ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನಿ,ಈಶಾನ್ಯ ಸಿನಿಮಾಗಳನ್ನು ಪ್ರೋತ್ಸಾಹಿಸೋಣ...

Last Updated 6 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಈಶಾನ್ಯ ರಾಜ್ಯಕ್ಕೆ ಸೇರಿದ ಎರಡೂವರೆ ಲಕ್ಷ ಜನರಿದ್ದಾರೆ. ವದಂತಿಗಳಿಂದಾಗಿ ಬೆದರಿ ವಲಸೆ ಹೊರಟ ಬಹುತೇಕರು ಬೆಂಗಳೂರಿಗೆ ಬರುವ ಮುನ್ನ ಹಲವಾರು ಕನಸುಗಳನ್ನು ಹೊತ್ತು ಬಂದಿರಬಹುದು.

ಅದರಲ್ಲಿ ದೇಶದ ಮೇಲ್ತುದಿಯಲ್ಲಿನ ಗುಡ್ಡಗಳಿಂದ ಇಳಿದು, ಕರ್ನಾಟಕದ ಈ ತುದಿಯವರೆಗೆ ಬಂದು ನೆಲೆ ಕಂಡುಕೊಂಡವರಿದ್ದರು. ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲೇ ಇರುವ ಈಶಾನ್ಯ ರಾಜ್ಯಗಳ ಯುವಕ ಯುವತಿಯರೆಲ್ಲ ಕನ್ನಡ ಕಲಿತು, ಕನ್ನಡದಲ್ಲೇ ವ್ಯವಹರಿಸುತ್ತಾ, ಕನ್ನಡ ಸಿನಿಮಾಗಳನ್ನು ನೋಡಲಾರಂಭಿಸಿದ್ದಾರೆ... ಎಂದು ಒಂದು ಕ್ಷಣ ಅನ್ನಿಸಿತು.

ಎಲ್ಲ ರಾಜ್ಯಗಳಿಂದ ಕೆಲಸ ಹುಡುಕಿಕೊಂಡು ಬರುವವರಿಗೆ ಬೆಂಗಳೂರು ನಗರ ಆಶ್ರಯ ಕೊಡುತ್ತದೆ. ಎಲ್ಲ ಭಾಷಿಕರೂ ಇಲ್ಲಿದ್ದಾರೆ. ಆದರೆ ಮನರಂಜನೆಯ ವಿಷಯ ಬಂದಾಗ ಅವರವರು, ಅವರವರ ಭಾಷೆಯ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕನ್ನಡಿಗರೇ ಕನ್ನಡ ಸಿನಿಮಾ ನೋಡುವುದಿಲ್ಲ ಎಂದ ಮೇಲೆ ಅಸ್ಸಾಂ, ಮಣಿಪುರದವರು ಏಕೆ ನೋಡುತ್ತಾರೆ?

ಆದರೆ ಸಿನಿಮಾ ವಿಷಯಕ್ಕೆ ಬಂದಾಗ ಅಸ್ಸಾಮಿ ಚಿತ್ರರಂಗಕ್ಕೂ ಕನ್ನಡ ಚಿತ್ರರಂಗಕ್ಕೂ ಬಹಳ ಸಾಮ್ಯವಿದೆ. ಅಸ್ಸಾಮಿ ಚಿತ್ರರಂಗ ಎಂದೂ ಭಾರತೀಯ ಸಿನಿಮಾ ಪ್ರವಾಹದಿಂದ ವಿಮುಖವಾಗಿಲ್ಲ. ಇಡೀ ದೇಶದಲ್ಲಿ ಒಂದೇ ಕಾಲಕ್ಕೆ ಸಿನಿಮಾ ಸಂಸ್ಕೃತಿ ಪ್ರವಹಿಸಿದಾಗ, ಅಸ್ಸಾಂ ಕೂಡ ಅದಕ್ಕೆ ತಕ್ಷಣ ಸ್ಪಂದಿಸಿದೆ.
 
77 ವರ್ಷಗಳ ಅಸ್ಸಾಮಿ ಚಿತ್ರರಂಗ, 78 ವರ್ಷ ದಾಟಿರುವ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳನ್ನೇ ಎದುರಿಸುತ್ತಿದೆ. ಪರಭಾಷಾ ಚಿತ್ರಗಳ ದಾಳಿಯಿಂದ ಚಿತ್ರರಂಗ ತತ್ತರಿಸಿದೆ. ಪೈರಸಿ ಕಾಯಿಲೆ ಅಲ್ಲೂ ಇದೆ. ಚಿತ್ರಮಂದಿರಗಳು ಬಂದ್ ಆಗುತ್ತಿವೆ. ಡಬ್ಬಿಂಗ್ ಚಿತ್ರಗಳ ಕಾಟ ಅಲ್ಲೂ ಇದೆ.
 
ವಿತರಕರ ರಾಜಕೀಯ ಲಾಬಿ, ಧನದಾಹದಿಂದ ಅಸ್ಸಾಮಿ ಚಿತ್ರರಂಗ ಕಂಗಾಲಾಗಿ, ಗುಳೆ ಹೋಗುವ ಸರದಿಯಲ್ಲಿದೆ. ಅಸ್ಸಾಂನ್ಲ್ಲಲಿ ಸಿನಿಮಾ ಮತ್ತು ರಂಗಭೂಮಿಯ ಶ್ರೀಮಂತ ಪರಂಪರೆಯೇ ಇದೆ. 1935ರಲ್ಲಿ ತೆರೆಕಂಡ ಮೊಟ್ಟಮೊದಲ ಅಸ್ಸಾಮಿ ಚಿತ್ರ `ಜೊಯ್ ಮೊತಿ~, 17ನೇ ಶತಮಾನದ `ಸತಿ ಜಾಯ್‌ಮತಿ~ ಕತೆಯನ್ನು ಆಧರಿಸಿದೆ.
 

ಅಸ್ಸಾಮಿ ಕವಿ ಜ್ಯೋತಿಪ್ರಸಾದ್ ಅಗರ್‌ವಾಲ್ ನಿರ್ದೇಶನದ ಈ ಚಿತ್ರ ಗುಡ್ಡಗಾಡು ಜನರ ಬವಣೆ, ದುಷ್ಟ ಶಕ್ತಿ- ಶಿಷ್ಟ ಶಕ್ತಿಗಳ ನಡುವಣ ಹೋರಾಟಗಳನ್ನು ಬಿಂಬಿಸುವಂತಿತ್ತು. ಮೊದಲ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಅದಕ್ಕೆ ಅಲ್ಲಿ ಚಿತ್ರಮಂದಿರಗಳು ಹೆಚ್ಚು ಇಲ್ಲದ್ದು ಒಂದು ಕಾರಣವಾದರೆ, ಜನರಲ್ಲಿ ಅಂತಹ ಮನೋಭಾವವೇ ಇಲ್ಲದ್ದೂ ಕಾರಣವಾಗಿತ್ತು ಎಂದು ವಿಶ್ಲೇಷಿಸಲಾಗಿದೆ.
 
ಈಶಾನ್ಯ ರಾಜ್ಯಗಳು ಗುಡ್ಡಗಾಡು ಪ್ರದೇಶದಿಂದ ಕೂಡಿರುವುದರಿಂದ ಜನ ಒಂದೆಡೆ ಒತ್ತಟ್ಟಾಗಿಲ್ಲ. ಹೀಗಾಗಿ ಚಿತ್ರಮಂದಿರಗಳು ಕೂಡ ಚದುರಿ ಹೋಗಿವೆ. ಅಸ್ಸಾಂನಲ್ಲಿ ಒಂದು ಕಾಲದಲ್ಲಿ 211 ಚಿತ್ರಮಂದಿರಗಳಿದ್ದವು. ಪದೇ ಪದೇ ಆಂತರಿಕ ಸಂಘರ್ಷಗಳು ನಡೆಯಲಾರಂಭಿಸಿದ ದಿನದಿಂದ ಜನ ಮನೆಯಿಂದ ಹೊರ ಬರುವುದೇ ಕಷ್ಟವಾಯಿತು.
 
ಯುವಕ ಯುವತಿಯರು ಬೆಂಗಳೂರು ಸೇರಿದಂತೆ ಬೇರೆ ಬೇರೆ ರಾಜ್ಯಗಳ ರಾಜಧಾನಿಗಳಲ್ಲಿ ಬಂದು ನೆಲಸಿ ನೆಮ್ಮದಿಯ ಉಸಿರು ಬಿಟ್ಟರು. ಹೀಗಾಗಿ 140 ಚಿತ್ರಮಂದಿರಗಳು ಬಂದ್ ಆದವು. ಈಗ 70 ಚಿತ್ರಮಂದಿರಗಳು ಉಳಿದುಕೊಂಡಿವೆ. ಈಶಾನ್ಯದ ಇತರ ರಾಜ್ಯಗಳಾದ ಅರುಣಾಚಲ ಪ್ರದೇಶದಲ್ಲಿ 6, ಮೇಘಾಲಯದಲ್ಲಿ 7, ಮಣಿಪುರದಲ್ಲಿ 13, ಮಿಜೊರಂನಲ್ಲಿ 5, ತ್ರಿಪುರದಲ್ಲಿ 8, ನಾಗಾಲ್ಯಾಂಡ್‌ನಲ್ಲಿ ಆರು ಮತ್ತು ಸಿಕ್ಕಿಂನಲ್ಲಿ ಮೂರು ಚಿತ್ರಮಂದಿರಗಳಿವೆ.

ಇವೂ ಬಾಗಿಲು ಹಾಕುವ ಸ್ಥಿತಿಯಲ್ಲಿವೆ. ಇಡೀ ಈಶಾನ್ಯದ ಎಂಟು ರಾಜ್ಯಗಳಲ್ಲಿ ಇರುವುದು ಕೇವಲ ನೂರು ಚಿತ್ರಮಂದಿರ ಮಾತ್ರ. ನಮ್ಮ ಬೆಂಗಳೂರು ನಗರ ಒಂದರಲ್ಲೇ 120ಕ್ಕೂ ಹೆಚ್ಚು ಚಿತ್ರಮಂದಿರಗಳಿವೆ. ಇಡೀ ಈಶಾನ್ಯದ ಎಂಟೂ ರಾಜ್ಯಗಳ ವಿಸ್ತೀರ್ಣ ಕರ್ನಾಟಕದ ಕಾಲುಭಾಗದಷ್ಟಿದೆ.
 
ಇಷ್ಟಗಲ ಜಾಗದಲ್ಲಿ ಜಾತಿ, ಧರ್ಮಗಳ ಕಲಹ ಮೇರೆ ಮೀರಿದೆ. ರಕ್ತಪಾತ, ಹತ್ಯೆ, ಮಾರಾಮಾರಿ ದಿನನಿತ್ಯದ ಸಂಕಟವಾಗಿದೆ. ಇನ್ನು ಜನಕ್ಕೆ ಸಿನಿಮಾ ನೋಡುವ ಉಮೇದು ಎಲ್ಲಿಂದ ಬರುತ್ತದೆ?

ಆದರೂ ಶ್ರೀಮಂತಿಕೆಯ ಜನಪದ ಪರಂಪರೆ, ತನ್ನದೇ ಆದ ವೈಶಿಷ್ಟ್ಯಗಳಿಂದ, ಮೆರೆಯುತ್ತಾ, 80ರ ದಶಕದಲ್ಲಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯುತ್ತ ತನ್ನ ಅಸ್ತಿತ್ವವನ್ನು ಸಾರಿದ್ದ ಅಸ್ಸಾಮಿ ಚಲನಚಿತ್ರರಂಗ ಸಾಂಸ್ಕೃತಿಕ ಕುರುಹು ಕಳೆದುಕೊಂಡಿರುವುದಕ್ಕೆ `ಪರಕೀಯ ಆಕ್ರಮಣ~ವೂ ಕಾರಣವಾಗಿದೆ ಎನ್ನಬಹುದು.

ಗುವಾಹಟಿಯಲ್ಲಿ ಉಳಿದಿರುವ ಬಹುತೇಕ ಚಿತ್ರಮಂದಿರಗಳನ್ನು ಹಿಂದೀ ಚಿತ್ರಗಳೇ ಆಕ್ರಮಿಸಿಕೊಂಡಿವೆ. ಹಿಂದೀ ಚಿತ್ರಗಳನ್ನು ನೋಡಲು ಜನ ಸಾಲುಗಟ್ಟಿ ನಿಲ್ಲುತ್ತಾರೆ. ಅಸ್ಸಾಮಿ ಚಿತ್ರಗಳನ್ನು ಕೇಳುವವರೇ ಇಲ್ಲ. ಬಂಗಾಳಿಗಳು ಅಸ್ಸಾಮಿ ಚಿತ್ರ ತಯಾರಿಕೆಯಲ್ಲಿ ತೊಡಗಿದ್ದಾರೆ.
 
ಬಂಗಾಳಿಗಳು ಬಂದು ಅಸ್ಸಾಮಿ ಭಾಷೆಯಲ್ಲೂ, ಬಂಗಾಳಿ ಭಾಷೆಯಲ್ಲೂ ಚಿತ್ರ ನಿರ್ಮಿಸಿ, ಅವನ್ನು ಬಾಂಗ್ಲಾದೇಶದಲ್ಲೂ ಡಬ್ ಮಾಡಿ ಬಿಡುಗಡೆ ಮಾಡುವ ಪರಿಪಾಠ ಆರಂಭಿಸಿದ್ದಾರೆ. ಅಸ್ಸಾಮಿ ಚಿತ್ರರಂಗಕ್ಕೆ ಸಾಂಸ್ಕೃತಿಕ ಸಂಕಟ ತಲೆದೋರಿದ್ದು ಹೀಗೆ.

ಜೀವಮಾನದ ಸಾಧನೆಗಾಗಿ 1993ರಲ್ಲೇ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದ ಡಾ. ಭೂಪೇನ್ ಹಜಾರಿಕಾ, ರೋಹಿಣಿ ಬರೂವಾ, ಪಾರ್ವತಿ ಪ್ರಸಾದ್ ಬರೂವಾ, ಕಮಲ್ ನಾರಾಯಣ್ ಚೌಧುರಿ, ಫಣಿ ಶರ್ಮ, ಜಾನೂ ಬರುವ ಇವರೆಲ್ಲರ ಸಾಧನೆ ಇತಿಹಾಸದಲ್ಲಿ ಹೂತು ಹೋಯಿತು.

ಹಿಂದಿ ಚಿತ್ರಗಳದ್ದೇ ಮೇಲುಗೈ ಆಯಿತು. ಈಗ ಬೋಡೋ ಚಳವಳಿ, ನಕ್ಸಲರ ಉಪಟಳ, ವಿದೇಶಿ ಪ್ರಜೆಗಳೆಂದು ಬಾಂಗ್ಲಾದೇಶಿಯರನ್ನು ಗುರುತಿಸಿ ಹೊರಗಟ್ಟುವ ಅಮಾನವೀಯ ಘಟನೆಗಳ ನಡುವೆ ಅಸ್ಸಾಮಿ ಚಿತ್ರರಂಗ ಉಳಿಸಿ ಎಂಬ ಚಳವಳಿಯೂ ನಡೆಯುತ್ತಿದೆ. ಅಸ್ಸಾಮಿ ಚಿತ್ರ ರಂಗದ ಹಿರಿಯ ನಟ ನಿಸಾನ್ ಗೋಸ್ವಾಮಿ, ಅಸ್ಸಾಮಿ ಚಿತ್ರರಂಗ ಉಳಿಸಿ ಎಂದು ಸರ್ಕಾರಕ್ಕೆ ಮೊರೆ ಇಟ್ಟಿದ್ದಾರೆ.
 
ಚಿತ್ರರಂಗದ ಉಳಿವಿಗಾಗಿ ಮಿನಿ ಚಿತ್ರಮಂದಿರಗಳನ್ನು ಸ್ಥಾಪಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ವಿತರಕರು ಹಿಂದೀ ಚಿತ್ರಗಳ ಪರ ಲಾಬಿ ಮಾಡುತ್ತಿದ್ದು, ಅಸ್ಸಾಮಿ ಚಿತ್ರಗಳ ಅವನತಿಗೆ ಕಾರಣರಾಗಿದ್ದಾರೆ. ಅವರನ್ನು ನಿಯಂತ್ರಿಸಬೇಕು ಎಂಬ ಕೂಗು ಕೂಡ ಎದ್ದಿದೆ.

ಈಶಾನ್ಯ ರಾಜ್ಯಗಳ ಜನಜೀವನವೇ ಹಲವಾರು ಆಯಾಮಗಳನ್ನು ಹೊಂದಿದ್ದು, ವಿಶಿಷ್ಟ ಸಂಸ್ಕೃತಿಯ ತಳಹದಿಯಲ್ಲಿರುವುದರಿಂದ ಸ್ಥಳೀಯ ಕತೆ, ಕಾದಂಬರಿಗಳನ್ನಾಧರಿಸಿ ಚಿತ್ರ ನಿರ್ಮಿಸಬೇಕೆಂಬ ಒತ್ತಡ ಹೆಚ್ಚುತ್ತಿದೆ. ಆದರೆ ಜನ ಹಿಂದಿ ಚಿತ್ರಗಳ ಸೂತ್ರಕ್ಕೆ ಒಗ್ಗಿಕೊಂಡಿರುವುದರಿಂದ ಅಸ್ಸಾಮಿ ಚಲನಚಿತ್ರ ಕೂಡ ವಲಸೆ ಹಾದಿಯಲ್ಲಿದೆ.

1970-80ರ ದಶಕದಲ್ಲಿ `ಹೊಸ ಅಲೆ~ಗೆ ಅಸ್ಸಾಂ ಚಿತ್ರರಂಗ ತೆರೆದುಕೊಂಡದ್ದು ಕೂಡ ಒಂದು ಬೆಳವಣಿಗೆ. ಕನ್ನಡದಲ್ಲೂ `ಸಂಸ್ಕಾರ~ ಅದೇ ವೇಳೆಗೆ ಹೊಸ ಸಿನಿಮಾ ಹುಟ್ಟು ಹಾಕಿತ್ತು. ಇಡೀ ದೇಶದಲ್ಲಿ ಒಂದೇ ರೀತಿಯ ಪ್ರಭಾವ. ನಿಸ್ತಂತುವಾಗಿ ಪ್ರವಹಿಸಿರುವುದಕ್ಕೆ ಇದೂ ಒಂದು ಉದಾಹರಣೆ.

ಕವಿ ಮತ್ತು ನಾಟಕಕಾರ ಫಣಿ ತಲೂಡ್ಕರ್ `ಅಪರಾಜಯ~ ಎಂಬ ಹೊಸ ಅಲೆ ಚಿತ್ರವನ್ನು 1970ರಲ್ಲಿ ನಿರ್ದೇೀಶಿಸಿದರು. ಸೃಜನಾತ್ಮಕ ಚಿತ್ರಗಳನ್ನು ನೀಡುವ ಪ್ರಾಮಾಣಿಕ ಪ್ರಯತ್ನವೊಂದು ಈ ಹಂತದಲ್ಲಿ ನಡೆಯಿತು. ಕನ್ನಡ, ಬಂಗಾಳಿ, ಮಲಯಾಳಂ ಚಿತ್ರರಂಗದಲ್ಲೂ ಇದೇ ರೀತಿಯ ಪ್ರಯತ್ನ ಆರಂಭವಾಗಿ ಹೊಸ ಮುಖಗಳು ಚಿತ್ರ ನಿರ್ಮಾಣಕ್ಕೆ ತೆರೆದುಕೊಂಡಿದ್ದವು.

1980ರ ನಂತರವೇ ಅಸ್ಸಾಮಿನಲ್ಲಿ ದಳ್ಳುರಿ ಆರಂಭ. `ವಿದೇಶಿ ಪ್ರಜೆ~ಗಳನ್ನು ಹೊರಗಟ್ಟುವ ಚಳವಳಿ ಆರಂಭವಾದದ್ದೇ ತಡ ಚಿತ್ರರಂಗದಲ್ಲಿ ನಿರ್ಮಾಣ ಕಾರ್ಯ ಸ್ಥಗಿತವಾಯಿತು. 1982ರ ವೇಳೆಗೆ ಜಾನೂ ಬರುವ `ಅಪರೂಪ~ ಚಿತ್ರದ ಮೂಲಕ ಭರವಸೆಯ ನಿರ್ದೇಶಕರಾಗಿ ಹೊರಹೊಮ್ಮಿದ್ದೊಂದೇ ವಿಶೇಷವಾಗಿತ್ತು.

ಮಣಿಪುರ ಪ್ರತ್ಯೇಕ ರಾಜ್ಯವಾಗಿದ್ದರೂ ಗುವಾಹಟಿಯಲ್ಲೇ ಮಣಿಪುರಿ ಚಲನಚಿತ್ರಗಳು ತಯಾರಾಗುತ್ತಿವೆ. ಮಣಿಪುರ ಸೇರಿದಂತೆ ಎಲ್ಲ ಈಶಾನ್ಯ ರಾಜ್ಯಗಳಲ್ಲಿ ಚಲನಚಿತ್ರ ನಿರ್ಮಾಣಕ್ಕೆ ಮೂಲಭೂತ ಸೌಕರ್ಯಗಳಿಲ್ಲ. ಕೋಲ್ಕತ್ತಾ ಇಲ್ಲವೇ ಗುವಾಹಟಿಯನ್ನೇ ಆಶ್ರಯಿಸಬೇಕಾದ ಸ್ಥಿತಿ ಈಗಲೂ ಇದೆ.
 
ಈಶಾನ್ಯ ರಾಜ್ಯಗಳಲ್ಲಿನ ಸಿನಿಮಾ ಸಂಸ್ಕೃತಿ, ಒಂದು ಚಳವಳಿಯ ದಳ್ಳುರಿಯಲ್ಲಿ ಬೆಂದು ಹೋಗುತ್ತಿದೆ. ವೈವಿಧ್ಯತೆಯಲ್ಲೂ ಏಕತೆ ಮೆರೆದಿರುವ ಈಶಾನ್ಯ ರಾಜ್ಯಗಳ ಸಿನಿಮಾ ಸಂಸ್ಕೃತಿ ಅಳಿದು ಹೋಗದಿರಲಿ.
 
ಭಯಭೀತರಾಗಿ ಬೆಂಗಳೂರಿನಿಂದ ತವರೂರಿಗೆ ತೆರಳಿರುವ ಈಶಾನ್ಯ ರಾಜ್ಯದ ಬಂಧುಗಳು ಅಲ್ಲಿ ಈಶಾನ್ಯ ಸಂಸ್ಕೃತಿಯನ್ನು, ಸಿನಿಮಾವನ್ನು ಉಳಿಸುವ ಕೆಲಸ ಮಾಡಲಿ.

ಹೋಟೆಲ್‌ನಲ್ಲೊ, ಬ್ಯೂಟಿ ಪಾರ್ಲರ್‌ನಲ್ಲೋ, ಬಾರ್‌ಗಳಲ್ಲೋ ಕೆಲಸ ಮಾಡಿಯೇ ತೀರುತ್ತೇನೆ ಎಂದು ಹಠತೊಟ್ಟು ಬೆಂಗಳೂರಿಗೆ ಬಂದು ನೆಲಸುವ ಈಶಾನ್ಯ ರಾಜ್ಯದ ಬಂಧುಗಳು ಕನ್ನಡ ಸಿನಿಮಾಗಳನ್ನು ನೋಡಿ ಸಂಸ್ಕೃತಿಯ ಪ್ರವಾಹದಲ್ಲಿ ಈಜಲಿ ಎಂದು ಹಾರೈಸೋಣ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT