ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಿಯ ಜೀವನಶೈಲಿ ಮತ್ತು ಆಹಾರ ಭದ್ರತೆ

ಅಕ್ಷರ ಗಾತ್ರ

ಆಹಾರ ಭದ್ರತೆಯ ಬಗ್ಗೆ ಜಗತ್ತಿನಾದ್ಯಂತ ಸಾಕಷ್ಟು ಚರ್ಚೆ ನಡೆಯುತ್ತಿದೆ. ಜೊತೆಗೆ ಈ ಬಗ್ಗೆ ಬಹಳಷ್ಟು ಗಂಭೀರವಾದ ಕಳಕಳಿಗಳೂ ವ್ಯಕ್ತವಾಗುತ್ತಿವೆ. ದೇಶದಲ್ಲಿ ಒಂದೆಡೆ ಸುಮಾರು 60 ದಶಲಕ್ಷ ಮೆಟ್ರಿಕ್ ಟನ್‌ನಷ್ಟು ಆಹಾರ ಧಾನ್ಯ ಕೊಳೆಯುತ್ತಾ ಬಿದ್ದಿದ್ದರೆ, ಇನ್ನೊಂದೆಡೆ 645 ದಶಲಕ್ಷ ಜನ ದಿನ ವೊಂದಕ್ಕೆ ನಿಗದಿತ ಕ್ಯಾಲೊರಿಗಿಂತಲೂ ಕಡಿಮೆ ಪ್ರಮಾಣದ ಆಹಾರ ಸೇವಿಸುತ್ತಿರು ವುದನ್ನು ಅಂಕಿ ಅಂಶಗಳು ಹೊರಗೆಡವಿವೆ.
 
ಇಂತಹ ವೈರುಧ್ಯಗಳು ಜನಪರ ಕಾಳಜಿ ಯುಳ್ಳವರಲ್ಲಿ ಆತಂಕ, ದುಗುಡ ಎರಡನ್ನೂ ಹೆಚ್ಚಿಸಿ, ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯ ಬಗ್ಗೆಯೇ ವಿಷಾದ ಮೂಡಿಸುತ್ತವೆ.

ಪ್ರಪಂಚದಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಬ್ಸಿಡಿ ದರದ ಆಹಾರ ಧಾನ್ಯಗಳನ್ನು ಪಡಿತರ ವಿತರಣಾ ವ್ಯವಸ್ಥೆಯಡಿ ಒದಗಿಸುತ್ತಿರುವ ದೇಶ ಎಂದು ಭಾರತ ಹೆಮ್ಮೆಯಿಂದ ಬೀಗ ಬಹುದು. ಸುಮಾರು 5 ಲಕ್ಷ ನ್ಯಾಯಬೆಲೆ ಅಂಗಡಿಗಳ ಮೂಲಕ 15 ಸಾವಿರ ಕೋಟಿ ಟನ್‌ಗೂ ಹೆಚ್ಚು (150 ಶತಕೋಟಿ) ಆಹಾರಧಾನ್ಯವನ್ನು 160 ದಶಲಕ್ಷ ಕುಟುಂಬಗಳಿಗೆ ಒದಗಿಸುವ ವ್ಯಾಪಕ ಕಾರ್ಯಜಾಲವನ್ನು ಅದು ಹೊಂದಿದೆ.
 
ಆದರೆ, ಇದರಲ್ಲಿ ಶೇ 57ರಷ್ಟು ಆಹಾರಧಾನ್ಯ ಅರ್ಹ ಫಲಾನುಭವಿಗಳನ್ನು ತಲುಪುತ್ತಿಲ್ಲ ಎಂಬುದನ್ನು 2005ರ ಯೋಜನಾ ಆಯೋಗದ ವರದಿ ಬಹಿರಂಗಪಡಿಸಿದೆ. ಈ ವ್ಯವಸ್ಥೆಯಡಿ ಸರ್ಕಾರ ವ್ಯಯಿಸುವ ಪ್ರತಿ ನಾಲ್ಕು ರೂಪಾಯಿಯಲ್ಲಿ ಕೇವಲ ಒಂದು ರೂಪಾಯಿ ಬಡವರನ್ನು ತಲುಪುತ್ತಿದೆ. 2006-07ರಲ್ಲಿ ಆಹಾರ ಸಬ್ಸಿಡಿಗಾಗಿ ಕೇಂದ್ರ ಸರ್ಕಾರ 242 ಶತಕೋಟಿ ರೂಪಾಯಿಯನ್ನು ವ್ಯಯಿಸಿದೆ.
 
ಆ ವರ್ಷ ಒಟ್ಟು 36 ದಶಲಕ್ಷ ಟನ್‌ನಷ್ಟು ಧಾನ್ಯ ಸಂಗ್ರಹ ವಾಗಿದ್ದರೆ, ಇದರಲ್ಲಿ 31.6 ದಶಲಕ್ಷ ಟನ್‌ನಷ್ಟು ನ್ಯಾಯಬೆಲೆ ಅಂಗಡಿಗಳ ಮೂಲಕವೇ ವಿತರಣೆಯಾಗಿದೆ. ಈ ಅಂಕಿಸಂಖ್ಯೆ ಸಹ ಆತಂಕ ಮತ್ತು ಗೊಂದಲಗಳಿಗೆ ಎಡೆ ಮಾಡುತ್ತದೆ.
 
ನಾವು ಇಷ್ಟೆಲ್ಲ ಮಾಡುತ್ತಿದ್ದರೂ ಪ್ರಗತಿಯ ಸಾಧನೆ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲವೇಕೆ ಎಂಬುದು ಗೊಂದಲ ಮೂಡಿಸಿದರೆ, ಈ ವ್ಯವಸ್ಥೆಯಡಿ ನಡೆಯುತ್ತಿರುವ ಬೃಹತ್ ಪ್ರಮಾಣದ ಸೋರಿಕೆ ಹಾಗೂ ಭ್ರಷ್ಟಾಚಾರ ಸಿಟ್ಟಿಗೆ ಕಾರಣವಾಗುತ್ತದೆ.

ಸರ್ಕಾರದ ಆಹಾರ ವಿತರಣಾ ವ್ಯವಸ್ಥೆ ಲಕ್ಷಾಂತರ ಬಡವರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂದು ಯೋಚಿಸಿದಾಗ ನನ್ನ ಮನಸ್ಸಿನಲ್ಲಿ ಮೊದಲು ಮೂಡುವುದು ಜೇನುಕುರುಬ ಮಹಿಳೆ ಬಸವಿಯ ಚಿತ್ರ. ಗಂಡ ಜಡಿಯ ಮತ್ತು ಮೂವರು ಮಕ್ಕಳೊಂದಿಗೆ ಹೊಸಹಳ್ಳಿಯಲ್ಲಿ ಆಕೆ ವಾಸವಾಗಿದ್ದಳು.
 
ನಮ್ಮ ಕ್ಯಾಂಪಸ್‌ಗೆ ಹತ್ತಿರದಲ್ಲೇ ಆಕೆಯ ಮನೆ ಇದ್ದುದರಿಂದ ಪ್ರತಿ ದಿನವೂ ನಾನು ಅವಳನ್ನು ಭೇಟಿಯಾಗುತ್ತಿದ್ದೆ. ಇದು 1990ರ ದಶಕದ ಆರಂಭದಲ್ಲಿ ನಡೆದ ಸಂಗತಿ.

ನಾವು ಆಗಷ್ಟೇ ಅಲ್ಲಿ ಶಾಲಾ ಕಟ್ಟಡ ಕಟ್ಟಲಾರಂಭಿಸಿದ್ದೆವು. ಆಗ ಮುಂಗಾರು ನಂತರದ ಕಾಲವಾಗಿತ್ತು. ಮಳೆರಾಯನ ಕೃಪೆ ಆ ವರ್ಷ ಚೆನ್ನಾಗಿಯೇ ಇತ್ತು. ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲೆಲ್ಲಾ ಕುಂಬಳಕಾಯಿ ಮತ್ತು ಸೌತೆಕಾಯಿಯ ಫಸಲು ಜೋರಾಗಿ ಬಂದಿತ್ತು.

ಜನ ಉತ್ತಮ ಇಳುವರಿಯ (ಆನೆಗಳ ಕಾಟ ಇಲ್ಲದಿದ್ದರೆ) ನಿರೀಕ್ಷೆಯಲ್ಲಿದ್ದರು. ಬಸವಿಯ ಬಳ್ಳಿಗಳೂ ಈ ಕಾಯಿಗಳಿಂದ ತುಂಬಿದ್ದವು. ಆಕೆ ತನ್ನ ಮನೆಗೆ ಊಟಕ್ಕೆ ಬರುವಂತೆ ಪ್ರತಿದಿನವೂ ನನ್ನನ್ನು ಆಹ್ವಾನಿಸುತ್ತಿದ್ದಳು. ನಾನೂ ಯಾವುದೇ ಸಂಕೋಚವಿಲ್ಲದೆ ಈ ಆಹ್ವಾನವನ್ನು ಸಂತೋಷದಿಂದಲೇ ಒಪ್ಪಿ ಆಕೆಯ ಕುಟುಂಬದೊಟ್ಟಿಗೆ ಕುಳಿತು ಸಣ್ಣದಾಗಿ ಹರಟೆ ಹೊಡೆಯುತ್ತಾ ಅವರ ಸಂಸ್ಕೃತಿ, ಇತಿಹಾಸವನ್ನು ಅರಿಯಲು ಯತ್ನಿಸುತ್ತಿದ್ದೆ.

ಬಹುತೇಕ ಬಾರಿ ಅವರ ಊಟ ರಾಗಿ ಮುದ್ದೆ ಮತ್ತು ಕುಂಬಳ ಎಲೆಯಿಂದ ಮಾಡಿದ ಸಾಂಬಾರು ಆಗಿರುತ್ತಿತ್ತು. ಎಂದಾದರೊಂದು ದಿನ ಬಲಿತ ಕುಂಬಳಕಾಯಿ ಸಿಕ್ಕಿದಾಗ ಮಾತ್ರ ಬಸವಿ ಅದರಲ್ಲಿ ವಿಶೇಷ ತಿನಿಸು ತಯಾರಿಸುತ್ತಿದ್ದಳು.

ಮೊದಲು ಕುಂಬಳಕಾಯಿಯಲ್ಲಿ ಒಂದು ತೂತು ಕೊರೆದು ಈರುಳ್ಳಿ, ಮೆಣಸಿನ ಕಾಯಿ, ಬೆಳ್ಳುಳ್ಳಿಯಂತಹ ಸಾಂಬಾರು ಪದಾರ್ಥಗಳಿಂದ ತಯಾರಿಸಿದ ಚಟ್ನಿಯನ್ನು ಅದಕ್ಕೆ ತುಂಬಿಸುತ್ತಿದ್ದಳು. ನಂತರ  ನಿಧಾನವಾಗಿ ಆ ಕಾಯಿಯನ್ನು ಕಂದು ಬಣ್ಣ ಬರುವವರೆಗೂ ಬೇಯಿಸುತ್ತಿದ್ದಳು.
 
ಬಾಯಲ್ಲಿ ನೀರೂರಿಸುತ್ತಿದ್ದ ಈ ಮಸಾಲೆ ಮಿಶ್ರಿತ ಕುಂಬಳಕಾಯಿಯ ಚೂರುಗಳನ್ನು ತಿನ್ನುವಾಗ ಸಿಗುತ್ತಿದ್ದ ಆನಂದ, ಆಸ್ವಾದವನ್ನು ಮಾತ್ರ ನಾನೆಂದಿಗೂ ಮರೆಯಲಾರೆ.

ಅಪರೂಪಕ್ಕೊಮ್ಮೆ ಜಡಿಯ ಜೇನುತುಪ್ಪವನ್ನು ಗೂಡಿನ ಸಮೇತ ಹೊತ್ತು ತರುತ್ತಿದ್ದ. ಅವರು ಆ ಇಡೀ ಗೂಡು, ಅದರಲ್ಲಿದ್ದ ಜೇನು ಹುಳಗಳು, ಮರಿಗಳು, ಅಂಟು, ಜೇನು ಎಲ್ಲವನ್ನೂ ಕಿವುಚಿ ಮಿಶ್ರಣ ಮಾಡಿ ರುಚಿಕಟ್ಟಾದ ಈ ಸಿಹಿಭಕ್ಷ್ಯವನ್ನು ಸೇವಿಸುತ್ತಿದ್ದರು. ಹೇಗಿದ್ದರೂ ಸುತ್ತಮುತ್ತ ದಂಡಿಯಾಗಿ ಕುಂಬಳಕಾಯಿಯೂ ಸಿಗುತ್ತಿತ್ತು. ಒಟ್ಟಾರೆ ಸಂತೋಷದಿಂದ ಇರುತ್ತಿದ್ದ ಅವರ್ಯಾರಲ್ಲೂ ಹಸಿವಿರಲಿಲ್ಲ, ಊಟದ ಕೊರತೆಯೂ ಅವರನ್ನು ಕಾಡುತ್ತಿರಲಿಲ್ಲ.

ಇದನ್ನೆಲ್ಲಾ ಈಗ ಯೋಚಿಸಿದರೆ ನಿಜವಾಗಲೂ ‘ಆಹಾರ ಭದ್ರತೆ’ ಎಂದರೇನು ಎಂಬ ಪ್ರಶ್ನೆ ನನ್ನನ್ನು ಕಾಡತೊಡಗುತ್ತದೆ. ಅದು ಕೇವಲ ಅಗತ್ಯವಿರುವಷ್ಟು ಕ್ಯಾಲೊರಿಗಳು ಮತ್ತು ಪೌಷ್ಟಿಕತೆಯನ್ನು ಪಡೆಯಲು ಇರುವ ಮಾರ್ಗವೇ? ಅಥವಾ ನಾವು ತಿನ್ನುವ ಪದಾರ್ಥದ ಬಗ್ಗೆ ಮಾನಸಿಕವಾಗಿ ತೃಪ್ತಿ ಹೊಂದುವಂತೆ ಮಾಡುವ ಸಾಧನವೇ ಎಂಬ ಪ್ರಶ್ನೆಗಳೂ ಮೂಡುತ್ತವೆ.

ಆಗ ಬಸವಿಯ ಕುಟುಂಬಕ್ಕೆ ಮಾತ್ರ ತಾವು ಬಡವರು ಎಂದು ಎಂದಿಗೂ ಅನಿಸುತ್ತಲೇ ಇರಲಿಲ್ಲ. ತಮಗೆ ಸಾಕಾಗುವಷ್ಟು ಮಾತ್ರವಲ್ಲದೆ ಇತರರಿಗೂ ಹಂಚಿ ಉಣ್ಣುವಷ್ಟು ತಮಗಿದೆ ಎಂದೇ ಅವರೆಲ್ಲ ಭಾವಿಸಿದ್ದರು. ಆದರೆ ನಾನು ಆಗ ಯೋಚಿಸುತ್ತಿದ್ದ ಧಾಟಿ ಬೇರೆ ರೀತಿ ಇತ್ತು.
 
ದಿನನಿತ್ಯ ಅವರು ಇಂತಹ ಆಹಾರ ತಿನ್ನುವುದು ಕಂಡು ಮರುಗುತ್ತಿದ್ದ ನಾನು, ಅವರಿಗಾಗಿ ಏನಾದರೂ ಒಳ್ಳೆಯದು ಮಾಡಬೇಕು ಎಂದುಕೊಳ್ಳುತ್ತಿದ್ದೆ. ಆಹಾರ ಭದ್ರತೆ ಎಂದರೆ ಒಂದು ಕುಟುಂಬಕ್ಕೆ ಸಾಕಾಗುವಷ್ಟು ಪ್ರಮಾಣದಲ್ಲಿನ ಗುಣಮಟ್ಟದ ಆಹಾರ, ಅವರ ಪೌಷ್ಟಿಕ ಅಗತ್ಯ, ಹೊಟ್ಟೆ ತುಂಬಿದ ತೃಪ್ತಿ ಅಷ್ಟೇ ಅಲ್ಲ, ಒಂದು ಸಂಸ್ಕೃತಿ, ಜೀವನಶೈಲಿ, ಬದುಕಿನ ಬಗೆಗಿನ ಧೋರಣೆ ಎಲ್ಲವೂ ಅದರಲ್ಲಿ ಅಡಕವಾಗಿರುತ್ತದೆ ಎಂಬ ವಾಸ್ತವಾಂಶ ನನ್ನ ಅರಿವಿಗೇ ಬಂದಿರಲಿಲ್ಲ.

ಮುಂದಿನ ಕೆಲ ವರ್ಷಗಳಲ್ಲೇ ನಾವು ಬಸವಿಯ ಕುಟುಂಬಕ್ಕೆ ಸ್ವಲ್ಪ ಪ್ರಮಾಣದ ಭೂಮಿ ಒದಗಿಸಿಕೊಡಲು ಯಶಸ್ವಿಯಾದೆವು. ಅಲ್ಲಿ ಅವರು ರಾಗಿ ಮತ್ತು ಮರಗೆಣಸನ್ನು ಬೆಳೆಯಲು ಆರಂಭಿಸಿದರು. ಇದು ಅವರ ಎಲ್ಲ ಅಗತ್ಯಗಳನ್ನೂ ಪೂರೈಸಲಾರಂಭಿಸಿತು.

ಅವರು ಕುಂಬಳಕಾಯಿಯಿಂದ ವ್ಯವಸ್ಥಿತ ಆಹಾರ ಶೈಲಿಗೆ ಬದಲಾದರು. ಜೊತೆಗೆ ಮಳೆಯ ಕೃಪೆಗಾಗಿ ಕಾಯುವ ಅವಲಂಬಿತರಾದರು. ಆನೆಗಳ ಕಾಟದಿಂದ ಮುಕ್ತಿ ಪಡೆಯಲು ಹಂಬಲಿಸುವವರ ಸಾಲಿಗೂ ಸೇರ್ಪಡೆಗೊಂಡರು. ಅಲ್ಲದೆ, ಆನೆಗಳ ಲೂಟಿಯಿಂದ ಬೆಳೆಯನ್ನು ಉಳಿಸಿಕೊಳ್ಳುವ ಸಲುವಾಗಿ ಕಾವಲು ಕಾಯುವುದಕ್ಕೇ ಜಡಿಯನ ಕುಟುಂಬ ತಿಂಗಳಾನುಗಟ್ಟಲೆ ನಿದ್ದೆಯನ್ನೂ ಕಳೆದುಕೊಳ್ಳಬೇಕಾಯಿತು.

ನಂತರದ ದಿನಗಳಲ್ಲಿ, ಸಿರಿವಂತನಾಗುವ ಆಕಾಂಕ್ಷೆ ಮತ್ತು ಪರಿಸ್ಥಿತಿಯ ಬಗ್ಗೆ ನಮ್ಮಲ್ಲಿದ್ದ ಸೀಮಿತ ತಿಳಿವಳಿಕೆಯಿಂದ ಉತ್ತೇಜಿತನಾದ ಜಡಿಯ ದುಡ್ಡು ತಂದುಕೊಡುವ ಹತ್ತಿ, ಶುಂಠಿಯಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಮುಂದಾದ. ಸಹಜವಾಗಿಯೇ ಆಗ ಹೆಚ್ಚು ಹಣವೂ ಅವನ ಕೈ ಸೇರಲಾರಂಭಿಸಿತು.
 
ಆದರೆ, ಈ ಬೆಳವಣಿಗೆ ಅವನ ಕುಟುಂಬದ ಆಹಾರದ ಪ್ರಮಾಣ ಹೆಚ್ಚಿಸಲು ಮಾತ್ರ ನೆರವಾಗಲಿಲ್ಲ. ದುಡಿದ ಹಣ ಕುಡಿತ ಹಾಗೂ ಅನಗತ್ಯ ಖರ್ಚು ವೆಚ್ಚಗಳಿಗೇ ಹೆಚ್ಚು ಪೋಲಾಗಲಾರಂಭಿಸಿತು. ಇದರ ಜೊತೆಗೆ ನ್ಯಾಯಬೆಲೆ ಅಂಗಡಿಯ ಮೇಲಿನ ಅವನ ಅವಲಂಬನೆಯೂ ಹೆಚ್ಚಿ ಸಹಜವಾಗಿಯೇ ಆಹಾರ ಧಾನ್ಯಕ್ಕಾಗಿ ಸರ್ಕಾರದ ಮರ್ಜಿ ಹಿಡಿಯುವಂತೆ ಮಾಡಿತು.
 
ಅದಕ್ಕಿಂತಲೂ ಅಪಾಯಕಾರಿಯಾದ ಸಂಗತಿಯೆಂದರೆ ಜಡಿಯನ ಆಹಾರದ ಕ್ರಮವೇ ಬದಲಾಗಿ ಹೋಗಿತ್ತು. ಆತ ರಾಗಿಯನ್ನು ಬಿಟ್ಟು ಅನ್ನ ಉಣ್ಣಲು ಆರಂಭಿಸಿದ್ದ. ಜೇನುಕುರುಬ ಆಗಿರುವುದರಿಂದ ಅಂತ್ಯೋದಯ ಕಾರ್ಡ್ ಸಹ ಈಗ ಅವನಿಗೆ ಲಭ್ಯವಾಗಿದೆ. ಇದರಿಂದ 3 ರೂಪಾಯಿಯಂತೆ 29 ಕೆ.ಜಿ ಅಕ್ಕಿ, 2 ರೂಪಾಯಿಯಂತೆ 6 ಕೆ.ಜಿ ಗೋಧಿ ಅವನಿಗೆ ಸಿಗುತ್ತಿದೆ.
 
ಆದರೆ ಒಂದು ವೇಳೆ ರಾಗಿ ಬೇಕೆಂದರೆ ಆತ 8-10 ರೂಪಾಯಿ ಕೊಡಬೇಕಾಗುತ್ತದೆ.ಹೀಗಾಗಿ ಸರ್ಕಾರ ತನಗೆ ಅಕ್ಕಿ ಮತ್ತು ಗೋಧಿಯನ್ನೇ ಯಾಕೆ ಕೊಡುತ್ತಿದೆ ಎಂಬುದನ್ನು ಯೋಚಿಸುವ ಗೋಜಿಗೂ ಆತ ಹೋಗುವುದಿಲ್ಲ. ತನ್ನ ಸಾಂಪ್ರದಾಯಿಕ ಆಹಾರವಾದ ರಾಗಿಯನ್ನೇ ನೀಡುವಂತೆ ಸರ್ಕಾರವನ್ನು ಒತ್ತಾಯಿಸುವುದಕ್ಕಿಂತ ಆಹಾರ ಕ್ರಮವನ್ನೇ ಬದಲಿಸಿಕೊಂಡು ಮನೆಯಲ್ಲಿ ಚಪಾತಿ ಮಾಡಿಕೊಂಡು ತಿನ್ನುವುದೇ ಈಗ ಅವನಿಗೆ ಸುಲಭದ ಕೆಲಸವಾಗಿದೆ.

ಇಂತಹ ಬೆಳವಣಿಗೆಗಳನ್ನು ಕಂಡು ಜಡಿಯನಂತಹ ಜೇನುಕುರುಬ ಕುಟುಂಬಗಳು ಈಗ ಆಹಾರ ಭದ್ರತೆ ಕಂಡುಕೊಂಡಿವೆ ಎಂದು ಅಭಿವೃದ್ಧಿ ಪರ ಕಾರ್ಯಕರ್ತರು ನೆಮ್ಮದಿಯಿಂದ ನಿಟ್ಟುಸಿರು ಬಿಡಬಹುದು. ಆದರೆ ಬಸವಿ ಮಾತ್ರ ಇದನ್ನು ಒಪ್ಪುವುದಿಲ್ಲ.
 
ತಾನು ಬಯಸಿದ್ದನ್ನು ಬಯಸಿದಷ್ಟು ಕೊಡುತ್ತಿದ್ದ ಪ್ರಕೃತಿಮಾತೆಯ ಔದಾರ್ಯದ ದಿನಗಳೇ ಈಗಲೂ ಆಕೆಗೆ ಹೆಚ್ಚು ಪ್ರಿಯ. ತನ್ನ ಕುಟುಂಬಕ್ಕಷ್ಟೇ ಅಲ್ಲ, ನನ್ನಂತಹ ಜನಗಳಿಗೂ ಹಂಚುವಷ್ಟು ಆಹಾರ ಆಗ ಆಕೆಯ ಬಳಿ ಇರುತ್ತಿತ್ತು. ದಿನನಿತ್ಯ ಏನಾದರೊಂದು ತಿನ್ನಲು ಸಿಕ್ಕೇ ಸಿಗುತ್ತದೆ ಎಂಬ ಭದ್ರತೆಯ ಭಾವ ತೀವ್ರವಾಗಿತ್ತು.
 
ಅದಕ್ಕಿಂತಲೂ ಪ್ರಮುಖವಾದ ವಿಷಯವೆಂದರೆ ಆಗ ಆಕೆ ಸ್ವತಂತ್ರಳಾಗಿದ್ದಳು ಮತ್ತು ಬುಡಕಟ್ಟು ಕುಟುಂಬಗಳು ಹಿಂದಿನಿಂದ ಸೇವಿಸುತ್ತಾ ಬಂದ ಆಹಾರ ಪದ್ಧತಿಯನ್ನೇ ಅನುಸರಿಸುತ್ತಿದ್ದಳು. ಆದರೆ, ಈಗ ತನಗೆ ಒಗ್ಗದ ಆಹಾರ ಧಾನ್ಯಗಳನ್ನು ‘ಆಹಾರ ಭದ್ರತೆ’ಯ ಹೆಸರಿನಲ್ಲಿ ಆಕೆ ತಿನ್ನಲೇಬೇಕಾಗಿದೆ.

ನೇರ ನಗದು ವಿನಿಮಯ ಯೋಜನೆಯನ್ನು ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿದೆ. ಇದು ಕಾರ್ಯರೂಪಕ್ಕೆ ಬಂದರೆ ಬಸವಿಯಂತಹ ಮಂದಿಗೆ ಆಯ್ಕೆಯ ಸ್ವಾತಂತ್ರ್ಯ ಸಿಗುತ್ತದೆ, ಮಾತ್ರವಲ್ಲ, ತಮಗೆ ಬೇಕಾಗಿದ್ದನ್ನು ಎಲ್ಲಿ ಕೊಳ್ಳಬೇಕು ಎಂಬುದನ್ನು ನಿರ್ಧರಿಸುವ ಅವಕಾಶವೂ ಲಭಿಸುವ ಸಾಧ್ಯತೆ ಇದೆ.
 
ಒಟ್ಟಿನಲ್ಲಿ ನಿಜವಾದ ಅರ್ಥದಲ್ಲಿ ಆಹಾರ ಭದ್ರತೆಯನ್ನು ಕಲ್ಪಿಸಿಕೊಡುವ ಎಲ್ಲ ಅವಕಾಶಗಳೂ ಇಲ್ಲಿ ವಿಫುಲವಾಗಿವೆ. ಆದರೆ ಆ ವರೆಗೂ, ಗತಕಾಲದಲ್ಲಿ ತಾನು ಕಂಡುಂಡ ತಿನಿಸುಗಳ ಬಗ್ಗೆ ಕನಸು ಕಾಣಲಷ್ಟೇ ಬಸವಿಗೆ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT