ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ಧೈರ್ಯಕ್ಕೆ ಕಾರಣ

Last Updated 22 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಇದೊಂದು ಇಸೋಪನ ನೀತಿ ಕಥೆ ಯೆಂಬ ಪ್ರತೀತಿ ಇದೆ.ದಟ್ಟವಾದ ಕಾಡಿನಲ್ಲಿನ ಸರೋವರದ ಬದಿಯಲ್ಲಿ ಸಾವಿರಾರು ಮೊಲಗಳು ವಾಸ­ವಾ­ಗಿ­ದ್ದವು. ಅವುಗಳಿಗೆ ಅಲ್ಲಿ ಬೇಕಾದಷ್ಟು ಆಹಾರ ಸಿಗುತ್ತಿತ್ತು. ಅವುಗಳ ಪರಿ­ವಾರ ದಿನದಿಂದ ದಿನಕ್ಕೆ ವೃದ್ಧಿಸುತ್ತಲೇ ಇತ್ತು. ಮೊಲಗಳು ಮೊದಲೇ ತುಂಬ ಪುಕ್ಕಲು ಸ್ವಭಾವದ ಪ್ರಾಣಿಗಳು. ಒಂದು ಚೂರು ಸದ್ದಾ­ದರೂ ಹೆದರಿ ಓಡು­ವಂಥ ಜೀವಿಗಳು.

ಒಂದು ಬಾರಿ ಮೊಲಗಳೆಲ್ಲ ಸಭೆ ಸೇರಿದ್ದಾಗ ಹಿರಿಯ ಮೊಲ­ವೊಂದು ಗಂಭೀರವಾಗಿ ಮಾತನಾಡಿತು, ‘ಬಂಧು­ಗಳೇ, ನಾವೆಲ್ಲ ಈ ಅರಣ್ಯದಲ್ಲಿ ಚೆನ್ನಾಗಿದ್ದೇವೆ ಎಂಬುದು ಒಂದು ಭಾವನೆ. ಆದರೆ, ನಿಜವಾಗಿ ನೋಡಿದರೆ ನಾವು ಇರುವಷ್ಟು ಆತಂಕದಲ್ಲಿ ಬೇರೆ ಯಾವ ಪ್ರಾಣಿಯೂ ಕಾಡಿನಲ್ಲಿ ಇರು­ವುದು ಸಾಧ್ಯವಿಲ್ಲ. ನಮ್ಮ ಸ್ವಭಾವವೇ ಪುಕ್ಕಲು. ನಾವು ಪಕ್ಕಾ ಸಸ್ಯಾಹಾರಿಗಳು, ಯಾರಿಗೂ ತೊಂದರೆ ಕೊಡುವವರಲ್ಲ.  ಆದರೆ, ಎಲ್ಲರೂ ನಮ್ಮ ಮೇಲೆ ಯಾಕೆ ಇಷ್ಟು ದ್ವೇಷ ಸಾಧಿಸುತ್ತಾರೋ ತಿಳಿ­ಯದು. 

ಮಾಂಸಾಹಾರಿಗಳಾದ ಪ್ರಾಣಿ­ಗಳು ನಮಗೋಸ್ಕರ ಕಾಯುತ್ತಿರುತ್ತವೆ. ಸಿಕ್ಕಸಿಕ್ಕಲ್ಲಿ ನಮ್ಮವರನ್ನು ಹೊಡೆದು ತಿನ್ನು­ತ್ತವೆ. ಇನ್ನೊಂದೆಡೆಗೆ ಬೇಟೆ­ಗಾ­ರರೂ ನಮ್ಮನ್ನೇ ಹುಡುಕಿಕೊಂಡು ಬರುತ್ತಾರೆ.  ಅಲ್ಲಲ್ಲಿ ಬಲೆ ಹಾಕಿ ನಮ್ಮನ್ನು ಹಿಡಿಯುತ್ತಾರೆ. ಸಿಕ್ಕವರನ್ನು ಹಿಡಿದುಕೊಂಡು ಹೋಗಿ ಕೆಲವರನ್ನು ಕೊಂದು ಮಾಂಸ ಮಾರುತ್ತಾರೆ. ಇನ್ನೂ ಕೆಲವರನ್ನು ಹಿಡಿದುಕೊಂಡು ಹೋಗಿ ಪಂಜರದಲ್ಲಿಟ್ಟು ಸಾಕುತ್ತಾರೆ. ಪಾಪ! ಆ ಮೊಲಗಳಿಗೆ ಜೀವನಪರ್ಯಂತ ಜೈಲು ವಾಸ. ನಾವು ಏನು ಮಾಡಬೇಕು ಎಂಬುದು ತಿಳಿಯ­ದಾಗಿದೆ.

ಒಂದೆಡೆಗೆ ನಮ್ಮನ್ನು ಬೇಟೆಯಾಡುವ ಕಾಡುಪ್ರಾಣಿ­ಗಳು, ಮತ್ತೊಂದೆ­ಡೆಗೆ ಬೇಟೆಗಾರರು. ಇಬ್ಬರಿಂದಲೂ ಹೇಗೆ ಪಾರಾಗಬೇ­ಕೆಂಬುದನ್ನು ನಾವು ಯೋಚಿಸಬೇಕ­ಲ್ಲವೇ?’. ಹಿರಿಯ ಮೊಲದ ಮಾತು­ಗಳನ್ನು ಶ್ರದ್ಧೆಯಿಂದ ಎಲ್ಲ ಮೊಲ­ಗಳು ಕೇಳಿದವು. ಅವುಗಳ ಕಣ್ಣ ಮುಂದೆ ತಮ್ಮ ಅತ್ಯಂತ ಅನಿಶ್ಚಿತವಾದ ಬದುಕು ತೇಲಿಬಂತು. ಪ್ರತಿಕ್ಷಣವೂ ಸಾವಿಗೆ ಹೆದರಿ ಓಡಬೇಕಾದ ಪರಿಸ್ಥಿತಿ  ತಮ್ಮದು ಎಂದು ಚಿಂತಿಸಿ ಕಂಗಾಲಾದವು. 

ಆಗ ಮತ್ತೊಂದು ಮೊಲ ಎದ್ದು ನಿಂತಿತು. ಅದು ಕಣ್ಣೀರು ಸುರಿಸುತ್ತಲೇ ಹೇಳಿತು, ‘ಹೌದು, ಹಿರಿಯರು ಹೇಳಿ­ದಂತೆ ನಮ್ಮ ಬದುಕಿಗೆ ಯಾವ ಅರ್ಥವೂ ಇಲ್ಲ. ಹೀಗೆ ಕ್ಷಣಕ್ಷಣವೂ ಸಾಯು­ವುದಕ್ಕಿಂತ ಒಮ್ಮೆಯೇ ಸತ್ತು ಹೋಗುವುದು ವಾಸಿ. ನನ್ನ ಮಾತು ಕೇಳುವು­ದಾದರೆ ನಾವೆಲ್ಲ ಒಂದೇ ಬಾರಿ ಕೊಳದಲ್ಲಿ ಮುಳುಗಿ ಸತ್ತು ಹೋಗುವುದು ಸರಿಯಾದ ದಾರಿ’. ಅಲ್ಲಿ ಸೇರಿದ ಎಲ್ಲ ಮೊಲಗಳಿಗೆ ಈ ವಿಚಾರ ಅತ್ಯಂತ ಸರಿ ಎನ್ನಿಸಿತು. ಹಾಗಾದರೆ ತಡವೇಕೆ? ಇಂದೇ, ಈಗಲೇ ಹೋಗಿ ಕೊಳದಲ್ಲಿ ಹಾರಿಕೊಳ್ಳೋಣ ಎಂದು ಸಾವಿರಾರು ಮೊಲಗಳು ಕೊಳದ ಕಡೆಗೆ ನಡೆದವು. 

ಆಗ ಒಂದು ಘಟನೆ ನಡೆಯಿತು.  ಸಾವಿರಾರು ಮೊಲಗಳು ಕೊಳದ ಹತ್ತಿರ ಬಂದಾಗ ದಂಡೆಯಲ್ಲಿ ಕುಳಿತಿದ್ದ ಸಾವಿ­ರಾರು ಕಪ್ಪೆಗಳು ಗಾಬರಿಯಾಗಿ ನೀರಿಗೆ ಹಾರಿದವು. ಇದನ್ನು ಕಂಡ ಒಂದು ತರುಣ ಮೊಲ ಕೂಗಿತು, ‘ಎಲ್ಲರೂ ನಿಲ್ಲಿ, ಯಾರೂ ನೀರಿಗೆ ಹಾರಬೇಕಿಲ್ಲ. ನಾವು ಬರುವುದನ್ನು ಕಂಡು ಗಾಬರಿ­ಯಾಗಿ ಹಾರಿದ ಕಪ್ಪೆಗಳನ್ನು ಕಂಡಿರಾ? ಅಂದರೆ ನಮ್ಮಂತಹ ಪುಕ್ಕಲು ಪ್ರಾಣಿ­ಗಳಿಗೂ ಹೆದರುವ ಪ್ರಾಣಿಗಳಿವೆಯಲ್ಲ! ನಮ್ಮ ಬದುಕು ಅವುಗಳಿಗಿಂತ ಎಷ್ಟೋ ವಾಸಿ. ಕಪ್ಪೆಗಳೇ ಬದುಕುವುದಕ್ಕೆ ಉತ್ಸಾಹ ತೋರುವಾಗ ನಾವೇಕೆ ಬದುಕಿನಿಂದ ಮುಖ ತಿರುಗಿಸಬೇಕು?’ ಮೊಲಗಳಿಗೆ ಮಾತು ಸರಿ ಎನ್ನಿಸಿತು.

ಅವುಗಳ ಮುಖದಲ್ಲಿ ಸಂತೋಷ ತೇಲಾಡಿತು. ಅವು ಮತ್ತೆ ಕುಪ್ಪಳಿಸುತ್ತ ಕಾಡಿಗೆ ನಡೆದವು. ನಮಗೂ ಅನೇಕ ಬಾರಿ ಹೀಗೆಯೇ ಅನ್ನಿಸುತ್ತದೆ, ನಿರಾಸೆ ಮೂಡುತ್ತದೆ, ಬದುಕು ವ್ಯರ್ಥವೆನ್ನಿ­ಸುತ್ತದೆ. ಆಗ ಸುತ್ತಲೂ ಕಣ್ತೆರದು ನೋಡಿದರೆ ನಮಗಿಂತ ಹೆಚ್ಚು ಕಷ್ಟದಲ್ಲಿ­ರುವವರು ನಗುನಗುತ್ತ ಬದುಕುವುದು ಕಾಣುತ್ತದೆ.  ಅವರೇ ಸಂತೋಷವಾ­ಗಿರುವಾಗ ನಮಗೇಕೆ ಕೊರಗು ಎಂಬ ಧೈರ್ಯ ಮೂಡುತ್ತದೆ.  ಕಾರಿನಲ್ಲಿ ಹೋಗುವವರನ್ನು ನೋಡಿ ಸಂಕಟಪಡು­ವುದಕ್ಕಿಂತ ಕಾಲಿನಲ್ಲಿ ಚಪ್ಪಲಿ ಕೂಡ ಇಲ್ಲದವರನ್ನು ನೋಡಿ ಸಮಾಧಾನ ಪಡುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT