ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಕಲೆಯಾಗುವ ಬಗೆ

Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ದಯವಿಟ್ಟು ಒಂದು ಸಣ್ಣ ಪ್ರಯೋಗಕ್ಕೆ ಸಿದ್ಧರಾಗಿ. ನೀವು ಇದ್ದಲ್ಲೇ ನಿರಾಳ­ವಾಗಿ ಕುಳಿತುಕೊಳ್ಳಿ. ನಿಧಾನವಾಗಿ ಕಣ್ಣು ಮುಚ್ಚಿ. ನಿಮ್ಮ ಕೈ ಬೆರಳ ತುದಿಯಿಂದ ಅತ್ಯಂತ ಸಾವಕಾಶವಾಗಿ ನಿಮ್ಮ ಮೂಗಿನ ತುದಿಯನ್ನು ಮುಟ್ಟಿ. ಅದು ಮುಟ್ಟಿದೆಯೋ ಇಲ್ಲವೋ ಎನ್ನುವಷ್ಟು ಹಗುರವಾಗಿರಲಿ, ಒತ್ತಡ ಬೇಡ. ಸಾವಕಾಶವಾಗಿ ಬೆರಳನ್ನು ಮೂಗಿನ ಕೆಳಗೆ ತುಟಿಯ ಮೇಲಿನ ಭಾಗದಲ್ಲಿ ಸರಿಸಿ. ನಂತರ ತುಂಬ ನಿಧಾನವಾಗಿ ಹಾಗೆಯೇ ಕೆನ್ನೆಯ ಮೇಲೆ, ಬಳಿಕ ಕಿವಿಯ ಹಾಲೆಯ ಮೇಲೆ ಬೆರಳಾಡಿಸಿ.

ಬೆರಳು ಹೇಗೆ ಮೃದುವಾಗಿ ಚಲಿಸಬೇಕು ಗೊತ್ತೇ? ಆಗಸದಲ್ಲಿ ನಿಧಾನವಾಗಿ ತೇಲಿಬರುವ ಗರಿಯಂತೆ, ತನ್ನ ತೂಕವಿಲ್ಲದ ತೂಕವನ್ನು ಹಗುರಾಗಿ ಹೂವಿನ ಮೇಲೆ ಇಳಿಸುವ ಚಿಟ್ಟೆಯಂತೆ, ಹೂವಿನ ಕಿವಿಯಲ್ಲಿ ಗುನುಗುತ್ತ ಅದಕ್ಕೆ ಒಂದು ಚೂರೂ ತೊಂದರೆಯಾಗದಂತೆ ತನ್ನ ಮೂತಿಯ ಕೊಳವೆಯನ್ನು ತೂರಿ ಅಮೃತವನ್ನು ಹೀರಿ ನಂತರ ಕೃತಜ್ಞತೆಯಿಂದ ಸಿಹಿಮುತ್ತನಿತ್ತು ಹಾರಿಹೋಗುವ ದುಂಬಿಯಂತೆ.

ಬೆರಳು ಹೀಗೆ ಸರಿಯುವಾಗ ಅದೆಷ್ಟು ಸಂತೋಷವಾಗುತ್ತದೆ ಗೊತ್ತೇ? ಮುಖದ ಮೇಲೆ ಕೂದಲು ನಿಮಿರಿ ನಿಲ್ಲುತ್ತವೆ. ಇದೇ ಅಲ್ಲವೇ ರೋಮಾಂಚನ? ಅದೇ ಬೆರಳನ್ನು ಮೂಗಿಗೆ, ಕೆನ್ನೆಗೆ ಅಥವಾ ಕಿವಿಗೆ ಒತ್ತಿಹಿಡಿದು ಗಸಗಸನೇ ತಿಕ್ಕಿ. ಆಗ ರೋಮಾಂಚನವಾಗುವುದಿಲ್ಲ, ಮೂತಿ ಕೆಂಪಗಾಗುತ್ತದೆ.

ಮೊದಲನೆಯದು ಸ್ಪರ್ಶ, ಎರಡನೆಯದು ಘರ್ಷಣೆ. ಸ್ಪರ್ಶ ಹಿತ ನೀಡುತ್ತದೆ, ಘರ್ಷಣೆ ಕಿರಿಕಿರಿ ಮಾಡುತ್ತದೆ. ಅಂದರೆ ಯಾವುದನ್ನು ನವಿರಾಗಿ, ಸರಸವಾಗಿ, ಮೃದುವಾಗಿ ಮಾಡುತ್ತೇವೋ ಅದು ಸಂತೋಷವನ್ನು ಕೊಡುತ್ತದೆ. ಇದು ಎಲ್ಲದರಲ್ಲೂ ಬರಬೇಕು. ಕೆಲವರ ನಡೆ ಎಷ್ಟು ಸುಂದರ? ಅವರು ನಡೆದು ಬಂದರೆ ಹಂಸ ತೇಲಿಬಂದ ಹಾಗೆ, ರಶಿಯನ್ ಬ್ಯಾಲೆಯ ಸುಂದರಳಾದ ನರ್ತಕಿ ತುದಿ ಬೆರಳ ಮೇಲೆ ನಡೆದು ಹಾರಿ ಬಂದ ಹಾಗೆ ಇರುತ್ತದೆ. ಇನ್ನು ಕೆಲವರು ನಡೆದು ಬರುವ ರೀತಿ ನೋಡಿದರೆ ಜೇನುಹುಳ ಕಚ್ಚಿಸಿಕೊಂಡು ದಿಕ್ಕು ತೋಚದೆ ಧೊಪ್ಪಧೊಪ್ಪನೇ ಕಾಲುಗಳನ್ನು ಅಪ್ಪಳಿಸಿಕೊಂಡು ಬರುತ್ತಿರುವ ಕರಡಿಯ ನೆನಪಾಗುತ್ತದೆ.
 

ಕೆಲವರ ಬಟ್ಟೆ ಧರಿಸುವ ರೀತಿ ಎಷ್ಟು ಚಂದ? ಇರುವ ಬಟ್ಟೆಯನ್ನೇ ಮಡಿಮಾಡಿ ಸರಿಯಾಗಿ, ಓರಣವಾಗಿ ಧರಿಸಿದ್ದನ್ನು ಕಂಡಾಗ ದೊರೆಯುವ ಖುಷಿ ಮುದ್ದೆಮುದ್ದೆಯಾದ, ಕೊಳಕಾದ, ಕರೆಬಿದ್ದ ಬಟ್ಟೆಗಳನ್ನು ಹೇಗೇಗೋ ಧರಿಸಿದವರನ್ನು ಕಂಡಾಗ ದೊರೆಯುವುದೇ?
ಮತ್ತೆ ಕೆಲವರ ಊಟ ಮಾಡುವುದನ್ನು ನೋಡಿದರೆ ಅವರ ಅಕ್ಕಪಕ್ಕ ಕೂಡ್ರುವುದಕ್ಕೂ ಮುಜುಗರ. ಅಂಗೈ ತುಂಬ ಪದಾರ್ಥವನ್ನು ಸಾರಿಸಿಕೊಂಡು, ಮೊಳಕೈವರೆಗೆ ಸೋರಿಸಿಕೊಂಡು, ಬಟ್ಟೆಯ ಮೇಲೆಲ್ಲ ಚೆಲ್ಲಿಕೊಂಡು, ತಿಂದದ್ದಕ್ಕಿಂತ ಹೆಚ್ಚಿನದನ್ನು ಎಲೆಯಲ್ಲಿ ಒಟ್ಟಿ ಬಿಟ್ಟು ಚೆಲ್ಲಿ, ಢರ್ರೆಂದು ತೇಗಿ ಸುತ್ತಲಿನ ನೂರು ತಲೆಗಳು ತಮ್ಮತ್ತ ತಿರುಗುವುದನ್ನು ಕಂಡು ತೃಪ್ತಿಪಡುವವರಿದ್ದಾರೆ.

ಇನ್ನು ಕೆಲವರು ಊಟಮಾಡುವುದನ್ನು ನೋಡಬೇಕೆನ್ನಿಸುತ್ತದೆ. ತುದಿ ಬೆರಳುಗಳಿಂದ ಬೇಕಾದಷ್ಟನ್ನೇ ಸರಿಯಾಗಿ ತಿಂದು, ಯಾವುದನ್ನು ವ್ಯರ್ಥಗೊಳಿಸದೇ, ಉಂಡ ಎಲೆ ಹೊಸ ಎಲೆಯೇ ಎನ್ನುವಷ್ಟರ ಮಟ್ಟಿಗೆ ಶುಚಿಯಾಗಿ ಊಟಮಾಡುವವರನ್ನು ಕಂಡಾಗ ಊಟಮಾಡುವುದೂ ಒಂದು ಕಲೆ ಎನ್ನಿಸದಿರದು.
 

ಕೆಲವರು ಮಾತನಾಡುವಾಗ ಶಬ್ದಾಘಾತ ಕಿವಿಗೆ ಅಪ್ಪಳಿಸುತ್ತದೆ. ಆದರೆ, ಹೃದಯವನ್ನು ತಲುಪುವುದಿಲ್ಲ. ಹೊಟ್ಟೆ ಕುಣಿಸಿ, ಬಾಯಗಲಿಸಿ, ಊರಿಗೇ ಕೇಳುವಂತೆ ಕಂಠದಲ್ಲೇ ಧ್ವನಿವರ್ಧಕವನ್ನು ಇಟ್ಟುಕೊಂಡವರಿಗೆ ತಮ್ಮ ಮಾತುಗಳು ಬೇರೆಯವರಿಗೆ ಅವಶ್ಯವಿಲ್ಲವೆಂಬ ಚಿಂತನೆ ಬರುವುದೇ ಇಲ್ಲ. ಮತ್ತೆ ಕೆಲವರು ಮಾತನಾಡಿದರೆ ಜನ ಮೈಯೆಲ್ಲ ಕಿವಿಯಾಗುತ್ತಾರೆ. ಎಲ್ಲಿ ಒಂದಕ್ಷರ ಕಳೆದು ಹೋದೀತೋ ಎಂದು ಕಾತುರರಾಗುತ್ತಾರೆ. ಅವರ ಮಾತು ಕಿವಿಗೆ ನೋವು ತರುವುದಿಲ್ಲ. ಆದರೆ ಹೃದಯದಲ್ಲಿ ಭಾವನೆಯ ತರಂಗಗಳನ್ನು ಏಳಿಸುತ್ತದೆ. ಈ ಎಲ್ಲ ಮಾತುಗಳ ಹಿಂದಿನ ಭಾವ ಒಂದೇ. ನಮ್ಮ ನಡೆಯಲ್ಲಿ, ನುಡಿಯಲ್ಲಿ, ಮಾತಿನಲ್ಲಿ, ಊಟದಲ್ಲಿ, ಬಟ್ಟೆ ಎಲ್ಲದರಲ್ಲಿ ಮಾರ್ದವತೆ, ಮೃದುತ್ವ, ನವಿರು, ಚೆಲುವು ಬರಬೇಕು. ಬಿರುಸಾದ ಕಾಯಿ - ಹಲಸಿನಂಥ ಬಿರುಸಾದ, ಮುಳ್ಳುಮುಳ್ಳಾದ ಕಾಯಿ ಕೂಡ-ಹಣ್ಣಾದಾಗ ಮೃದುವಾಗುತ್ತದೆ. ಅಂತೆಯೇ ನಾವೂ ಬದುಕಿನಲ್ಲಿ ಬೆಳೆದಾಗ ನಮ್ಮಲ್ಲೂ ಮೃದುತ್ವ ಬರಬೇಕಲ್ಲವೇ?
 

ಮೃದುತ್ವ ಪಕ್ವತೆಯ ಸಂಕೇತ. ಒರಟುತನ ಪಕ್ವವಾಗದ್ದನ್ನು ತೋರುತ್ತದೆ. ನಮ್ಮ ಬದುಕಿನ ಪ್ರತಿಕ್ಷಣದ ನಡೆಯಲ್ಲಿ ಈ ಸೊಗಸು, ಪ್ರೀತಿ, ನವಿರು, ಮೃದುತ್ವ ಬಂದರೆ ಬದುಕೇ ಕಲೆಯಾಗುತ್ತದೆ, ಸುಂದರವಾಗುತ್ತದೆ, ಸರ್ವರಿಗೂ ಪ್ರಿಯವಾಗುತ್ತದೆ, ಉಳಿದವರಿಗೆ ಮಾದರಿಯಾಗುತ್ತದೆ, ಅದೇ ಸಂಸ್ಕೃತಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT