ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಸಲು ಆರಾಮದಾಯಕ ಇಯರ್‌ಬಡ್

Last Updated 18 ಜನವರಿ 2017, 19:30 IST
ಅಕ್ಷರ ಗಾತ್ರ

ಚೀನಾ ದೇಶದ ಹಲವು ಉತ್ಪನ್ನಗಳು ಕಡಿಮೆ ಬೆಲೆಯವು. ಅವುಗಳಲ್ಲಿ ಹಲವು ಕಳಪೆ ಉತ್ಪನ್ನಗಳು ಕೂಡ. ಚೀನಾದ ಒನ್‌ಪ್ಲಸ್ ಮತ್ತು ಶಿಯೋಮಿ ಕಂಪೆನಿಯರ ಒಂದು ವೈಶಿಷ್ಟ್ಯವೆಂದರೆ ಅವರು ನೀಡುವ ಉತ್ಪನ್ನಗಳು ದೊಡ್ಡ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ತುಂಬ ಕಡಿಮೆ ಬೆಲೆಯವು. ಆದರೆ ಅವು ಕಳಪೆ ಉತ್ಪನ್ನಗಳಲ್ಲ. ಈ ಕಂಪೆನಿಗಳ ಹಲವು ಉತ್ಪನ್ನಗಳನ್ನು ಈ ಅಂಕಣದಲ್ಲಿ ಹಲವು ಸಲ ವಿಮರ್ಶಿಸಲಾಗಿದೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವ ಗ್ಯಾಜೆಟ್ ಒನ್‌ಪ್ಲಸ್‌ನವರ ಬುಲೆಟ್ಸ್ ವಿ2 ಎಂಬ ಇಯರ್‌ಬಡ್ (Oneplus Bullets Earphone V2).

ಗುಣವೈಶಿಷ್ಟ್ಯಗಳು
ಕಿವಿಕಾಲುವೆಯೊಳಗೆ ಕುಳಿತುಕೊಳ್ಳುವಂತಹ ಇಯರ್‌ಬಡ್ ಮಾದರಿಯದು. ಧ್ವನಿ ಕಂಪನಾಂಕದ ವ್ಯಾಪ್ತಿ-20 Hz-20 kHz, 24 ಓಂ (ohm) ಇಂಪೆಡೆನ್ಸ್, 107 ಡೆಸಿಬೆಲ್, ಧ್ವನಿಯ ಶಕ್ತಿ 3mW, 1.25 ಮೀ. ಉದ್ದದ ಕೇಬಲ್, 3.5 ಮಿ.ಮೀ. ಇ.ಪಿ. ಕನೆಕ್ಟರ್, 3 ಜೊತೆ ಕುಶನ್‌ಗಳು, ಮಾತನಾಡಲು ಮೈಕ್ರೊಫೋನ್, 14 ಗ್ರಾಂ ತೂಕ, ಧ್ವನಿಯ ವ್ಯತ್ಯಯ (THD)<1%, ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯ, ಇತ್ಯಾದಿ.  ನಿಗದಿತ ಬೆಲೆ ₹1199 (oneplusstore.in).

ಒಟ್ಟಾರೆ ರಚನೆ ಮತ್ತು ವಿನ್ಯಾಸ ತುಂಬಾ ಚೆನ್ನಾಗಿದೆ. ಕೇಬಲ್ ಪಟ್ಟಿಯಾಕಾರದಲ್ಲಿದೆ. ಮಾತನಾಡಲು ಮೈಕ್ರೊಫೋನ್ ಇದೆ. ಈ ಮೈಕ್ರೊ ಫೋನ್ ಇರುವ ಸಾಧನದಲ್ಲೇ ಕರೆ ಬಂದಾಗ ಸ್ವೀಕರಿಸಲು ಮತ್ತು ಕರೆ ನಿಲ್ಲಿಸಲು ಬಟನ್ ಇದೆ. ಜೊತೆಯಲ್ಲೇ ವಾಲ್ಯೂಮ್ ಬಟನ್ ಇದೆ. ಇಯರ್‌ಬಡ್‌ ವಿನ್ಯಾಸ ತುಂಬ ಚೆನ್ನಾಗಿದೆ. ಗುಂಡಿನ ಆಕಾರದಲ್ಲಿದೆ. ಆದುದರಿಂದಲೇ ಇದಕ್ಕೆ ಬುಲೆಟ್ಸ್ ಎಂದು ಹೆಸರಿಟ್ಟಿದ್ದಾರೆ. ಇಯರ್‌ಬಡ್ ಚಿಕ್ಕದಾಗಿದೆ. ಎಡ, ಬಲ ಯಾವುದು ಎಂದು ನಮೂದಿಸಿದ್ದಾರೆ.

ಕರೆ ಬಂದರೆ ಸ್ವೀಕರಿಸುವ ಬಟನ್ ಹಲವು ರೀತಿಯಲ್ಲಿ ಕೆಲಸ ಮಾಡುತ್ತದೆ. ಕರೆ ಬಂದಾಗ ಒಂದು ಸಲ ಒತ್ತಿದರೆ ಕರೆ ಸ್ವೀಕರಿಸಿ ಮಾತನಾಡಬಹುದು. ಮಾತನಾಡುತ್ತಿದ್ದಾಗ ಒತ್ತಿದರೆ ಸಂಪರ್ಕ ಕಡಿತವಾಗುತ್ತದೆ. ಹಾಡು ಕೇಳುತ್ತಿರುವಾಗ ಈ ಬಟನ್ ಅನ್ನು ಒಂದು ಸಲ ಒತ್ತಿದರೆ ಹಾಡು ತಾತ್ಕಾಲಿಕವಾಗಿ ನಿಲ್ಲುತ್ತದೆ (pause). ಮತ್ತೊಮ್ಮೆ ಒತ್ತಿದರೆ ಪುನಃ ಪ್ಲೇ ಆಗುತ್ತದೆ. ಎರಡು ಸಲ ವೇಗವಾಗಿ ಒತ್ತಿದರೆ ಮುಂದಿನ ಹಾಡು, ಮೂರು ಸಲ ವೇಗವಾಗಿ ಒತ್ತಿದರೆ ಹಿಂದಿನ ಹಾಡು ಪ್ಲೇ ಮಾಡಬಹುದು. ವಾಲ್ಯೂಮ್ ಬಟನ್ ಬಳಸಿ ಧ್ವನಿಯನ್ನು ಹೆಚ್ಚು ಕಡಿಮೆ ಮಾಡಬಹುದು.

ಮೂರು ಜೊತೆ ಕುಶನ್ ನೀಡಿದ್ದಾರೆ. ಈ ಇಯರ್‌ಬಡ್‌ನ ಒಂದು ವಿಶೇಷ ಗುಣ ನನಗೆ ತುಂಬ ಹಿಡಿಸಿದ್ದು ಎಂದರೆ ಇದನ್ನು ಎಷ್ಟು ಹೊತ್ತು ಬಳಸಿದರೂ ಕಿವಿಗೆ ಹಿಂಸೆಯಾಗುವುದಿಲ್ಲ. ಅದಕ್ಕೇ ನಾನು ಇದನ್ನು ಆರಾಮದಾಯಕ (comfortable) ಇಯರ್‌ಬಡ್ ಎಂದಿದ್ದು. ಕೇಬಲ್ ಪಟ್ಟಿಯಾಕಾರದಲ್ಲಿರುವ ಕಾರಣ ಸುಕ್ಕುಹಾಕಿಕೊಳ್ಳುವುದಿಲ್ಲ.

ಇಯರ್‌ಬಡ್ ಇಟ್ಟುಕೊಳ್ಳಲು ಒಂದು ಚಿಕ್ಕ ಚೀಲ ನೀಡಿದ್ದರೆ ಚೆನ್ನಾಗಿತ್ತು. ಇದನ್ನು ತಯಾರಿಸಲು ಒನ್‌ಪ್ಲಸ್‌ನವರು ಜರ್ಮನಿಯ LOFO ಜೊತೆ ಕೈಜೋಡಿಸಿದ್ದಾರೆ. ಅತಿ ಕಡಿಮೆ ತೂಕದ್ದಾಗಿದ್ದು ಎಲ್ಲ ಕಂಪನಾಂಕಗಳ ಧ್ವನಿಗಳನ್ನೂ ಆದಷ್ಟು ಪ್ರಾಮಾಣಿಕವಾಗಿ ಪುನರುತ್ಪತ್ತಿ ಮಾಡಬಲ್ಲ ವಸ್ತುವಿನಿಂದ ಡಯಾಪ್ರಾಂ ಅನ್ನು ತಯಾರಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಎಲ್ಲ ಕಂಪನಾಂಕಗಳ ದ್ವನಿಯ ಪುನರುತ್ಪತ್ತಿ ಚೆನ್ನಾಗಿದೆ. ಕಡಿಮೆ ಕಂಪನಾಂಕದ ಧ್ವನಿಯ (bass) ಪುನರುತ್ಪತ್ತಿಯ ಗುಣಮಟ್ಟ ಸ್ವಲ್ಪ ಕಡಿಮೆ ಇದೆ. ಧ್ವನಿಯಲ್ಲಿ ಸ್ಪಷ್ಟತೆ ಇದೆ. ಆದರೂ ಅತ್ಯುತ್ತಮ ಬಾಸ್ ಬೇಕು ಎನ್ನುವವರಿಗೆ ಇದು ಪರಿಪೂರ್ಣ ತೃಪ್ತಿ ನೀಡಲಾರದು. ಹಾಗೆಂದು ಏನೇನೂ ಚೆನ್ನಾಗಿಲ್ಲ ಎಂದು ತಳ್ಳಿಹಾಕುವಂತೇನೂ ಇಲ್ಲ. ಮಾನವ ಧ್ವನಿಯ ಪುನರುತ್ಪತ್ತಿ ನಿಖರವಾಗಿದ್ದು ಉತ್ತಮವಾಗಿದೆ.

ಅತಿ ಹೆಚ್ಚಿನ ಕಂಪನಾಂಕದ ಧ್ವನಿಯ (treble) ಪುನರುತ್ಪತ್ತಿ ಚೆನ್ನಾಗಿದೆ. ಸಂಗೀತ ಆಲಿಸುವಾಗ ಎಲ್ಲೂ ಕಿರಿಕಿರಿ ಎನ್ನಿಸುವುದಿಲ್ಲ. ಗಂಟೆಗಟ್ಟಲೆ ಬಳಸಿದರೆ ಕಿವಿಗೆ ಶ್ರಮವಾಗುವುದಿಲ್ಲ. ಕಿವಿಯ ಗಾತ್ರಕ್ಕೆ ಸರಿಯಾದ ಕುಶನ್ ಬಳಸುವುದು ಈ ಇಯರ್‌ಬಡ್‌ನಲ್ಲೂ ಅತಿ ಮುಖ್ಯವಾಗುತ್ತದೆ. ಸರಿಯಾದ ಕುಶನ್ ಬಳಸಿದರೆ ಹೊರಗಿನ ಶಬ್ದ ಕಿವಿಯೊಳಗೆ ಬರುವುದು ಅತಿ ಕಡಿಮೆಯಾಗುತ್ತದೆ (noise isolation). ಒಟ್ಟಿನಲ್ಲಿ ನೀಡುವ ಹಣಕ್ಕೆ ತೃಪ್ತಿ ನೀಡುವ ಇಯರ್‌ಬಡ್ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT