್ಕೆ ಸೇರಿದ ಹುಡುಗ ಆತ.
ಆರು ವರ್ಷದವನಾಗಿದ್ದಾಗ ಮಗನ ಹಿಂಭಾಗ ಊದಿಕೊಂಡಿರುವುದನ್ನು ಪೋಷಕರು ಗಮನಿಸಿದರು.

ಸ್ಥಳೀಯ ವೈದ್ಯರುಗಳ ಚಿಕಿತ್ಸೆಯಿಂದ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಗೆ ಕಾಲಿರಿಸುವ ಹೊತ್ತಿಗೆ ದೀರ್ಘ ಕಾಲ ಸರಿದುಹೋಗಿತ್ತು. ಆತನ ಹಿಂಭಾಗದ ಮಾಂಸಖಂಡಕ್ಕೆ (ಬಲಭಾಗ) ಅಪರೂಪದ ಕ್ಯಾನ್ಸರ್- ರಬ್ಡೊಮಿಯೊಸರ್ಕೊಮಾ (ಆರ್‌ಎಂಎಸ್) ತಗುಲಿರುವುದು ಕಿದ್ವಾಯಿಯಲ್ಲಿ ಪತ್ತೆಯಾಯಿತು. ಇದು ತೀವ್ರ ಕ್ಯಾನ್ಸರ್‌ಕಾರಕ ಗಡ್ಡೆಯಾಗಿದ್ದು, ಇದು ಬಾಲ್ಯದ ಮೆದು ಊತಕ ಭಾಗವನ್ನು ಶೇಕಡಾ 50ರಷ್ಟು ಆವರಿಸಿಕೊಳ್ಳುತ್ತದೆ. ಈ ಗಡ್ಡೆಯ ವೈಚಿತ್ರ್ಯವೆಂದರೆ, ಬಿದ್ದಾಗ/ಗಾಯವಾದಾಗ ಉಂಟಾಗುವ ತೀರಾ ಸಾಮಾನ್ಯ ಊತದಂತೆ ತೋರುವುದು. ಕಿದ್ವಾಯಿಯ ಡಾ. ಅಪ್ಪಾಜಿ ಮತ್ತು ಅವರ ತಂಡ ತಕ್ಷಣ ಕಾರ್ಯಪ್ರವೃತ್ತರಾಗಿ ಶಸ್ತ್ರಚಿಕಿತ್ಸೆ ಮೂಲಕ ಗಡ್ಡೆಯನ್ನು ಹೊರತೆಗೆದರು. ಸಾಮಾನ್ಯವಾಗಿ ಕ್ಯಾನ್ಸರ್ ಚಿಕಿತ್ಸೆಗಳಲ್ಲಿ ಶಸ್ತ್ರಚಿಕಿತ್ಸೆ ಬಳಿಕ ದೇಹದಲ್ಲಿ ಉಳಿದ ಕ್ಯಾನ್ಸರ್ ಕೋಶಗಳನ್ನು ಹೊರತೆಗೆಯಲು ಕೆಮೊಥೆರಪಿ ನಡೆಸಲಾಗುತ್ತದೆ. ಜಗನ್‌ಗೆ ಕೂಡ ಕೆಮೊಥೆರಪಿ ಮಾಡಲಾಯಿತು.

ಜಗನ್‌ನ ಹೇಳಿದ: `ಮೇಡಂ, ಕೆಮೊಥೆರಪಿ ಪ್ರತಿಪರಿಣಾಮಕ್ಕೆ ಒಳಗಾದ ಕೆಲವೇ ವ್ಯಕ್ತಿಗಳಲ್ಲಿ ನಾನೂ ಒಬ್ಬನಿರಬೇಕು. ನನ್ನಲ್ಲಿ ಹೃದಯದ ನಂಜು ಬೆಳೆಯಿತು'.

ಕ್ಯಾನ್ಸರ್ ಚಿಕಿತ್ಸೆ ಅತ್ಯಂತ ಕ್ಲಿಷ್ಟಕರ. ಅಪಾಯಕಾರಿ ಅಡ್ಡ ಪರಿಣಾಮಗಳೊಂದಿಗೆ ಅದರ ಪ್ರಯೋಜನಗಳನ್ನು ಸಮತೋಲನ ಮಾಡಬೇಕು. ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಕ್ಯಾನ್ಸರ್ ಔಷಧಗಳು ಸಾಮಾನ್ಯ ಕೋಶಗಳನ್ನೂ ಕೊಲ್ಲುತ್ತವೆ.

ನೀಡುತ್ತಿರುವ ಔಷಧವನ್ನು ಕೂಡಲೇ ನಿಲ್ಲಿಸದಿದ್ದರೆ ಆತ ಹೃದ್ರೋಗ ನಂಜಿನಿಂದ ಸಾವಿಗೀಡಾಗಬಹುದು ಎಂದು ಜಯದೇವ ಆಸ್ಪತ್ರೆ ವೈದ್ಯರು ಅಭಿಪ್ರಾಯಪಟ್ಟರು. ಒಂದು ವೇಳೆ ಔಷಧವನ್ನು ನಿಲ್ಲಿಸಿದರೆ ಕ್ಯಾನ್ಸರ್ ಹರಡಿಯೂ ಆತ ಸಾಯಬಹುದು. ಪರ ಮತ್ತು ವಿರೋಧಗಳನ್ನು ಅಳೆದೂತೂಗಿ ಡಾ. ಅಪ್ಪಾಜಿ ಮತ್ತವರ ತಂಡ ಔಷಧ ನೀಡುವುದನ್ನು ನಿಲ್ಲಿಸಿತು. ಜಗನ್‌ಗೆ ಹೃದಯಾಘಾತವಾಗದಂತೆ ಔಷಧ ನೀಡತೊಡಗಿದರು. ಈ ಎಲ್ಲಾ ಅನಿಶ್ಚಿತತೆಗಳ ಮಧ್ಯೆ, ಈ ಮಗುವಿಗೆ ದೇವರೇ ಸಹಾಯ ಮಾಡುತ್ತಾನೆ ಎಂಬ ನಂಬಿಕೆಯೊಂದಿಗೆ ಜಗನ್ ಮತ್ತವನ ಪೋಷಕರು ತಮ್ಮ ಹಳ್ಳಿಗೆ ಮರಳಿದರು.

ಮಾರ್ಚ್ 2012. ಎಡಗಾಲಿನಲ್ಲಿ ಕಾಣಿಸಿಕೊಂಡ ಕಡುಯಾತನಾಮಯ ಊತದ ನೋವಿನಿಂದ ಜಗನ್ ನರಳತೊಡಗಿದ. ಕಿದ್ವಾಯಿಯ ಪರಿಚಯವಿದ್ದುದರಿಂದ ಪೋಷಕರು ನೇರವಾಗಿ ಅಲ್ಲಿಗೇ ಆತನನ್ನು ಕರೆದೊಯ್ದರು. ಆತನಲ್ಲಿ ಮತ್ತೊಂದು ಕ್ಯಾನ್ಸರ್ ಪತ್ತೆಯಾಯಿತು. ಅದು ಕಾಲಿನ ಮೂಳೆಯಲ್ಲಿ ಕಾಣಿಸಿಕೊಳ್ಳುವ ಆಸ್ಟಿಯೊಸರ್ಕೊಮಾ. ಪಾಪದ ಮಗು ಇನ್ನೊಂದು ಕ್ಯಾನ್ಸರ್‌ಗೆ ತುತ್ತಾಗಿತ್ತು.

ಕಾಲನ್ನು ಕತ್ತರಿಸಿ ತೆಗೆಯಬೇಕೆಂಬ ಅನಿವಾರ್ಯತೆಯನ್ನು ಅರ್ಥಮಾಡಿಕೊಂಡ ಪೋಷಕರು ಕೂಡಲೇ ಅದಕ್ಕೆ ಒಪ್ಪಿಕೊಂಡರು. ವಿದ್ಯಾಭ್ಯಾಸದ ಬಗ್ಗೆ ಅಪಾರ ಒಲವು ಹೊಂದಿದ್ದ ಹದಿಮೂರು ವರ್ಷದ ಮಗುವಿನ ಕಾಲನ್ನು ತೆಗೆಯಲು ಒಪ್ಪಿಕೊಳ್ಳುವುದು ಸಂಕಷ್ಟದ ನಿರ್ಣಯವೇ ಸರಿ. ಆತ ಇನ್ನುಮುಂದೆ ಹೇಗೆ ಶಾಲೆಗೆ ಹೋಗುತ್ತಾನೆ? ಊರುಗೋಲನ್ನು ಬಳಸುತ್ತಾನೆ ಎನ್ನುವುದು ಅತಿ ಸರಳ ಉತ್ತರವಾಗಬಹುದು. ಮೂಳೆ ಕ್ಯಾನ್ಸರ್‌ಗೆ ತುತ್ತಾದಾಗ ಅಂಗಚ್ಛೇದನ ಒಂದೇ ಲಭ್ಯವಿರುವ ಏಕೈಕ ಪರಿಹಾರ. ಇಲ್ಲದಿದ್ದರೆ ಆತ ಶೋಚನೀಯ ಸಾವಿಗೆ ಶರಣಾಗಬೇಕಾಗುತ್ತದೆ.

ಕೆಲವೊಮ್ಮೆ ಎಲ್ಲದಕ್ಕಿಂತ ಅಂತ್ಯವೆನ್ನಿಸುವ ಸಾವನ್ನು ಒಪ್ಪಿಕೊಳ್ಳುವುದು ಸುಲಭವೆನಿಸುತ್ತದೆ. ಆದರೆ ಈ ಬಗೆಯ ಸನ್ನಿವೇಶವನ್ನು ಎದುರಿಸುವುದು ಇನ್ನೂ ಕಷ್ಟ.

ಮಾರ್ಚ್ 2012ರ ಒಂದು ದಿನ. ಜಗನ್‌ನ ಎಡಗಾಲನ್ನು ಮೊಣಕಾಲಿಗಿಂತ ಮೇಲ್ಭಾಗದವರೆಗೆ ಕತ್ತರಿಸಲಾಯಿತು. ಕೃತಕ ಕಾಲು ಅಳವಡಿಸಿದರೆ ಆತ ಶಾಲೆಗೆ ಹೋಗಬಲ್ಲವನಾಗಿದ್ದ. ಹೃದಯ ನಂಜಿನ ಭಯದ ಕಾರಣಕ್ಕೆ ಕೆಮೊಥೆರಪಿಯ ನಂತರದ ಚಿಕಿತ್ಸೆ ಮುಂದುವರಿಕೆ ಮತ್ತಷ್ಟು ಜಟಿಲವಾಯಿತು. ಹೀಗಾಗಿ ಆತನನ್ನು ಮನೆಗೆ ಕಳುಹಿಸಲಾಯಿತು. ಕೃತಕ ಅಂಗಾಂಗಕ್ಕಾಗಿ ಅಗತ್ಯವಿರುವ ಸುಮಾರು ಒಂದೂವರೆ ಲಕ್ಷ ರೂಪಾಯಿಗಾಗಿ ನಿಧಿ ಸಂಗ್ರಹಣೆ ಮಾಡುವುದಾಗಿ ಡಾ. ಅಪ್ಪಾಜಿ ಆತನಿಗೆ ತಿಳಿಸಿದರು.

ಊರುಗೋಲುಗಳ ನೆರವಿನಿಂದ ಶಾಲೆಗೆ ಹೋಗಬೇಕಾದ ಜಗನ್, ತನ್ನ ಮಹತ್ವಾಕಾಂಕ್ಷೆಯ ಓದನ್ನು ತ್ಯಜಿಸಬೇಕಾಯಿತು. ಈ ಮಗು ಮತ್ತು ಆತನ ಕುಟುಂಬಕ್ಕೆ ಸಹಾಯ ಮಾಡಲೇಬೇಕೆಂದು ನಾನು ನಿಶ್ಚಯಿಸಿದ್ದೆ. ಆರ್‌ಎಂಓ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಸಂಪೂರ್ಣ ಶುಲ್ಕ ವಿನಾಯಿತಿ ಪಡೆಯುವಂತೆ ಪ್ರಸ್ತುತ ನನ್ನ ಯುನಿಟ್‌ನಲ್ಲಿ ಕರ್ತವ್ಯದಲ್ಲಿರುವ ಸ್ನಾತಕೋತ್ತರ ವಿದ್ಯಾರ್ಥಿ ಡಾ. ರಘುರಾಮಯ್ಯ ಅವರಲ್ಲಿ ಮನವಿ ಮಾಡಿದೆ. ಆತನಿಗೆ `ದೈಹಿಕ ಅಸಾಮರ್ಥ್ಯ ಪ್ರಮಾಣಪತ್ರ' ದೊರಕಿಸಿಕೊಡಲೂ ನಾವು ಚಿಂತನೆ ನಡೆಸಿದೆವು. ಅದರಿಂದ ಆತ ಪ್ರತಿ ತಿಂಗಳು 1000 ರೂಪಾಯಿ ಪಡೆಯಬಹುದು. ಈ ಪೋಷಕರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ವತಃ ಕರೆದೊಯ್ಯುವಂತೆ ಡಾ. ರಘುರಾಮಯ್ಯ ಅವರನ್ನು ಒಪ್ಪಿಸಿದೆ.

ಇದೆಲ್ಲವೂ ನಡೆಯುತ್ತಿರವಾಗಲೇ, ಆ ದಿನ ಬೆಳಿಗ್ಗೆ ಜಗನ್ ನನ್ನ ಕೊಠಡಿ ಪ್ರವೇಶಿಸಿದ. `ಮೇಡಂ, ನಾನು ನಿಮ್ಮ ಬಳಿ ಮಾತನಾಡಬೇಕು' ಎಂದ. ತನ್ನ ಊರುಗೋಲುಗಳನ್ನು ಗೋಡೆಗೆ ಆನಿಸಿದ. ಆತನ ಕೋರಿಕೆಯಂತೆ ಬಾಗಿಲುಗಳನ್ನು ಮುಚ್ಚಿದೆ. ತನ್ನ ಪೋಷಕರು ಹಿಂದಿರುಗುವ ಮುನ್ನವೇ ಇದನ್ನು ನನಗೆ ಹೇಳಬೇಕೆಂದು ಆತ ಬಯಸಿದ್ದ.

`ಮೇಡಂ, ನಿಮಗೆ ತಿಳಿದಿಲ್ಲವೇ? ನಾನು ಮರಣದ ಅಂಚಿನಲ್ಲಿದ್ದೇನೆ'. ನಾನು ಅದು ತಿಳಿದಿಲ್ಲವೆಂಬಂತೆ ಕುಳಿತೆ. ಆತ ತನ್ನ ಹಿಂಬದಿಯಲ್ಲಿದ್ದ ಎಂಟು ಇಂಚು ಉದ್ದದ ಗಾಯದ ಕಲೆಯನ್ನು ತೋರಿಸಿದ. ಅದು ಆತನ ಮೊದಲ ಮಾಂಸಖಂಡದ ಕ್ಯಾನ್ಸರ್ (ಆರ್‌ಎಂಎಸ್) ಚಿಕಿತ್ಸೆ ನಡೆದ ಭಾಗ. ನಂತರ ತನ್ನ ಎಡಗಾಲಿನ ತುಂಡನ್ನು ಮತ್ತು ಅದಕ್ಕೆ ಹಾಕಿದ್ದ ಹೊಲಿಗೆಯನ್ನು ತೋರಿಸಿದ. ಈ ಹೊತ್ತಿಗೆ ಆತನ ಕಾಲು ಒದ್ದೆಯಾಗತೊಡಗಿತು. ಅವನ ಕಣ್ಣನಿಂದ ನೀರು ಧಾರಾಕಾರವಾಗಿ ಹರಿಯತೊಡಗಿತ್ತು. ತನ್ನ ಕಾಲನ್ನು ಕಳೆದುಕೊಂಡಿರುವುದನ್ನು ಒಪ್ಪಿಕೊಳ್ಳುವುದು ಆತನಿಗೆ ತುಂಬಾ ಕಷ್ಟವಾಗಿತ್ತು. ಆತನಿಗೆ ಕೃತಕ ಕಾಲಿನ ಬಗ್ಗೆ ವಿವರಿಸಿ ಹೇಳಿದೆ. ಆತ ದೃಢವಾಗಿ ಹೇಳಿದ್ದು- `ನನಗೆ ಉಳಿದಿರುವ ಕೆಲವೇ ತಿಂಗಳುಗಳಿಗಾಗಿ ಒಂದೂವರೆ ಲಕ್ಷದಷ್ಟು ಮೊತ್ತವನ್ನು ದಯವಿಟ್ಟು  ವ್ಯರ್ಥಮಾಡಬೇಡಿ' ಎಂದು.

`ನಾನು ಮಾರಣಾಂತಿಕ ಕಾಯಿಲೆಗೆ ತುತ್ತಾಗಿದ್ದೇನೆ ಎಂಬುದು ಚೆನ್ನಾಗಿ ಗೊತ್ತಿದ್ದೂ ನನ್ನನ್ನೇಕೆ ನೀವು ಬಿಡುಗಡೆ ಮಾಡುತ್ತಿಲ್ಲ?' ಎಂದ. ಈ ಹೊತ್ತಿಗೆ ನಾನು ಭಾವುಕಳಾಗಿದ್ದೆ. ಆತನಿಗೆ ದೈಹಿಕ ಅಸಾಮರ್ಥ್ಯ ಪ್ರಮಾಣಪತ್ರದ ನೆಪ ಹೇಳಿದೆ.

`ಪ್ರತಿ ದಿನ ಶೌಚಾಲಯಕ್ಕೆ ಹೋಗುವುದು ನನಗೆ ಎಷ್ಟು ಕಷ್ಟವಾಗುತ್ತದೆ ಗೊತ್ತೆ?'
`ಮತ್ತೆ ನಿಮ್ಮ ಹಳ್ಳಿಯಲ್ಲಿ ಶೌಚಾಲಯವನ್ನು ಹೇಗೆ ಬಳಸುತ್ತೀಯಾ?'
`ನನಗಾಗಿ ಅಪ್ಪ ಅಮ್ಮ ಟಾಯ್ಲೆಟ್ ಚೇರ್ ತಂದುಕೊಟ್ಟಿದ್ದಾರೆ'.
ಜಗನ್‌ನ ಮಾತು ಕೂಡಲೇ ನನ್ನನ್ನು ದಿಗ್ಭ್ರಾಂತಳನ್ನಾಗಿಸಿತು. ಜಗನ್‌ನಂಥ ರೋಗಿಗಳಿಗಾಗಿ ಪ್ರತಿ ಸರ್ಕಾರಿ ಆಸ್ಪತ್ರೆಯಲ್ಲಿಯೂ ಕನಿಷ್ಠ ಒಂದಾದರೂ ಪಾಶ್ಚಿಮಾತ್ಯ ಶೈಲಿಯ ಶೌಚಾಲಯ ಇರಲೇಬೇಕು. ಮಾತುಕತೆ ಅಲ್ಲಿಗೇ ಮುಗಿಯಲಿಲ್ಲ. ಜಗನ್ ರಾಗಿ ಮುದ್ದೆ ತಿನ್ನುವ ಆಸೆ ವ್ಯಕ್ತಪಡಿಸಿದ. ಆಸ್ಪತ್ರೆಯ ಕ್ಯಾಂಟೀನ್‌ನಿಂದ ಕೊಡಿಸುವುದಾಗಿ ಹೇಳಿದೆ. ನಾನು ನೀಡಿದ ಎಲ್ಲಾ ಪರಿಹಾರದ ಭರವಸೆಗಳ ನಂತರವೂ ಆತ ಕೊನೆಯಲ್ಲಿ ಹೇಳಿದ್ದು ತಾನು ಮನೆಗೆ ಹೋಗಬೇಕು ಎಂದು.

ಆತನಲ್ಲಿ `ಅಂಗಭ್ರಮೆ'ಯ ಸಮಸ್ಯೆಯೂ ಹುಟ್ಟಿಕೊಂಡಿತ್ತು. ಅಂದರೆ, ತಾನು ಕಳೆದುಕೊಂಡಿರುವ ಅಂಗ ಇನ್ನೂ ದೇಹಕ್ಕೆ ಅಂಟಿಕೊಂಡಿಯೇ ಇದೆ ಎಂಬ ಭ್ರಮೆ. ಅದು ಅತ್ಯಂತ ನೋವಿನ ಸಂವೇದನೆ.

ಆತನಿಗಾಗಿ ನಾನು ಏನಾದರೂ ಮಾಡಬೇಕೆಂದು ಬಯಸಿದೆ. ಉಡುಪುಗಳನ್ನು ತಂದುಕೊಟ್ಟೆ. ಪ್ಯಾಂಟ್‌ಗಳತ್ತ ನೋಡಿದ ಅವನು, `ಮೇಡಂ ಇದನ್ನು ಏಕೆ ವ್ಯರ್ಥ ಮಾಡಿದಿರಿ. ನನಗೆ ಬೇಕಿರುವುದು ಕೇವಲ ಒಂದು ಕಾಲಿರುವ ಪ್ಯಾಂಟ್'. ನಾನು ತಕ್ಷಣವೇ ವೈದ್ಯಕೀಯ-ಸಮಾಜ ಸೇವಕ ಸುರೇಶ್ ಅವರಿಗೆ ಕರೆಮಾಡಿ, ಬಹು ಬಳಕೆಯ ಪೌಷ್ಟಿಕಾಂಶಯುತ ಆಹಾರದ ಪೊಟ್ಟಣಗಳನ್ನು ಆತನಿಗೆ ನೀಡಿದೆ. ಅವಸರದಲ್ಲಿ ಆತ ಹೇಳಿದ- `ನನ್ನ ಪೋಷಕರು ಬರುವ ಮುನ್ನ ನಿಮಗೇನೋ ಹೇಳಬೇಕು'.

ಆತ ತನ್ನ ಎದೆಯ ಎಕ್ಸ್‌ರೇಯನ್ನು ತೆಗೆದು, ಅದರಲ್ಲಿ ಕ್ಯಾನ್ಸರ್ ಕೋಶಗಳಿಂದ ತುಂಬಿದ್ದ ಶ್ವಾಸಕೋಶ ಮತ್ತು ಹಿಂಬದಿಯ ಎಲುಬುಗಳನ್ನು ತೋರಿಸಿದ. `ಮೇಡಂ ದಯವಿಟ್ಟು ಅಳಬೇಡಿ. ನನ್ನ ಪೋಷಕರಿಗೂ ಹೇಳುವುದಿಲ್ಲ ಎಂದು ಪ್ರಮಾಣ ಮಾಡಿ. ನನಗೆ ಗೊತ್ತು. ನಾನು ಸಾಯುತ್ತಿದ್ದೇನೆ ಎಂದು'. `ನೀನು ಸಾವನ್ನು ಹೇಗೆ ಎದುರಿಸುತ್ತೀಯಾ' ಎಂದು ಕೇಳಿದೆ.

`ಮನೆಯಲ್ಲಿ. ನನ್ನ ಮಣ್ಣಿನಲ್ಲಿ, ನನ್ನ ಕುಟುಂಬದ ಸದಸ್ಯರೆಲ್ಲರ ನಡುವೆ'. ಮನೆಗೆ ಹೋಗಬೇಕೆಂಬ ಆತನ ಉತ್ಕಟತೆ ತೀವ್ರವಾಗಿತ್ತು. ಆತನಿಗೆ ಕಡೇಪಕ್ಷ ಆ ಸಂತೋಷವಾದರೂ ಸಿಗಲಿ ಎಂಬ ಬಯಕೆಯೂ ನನ್ನದಾಗಿತ್ತು. ಕೋರಿಕೆ ಮೇರೆಗೆ ಆತನನ್ನು ಬಿಡುಗಡೆ ಮಾಡುವಂತೆ ಡಾ. ಪ್ರಶಾಂತಿನಿ ಅವರಿಗೆ ಹೇಳಿದೆ. ಅವನು ತನ್ನ ಊರುಗೋಲುಗಳನ್ನು ತೆಗೆದುಕೊಂಡು ನಗು ಬೆರೆತ ಅಳುವಿನೊಂದಿಗೆ ನನ್ನ ಕೊಠಡಿಯಿಂದ ಹೊರನಡೆದ. ಆ ನಗು ನನ್ನ ಹೃದಯವನ್ನು ಕಲಕಿತು.

***
ಕ್ಯಾನ್ಸರ್ ತಗುಲಿರುವ ಜೀನ್ ಹೊಂದಿರುವ ಕಾರಣಕ್ಕೆ ತನ್ನ ಎರಡೂ ಸ್ತನಗಳನ್ನು ತೆಗೆಸುವ ಮೂಲಕ ನಟಿ ಆಂಜೆಲಿನಾ ಜೋಲಿ ವಿಶ್ವಕ್ಕೆ ಮಾದರಿಯೆನಿಸಿದ್ದಾರೆ. ಆಕೆಯ ದಿಟ್ಟ ಮತ್ತು ಧೈರ್ಯಶಾಲಿ ನಿರ್ಧಾರಕ್ಕೆ ಅಭಿನಂದನೆ. ವಿಶ್ವದ ಕ್ಯಾನ್ಸರ್ ರೋಗಿಗಳಿಗೆ ಆಕೆ ಆದರ್ಶಪ್ರಾಯವಾಗಿದ್ದಾರೆ.

ನನ್ನ ಎಲ್ಲಾ ಓದುಗರಿಗೂ ಮನವಿ, ನಿಮ್ಮ ಕುಟುಂಬದ ಸದಸ್ಯರು ಕ್ಯಾನ್ಸರ್‌ಗೆ ತುತ್ತಾದಲ್ಲಿ- ಕುಟುಂಬದ ಇತರ ಸದಸ್ಯರೂ ಕ್ಯಾನ್ಸರ್ ಸ್ಕ್ರೀನಿಂಗ್‌ಗೆ ಒಳಪಡಲೇಬೇಕು. ಕಿದ್ವಾಯಿ ಇದಕ್ಕಾಗಿಯೇ `ಕ್ಯಾನ್ಸರ್ ಸ್ಕ್ರೀನಿಂಗ್ ಕೇಂದ್ರ' ಎಂಬ ವಿಶೇಷ ವಿಭಾಗ ಹೊಂದಿದೆ.
ನನ್ನ ಅಚ್ಚುಮೆಚ್ಚಿನ ಚಿಕ್ಕಮ್ಮ ರೇವಮ್ಮ ನಾಗಣ್ಣ 2012ರ ನವೆಂಬರ್‌ನಲ್ಲಿ ಸ್ತನ ಕ್ಯಾನ್ಸರ್‌ಗೆ ತುತ್ತಾದರು. ಅವರಲ್ಲಿ ಸ್ತನ ಕ್ಯಾನ್ಸರ್ ಮೂರನೇ ಹಂತದಲ್ಲಿರುವುದು ಪತ್ತೆಯಾಗಿತ್ತು. ಯಾವಾಗ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲಾಗುವುದು ಸಾಧ್ಯವಿಲ್ಲವೋ ಆಗ ಅವರಿಗೆ ಉಪಶಮನ ಆರೈಕೆ ಮಾಡಬೇಕು.

ಏನಿದು ಉಪಶಮನ ಆರೈಕೆ?
ಚಿಕಿತ್ಸೆಯಿಲ್ಲದ ಕಾಯಿಲೆಯ ಪ್ರಕ್ರಿಯೆಯಲ್ಲಿ `ನೋವನ್ನು ಕಡಿಮೆ ಮಾಡುವ' ಗುರಿಯೊಂದಿಗೆ ನಡೆಸುವ ಪ್ರಯತ್ನವೇ ಉಪಶಮನ ಆರೈಕೆ. ಇದು ಮಗುವಿನ ದೇಹ, ಮನಸ್ಸಿಗೆ ಸ್ಥೈರ್ಯ ಮತ್ತು ಕುಟುಂಬಕ್ಕೆ ಬೆಂಬಲ ನೀಡುವುದನ್ನೂ ಒಳಗೊಂಡಿರುವ ಆರೈಕೆ. ಕಿದ್ವಾಯಿಯಲ್ಲಿ ಉಪಶಮನ ಆರೈಕೆಗೆಂದೇ `ಉಪಶಮನ ಔಷಧೀಯ ವಿಭಾಗ' ಎಂಬ ಪ್ರತ್ಯೇಕ ವಿಭಾಗವಿದೆ.

ಸ್ವಲ್ಪ ಹೊತ್ತಿನ ಬಳಿಕ ಡಾ. ರಘುರಾಮಯ್ಯ ಮಗುವಿನ ಪೋಷಕರೊಂದಿಗೆ ಒಳಬಂದರು. ಪ್ರಮಾಣಪತ್ರಕ್ಕಾಗಿ ಕೆಲ ಸಮಯ ಬೇಕಾಗುತ್ತದೆ ಎಂದು ಅವರು ತಿಳಿಸಿದರು. ಅದೇ ಹೊತ್ತಿದೆ ಜಗನ್ ಮನೆಗೆ ಹೋಗಬೇಕೆಂದು ವಿಪರೀತ ಹಟ ಮಾಡುತ್ತಿದ್ದ. ಆತನನ್ನು ಆಗಲೇ ಬಿಡುಗಡೆ ಮಾಡಲಾಗಿತ್ತು. ಅಸಾಮರ್ಥ್ಯ ಪ್ರಮಾಣ ಪತ್ರ ಪಡೆದುಕೊಳ್ಳುವ ಪ್ರಕ್ರಿಯೆ ಮತ್ತು ವಿಧಾನದ ನಿಧಾನಗತಿಯ ಬಗ್ಗೆ ನಿರಾಶೆ ಹಾಗೂ ಬೇಸರ ಮೂಡಿತು. ಅದು ಕೈಗೆ ಸಿಗುವ ಹೊತ್ತಿಗೆ ಜಗನ್ ನಮ್ಮನ್ನು ಬಿಟ್ಟು ಹೋಗಬಹುದು. ಕಾಲ ನಮ್ಮ ಪರವಾಗಿ ಇಲ್ಲ.

ತಿಮ್ಮಯ್ಯ ಮತ್ತು ರಾಧಾ ಕೈ ಜೋಡಿಸಿ ಹೇಳಿದರು, `ಅಕ್ಕಾ, ದಯವಿಟ್ಟು ನನ್ನ ಮಗನಿಗೆ ಆತ ಕಾಯಿಲೆಯ ಅಂಚಿನಲ್ಲಿದ್ದಾನೆ, ಮತ್ತು ಕೆಲವೇ ದಿನಗಳು ಬದುಕುವುದೆಂಬ ಸತ್ಯವನ್ನು ಹೇಳಬೇಡಿ'.

ನಾನೂ ಕೈ ಜೋಡಿಸುತ್ತಾ, ಹತಾಶೆ ಮತ್ತು ಅಸಹಾಯಕತೆಯ ದುಃಖದೊಂದಿಗೆ ನಗು ಬೀರಿದೆ.

(ಹೆಸರುಗಳನ್ನು ಬದಲಿಸಲಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT