ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರೀ ಮಣ್ಣಲ್ಲವೋ ಅಣ್ಣಾ, ಅದು ದಿವ್ಯಾನುಭೂತಿ!

Last Updated 16 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ಹದಿನೈದು ವರ್ಷಗಳ ಹಿಂದೆ (1997ರಲ್ಲಿ) ನಾವು ಆದಿವಾಸಿಗಳಿಗಾಗಿ ಸಮುದಾಯ ಕೃಷಿ ಯೋಜನೆ ಆರಂಭಿಸಿದ್ದೆವು (ತದನಂತರ ರಾಜ್ಯ ಸರ್ಕಾರ ಇದನ್ನೇ ಗಂಗಾ ಕಲ್ಯಾಣ ಯೋಜನೆ ಎಂದು ನಾಮಕರಣ ಮಾಡಿತು). ಈ ಯೋಜನೆಯ ಅನ್ವಯ ಆದಿವಾಸಿ ರೈತರನ್ನು ಸಣ್ಣ ಸಣ್ಣ ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು; ಈ ಪ್ರತಿ ಗುಂಪು ಸಾಮುದಾಯಿಕವಾಗಿ ಕೃಷಿ ಕಾರ್ಯ ಕೈಗೊಳ್ಳಬೇಕಿತ್ತು.

ಇದಕ್ಕೆ ಬೇಕಾದ ಬೋರ್‌ವೆಲ್, ಬಿತ್ತನೆ ಬೀಜ, ರಸಗೊಬ್ಬರ, ಎತ್ತು ಇತ್ಯಾದಿ ಪರಿಕರಗಳನ್ನು ಸರ್ಕಾರ ಒದಗಿಸಿತ್ತು. ನಾವೆಲ್ಲರೂ ಅತ್ಯುತ್ಸಾಹದಲ್ಲಿ ಇದರಲ್ಲಿ ತೊಡಗಿಸಿಕೊಂಡೆವು. ನನ್ನ ಸಹೋದ್ಯೋಗಿ ಮೋಹನ್ ಈ ಯೋಜನೆಯ ಮೇಲುಸ್ತುವಾರಿ ಹೊತ್ತಿದ್ದರು. ಅವರು ದಿನದಲ್ಲಿ 14-16 ಗಂಟೆಗಳಷ್ಟು ಹೊತ್ತು ಈ ಕಾರ್ಯದಲ್ಲೇ ತೊಡಗಿರುತ್ತಿದ್ದರು. ಆದಿವಾಸಿ ಯುವಜನರಿಗೆ ತರಬೇತಿ ನೀಡಿ, ಅವರ ಯಜಮಾನರುಗಳನ್ನು ಈ ಕಾರ್ಯಕ್ಕಾಗಿ ಉತ್ತೇಜಿಸುವ ಕೆಲಸವನ್ನೂ ಮಾಡಬೇಕಾಗಿತ್ತು.

ಯೋಜನೆಯಲ್ಲಿ ಭಾಗಿಯಾಗಿದ್ದ ರೈತರಿಗೆ ಅಗತ್ಯ ಸಲಕರಣೆಗಳು ಮತ್ತು ತಂತ್ರಜ್ಞಾನ ಸಕಾಲದಲ್ಲಿ ಲಭ್ಯವಾಗುವಂತೆಯೂ ನೋಡಿಕೊಳ್ಳಬೇಕಾ ಗಿತ್ತು. ಇದೆಲ್ಲಕ್ಕಿಂತ ಹೆಚ್ಚಾಗಿ ಹವಾ ಮಾನದ ಅನಿಶ್ಚಿತತೆಯನ್ನೂ ಎದುರಿಸಬೇಕಾಗಿತ್ತು.

ಈ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರ ನಮಗೆ ಸಂಪೂರ್ಣ ಬೆಂಬಲ ನೀಡಿತ್ತು. ಆಗಿನ ಸಮಾಜ ಕಲ್ಯಾಣ ಕಾರ್ಯದರ್ಶಿ ಎಸ್.ಕೆ.ದಾಸ್ ಅವರು ಈ ವಿನೂತನ ಕಾರ್ಯಕ್ರಮ ಯಶಸ್ವಿಯಾಗಲೇಬೇಕು ಎಂದು ಬಯಸಿ, ಚಟುವಟಿಕೆಗಳ ಬಗ್ಗೆ ಮುತುವರ್ಜಿ ವಹಿಸಿದ್ದರು. ಇವೆಲ್ಲವನ್ನೂ ನಾವು ಹೇಗೋ ನಿರ್ವಹಿಸಿಕೊಂಡು ಹೋಗುತ್ತಿದ್ದೆವು.

ಆದರೆ ಆ ಪ್ರದೇಶದಲ್ಲಿದ್ದ ಆನೆಗಳ ಉಪಟಳದಿಂದ ತಪ್ಪಿಸಿಕೊಳ್ಳಲು ಮಾತ್ರ ನಾವು ಏನನ್ನೂ ಮಾಡುವಂತಿರಲಿಲ್ಲ. ನಾವು ಯೋಜನೆಗೆ ಆಯ್ದುಕೊಂಡಿದ್ದ ಸ್ಥಳ ಏಷ್ಯಾದ ಬೃಹತ್ ಆನೆ ವಾಸಸ್ಥಳಗಳಲ್ಲಿ ಒಂದಾದ ಕಬಿನಿ ನದಿ ತೀರದಲ್ಲಿ ಇದ್ದುದರಿಂದ ಇಂತಹ ಸಮಸ್ಯೆ ಎದುರಿಸಲೇಬೇಕಾದ್ದು ಅನಿವಾರ್ಯವಾಗಿತ್ತು.

ಹೇಗಾದರೂ ಮಾಡಿ ಆನೆಗಳ ಹಾವಳಿಯಿಂದ ಪಾರಾಗಬೇಕು ಎಂದು ಚರ್ಚಿಸುತ್ತಾ ಕುಳಿತಾಗ, ಆನೆಗಳು ತಂಟೆಗೆ ಬಾರದಂತಹ ಬೆಳೆ ಬೆಳೆಯಬೇಕೆಂದು ಆದಿವಾಸಿಗಳು ನಿರ್ಧರಿ ಸಿದರು. ಮೋಹನ್ ಈ ಮಾರ್ಗೋಪಾಯವನ್ನು ಕಾರ್ಯರೂಪಕ್ಕಿಳಿಸುವುದು ಹೇಗೆಂಬ ಯೋಚನೆಯಲ್ಲೇ ಮುಳುಗಿದರು.
 
ನಂತರ ನಾವೆಲ್ಲರೂ ಸೇರಿ ಸಾಮಾನ್ಯವಾಗಿ ಆನೆಗಳು ಮುಟ್ಟದಂತಹ ತರಕಾರಿಗಳನ್ನು ಬೆಳೆಯಲು ತೀರ್ಮಾನಿಸಿದೆವು. ಕೊನೆಗೆ ಕೋಸು ಬೆಳೆಯುವುದೆಂದು ನಿಶ್ಚಯಿಸಿ, 20 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಅದನ್ನು ಬೆಳೆಯಲಾಯಿತು.
 
ಈ ಬೆಳೆಯ ಕಟಾವಿನ ಸಮಯ ಹತ್ತಿರ ಬರುತ್ತಿದ್ದಂತೆಯೇ ಅದರ ಮಾರುಕಟ್ಟೆ ಬೆಲೆ ತಿಳಿದು ಬರಲು ನಾನು ಮೈಸೂರಿಗೆ ಹೊರಟೆ. ಒಂದು ಕೆ.ಜಿ ಕೋಸಿನ ಬೆಲೆ ಮಾರುಕಟ್ಟೆಯಲ್ಲಿ 6 ರೂಪಾಯಿ ಇತ್ತು. ವಾಪಸ್ ಬಂದ ನಾನು ನಮ್ಮ ಪ್ರಯೋಗ ಯಶಸ್ವಿಯಾಗುತ್ತದೆ ಎಂದು ಮೋಹನ್‌ಗೆ ತಿಳಿಸಿದೆ.

ಆವರೆಗೂ ಆನೆಗಳು ಸಹ ಕೋಸಿನ ಮೇಲೆ ದಾಳಿ ನಡೆಸಿರಲಿಲ್ಲ. ನಾವು ಅವುಗಳನ್ನು ಕೊಯ್ಯಲು ಆರಂಭಿಸಿದೆವು. ಸುಮಾರು 3 ಟನ್‌ಗಳಷ್ಟು ಕೋಸನ್ನು ಕಟಾವು ಮಾಡಿದೆವು. ನಮ್ಮ ಈ ಬೆಳೆಯನ್ನು ಕನಿಷ್ಠ 4 ರೂಪಾಯಿಗೆ ಕೆ.ಜಿಯಂತೆ ಮಾರಾಟ ಮಾಡಿದರೂ ಅದರಿಂದ ಸಿಗಬಹುದಾದ ಹಣದ ಬಗ್ಗೆ ನಾನು ಮತ್ತು ಆದಿವಾಸಿ ರೈತರೆಲ್ಲರೂ ಬಣ್ಣಬಣ್ಣದ ಕನಸು ಕಾಣಲು ಆರಂಭಿಸಿದೆವು.

ಕೋಸನ್ನು ಲಾರಿಗೆ ತುಂಬಿಸಿಕೊಂಡ ಮೋಹನ್ ಅದನ್ನು ತರಕಾರಿಗಳ ಸಗಟು ಮಾರಾಟ ಕೇಂದ್ರವಾದ ಮೈಸೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) ತೆಗೆದುಕೊಂಡು ಹೋದರು. ತನ್ನದೇ ವಿಚಿತ್ರ ಕಾನೂನುಗಳನ್ನು ಅಳವಡಿಸಿಕೊಂಡಿರುವ ಈ ಮಾರುಕಟ್ಟೆಯಲ್ಲಿ ಮುಂಜಾನೆ 3ರಿಂದ 7 ಗಂಟೆಯವರೆಗೆ ರೈತರ ಉತ್ಪನ್ನಗಳನ್ನು ಖರೀದಿಸುವ ಕಾರ್ಯ ಬಿರುಸಿನಿಂದ ನಡೆ ಯುತ್ತದೆ.

ಬೆಳಗಿನ ಜಾವ 2 ಗಂಟೆ ಹೊತ್ತಿಗೆ ಮಾರುಕಟ್ಟೆ ತಲುಪಿದ ಮೋಹನ್ ಖರೀದಿ ದಾರರನ್ನು ಹುಡುಕಲು ಆರಂಭಿಸಿದರು. ಅಲ್ಲಿ ನಾವು ಯಾರಿಗೆ ಬೇಕೋ ಅವರಿಗೆ ಕೋಸು ಮಾರಾಟ ಮಾಡುವಂತಿರಲಿಲ್ಲ. ಆ ಮಾರುಕಟ್ಟೆಯಲ್ಲಿ  ಕೋಸು ಖರೀದಿಯಲ್ಲಿ ನಿಪುಣನಾದ ಒಬ್ಬನೇ ಒಬ್ಬ ಏಜೆಂಟ್ ಇದ್ದ.

ಅವನನ್ನು ಬಿಟ್ಟು ಬೇರ‌್ಯಾರಿಗೂ ಅದನ್ನು ಮಾರಾಟ ಮಾಡಲು ಸಾಧ್ಯವೇ ಇಲ್ಲ ಎಂದು ತಿಳಿದಾಗ ಮೋಹನ್ ಅವರ ಮುಗ್ಧತೆ ಮತ್ತು ಅಮಾಯಕತೆಗೆ ಪೆಟ್ಟುಬಿದ್ದಂತಾಯಿತು. ಆ ಮಾರುಕಟ್ಟೆಯಲ್ಲಿ ಆಲೂಗಡ್ಡೆ, ಈರುಳ್ಳಿ ಹೀಗೆ ಪ್ರತಿಯೊಂದು ಉತ್ಪನ್ನವನ್ನೂ ಕೊಳ್ಳಲು ಒಬ್ಬೊಬ್ಬ ಪ್ರತ್ಯೇಕ ಏಜೆಂಟ್‌ಗಳೇ ಇದ್ದರು.

ಈರುಳ್ಳಿ ಕೊಳ್ಳುವ ವ್ಯಕ್ತಿ ಆಲೂಗಡ್ಡೆ ಕೊಳ್ಳುವುದಿಲ್ಲ, ಇನ್ಯಾರದೋ ಬಳಿ ನಾವು ಕೋಸನ್ನು ಮಾರುವಂತಿರಲಿಲ್ಲ. ಅಲ್ಲಿ ಎಲ್ಲರೂ ಈ ಅಲಿಖಿತ ನಿಯಮಗಳನ್ನೇ  ಅನುಸರಿಸುತ್ತಿದ್ದರು. ಈ ನಿಯಮಗಳ ಪಾಲನೆಯಿಂದ ಏಜೆಂಟರಿಗೆ ಅತಿ ಹೆಚ್ಚಿನ ಲಾಭ ಆಗುತ್ತಿತ್ತು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಏಜೆಂಟರು ತಮ್ಮ ಚೌಕಾಸಿಗೆ ಅನುಕೂಲ ವಾಗುವ ರೀತಿಯಲ್ಲಿ ಮಾರುಕಟ್ಟೆ ಮೇಲೆ ಬಿಗಿಯಾದ ಏಕಸ್ವಾಮ್ಯ ಸಾಧಿಸಿದ್ದರು. ಕೋಸು ಕೊಳ್ಳುವ ಏಜೆಂಟ್ ನಮಗೆ ಕೆ.ಜಿ.ಗೆ 30 ಪೈಸೆಗಿಂತ ಹೆಚ್ಚು ಕೊಡಬಾರದೆಂದು ತೀರ್ಮಾ ನಿಸಿದ್ದ. ಇದೇ ಕೋಸು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕೆ.ಜಿ.ಗೆ 6 ರೂಪಾಯಿಯಂತೆ ಮಾರಾಟವಾಗುತ್ತಿದ್ದುದರಿಂದ ಏಜೆಂಟನ ಮಾತು ಕೇಳಿ ಮೋಹನ್ ಹತಾಶರಾಗಿ ಕೋಪಗೊಂಡರು.

ತಮ್ಮ ಕೋಸಿಗೆ ನ್ಯಾಯಯುತ ಬೆಲೆ ನೀಡುವಂತೆ ಏಜೆಂಟನಿಗೆ ಎಷ್ಟೇ ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಮೋಹನ್ ಜತೆ ಬಂದಿದ್ದ ಆದಿವಾಸಿ ರೈತರು ಕೂಡ ಹತಾಶರಾದರು. ಅಲ್ಲಿದ್ದ ಕೆಲವರಿಗೆ, ಕೋಸನ್ನು ಅಲ್ಲೇ ರಸ್ತೆ ಬದಿ ಸುರಿದು ವಾಪಸಾಗುವುದೇ ಲೇಸು ಎನ್ನಿಸಿತು. ಇನ್ನು ಕೆಲವರು ಅದನ್ನು ಅನಾಥಾಲಯ ಅಥವಾ ವೃದ್ಧಾಶ್ರಮಕ್ಕೆ ಉಚಿತವಾಗಿ ನೀಡಿ, ಗ್ರಾಮಕ್ಕೆ ಹಿಂದಿರುಗುವ ಸಲಹೆಯನ್ನೂ ಕೊಟ್ಟರು.
 
ಕನಿಷ್ಠ, ಕೋಸನ್ನು ಗ್ರಾಮದಿಂದ ಮೈಸೂರಿಗೆ ಸಾಗಿಸಲು ಆದ ಡೀಸೆಲ್ ವೆಚ್ಚವಾದರೂ ದಕ್ಕಲಿ ಎಂದು ಯೋಚಿಸಿದ ಮೋಹನ್ ಕೆ.ಜಿ.ಗೆ 30 ಪೈಸೆಯಂತೆಯೇ ಅದನ್ನು ಮಾರಾಟ ಮಾಡುವ ತೀರ್ಮಾನಕ್ಕೆ ಬಂದರು.

ಹತಾಶೆಯಿಂದ ಕುಸಿದು ಹೋಗಿದ್ದ ಅವರು ಮಟಮಟ ಮಧ್ಯಾಹ್ನ ಊರಿಗೆ ಮರಳಿದರು. ಮೈಸೂರಿನ ಮಾರುಕಟ್ಟೆಯಲ್ಲಿ ನಮ್ಮೆಲ್ಲಾ ಆದಿವಾಸಿ ಸೋದರರ ಯತ್ನಗಳು ವಿಫಲವಾಗಿದ್ದನ್ನು ಕೇಳಿ ನಾನು ದಂಗುಬಡಿದು ಹೋದೆ. ಸಮಾಜವು ಇವರನ್ನು ಹೀಗೆ ಆರ್ಥಿಕವಾಗಿ ಕುಸಿಯುವಂತೆ ಸಂಚು ರೂಪಿಸುತ್ತಲೇ ಹೋದರೆ, ಅವರನ್ನು ಆರ್ಥಿಕವಾಗಿ ಮೇಲಕ್ಕೆತ್ತುವುದಾದರೂ ಹೇಗೆ ಎಂಬ ಪ್ರಶ್ನೆ ನನ್ನನ್ನು ಕಾಡಿತು.

ನಂತರ, ನಮ್ಮ ಬಹುತೇಕ ರೈತರದ್ದು ಕೂಡ ಇದೇ ದುರವಸ್ಥೆ ಎಂಬುದು ಬೇಗನೇ ನನ್ನ ಅರಿವಿಗೆ ಬಂತು. ವರುಣ ದೇವತೆಗಳ, ಲೇವಾದೇವಿದಾರರ ಹಾಗೂ ವರ್ತಕರ ಕೃಪೆಯಲ್ಲೇ ಅವರು ಬದುಕಬೇಕಾಗಿದೆ. ಈ ವ್ಯವಸ್ಥೆಯಲ್ಲಿ ರೈತರು ಅಸಹಾಯಕರೂ, ಸಾಮರ್ಥ್ಯರಹಿತರೂ ಆಗಿದ್ದಾರೆ.

ನಾನು ಈ ವಿಷಣ್ಣ ಮನಃಸ್ಥಿತಿಯಲ್ಲಿದ್ದಾಗ ಕೆಂಪನಹಾಡಿಯ ಯಜಮಾನನಾದ ಕೆಂಪಯ್ಯ ನನ್ನನ್ನು ಕರೆಯಲು ಬಂದರು. ಗೌರವಸ್ಥ ಕಾಡುಕುರುಬ ಮುಖ್ಯಸ್ಥರಾದ ಕೆಂಪಯ್ಯ ವಿವೇಕಿಯೂ ಆಗಿದ್ದರು. ಅವರೊಂದಿಗೆ ಮಾತನಾಡಲು ಸದಾ ಇಚ್ಛಿಸುತ್ತಿದ್ದ ನಾನು, ಅಂತಹ ಮಾತುಕತೆಯಿಂದ ಸಾಕಷ್ಟು ಉಪಯೋಗವನ್ನೂ ಪಡೆದಿದ್ದೆ. ಮೈಸೂರಿನ ಮಾರುಕಟ್ಟೆಗೆ ಕೋಸು ತೆಗೆದುಕೊಂಡು ಹೋಗಿ ನಾವು ಪಟ್ಟ ಬವಣೆ ಅದಾಗಲೇ ಅವರ ಕಿವಿಯನ್ನೂ ತಲುಪಿತ್ತು.

ಎದೆಗುಂದಿದ್ದ ನಮ್ಮನ್ನು ಸಂತೈಸಿ, ಹುರಿದುಂಬಿಸುವುದು ಅವರ ಉದ್ದೇಶವಾಗಿತ್ತು. ನಮ್ಮ ಬುಡಕಟ್ಟು ರೈತರನ್ನು ಮಾರುಕಟ್ಟೆಯಲ್ಲಿ ಎಷ್ಟು ಹೀನಾಯವಾಗಿ ನಡೆಸಿಕೊಳ್ಳಲಾಯಿತು ಎಂಬುದನ್ನು ನಾನು ಅವರಿಗೆ ವಿವರಿಸಿದೆ. ಬೆಳೆ ಬೆಳೆಯಲು ಹಾಕಿದ್ದ ಶ್ರಮ, ಬೆಳೆಯನ್ನು ಕಾಪಾಡಲು ನಿದ್ದೆಗೆಟ್ಟ ರಾತ್ರಿಗಳು, ರೈತರು ಕಂಡಿದ್ದ ಕನಸು ಎಲ್ಲವನ್ನೂ ತಿಳಿಸಿ, ಮಾರುಕಟ್ಟೆಯಲ್ಲಿ ಇಂತಹ ಚೌಕಾಸಿಯನ್ನು ನಾನು ನಿರೀಕ್ಷಿಸಿರಲಿಲ್ಲ ಎಂದು ಅವರಿಗೆ ಹೇಳಿದೆ.

ಇವೆಲ್ಲವನ್ನೂ ಆಲಿಸಿದ ನಂತರ ಕೆಂಪಯ್ಯ ಆಡಿದ ಮಾತುಗಳು, ಮಾರುಕಟ್ಟೆಯ ಅನುಭವದ ಬಗೆಗಿನ ನನ್ನ ವ್ಯಾಖ್ಯಾನದ ರೀತಿಯನ್ನೇ ಬದಲಿಸಿತು. ಆದಿವಾಸಿ ರೈತರ ಪ್ರಯತ್ನ ಮತ್ತು ಪರಿಶ್ರಮಗಳನ್ನು ಸಮಾಜ ನೀಡಬಹುದಾದ ಹಣದ ಬೆಲೆಯಲ್ಲಿ ಅಳೆಯುವುದನ್ನು ಬಿಡುವಂತೆ ಅವರು ಬುದ್ಧಿಮಾತು ಹೇಳಿದರು.

ಕೃಷಿ ಭೂಮಿಯಲ್ಲಿ ಕಾಯಕ ಮಾಡುವ ಪವಿತ್ರ ಕಾರ್ಯವನ್ನು ಹಣ ಹಾಗೂ ಆರ್ಥಿಕತೆಯಂತಹ ಸಂಕುಚಿತ ಮಾನದಂಡಗಳಲ್ಲಿ ಅಳೆಯಲು ಯೋಚಿಸುವುದೇ ಮೂರ್ಖತನವೆಂಬುದನ್ನು ಅವರು ಮನವರಿಕೆ ಮಾಡಿಕೊಟ್ಟರು. ಒಕ್ಕಲುತನವೆಂದರೆ ದೇವರ ಸಾನ್ನಿಧ್ಯಕ್ಕೆ ಎಷ್ಟು ಸಾಧ್ಯವೋ ಅಷ್ಟು ಸಮೀಪಕ್ಕೆ ಕೊಂಡೊಯ್ಯುವ ಆಧ್ಯಾತ್ಮಿಕ ಕಾರ್ಯ ಎಂದು ಬಿಡಿಸಿ ಹೇಳಿದರು.

ಒಕ್ಕಲುತನವು ಒಬ್ಬ ವ್ಯಕ್ತಿಯನ್ನು ಹೇಗೆ ಪರಿಪೂರ್ಣನನ್ನಾಗಿಸುತ್ತದೆ, ಆತನಿಗೆ ಹೇಗೆ ಸೌಜನ್ಯಶೀಲತೆಯನ್ನು ತಂದುಕೊಡುತ್ತದೆ, ಈ ಬೃಹತ್ ಬ್ರಹ್ಮಾಂಡದಲ್ಲಿ ತಾನು ಎಷ್ಟು ಚಿಕ್ಕವ ಹಾಗೂ ಅಪ್ರಸ್ತುತ ಎಂಬ ಜ್ಞಾನವನ್ನು ಮೂಡಿಸುತ್ತದೆ ಎಂಬುದನ್ನೂ ಅವರು ಮನದಟ್ಟು ಮಾಡಿಕೊಟ್ಟರು. `ಸ್ವಾರ್ಥರಹಿತ ಕಾಯಕದ ಮಹತ್ವವನ್ನು ಅರ್ಥೈಸಿಕೊಳ್ಳಲು ಬೇಕಾದ ಒಳನೋಟ ಹಾಗೂ ಅವಕಾಶವನ್ನು ಇದು ಕಲ್ಪಿಸುತ್ತದೆ~ ಎಂದು ಹೇಳಿದರು.

ಕೋಸು ಬೆಳೆದಿದ್ದರಿಂದ ರೈತರಿಕ ಸಿಕ್ಕ ತೃಪ್ತಿ ಹಾಗೂ ಸಾರ್ಥಕ ಭಾವದ ಹಿನ್ನೆಲೆಯಲ್ಲಿ ಬದುಕಿನ ಈ ಸನ್ನಿವೇಶವನ್ನು ಅರ್ಥೈಸಿ ಕೊಳ್ಳುವುದನ್ನು ಕಲಿಯಬೇಕೆಂಬುದು ಅವರ ಅಭಿಪ್ರಾಯವಾಗಿತ್ತು. ಯಾವುದೇ ಬೆಳೆ ದಿನೇ ದಿನೇ ಅರಳುತ್ತಾ ಬೆಳೆಯುವುದನ್ನು ನೋಡುವುದೆಂದರೆ ಕಣ್ಣೆದುರೇ ಭಗವಂತನ ಕ್ರಿಯಾಶೀಲತೆಯನ್ನು ಕಂಡಂತೆ; ಈ ಅನುಭೂತಿಯ ಅನುಭವವನ್ನು ಬೇರ‌್ಯಾವುದೂ ಸರಿಗಟ್ಟಲು ಸಾಧ್ಯವಿಲ್ಲ; ಬೆಳೆಗೆ ಕಟ್ಟುವ ಹಣವು ಈ ಅನುಭವದ ಹತ್ತಿರಕ್ಕೂ ಸುಳಿಯದು ಎಂದು ಅವರು ಹೇಳಿದರು.
 
ಭರದಿಂದ ನಡೆದಿರುವ ಬದಲಾವಣೆಯಿಂದಾಗಿ ಆದಿವಾಸಿ ಕೃಷಿಕರು ಗಳಿಸುವ ಹಣಕ್ಕಿಂತ ತಮ್ಮ ಜನರ ಕೃಷಿಯೆಡೆಗಿನ ಈ ಪವಿತ್ರ ಭಾವನೆ ಎಲ್ಲಿ ಕಳೆದುಹೋಗುವುದೋ ಎಂಬ ಚಿಂತೆ ತಮ್ಮನ್ನು ಕೊರೆಯುತ್ತಿದೆ ಎಂದರು.

ಕೆಂಪಯ್ಯನವರ ಈ ಮಾತುಗಳನ್ನು ಕೇಳಿ ನಾನು ಮೂಕವಿಸ್ಮಿತನಾದೆ. ತಂಬಾಕು ಜಗಿಯುವ ಈ ಹಿರಿಯ, ಕಾಡುಕುರುಬ ಮುಖ್ಯಸ್ಥನಲ್ಲಿ ಎಷ್ಟು ಜ್ಞಾನ ಅಡಗಿದೆ ಎಂಬುದನ್ನು ಯೋಚಿಸಿ ಅಚ್ಚರಿಗೊಂಡೆ. ಸುತ್ತಲಿನ ನಿಸರ್ಗದಿಂದ ಈ ಜನ ಎಷ್ಟೊಂದು ಕಲಿತಿದ್ದಾರೆ ಹಾಗೂ ಇವರೆಲ್ಲ ಎಷ್ಟೊಂದು ವಿಕಸನಗೊಂಡವರು ಎಂಬುದನ್ನು ಅರಿಯುವುದೇ ಒಂದು ಸೋಜಿಗ.

ಇಂದು ಏನೇ ಕೆಲಸ ಮಾಡಲು ಹೊರಟರೂ ಹಣ ಬಹಳ ಮಹತ್ವದ ಸಾಧನ ಎಂಬ ಮಂತ್ರ ನಮ್ಮ ಮೈಮನಗಳನ್ನು ಆವರಿಸಿಕೊಂಡು ಬಿಟ್ಟಿದೆ. ಆದರೆ, ಬದುಕನ್ನು ಕೇವಲ ಆರ್ಥಿಕತೆಯ ಮಾನದಂಡಗಳಿಂದ ಅಳೆಯುವುದನ್ನು ಬಿಟ್ಟು, ಆದಿವಾಸಿಗಳಂತೆ ಸಮಗ್ರವಾಗಿ ಗ್ರಹಿಸುವ ಮನೋಭಾವವನ್ನು ನಾವು ರೂಢಿಸಿಕೊಳ್ಳಬೇಕಾಗಿದೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT